ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ.
ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತೆ ಅಮ್ಮನ ಪತ್ರ ನನ್ನ ಕೈಗೆ ಸಿಕ್ಕಿದಾಗ ಚೈತನ್ಯ ನೀಡುವ ಅಸ್ತ್ರದಂತೆ ಭಾಸವಾಗುತ್ತದೆ.
ಚೆನ್ನೈ ಎಂಬ ಮಹಾನಗರಕ್ಕೆ ಬಂದು ವರುಷಗಳಾಗುತ್ತಾ ಬಂತು. ಅದರಲ್ಲಿ ಎಷ್ಟು ಏಳು ಬೀಳುಗಳು ಸಂಭವಿಸಿವೆಯೋ ಅಷ್ಟು ಬಾರಿ ಅಮ್ಮನ ಪತ್ರ ನನ್ನ ಕೈ ಸೇರಿದೆ. ನಿಜ ಹೇಳಬೇಕೇ? ಮೊಬೈಲ್ ಫೋನ್‌ನಲ್ಲಿ ಆಗಾಗ ಮಾತನಾಡುತ್ತಾ ಕಷ್ಟ ಸುಖ ಹೇಳುತ್ತಿದ್ದರೂ ಅಮ್ಮನ ಪತ್ರದಲ್ಲಿ ಸಿಗುವಂತಹ ತೃಪ್ತಿ ಎಲ್ಲಿಯೂ ಸಿಕ್ಕಿಲ್ಲ. ಆ ಪತ್ರ ಅಂತದ್ದು. ತನ್ನ ಮಕ್ಕಳು ಎಲ್ಲಿಯೇ ಇರಲಿ ಮನಸ್ಸಲ್ಲಿ ಮಕ್ಕಳದ್ದೇ ಚಿಂತೆ. ಮಾತೃ ಹೃದಯವಲ್ಲವೇ? ಮಕ್ಕಳ ಒಂದೊಂದು ಉಚ್ವಾಸ ನಿಶ್ವಾಸವೂ ಆ ಅಮ್ಮನಿಗೆ ತಿಳಿಯುವ ಶಕ್ತಿ ಇದೆ. ಅದಕ್ಕಾಗಿಯೇ ಬಲ್ಲವರು ಅಮ್ಮ ದೇವರ ರೂಪ ಅಂದದ್ದು?
ಇನ್ನು, ಹೆಣ್ಣು ಮಕ್ಕಳೆಂದರೆ ಅಮ್ಮನಿಗೆ ಕಾಳಜಿ ಇಲ್ಲದೆ ಇರುತ್ತದಾ?. ನೋಡು ಪುಟ್ಟಿ, ಅದು ಹಾಗೆ, ಇದು ಹೀಗೆ, ಜಾಗರೂಕತೆಯಿಂದಿರು ಎಂಬ ಉಪದೇಶಗಳೊಂದಿಗೆ ತುಂಬಾ ಮಮತೆ, ತಪ್ಪು ಮಾಡಿದಲ್ಲಿ ಅಷ್ಟೇ ಕಟುವಾದ ಟೀಕೆ ಎಲ್ಲವೂ ತುಂಬಿರುವ ಅದೆಷ್ಟೋ ಪತ್ರಗಳು ನನ್ನಲ್ಲಿ ಭದ್ರವಾಗಿವೆ. ಅವು ನೀಡುವಂತಹ ಮಾರ್ಗದರ್ಶನ, ಒಲವು, ಸಾಂತ್ವನ.. ನಾನು ಧೃತಿಗೆಟ್ಟಾಗ "ಏಕಾಂಗಿಯಲ್ಲ" ಎಂಬ ಅರಿವು ಮೂಡಿಸಿ ಯಾವುದೇ ಕಷ್ಟ ಬಂದರೂ ಸೆಟೆದು ನಿಲ್ಲುವ ತಾಕತ್ತನ್ನು ನೀಡಿದೆ.
