Tuesday, June 7, 2011

ಏಕಾಂತತೆ ಮತ್ತು ನಾನು...

'ಎಂಥಾ ಮಳೆಯಪ್ಪಾ...ಈ ಟ್ರಾಫಿಕ್ ಜಾಮ್ ನಲ್ಲಿ ಮಳೆ ಬಂದರೆ ಕಿರಿಕಿರಿಯೇ.'."ನಾವು ಕೇಳಿದಷ್ಟು ದುಡ್ಡು ಕೊಟ್ಟರೆ ಬರುತ್ತೇವೆ" ಎಂದು ಹೇಳಿದ ರಿಕ್ಷಾವಾಲನಿಗೆ ಮನಸ್ಸಲ್ಲೇ ಹಿಡಿಶಾಪ ಹಾಕಿ ಅದೇ ರಿಕ್ಷಾ ಏರಿ ಮನೆಯತ್ತ ಹೊರಟ ಮಂದಿ. ಈ ನೂಕು ನುಗ್ಗಲಿನಲ್ಲಿಯೂ 'ನಾ ಫಸ್ಟು...ನಾ ಮುಂದೆ' ಎಂದು ಪುಟ್ಟ ಮಕ್ಕಳು ಉಚ್ಚೆ ಹೊಯ್ದು ಓಡಿಕೊಂಡು ಬರುವ ಹಾಗೆ ಬಿಎಂಟಿಸಿ ಬಸ್ ಗಳೆಡೆಯಲ್ಲೇ ನುಗ್ಗುವ ಬೈಕುಗಳು.

ಬದುಕು ಬವಣೆಗಳ ನಡುವೆಯೂ ಮಳೆ ಸುರಿದಿದೆ. ಕಾಮೋ೯ಡ ಕವಿದಿದ್ದ ಬಾನು ತಿಳಿಯಾಗುತ್ತಿದೆ. ಕತ್ತಲ ಬದುಕಿನಲ್ಲಿ ಮಿಂಚು ಹರಿದು ಬೆಳಕಿನ ಸ್ಪಶ೯ ನೀಡಿದಾಗ ಭಾರವಾದ ಎದೆ ನಡುಗಿದೆ.

ಈ ನೀರವತೆಯಲ್ಲಿನ ಏಕಾಂತತೆಯಲ್ಲಿ ನೆನಪುಗಳು ಮಾತ್ರ ಸದ್ದಿಲ್ಲದೆ ಬಂದು ಮನದ ಕದ ತಟ್ಟಿವೆ. ಪೀಜಿಯ ಕಿಟಿಕಿಯ ಮೂಲಕ ಇಣುಕಿದರೆ ಧೋ ಎಂದು ಸುರಿವ ಮಳೆ...ಒಣಗಲು ಹಾಕಿದ ಬಟ್ಟೆ ತಾರಸಿ ಮೇಲೆ ಹಾಗೆಯೇ ಇದೆ. ಮಳೆಯೊಂದಿಗೆ ತೀಡಿ ಬರುತ್ತಿರುವ ಗಾಳಿಯು ಆ ಬಟ್ಟೆಯನ್ನು ತನ್ನೊಡನೆ ಬಾ ಎಂದು ಕರೆಯುತ್ತಿದೆ. ಅದನ್ನು ನಾ ಬಿಡಲಾರೆ ಎಂದು ಬಟ್ಟೆಗೆ ಸಿಕ್ಕಿಸಿದ ಕ್ಲಿಪ್ ಗಾಳಿ ಜತೆ ಗುದ್ದಾಟಕ್ಕೆ ತೊಡಗಿದೆ.

ರೂಮ್ ಮೇಟ್ ಲ್ಯಾಪ್ ಟಾಪ್ ಹಿಡಿದು ಧ್ಯಾನದಲ್ಲಿ ಕುಳಿತಂತಿದ್ದಾಳೆ. ಇಂಟರ್ ನೆಟ್ ಗೆ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತಾ ಕಿಟಕಿಯ ಗಾಜು ಸರಿಸಿದ್ದಾಳೆ. ಆವಾಗಲೇ ತಣ್ಣನೆ ಗಾಳಿ ರೂಮಿನೊಳಗೆ ಪ್ರವೇಶಿಸಿದೆ. ಅಬ್ಬಾ ಸಿಗ್ನಲ್ ಸಿಕ್ತು ಎಂದು ಫೇಸ್ ಬುಕ್ ನಲ್ಲಿ ಆಕೆ 'ಲೈಕ್' ಮಾಡುತ್ತಾ ಕಾಮೆಂಟಿಸುತ್ತಿದ್ದಾಳೆ.

