Posts

ದೇವರಿದ್ದಾನೆ!

Image
ಅಮ್ಮಾ ಈ ಎಳನೀರಲ್ಲಿ ನೀರು ಹೇಗೆ ಬಂತು ಎಂದು ಕೇಳುವ ಕೂಸು ಅಗರಬತ್ತಿಯ ಪರಿಮಳದಲ್ಲಿ ಉತ್ತರ ಕಂಡು ಕೊಂಡಿತ್ತು... ದೇವರಿದ್ದಾನೆ! ನೀ ನೋಡಿದ್ದೀಯಾ? ಕೇಳಿದ್ದಳು ಗೆಳತಿ.. ಹೂಂ ನೋಡಿದ್ದೇನೆ ಕಣೇ.. ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ ಜೇಬು ಖಾಲಿಯಾಗಿರುವಾಗ ಪ್ರತಿಫಲ ಬಯಸದೆ ಯಾರೋ ಕೊಟ್ಟ ದುಡ್ಡಲ್ಲಿ ನಾನವನ ಕಂಡಿದ್ದೆ ಮೊನ್ನೆ ಮತ್ತೆ ಸಿಕ್ಕಿದ ಕಣೇ ಕಣ್ಣೀರು ಸುರಿಸಿ ನಡೆಯುವಾಗ ನೋಡಿ ನಕ್ಕಿದ್ದ ದುರುಗುಟ್ಟಿ ನೋಡಿದೆ ನಾನಿದ್ದೀನಿ ಎಂದು ಹೇಳಿದ ಎಲ್ಲಿ ಎಂದು ಕೇಳಿಯೇ ಬಿಟ್ಟೆ ನಿನ್ನಲ್ಲಿ ಎಂದು ಬಿಡುವುದೆ?

ಗಾಂಧಿ ಬಾ...

Image
ಮೂರು ದಾರಿ ಸೇರುವ ಜಂಕ್ಷನ್ನಲ್ಲಿ ಕಲ್ಲಿನಲಿ ಕೆತ್ತಿದ ಪ್ರತಿಮೆಯಾಗಿ ಪ್ರತಿಭಟನೆಗೂ, ಸತ್ಯಾಗ್ರಹಕ್ಕೂ ಮೌನ ಸಾಕ್ಷಿಯಾಗಿ ನಿಂತಿರುವ ಭೈರಾಗಿ ಸರ್ಕಾರಿ ಕಚೇರಿಗಳ ಗೋಡೆಗೆ ತೂಗು ಹಾಕಿದ ಫೋಟೋಗಳಲಿ ಭ್ರಷ್ಟಾಚಾರಿಗಳ ನೋಡಿ ಮರುಗುತ್ತಾ ಲಂಚದ ನೋಟಿನ ಕಂತೆಗಳಲಿ ನಗುತಿಹನು ಗಾಂಧಿ ನೀ ಮಹಾತ್ಮ...ಅಹುದಹುದು ರಾಷ್ಟ್ರಪಿತ ಎಂದು ಕರೆದಿದ್ದರೂ ಸಂವಿಧಾನದ 18 (1) ಪರಿಚ್ಛೇದ ಪ್ರಕಾರ ಇದು ಅಸಂವಿಧಾನಿಕವಂತೆ! ನಿನ್ನ ಆತ್ಮಕತೆಯನ್ನೋದಿ ಮನದಲ್ಲೇ ಧ್ಯಾನಿಸಿದೆ ಗಾಂಧಿ ಸಿನಿಮಾದಲ್ಲಿನ ಪಾತ್ರಧಾರಿಯೇ ಕಣ್ಮುಂದೆ ಬಂದಾಗ ಕಣ್ಣು ತೆರೆದೆ... ನೀನು ಕಣ್ಮುಚ್ಚಿ ನಕ್ಕಿರಬಹುದೆ? ನಿನ್ನ ಮೇಲೆ ಆರೋಪಗಳನ್ನು ಹೊರಿಸಿ ಪತ್ರಿಕೆ, ಫೇಸುಬುಕ್, ಟ್ವೀಟರ್ ಗಳಲ್ಲಿ ಗಾಂಧಿ ಹೀಗಿದ್ದರು ಎಂದು ಜರೆಯುವಾಗ ಮನದಲ್ಲಿ ಕಸಿವಿಸಿ ನೀನದಕೆ ಉತ್ತರ ನೀಡುವಂತಿದ್ದರೆ... ಅಹಿಂಸೆಯೇ ಧರ್ಮ ಸತ್ಯವೇ ಬಲವೆಂದು ಬಾಳಿ ಬದುಕಿದ ನೀನು ಸ್ವಾತಂತ್ರ್ಯ ಸಿಕ್ಕಿದಾಗಲೂ ದೇಶ ವಿಭಜನೆಯ ನೋವಲ್ಲಿ ಸ್ವಾತಂತ್ರ್ಯದ ಸವಿಯುಣ್ಣಲಿಲ್ಲ ಕೊನೆಗೆ ಗೋಡ್ಸೆಯ ಗುಂಡೊಂದು ನಿನ್ನೆದೆಯ ಸೀಳಿದಾಗ ಹೇ ರಾಮ್ ಎಂಬ ಕೊನೆಯ ಮಾತಲ್ಲಿ ಎಲ್ಲವೂ ಹೇಳಿಬಿಟ್ಟೆ! ಹೇ...ಸಬರ್ಮತಿಯ ಸಂತ ಮತ್ತೊಮ್ಮೆ ಹುಟ್ಟಿ ಬರುವಿಯಾದರೆ ಬೇಗ ಬಾ... ಆದರೆ ಒಂದು ಕಂಡೀಷನ್ ಈ ನೆಲದಲ್ಲಿ ಕಾಲಿಡದೆ ಮನದಲ್ಲಿ ಸ್ಫೂರ್ತಿ ಸೆಲೆಯಾಗಿ ಬಾ...

ಜಾಹೀರಾತು

Image
ಸುಗಂಧ ಭರಿತ ಸೋಪುಗಳನ್ನು ಮೆಲ್ಲ ಮೆಲ್ಲನೆ ಮೈ ಮೇಲೆ ಜಾರಿಸಿ ನೊರೆಗಳನ್ನೊಮ್ಮೆ ಊದಿ ಗುಳ್ಳೆಗಳನ್ನು ಕಂಡು ನಕ್ಕು... ಅರ್ಧ ದೇಹವನ್ನು ತುಂಡು ಬಟ್ಟೆಯಲ್ಲಡಗಿಸಿ ತನಗಾಗಿ ಕಾದು ನಿಂತ ಪ್ರಿಯಕರನ ತೆಕ್ಕೆಗೆ ಬಿದ್ದು ಅವನು ಅವಳ ದೇಹ ಗಂಧದಲ್ಲಿ ತಲ್ಲೀನವಾಗುವ 2 ನಿಮಿಷದ ಜಾಹೀರಾತು ಹಸಿದ ಹೊಟ್ಟೆಯಲ್ಲಿ ನಗುವುದನ್ನೂ ಸೌಂದರ್ಯವೆಂದರೆ ದೇಹ ಮಾತ್ರವಲ್ಲ ಎಂಬುದನ್ನು ಬದುಕು ಆಕೆಗೆ ಕಲಿಸಿದಾಗ ಅವಳು ಕ್ಯಾಮೆರಾ ಮುಂದೆ ಮೀಯಲಿಲ್ಲ... ಅವಳ ದೇಹಗಂಧವನ್ನರಸಿ ಯಾರೂ ಬರಲಿಲ್ಲ!

ನದಿ

Image
ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ ಸಿಕ್ಕು ಪುಟ್ಟ ಪಾದಗಳಿಗೆ ಮುತ್ತಿಕ್ಕಿ ಕಿಲಕಿಲ ನಗುವಿಗೆ ಸಾಥಿಯಾಗಿದ್ದು, ಇಂದು ಊದಿಕೊಂಡ ಅವಳ ಶವವನ್ನು ಹೊತ್ತು ದಡದಲ್ಲಿ, ಮಳೆಯಂತೆ ಕಣ್ಣೀರು ಸುರಿಸುವ ಅಮ್ಮನನ್ನೂ ಲೆಕ್ಕಿಸದೆ ಹರಿಯುತ್ತಿದೆ ನದಿ... ಇವಳು ನಾವಂದು ಕೊಂಡಂತೆ ಇಲ್ಲ ಎಂದು ಜನರಾಡಿಕೊಳ್ತಾರೆ ಆಷಾಢದಲ್ಲಿ ರಭಸವಾಗಿ ಹರಿವ ಕೋಪಿಷ್ಠೆ ಮಕರ ಮಾಸದ ಮಂಜು ಮುಸುಕಿದ ಮುಂಜಾವಿನಲಿ ಹುಸಿಕೋಪ ತರಿಸುವ ಪ್ರೇಯಸಿ ಒಡಲೊಳಗೆ ಪ್ರೇಮದ ತಾಪ ಹೊರಗೆ ತಂಪಾದ ಮೈ ಮೆಲುನಗೆಯ ಮೋನಾಲಿಸಾಳಂತೆ ಚಿತ್ರ ವಿಚಿತ್ರ ಛಾಯೆ... ಚಂದಿರನ ಬೆಳಕಲ್ಲಿ ಹಾಲುಕ್ಕಿದಂತೆ ಹರಿವ ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ ಯಕ್ಷಿಯಂತೆ ಭಯಾನಕ ರೂಪ ಮನದೊಳಗಿರುವ ದುಃಖಗಳನ್ನು ಬದಿಗೊತ್ತಿ ಏರಿಳಿದು ಹರಿವಳು ಮೈ ಮುರಿದು ಕೈ ಚಾಚಿ ನಡುವ ಬಳುಕಿಸಿ ಲಜ್ಜೆ ಹೆಜ್ಜೆಯನ್ನಿಟ್ಟು ಸನಿಹದಲ್ಲಿದ್ದರೂ ಅದು ನನ್ನದಲ್ಲ ಎಂಬಂತೆ ಅಳುವ ದಂಡೆಯ ಮೈಗೆ ಗುದ್ದಿ, ಮುದ್ದಿಸಿ ಯಾರಿಗೂ ಅರಿವಾಗದಂತೆ ನೋವ ನುಂಗಿ ಯಾರಲ್ಲೂ ಕೋಪಿಸದೆ ಕಾಮುಕ ಹೃದಯೀ ಸಮುದ್ರದ ಸೆಳೆತಕ್ಕೆ ಸೋತು ತನ್ನನ್ನೇ ಅರ್ಪಿಸಲು ಹೊರಟು ನಿಂತಾಗ ಅವಳಲ್ಲಿ ಪ್ರೇಮವಿತ್ತು, ಪ್ರೇಮಿಯ ಸೇರುವ ತವಕ ಸವತಿಯಾಗುವೆನೆಂಬ ನೋವೂ...

