ಪಪ್ಪನ ಬಗ್ಗೆ ಏನು ಹೇಳುವಾಗಲೂ ನಾನು ಹಾಗೇನೇ...ನಾನ್ಸ್ಟಾಪ್...ಅವರ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಫ್ಕೋರ್ಸ್, ಅವರ ಬಗ್ಗೆ ಬರೆಯುವಾಗಲೂ ಅಷ್ಟೇ... ಕೀಲಿಮಣೆಯಲ್ಲಿ ಬೆರಳುಗಳು ಸರಾಗವಾಗಿ ಓಡುತ್ತವೆ. ಮೊನ್ನೆ ಗೆಳೆಯರೊಬ್ಬರು ಅವರ ಅಪ್ಪನ ಬಗ್ಗೆ ಬರೆದ ಲೇಖನದ ಲಿಂಕ್ ಕಳುಹಿಸಿ ಆ ಲೇಖನವನ್ನು ಅಮ್ಮನಿಗೆ ಓದೋಕೆ ಹೇಳಿದ್ದೆ. ಆ ಬ್ಲಾಗ್ ಬರಹದ ಬಗ್ಗೆ ಮಾತನಾಡುವಾಗ ನಿನ್ನ ಅಪ್ಪನ ಬಗ್ಗೆನೂ ಬರೀ ಅಂದಿದ್ರು ಅಮ್ಮ. ಈಗಾಗಲೇ ಅಪ್ಪನ ಬಗ್ಗೆ ಎರಡ್ಮೂರು ಬ್ಲಾಗ್ ಬರಹ ಬರೆದಾಗಿದೆ. ಇನ್ನೆಂಥದ್ದು ಬರೆಯುವುದು? ಎಂದು ಕೇಳಿದಾಗ ಅಮ್ಮ ಹೇಳಿದ್ದು..ಅಪ್ಪನ ನಿದ್ದೆ ! ಹೂಂ...ಅಪ್ಪನ ನಿದ್ದೆ ಬಗ್ಗೆ ಬರೆಯೋದೆ ತುಂಬಾ ಇಂಟರೆಸ್ಟಿಂಗ್. ಇತ್ತೀಚೆಗೆ ಅಂದ್ರೆ ನಿವೃತ್ತಿಯಾದ ನಂತರ ಮನೆಯಲ್ಲೇ ಕೂರುವ ಕಾರಣ ಅಪ್ಪ ಸಿಕ್ಕಾಪಟ್ಟೆ ನಿದ್ದೆ ಮಾಡ್ತಾರೆ. ಯಾವತ್ತು ನೋಡಿದರೂ ಅದೇ ಕೈರಳಿ, ಮನೋರಮ, ಏಷ್ಯಾನೆಟ್ ನ್ಯೂಸ್ ನೋಡ್ತಾ ಇರ್ತಾರೆ ಎಂದು ಅಮ್ಮ ಗೊಣಗುತ್ತಿದ್ದರೂ, ನ್ಯೂಸ್ ನೋಡ್ತಾ ನೋಡ್ತಾ ಅಪ್ಪ ನಿದ್ದೆ ಮಾಡಿಬಿಡುತ್ತಾರೆ. ಅದೇ ವೇಳೆ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ನ ಸೌಂಡ್ ಕೇಳಿದ್ರೆ, ಥಟ್ಟನೆ ಎಚ್ಚರ ಆಗುತ್ತೆ. ಮಾತ್ರವಲ್ಲ ಹಿತ್ತಲಿನ ಯಾವ ಮೂಲೆಯಲ್ಲಿ ತೆಂಗಿನಕಾಯಿ ಬಿದ್ರೂನೂ ಅಪ್ಪನಿಗೇ ಮೊದಲು ಗೊತ್ತಾಗೋದು. ಹೀಗೆ ವಾಹಿನಿಗಳು 5 ನಿಮಿಷಕ್ಕೊಮ್ಮೆ ಬ್ರೇಕಿಂಗ್ ನ್ಯೂಸ್ ಸದ್ದು ಮಾಡುತ್ತಿದ್ದರೆ, ಅಪ್ಪ ಅರೆ ನಿದ್ದೆಯಲ್ಲೇ ಸುದ...