ಕಾಡುವ ನೆನಪುಗಳಿಗೂ ಇದೆ ಘಮ

 



ರಜೆ ಇದ್ದಾಗಲೆಲ್ಲ ಹೀಗೆಯೇ..ಅದೆಷ್ಟು ಪ್ರಯತ್ನಿಸಿದರೂ ನಿದ್ದೆ ಬರುವುದಿಲ್ಲ. ಆಫೀಸಿಗೆ ಹೋಗದೇ ಇರುವ ದಿನ  ಬೇಡವೆಂದರೂ  ಬೇಗ ಎಚ್ಚರವಾಗುತ್ತದೆ. ನಾಳೆ ಆಫೀಸು ಇದೆ, ಬೆಳಗ್ಗೆ ಬೇಗ ಏಳಲೇ ಬೇಕು ಎಂದು ಮೊಬೈಲ್ ದೂರ ಇರಿಸಿ ಮಲಗಿಕೊಂಡು ಇನ್ನೇನು ನಿದ್ದೆ ಬಂತು ಅನ್ನುವಾಗ ಮೂಗಿಗೆ ಅಡರಿದ್ದು ಲ್ಯಾವೆಂಡರ್ ಘಮ. ನಿಶ್ಶಬ್ದವಾದ ರಾತ್ರಿಯಲ್ಲಿ ಮೆಲ್ಲನೆ ತಿರುಗುವ ಫ್ಯಾನ್. ಒಂದು ಕಣ್ಣು ಮಿಟುಕಿಸಿದಂತೆ ಉರಿಯುತ್ತಿರುವ ಗುಡ್ ನೈಟು ಅದರ ನಡುವೆ ಈ ಲ್ಯಾವೆಂಡರ್  ಸುವಾಸನೆ. ಇದೆಲ್ಲಿಂದ  ಘಂ ಅನ್ನಿಸಿತು ಎಂದು ನೋಡಿದಾಗ  ರೂಂ ಫ್ರೆಶ್ನರ್ ಪಾಕೆಟ್, ಬೆಡ್ ಪಕ್ಕ ಬಿದ್ದಿತ್ತು. ಅದೆನ್ನೆತ್ತಿ ಅದಿಡುವ ಸ್ಥಳದಲ್ಲಿ ನೇತು ಹಾಕಿ ಮತ್ತೆ ಮಲಗಲು ಪ್ರಯತ್ನಿಸಿದೆ. ಊಹೂಂ ಎಲ್ಲಿ ಬರುತ್ತೆ ನಿದ್ದೆ?

ಅಂದ ಹಾಗೆ ಪರಿಮಳಕ್ಕೂ ನನಗೂ ಬಾರೀ ನಂಟು. ಪಿಜಿಯಲ್ಲಿದ್ದಾಗ ನಾಲ್ಕನೇ ಫ್ಲೋರಿನ ರೂಮಿನಿಂದಲೇ ಬೆಳಗ್ಗಿನ ತಿಂಡಿ ಏನು ಎಂಬುದನ್ನು ಅರಿಯುತ್ತಿದ್ದ ಚುರುಕು ಮೂಗು. ನಮ್ಮಮ್ಮನಿಗೂ ಹಾಗೆಯೇ ಮೂಗಿಗೆ ಸ್ಮೆಲ್ ಬಡಿಯುವುದು ಬಾರೀ ಬೇಗ. ಅಮ್ಮ ಸ್ಮೆಲ್ ನೋಡಿಯೇ ಅಡುಗೆ ಚೆನ್ನಾಗಿದೆಯೋ ಇಲ್ಲವೋ, ಯಾವ ಪದಾರ್ಥ  ಜಾಸ್ತಿ ಆಗಿದೆ ಎಂಬುದನ್ನು ಹೇಳಿ ಬಿಡುತ್ತಿದ್ದರು. ಅಡುಗೆಯಲ್ಲಿ ಏನು ಹೆಚ್ಚು ಕಮ್ಮಿ ಆಗಿದೆ ಎಂದು ರುಚಿ ನೋಡದೇ ಬರೀ ಸ್ಮೆಲ್ ನಿಂದಲೇ ಪತ್ತೆ ಹಚ್ಚುವಂಥಾ  ಸಾಮರ್ಥ್ಯ ನನ್ನ ಮೂಗಿಗೆ ಇಲ್ಲವಾದರೂ ಪರಿಮಳದ ವಿಷಯದಲ್ಲಿ ತುಸು ಪ್ರೀತಿ ಜಾಸ್ತಿ ನನಗೆ.  ಡಿಸೆಂಬರ್ ತಿಂಗಳಲ್ಲಿ ದೂರದಿಂದ ಕೇಳಿಬರುವ ಭಕ್ತಿ ಗೀತೆಯೊಂದಿಗೆ ಮೂಗಿದೆ ಅಡರುವ ನಮ್ಮೂರಿನ ಘಮ ಅಂದರೆ ಅಯ್ಯಪ್ಪ ಸ್ವಾಮಿಯ ಭಸ್ಮ, ಅರವಣ ಪಾಯಸ. ಊರು ಬಿಟ್ಟು ದೂರದೂರಲ್ಲಿರುವಾಗ ಇಂಥಾ ಸ್ಮೆಲ್ ಗಳು ಮೂಗಿಗೆ ಬಡಿದರೆ ಊರು ಕಾಡುತ್ತದೆ. ತವರು ಮನೆಯಲ್ಲಿ ಬೆಳಗ್ಗೆ ನೀರು ದೋಸೆ ,ತೆಂಗಿನಕಾಯಿ ಚಟ್ನಿಯ ಪರಿಮಳ, ಇಂಗು ಒಗ್ಗರಣೆ, ಮೀನು ಫ್ರೈ ಮಾಡುವಾಗ ಬರುವ ಸ್ಮೆಲ್ , ಕೊಟ್ಟಿಗೆಯಿಂದ ಬರುವ ಸೆಗಣಿ ವಾಸನೆ, ಅಪ್ಪನ ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಲೋಶನ್ ಪರಿಮಳ, ಅಣ್ಣನ ಆಟೋ ಸ್ಟಾರ್ಟ್ ಆಗುವಾಗ ಘಂ ಅನ್ನುವ ಪೆಟ್ರೋಲ್ ವಾಸನೆ ಎಲ್ಲವೂ ನಾಸ್ಟಾಲ್ಜಿಯಾ. 

