Posts

Showing posts from June, 2013

ಮಾಯಾನಗರಿ

Image
ಸುತ್ತಲೂ ಪಸರಿದ ಈ ಗಾಳಿಯಲ್ಲಿ ಯಾವುದೋ ಗಂಧವಿದೆ ಮೈಗೆ ಪೂಸಿದ ಸುಗಂಧ ದ್ರವ್ಯ, ಬೆವರ ಹನಿಗಳ ನೋವಿನ ವಾಸನೆ ಯಾರೋ ಬಿಟ್ಟು ಹೋದ ಚೀಲ, ಪೆಟ್ಟಿಗೆ, ಚಪ್ಪಲಿ, ವಾಹನಗಳು ಇಲ್ಲಿ ಹರಾಜಿಗಿವೆ ಎಂಬ ಬೋರ್ಡುಗಳು ಮಾಯಾನಗರಿಯ ದುಃಖಗಳನ್ನು ಗೀಚಿಟ್ಟ ಕಿರುಪತ್ರದಂತಿವೆ ಭಗ್ನವಾದ ಕನಸುಗಳ ಚೂರು ಗಳು ಒಂದಕ್ಕೊಂದು ಗುದ್ದಿ ಸದ್ದು ಮಾಡುತ್ತಿವೆ ಮುಷ್ಟಿ ಮಣ್ಣಲ್ಲೂ ಅವಿತಿದೆ ಯಾರೋ ಸವೆದ ಹಾದಿಯ ಹೆಜ್ಜೆ ಗುರುತು ನಷ್ಟಗಳ ಲೆಕ್ಕ ಭರಿಸಲಾಗದೆ ದುರಂತಗಳ ನಡುವೆ ಸಿಕ್ಕ ಮಧ್ಯಂತರ ಎಲ್ಲಿಂದಲೋ ಆರಂಭವಾಗುವುದು ಇನ್ನೇನೋ ನಡೆಯಲಿದೆ ಎಂದರಿಯುವ ಹಪಾಹಪಿಯಲ್ಲಿ ಸಮಯ ದಾಟಿದೆ ಈ ಜಂಜಾಟದ ನಡುವೆ ಸಿಕ್ಕ ಒಂದಷ್ಟು ನಿಮಿಷ ಮತ್ತೆ ಬದುಕು ಹಳಿಗೆ ಬಂದಂತೆ ಆಸೆ ಹುಟ್ಟಿಸಿ ಇನ್ನೊಂದು ಮಧ್ಯಂತರಕ್ಕೆ ಕಾಲಿಡುವಾಗ ಕಾಡುವುದು ಅನಿಶ್ಚಿತತೆ! ಬೀದಿ ನಾಯಿಗಳ ಓಡಾಟದ ನಡುವೆ ಹರೆಯದ ಹುಡುಗಿಯೊಬ್ಬಳು ಹೂ ಮಾರುತ್ತಿದ್ದಾಳೆ ಅವಳ ಜೀವನ ಲೆಕ್ಕಾಚಾರದಲ್ಲಿ ಹೆಣೆಯುವ ಆ ಮೊಗ್ಗು ನಲುಗಿ ಹೋಗಿದೆಯೆ? ನಾನು ಬಯಸಿದ ಹೂವು ಕಣ್ಣಿಗೆ ತಂಪು ಬಿಸಿಯೇರಿದೆ ಮೈ ಮತ್ತೊಮ್ಮೆ ಯೋಚಿಸಿದೆ ಆ ತಂಪು ನನ್ನನ್ನು ಬಿಸಿಯಾಗಿರಿಸಿತೆ?

