'ಅವಳ್ಯಾಕೆ' ನಮ್ಮ ರೋಲ್ ಮಾಡೆಲ್ ಆಗ್ಬಾರ್ದು?


ಜಗತ್ತಿನಲ್ಲಿ ಎಷ್ಟು ರೀತಿಯ ಮಹಿಳೆಯರಿದ್ದಾರೆ? ಎಂಬ ಪ್ರಶ್ನೆಯನ್ನು ನಿಮ್ಮಲ್ಲಿ ನೀವೇ ಕೇಳಿ ನೋಡಿ. ಮೊದಲಿಗೆ ಸುಂದರಿಯಾದ ಮಹಿಳೆಯ ಚಿತ್ರಣ ನಿಮ್ಮ ಮುಂದೆ ಬರುತ್ತದೆ ನಂತರ ನೊಂದ ಮಹಿಳೆ, ಯಶಸ್ವೀ ಮಹಿಳೆ, ದೌರ್ಜನ್ಯಕ್ಕೊಳಗಾದ ಮಹಿಳೆ, ಖಿನ್ನಳಾದ ಮಹಿಳೆ, ಸುಖಿ ಮಹಿಳೆ, ಅಹಂಕಾರಿ ಮಹಿಳೆ, ಮಾನ ಮಾರಿದ ಮಹಿಳೆ, ಮಕ್ಕಳನ್ನೇ ಕೊಂದ ಪಾಪಿ ಮಹಿಳೆ, ಕೈಕೊಟ್ಟ ಮಹಿಳೆ, ಕೈ ಹಿಡಿದ ಮಹಿಳೆ...ಹೀಗೆ ಮಹಿಳೆಯ ಹಲವಾರು 'ರೂಪ'ಗಳು ನಿಮ್ಮ ಕಣ್ಣ ಮುಂದೆ ಸುಳಿಯುತ್ತವೆ.
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಸಂದರ್ಭದಲ್ಲಿ ಚರ್ಚಾ ವಿಷಯಗಳಿಗೊಳಗಾಗುವ ಮಹಿಳೆಯರೆಂದರೆ ಒಂದು ಯಶಸ್ವೀ ಮಹಿಳೆ ಇನ್ನೊಂದು ದೌರ್ಜನ್ಯಕ್ಕೊಳಗಾದ ಮಹಿಳೆ. ಇಂತಹಾ ದಿನಾಚರಣೆಗಳಲ್ಲಿ ಯಶಸ್ವೀ ಮಹಿಳೆಯ ಸಾಧನೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯ 'ರೋದನೆ' ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ನಾವು ಓರ್ವ ಸಾಧಕಿಯ ಸಾಧನೆಗಳನ್ನು ಮೆಚ್ಚಿ ಕರತಾಡನ ಮಾಡಿದರೆ ಇನ್ನೊಂದೆಡೆ ದೌರ್ಜನ್ಯಕ್ಕೊಳಗಾದ ಮಹಿಳೆಯ ಪರ ದನಿಗೂಡಿಸುತ್ತೇವೆ. ಒಬ್ಬಳು ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದರೆ ಇನ್ನೊಬ್ಬಳು ದೌರ್ಜನ್ಯದ ನೋವು ಅನುಭವಿಸುತ್ತಿರುತ್ತಾಳೆ. ಹಾಗೆ ನೋಡಿದರೆ ಯಶಸ್ವೀ ಮಹಿಳೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಎರಡು ಗುಂಪುಗಳಿಗೆ ಸೇರಿಸಿ ಪ್ರತ್ಯೇಕಿಸಬಹುದು. ಆದರೆ ಕೆಲವೊಂದು ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಹಾಗೂ ಸಾಧನೆ ಹೊರ ಜಗತ್ತಿಗೆ ಯಾಕೆ ಸ್ವಂತ ಮನೆಯವರಿಗೇ ತಿಳಿಯುವುದಿಲ್ಲ.

