Wednesday, August 28, 2013
ನದಿ
ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ
ಸಿಕ್ಕು
ಪುಟ್ಟ ಪಾದಗಳಿಗೆ ಮುತ್ತಿಕ್ಕಿ
ಕಿಲಕಿಲ ನಗುವಿಗೆ
ಸಾಥಿಯಾಗಿದ್ದು,
ಇಂದು ಊದಿಕೊಂಡ ಅವಳ
ಶವವನ್ನು ಹೊತ್ತು
ದಡದಲ್ಲಿ, ಮಳೆಯಂತೆ ಕಣ್ಣೀರು
ಸುರಿಸುವ ಅಮ್ಮನನ್ನೂ
ಲೆಕ್ಕಿಸದೆ ಹರಿಯುತ್ತಿದೆ
ನದಿ...
ಇವಳು ನಾವಂದು ಕೊಂಡಂತೆ
ಇಲ್ಲ
ಎಂದು ಜನರಾಡಿಕೊಳ್ತಾರೆ
ಆಷಾಢದಲ್ಲಿ ರಭಸವಾಗಿ
ಹರಿವ ಕೋಪಿಷ್ಠೆ
ಮಕರ ಮಾಸದ ಮಂಜು ಮುಸುಕಿದ
ಮುಂಜಾವಿನಲಿ
ಹುಸಿಕೋಪ ತರಿಸುವ ಪ್ರೇಯಸಿ
ಒಡಲೊಳಗೆ ಪ್ರೇಮದ ತಾಪ
ಹೊರಗೆ ತಂಪಾದ ಮೈ
ಮೆಲುನಗೆಯ ಮೋನಾಲಿಸಾಳಂತೆ
ಚಿತ್ರ ವಿಚಿತ್ರ ಛಾಯೆ...
ಚಂದಿರನ ಬೆಳಕಲ್ಲಿ
ಹಾಲುಕ್ಕಿದಂತೆ ಹರಿವ
ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ
ಯಕ್ಷಿಯಂತೆ ಭಯಾನಕ ರೂಪ
ಮನದೊಳಗಿರುವ ದುಃಖಗಳನ್ನು
ಬದಿಗೊತ್ತಿ
ಏರಿಳಿದು ಹರಿವಳು
ಮೈ ಮುರಿದು ಕೈ ಚಾಚಿ
ನಡುವ ಬಳುಕಿಸಿ
ಲಜ್ಜೆ ಹೆಜ್ಜೆಯನ್ನಿಟ್ಟು
ಸನಿಹದಲ್ಲಿದ್ದರೂ
ಅದು ನನ್ನದಲ್ಲ ಎಂಬಂತೆ
ಅಳುವ ದಂಡೆಯ ಮೈಗೆ
ಗುದ್ದಿ, ಮುದ್ದಿಸಿ
ಯಾರಿಗೂ ಅರಿವಾಗದಂತೆ
ನೋವ ನುಂಗಿ
ಯಾರಲ್ಲೂ ಕೋಪಿಸದೆ
ಕಾಮುಕ ಹೃದಯೀ ಸಮುದ್ರದ
ಸೆಳೆತಕ್ಕೆ ಸೋತು
ತನ್ನನ್ನೇ ಅರ್ಪಿಸಲು ಹೊರಟು
ನಿಂತಾಗ
ಅವಳಲ್ಲಿ ಪ್ರೇಮವಿತ್ತು,
ಪ್ರೇಮಿಯ ಸೇರುವ ತವಕ
ಸವತಿಯಾಗುವೆನೆಂಬ ನೋವೂ...
Tuesday, August 27, 2013
ನಡೆ ಪಾಡು

ಹಸಿವಿನ ಸಂಪತ್ತು
ಪ್ರೇಮದ ನೋವೂ
ಅಸ್ತಮವಾದಾಗ
ಕತ್ತಲೆಯಲ್ಲಿ ಬೆಂದ ನಾನು
ಬಡತನದ ಮೂಟೆ ಹೊತ್ತು ಹೊರಟಿದ್ದೇನೆ
ಏನೂ ಕೊಡಲಿಚ್ಛಿಸದವರೂ
ಏನೂ ಬಯಸದವರೂ
ತಮ್ಮ ಲೆಕ್ಕಪತ್ರದಲ್ಲಿ
ನನ್ನ ಹಸಿವಿನ ಬಗ್ಗೆ ಬರೆದಿಟ್ಟಿಲ್ಲ
ಕೂಡಿಸುವುದು, ಕಳೆಯುವುದು
ಗುಣಾಕಾರ, ಭಾಗಾಕಾರದಲ್ಲಿ
ವಿಕೃತವಾಗಿರುವ ಶರೀರಗಳು
ನನ್ನನ್ನು ಹಾದು ಹೋದುವು
ರಕ್ತಗಳಿಲ್ಲದ ಆ ದೇಹ ಸೊರಗಿತ್ತು
ಆಶ್ಚರ್ಯ!
