ಅಮ್ಮನ ಒಲವಿನ ಓಲೆ.....
ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ. ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತ...