ಶೂನ್ಯ

ಜೂನ್ ತಿಂಗಳ ಒಂದು ಸಂಜೆ ಎಂದಿನಂತೆ ಹಾಸ್ಟೆಲ್ ರೂಮಿನಿಂದ ಹೊರಗಡೆ ಇಣುಕಿದಾಗ ಸೂರ್ಯ ಕೆಂಪಾಗಿ ಆಗ ತಾನೆ ಜಾರಲು ಅಣಿಯಾಗುತ್ತಿದ್ದ. ತನ್ನ ಗೂಡು ಸೇರಲು ಹಿಂಡು ಹಿಂಡಾಗಿ ಹಾರುತ್ತಿದ್ದ ಹಕ್ಕಿಗಳ ಗುಂಪು ನನಗಂದು ಕಾಣಲಿಲ್ಲ. ನನ್ನ ಕಣ್ಣು ಅವನನ್ನೇ ಹುಡುಕುತ್ತಿದ್ದವು. ಎಂದಿನಂತೆ ಅವನ ದಾರಿಯನ್ನೇ ಎವೆಯಿಕ್ಕದೆ ನೋಡುತ್ತಿದ್ದ ನನಗೆ ಮನದಲ್ಲೇನೋ ನಡುಕ, ಸೂರ್ಯ ಜಾರಿ ಹೊತ್ತಾದರು ಅವ ಕಾಣಿಸುತ್ತಿಲ್ಲವಲ್ಲ!.ನಾವಿಬ್ಬರು ಭೇಟಿಯಾಗುವ ಅದೇ ಸಮಯ ಅದೇ ಜಾಗ ಆದರೆ ಇಂದೇನಾಯಿತು? ಎದೆ ಬಡಿತ ಹೆಚ್ಚಾಯಿತು. ಅವಸರದಿಂದ ಹಾಸ್ಟೆಲ್ ತಾರಸಿ ಮೇಲೆ ಹತ್ತಿದೆ. ಅಲ್ಲಿ ನಿಂತು ಅವ ಬರುವನೆಂದು ಸುತ್ತಲೂ ನೋಡಿದೆ. ಇಲ್ಲ.........ಅವನೆಲ್ಲಿ? ನನ್ನಲ್ಲಿ ಮುನಿಸಿಕೊಂಡನೇ?

ನನ್ನ ಸ್ನೇಹ ಅವನಿಗೆ ಅರ್ಥವಾಗದೆ ಹೋಯಿತೆ? ಎಂದೂ ನನ್ನಲ್ಲಿ ನಗುಮುಖದಿಂದ ಮಾತನಾಡುತ್ತಿದ್ದ ಅವನು ಇಂದೇಕೆ ಹೀಗಾದ? ನಮ್ಮಿಬ್ಬರ ಪ್ರೇಮ ಇನ್ಯಾರಿಗೂ ಅರ್ಥವಾಗಲ್ಲ ಬಿಡಿ. ಸುಂದರ ಸಂಜೆಗಳಲ್ಲಿ ಅವನ ದಾರಿ ನೋಡುವುದೇ ಮನಸ್ಸಿಗೆ ಮುದ ನೀಡುತ್ತಿತ್ತು. ಅವನ ಮುಗ್ಧ ನಗು,ಪ್ರೀತಿಯಿಂದ ಮುನಿಸಿ ಎಲ್ಲೋ ಮರೆಯಾಗಿ ನನ್ನನ್ನು ಛೇಡಿಸುವಂತಹ ತುಂಟ ಹುಡುಗಾಟ....ನನ್ನನ್ನೇ ಎವೆಯಿಕ್ಕದೆ ನೋಡಿ ಕಣ್ಣಲ್ಲೇ ಮಾತನಾಡುವ ಅವನ ಶೈಲಿ.... ಎಲ್ಲವೂ ಪ್ರೇಮಮಯ! ಆ ಸುಮಧುರ ಸಂಜೆಗಳು... ನಮ್ಮಿಬ್ಬರ ಸ್ನೇಹಕ್ಕೆಈ ಅನಂತ ತಾರೆಗಳು ಸಾಕ್ಷಿ ಎಂದು ಹೇಳುತ್ತಿದ್ದ ಅವನ ಮಾತು ನನ್ನ ಕಿವಿಯಲ್ಲಿ ಪದೇ ಪದೇ ಗುನುಗುತ್ತಿದ್ದವು. ಬಾನಲ್ಲಿ ತಾರೆಗಳು ಆಗಾಗ ಕಣ್ಮುಚ್ಚಿ 'ಸುಮ್ಮನೆ' ಎಂದು ಹೇಳಿ ನಕ್ಕಂತೆ ನನಗೆ ಭಾಸವಾಗುತ್ತಿತ್ತು. ಆದರೆ ಇಂದೇಕೆ ಹೀಗಾಯಿತು? ನನ್ನ ಸ್ನೇಹ ಅವನಿಗಿಂದು ಬೇಡವಾಯಿತೇ? ನನ್ನ ಕಣ್ಣುಗಳು ತೇವಗೊಂಡವು. ನನಗೆ ನನ್ನ ಪ್ರೀತಿಯಲ್ಲಿ ವಿಶ್ವಾಸವಿದೆ ಎಂದಾದರೊಂದು ದಿನ ಅವ ನನ್ನನ್ನು ಅರ್ಥೈಸುತ್ತಾನೆ ಎಂದು ನನ್ನ ಮನಸ್ಸನ್ನು ಸ್ವತಃ ಸಮಾಧಾನಿಸಿಕೊಂಡೆ.