ನಾನೂ ಅವರ
ದಾರಿಯಲ್ಲೇ ಸಾಗುತ್ತಿದ್ದೇನೆ
ನನಗೇ ಗೊತ್ತಿಲ್ಲದ
ನನ್ನನ್ನು ಗೊತ್ತಿಲ್ಲದ ದಾರಿಯಲ್ಲಿ
ಯಾರು ಯಾರೊಬ್ಬರಿಗೂ ಗೊತ್ತಿಲ್ಲವೆಂಬಂತೆ
ಒಬ್ಬಂಟಿಯಾಗುತ್ತಾರೆ
ನಾನು ಯಾರೆಂದು ಕೇಳಲು
ಇನ್ಯಾರೂ ಇಲ್ಲದಿದ್ದರೂ
ಎಲ್ಲರೂ ನಾನು ಯಾರೆಂದು
ಗುರುತು ಹಿಡಿದಿದ್ದರು
ಅಟ್ಟಹಾಸಗೈದು ಹಾದು ಹೋದ
ಗಬ್ಬು ನಾತದ ಶುಷ್ಕ ಗಾಳಿ
ನನ್ನನ್ನು ಗಾಯಗೊಳಿಸಿದರೂ
ಸುರಿದ ರಕ್ತಕ್ಕೆ ಗಂಧವಿರಲಿಲ್ಲ
ಸುಸ್ತಾದಾಗ ಮಲಗಲು
ಜಾಗ ಹುಡುಕಿದರೂ
ಹಲವಾರು ಬೆಳಕುಗಳ ನಡುವೆ
ಕಪ್ಪು ಬೆಳಕಿಗೆ ಜಾಗವಿಲ್ಲದೇ ಹೋಯ್ತು
ನೆರಳಿಗಾಗಿ ಬಯಸಿ
ಓಡುವ ಮರಗಳ
ಓಡುತ್ತಿರುವ ನೆರಳನ್ನು ಹಿಡಿಯಲಾಗದೆ
ಸುಸ್ತು ಬಿದ್ದೆ
ಈಗ ನಾನು ಭೂಮಿಗೂ ಬೇಡವಾದೆ
ಅಸ್ತಿತ್ವವಿಲ್ಲದೆ ಅಲೆಯುತ್ತಾ
ಭಾರವಾದ ದೇಹವನ್ನು ಹೊತ್ತು
ಲಕ್ಷ್ಯಗಳಿಲ್ಲದೆ
ನಿಂತೆ!.
Wednesday, August 14, 2013
ಪ್ರಣಯ ಕಾಲ
ಕನ್ನಡಿಯ ಮುಂದೆ
ನಿಂತು ಸಿಂಗರಿಸುವಾಗ
ಅವನ
ನೆನಪು ಕಾಡುತ್ತೆ
ನನ್ನ ಬೆರಳುಗಳನ್ನು
ಮೆಲ್ಲನೆ ಹಿಚುಕಿ
ಕಾಲುಗಳ ಸೌಂದರ್ಯ ವರ್ಣಿಸುತ್ತಾ
ಪಿಸುಗುಡುವಂತೆ ಕಿವಿ ಪಕ್ಕ ಬಂದು
ಕೆನ್ನೆಗೆ ಮುತ್ತಿಟ್ಟ
ಆ ಕ್ಷಣಗಳು...
ಹುಡುಗ ಹುಡುಗಿಯೆಂಬ
ಜೀವಶಾಸ್ತ್ರದ ಸಿದ್ಧಾಂತವೂ
ಈಸ್ಟ್ರೋಜನ್ನೂ ಪ್ರೊಜೆಸ್ಟ್ರಾನ್‌ಗಳು
ನನ್ನಲ್ಲಿ ಜಾಗೃತವಾದಾಗ
ಆಂಡ್ರಾಜನ್‌ನ ಏರಿಳಿತ
ಅವನಲ್ಲಿ...
+ve -ve
ಧ್ರುವಗಳು ಆಕರ್ಷಿಸುತ್ತವೆ
ಎಂಬ ರಸಾಯನ ಶಾಸ್ತ್ರವೂ
ಮೈನೆಸ್ ಮೈನೆಸ್ ಪ್ಲಸ್ ಆಗುವ
ಗಣಿತವೂ ನಮ್ಮೊಡಲಲ್ಲಿ
ಸಮೀಕರಣಗೊಂಡಾಗ
XX, XY
ಕ್ರೋಮೋಸೋಮ್‌ಗಳ
ಬಯಾಲಜಿಯೂ, ಕೆಮೆಸ್ಟ್ರಿಯೂ
ಸೇರಿ ಕೂಡಿ ಕಳೆದು
ಗುಣಿಸಿ, ಭಾಗಿಸಿ ಸಿಕ್ಕ
ಲೆಕ್ಕಚಾರದ ಕನಸುಗಳು
ಹೃದಯವೆಂಬುದು ಬರೀ
ಅಂಗವೆಂದುಕೊಂಡಿದ್ದನೇ ಅವನು?