ಶಿಲ್ಪಿ

Image
ಸ್ವಪ್ನ ಶಿಲ್ಪಿ ನಾನು ಸುಂದರ ಶಿಲ್ಪಗಳನ್ನು ಕೆತ್ತುವುದೇ ನನ್ನ ಕಸುಬು ಕೈ ತುಂಬಾ ಕೆಲಸಗಳಿವೆ ಸಂತೃಪ್ತಿಯೇ ನನ್ನ ಆದಾಯ ನನ್ನ ಶಿಲ್ಪ ಶಾಲೆಗೆ ಬಂದಿದ್ದರು ಹಲವು ಜನ ನನ್ನ ಕೆಲಸದ ಹರುಕು ಗುಡಿಸಲಿಗೂ ನಾನೆಲ್ಲಿದ್ದೇನೋ ಅಲ್ಲಿಗೆಲ್ಲಾ ಬಂದಿದ್ದರು ಎಲ್ಲರೂ ನನ್ನನ್ನು ಬಯಸಿದರು ನನ್ನನ್ನು ಪ್ರೀತಿಸಿದರು ಅವರವರಿಗೆ ಒಪ್ಪುವಂತೆ ಸ್ವೇಚ್ಛೆಯಿಂದ ನಾನು ಸಾಕಷ್ಟು ಕನಸುಗಳನು ಮೊಗೆ ಮೊಗೆದು ಕೊಟ್ಟೆ ಕೊನೆಗೆ ಅವರು ಹೇಳಿದ್ದು... ನಿನ್ನ ಮನಸ್ಸು ಬರೀ ಕಲ್ಲು! ಅದು ನಿಜ ನನ್ನ ಮನಸ್ಸು ಕಲ್ಲೇ ಬಯಸದೇ ಬಂದ ಪ್ರೀತಿಯಲ್ಲಿ ಅದು ಮುಳುಗಿ ಹೋಗಿತ್ತು ಆ ಕಲ್ಲಿನ ಮೇಲಿರುವ ಗುಳಿಗಳೂ ಪ್ರೀತಿಯಿಂದಲೇ ತುಂಬಿದ್ದವು ಪ್ರೀತಿಯ 'ಉಳಿ'ಯಲ್ಲಿ ಕೆತ್ತುವ ಕೆಲಸ ಬಿರುಸಾಗಿ ನಡೆದಾಗ ಕಲ್ಲು ರೂಪಾಂತರಗೊಳ್ಳುತ್ತಿತ್ತು ಇನ್ನೂ ಕೆತ್ತಿದರೆ ಅದು ಒಡೆದು ಹೋಗುತ್ತಿತ್ತೇನೋ! ಅವರು ಹೇಳಿದ್ದೇ ನಿಜ ನನ್ನ ಹೃದಯ ಕಲ್ಲಾಗಿತ್ತು ಒಂದು ಚಿಕ್ಕ ಪೆಟ್ಟು ಸಾಕು ಅದಿನ್ನು ಒಡೆದು ಹೋಗಲು ಆದರೆ ಅವರಿಗೇನು ಗೊತ್ತಿತ್ತು ಕಲ್ಲಿನ ಸ್ಥಿತಿ? ಸುಂದರ ಶಿಲ್ಪಕ್ಕಾಗಿ ಅವರು ಬಯಸಿದ್ದರಲ್ಲವೇ? ಸಾಕು ನಿಲ್ಲಿಸಿ.... ಹೇಳಬೇಡಿ ಇನ್ನೊಂದು ಶಿಲ್ಪದ ರಚನೆಗೆ ನಿಮ್ಮ ಸ್ವಪ್ನಗಳನ್ನು ಕೆತ್ತಿ ಬೊಬ್ಬೆ ಎದ್ದಿರುವುದು ನನ್ನ ಕೈಗಳಲ್ಲ...ಮನಸ್ಸಿನಲ್ಲಿ ಯಾವುದೇ