ಬಾಲ್ಯದ ನೆನಪುಗಳ ಪುಟ ತಿರುವಿದರೆ ಆ ಪುಟಗಳಲ್ಲಿಯೂ ಗಂಧವಿದೆ. ಊರಿನ ಮಳೆ, ಮನೆಯಲ್ಲೇ ಅರೆಯುವ  ಶ್ರೀಗಂಧ, ಅಜ್ಜಿ ಮನೆಯ ಹಮಾಮ್  ಸೋಪಿನ ಪರಿಮಳ, ಸಂಬಂಧಿಕರು  ಗಲ್ಫ್ ನಿಂದ ತಂದು ಕೊಟ್ಟ ಅತ್ತರ್, ಹೊಸ ಬಟ್ಟೆ, ಹೊಸ ಪುಸ್ತಕದ ಸುಗಂಧ,ಪಟಾಕಿಯ ಘಂ ಅನ್ನೋ ವಾಸನೆ, ಕೋಳಿ, ನಾಯಿ ಗೂಡಿನ ವಾಸನೆ. ಹಾಗೆಯೇ ಮಳೆಗಾಲದಲ್ಲಿನ ಕೆಸರು ವಾಸನೆ, ಒದ್ದೆ ಬಟ್ಟೆಯ ವಾಸನೆ, ಗೊಬ್ಬರದ ವಾಸನೆ ಹೀಗೆ ಅದೆಷ್ಟು ಸ್ಮೆಲ್ ಗಳನ್ನು ಈ ಮೂಗು ನೆನಪಿಸಿಕೊಳ್ಳುತ್ತದೆ ಅಲ್ವಾ..

ಅಪ್ಪನ ಸಿಗರೇಟಿನ ವಾಸನೆ..ನಾನು ಚಿಕ್ಕವಳಿದ್ದಾಗ ಅಪ್ಪನ ಜತೆ ಅಂಟಿಕೊಂಡಿದ್ದು ಸಿಗರೇಟಿನ ವಾಸನೆ ಆಗಿತ್ತು. ನನಗೆ 10-11ರ ಹರೆಯ, ಅಷ್ಟೊತ್ತಿಗೆ ಅಪ್ಪ ಸಿಗರೇಟು ಬಿಟ್ಟಿದ್ದರು. ಆದರೆ ಆ ಸಿಗರೇಟಿನ ವಾಸನೆ ನನ್ನ ಮೂಗಲ್ಲಿ ಇನ್ನೂ ಇದೆ ಎಂದು ಅನಿಸುತ್ತಿರುತ್ತದೆ.  ಸೀಗೆಕಾಯಿಯ ಘಮವಿತ್ತು ಅಮ್ಮನ ಕೂದಲಿಗೆ. ಆ ಮುಡಿಯಲ್ಲಿ ಹೂವು ತಪ್ಪುತ್ತಿರಲಿಲ್ಲ, ಒಂದೇ ಒಂದು ಮಲ್ಲಿಗೆಯಾದರೂ ಆ ತುರುಬಿನಲ್ಲಿರುತ್ತಿತ್ತು. ಆ ಮಲ್ಲಿಗೆಯ ಘಮದಲ್ಲಿ ಅಮ್ಮ ನೆನಪಾಗಿ ಉಳಿದು ಬಿಟ್ಟರು.  