ಪ್ರಾಕ್ಟಿಕಲ್ ಮನುಷ್ಯ!
ಪ್ರೀತಿ ಹುಟ್ಟುವುದು ಕಣ್ಣಿಂದ
ಎಂದು ಅಂದುಕೊಂಡಿದ್ದ
ಶತ ದಡ್ಡಿ ನಾನು
ಕಣ್ಣು ಮುಚ್ಚಿ ಕುಳಿತರೆ
ಮನುಷ್ಯ-ಮನುಷ್ಯನ
ನಡುವಿನ ಅಂತರವನ್ನು ನೆನೆದು
ನಗು ಬರುತ್ತದೆ...
ಪ್ರೀತಿ ಹುಟ್ಟುವುದು ಕಣ್ಣಿನಿಂದಲೇ?
ನಾನು ಕಣ್ಣು ಮುಚ್ಚಿದ್ದೇನೆ...
Tuesday, August 13, 2013
ಮರಣ
ಕನಸು
ಗಳನ್ನು ಹೆಣೆದು
ಕಾಲವನ್ನು ಹಿಂದಿಕ್ಕಿ
ವರ್ತಮಾನದ ಗಾಲಿಯಲ್ಲಿ
ಸುತ್ತುತ್ತಾ
ಮುಂದೆ ಸಾಗುವ
ಹೊತ್ತು
ಕತ್ತಲೆ
ಜೀವನದ ಹೊದಿಕೆಯಂತೆ
ನಮ್ಮ ಅನುಮತಿಗೆ ಕಾಯದೆ
ಬಂದು
ಮುಂದೆ ನಿಲ್ಲುವಾಗ
ಹೃದಯ
ನನ್ನಲ್ಲಿ ಮುನಿಸಿಕೊಂಡಿದೆ
ಎನ್ನುವ ಹಾಗೆ
ಬಡಿತ ನಿಲ್ಲಿಸಿದಾಗ
ಕಣ್ಣುಗಳು
ಬಣ್ಣಗಳನ್ನು ಧಿಕ್ಕರಿಸಿ
ಕತ್ತಲೆಯನ್ನೇ
ಬಯಸಿದಾಗ
ದೇಹ
ಮಣ್ಣನ್ನಪ್ಪಿ ಪವಡಿಸುವಾಗ
ಒಬ್ಬಂಟಿ
ಪ್ರಶಾಂತ ಗಳಿಗೆ...
ಯಾವುದೇ
ಭಾವನೆಗಳಿಲ್ಲದೆ
ಶೂನ್ಯ ಬಿಂದುವಿನಲ್ಲಿ
ನಾನು
ನಾನು ಮಾತ್ರವಾಗುತ್ತೇನೆ
ಗಳನ್ನು ಹೆಣೆದು
ಕಾಲವನ್ನು ಹಿಂದಿಕ್ಕಿ
ವರ್ತಮಾನದ ಗಾಲಿಯಲ್ಲಿ
ಸುತ್ತುತ್ತಾ
ಮುಂದೆ ಸಾಗುವ
ಹೊತ್ತು
ಕತ್ತಲೆ
ಜೀವನದ ಹೊದಿಕೆಯಂತೆ
ನಮ್ಮ ಅನುಮತಿಗೆ ಕಾಯದೆ
ಬಂದು
ಮುಂದೆ ನಿಲ್ಲುವಾಗ
ಹೃದಯ
ನನ್ನಲ್ಲಿ ಮುನಿಸಿಕೊಂಡಿದೆ
ಎನ್ನುವ ಹಾಗೆ
ಬಡಿತ ನಿಲ್ಲಿಸಿದಾಗ
ಕಣ್ಣುಗಳು
ಬಣ್ಣಗಳನ್ನು ಧಿಕ್ಕರಿಸಿ
ಕತ್ತಲೆಯನ್ನೇ
ಬಯಸಿದಾಗ
ದೇಹ
ಮಣ್ಣನ್ನಪ್ಪಿ ಪವಡಿಸುವಾಗ
ಒಬ್ಬಂಟಿ
ಪ್ರಶಾಂತ ಗಳಿಗೆ...
ಯಾವುದೇ
ಭಾವನೆಗಳಿಲ್ಲದೆ
ಶೂನ್ಯ ಬಿಂದುವಿನಲ್ಲಿ
ನಾನು
ನಾನು ಮಾತ್ರವಾಗುತ್ತೇನೆ
Subscribe to:
Posts (Atom)