ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ

ಪ್ರೀತಿ ಎಂದರೆ? After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ. ಅವನನ್ನೇ ದುರುಗುಟ್ಟಿ ನೋಡಿದೆ. ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು. ನಾನು ಸೀರಿಯಸ್ಸಾಗಿ ಕೇಳಿದ್ದು ... ನಾನು ಸೀರಿಯಸ್ಸಾಗಿಯೇ ಹೇಳಿದ್ದು... ನಿನ್ನ ಜತೆ ವಾದ ಮಾಡಲ್ಲ ಪೆದ್ದಿ ನೀನು... ಹೌದು... ನಾನು ಪೆದ್ದಿ...ನನಗೇನೂ ಗೊತ್ತಿಲ್ಲ...ನಾನೀವಾಗ ಮಾಡುತ್ತಿರುವುದು ಸರಿಯೋ ತಪ್ಪೋ ಯಾವುದೂ ಗೊತ್ತಿಲ್ಲ ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ? ಛೇ...ಬೇಡ... ಅವನ ಜತೆ ಮಾತನಾಡಿದಾಗ ನನಗ್ಯಾಕೆ ಅಷ್ಟು ಸಮಾಧಾನವಾಗುತ್ತದೆ? ಅವನ ಸೆನ್ಸ್ ಆಫ್ ಹ್ಯೂಮರ್, ಸಿಂಪ್ಲಿಸಿಟಿಗೆ ನಾನು ಫಿದಾ ಆಗಿಬಿಟ್ಟಿದ್ದೇನೆ. ಅವನ ಮಾತು, ಮೌನ, ನಗು ಎಲ್ಲವೂ ಇಷ್ಟವಾಗತೊಡಗಿದೆ. ನನ್ನಂತೆಯೇ ಅದೆಷ್ಟು ಹುಡ್ಗೀರು ಅವನ ಬಗ್ಗೆ ಕನಸು ಕಾಣುತ್ತಿದ್ದಾರೋ ಏನೋ. ಹುಡ್ಗೀರನ್ನೇ ಮೋಡಿ ಮಾಡೋಕೆ ಹುಟ್ಟಿದ್ದಾನೆ ಅನ್ನೋ ಹಾಗಿದೆ ಅವನ ಪರ್ಸನಾಲಿಟಿ... ರಾತ್ರಿ 11.30ರ ನಂತರ ಹಾಸ್ಟೆಲ್ ರೂಂನಲ್ಲಿ ಕುಳಿತು ರೂಂಮೇಟ್ಸ್ ಜತೆ ಪಟ್ಟಾಂಗ ಹೊಡೆಯುವಾಗ ಅವನ ಬಗ್ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನೆಲ್ಲಾ ಇತ್ತೋ ಎಲ್ಲವನ್ನೂ ನಾನ್ಸ್ಟಾಪ್ ಆಗಿ ಹೇಳಿದ ನಂತರ ತಿಳೀತು ಇಷ್ಟೆಲ್ಲಾ ಹೇಳಬಾರದಿತ್ತು ಅಂತ... ಯೇ ತೋ ಪಾಗಲ್ ಹೋಗಯಿ! ನನ್ನ ಮಾತ...