ಶಿಲ್ಪಿ


ಸ್ವಪ್ನ ಶಿಲ್ಪಿ ನಾನು

ಸುಂದರ ಶಿಲ್ಪಗಳನ್ನು

ಕೆತ್ತುವುದೇ ನನ್ನ ಕಸುಬು

ಕೈ ತುಂಬಾ ಕೆಲಸಗಳಿವೆ

ಸಂತೃಪ್ತಿಯೇ ನನ್ನ

ಆದಾಯ



ನನ್ನ ಶಿಲ್ಪ ಶಾಲೆಗೆ

ಬಂದಿದ್ದರು ಹಲವು ಜನ

ನನ್ನ ಕೆಲಸದ

ಹರುಕು ಗುಡಿಸಲಿಗೂ

ನಾನೆಲ್ಲಿದ್ದೇನೋ ಅಲ್ಲಿಗೆಲ್ಲಾ

ಬಂದಿದ್ದರು



ಎಲ್ಲರೂ ನನ್ನನ್ನು ಬಯಸಿದರು

ನನ್ನನ್ನು ಪ್ರೀತಿಸಿದರು

ಅವರವರಿಗೆ ಒಪ್ಪುವಂತೆ

ಸ್ವೇಚ್ಛೆಯಿಂದ



ನಾನು

ಸಾಕಷ್ಟು ಕನಸುಗಳನು

ಮೊಗೆ ಮೊಗೆದು ಕೊಟ್ಟೆ

ಕೊನೆಗೆ ಅವರು ಹೇಳಿದ್ದು...

ನಿನ್ನ ಮನಸ್ಸು

ಬರೀ ಕಲ್ಲು!



ಅದು ನಿಜ

ನನ್ನ ಮನಸ್ಸು ಕಲ್ಲೇ



ಬಯಸದೇ ಬಂದ ಪ್ರೀತಿಯಲ್ಲಿ

ಅದು ಮುಳುಗಿ ಹೋಗಿತ್ತು

ಆ ಕಲ್ಲಿನ ಮೇಲಿರುವ ಗುಳಿಗಳೂ

ಪ್ರೀತಿಯಿಂದಲೇ ತುಂಬಿದ್ದವು



ಪ್ರೀತಿಯ 'ಉಳಿ'ಯಲ್ಲಿ

ಕೆತ್ತುವ ಕೆಲಸ ಬಿರುಸಾಗಿ

ನಡೆದಾಗ

ಕಲ್ಲು ರೂಪಾಂತರಗೊಳ್ಳುತ್ತಿತ್ತು

ಇನ್ನೂ ಕೆತ್ತಿದರೆ

ಅದು

ಒಡೆದು ಹೋಗುತ್ತಿತ್ತೇನೋ!



ಅವರು ಹೇಳಿದ್ದೇ ನಿಜ

ನನ್ನ ಹೃದಯ ಕಲ್ಲಾಗಿತ್ತು



ಒಂದು ಚಿಕ್ಕ ಪೆಟ್ಟು ಸಾಕು

ಅದಿನ್ನು ಒಡೆದು ಹೋಗಲು

ಆದರೆ ಅವರಿಗೇನು ಗೊತ್ತಿತ್ತು

ಕಲ್ಲಿನ ಸ್ಥಿತಿ?

ಸುಂದರ ಶಿಲ್ಪಕ್ಕಾಗಿ

ಅವರು ಬಯಸಿದ್ದರಲ್ಲವೇ?



ಸಾಕು

ನಿಲ್ಲಿಸಿ....



ಹೇಳಬೇಡಿ ಇನ್ನೊಂದು

ಶಿಲ್ಪದ ರಚನೆಗೆ



ನಿಮ್ಮ ಸ್ವಪ್ನಗಳನ್ನು ಕೆತ್ತಿ

ಬೊಬ್ಬೆ ಎದ್ದಿರುವುದು

ನನ್ನ ಕೈಗಳಲ್ಲ...ಮನಸ್ಸಿನಲ್ಲಿ



ಯಾವುದೇ ಕನಸು

ಗಳಿಲ್ಲದ

ಮುಗ್ದ ಹೃದಯದಲ್ಲಿ...

Comments

Unknown said…
ನಿಮ್ಮ ಶಿಲ್ಪಶಾಲೆಗೆ ಬಂದವರು ಕಲ್ಲಿನ ರೂಪದ ಬದಲು ಹೂವಿನ ರೂಪದಲ್ಲಿ ನೋಡಿದ್ದರೇ,ಅವರೂ ಸಹ ಹೂಮನದವರೆಂದು ನೀವು ಅಂದುಕೊಳ್ಳಬಹುದಿತ್ತು.
ಇಷ್ಟವಾಯಿತು ಭಾವ ಬರಹ...

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