ನಾನು ಮೊದಲು ಕೆಲಸಕ್ಕೆ ಸೇರಿದಾಗ ಇಂಟರ್ ವ್ಯೂಗೆ ಕುಳಿತ ರೂಮಿನಲ್ಲಿ ಒಂದು ಘಮವಿತ್ತು. ಅದೂ ಲ್ಯಾವೆಂಡರ್ ಘಮ. ಹೀಗೆ ಒಂದೊಂದು ಕಡೆ ಹೋದಾಗ ತಕ್ಷಣಕ್ಕೆ ಮೂಗಿಗೆ ಅಡರುವ ಪರಿಮಳ/ವಾಸನೆ ಹಲವು ನೆನಪುಗಳೊಂದಿಗೆ ನನ್ನ ಜತೆ ಇರುತ್ತವೆ. ಇಂಥಾ ನೆನಪುಗಳಲ್ಲಿ ಹೆಚ್ಚಿನದ್ದು ಹೃದಯಕ್ಕೆ ಹತ್ತಿರವಾದವುಗಳು. ಕೆಲವು ಮೊದಲ ಅನುಭವಗಳನ್ನು ಮತ್ತಷ್ಟು ಮಧುರವಾಗಿಸಿದ್ದೂ ಕೂಡಾ ಇಂಥಾ ಪರಿಮಳಗಳೇ. 

ತಮಾಷೆಯ ಸಂಗತಿ ಏನು  ಗೊತ್ತಾ.ಇಂಥಾ ಪರಿಮಳ ಕಾಡಿದಾಗ ಅದು ಇಂಥಾ ಘಮ ಎಂದು ಇನ್ನೊಬ್ಬರಿಗೆ ವಿವರಿಸಿ ಹೇಳುವುದು ಕಷ್ಟ. ಪ್ರತಿಯೊಂದು ಪರಿಮಳವೂ Unique ಆಗಿರುತ್ತದೆ. ಅದು ಮೈಗೆ ಹಚ್ಚುವ ಕ್ರೀಮ್ ಅಥವಾ ಪರ್ಫ್ಯೂಮ್, ಸೋಪ್ ಅಥವಾ ಬೆವರೇ ಆಗಿರಲಿ ಅದು ಒಂದು ಐಡೆಂಟಿಟಿ, ಅದು ಆ ವ್ಯಕ್ತಿಯ ಜತೆಗಿನ ನೆನಪು ಕೂಡ.  ನಮಗೆ ಆಪ್ತರಾಗಿರುವವರ ಪರ್ಫ್ಯೂಮ್ ಸ್ಮೆಲ್ ನಿಂದಲೇ ನಾವು ಅವರು ಇರುವಿಕೆಯನ್ನು ಫೀಲ್ ಮಾಡಿಕೊಳ್ಳಬಹುದು. ಪರಿಮಳ, ಘಮ, ಸ್ಮೆಲ್, ವಾಸನೆ ಏನೇ ಅನ್ನಿ..ಇವೆಲ್ಲವೂ ನನ್ನ ನೆನಪು, ಅನುಭವಗಳೊಂದಿಗೆ ಮಿಳಿತವಾಗಿರುವಂಥದ್ದು. ಹಾಗಾಗಿ ಬದುಕಿನ ಮಧುರ ಘಟನೆಗಳನ್ನು ನಾನು ಸ್ಮೆಲ್ ಜತೆ ನೆನಪಿಸಿಕೊಳ್ಳಲು ಇಷ್ಟ ಪಡುತ್ತೇನೆ. ಹೌದು..ನಾನು ಕಾಪಿಟ್ಟ ನೆನಪುಗಳಿಗೆ ಘಮವಿದೆ.


Comments

Popular posts from this blog

ಬಸ್ ಪಯಣದ ಸುಖ

ನಾನೆಂಬ ಸ್ತ್ರೀ