ಶೂನ್ಯ
ಜೂ ನ್ ತಿಂಗಳ ಒಂದು ಸಂಜೆ ಎಂದಿನಂತೆ ಹಾಸ್ಟೆಲ್ ರೂಮಿನಿಂದ ಹೊರಗಡೆ ಇಣುಕಿದಾಗ ಸೂರ್ಯ ಕೆಂಪಾಗಿ ಆಗ ತಾನೆ ಜಾರಲು ಅಣಿಯಾಗುತ್ತಿದ್ದ. ತನ್ನ ಗೂಡು ಸೇರಲು ಹಿಂಡು ಹಿಂಡಾಗಿ ಹಾರುತ್ತಿದ್ದ ಹಕ್ಕಿಗಳ ಗುಂಪು ನನಗಂದು ಕಾಣಲಿಲ್ಲ. ನನ್ನ ಕಣ್ಣು ಅವನನ್ನೇ ಹುಡುಕುತ್ತಿದ್ದವು. ಎಂದಿನಂತೆ ಅವನ ದಾರಿಯನ್ನೇ ಎವೆಯಿಕ್ಕದೆ ನೋಡುತ್ತಿದ್ದ ನನಗೆ ಮನದಲ್ಲೇನೋ ನಡುಕ, ಸೂರ್ಯ ಜಾರಿ ಹೊತ್ತಾದರು ಅವ ಕಾಣಿಸುತ್ತಿಲ್ಲವಲ್ಲ!.ನಾವಿಬ್ಬರು ಭೇಟಿಯಾಗುವ ಅದೇ ಸಮಯ ಅದೇ ಜಾಗ ಆದರೆ ಇಂದೇನಾಯಿತು? ಎದೆ ಬಡಿತ ಹೆಚ್ಚಾಯಿತು. ಅವಸರದಿಂದ ಹಾಸ್ಟೆಲ್ ತಾರಸಿ ಮೇಲೆ ಹತ್ತಿದೆ. ಅಲ್ಲಿ ನಿಂತು ಅವ ಬರುವನೆಂದು ಸುತ್ತಲೂ ನೋಡಿದೆ. ಇಲ್ಲ.........ಅವನೆಲ್ಲಿ? ನನ್ನಲ್ಲಿ ಮುನಿಸಿಕೊಂಡನೇ? ನನ್ನ ಸ್ನೇಹ ಅವನಿಗೆ ಅರ್ಥವಾಗದೆ ಹೋಯಿತೆ? ಎಂದೂ ನನ್ನಲ್ಲಿ ನಗುಮುಖದಿಂದ ಮಾತನಾಡುತ್ತಿದ್ದ ಅವನು ಇಂದೇಕೆ ಹೀಗಾದ? ನಮ್ಮಿಬ್ಬರ ಪ್ರೇಮ ಇನ್ಯಾರಿಗೂ ಅರ್ಥವಾಗಲ್ಲ ಬಿಡಿ. ಸುಂದರ ಸಂಜೆಗಳಲ್ಲಿ ಅವನ ದಾರಿ ನೋಡುವುದೇ ಮನಸ್ಸಿಗೆ ಮುದ ನೀಡುತ್ತಿತ್ತು. ಅವನ ಮುಗ್ಧ ನಗು,ಪ್ರೀತಿಯಿಂದ ಮುನಿಸಿ ಎಲ್ಲೋ ಮರೆಯಾಗಿ ನನ್ನನ್ನು ಛೇಡಿಸುವಂತಹ ತುಂಟ ಹುಡುಗಾಟ....ನನ್ನನ್ನೇ ಎವೆಯಿಕ್ಕದೆ ನೋಡಿ ಕಣ್ಣಲ್ಲೇ ಮಾತನಾಡುವ ಅವನ ಶೈಲಿ.... ಎಲ್ಲವೂ ಪ್ರೇಮಮಯ! ಆ ಸುಮಧುರ ಸಂಜೆಗಳು... ನಮ್ಮಿಬ್ಬರ ಸ್ನೇಹಕ್ಕೆಈ ಅನಂತ ತಾರೆಗಳು ಸಾಕ್ಷಿ ಎಂದು ಹೇಳುತ್ತಿದ್ದ ಅವನ ಮಾತು ನನ್ನ ಕಿವಿಯಲ್ಲಿ ಪದೇ ಪದೇ ಗುನುಗುತ್ತ...