Sunday, December 21, 2008

ನಾನು ಮತ್ತು ಬದುಕು...

ಮನದ ಮೂಲೆಯಲ್ಲಡಗಿದ
ಒಂದಷ್ಟು ದುಗುಡಗಳು
ಇನ್ನೊಮ್ಮೆ ನನ್ನ ಮನವನ್ನರಳಿಸಿದ
ಒಂದಿಷ್ಟು ಭಾವನೆಗಳನ್ನ
ಹೆಕ್ಕಿ ಚಿತ್ತಾರ ಬಿಡಿಸಿದಾಗ
ಅದನ್ನು ಕವನವೆಂದು ಗೀಚಿದ್ದೆ...

ದುಗುಡ ದುಮ್ಮಾನಗಳು
ಎದೆಯ ಕುಕ್ಕಿ
ಕಣ್ಣೀರು ಹರಿಸಿದಾಗ
ಕಷ್ಟದಾ ಸುಳಿಯಲ್ಲಿ ಬೇಸತ್ತಿರಲು
ಈ ಜೀವನವ ನಾನಂದು
ನರಕವೆಂದು ಕರೆದಿದ್ದೆ....

ಏಳು ಬೀಳುಗಳ ನಡುವೆ
ಸಾಗುವುದೀ ಜೀವನವು
ಸುಖ ದುಃಖಗಳು ಇವು, ಕ್ಷಣಿಕವೆಂದಾಗ
ಒಮ್ಮೆ ಅತ್ತಿದ್ದೆ, ಮತ್ತೆ ನಕ್ಕಿದ್ದೆ
ಕಾಲ ಸರಿಯಲು ಹೀಗೆ.. ಜಗದ
ನಿಯಮವಿದೆಂದು ನಾನಾಗ ಅರಿತಿದ್ದೆ.

Monday, December 15, 2008

ನೀನು ನನ್ನವನು...

ನನ್ನ
ಸ್ವಪ್ನಲೋಕದ ಸುಪ್ತ ಕನಸುಗಳ
ಸರಮಾಲೆ ನಿನ್ನನಾವರಿಸಿರಲು
ನಿನ್ನ
ಬೆಚ್ಚನೆಯ ನೆನಪುಗಳು
ಮತ್ತೊಮ್ಮೆ ಕೆಣಕುತಿರಲು
ಇನಿಯಾ ಇನ್ನೇಕೆ ತಡ?
ಬಂದು ಬಿಡು ಈ ಹೃದಯದಲಿ
ಪ್ರೀತಿ ಬಾಗಿಲು ಇದೋ
ನಿನಗಾಗಿ ತೆರೆದಿಡುವೆ...

ಮಂದ ಮಾರುತವೀಗ
ಪ್ರಣಯರಾಗವ ನುಡಿಸಿರಲು
ಸುಮಲತೆಯ ನಡುವೆ
ದುಂಬಿಗಳ ಚುಂಬನದಿ
ಬಿಸಿಯಪ್ಪುಗೆಯ ಸುಖ ನೀಡುವಿಯಂತೆ
ಪ್ರೀತಿ ಲೋಕದ ಹಾದಿಯಲಿ ಇದೋ
ನಿನಗಾಗಿ ಕಾದಿರುವೆ...

ನಿನ್ನ ನಗೆಯಲ್ಲಿ ಲೋಕ ಮರೆಯುವೆನಾಗ
ನಿನ್ನ ತೋಳಬಂಧನದಲ್ಲಿ
ಒಮ್ಮೆ ಬಂಧಿಯಾಗುವ ಆಸೆ
ನಿನ್ನ ಕೈ ಹಿಡಿದು ಮಳೆ ನೆನೆಯುವಾ ಬಯಕೆ
ಎಂದೆಂದೂ ನೀ ನನ್ನವನಾಗಿ ಬಿಡು
ನೀನು ನನ್ನವನು, ನನ್ನವನು ಮಾತ್ರ
ನಾನೆಂದು ನಿನ್ನ ಪ್ರೀತಿಯಾಗಿರುವೆ.

Monday, October 20, 2008

ಮೊಬೈಲ್ ಪ್ರೇಮ...

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು.

ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು.

ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy...

ತನ್ನೊಂದಿಗೆ ಪ್ರೀತಿಯ ನಾಟಕವಾಡಿದ ಮೊಬೈಲ್ ಪ್ರೇಮಿಯ ಕುಡಿ ತನ್ನ ಗರ್ಭದಲ್ಲಿ ಬೆಳೆಯುತ್ತಿರುವುದು ಆಕೆಗೆ ಮನವರಿಕೆಯಾದಾಗ, ದಿನ ರಾತ್ರಿಯಿಡೀ ಆಕೆ ಕಾಲ್ ಮಾಡುತ್ತಲೇ ಇದ್ದಳು. ಅವ receive ಮಾಡಲಿಲ್ಲ. ಆಕೆ ನಿಮಿಷಕ್ಕೊಂದರಂತೆ ಮೆಸೇಜ್ ಕಳುಹಿಸಿದಳು.
ಮುಂದೊಮ್ಮೆ This number is not existing ಅಂತ ಬಂತು. ಆತ number ಬದಲಿಸಿದ್ದ...

ಆಕೆ Deliveryಗಾಗಿ wait ಮಾಡುತ್ತಾ ಕುಳಿತ್ತಿದ್ದಳು.

Saturday, September 20, 2008

ಪ್ರೀತಿ -ದೇವರು

ನೀನ್ಯಾಕೆ ನನ್ಮುಂದೆ

ನಿನ್ನ ಪ್ರೀತಿ ತೋರಿಸುತ್ತಿಲ್ಲ?

ಅವನೆಂದ

ಪ್ರೀತಿ ದೇವರಂತೆ!

ನಾನು ಪ್ರೀತಿ ತೋರಿಸದಿದ್ದರೂ

ನೀನು ನನ್ನನ್ನೇ

ಸದಾ ನೆನೆಯುತ್ತಿರುವಿಯಲ್ಲಾ?

Friday, July 11, 2008

ಅಮ್ಮನ ಒಲವಿನ ಓಲೆ.....

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ.

ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತೆ ಅಮ್ಮನ ಪತ್ರ ನನ್ನ ಕೈಗೆ ಸಿಕ್ಕಿದಾಗ ಚೈತನ್ಯ ನೀಡುವ ಅಸ್ತ್ರದಂತೆ ಭಾಸವಾಗುತ್ತದೆ.

