ನೂರು ರುಪಾಯಿಗೆ ಸಿಕ್ಕ
ಫ್ಯಾಷನ್ ಚಪ್ಪಲಿ ಮೆಟ್ಟಿ,
ಅದೇ ಜೀನ್ಸು, ಮೇಲೊಂದು ಟೀ ಶರ್ಟು
ಮತ್ತೊಂದು ಬ್ಯಾಗು, ಪರ್ಸ್...
ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ
ತುಳಿತಕ್ಕೆ ಚೀರಿ,
ನೂಕು ನುಗ್ಗಲಲ್ಲಿ ಚಡಪಡಿಸಿ
ಬಿದ್ದು ಏಳುತಿದೆ ಬದುಕು...
ಅವಸರದಲ್ಲಿ ಅರ್ಧಂಬರ್ಧ ತಿಂದ
ತಿಂಡಿ ಬಸ್ಸಲ್ಲೇ ಜೀರ್ಣವಾಗಿ
ಹೊಸ ಕನಸುಗಳು ಮತ್ತೆ
ಚಿಗುರುತ್ತಿವೆ ಮನಸ್ಸಲ್ಲಿ
ದಾರಿಯಂಗಡಿಗಳಲ್ಲಿ ತೂಗು ಹಾಕಿದ
ಟೀ ಶರ್ಟು, ಸಲ್ವಾರುಗಳು
ಕೈ ಬೀಸಿ ಕರೆಯುತ್ತಿವೆ...
ನೂರು ರುಪಾಯಿ ಇಡಿ ನೋಟು
ಬಸ್ ಪಾಸು, ಐಡಿ ಕಾರ್ಡಿನ ನಡುವೆ
ಬೆಚ್ಚನೆ ಕುಳಿತಿರಲು
ಹಳೇ ರಸೀದಿ ತುಂಡುಗಳು ನಡುಗ
ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ!
ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ
ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ
ಮನೆ ಬಾಡಿಗೆ, ಕ್ರೀಮು, ಪೌಡರು
ಒಂದಷ್ಟು ಮ್ಯಾರಿ ಬಿಸ್ಕತ್ತು!
ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ
ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು
ಕಳೆದು, ಉಳಿದದ್ದನ್ನು ಕೂಡಿಸಿ
ಹೇಗೋ 'ಅಡ್ಜೆಸ್ಟ್' ಮಾಡಿ
ಮುಂದಿನ ಪಗಾರಕ್ಕಾಗಿ ದಿನ ಎಣಿಕೆ
ಶುರುವಾಗಿದೆ...
2 comments:
Neevu kavana padya kooda baritiralla..multi talented person
ರಶ್ಮಿ ಅವ್ರೆ,
ಬೆಂಗಳೂರಿನ ದೈನಂದಿನ ಜೀವನದ ಬಗ್ಗೆ ಅದರಲ್ಲೂ ಒಂದು ಹುಡುಗಿಯ ಧೃಸ್ಟಿ ಕೋನದಲ್ಲಿ ನೀವ್ ಬರದ ಈ ಕವನ ಅರ್ಥವತಾಗಿಯೂ ಇದ್ದು ಬಹಳ ಹಿಡಿಸಿತು..
Post a Comment