ಮಾಯಾನಗರಿ

ಸುತ್ತಲೂ ಪಸರಿದ ಈ ಗಾಳಿಯಲ್ಲಿ ಯಾವುದೋ ಗಂಧವಿದೆ ಮೈಗೆ ಪೂಸಿದ ಸುಗಂಧ ದ್ರವ್ಯ, ಬೆವರ ಹನಿಗಳ ನೋವಿನ ವಾಸನೆ ಯಾರೋ ಬಿಟ್ಟು ಹೋದ ಚೀಲ, ಪೆಟ್ಟಿಗೆ, ಚಪ್ಪಲಿ, ವಾಹನಗಳು ಇಲ್ಲಿ ಹರಾಜಿಗಿವೆ ಎಂಬ ಬೋರ್ಡುಗಳು ಮಾಯಾನಗರಿಯ ದುಃಖಗಳನ್ನು ಗೀಚಿಟ್ಟ ಕಿರುಪತ್ರದಂತಿವೆ ಭಗ್ನವಾದ ಕನಸುಗಳ ಚೂರು ಗಳು ಒಂದಕ್ಕೊಂದು ಗುದ್ದಿ ಸದ್ದು ಮಾಡುತ್ತಿವೆ ಮುಷ್ಟಿ ಮಣ್ಣಲ್ಲೂ ಅವಿತಿದೆ ಯಾರೋ ಸವೆದ ಹಾದಿಯ ಹೆಜ್ಜೆ ಗುರುತು ನಷ್ಟಗಳ ಲೆಕ್ಕ ಭರಿಸಲಾಗದೆ ದುರಂತಗಳ ನಡುವೆ ಸಿಕ್ಕ ಮಧ್ಯಂತರ ಎಲ್ಲಿಂದಲೋ ಆರಂಭವಾಗುವುದು ಇನ್ನೇನೋ ನಡೆಯಲಿದೆ ಎಂದರಿಯುವ ಹಪಾಹಪಿಯಲ್ಲಿ ಸಮಯ ದಾಟಿದೆ ಈ ಜಂಜಾಟದ ನಡುವೆ ಸಿಕ್ಕ ಒಂದಷ್ಟು ನಿಮಿಷ ಮತ್ತೆ ಬದುಕು ಹಳಿಗೆ ಬಂದಂತೆ ಆಸೆ ಹುಟ್ಟಿಸಿ ಇನ್ನೊಂದು ಮಧ್ಯಂತರಕ್ಕೆ ಕಾಲಿಡುವಾಗ ಕಾಡುವುದು ಅನಿಶ್ಚಿತತೆ! ಬೀದಿ ನಾಯಿಗಳ ಓಡಾಟದ ನಡುವೆ ಹರೆಯದ ಹುಡುಗಿಯೊಬ್ಬಳು ಹೂ ಮಾರುತ್ತಿದ್ದಾಳೆ ಅವಳ ಜೀವನ ಲೆಕ್ಕಾಚಾರದಲ್ಲಿ ಹೆಣೆಯುವ ಆ ಮೊಗ್ಗು ನಲುಗಿ ಹೋಗಿದೆಯೆ? ನಾನು ಬಯಸಿದ ಹೂವು ಕಣ್ಣಿಗೆ ತಂಪು ಬಿಸಿಯೇರಿದೆ ಮೈ ಮತ್ತೊಮ್ಮೆ ಯೋಚಿಸಿದೆ ಆ ತಂಪು ನನ್ನನ್ನು ಬಿಸಿಯಾಗಿರಿಸಿತೆ?