ಚೆನ್ನೈ ಎಂಬ ಮಹಾನಗರಕ್ಕೆ ಬಂದು ವರುಷಗಳಾಗುತ್ತಾ ಬಂತು. ಅದರಲ್ಲಿ ಎಷ್ಟು ಏಳು ಬೀಳುಗಳು ಸಂಭವಿಸಿವೆಯೋ ಅಷ್ಟು ಬಾರಿ ಅಮ್ಮನ ಪತ್ರ ನನ್ನ ಕೈ ಸೇರಿದೆ. ನಿಜ ಹೇಳಬೇಕೇ? ಮೊಬೈಲ್ ಫೋನ್‌ನಲ್ಲಿ ಆಗಾಗ ಮಾತನಾಡುತ್ತಾ ಕಷ್ಟ ಸುಖ ಹೇಳುತ್ತಿದ್ದರೂ ಅಮ್ಮನ ಪತ್ರದಲ್ಲಿ ಸಿಗುವಂತಹ ತೃಪ್ತಿ ಎಲ್ಲಿಯೂ ಸಿಕ್ಕಿಲ್ಲ. ಆ ಪತ್ರ ಅಂತದ್ದು. ತನ್ನ ಮಕ್ಕಳು ಎಲ್ಲಿಯೇ ಇರಲಿ ಮನಸ್ಸಲ್ಲಿ ಮಕ್ಕಳದ್ದೇ ಚಿಂತೆ. ಮಾತೃ ಹೃದಯವಲ್ಲವೇ? ಮಕ್ಕಳ ಒಂದೊಂದು ಉಚ್ವಾಸ ನಿಶ್ವಾಸವೂ ಆ ಅಮ್ಮನಿಗೆ ತಿಳಿಯುವ ಶಕ್ತಿ ಇದೆ. ಅದಕ್ಕಾಗಿಯೇ ಬಲ್ಲವರು ಅಮ್ಮ ದೇವರ ರೂಪ ಅಂದದ್ದು?

ಇನ್ನು, ಹೆಣ್ಣು ಮಕ್ಕಳೆಂದರೆ ಅಮ್ಮನಿಗೆ ಕಾಳಜಿ ಇಲ್ಲದೆ ಇರುತ್ತದಾ?. ನೋಡು ಪುಟ್ಟಿ, ಅದು ಹಾಗೆ, ಇದು ಹೀಗೆ, ಜಾಗರೂಕತೆಯಿಂದಿರು ಎಂಬ ಉಪದೇಶಗಳೊಂದಿಗೆ ತುಂಬಾ ಮಮತೆ, ತಪ್ಪು ಮಾಡಿದಲ್ಲಿ ಅಷ್ಟೇ ಕಟುವಾದ ಟೀಕೆ ಎಲ್ಲವೂ ತುಂಬಿರುವ ಅದೆಷ್ಟೋ ಪತ್ರಗಳು ನನ್ನಲ್ಲಿ ಭದ್ರವಾಗಿವೆ. ಅವು ನೀಡುವಂತಹ ಮಾರ್ಗದರ್ಶನ, ಒಲವು, ಸಾಂತ್ವನ.. ನಾನು ಧೃತಿಗೆಟ್ಟಾಗ "ಏಕಾಂಗಿಯಲ್ಲ" ಎಂಬ ಅರಿವು ಮೂಡಿಸಿ ಯಾವುದೇ ಕಷ್ಟ ಬಂದರೂ ಸೆಟೆದು ನಿಲ್ಲುವ ತಾಕತ್ತನ್ನು ನೀಡಿದೆ.

ಪತ್ರದ ಬಗ್ಗೆ ಹೇಳುವಾಗ ತಕ್ಷಣ ನೆನಪಿಗೆ ಬರುವುದೇ ನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರ್. ಈಗ ಅದು ಕಾಣಲಿಕ್ಕೇ ಅಪರೂಪ. ನಿಜ, ಕಾಲಬದಲಾಗಿದೆ. ತಾಂತ್ರಿಕತೆ ವರ್ಧಿಸುತ್ತಾ ಬಂದಂತೆ ಪತ್ರಗಳ ಸ್ಥಾನವನ್ನು ಮೊಬೈಲ್ ಎಸ್‌ಎಂಎಸ್‌ಗಳು ಇಮೇಲ್ ಕಸಿದುಕೊಂಡಿವೆ. ಏನೇ ಇರಲಿ ತಮ್ಮ ಕೈಯಕ್ಷರಗಳಲ್ಲಿ ಬರೆದ ಪತ್ರದಲ್ಲಿ "ನನ್ನೂರಿನ" ಮಣ್ಣಿನ ಸುಗಂಧವಿದೆ, ವಿವರವಾಗಿ ಬರೆದ ಮುದ್ದಾದ ಅಕ್ಷರಗಳಲ್ಲಿ ಮಮತೆಯ ಕೊಂಡಿಯಿದೆ. ಪ್ರೀತಿಯ...ಎಂದು ಆರಂಭವಾಗುವ ಪತ್ರಗಳಿಂದ ಇತೀ ನಿನ್ನ.. ಎಂದು ಕೊನೆಗೊಳ್ಳುವ ಈ ಪತ್ರಗಳು ಹೊತ್ತು ತರುವ ಅದೆಷ್ಟು ಸುದ್ದಿಗಳು, ಭಾವನೆಗಳು! ಎಲ್ಲವನ್ನೂ ಓದಿ ಮುಗಿಸುವಾಗ ಕಣ್ಣು ತೇವಗೊಂಡಿರುತ್ತದೆ.

ನೆನಪುಗಳು ಮನಸ್ಸಿನ ಕದ ತಟ್ಟಿ ಒಮ್ಮೆ ನಗು ಮತ್ತೊಮ್ಮೆ ಅಳು ತರಿಸಿದರೂ ಪತ್ರದಲ್ಲಿನ ಅಕ್ಷರಗಳು ಮತ್ತಷ್ಟು ಮುದ್ದಾಗಿ ಕಾಣಿಸುತ್ತವೆ. ಓದಿದ ಪತ್ರವನ್ನು ಮತ್ತೆ ಮತ್ತೆ ಓದುವಾಗ ಹೊಸ ಉತ್ಸಾಹ, ಅಮ್ಮನ ನೆನಪು ಕಾಡುತ್ತದೆ. ಮರೆಯದೆ ಪತ್ರ ಬರಿ ಎಂದು ಕೊನೆಯ ಸಾಲಿನಲ್ಲಿ ಅಮ್ಮ ಬರೆದದ್ದು ನೋಡಿದಾಗ ನೆನಪಾದದ್ದು, ಅದೆಷ್ಟೋ ನನ್ನ ಉತ್ತರಗಳು ಅಮ್ಮನ ಕೈ ಸೇರಿವೆ ಎಂದು. ಸದ್ಯ, ನಾನು ನನ್ನವರನ್ನು ಮಿಸ್ ಮಾಡುವಾಗ ಪತ್ರವನ್ನು ಕೈಗೆತ್ತಿಕೊಂಡು ನೋವು ಮರೆಯುವಂತೆ, ಅವರೂ ಹಾಗೆ ಮಾಡುತ್ತಿರುತ್ತಾರಲ್ಲಾ..ಅದಕ್ಕೇ ಪತ್ರ ಬರೆಯುವುದನ್ನು ಮುಂದುವರಿಸುತ್ತಾ ಬಂದಿದ್ದೇನೆ. ಅದರಲ್ಲಿ ಏನೋ ಒಂಥಾರ ತೃಪ್ತಿಯಿದೆ, ಮನದಾಳದ ಮಾತನ್ನು ಹೇಳುವ ತಾಕತ್ತಿದೆ. ಸ್ನೇಹದ ಅಕ್ಷರಗಳು ಓಲೆ ರೂಪದಲ್ಲಿ ಕೈ ಸೇರುವಾಗ ಮನಸ್ಸಿನ ಮೂಲೆಯಲ್ಲಿರುವ ಪ್ರೀತಿಯ ಸೆಳೆತವು ಮುಂದಿನ ಪತ್ರವನ್ನು ನಿರೀಕ್ಷಿಸುತ್ತಿರುತ್ತದೆ.

