ನದಿ


ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ

ಸಿಕ್ಕು

ಪುಟ್ಟ ಪಾದಗಳಿಗೆ ಮುತ್ತಿಕ್ಕಿ

ಕಿಲಕಿಲ ನಗುವಿಗೆ

ಸಾಥಿಯಾಗಿದ್ದು,

ಇಂದು ಊದಿಕೊಂಡ ಅವಳ

ಶವವನ್ನು ಹೊತ್ತು



ದಡದಲ್ಲಿ, ಮಳೆಯಂತೆ ಕಣ್ಣೀರು

ಸುರಿಸುವ ಅಮ್ಮನನ್ನೂ

ಲೆಕ್ಕಿಸದೆ ಹರಿಯುತ್ತಿದೆ

ನದಿ...



ಇವಳು ನಾವಂದು ಕೊಂಡಂತೆ

ಇಲ್ಲ

ಎಂದು ಜನರಾಡಿಕೊಳ್ತಾರೆ



ಆಷಾಢದಲ್ಲಿ ರಭಸವಾಗಿ

ಹರಿವ ಕೋಪಿಷ್ಠೆ

ಮಕರ ಮಾಸದ ಮಂಜು ಮುಸುಕಿದ

ಮುಂಜಾವಿನಲಿ

ಹುಸಿಕೋಪ ತರಿಸುವ ಪ್ರೇಯಸಿ



ಒಡಲೊಳಗೆ ಪ್ರೇಮದ ತಾಪ

ಹೊರಗೆ ತಂಪಾದ ಮೈ

ಮೆಲುನಗೆಯ ಮೋನಾಲಿಸಾಳಂತೆ

ಚಿತ್ರ ವಿಚಿತ್ರ ಛಾಯೆ...



ಚಂದಿರನ ಬೆಳಕಲ್ಲಿ

ಹಾಲುಕ್ಕಿದಂತೆ ಹರಿವ

ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ

ಯಕ್ಷಿಯಂತೆ ಭಯಾನಕ ರೂಪ



ಮನದೊಳಗಿರುವ ದುಃಖಗಳನ್ನು

ಬದಿಗೊತ್ತಿ

ಏರಿಳಿದು ಹರಿವಳು



ಮೈ ಮುರಿದು ಕೈ ಚಾಚಿ

ನಡುವ ಬಳುಕಿಸಿ

ಲಜ್ಜೆ ಹೆಜ್ಜೆಯನ್ನಿಟ್ಟು

ಸನಿಹದಲ್ಲಿದ್ದರೂ

ಅದು ನನ್ನದಲ್ಲ ಎಂಬಂತೆ

ಅಳುವ ದಂಡೆಯ ಮೈಗೆ

ಗುದ್ದಿ, ಮುದ್ದಿಸಿ



ಯಾರಿಗೂ ಅರಿವಾಗದಂತೆ

ನೋವ ನುಂಗಿ

ಯಾರಲ್ಲೂ ಕೋಪಿಸದೆ

ಕಾಮುಕ ಹೃದಯೀ ಸಮುದ್ರದ

ಸೆಳೆತಕ್ಕೆ ಸೋತು

ತನ್ನನ್ನೇ ಅರ್ಪಿಸಲು ಹೊರಟು

ನಿಂತಾಗ

ಅವಳಲ್ಲಿ ಪ್ರೇಮವಿತ್ತು,

ಪ್ರೇಮಿಯ ಸೇರುವ ತವಕ

ಸವತಿಯಾಗುವೆನೆಂಬ ನೋವೂ...

Comments

Swarna said…
ಎಷ್ಟು ಬಾರಿ ದಡವನ್ನು ಮುದ್ದಿಸಿದರೂ ನದಿ ದಡ ಒಂದಾಗ ಲಿಲ್ಲ. ಸವತಿಯ ಭಯಕ್ಕಿಂತ ‘ಅವನ’ ಆಕರ್ಷಣೆ ದೊಡ್ಡದಲ್ಲವೇ ? ಚೆನ್ನಾಗಿದೆ

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