ಅವರ್ಯಾರು? ಎಂಬ ಕುತೂಹಲ ನಿಮ್ಮಲ್ಲಿರಬಹುದು. ಅವರು ಮತ್ಯಾರು ಅಲ್ಲ...ನಮ್ಮ 'ಅಮ್ಮ'. ಈಕೆ ಮನೆಯಲ್ಲಿದ್ದು ಅಡುಗೆ ಮಾಡಿಕೊಂಡು, ಗಂಡನ ಗಡಿಬಿಡಿಗೆ ಸಿಡಿಮಿಡಿಗೊಳ್ಳುವ, ಮಕ್ಕಳ ಚಾಕರಿ ಜತೆ ಧಾರವಾಹಿಗಳನ್ನು ನೋಡಿ ಕಣ್ಣೀರು ಸುರಿಸುವ 'ಗೃಹಿಣಿ'. ಈಕೆ ಯಶಸ್ವೀ ಮಹಿಳೆ ಎಂದು ಹೆಚ್ಚಿನವರಿಗೆ ಅನಿಸುವುದೇ ಇಲ್ಲ ಯಾಕೆಂದರೆ ಈಕೆ ಯಾವತ್ತೂ ನನ್ನ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನ್ನಾಡಿ ಪ್ರಶಸ್ತಿ ಪುರಸ್ಕಾರ ನೀಡಬೇಕು ಎಂದು ಆಶಿಸಿದವಳೇ ಅಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೆ ಮನೆಗೆಲಸ ಮಾಡುತ್ತಾ, ತನ್ನ ಕಷ್ಟಗಳನ್ನೆಲ್ಲಾ ಅದುಮಿಟ್ಟು ಗಂಡನ, ಮಕ್ಕಳ ಖುಷಿಗಾಗಿ ಹಾತೊರೆಯುವ ಈ ಹೆಣ್ಮಗಳು ಯಾವತ್ತೂ ತನ್ನ ಸ್ವಂತ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ. ಮನೆಯವರು ಖುಷಿಯಾಗಿದ್ದರೆ ಸಾಕು..ಅವರ ಖುಷಿಯೇ ನನ್ನ ಖುಷಿ ಎಂಬ ಧ್ಯೇಯವನ್ನು ಬದುಕಿನುದ್ದಕ್ಕೂ ಅನುಸರಿಸುವ ಈಕೆ ನಿಜವಾಗಿಯೂ 'ಯಶಸ್ವೀ ಮಹಿಳೆ' ಎಂಬುದನ್ನು ನಾವು ಮರೆತು ಬಿಟ್ಟಿರುತ್ತೇವೆ.

ಅದಿರಲಿ, ರೋಲ್ ಮಾಡೆಲ್್ನ ವಿಷಯ ಬಂದಾಗಲಂತೂ ನಮಗೆ ಥಟ್ಟನೆ ನೆನಪು ಬರುವುದೇ ಯಾವುದೋ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು. ಅದು ಸಿನಿಮಾ, ಕ್ರೀಡೆ ಅಥವಾ ರಾಜಕೀಯವೇ ಆಗಿರಬಹುದು ಅಲ್ಲಿ ಮಿಂಚಿದ ವ್ಯಕ್ತಿಗಳೇ ನಮ್ಮ ರೋಲ್್ಮಾಡೆಲ್. ಅವರ ಜೀವನದಲ್ಲಿ ಹಾಗಾಗಿತ್ತು, ಹೀಗಾಗಿತ್ತು, ಅವರು ಸಾಧನೆ ಮಾಡಿದ್ದಾರೆ, ಕಷ್ಟವನ್ನು ಜಯಿಸಿದ್ದಾರೆ ಆದ್ದರಿಂದ ಅವರೇ ನನಗೆ ಆದರ್ಶಪ್ರಾಯರು ಎಂದು ನಾವು ನಮ್ಮ ಆಯ್ಕೆಯ ಬಗ್ಗೆ ಸಮರ್ಥನೆ ನೀಡುತ್ತೇವೆ. ಅದೇ ಸಮಯದಲ್ಲಿ ಹಿತ್ತಿಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ನಮ್ಮ ಮನೆಯಲ್ಲೇ ಇರುವ ನಮ್ಮ 'ಅಮ್ಮ' ಮಹಾನ್ ಸಾಧಕಿ ಎಂಬುದನ್ನು ನಾವು ಮರೆತು ಬಿಡುತ್ತೇವೆ.

ಆಕೆ ನಮ್ಮ ಕುಟುಂಬದ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡಿದ್ದಾಳೆ. ಮನೆಯ ಗೃಹಿಣಿ ಖುಷಿಯಾಗಿದ್ದರೆ ಕುಟುಂಬದ ಸದಸ್ಯರೆಲ್ಲರೂ ಖುಷಿಯಾಗಿರುತ್ತಾರೆ ಎಂಬುದು ಅವಳಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಆಕೆ ತನ್ನ ನೋವುಗಳನ್ನೆಲ್ಲಾ ನುಂಗಿ ನಕ್ಕಿದ್ದಾಳೆ, ನಮ್ಮನ್ನು ನಗಿಸಿದ್ದಾಳೆ. ನಮ್ಮ ದುಃಖದಲ್ಲಿ ಕಣ್ಣೀರೊರೆಸಿ, ನೋವನ್ನು ಗೆಲ್ಲುವ ಛಲವನ್ನು ತುಂಬಿದ್ದಾಳೆ. ನಮ್ಮ 'ಅಮ್ಮ'ನನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆಯೋ ಗೊತ್ತಿಲ್ಲ. ಆದರೆ ನಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ಏಕೈಕ ವ್ಯಕ್ತಿ ಅವಳೇ. ಆದ್ದರಿಂದ ಅವಳ್ಯಾಕೆ ನಮ್ಮ ರೋಲ್ ಮಾಡೆಲ್ ಆಗ್ಬಾರ್ದು? ಆಯ್ಕೆ ನಿಮಗೆ ಬಿಟ್ಟದ್ದು.