Thursday, June 5, 2008

ವಾಸ್ತವ

ಮುಂಜಾನೆ ಮಿಂದು
ದೇವರಿಗೆ ನಮಿಸುವಾಗ
ಅಮ್ಮ ಹೇಳುತ್ತಿದ್ದಳಾಗ,
ಕೈ ಮುಗಿದು ಕಣ್ಮುಚ್ಚಿ ಬೇಡಿದರೆ
ಈಶ ಒಲಿವನೆಂದು..

ಸಂಧ್ಯಾವಂದನೆ ವೇಳೆ
ದೀಪ ಉರಿಸಿ ನನ್ನ ಅಜ್ಜಿ
ರಾಮನಾಮ ಜಪಿಸುತಿರಲು
ಕಣ್ಣೆರಡು ಮುಚ್ಚಿ ನಾನೂ
ದನಿಗೂಡಿಸುತ್ತಿದ್ದೆ..

ಇರುಳ ಬಾನಂಗಳದಲ್ಲಿ
ಕೋಟಿ ತಾರೆಗಳು ಮಿನುಗುವಾಗ
ನಿದ್ದೆ ಬರುತ್ತಿಲ್ಲ ತಾತ,
ಕತೆ ಹೇಳೆಂದು ಸತಾಯಿಸಿದಾಗ
ಸುಮ್ಮನೆ ಕಣ್ಣು ಮುಚ್ಚಿರು
ನಿದ್ದೆ ತಂತಾನೆ ಬರುವುದು
ಎಂದು ಅಪ್ಪ ಗದರಿಸಿದಾಗ
ಕಣ್ಣೆರಡು ಮುಚ್ಚಿ ಮಗ್ಗಲೆಳೆದು
ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ

ಬಾಲ್ಯವೆಷ್ಟು ಮಧುರವಾಗಿತ್ತು!
ಕಣ್ತೆರೆದರೆ ಸುಂದರ ಲೋಕ
ಮುಚ್ಚಿದರೆ ಸ್ವಪ್ನ ಲೋಕಕ್ಕೆ
ಪಯಣ ಬೆಳೆಸುತಲಿದ್ದೆ

ಕಾಲ ಚಕ್ರವು ತಿರುಗುತಿರಲು
ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು,
ಸುತ್ತ ಕಣ್ಣು ಹಾಯಿಸಿದರೆ...
ಹಗೆ ಹೊಗೆಯಾಡುವ ಜಗದಲ್ಲಿ
ನಗೆ ಮಾಸಿದ ಜೋಲು ಮುಖ!
ಜೀವ ತೆಗೆಯಲು ಕತ್ತಿ ಮಸೆಯುವ ಜನ,
ಇನ್ನೊಂದೆಡೆ,
ಜೀವಕ್ಕಾಗಿ ಬೇಡುವ ಮನ
ಹಣದಾಸೆಗಾಗಿ ಜೀವ ಹಿಂಡುವವರು,
ಬೇಡುವವರು, ಮುಂದೆ ಕೈ ಚಾಚಿ

ಜಗದಳುವಿನ ಮುಂದೆ
ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು
ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ
ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ
ದನಿಯೆತ್ತಲು ಚಡಪಡಿಸಿ ಸೋತಾಗ
ಎರಡು ಹನಿ ಕಣ್ಣೀರೆರೆದು
ಮತ್ತೆ,
ನನಗಿದರ ಅರಿವೇ ಇಲ್ಲದವನಂತೆ
ಕಣ್ಣು ಮುಚ್ಚಿಕೊಳ್ಳುತ್ತೇನೆ!

Wednesday, April 23, 2008

ದ್ವಂದ್ವ

ನಿರೀಕ್ಷೆಗಳೇ…
ನನ್ನ
ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ?
ಅತೃಪ್ತ ಜೀವನದಿ
ತೃಪ್ತಿಯ ಕೃತಕ ನಗುವನು ಚೆಲ್ಲಿ
ಮುಸುಕೆಳೆದು ಮಲಗಿದರೂ
ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು?

ಪ್ರತೀಕ್ಷೆಗಳೇ…..
ಬರಡು ಜೀವನವೆಂದು ಬಿಕ್ಕಿ,
ಕಣ್ಣ ಹನಿ ಉಕ್ಕಿದಾಗ
ಭೂತಕಾಲದ ನಗುವ ಸೆಲೆಯನು
ವರ್ತಮಾನದ ತೀರಗಳಿಗಪ್ಪಳಿಸಿ
ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ?

ಪರೀಕ್ಷೆಗಳೇ…
ನಾಲ್ಕು ದಿನದ ಜೀವನವು
ಬೇವು ಬೆಲ್ಲ, ಹಾವು ಹೂವಿನ ಹಾದರವು
ಇದುವೆಂದು ಕಲಿಸುವ ಗುರುಗಳೇ..

ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ
ಗುರುತ ಮೂಡಿಸಿ
ಮತ್ತೊಮ್ಮೆ ಛೇಡಿಸಿ,
ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ
ಹುಟ್ಟುಹಾಕುವಿರಿ ಅನುಭವದ ಒರತೆಯನು
ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ
ಜೀವನವ ತೇಯ್ದು ತೆವಳುವಾಗ…
ಇದನೇನೆಂದು ಕೊಳ್ಳಲಿ ಶಿಕ್ಷೆಯೇ?
ಅಥವಾ ಬದುಕಲಿರುವ ಅಪೇಕ್ಷೆಯೇ???

ನಾನು- ನೀನು

ನಿನಗೆ,
ನನ್ನೊಳಗಿನ ಪ್ರೀತಿ ಕಾಣುವುದಿಲ್ಲ
ಭೂತ ಕನ್ನಡಿ ಹಿಡಿದು
ಹುಡುಕಿದಾಗಲೂ

ನನ್ನ ದನಿ ಕೇಳುವುದಿಲ್ಲ
ಗಂಟಲು ಬಿರಿದು
ನಾನೆಷ್ಟು ಕರೆದರೂ

ಮೌನ ಆವರಿಸಿದೆ ಸುತ್ತ
ಬರಡು ಜೀವನವೆಂಬ ವ್ಯಥೆಯಲಿ
ಕ(ವಿ)ತೆಗಳಿಗೆ ಬರಗಾಲ
ಬಂದಿದೆ, ಕೈ ಬಂಧಿ ತೊಡಿಸಿದಾಗ
ಮನದಲ್ಲಿ ಬೆಂಕಿ ಉರಿದು
ಉಕ್ಕುವವು ಕಣ್ಣ ಹನಿ
ಕೊರಗಿ ಕರಗುವ ಚಿತ್ತದಲಿ
ಜ್ವಾಲಾಮುಖಿಗಳಂತೆ!

