Tuesday, March 8, 2011

ಆಕೆ 'ಸ್ವಬಂಧನ'ದಿಂದ ಮುಕ್ತವಾಗಲಿ...

ದಿನವಿಡೀ ಕೀಲಿಮಣೆ ಕುಟ್ಟುತ್ತಾ ಡೆಡ್್ಲೈನ್ ಎಂಬ ಭೂತಕ್ಕೆ ಭಯ ಪಡುತ್ತಾ ನನ್ನ ದಿನಚರಿ ಮುಗಿಯತ್ತೆ. ಇಂದು ಮಹಿಳಾ ದಿನಾಚರಣೆ ಅದಕ್ಕೆ ಏನಾದರೂ ಗೀಚೋಣ ಎಂದು ಕುಳಿತಾಗ ಹೊಳೆದ ಕೆಲವೊಂದು ವಿಚಾರಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಇದು.

ಮಹಿಳಾ ದಿನಾಚರಣೆ ಎಂದ ಕೂಡಲೇ ಮಹಿಳೆಯ ಬಗ್ಗೆ ಬರೆಯಬೇಕಲ್ವಾ. ಇರಲಿ, ಮಹಿಳೆಯ ಬಗ್ಗೆ ಓದುವಾಗ ನಾನು ಗಮನಿಸಿದ್ದು ಅದರಲ್ಲಿ ಹೆಚ್ಚಾಗಿ ಸ್ತ್ರೀ ಶೋಷಣೆಯ ಬಗ್ಗೆಯೇ ಪುಟಗಟ್ಟಲೆ ವಿವರಣೆ ನೀಡಲಾಗುತ್ತದೆ. ಯಾವುದೇ ಮಹಿಳಾ ವಿಚಾರಗೋಷ್ಠಿಗೆ ಹೋಗಿ, ಅಲ್ಲಿ ಕೇಳುವುದೇ ಅಂದಿನ ಕಾಲದಿಂದ ಇಂದಿನ ಕಾಲದ ವರೆಗೆ ಪುರುಷರು ದಬ್ಬಾಳಿಕೆ ನಡೆಸುತ್ತಾ ಇದ್ದಾರೆ. ಪುರುಷರು ಹಾಗೆ ಮಾಡಿದ್ರು, ಹೀಗೆ ಮಾಡಿದ್ರು... ಸ್ತ್ರೀ ಶೋಷಣೆ!...
ಸ್ತ್ರೀ ಎಂಬ ಪದ ಹೆಡ್್ಲೈನ್ ಆಗಿದ್ದರೆ ಅಲ್ಲಿ ಶೋಷಣೆ ಕಿಕ್ಕರ್. ಹಾಗಂತ ಇಂದಿನ ಕಾಲದಲ್ಲಿ ಸ್ತ್ರೀ ಶೋಷಣೆ ನಡೆಯುತ್ತಿಲ್ಲ ಎಂದು ನಾನು ಹೇಳಲ್ಲ. ಶೋಷಣೆ, ದಬ್ಬಾಳಿಕೆಗಳಿಗೆ ಎಂದೂ ಬ್ರೇಕ್ ಬಿದ್ದಿಲ್ಲ. ಆದರೆ ಬೇಜಾರಿನ ವಿಷ್ಯ ಏನಪ್ಪಾ ಅಂದ್ರೆ ಇಂತಹಾ ಕಥೆಗಳನ್ನು ಹೇಳುತ್ತಾ ಕೆಲವರು ತಮ್ಮನ್ನು ತಾವೇ ಸ್ತ್ರೀವಾದಿ ಎಂದು ಬಿಂಬಿಸಿಕೊಳ್ಳುತ್ತಾರೆ. ನಿಜ ಹೇಳಬೇಕಾದ್ರೆ ಓರ್ವ 'ಸ್ತ್ರೀವಾದಿ' ಎಂದರೆ ಪುರುಷರನ್ನು ದೂರುವ ಮೂಲಕ, ಆತನನ್ನು ಜರೆಯುವ ಮೂಲಕ ಸ್ತ್ರೀಯನ್ನೇ ಹೊಗಳುವ ಮೂಲಕ ಪಟ್ಟಗಿಟ್ಟಿಸಿಕೊಳ್ಳುವುದಲ್ಲ. ದಬ್ಬಾಳಿಕೆ ಮಹಿಳೆಯಿಂದಲೂ ಆಗಲ್ವಾ? ವರದಕ್ಷಿಣೆ ವಿಷಯದಲ್ಲಿ ಸೊಸೆ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸಾಯುತ್ತಾಳೆ. ಅದು ಆಕೆಯ ದುರ್ವಿಧಿ. ಇಂತಹ ಸುದ್ದಿಯನ್ನೋದುವಾಗ ನನ್ನ ಮನಸ್ಸಲ್ಲಿ ಕಾಡಿದ ಪ್ರಶ್ನೆ .ಯಾವತ್ತೂ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸೊಸೆ ಮಾತ್ರ ಯಾಕೆ ಸಾಯ್ತಾಳೆ? ಅತ್ತೆ ಅಡುಗೆ ಮನೆಗೆ ಹೋದಾಗ ಸಿಡಿಯದ ಸ್ಟೌ, ಸೊಸೆ ಬಂದಾಕ್ಷಣ ಯಾಕೆ ಸಿಡಿಯುತ್ತೆ?

ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮನಸ್ಸನ್ನು ಕಾಡುವುದು ಸಾಮಾನ್ಯ. ಆದಾಗ್ಯೂ, ಸಮಾಜದಲ್ಲಿ ಸ್ತ್ರೀ ಪುರಷರು ಸಮಾನರು. ಇಬ್ಬರಿಗೂ ಬದುಕುವ ಸಮಾನ ಹಕ್ಕಿದೆ, ಮಾಡಬೇಕಾದ ಕರ್ತವ್ಯಗಳ ಪಟ್ಟಿ ಒಂದೇ ರೀತಿ ಇದೆ. ಹೀಗಿರುವಾಗ ಸ್ತ್ರೀ ಪುರುಷರ ನಡುವೆ ಕಂದಕ ಯಾಕೆ? ಕೇವಲ ಹೆಣ್ಣೊಬ್ಬಳು ಸ್ತ್ರೀವಾದಿಯಾಗಬೇಕಿಂದಿಲ್ಲ. ಪುರುಷರು ಸ್ತ್ರೀ ವಾದಿಗಳಾಗಬಹುದು. ಮಹಿಳೆಯನ್ನು ಗೌರವಿಸುವ, ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿ, ಸಮಾನ ಅವಕಾಶಗಳನ್ನು ಕಲ್ಪಿಸುವವರೇ ನಿಜವಾದ ಸ್ತ್ರೀವಾದಿಗಳು. ಬಾಕಿ ಉಳಿದವರೆಲ್ಲ ಸ್ತ್ರೀ ವ್ಯಾಧಿಗಳು ಅಷ್ಟೇ...

