Wednesday, November 9, 2011

ಬೆಂಗ್ಳೂರಲ್ಲಿ 'ಸ್ಲಟ್ ವಾಕ್' ಆವಶ್ಯಕತೆಯಿದೆಯಾ?

ಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ.

'ಸ್ಲಟ್ ವಾಕ್ ' (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು "ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದು" ಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. 'ಸ್ಲಟ್ ' ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.
ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.

ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್ (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಎಲ್ಲಾ ಪ್ರಕರಣಗಳಿಗಿಂತ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೆಚ್ಚಾಗಿ ಮಹಿಳೆಯ ಪರಿಚಿತರೇ ಆಕೆಯ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿದ ಮಾಹಿತಿಯಲ್ಲಿದೆ. ಅಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಮಹಿಳೆಯರು ತೊಡುವ ಉಡುಗೆ ಮಾತ್ರ ಕಾರಣವೆ?. ಯಾಕೆಂದರೆ ಮೈ ತುಂಬಾ ಬಟ್ಟೆ ಹಾಕಿದ ಹುಡುಗಿಯೂ ಅತ್ಯಾಚಾರಕ್ಕೊಳಗಾಗುವುದಿಲ್ಲವೇ? ಮಗುವಿನಿಂದ ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತದೆ. ಪ್ರಾಣಿಗಳನ್ನೂ ಬಿಡದ 'ಕಾಮುಕ' ಮನುಷ್ಯರ ಬಗ್ಗೆ ನಾವು ಕೇಳಿದ್ದೇವೆ. ಹೀಗಿರುವ ಅತ್ಯಾಚಾರಕ್ಕೆ ಇಂತದ್ದೇ ಕಾರಣ ಎಂದು ಹೇಳುವುದಾದರೂ ಹೇಗೆ?

ಇರಲಿ ಬಿಡಿ, ಬೀದಿಯಲ್ಲಿ ಅರ್ಧಂಬರ್ಧ ಡ್ರೆಸ್ ತೊಟ್ಟು ಹುಡುಗಿಯೊಬ್ಬಳು ನಡೆದರೆ ಹುಡುಗರು ನೋಡದೆಯೆ ಇರುತ್ತಾರೆಯೇ? 'ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ' ಎನ್ನುತ್ತಾ ಕೆಲವೊಮ್ಮೆ ಶಿಳ್ಳೆ ಹೊಡೆಯಬಹುದು, ಕಾಮೆಂಟ್ ಮಾಡಬಹುದು ಇನ್ನು ಏನೇನೋ ಅಸಭ್ಯ ವರ್ತನೆ ತೋರಬಹುದು. ಹುಡುಗರ ಈ ವರ್ತನೆಯನ್ನು ಆ ಹೆಣ್ಮಗಳು ಪ್ರಶ್ನಿಸುತ್ತಾಳೆ ಅಂದಿಟ್ಟುಕೊಳ್ಳಿ. ಅದಕ್ಕೆ ಹುಡುಗ ನಿನ್ನನ್ನು ನೋಡುವ ಹಕ್ಕು ನನಗಿದೆ ಅಂತಾ ಉತ್ತರ ಕೊಟ್ಟರೆ ಏನಾಗುತ್ತೆ ಹೇಳಿ?. ಹುಡುಗಿ ಮೈ ತೋರಿಸಿ ನಡೆವ ಹಕ್ಕನ್ನು ಹೊಂದಿದ್ದಾಳೆ ಎಂದಾದರೆ ಹುಡುಗನಿಗೆ ಆಕೆಯನ್ನು ನೋಡುವ ಹಕ್ಕು ಇರುವುದಿಲ್ಲವೇ?
ಇನ್ನು, ಗಂಡಸರು ತನಗೂ ಸ್ವಾತಂತ್ಯವಿದೆ ಎಂದು ಹೇಳಿ ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ಓಡಾಡಲಿ. ಮಹಿಳೆಯರ ಗುಂಪಿನ ನಡುವೆ ಬಂದು ಅಂಗಿ ಬಿಚ್ಚಿ ಕುಳಿತುಕೊಳ್ಳಲಿ "ಛೀ..ಯಾವನು ಇವನು ಮಂಡೆ ಸಮ ಇಲ್ಲದವನು" ಎಂದು ಹೆಣ್ಮಕ್ಕಳು ಬೈಯ್ಯದೆ ಇರುತ್ತಾರೆಯೇ? ಆವಾಗ ಗಂಡು ತನಗೆ ಹೇಗೆ ಬೇಕಾದರು ಡ್ರೆಸ್ ಮಾಡುವ, ಬಿಚ್ಚುವ ಅಧಿಕಾರವಿದೆ ಎಂದು ಹೇಳಲಿ ನೋಡೋಣ. ಹೆಣ್ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ? ಒಟ್ಟಿನಲ್ಲಿ ಮಹಿಳೆಯರು ತಮಗಿಚ್ಛೆ ಬಂದಂತೆ ವರ್ತಿಸಲು ಹಕ್ಕುಳ್ಳವರು ಎಂದಾದರೆ ಅದೇ ಹಕ್ಕು ಗಂಡಸಿಗೂ ಅನ್ವಯಿಸುತ್ತದೆ ಅಲ್ಲವೇ?

ಇಂತಿರ್ಪ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಬೇಕಾದರೆ ಮಹಿಳೆಯರು ಅರ್ಧಬಂರ್ಧ ಡ್ರೆಸ್ ಹಾಕಿಕೊಂಡು ಸ್ತ್ರೀವಾದದ ಬಗ್ಗೆ ಬೊಬ್ಬೆ ಹಾಕುವುದು ಬೇಕಾ? ಅದೂ ಬೆಂಗಳೂರಲ್ಲಿ? ಆದಾಗ್ಯೂ, ಈ ಸ್ಲಟ್್ವಾಕ್್ನಲ್ಲಿ ಪಾಲ್ಗೊಳ್ಳುವ ಮಹಿಳೆಯರು ಸ್ವೇಚಾಚಾರ ಬಯಸುವ ಮಂದಿ ಅಲ್ಲವೇ? ಶ್ರೀಮಂತ ಕುಟಂಬದ ಇಲ್ಲವೇ ಫ್ಯಾಷನ್ ಲೋಕವನ್ನೇ ಮೆಚ್ಚಿಕೊಂಡಿರುವ ಹೈಫೈ ಎನ್ನುವಂತ ಮಂದಿ ಇಲ್ಲಿ ಹೆಜ್ಜೆ ಹಾಕಬಹುದು. ಸ್ತ್ರೀವಾದವನ್ನು ಪ್ರತಿಪಾದಿಸುವ ಇವರ ಈ ಹೆಜ್ಜೆ ಭಾರತದಲ್ಲಿರುವ ಸಾಮಾನ್ಯ ಹೆಣ್ಣು ಮಗಳ ಸಂಕಷ್ಟವನ್ನು ದೂರ ಮಾಡಬಲ್ಲುದೆ?

ನಮ್ಮ ದೇಶದಲ್ಲಿ ಅತ್ಯಾಚಾರವೊಂದನ್ನು ಬಿಟ್ಟರೆ ಇನ್ನಿತರ ಶೋಷಣೆ, ದೌರ್ಜನ್ಯಗಳು ಕಡಿಮೆ ಅಂತಾ ಹೇಳುವಂತಿಲ್ಲ. ಯಾಕೆಂದರೆ ಮನೆಯಿಂದ ಹಿಡಿದು ಆಫೀಸಿನವರೆಗೂ ಶಾರೀರಿಕ, ಮಾನಸಿಕ ದೌರ್ಜನ್ಯವನ್ನು ಮಹಿಳೆಯೊಬ್ಬಳು ಎದುರಿಸಲೇಬೇಕಾಗುತ್ತದೆ. ವಿಪರ್ಯಾಸ ಎಂದರೆ ಇದರಲ್ಲಿ ಬಹುತೇಕ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ. ಮನಸ್ಸಲ್ಲೇ ನೊಂದುಕೊಂಡು ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡಿರುವ ಹೆಣ್ಮಗಳು ಒಂದೆಡೆಯಾದರೆ ಇದರ ವಿರುದ್ಧ ದನಿಯೆತ್ತುವ ಹೆಣ್ಮಕ್ಕಳು ಕಡಿಮೆಯೇ ಎಂದು ಹೇಳಬಹುದು. ಕೆಲವೊಮ್ಮೆ ಹೆಣ್ಮಗಳೊಬ್ಬಳು ಈ ಬಗ್ಗೆ ದನಿಯೆತ್ತಿದ್ದಾಳೆ ಅಂತಾನೆ ಇಟ್ಕೊಳ್ಳಿ, ಅವಳಿಗೆ ಯಾರೂ ಬೆಂಬಲ ನೀಡಲು ಮುಂದಾಗದಿದ್ದರೆ ಆ ಹುಡುಗಿ ಮಾಡುವುದಾದರೂ ಏನು? ಮಹಿಳೆಯ ಮೇಲೆ ಮಹಿಳೆಯೇ ದೌರ್ಜನ್ಯವೆಸಗುವ ಪ್ರಕರಣಗಳ ಬಗ್ಗೆ ದಿನಾ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಒಟ್ಟಿನಲ್ಲಿ ಲಿಂಗಭೇದವಿಲ್ಲದೆ ದೌರ್ಜನ್ಯಗಳು ನಡೆಯುತ್ತಲೇ ಇದೆ.