ಮತ್ತೊಮ್ಮೆ
ಭರವಸೆಯ ಆಗಸದಿ
ಭವಿಷ್ಯದ ಹೊಂಗನಸ ಬಿಳಿ ಮೇಘ
ವರ್ಷಧಾರೆಯೆರೆದಾಗ
ಕನಸ ದೋಣಿಯಲಿ ಸಾಗುವ
ಈ ಬಾಳ ಪಯಣ

ಪ್ರಕ್ಷುಬ್ದ ಬದುಕಿನಲಿ
ನಿನ್ನ ನೆರಳಾಗಿ, ಇನಿಯಾ
ಕನಸ ಮಗ್ಗುಲ ಸರಿಸಿ
ಕವಲೊಡೆದ ಓಣಿಯಲಿ
ಮೆಲ್ಲ ಹೆಜ್ಜೆಯನ್ನಿಡುವಾಗ...

ಗಜ್ಜೆ ದನಿಗಳ ಕಂಪು
ನಿನ್ನೊಡಲ ಸೇರಿ
ದುಗುಡಗಳ ದನಿಯಾಗಿ
ಮಾರ್ದನಿಸುವುದೇಕೆ?

ಬದುಕು ಪಯಣ

ಮನೆ ಮುಂದಿನ ಹಾದಿ ಬದಿಯಲಿ
ಕೇಕೆ ಹಾಕಿ, ಗೋಲಿಯಾಡುವಾಗ
ಹಾಲಿರದ ಎದೆಗಂಟಿದ ಅಳುವ ಕಂದನ
ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ

ಕಪ್ಪು ಕನ್ನಡಕ ಧರಿಸಿ, ಮನದಲ್ಲಿ
ಅಹಂಕಾರ ತುಂಬಿರಲು
ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು
ಕತ್ತು ತಿರುಗಿಸಿ, ಸುಮ್ನೆ ಜೇಬು ತಡಕಾಡಿದ್ದೂ ಇದೆ

ದಾರಿಯಿಕ್ಕೆಲಗಳಲಿ ಕೈ ಚಾಚುವ ಜನರು,
ಕಸದ ತೊಟ್ಟಿಯಿಂದ ಕೂಳು ಹೆಕ್ಕಲು
ನಾಯಿ, ದನಗಳನ್ನೋಡಿಸುವ ಮನುಜನ ನೋಡಿ
ಕೋಲಾ ಕುಡಿದು ತೇಗು ಬಿಟ್ಟಿದ್ದೆ!

ಗತ್ತು ಹೊತ್ತಿನಲಿ ಪಯಣ ಬೆಳೆಸುವಾಗ
ಕಳ್ಳ ನಿದ್ದೆಯಾವರಿಸಿ,
ಸೀಟು ಕಸಿದಿದ್ದೆ, ನಡುಕದಿಂದ ತಾತ
ನನ್ನ ಪಕ್ಕ ಸರಿದಾಗ, ಟೈ ಬಿಗಿದು
ಕೈ ಕಟ್ಟಿ ಕುಳಿತು, ಹಾಡು ಕೇಳಿದ್ದೆ

ಬಾಳ ಪಯಣದಲಿ ತಿಂದು ಬೀಗುತ
ಬಣ್ಣ ಬಣ್ಣದ ಬದುಕಿನಲಿ ತೇಲಾಡಿ ಒದ್ದೆ,
ಕೊನೆಗೆ ಆಯಾಸದಲಿ ಎಡವಿ ಬಿದ್ದೆ
ತುಳಿದರನೆನು ಜನ, ಹಣೆಗೆ ಕೈಯನು ಜಜ್ಜಿ
ತಲೆ ಕೂದಲು ಉದುರಿವೆ, ಎಲ್ಲವೂ ಹಣ್ಣು ಹಣ್ಣು

ಕಣ್ಣು ಮಂಜಾಗಿವೆ, ಇಲ್ಲ ನಿದ್ದೆ, ನೀರಡಿಕೆ
ಬದುಕ ಬಂಜರು ಬಯಲಲಿ ಒಂಟಿ ಕಲ್ಲು
ಕೈ ನಡುಗುತಿವೆ, ದೇಹ ಕಂಪಿಸುತಿದೆ
ಒಣ ಬೀಡಿಯ ಧೂಮದಲಿ ಉಸಿರುಗಟ್ಟುತಿರುವಾಗ
ತಡಕಾಡಿದೆ ಅಂಗಿಯ ಮೂಲೆ ಮೂಲೆಗಳಲ್ಲಿ
ಅದಾಗಲೇ ನಿಜವರಿತದ್ದು,
ಆಸೆಗಳ ಓಟದಲಿ
ನಾನು ಜೇಬು ಹೊಲಿಸಿರಲಿಲ್ಲವೆಂದು!

Saturday, March 15, 2008

ಅಲೆಮಾರಿ ಬದುಕು

ಕನಸುಗಳ ಮರಳದಂಡೆಯಲಿ
ನೋವ ಹೊತ್ತು ನಡೆವೆವು
ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು
ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ
ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು
ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ

ಅಲೆಮಾರಿಗಳು ನಾವು,
ಬದುಕ ಅಲೆ ಸುಳಿಗೆ ಸಿಕ್ಕಿದರೂ
ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ
ಸಾಗುವೆವು ಇನ್ನೂ ಮುಂದೆ ಮುಂದೆ

ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ
ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು
ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ
ಎದೆಗೂಡಿನೊಳು ಚಿಗುರೊಡೆದ ನೆನಪುಗಳ
ಒರೆಸಿಟ್ಟ ಮುಗ್ದ ಬೆರಳು
ಬೆಳಕು ಸಾಯುವ ಮುನ್ನ ಬೀಡು ಸೇರುವ
ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು

ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು
ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ
ಉಸಿರ ಬಿಗಿ ಹಿಡಿದು ಬಿಕ್ಕಿ
ಅತ್ತಾಗ, ಬಾಹು ಬಲವಿಲ್ಲದೆ
ಬಾಹುಬಲಿಗಳಾದೆವು ಒಂದೆಡೆ
ಇನ್ನೊಂದೆಡೆ ಭವಿಷ್ಯ ನುಡಿಯುವ
ಮಂಡ ಕಪ್ಪೆಗಳಾಗಿ
ಸುಖದ ರೂಪದ ಬಯಕೆ ದುಃಖದಲಿ
ದಿನರಾತ್ರಿ ಹದವಾಗಿ ಹರಿಯುತಿರೆ
ಗುರಿಯಿರದ ದಾರಿಯೊಳು ತೆವಳುವೆವು
ನಿಡುಸುಯ್ವ ಕ್ಷಿತಿಜದಂಚಿಗೆ.

