ಅಪ್ರಕಟಿತ

ಆಕೆ,

ಹದಿನೇಳರ ಬೊಗಸೆ ಕಂಗಳ ಚೆಲುವೆ

ಮೈಮನದಿ ಪುಟಿದೆದ್ದ ಯೌವನ

ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ

ಕೇಳಿದನಿನಿತು ಅವಳ ಪ್ರೇಮಭಿಕ್ಷೆ


ನಾಚಿ ಕೆಂಪಾದ ಕೆನ್ನೆ, ಹೃದಯದಲಿ

ತುಡಿತ ಮಿಡಿತದೊಳು ಅವನೆಂದ

"ಎಲೆ ಚೆಲುವಿ, ನೀನೇ ನನ್ನ ಮನದನ್ನೆ

ನೀನು ಒಂದು ನಾನು ಬರೀ ಸೊನ್ನೆ!"


ಪ್ರೇಮಪಾಶದೊಳು ಜಾರಿ ಬಿದ್ದಳಾಕೆ

ಬಂಧಿಯಾದಳು ಅವನ ಬಿಸಿ ಅಪ್ಪುಗೆಯಲಿ

ತುಟಿಯಂಚಿನ ಸಿಹಿ ಚುಂಬನದಿ

ಮೈ ಮರೆತಳು ಪ್ರೇಮ- ಪ್ರೇಮಿಗಾಗಿ


ಪ್ರೇಮಸಾಗರದೆಡೆಯಲ್ಲಿ ಕಾಮ

ಸುಳಿಗೆ ಸಿಕ್ಕ ಹೆಣ್ಣು- ಬದುಕು

ವ್ಯರ್ಥವಾಯಿತು ಮೋಹ ನಾಟಕ

-ದಲ್ಲಿ ವೇಷ ಕಳಚಿದಾಗ ಆಕೆ ಬಸುರಿ


ಹೊಸ ಜೀವ ಗರ್ಭದೊಳು ಚಿಗುರೊಡೆ

ದಿರಲು ಒಲ್ಲೆನೆಂದನು ನಲ್ಲ

ಬಸುರಿಯನು ವರಿಸುವುದೇ?

ಛೀ... ಇದು ನನ್ನದಲ್ಲ!


ಕೆಟ್ಟು ಹೋಯಿತು ಮಾನ-ಮೌನ

ತಳೆಯಿತು ಮನ, ತುಂಬಿ ದುಃಖ ದುಮ್ಮಾನ

ಬಂಧಿಯಾದಳಾಕೆ ಮನೆ, ಮನಗಳಂತಿರಲು

ನವಮಾಸ ತುಂಬದೆ ಕಾಣಿಸಿದ ಹೆರಿಗೆ ಬೇನೆ


ನೋವು ಸಹಿಸಿದಳಾ ಮಾತೆ ಕಂದನ

ಮುಖಕಂಡು ನೋವ ಮರೆಯುವೆನೆಂದು

ಆದರೆ ಕಂಡಿಲ್ಲ ಆಕೆ ಮಗುವಿನ ಹೊಸರೂಪ

ಆಗಲೇ ನಡೆದಿತ್ತು ಆಕೆಯ ಗರ್ಭಪಾತ!!!


ಇತ್ತ ಕನಸುಗಳ ಗಾಳಿ ಗೋಪುರದಿ

ದುಃಖ ಮಡುಗಟ್ಟಿದ ಹೃದಯ, ಕೃಶ ದೇಹ

ತುಡಿವುದು ನಿಶ್ಕಲ್ಮಷ ಸ್ನೇಹ -ಕರುಣೆಗಾಗಿ

ಅವಳ ಆಸೆ ಆಕಾಂಶೆಗಳು ರಚಿತವಾದರೂ

ಅಸ್ಪಷ್ಟ ಅಪ್ರಕಟಿತ !!

Comments

Prasad Shetty said…
ನೀವು ಬಾವನೆಗಳನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವ ಪರಿ ತುಂಬಾ ಚೆನ್ನಾಗಿದೆ. ನಿಮ್ಮ ಕವಿತೆಗಳಲ್ಲಿ ಯಾವುದೋ ಅವ್ಯಕ್ತ ದುಃಖ ಎದ್ದು ಕಾಣುತ್ತದೆ, ಅದನ್ನು ಮನಮುಟ್ಟುವಂತೆ ವ್ಯಕ್ತಪಡಿಸಿದ ಬಗೆ ನಿಜವಾಗಿಯೂ ಶ್ಲಾಘನೀಯ..

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