ಈ ಜಗತ್ತಿನಲ್ಲಿ ಎಷ್ಟು ರೀತಿಯ ಮಹಿಳೆಯರಿದ್ದಾರೆ? ಎಂಬ ಪ್ರಶ್ನೆಯನ್ನು ನಿಮ್ಮಲ್ಲಿ ನೀವೇ ಕೇಳಿ ನೋಡಿ. ಮೊದಲಿಗೆ ಸುಂದರಿಯಾದ ಮಹಿಳೆಯ ಚಿತ್ರಣ ನಿಮ್ಮ ಮುಂದೆ ಬರುತ್ತದೆ ನಂತರ ನೊಂದ ಮಹಿಳೆ, ಯಶಸ್ವೀ ಮಹಿಳೆ, ದೌರ್ಜನ್ಯಕ್ಕೊಳಗಾದ ಮಹಿಳೆ, ಖಿನ್ನಳಾದ ಮಹಿಳೆ, ಸುಖಿ ಮಹಿಳೆ, ಅಹಂಕಾರಿ ಮಹಿಳೆ, ಮಾನ ಮಾರಿದ ಮಹಿಳೆ, ಮಕ್ಕಳನ್ನೇ ಕೊಂದ ಪಾಪಿ ಮಹಿಳೆ, ಕೈಕೊಟ್ಟ ಮಹಿಳೆ, ಕೈ ಹಿಡಿದ ಮಹಿಳೆ...ಹೀಗೆ ಮಹಿಳೆಯ ಹಲವಾರು 'ರೂಪ'ಗಳು ನಿಮ್ಮ ಕಣ್ಣ ಮುಂದೆ ಸುಳಿಯುತ್ತವೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಸಂದರ್ಭದಲ್ಲಿ ಚರ್ಚಾ ವಿಷಯಗಳಿಗೊಳಗಾಗುವ ಮಹಿಳೆಯರೆಂದರೆ ಒಂದು ಯಶಸ್ವೀ ಮಹಿಳೆ ಇನ್ನೊಂದು ದೌರ್ಜನ್ಯಕ್ಕೊಳಗಾದ ಮಹಿಳೆ. ಇಂತಹಾ ದಿನಾಚರಣೆಗಳಲ್ಲಿ ಯಶಸ್ವೀ ಮಹಿಳೆಯ ಸಾಧನೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯ 'ರೋದನೆ' ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ನಾವು ಓರ್ವ ಸಾಧಕಿಯ ಸಾಧನೆಗಳನ್ನು ಮೆಚ್ಚಿ ಕರತಾಡನ ಮಾಡಿದರೆ ಇನ್ನೊಂದೆಡೆ ದೌರ್ಜನ್ಯಕ್ಕೊಳಗಾದ ಮಹಿಳೆಯ ಪರ ದನಿಗೂಡಿಸುತ್ತೇವೆ. ಒಬ್ಬಳು ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದರೆ ಇನ್ನೊಬ್ಬಳು ದೌರ್ಜನ್ಯದ ನೋವು ಅನುಭವಿಸುತ್ತಿರುತ್ತಾಳೆ. ಹಾಗೆ ನೋಡಿದರೆ ಯಶಸ್ವೀ ಮಹಿಳೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಎರಡು ಗುಂಪುಗಳಿಗೆ ಸೇರಿಸಿ ಪ್ರತ್ಯೇಕಿಸಬಹುದು. ಆದರೆ ಕೆಲವೊಂದು ಮಹಿಳೆಯರ ಮೇಲೆ ಆಗುವ ದೌ...