Friday, March 7, 2008

ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ರೀತಿಯಲ್ಲಿಯೂ ಮಹಿಳೆ ಶೋಷಣೆಗೊಳಗಾದರೆ, ಅದರಲ್ಲೂ ದೈಹಿಕ ಶೋಷಣೆಗೊಳಗಾದರೆ ಸಮಾಜವು ಅವಳ ಜೊತೆ ಹೇಗೆ ವರ್ತಿಸುತ್ತದೆ ಎಂಬುದು ಇಲ್ಲಿ ಪ್ರಧಾನವಾದುದು. ಹೆಣ್ಣಿನ ದೈಹಿಕ ಸುಖ ಬಯಸುವ ಪುರುಷ ವರ್ಗ ಯಾವ ಸಂದರ್ಭದಲ್ಲೂ ಬೇಕಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಬಹುದು. ಹಾಡಹಗಲೇ ಅದೆಷ್ಟೋ ಹೆಣ್ಣು ಮಕ್ಕಳು ಕಾಮದ ಬಲೆಗೆ ಬಿದ್ದು ನರಳುತ್ತಿರುವಾಗ ಇನ್ನು ರಾತ್ರಿ ಕಾಲದ ಬಗ್ಗೆ ಹೇಳುವುದೇನಿದೆ? ಹೆಣ್ಣು ಒಂಟಿ ಎಂದು ಅನಿಸಿದಾಕ್ಷಣ ಕಾಮಣ್ಣರ ಕಣ್ಣಿಗೆ ಗುರಿಯಾಗ ತೊಡಗುವ ಮಹಿಳೆಗೆ ಒಂದೆಡೆಯಾದರೆ, ಪುರುಷ ಜೊತೆಗಿದ್ದರೂ ಕೆಲವೊಮ್ಮೆ ಇಂತಹ ದುರಂತಗಳಿಗೆ ಎಡೆಯಾಗುವ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಪ್ರಸ್ತುತ ಹೊಸ ವರ್ಷ ದಿನಾಚರಣೆ ವೇಳೆ ಮುಂಬೈಯಲ್ಲಿ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ. ಹೆಣ್ಣು ಎಷ್ಟು ಸುರಕ್ಷಿತಳು ಎಂದು ಇದರಿಂದ ತಿಳಿಯುತ್ತದೆ. ಬರೀ ಪ್ರಾಯಕ್ಕೆ ಬಂದ ಹೆಣ್ಣು ಮಾತ್ರವಲ್ಲ ದಿನೇ ದಿನೇ ಹೆಣ್ಣು ಹಸುಗೂಸಿನಿಂದ ಹಿಡಿದು ವೃದ್ಧೆಯರ ವರೆಗೆ ಇಂದು ಮಾನಭಂಗಗಳು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವವರು ಯಾರು? ಅತ್ಯಾಚಾರಕ್ಕೊಳಗಾದ ಮಹಿಳೆಗೆ ಪರಿಹಾರ ಧನ ದೊರೆತರೆ ಹೋದ ಮಾನ ಹಿಂತಿರುಗಿ ಬರುವುದೇ? ಶೋಷಣೆಗೊಳಗಾದ ಮಹಿಳೆಯ ಮೇಲೆ ಅಯ್ಯೋ ! ಪಾಪ ಎಂದು ಕನಿಕರ ತೋರಿಸುವ ಸಮಾಜವು, ಇದಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದೆಯೇ??

ಒಂದೆಡೆ ದೇಶದಲ್ಲಿ ವೇಶ್ಯಾವಾಟಿಕೆ ದಿನೇ ದಿನೇ ಹೆಚ್ಚುತ್ತಾ ಬರುತ್ತಿರುವುದನ್ನು ನಾವು ಕಾಣಬಹುದು. ಇದಕ್ಕೆ ಪ್ರಧಾನ ಕಾರಣವೇನೆಂದು ನಾವು ಚಿಂತಿಸಿದ್ದೇವೆಯೇ ?ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮನೆಯ ಸಂಪಾದನೆ, ಮಕ್ಕಳ ಆರೈಕೆಗಾಗಿ ಮಾನ ಮಾರಬೇಕಾಗಿ ಬಂದ ಅದೆಷ್ಟೋ ಹೆಂಗಸರಿದ್ದಾರೆ. ಮನೆಯಲ್ಲಿನ ಕಷ್ಟಗಳನ್ನು ಪರಿಹರಿಸಲು ಮಗಳನ್ನು ಮಾರಿದ ಕಥೆಗಳನ್ನು ನಾವು ಕೇಳಿದ್ದೇವೆ, ಆಧುನಿಕತೆಯ ನಾಗಾಲೋಟದಲ್ಲಿ ಹಣ ಸಂಪಾದನೆಗಾಗಿ ಟಿವಿ, ಸಿನೆಮಾ, ಫ್ಯಾಷನ್ ಜಗತ್ತಿಗೆ ಕಾಲಿಡಲು ಬಯಸಿ ಮೋಸ ಹೋದ ಎಷ್ಟೋ ಹೆಣ್ಣು ಮಕ್ಕಳು ನಮ್ಮಡೆಯಲ್ಲಿಲ್ಲ?. ಪ್ರೇಮದ ನಾಟಕವಾಡಿ ಮೋಸದ ಬಲೆಗೆ ಬೀಳುವ ಅಬಲೆಯರು ಎಷ್ಟಿಲ್ಲ? ಕೆಲವೊಮ್ಮೆ ಸಂದೇಹಗಳ ಬಲೆಗೆ ಬಿದ್ದು ಸಾಮಾನ್ಯ ಹೆಂಗಸು ಕೂಡಾ ವೇಶ್ಯೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲ್ಪಡುತ್ತಾಳೆ. ಹಣ ಸಂಪಾದನೆಗಾಗಿ ದುಡಿಯಲು ಹೋದರೆ ಶಾರೀರಕವಾಗಿ ಶೋಷಣೆಗೊಳಪಟ್ಟು ಆತ್ಮಹತ್ಯೆ ಮಾಡಿದ ಮಹಿಳೆಯರ ಬಗ್ಗೆ ನಮಗೆ ತಿಳಿದಿದೆ. ಅಂತೂ ಒಟ್ಟಿನಲ್ಲಿ ಶಾರೀರಿಕವಾಗಿ ಶೋಷಣೆಗೊಳಗಾದಂತಹ ಮಹಿಳೆಗೆ ಸಮಾಜದಲ್ಲಿರುವ ಸ್ಥಾನ ಮಾನವೇನೆಂಬುದು ಇಲ್ಲಿ ಮುಖ್ಯ.

