Posts

Showing posts from May, 2015

ಮರಳಲ್ಲಿ ಬರೆದ ಸಾಲುಗಳು

Image
ನೀ ನು ಅಂತರಾತ್ಮದ ಕರೆಗೆ ಓಗೊಟ್ಟು ಹೊರ ನಡೆದಾಗ ಕಡಲತಡಿಯಲ್ಲಿ ಏಕಾಂತದ ನಿಟ್ಟುಸಿರು ಪ್ರೀತಿಯ ಆಲಿಂಗನವ ಬಯಸಿದ ಎಳೆ ಮೈಗೆ ಉಪ್ಪು ನೀರಿನ ಸಿಂಚನ ತನ್ನೊಳಗಿರುವ ಚಿಪ್ಪಿನೆಡೆಯಲಿ ಅಡಗಿ ಕುಳಿತಿರುವ ಮುತ್ತು ಹೊರಬರಲು ಕಾಯುವ ವೇಳೆ ಏಕಾಂತದಲೊಂದು ಬಯಕೆ ನಿನ್ನೊಡಲಿಗೆ ಬರಲೆ? ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು ಅಮ್ಮನಂತಿರುವ ಕಡಲು ಬೇಡವೆನ್ನುವುದಿಲ್ಲ ನನ್ನನ್ನೂ ಈ ಬಂಧನವ ಕಳಚಿ ಸಾಧಿಸುವುದೇನು ಬಂತು? ಒಂದೊಂದು ಹೆಜ್ಜೆಯಲೂ ಕಂಬನಿಯ ಕತೆಗಳ ಅಳಿದುಳಿದ ಸಾಲು ಹರಿದು ಹಾಕಿದ ಪುಟಗಳಲಿ ನೆನಪುಗಳ ಕುರುಹು ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು ಪ್ರೀತಿಯನು ಚಿಮ್ಮಿಸಿ ಮುಳುಗಿ ಹೋಗುತಿದೆ ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ ಅಲೆಗಳಲಿ ಒಂದಾಗುತ್ತಾ ಮಾಯವಾದಾಗ ಏಕಾಂತದ ಕೋಟೆಯಲಿ ನಾನು ಸ್ವತಂತ್ರಳಾಗುತ್ತಿದ್ದೆ