Comments

ಅಮ್ಮ ರೋಲ್ ಮಾಡೆಲ್ ಆಗುತ್ತಾಳೆ. ಅಮ್ಮ ಅನ್ನುವ ಜಗತ್ತಿಗೆ ಮಕ್ಕಳು ಅನ್ನುವ ಬಳ್ಳಿ ಹಬ್ಬಿದಾಗ. ನಿಮ್ಮ ಲೇಖನದ ಆಶಯ ತುಂಬಾ ವಿಸ್ತಾರವಾಗಿದೆ.ಅಮ್ಮನದ ಹೆಸರಿಗೆ ಅಪ್ಪನ ಕೊಡುಗೆಯೂ ಆಳವಾಗಿದೆ.ಒಂದು ಮಗುವಿಗೆ ಹತ್ತು ಗಂಡಸರು ಅಪ್ಪ ಆಗಬಹುದು. ಕರುಳ ಬಳ್ಳಿ-ಗರ್ಭ ಒಂದೇ ಆದ್ದರಿಂದ ಅಮ್ಮ ಒಬ್ಬಳೆ ಅನ್ನುವುದು ಎಲ್ಲರಿಗೂ ಗೊತ್ತಾಗಬೇಕಿದೆ. ಅದು ಮನೆಯಲ್ಲಿ ಕುಳಿತ ಸತ್ಯ ದರ್ಶನದ ತಾಯಿ ಮಾತ್ರ ಉತ್ತರವಾಗುತ್ತಾಳೆ. ನಿಮಗೊಂದು ವಿಷಯ ಗೊತ್ತಿರಬಹುದು ಅಮ್ಮನಿಗೆ ಕೊಡುವುದು ಮಾತ್ರ ಗೊತ್ತು. ತೆಗೆದುಕೊಳ್ಳುವುದು ಗೊತ್ತಿಲ್ಲ. ಅಪ್ಪನಿಗೆ ತೆಗೆದುಕೊಳ್ಳುವುದು- ಕೊಡುವುದು ಅವನ ಧರ್ಮ. ನೀವು ಶಿವಲಿಂಗ ನೋಡಿರಬಹುದು. ಏನು ಅದರ ಅರ್ಥ.ಸೃಷ್ಟಿ ಮತ್ತು ಶಕ್ತಿಯ ಸಂಕೇತ.ಕೆಳಗೆ ಸೃಷ್ಟಿ ಇದೆ. ಮೇಲೆ ಶಕ್ತಿ ಇದೆ. ನಾವು ಶಿವಾರಾಧನೆಯಲ್ಲಿ ತೊಡಗುವಾಗ ಇದರ ಸತ್ಯಗಳು ಸ್ಪಷ್ಟವಾಗಿ ಅರಿತಿರಬೇಕು. ದೇವರು ಅಮ್ಮನೂ ಅಪ್ಪನೂ ಎರಡೂ ಆಗುತ್ತಾರೆ. ನಿಮ್ಮ ಲೇಖನ ಚೆನ್ನಾಗಿದೆ. ಅಮ್ಮನಿಗೆ ಜೈ. !
@ರವಿ ಮುರ್ನಾಡು }
ನಿಮ್ಮ ಪ್ರತಿಕ್ರಿಯೆಗೆ ನನ್ನಿ...
ರಶ್ಮಿ
ನನ್ನಮ್ಮ ನನಗೆ ಎಷ್ಟೋ ವಿಷಯಗಳಲ್ಲಿ ರೋಲ್ ಮಾಡಲ್ ಆದ್ದರಿಂದಲೇ ಮನಸಾರೆ ಹೇಳುತ್ತೇನೆ ಅಮ್ಮ ರೋಲ್ ಮಾಡಲ್ ಆಗುತ್ತಾಳೆ.. ಮಹಿಳೆಯರು ನಿಜಕ್ಕೂ ತುಂಬಾ ನಿಗೂಢವಾದವರು ಅವರ ಮನಸ್ಸಿನಾಳದ ಭಾವಗಳ ಏರಿಳಿತಗಳನ್ನು ಅರಿಯಲು ತುಂಬಾ ಕಷ್ಟವಾಗುತ್ತದೆ.. ಮನೆಯವರ ಸಂತಸಕ್ಕಾಗಿ ಗಾಣದ ಎತ್ತಾಗುವ ಅಮ್ಮ ನಮಗೆ ಅರ್ಥವಾಗದ ಕಾರಣಗಳಿಗೆ ಕಣ್ಣೀರಾಗುತ್ತಾಳೆ ಆಗೆಲ್ಲಾ ನಾನು ಕಾರಣ ತಿಳಿಯಲು ಪ್ರಯತ್ನಿಸಿದ್ದೇನೆ ಆದರೆ ಅರಿಯಲು ಮಾತ್ರ ಸಾಧ್ಯವಾಗಿಲ್ಲ.. ಅವಳ ಆತ್ಮಸ್ಥೈರ್ಯ ಮತ್ತು ಜೀವನ ಪ್ರೀತಿ ನನಗೆಂದಿಗೂ ಆದರ್ಶ ಎಂದು ಹೆಮ್ಮೆಯಿಂದ ಹೇಳುತ್ತೇನೆ.. ಚೆಂದದ ಲೇಖನ..:)