ಉದಾಹರಣೆಗೆ ಓರ್ವ ಹೆಣ್ಣು ಪ್ರೇಮದ ಬಲೆಯಲ್ಲಿ ಮೋಸ ಹೋದಳೆಂದೆನಿಸಿಕೊಳ್ಳಿ. ಇದರಲ್ಲಿ ಹೆಣ್ಣು ಮಾತ್ರ ತಪ್ಪುಗಾರಳೆಂದು ದೂಷಿಸಲಾಗುತ್ತದೆ. ಅಬಲೆಯಾದ ಹೆಣ್ಣು ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುವಾಗ ಪುರುಷ ತಲೆಯೆತ್ತಿ ನಡೆಯುತ್ತಿರುತ್ತಾನೆ. ಕಾನೂನು ಮೆಟ್ಟಲು ಹತ್ತಿದರೆ ಮಾನ ಹರಾಜಾಗುತ್ತದೆ ಎಂದು ಹೇಳುವ ಕುಟುಂಬ ಒಂದೆಡೆಯಾದರೆ ಕಾನೂನು ಬಾಗಿಲು ತಟ್ಟಿಯೂ ಕೊನೆಗೆ ಪ್ರತಿಫಲ ಸಿಗುವುದಾದರೂ ಏನು? ಅತ್ಯಾಚಾರ ಮಾಡಿದವನೊಂದಿಗೆ ಜೀವನ ನಡೆಸುವುದು ಎಂದು ತೀರ್ಮಾನ ಜ್ಯಾರಿಯಾದರೆ ಇಲ್ಲಿ ಆರೋಪಿಯ ತಪ್ಪು ಮನ್ನಿಸಲ್ಪಡುತ್ತದೆ. ತದನಂತರ ಅವರ ದಾಂಪತ್ಯದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿಗೆ ಎಲ್ಲವೂ ಮುಗಿದಂತೆ! ಕೆಲವೊಮ್ಮೆ ಅಪರಾಧಿಯ ವಿರುದ್ದ ಕ್ರಮ ಕೈಗೊಂಡರೂ ಸಮಾಜವು ಅವಳನ್ನು ನಾಯಿ ಮಟ್ಟಿದ ಮಡಿಕೆಯಂತೆ ದೂರವಿರಿಸುವುದಿಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ದೈಹಿಕ ಶೋಷಣೆಯೊಂದಿಗೆ ಮಾನಸಿಕ ಶೋಷಣೆಯನ್ನು ಅನುಭವಿಸಬೇಕಾದ ಸ್ಥಿತಿ ಅವಳಿಗೆ ಬರುತ್ತದೆ. ಇಂತಹ ಸಂಕಟ ತಾಳಲಾರದೆ ಆತ್ಮಹತ್ಯೆಗೆ ಮೊರೆಹೋಗುವವರು ಅನೇಕ ಮಂದಿ ಇದ್ದಾರೆ. ಇಲ್ಲಿಗೆ ಕತೆ ಮುಗಿಯುವುದಿಲ್ಲ. ಆತ್ಮಹತ್ಯೆಯ ನಂತರವೂ ನಾನಾ ವಿಧದ ದೋಷಾರೋಪಗಳ ಪಟ್ಟಿಯೂ ಆಕೆಯನ್ನು ಅವಳ ಕುಟುಂಬವನ್ನೂ ಬೆನ್ನಟ್ಟುತ್ತದೆ. ಅಂತೂ ಶೋಷಣೆಯ ಕತೆ ಮೆಗಾ ಧಾರವಾಹಿಯಂತೆ ಮುಂದುವರಿಯುತ್ತದೆ.

ಈ ಮೊದಲೇ ಉಲ್ಲೇಖಿಸಿದಂತೆ ಸಮಾಜದಲ್ಲಿ ವೇಶ್ಯೆಯರ ಸಂಖ್ಯೆ ದಿನೇ ದಿನೇ ವರ್ಧಿಸುತ್ತಾ ಬರುತ್ತಿದ್ದು, ಇಂದು ದೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಹಿಳೆಯರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂಬ ಉದ್ದೇಶದಿಂದ ಕೆಲವರು ವೇಶ್ಯಾವಾಟಿಕೆ ದಂಧೆಗೆ ಇಳಿದರೆ, ಅಬಲೆಯಾದ ಸ್ತ್ರೀಯ ಮೇಲೆ ದೌರ್ಜನ್ಯವೆಸಗಿ, ತದನಂತರ ಸಮೂಹದಿಂದ ಅವಳನ್ನು ದೂರವಿಟ್ಟಾಗ ದಾರಿ ಕಾಣದೆ ಮೈ ಮಾರಬೇಕಾಗಿ ಬಂದ ಹೆಂಗಸರು, ತನ್ನ ಗಂಡನಿಂದಲೇ ಇತರರಿಗೆ ಹಾದರ ಹಂಚಲು ಪ್ರೇರಿತರಾದ ಮಹಿಳೆಯರು, ಬುದ್ದಿ ಬೆಳೆಯುವ ಮುನ್ನ ಗೋಮುಖ ವ್ಯಾಘ್ರನಂತಿರುವ ಗಂಡಸರ ಬಲೆಗೆ ಬಿದ್ದು ಮಾನ ಕಳೆದು ಕೊಂಡವರು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಮಹಿಳೆ ಇಂತಹ ದಂಧೆಗೆ ಇಳಿಯಬೇಕಾಗಿ ಬರುತ್ತದೆ. ಇವುಗಳಿಗೆಲ್ಲಾ ಕಾರಣಕರ್ತರು ಯಾರು ? ವೇಶ್ಯೆಯಾಗಿ ಪರಿವರ್ತನೆಯಾಗಲು ಅವಳಿಗೆ ಕಾರಣವಾದವುಗಳಾವುವು ಎಂಬುದನ್ನು ನಾವು ಗಮನಿಸಿದ್ದೇವೆಯೇ ? ವೇಶ್ಯೆಯನ್ನು ಕಂಡು ಮೂಗು ಮುರಿಯುವ ಜನರೇ ಒಂದು ವೇಳೆ ಸಮೂಹದಲ್ಲಿ ವೇಶ್ಯೆಯರೇ ಇಲ್ಲ ಅಂದು ತಿಳಿದುಕೊಳ್ಳಿ. ಕಾಮತೃಷೆ ಮಿತಿ ಮೀರಿದ ಪುರುಷರು ಸಿಕ್ಕ ಸಿಕ್ಕ ಸ್ತ್ರೀಗಳ ಮೇಲೆ ಅತ್ಯಾಚಾರ ಮಾಡಲು ಮುಂದಾಗಲಿಕ್ಕಿಲ್ಲವೇ? ಆದುದರಿಂದ ಸಮಾಜದ ಸಮತೋಲನವನ್ನು ಕಾಪಾಡಲು ವೇಶ್ಯೆಯರು ಸಹಾಯವಾಗುವುದಿಲ್ಲವೇ?