ಇದಕ್ಕೆಲ್ಲಾ ಕಡಿವಾಣ ಹಾಕಲು ಬಟ್ಟೆ ಬಿಚ್ಚಿ 'ಸ್ಲಟ್ ವಾಕ್' ಮಾಡಬೇಕಾ? ಜಾಗತೀಕರಣದ ಪ್ರಭಾವದಿಂದಾಗಿ ವಿದೇಶೀಯರು ಮಾಡಿದ್ದೆಲ್ಲಾ ನಾವು ನಕಲು ಹೊಡೆಯುತ್ತೇವೆಯೇ ಹೊರತು ಅದು ಭಾರತದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಲಟ್ ವಾಕ್ ಆಯೋಜಕರು ಚಿಂತಿಸಿದ್ದಾರೆಯೇ?

ಓರ್ವ ಹೆಣ್ಣು ಮಗಳಾಗಿಯೇ ಹೇಳುತ್ತಿದ್ದೇನೆ, ಪ್ರಜಾಪ್ರಭುತ್ವವಿರುವ ನಮ್ಮ ನಾಡಿನಲ್ಲಿ ಮಹಿಳೆಯರು ತಮಗಿಷ್ಟ ಬಂದಂತೆ ಉಡುಗೆ ತೊಟ್ಟು, ಮನಸೋಇಚ್ಛೆ ವರ್ತಿಸಲಿ. ಈ ಸ್ವಾತಂತ್ರ್ಯದ ಬಗ್ಗೆ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ. ಆದರೆ ಪ್ರಚೋದನಾಕಾರಿಯಾದಂತಹ ಉಡುಗೆಗಳನ್ನು ತೊಟ್ಟು ಕಾಮುಕ ಕಣ್ಣಿಗೆ ಗುರಿಯಾದೆವು ಎಂದು ಅವಲತ್ತುಕೊಳ್ಳಬಾರದು ಅಷ್ಟೇ. ಹೆಣ್ಣು ಯಾವುದೇ ಉಡುಗೆ ಧರಿಸಿದರು ಅದನ್ನು ಚೆನ್ನಾಗಿ ನಿರ್ವಹಿಸಿಕೊಳ್ಳಲು ಆಕೆಗೆ ಗೊತ್ತಿರಬೇಕು. ಮಾತ್ರವಲ್ಲದೆ ತೊಡುವ ಉಡುಗೆ ಸಂದರ್ಭಕ್ಕನುಸಾರವಾಗಿ ಇದ್ದರೇನೆ ಚೆನ್ನ. ಒಂದು ವೇಳೆ ಪುರುಷರನ್ನು ತನ್ನೆಡೆಗೆ ಆಕರ್ಷಿಸಲು ಬಯಸುವಂತಹ ಉಡುಗೆಯನ್ನೇ ಆಕೆ ತೊಡುತ್ತಿದ್ದರೆ, ಆ ಆಕರ್ಷಣೆಯನ್ನು ಎದುರಿಸಲು ಆಕೆ ಸಿದ್ಧಳಾಗಿರಬೇಕು. ಯಾಕೆಂದರೆ ಸ್ತ್ರೀ ಸ್ವಾತಂತ್ರ್ಯ ಎಂಬುದಕ್ಕೂ ಎಲ್ಲೆಯಿದೆ, ಅದು ನಮ್ಮ ಹೊಣೆಗಾರಿಕೆಯೂ ಹೌದು ಎಂಬುದನ್ನು ಮರೆಯಬಾರದು ಅಲ್ವಾ?.

ಚಿತ್ರ ಕೃಪೆ: ಅಂತರ್ಜಾಲ