ಮೇಲ್( Male ) ಅಂದರೆ ಗಂಡು. ಫಿಮೇಲ್ (Female ) ಅಂದರೆ ಹೆಣ್ಣು. ಎಲ್ಲರಿಗೂ ಗೊತ್ತಿರುವ ವಿಚಾರಾನೆ ಅಂತೀರಾ. ಆದ್ರೆ ಅರ್ಥಮಾಡಿಕೊಳ್ಳಬೇಕಾದ್ದು ಏನಂದರೆ, ಮೇಲ್( Male ) ಹಿಂದೆ ಎಫ್ ಇ (Fe) ಸೇರಿಸಿದರೆ ಅದು Female ಅಂದರೆ ಹೆಣ್ಣು ಎಂದರ್ಥ. Fe ಅಂದರೆ Chemistry ಅಂದರೆ ರಸಾಯನ ಶಾಸ್ತ್ರದಲ್ಲಿ ಉಕ್ಕು ಅಥವಾ ಕಬ್ಬಿಣ ಎಂದರ್ಥ. ಅನ್ವರ್ಥವಾಗಿ ಗಂಡಿನ ಹಿಂದೆ ಉಕ್ಕು ಅಥವಾ ಕಬ್ಬಿಣದ ರೀತಿ ಗಟ್ಟಿಯಾಗಿ ನಿಲ್ಲುವವಳೇ ಹೆಣ್ಣು ಎಂದು ಅರ್ಥವಾಗಲಿಲ್ಲವೇ. ..........................................................................ಮೇಲೆ ಹೇಳಿದ ಯಾವುದನ್ನೂ ಸಾಮಾನ್ಯವಾಗಿ ಯಾವ ಗಂಡಸೂ ಒಪ್ಪಿಕೊಳ್ಳುವುದೇ ಇಲ್ಲ. ಅದು ಅವನ ಸ್ವಭಾವ. ಗಂಡಿನ ಹಿರಿಮೆ, ಅಹಂ, ಅಧಿಕಾರ, ಕ್ಷಮತೆ, ಅಧಿಕಾರ, ದರ್ಪ, ದಬ್ಬಾಳಿಕೆ, ಹೀಗೆ ಎಲ್ಲಕ್ಕೂ ಹೆಣ್ಣು ಇದ್ದರೇನೆ " ಬಲ" ಇಲ್ಲದಿದ್ದರೆ ಅವಕ್ಕೆಲ್ಲ "ಬರ" ಹಾಗಾಗಿ .................................ಹೆಣ್ಣೇ ನಿನಗೆ ನಮೋ ನಮಃ
@DEW DROP (ಮಂಜಿನ ಹನಿ)
ಮಂಜಿನ ಹನಿಯಂತಿರುವ ನಿಮ್ಮ ಪ್ರತಿಕ್ರಿಯೆಗೆ ನನ್ನಿ
@tiru
ಹೆಣ್ಣಿಗೆ(fe-male) ವಿಶೇಷ ರೀತಿಯ ವಿಶ್ಲೇಷಣೆ ನೀಡಿದ್ದೀರಾ...ಚೆನ್ನಾಗಿದೆ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆಯೆನಿಸುತ್ತಿದ್ದೆ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಮಮತೆಯ ತಳಹದಿ ಹಾಕಿಕೊಟ್ಟ ಕರುಣಾಮಯಿಗೆ ಅರ್ಪಣೆಯಾದಂತಿದೆ ನಿಮ್ಮ ರೋಲ್ ಮಾಡೆಲ್ ಲೇಖನ.

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