ಎಲ್ಲಾ ಶೋಷಣೆ ದಬ್ಬಾಳಿಕೆಯಿಂದ ಮುಕ್ತವಾಗಲು ಮಹಿಳೆಯರು ಮೊದಲು ಮುಖ್ಯವಾಹಿನಿಗೆ ಬರಬೇಕು. ವಿದ್ಯಾರ್ಜನೆಯಿಂದಲೇ ಇದು ಸಾಧ್ಯವಾಗಿದ್ದರೂ, ಕೆಲವೊಂದು ಮಹಿಳೆಯರು ತನ್ನನ್ನು ತಾನೇ ಬಂಧಿಯಾಗಿರಿಸುವ ಮೂಲಕ ಮೂಲೆ ಗುಂಪಾಗುತ್ತಾರೆ. ಇದು ಕೇವಲ ಸಾಧನೆ ಮಾಡಬೇಕೆಂದಿರುವ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದು. 'ಸ್ವಬಂಧನ 'ಕ್ಕೊಳಗಾದ ಮಹಿಳೆಯರು ಅದೆಲ್ಲಾ ನನ್ನ ಕೈಯಿಂದ ಆಗಲ್ಲ ಎಂದು ತಮ್ಮ ಮುಂದೆಯೇ ಲಕ್ಷ್ಮಣರೇಖೆ ಎಳೆದು ಕೊಂಡು ಕೂರುತ್ತಾರೆ. ಅವರು ಏನಂತಾರಪ್ಪಾ, ಇವರು ಏನಂತಾರಪ್ಪಾ ಎಂದು ಆಕೆಯ ಮನಸ್ಸಲ್ಲಿ ಭಯ. ಇಂತಹಾ ಭಯಗಳು ಸಾಮಾನ್ಯ ಇದ್ದೇ ಇರುತ್ತದೆ. ಯಾಕೆಂದರೆ ಇದು ಭಾರತ. ಇಲ್ಲಿ ಸಂಸ್ಕೃತಿಗೆ ಬೆಲೆ ಇದೆ. ಇದರರ್ಥ ಹೆಣ್ಣು ಮನಸೋಇಚ್ಛೆ ವರ್ತಿಸಬೇಕೆಂದಲ್ಲ. ಉದಾಹರಣೆಗೆ ಮಹಾನಗರದಲ್ಲಿ ಟೀಶರ್ಟ್ ಜೀನ್ಸ್ ಹಾಕಿ ಓಡಾಡುವ ಹುಡುಗಿ, ತನ್ನ ಊರಲ್ಲಿ ಸಲ್ವಾರ್ ಹಾಕಿ ಲಜ್ಜೆಯಿಂದ ನಡೆಯುತ್ತಾಳೆ. ಇದು ಭಯವಲ್ಲ, ಆಕೆ ಈ ಮೂಲಕ ಸಮಾಜವನ್ನು ಆಕೆ ಗೌರವಿಸುತ್ತಾಳೆ. ಸಮಾಜದಲ್ಲಿ ಒಳಿತು ಕೆಡುಕು ಇದ್ದೇ ಇರುತ್ತೆ. ಹೀಗಿರುವಾಗ ಸಾಧನೆ ಮಾಡಬೇಕೆಂದು ಹೊರಟ ಮಹಿಳೆ ಯಾವುದನ್ನೂ ಲೆಕ್ಕಿಸಬಾರದು. ನನ್ನ ವೃತ್ತಿ ಜೀವನದಲ್ಲಿ ಈವರೆಗೆ ನಾನು ಸುಮಾರು 30 ರಷ್ಟು ಸಾಧಕಿಯರನ್ನು ನಾನು ಭೇಟಿ ಮಾಡಿದ್ದೇನೆ. ಸಾಧನೆಗೆ ಅಡ್ಡಿ ಆತಂಕಗಳು ಇದ್ದೇ ಇರುತ್ತೆ, ಆದರೆ ಅದನ್ನು ನಿಭಾಯಿಸಿ ಮುಂದೆ ಬರುವುದೇ ಜೀವನ ಅಲ್ವಾ ಎಂದು ಹೇಳುವ ಅವರ ಮಾತು ಎಷ್ಟೊಂದು ಸ್ಪೂರ್ತಿದಾಯಕ ಅಲ್ವಾ? ಏನೇ ಮಾಡಿದರೂ ಸಮಾಜದಲ್ಲಿ ಕಾಲೆಳೆಯುವ ಜನ ಇದ್ದೇ ಇರುತ್ತಾರೆ. ಹಾಗಂತ ಅಂಜಿಕೆಯಿಂದಲೇ ಜೀವನ ಸಾಗಿಸಲು ಸಾಧ್ಯನಾ? ನಾವು ಸತ್ಯ, ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದರೆ ಅಂಜಿಕೆ ಏತಕ್ಕೆ? ಆದ್ದರಿಂದ, ಹಳೆಯದನ್ನೆಲ್ಲಾ ಮರೆತು, ಹೊಸ ದಾರಿಯಲ್ಲಿ ಚಲಿಸುವ ಪ್ರಯತ್ನ ಆಕೆಯಿಂದ ಆಗಬೇಕು, ಜತೆಗೆ ನಮ್ಮೆಲ್ಲರ ಪ್ರೋತ್ಸಾಹ ಆಕೆಗೆ ಸಿಗಬೇಕು. ಏನಂತೀರಾ?

No comments: