ನಳ್ಳಿಯಲ್ಲಿ ಇವತ್ತೂ ನೀರಿಲ್ಲ...
ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ. ಅಂತೂ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಮನೆಯಲ್ಲಿ ಪಾತ್ರೆಗಳ ಸದ್ದು ಕೇಳಿಸಿ ಎಚ್ಚೆತ್ತು ಕೊಂಡೆ. ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಮನೆಯಾಗಿದ್ದರಿಂದ ಅಣ್ಣಂದಿರು ಯಾರೋ ಬೆಳಗ್ಗಿನ ರೈಲಿಗೆ ಹೋಗುತ್ತಿರಬೇಕು ಅದಕ್ಕಾಗಿಯೇ ಇಷ್ಟೊಂದು ಗೌಜಿ ಅಂದುಕೊಂಡೆ. ಆದ್ರೆ ಅದಾಗಿರಲಿಲ್ಲ. ದೊಡ್ಡಮ್ಮನಂತೂ ನನ್ನ ಅಕ್ಕ ಅಣ್ಣಂದಿರನ್ನೆಲ್ಲಾ ಎಬ್ಬಿಸಿ ಬಿಂದಿಗೆ, ಪಾತ್ರೆ ಹಿಡಿದು ಕೊಂಡು ಅವಸರವಾಗಿ ಮನೆಯಿಂದ ಹೊರ ನಡೆದರು. ಆಗಲೇ ಗೊತ್ತಾದದ್ದು. ಮನೆಯ ಮುಂದಿರುವ ಸಾರ್ವಜನಿಕ ನಳ್ಳಿಯಲ್ಲಿ ನೀರು ಬಂದಿದೆ ಎಂದು. ಆ ಬೆಳಗ್ಗಿನ ಜಾವದಲ್ಲೇ ನಳ್ಳಿ ಮುಂದೆ ಪಾತ್ರೆಗಳ ಸಾಲು ಜೊತೆಗೆ ನಿದ್ದೆಗಣ್ಣಲ್ಲೇ ತಮ್ಮ ಸರದಿ ಯಾವಾಗ ಬರುವುದೋ ಎಂದು ಕಾದು ಕುಳಿತು ಕೊಂಡಿರುವ ಮಂದಿಯನ್ನು ಕಂಡರೆ ಅಯ್ಯೋ ಪಾಪ ಎನಿಸದಿರಲಾರದು.
ಅಂತೂ ಈ ದಿನ ನೀರು ಸಿಕ್ಕಿತು ಎಂಬ ಸಮಾಧಾನದಲ್ಲಿ ಎಲ್ಲರೂ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮನೆಯತ್ತ ನಡೆದರು. ಇದೆಲ್ಲವೂ ನನಗೆ ಹೊಸತು ಎನಿಸಿದರೂ, ಇದು ಇಲ್ಲಿಯವರ ದಿನಚರಿ ಎಂದು ದ...