ಪತ್ರದ ಬಗ್ಗೆ ಹೇಳುವಾಗ ತಕ್ಷಣ ನೆನಪಿಗೆ ಬರುವುದೇ ನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರ್. ಈಗ ಅದು ಕಾಣಲಿಕ್ಕೇ ಅಪರೂಪ. ನಿಜ, ಕಾಲಬದಲಾಗಿದೆ. ತಾಂತ್ರಿಕತೆ ವರ್ಧಿಸುತ್ತಾ ಬಂದಂತೆ ಪತ್ರಗಳ ಸ್ಥಾನವನ್ನು ಮೊಬೈಲ್ ಎಸ್‌ಎಂಎಸ್‌ಗಳು ಇಮೇಲ್ ಕಸಿದುಕೊಂಡಿವೆ. ಏನೇ ಇರಲಿ ತಮ್ಮ ಕೈಯಕ್ಷರಗಳಲ್ಲಿ ಬರೆದ ಪತ್ರದಲ್ಲಿ "ನನ್ನೂರಿನ" ಮಣ್ಣಿನ ಸುಗಂಧವಿದೆ, ವಿವರವಾಗಿ ಬರೆದ ಮುದ್ದಾದ ಅಕ್ಷರಗಳಲ್ಲಿ ಮಮತೆಯ ಕೊಂಡಿಯಿದೆ. ಪ್ರೀತಿಯ...ಎಂದು ಆರಂಭವಾಗುವ ಪತ್ರಗಳಿಂದ ಇತೀ ನಿನ್ನ.. ಎಂದು ಕೊನೆಗೊಳ್ಳುವ ಈ ಪತ್ರಗಳು ಹೊತ್ತು ತರುವ ಅದೆಷ್ಟು ಸುದ್ದಿಗಳು, ಭಾವನೆಗಳು! ಎಲ್ಲವನ್ನೂ ಓದಿ ಮುಗಿಸುವಾಗ ಕಣ್ಣು ತೇವಗೊಂಡಿರುತ್ತದೆ.
ನೆನಪುಗಳು ಮನಸ್ಸಿನ ಕದ ತಟ್ಟಿ ಒಮ್ಮೆ ನಗು ಮತ್ತೊಮ್ಮೆ ಅಳು ತರಿಸಿದರೂ ಪತ್ರದಲ್ಲಿನ ಅಕ್ಷರಗಳು ಮತ್ತಷ್ಟು ಮುದ್ದಾಗಿ ಕಾಣಿಸುತ್ತವೆ. ಓದಿದ ಪತ್ರವನ್ನು ಮತ್ತೆ ಮತ್ತೆ ಓದುವಾಗ ಹೊಸ ಉತ್ಸಾಹ, ಅಮ್ಮನ ನೆನಪು ಕಾಡುತ್ತದೆ. ಮರೆಯದೆ ಪತ್ರ ಬರಿ ಎಂದು ಕೊನೆಯ ಸಾಲಿನಲ್ಲಿ ಅಮ್ಮ ಬರೆದದ್ದು ನೋಡಿದಾಗ ನೆನಪಾದದ್ದು, ಅದೆಷ್ಟೋ ನನ್ನ ಉತ್ತರಗಳು ಅಮ್ಮನ ಕೈ ಸೇರಿವೆ ಎಂದು. ಸದ್ಯ, ನಾನು ನನ್ನವರನ್ನು ಮಿಸ್ ಮಾಡುವಾಗ ಪತ್ರವನ್ನು ಕೈಗೆತ್ತಿಕೊಂಡು ನೋವು ಮರೆಯುವಂತೆ, ಅವರೂ ಹಾಗೆ ಮಾಡುತ್ತಿರುತ್ತಾರಲ್ಲಾ..ಅದಕ್ಕೇ ಪತ್ರ ಬರೆಯುವುದನ್ನು ಮುಂದುವರಿಸುತ್ತಾ ಬಂದಿದ್ದೇನೆ. ಅದರಲ್ಲಿ ಏನೋ ಒಂಥಾರ ತೃಪ್ತಿಯಿದೆ, ಮನದಾಳದ ಮಾತನ್ನು ಹೇಳುವ ತಾಕತ್ತಿದೆ. ಸ್ನೇಹದ ಅಕ್ಷರಗಳು ಓಲೆ ರೂಪದಲ್ಲಿ ಕೈ ಸೇರುವಾಗ ಮನಸ್ಸಿನ ಮೂಲೆಯಲ್ಲಿರುವ ಪ್ರೀತಿಯ ಸೆಳೆತವು ಮುಂದಿನ ಪತ್ರವನ್ನು ನಿರೀಕ್ಷಿಸುತ್ತಿರುತ್ತದೆ.
2 comments:
ನಿಮ್ಮ ಮಾತು ನಿಜ. ಪತ್ರದಲ್ಲಿನ ಆನಂದ ಮೇಸೆಜು, ಮೇಲುಗಳಲ್ಲಿ ಸಿಗದು. ಒಳ್ಳೆ ಬರಹ
hello i see u r blog very nice see my blog http://tcln.blogspot.com & http://rajinispecial.blogspot.com click ads only
Post a Comment