ಬಹಳ ಹಿಂದಿನ ಕಾಲದಿಂದಲೇ ವೇಶ್ಯೆಯರು ಕಂಡು ಬರುತ್ತಿದ್ದರು, ಆದರೆ ಇದೀಗ ಅವರ ಸಂಖ್ಯೆಯಲ್ಲಿ ವರ್ಧನೆ ಕಂಡು ಬಂದಿರುವುದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ನಾವು ಚಿಂತಿಸಲು ಮುಂದಾಗುತ್ತೇವೆಯೇ? ಬರೀ ವೇಶ್ಯೆಯರನ್ನು ಮಾತ್ರವಲ್ಲ ಅವರ ಮಕ್ಕಳನ್ನೂ ನಾವು ಕೆಟ್ಟ ದೃಷ್ಟಿಯಿಂದಲೇ ನೋಡುವುದಿಲ್ಲವೇ? ಸಂತ ಕವಿ ಕಬೀರ್ ದಾಸ್ ಮಾತಿನಂತೆ ಮದ್ಯ(ಶೇಂದಿ) ಮಾರುವ ಹೆಣ್ಣಿನ ಕೈಯಲ್ಲಿ ಹಾಲು ಕಂಡರೂ ಅದು ಶೇಂದಿಯೆಂದೇ ಎಂದೇ ಸಮಾಜವು ತಿಳಿದು ಕೊಳ್ಳುತ್ತದೆ. ಅಂತೆಯೇ ವೇಶ್ಯೆಯು ಮುಂದೆ ವೇಶ್ಯಾ ವೃತ್ತಿಗೆ ವಿದಾಯ ಹೇಳಲು ಬಯಸಿದರೂ ಸಮಾಜವು ಅವರ ಪೂರ್ವ ಜೀವನವನ್ನೇ ಬೊಟ್ಟು ಮಾಡಿ ತೋರಿಸುತ್ತದೆ. ಅವರನ್ನು ಅದೇ ದೃಷ್ಟಿಯಿಂದ ನೋಡಿಕೊಂಡು ಮೇಲೇಳದಂತೆ ಮಾಡುವ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕಾದರೆ ಅವರು ಪಡುವ ಪಾಡುಗಳು ಅಷ್ಟಿಷ್ಟಲ್ಲ. ವೇಶ್ಯೆ ಎಂದರೆ ಮೂಗು ತೂರಿಸಿಕೊಳ್ಳುವ ಸಮಾಜದಲ್ಲಿ ಇವರಿಗೆ ಜೀವನ ನಡೆಸುವ ಹಕ್ಕಿಲ್ಲವೇ ? ಒಂದು ವೇಳೆ ಅವರ ಬದುಕಿನ ಬಂಡಿ ಸಾಗಿಸಿ ತಮ್ಮಷ್ಟಕ್ಕೆ ಜೀವನ ನಡೆಸುವ ವೇಶ್ಯೆಯರ ಮೇಲೆ ನಡೆಯುತ್ತಿರುವ ಶಾರೀರಿಕ, ಮಾನಸಿಕ ಪೀಡನೆಗಳಿಂದ ಮುಕ್ತಿ ನೀಡಲು ಸಮಾಜಕ್ಕೆ ಸಾಧ್ಯವೇ ????

ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ?


ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಅವರ ಉದ್ಯೋಗ ಮತ್ತು ಅವರಿಗೆ ದೊರೆಯುವಂತಹ ವೇತನದ ಬಗ್ಗೆಯೂ ನಾವು ಮನನ ಮಾಡಬೇಕಾಗಿದೆ.


ಕಾರ್ಪೋರೇಟ್‌ಗಳ ಜೀವನ ಶೈಲಿಯಿಂದ ಒಂದು ಕ್ಷಣ ಹೊರಗೆ ಬಂದು ಮಧ್ಯಮ ವರ್ಗದ ಅಥವಾ ಗ್ರಾಮೀಣ ಜನರ ಬದುಕಿನ ಪುಟವನ್ನು ತಿರುವಿ ನೋಡಿದರೆ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದಿರುವ ಜನರೆಂದು ಬಣ್ಣಿಸಲ್ಪಡುವ ಗ್ರಾಮೀಣ ಜನರಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜನರು ಹಗಲು ರಾತ್ರಿಗಳೆಂದು ದುಡಿಯುತ್ತಿರುತ್ತಾರೆ. ಆದರೆ ತಾವು ಮಾಡುವ ಕೆಲಸಕ್ಕೆ ದೊರೆಯುವ ವೇತನದಲ್ಲಿ ಸಮಾನತೆ ಇದೆಯೇ? ಉದಾಹರಣೆಗೆ ಗ್ರಾಮ ಪ್ರದೇಶದಲ್ಲಿ ತೋಟದ ಕೆಲಸ ಮಾಡುವ ಹೆಂಗಸರನ್ನು ಮತ್ತು ಗಂಡಸರ ವಿಷಯವನ್ನೇ ತೆಗೆದುಕೊಳ್ಳಿ. ಇಬ್ಬರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ಗಂಡಸರಿಗೆ ಅಧಿಕ ವೇತನ, ಹೆಣ್ಣು ಎಷ್ಟೇ ಕೆಲಸ ಮಾಡಿದರು ಹೆಣ್ಣೆಂಬ ನೆಪಕ್ಕೆ ಅವಳಿಗೆ ಕಡಿಮೆ ಸಂಬಳವೇಕೆ? ಹೆಣ್ಣು ಮತ್ತು ಗಂಡು ಇವರ ಕೆಲಸಗಳನ್ನು ಹೋಲಿಸಿದರೆ ಗಂಡು ಮಾಡುವಂತಹ ಕೆಲಸ ತುಸು ಕಠಿಣವಾಗಿದ್ದಿರಬಹುದು, ಹೆಣ್ಣಿಗೆ ಅಷ್ಟು ದೈಹಿಕ ಸಾಮರ್ಥ್ಯವಿಲ್ಲದೇ ಇರಬಹುದು ಆದರೆ ಗ್ರಾಮಗಳಲ್ಲಿ ಗಂಡು ಹೆಣ್ಣಿನ ವೇತನಗಳಿಗೇಕೆ ಸಮಾನತೆ ಕಂಡು ಬಂದಿಲ್ಲ?


ನನಗೆ ತಿಳಿದಂತೆ ತೋಟದಲ್ಲಿ(ಗ್ರಾಮಗಳಲ್ಲಿ) ಕೆಲಸ ಮಾಡುವ ಪುರುಷರಿಗೆ ದಿನಕ್ಕೆ 120ರೂ. ಸಂಬಳ ನೀಡುತ್ತಿದ್ದರೆ, ಹೆಂಗಸರಿಗೆ 80 ರೂ. ನೀಡಲಾಗುತ್ತದೆ. ಇವರಿಬ್ಬರ ಕೆಲಸಗಳನ್ನು ತಾರತಮ್ಯ ಮಾಡಿದರೆ ಗಂಡಸರು ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಹೆಂಗಸರು ಮಾಡುತ್ತಿದ್ದು, ಅದೂ ಮಾತ್ರವಲ್ಲ ಹೆಂಗೆಳೆಯರು ಮಾಡುವ ಕೆಲಸಗಳು ಹೆಚ್ಚು ನಿಖರ ಮತ್ತು ಅಚ್ಚುಕಟ್ಟಾಗಿರುತ್ತದೆ. ಎಷ್ಟೇ ಚುರುಕಿನಿಂದ ಕೆಲಸ ಮಾಡಿದರೂ ಮಹಿಳೆಗೆ ಸಿಗುವ ವೇತನ ಯಾವಾಗಲೂ ಕಡಿಮೆಯೇ. ಗಂಡಸರಿಗೆ ಕುಟಂಬದವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ತನ್ನ ಮಡದಿ ಮಕ್ಕಳ ಜೀವನ ಸಾಗಿಸಲು ಅವರಿಗೆ ಹೆಚ್ಚಿನ ಸಂಬಳವನ್ನು ನೀಡಲಾಗುತ್ತಿದೆ ಎಂದು ವಾದಿಸಿದರೂ ಗಂಡನನ್ನು ಕಳೆದುಕೊಂಡು ಬೇರೆ ಯಾರನ್ನೂ ಅವಲಂಬಿಸದೆ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮವಾಗಿ ಜೀವನ ನಿರ್ವಹಿಸುವ ಒಂಟಿ ಮಹಿಳೆಯರು ನಮ್ಮಲ್ಲಿಲ್ಲವೇ ? ಕೃಷಿ ಕುಂಠಿತಗೊಂಡಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ವಿಧವೆಯರು ತನ್ನ ಗಂಡನ ಕಾಯಕವನ್ನೇ ಮುಂದುವರಿಸಿದರೂ ಪುರುಷ ಸಮಾನವಾದ ವೇತನವನ್ನು ನೀಡಲಾಗುತ್ತಿದೆಯೇ ? ಭಾರತದಲ್ಲಿ 30 ಮಿಲಿಯನ್ ವಿಧವೆಯರು ಗಂಡಿನ ಆಸರೆಯಿಲ್ಲದೆ ಬದುಕು ಸಾಗಿಸುತ್ತಿಲ್ಲವೇ ? ಕೃಷಿಕಾರ್ಯಗಳಲ್ಲಿ ಅತೀ ಹೆಚ್ಚು ತಾಳ್ಮೆಯನ್ನುಪಯೋಗಿಸಿ ಕೆಲಸ ಮಾಡುವವರು ಮಹಿಳೆಯರಲ್ಲವೇ ? ಕಳೆ ಕೀಳುವುದು, ಜೊಳ್ಳು ತೆಗೆಯುವುದು ಮೊದಲಾದ ಚಿಕ್ಕ ಕೆಲಸಗಳನ್ನು ಮಹಿಳೆಗೆ ವಹಿಸಿಕೊಡಲಾಗಿದ್ದರೂ ಅದನ್ನು ಅತೀ ತಾಳ್ಮೆಯಿಂದ ಚೊಕ್ಕಟವಾಗಿ ಕೆಲಸ ಮಾಡಲು ಸಾಧ್ಯವಿರುವುದು ಮಹಿಳೆಯರಿಗೆ ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ.