ಪಪ್ಪನೂ...ನನ್ನ ನಿದ್ದೆಯೂ

Image
ಪಪ್ಪನ ಬಗ್ಗೆ ಏನು ಹೇಳುವಾಗಲೂ ನಾನು ಹಾಗೇನೇ...ನಾನ್ಸ್ಟಾಪ್...ಅವರ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಫ್ಕೋರ್ಸ್, ಅವರ ಬಗ್ಗೆ ಬರೆಯುವಾಗಲೂ ಅಷ್ಟೇ... ಕೀಲಿಮಣೆಯಲ್ಲಿ ಬೆರಳುಗಳು ಸರಾಗವಾಗಿ ಓಡುತ್ತವೆ. ಮೊನ್ನೆ ಗೆಳೆಯರೊಬ್ಬರು ಅವರ ಅಪ್ಪನ ಬಗ್ಗೆ ಬರೆದ ಲೇಖನದ ಲಿಂಕ್ ಕಳುಹಿಸಿ ಆ ಲೇಖನವನ್ನು ಅಮ್ಮನಿಗೆ ಓದೋಕೆ ಹೇಳಿದ್ದೆ. ಆ ಬ್ಲಾಗ್ ಬರಹದ ಬಗ್ಗೆ ಮಾತನಾಡುವಾಗ ನಿನ್ನ ಅಪ್ಪನ ಬಗ್ಗೆನೂ ಬರೀ ಅಂದಿದ್ರು ಅಮ್ಮ. ಈಗಾಗಲೇ ಅಪ್ಪನ ಬಗ್ಗೆ ಎರಡ್ಮೂರು ಬ್ಲಾಗ್ ಬರಹ ಬರೆದಾಗಿದೆ. ಇನ್ನೆಂಥದ್ದು ಬರೆಯುವುದು? ಎಂದು ಕೇಳಿದಾಗ ಅಮ್ಮ ಹೇಳಿದ್ದು..ಅಪ್ಪನ ನಿದ್ದೆ ! ಹೂಂ...ಅಪ್ಪನ ನಿದ್ದೆ ಬಗ್ಗೆ ಬರೆಯೋದೆ ತುಂಬಾ ಇಂಟರೆಸ್ಟಿಂಗ್. ಇತ್ತೀಚೆಗೆ ಅಂದ್ರೆ ನಿವೃತ್ತಿಯಾದ ನಂತರ ಮನೆಯಲ್ಲೇ ಕೂರುವ ಕಾರಣ ಅಪ್ಪ ಸಿಕ್ಕಾಪಟ್ಟೆ ನಿದ್ದೆ ಮಾಡ್ತಾರೆ. ಯಾವತ್ತು ನೋಡಿದರೂ ಅದೇ ಕೈರಳಿ, ಮನೋರಮ, ಏಷ್ಯಾನೆಟ್ ನ್ಯೂಸ್ ನೋಡ್ತಾ ಇರ್ತಾರೆ ಎಂದು ಅಮ್ಮ ಗೊಣಗುತ್ತಿದ್ದರೂ, ನ್ಯೂಸ್ ನೋಡ್ತಾ ನೋಡ್ತಾ ಅಪ್ಪ ನಿದ್ದೆ ಮಾಡಿಬಿಡುತ್ತಾರೆ. ಅದೇ ವೇಳೆ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ನ ಸೌಂಡ್ ಕೇಳಿದ್ರೆ, ಥಟ್ಟನೆ ಎಚ್ಚರ ಆಗುತ್ತೆ. ಮಾತ್ರವಲ್ಲ ಹಿತ್ತಲಿನ ಯಾವ ಮೂಲೆಯಲ್ಲಿ ತೆಂಗಿನಕಾಯಿ ಬಿದ್ರೂನೂ ಅಪ್ಪನಿಗೇ ಮೊದಲು ಗೊತ್ತಾಗೋದು. ಹೀಗೆ ವಾಹಿನಿಗಳು 5 ನಿಮಿಷಕ್ಕೊಮ್ಮೆ ಬ್ರೇಕಿಂಗ್ ನ್ಯೂಸ್ ಸದ್ದು ಮಾಡುತ್ತಿದ್ದರೆ, ಅಪ್ಪ ಅರೆ ನಿದ್ದೆಯಲ್ಲೇ ಸುದ