ಅಪ್ಪನಿಗೊಂದು ಪತ್ರ
ಪ್ರೀತಿಯ ಪಪ್ಪಾ, ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ... ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು. ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್ ಪಾಲಿಶ್ ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ...