'ಎಂಡೋ ನಿಷೇಧಿಸಿ' - ಶರದ್ ಪವಾರ್ ಗೊಂದು ಬಹಿರಂಗ ಪತ್ರ
ಶರದ್ ಪವಾರ್ ಜೀ, ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು ...ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ? ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? 'ಎಂಡೋ' ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ...