ಪ್ರಣಯ ಕಾಲ
ಕನ್ನಡಿಯ ಮುಂದೆ
ನಿಂತು ಸಿಂಗರಿಸುವಾಗ
ಅವನ
ನೆನಪು ಕಾಡುತ್ತೆ
ನನ್ನ ಬೆರಳುಗಳನ್ನು
ಮೆಲ್ಲನೆ ಹಿಚುಕಿ
ಕಾಲುಗಳ ಸೌಂದರ್ಯ ವರ್ಣಿಸುತ್ತಾ
ಪಿಸುಗುಡುವಂತೆ ಕಿವಿ ಪಕ್ಕ ಬಂದು
ಕೆನ್ನೆಗೆ ಮುತ್ತಿಟ್ಟ
ಆ ಕ್ಷಣಗಳು...
ಹುಡುಗ ಹುಡುಗಿಯೆಂಬ
ಜೀವಶಾಸ್ತ್ರದ ಸಿದ್ಧಾಂತವೂ
ಈಸ್ಟ್ರೋಜನ್ನೂ ಪ್ರೊಜೆಸ್ಟ್ರಾನ್‌ಗಳು
ನನ್ನಲ್ಲಿ ಜಾಗೃತವಾದಾಗ
ಆಂಡ್ರಾಜನ್‌ನ ಏರಿಳಿತ
ಅವನಲ್ಲಿ...
+ve -ve
ಧ್ರುವಗಳು ಆಕರ್ಷಿಸುತ್ತವೆ
ಎಂಬ ರಸಾಯನ ಶಾಸ್ತ್ರವೂ
ಮೈನೆಸ್ ಮೈನೆಸ್ ಪ್ಲಸ್ ಆಗುವ
ಗಣಿತವೂ ನಮ್ಮೊಡಲಲ್ಲಿ
ಸಮೀಕರಣಗೊಂಡಾಗ
XX, XY
ಕ್ರೋಮೋಸೋಮ್‌ಗಳ
ಬಯಾಲಜಿಯೂ, ಕೆಮೆಸ್ಟ್ರಿಯೂ
ಸೇರಿ ಕೂಡಿ ಕಳೆದು
ಗುಣಿಸಿ, ಭಾಗಿಸಿ ಸಿಕ್ಕ
ಲೆಕ್ಕಚಾರದ ಕನಸುಗಳು
ಹೃದಯವೆಂಬುದು ಬರೀ
ಅಂಗವೆಂದುಕೊಂಡಿದ್ದನೇ ಅವನು?
ಪ್ರಾಕ್ಟಿಕಲ್ ಮನುಷ್ಯ!
ಪ್ರೀತಿ ಹುಟ್ಟುವುದು ಕಣ್ಣಿಂದ
ಎಂದು ಅಂದುಕೊಂಡಿದ್ದ
ಶತ ದಡ್ಡಿ ನಾನು
ಕಣ್ಣು ಮುಚ್ಚಿ ಕುಳಿತರೆ
ಮನುಷ್ಯ-ಮನುಷ್ಯನ
ನಡುವಿನ ಅಂತರವನ್ನು ನೆನೆದು
ನಗು ಬರುತ್ತದೆ...
ಪ್ರೀತಿ ಹುಟ್ಟುವುದು ಕಣ್ಣಿನಿಂದಲೇ?
ನಾನು ಕಣ್ಣು ಮುಚ್ಚಿದ್ದೇನೆ...
Comments
:) thanks
ವಂದನೆಗಳು
ಸುಗುಣ ಮಹೇಶ್