ಎಲ್ಲವೂ ಬದಲಾಗಿದೆ. ನಾವು ಜನರು....ಎಲ್ಲರೂ...ಆದರೆ ಮಳೆ...ನಿನ್ನೆಯೂ ಹೀಗೆ ಸುರಿಯುತ್ತಿತ್ತು. ಇವತ್ತೂ ಹಾಗೆಯೇ ಸುರಿಯುತ್ತಿದೆ. ಮೊನ್ನೆ ಮೊನ್ನೆಯವರೆಗೆ ಅಂಗಳದ ಮೂಲೆಯಲ್ಲಿ ಗುಟರ್ ಗುಟರ್ ಎನ್ನುತ್ತಿದ್ದ ಆ ಗೋಂಕುರು ಕಪ್ಪೆಗಳು ಎಲ್ಲಿ ಹೋದವು? ಮಳೆ ಬಂದ ಕೂಡಲೇ ಕಾಣಿಸಿಕೊಳ್ಳುತ್ತಿದ್ದ ವೆಲ್ವೆಟ್ ಹುಳ ಈಗ ಕಾಣಿಸುವುದೇ ಇಲ್ಲ. ಪ್ರೈಮರಿ ಕ್ಲಾಸಿನಲ್ಲಿರುವಾಗ ಸ್ಲೇಟ್ ಒರೆಸುತ್ತಿದ್ದ ಆ ನೀರಕಡ್ಡಿ ಎಲ್ಲಿ ಹೋಯ್ತ?

ವತ೯ಮಾನದ ಅರಿವೇ ಇಲ್ಲ ಎಂಬಂತೆ ಮನಸ್ಸು ಬಾಲ್ಯದ ದಿನಗಳತ್ತ ಮತ್ತೆ ವಾಲುತ್ತಿದೆ. ಮಳೆಯೊಂದಿಗೆ ನೆನಪುಗಳು ಮರುಕಳಿಸುತ್ತವೆ. ನಾನು ಮತ್ತು ನನ್ನ ಏಕಾಂತತೆ ಸುರಿವ ಮಳೆಯಲ್ಲಿ ತೊಯ್ದು ಸುಮ್ಮನಾಗಿದ್ದೇವೆ.

"ಇನ್ಮುಂದೆ ನಿನ್ನ ಯಾವುದೇ ವಿಷಯಕ್ಕೆ ತಲೆ ಹಾಕಲ್ಲ" ಎಂದು ಅವ ಹೇಳಿ ಹೋಗಿದ್ದಾನೆ. ಅವನ ಎಸ್ಸೆಮ್ಮೆಸ್, ಕಾಲ್ ...ಯಾವುದೂ ಇಲ್ಲ. ನೆಟ್ವಕ್೯ ಸಿಗದೇ ಇದ್ದರೆ?

ಅವನಿಗೆ ನನ್ನಲ್ಲಿ ದ್ವೇಷವಿರಬಹುದಾ? ಇದ್ಯಾವುದೂ ನನಗೊತ್ತಿಲ್ಲ. ಆದರೆ ನಾನು ಪ್ರೀತಿಸಿದ್ದೇನೆ. ಅವನೊಂದಿಗೆ ಅವನ ಕನಸುಗಳನ್ನು, ಅವನ ಪೆದ್ದುತನವನ್ನು...ಅವನ ಸಿಟ್ಟನ್ನು...ಅವನ ಜೀವನವನ್ನು..

ಈ ಮಳೆ ನನ್ನನ್ನು ಒದ್ದೆಯಾಗಿಸಿದೆ. ಕಂಬನಿಯೂ ಮಳೆ ನೀರ ಸೇರಿ ಮೋಡವಾಗಿದೆ. ಆದರೆ ನನ್ನ ಒಡಲಾಳದಲ್ಲಿರುವ'ಪ್ರೀತಿ'ನಂಬಿಕೆಯ ಹೊದಿಕೆ ಹೊದ್ದು ಬೆಚ್ಚನೆ ಮಲಗಿದೆ.

5 comments:

umesh desai said...

rashmi enjoyed reading both posts of june-11. keep up the good work

ಅನುರಾಗ said...

thank you sir

Sandeep K B said...
This comment has been removed by the author.
Sandeep K B said...

Monsoon Message.... chennagide...

ಅನುರಾಗ said...

@Sandeep- thanx