ನಡೆ ಪಾಡು

Image
ಹಸಿವಿನ ಸಂಪತ್ತು ಪ್ರೇಮದ ನೋವೂ ಅಸ್ತಮವಾದಾಗ ಕತ್ತಲೆಯಲ್ಲಿ ಬೆಂದ ನಾನು ಬಡತನದ ಮೂಟೆ ಹೊತ್ತು ಹೊರಟಿದ್ದೇನೆ ಏನೂ ಕೊಡಲಿಚ್ಛಿಸದವರೂ ಏನೂ ಬಯಸದವರೂ ತಮ್ಮ ಲೆಕ್ಕಪತ್ರದಲ್ಲಿ ನನ್ನ ಹಸಿವಿನ ಬಗ್ಗೆ ಬರೆದಿಟ್ಟಿಲ್ಲ ಕೂಡಿಸುವುದು, ಕಳೆಯುವುದು ಗುಣಾಕಾರ, ಭಾಗಾಕಾರದಲ್ಲಿ ವಿಕೃತವಾಗಿರುವ ಶರೀರಗಳು ನನ್ನನ್ನು ಹಾದು ಹೋದುವು ರಕ್ತಗಳಿಲ್ಲದ ಆ ದೇಹ ಸೊರಗಿತ್ತು ಆಶ್ಚರ್ಯ! ನಾನೂ ಅವರ ದಾರಿಯಲ್ಲೇ ಸಾಗುತ್ತಿದ್ದೇನೆ ನನಗೇ ಗೊತ್ತಿಲ್ಲದ ನನ್ನನ್ನು ಗೊತ್ತಿಲ್ಲದ ದಾರಿಯಲ್ಲಿ ಯಾರು ಯಾರೊಬ್ಬರಿಗೂ ಗೊತ್ತಿಲ್ಲವೆಂಬಂತೆ ಒಬ್ಬಂಟಿಯಾಗುತ್ತಾರೆ ನಾನು ಯಾರೆಂದು ಕೇಳಲು ಇನ್ಯಾರೂ ಇಲ್ಲದಿದ್ದರೂ ಎಲ್ಲರೂ ನಾನು ಯಾರೆಂದು ಗುರುತು ಹಿಡಿದಿದ್ದರು ಅಟ್ಟಹಾಸಗೈದು ಹಾದು ಹೋದ ಗಬ್ಬು ನಾತದ ಶುಷ್ಕ ಗಾಳಿ ನನ್ನನ್ನು ಗಾಯಗೊಳಿಸಿದರೂ ಸುರಿದ ರಕ್ತಕ್ಕೆ ಗಂಧವಿರಲಿಲ್ಲ ಸುಸ್ತಾದಾಗ ಮಲಗಲು ಜಾಗ ಹುಡುಕಿದರೂ ಹಲವಾರು ಬೆಳಕುಗಳ ನಡುವೆ ಕಪ್ಪು ಬೆಳಕಿಗೆ ಜಾಗವಿಲ್ಲದೇ ಹೋಯ್ತು ನೆರಳಿಗಾಗಿ ಬಯಸಿ ಓಡುವ ಮರಗಳ ಓಡುತ್ತಿರುವ ನೆರಳನ್ನು ಹಿಡಿಯಲಾಗದೆ ಸುಸ್ತು ಬಿದ್ದೆ ಈಗ ನಾನು ಭೂಮಿಗೂ ಬೇಡವಾದೆ ಅಸ್ತಿತ್ವವಿಲ್ಲದೆ ಅಲೆಯುತ್ತಾ ಭಾರವಾದ ದೇಹವನ್ನು ಹೊತ್ತು ಲಕ್ಷ್ಯಗಳಿಲ್ಲದೆ ನಿಂತೆ!.

ಪ್ರಣಯ ಕಾಲ

Image
ಕನ್ನಡಿಯ ಮುಂದೆ ನಿಂತು ಸಿಂಗರಿಸುವಾಗ ಅವನ ನೆನಪು ಕಾಡುತ್ತೆ ನನ್ನ ಬೆರಳುಗಳನ್ನು ಮೆಲ್ಲನೆ ಹಿಚುಕಿ ಕಾಲುಗಳ ಸೌಂದರ್ಯ ವರ್ಣಿಸುತ್ತಾ ಪಿಸುಗುಡುವಂತೆ ಕಿವಿ ಪಕ್ಕ ಬಂದು ಕೆನ್ನೆಗೆ ಮುತ್ತಿಟ್ಟ ಆ ಕ್ಷಣಗಳು... ಹುಡುಗ ಹುಡುಗಿಯೆಂಬ ಜೀವಶಾಸ್ತ್ರದ ಸಿದ್ಧಾಂತವೂ ಈಸ್ಟ್ರೋಜನ್ನೂ ಪ್ರೊಜೆಸ್ಟ್ರಾನ್‌ಗಳು ನನ್ನಲ್ಲಿ ಜಾಗೃತವಾದಾಗ ಆಂಡ್ರಾಜನ್‌ನ ಏರಿಳಿತ ಅವನಲ್ಲಿ... +ve -ve ಧ್ರುವಗಳು ಆಕರ್ಷಿಸುತ್ತವೆ ಎಂಬ ರಸಾಯನ ಶಾಸ್ತ್ರವೂ ಮೈನೆಸ್ ಮೈನೆಸ್ ಪ್ಲಸ್ ಆಗುವ ಗಣಿತವೂ ನಮ್ಮೊಡಲಲ್ಲಿ ಸಮೀಕರಣಗೊಂಡಾಗ XX, XY ಕ್ರೋಮೋಸೋಮ್‌ಗಳ ಬಯಾಲಜಿಯೂ, ಕೆಮೆಸ್ಟ್ರಿಯೂ ಸೇರಿ ಕೂಡಿ ಕಳೆದು ಗುಣಿಸಿ, ಭಾಗಿಸಿ ಸಿಕ್ಕ ಲೆಕ್ಕಚಾರದ ಕನಸುಗಳು ಹೃದಯವೆಂಬುದು ಬರೀ ಅಂಗವೆಂದುಕೊಂಡಿದ್ದನೇ ಅವನು? ಪ್ರಾಕ್ಟಿಕಲ್ ಮನುಷ್ಯ! ಪ್ರೀತಿ ಹುಟ್ಟುವುದು ಕಣ್ಣಿಂದ ಎಂದು ಅಂದುಕೊಂಡಿದ್ದ ಶತ ದಡ್ಡಿ ನಾನು ಕಣ್ಣು ಮುಚ್ಚಿ ಕುಳಿತರೆ ಮನುಷ್ಯ-ಮನುಷ್ಯನ ನಡುವಿನ ಅಂತರವನ್ನು ನೆನೆದು ನಗು ಬರುತ್ತದೆ... ಪ್ರೀತಿ ಹುಟ್ಟುವುದು ಕಣ್ಣಿನಿಂದಲೇ? ನಾನು ಕಣ್ಣು ಮುಚ್ಚಿದ್ದೇನೆ...

ಮರಣ

Image
ಕನಸು ಗಳನ್ನು ಹೆಣೆದು ಕಾಲವನ್ನು ಹಿಂದಿಕ್ಕಿ ವರ್ತಮಾನದ ಗಾಲಿಯಲ್ಲಿ ಸುತ್ತುತ್ತಾ ಮುಂದೆ ಸಾಗುವ ಹೊತ್ತು ಕತ್ತಲೆ ಜೀವನದ ಹೊದಿಕೆಯಂತೆ ನಮ್ಮ ಅನುಮತಿಗೆ ಕಾಯದೆ ಬಂದು ಮುಂದೆ ನಿಲ್ಲುವಾಗ ಹೃದಯ ನನ್ನಲ್ಲಿ ಮುನಿಸಿಕೊಂಡಿದೆ ಎನ್ನುವ ಹಾಗೆ ಬಡಿತ ನಿಲ್ಲಿಸಿದಾಗ ಕಣ್ಣುಗಳು ಬಣ್ಣಗಳನ್ನು ಧಿಕ್ಕರಿಸಿ ಕತ್ತಲೆಯನ್ನೇ ಬಯಸಿದಾಗ ದೇಹ ಮಣ್ಣನ್ನಪ್ಪಿ ಪವಡಿಸುವಾಗ ಒಬ್ಬಂಟಿ ಪ್ರಶಾಂತ ಗಳಿಗೆ... ಯಾವುದೇ ಭಾವನೆಗಳಿಲ್ಲದೆ ಶೂನ್ಯ ಬಿಂದುವಿನಲ್ಲಿ ನಾನು ನಾನು ಮಾತ್ರವಾಗುತ್ತೇನೆ