ಸೀಮಾ.... ಏನು ರೂಮಿಗೆ ಬರುವ ಯೋಚನೆ ಇಲ್ಲವೇ? ಎಂದು ನನ್ನ ಗೆಳತಿ ಕರೆದಾಗ ತಿರುಗಿ ನೋಡಿದೆ."ಏ ಹುಚ್ಚೀ.... ಯಾಕೆ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿದ್ದೀಯಾ? ನಿನ್ನ 'ನಲ್ಲ' ಇಂದು ಬರಲ್ಲ ಕಾಣೇ... ಇಂದು ಅಮವಾಸ್ಯೆ! ಅಮವಾಸ್ಯೆಯಂದು ಚಂದಿರನನ್ನು ಹುಡುಕುವುದೇ? ಬಾ ನಡಿ..." ಅವಳು ನನ್ನನ್ನು ತಮಾಷೆ ಮಾಡಿ ನಗುತ್ತಿದ್ದಳು. ಆದರೂ ನನ್ನ ಮನ ಪುನಃ ಆಕಾಶವನ್ನೇ ನೋಡುವಂತೆ ಹಾತೊರೆಯುತ್ತಿತ್ತು.ಆ ಶೂನ್ಯತೆಯಲ್ಲಿ ನನ್ನ ಚಂದಿರನಿಗಾಗಿ ಕಾದಿರುವ ನನ್ನ ಮನಸ್ಸು ನಾಳೆಯ ನಿರೀಕ್ಷೆಯೊಂದಿಗೆ ರೂಮಿನತ್ತ ಹೆಜ್ಜೆಯಿಡುತ್ತಿರುವಾಗ ಅದೇಕೊ ನನ್ನ ಮನ ಈ ಸ್ವಪ್ನಲೋಕದಿಂದ ಹೊರ ಬರುವಂತೆಯೂ ಮತ್ತೊಮ್ಮೆ ಹೊರಬರಲಾಗದೆ ಚಡಪಡಿಸುವಂತೆ ಮಾಡುತ್ತಿರುವಾಗ ಮನದಲ್ಲಿ ನೆಲೆಸಿದ ಆ ಸುಪ್ತಪ್ರೇಮ ನನ್ನನ್ನು ಶೂನ್ಯತೆಯತ್ತ ಬರಸೆಳೆಯುವಂತೆ ಅನುಭವವಾಗುತ್ತಿತ್ತು.

Comments

jomon varghese said…
ನಿಮ್ಮ ಬರವಣಿಗೆ ಚೆನ್ನಾಗಿದೆ. ಪ್ರಯತ್ನಿಸಿದರೆ ಇನ್ನೂ ಚೆನ್ನಾಗಿ ಬರೆಯಬಲ್ಲಿರಿ. ಹೊಸ ಬರವಣಿಗೆಯ ನಿರೀಕ್ಷೆಯಲ್ಲಿ ಆಗಾಗ್ಗ ನಿಮ್ಮ ಬ್ಲಾಗ್‌ನ ಬಾಗಿಲಿಗೆ ಬಂದು ಹೋಗುತ್ತಿರುತ್ತೇವೆ.


ಧನ್ಯವಾದಗಳು,
ಜೋಮನ್.

http://www.jomon-malehani.blogspot.com/

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