ಅಪ್ಪನ ಮನದಲ್ಲೊಮ್ಮೆ ಇಣುಕಿ...
ಮ ಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ. ಅಪ್ಪನ ಜತೆ ಕುಳಿತು ಬಟ್ಟಲಿಗೆ ಕೈ ಹಾಕಿ ದೋಸೆ ತಿನ್ನುತ್ತಿದ್ದ ಮಗಳು ಡಯಟ್ ಅಂತಾ ಕ್ಯಾರೆಟ್ ಜೂಸ್ ಕುಡಿದು ಹೊಟ್ಟೆ ತುಂಬುತ್ತಾಳೆ. ಮಗಳು ಬದಲಾಗಿದ್ದಾಳೆ. ಕಾಲಕ್ಕೆ ತಕ್ಕಂತೆ ಅವಳು ಜೀವನದಲ್ಲಿ ಬಣ್ಣ ತುಂಬಿಕೊಂಡಿದ್ದಾಳೆ. ದಿನಪತ್ರಿಕೆ ಕೈಯಲ್ಲಿ ಹಿಡಿದು ನಿತ್ಯ ಭವಿಷ್ಯ ಪುಟ ತಿರುವಿದರೂ, ಮಗಳ ಭವಿಷ್ಯದ ಬಗ್ಗೆ ಅಪ್ಪ ಚಿಂತೆಯಲ್ಲಿ ಮುಳುಗುತ್ತಾನೆ. ಅವನ ಕಣ್ಣುಗಳು ಮಸುಕಾದರೂ ಮನಸ್ಸಿನ ದೃಷ್ಟಿ ಶುಭ್ರವಾಗಿದೆ. ರಂಗು ಕಾಣದ ಕೂದಲುಗಳಲ್ಲಿ, ಸುಕ್ಕುಗಟ್ಟಿದ ಚರ್ಮದಲ್ಲಿ ಬದುಕಿನ ಕಪ್ಪು ಬಿಳುಪು ಚಿತ್ರಗಳ ಛಾಯೆಯಿದೆ. ಕಲರ್್ಫುಲ್ ಬದುಕಿನಲ್ಲಿ ಓಡಾಡುವ ಮಗಳ ಹಾದಿಯನ್ನೇ ನೋಡುತ್ತಾ ಅಪ್...