ಇನ್ನು ಕೈಗಾರಿಕಾ ಕ್ಷೇತ್ರದತ್ತ ಗಮನ ಹರಿಸಿದರೆ ಬಹುತೇಕ ಮಂದೆ ಕೈಗಾರಿಕಾ ಉದ್ಯಮಿಗಳು ಮಹಿಳೆಯರೇ ಆಗಿರುವುದನ್ನು ಕಾಣಬಹುದು. ಅದು ಗುಡಿ ಕೈಗಾರಿಕೆ ಇರಲಿ, ಕಾರ್ಖಾನೆಯಾಗಿರಲಿ ಅಲ್ಲಿ ಮಹಿಳೆಯರದ್ದೇ ಹೆಚ್ಚು ಪಾಲು. ನೇಯ್ಗೆಯಾಗಲಿ, ಕಸೂತಿ ಕೆಲಸವಿರಲಿ ಅಥವಾ ಮನೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆಯೇ ಆಗಿರಲಿ, ಅತೀ ತಾಳ್ಮೆಯಿಂದ ಮಾಡಬೇಕಾದಂತಹ ಏನೇ ಕೆಲಸವಿರಲಿ ಮಹಿಳೆಯರೇ ಅಂತಹ ಕಾರ್ಯಗಳಿಗೆ ನಿಯೋಜಿಸಲ್ಪಡುತ್ತಾರೆ. ಅವರು ಮಾಡುವ ಕಾರ್ಯದಲ್ಲಿ ಅಷ್ಟೇ ಪ್ರಾಮಾಣಿಕತೆ, ವಸ್ತು ನಿಷ್ಠೆಗಳು ಮೈಗೂಡಿಸಿಕೊಂಡಿರುವುದರಿಂದಲೇ ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆದರೂ ವೇತನದಲ್ಲಿ ಸಮಾನತೆ ಎಂಬುದು ಇಂದಿಗೂ ಬಗೆಹರಿಯಲಾರದ ಪ್ರಶ್ನೆಯಾಗಿದೆ.

ಗ್ರಾಮಗಳಿಂದ ನಗರಗಳತ್ತ ಮುಖ ಮಾಡಿದರೆ ಐಟಿ ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಂತೂ ಗಣನೀಯ ವರ್ಧನೆ ಕಂಡು ಬರುತ್ತಿರುವುದು ಕಾಣಬಹುದು. ರಾತ್ರಿ ಹಗಲು ದುಡಿಯುವುದರಲ್ಲೂ ಮಹಿಳೆ ಸೈ ಎಂದೆನಿಸಿಕೊಂಡಿದ್ದಾಳೆ. ಐಟಿ-ಬಿಟಿ ಕ್ಷೇತ್ರಗಳಲ್ಲಿ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ಕಾಲ್ ಸೆಂಟರ್‌ಗಳಲ್ಲಿ ಅತೀ ತಾಳ್ಮೆಯಿಂದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ, ಕಂಪೆನಿಗಳಲ್ಲಿ ಹೆಚ್ ಆರ್( ಮಾನವ ಸಂಪನ್ಮೂಲ ಕಾರ್ಯನಿರ್ವಾಹಣಾಧಿಕಾರಿ) ಈ ಎಲ್ಲಾ ಹುದ್ದೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಮಹಿಳೆಯರು ತಮ್ಮ ಜಾಣತನವನ್ನು ಮೆರೆದಿದ್ದಾರೆ. ಯಾವುದೇ ನೌಕರಿ ಆಗಿದ್ದರೂ ತಮಗೆ ದೊರೆಯುವ ಕನಿಷ್ಠ ಸಂಬಳದಿಂದ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿಯೂ ಮಹಿಳೆ ಪುರುಷ ವರ್ಗಕ್ಕಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎಂದು ಹೇಳಬಹುದು.


ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತಿಸಿದರೆ ಜಗತ್ತಿನ ಆಹಾರೋತ್ಪಾದನೆಯಲ್ಲಿ ಬಹುಪಾಲು ಮಹಿಳೆಯೆರೇ ಶ್ರಮ ವಹಿಸುತ್ತಾರೆ. ಆಫ್ರಿಕಾ ಮತ್ತು ಕೆರೆಬಿಯನ್ ರಾಷ್ಟ್ರಗಳಲ್ಲಿ 80% ಆಹಾರೋತ್ಪಾದನೆಯಲ್ಲಿ ಮಹಿಳೆಯರು ದುಡಿದರೆ, ಏಷ್ಯಾದಲ್ಲಿ 50% ಮಹಿಳೆಯರು ದುಡಿಯುತ್ತಾರೆ. ಲ್ಯಾಟಿನ್ ಅಮೆರಿಕದಲ್ಲಿ ಬಹುತೇಕ ಮಹಿಳೆಯರು ಕೃಷಿ, ಜೇನುಸಾಕಣೆ, ಪಶು ಪಾಲನೆ ಮೊದಲಾದ ಕಾರ್ಯಗಳಲ್ಲಿ ದುಡಿದು ದೇಶದ ಅಭಿವೃದ್ದಿಗೆ ಬೆನ್ನೆಲುಬಾಗಿದ್ದಾರೆ. ಯುನಿಸೆಫ್ ಸಂಘಟನೆಯು 2007ರಲ್ಲಿ ಪ್ರಕಟಿಸಿದ ವರದಿಯಲ್ಲಿ ವಿಶ್ವದ ಮಕ್ಕಳ ಸ್ಥಿತಿಗತಿಯು ಮಹಿಳೆಯರ ಸ್ಥಿತಿಗತಿಗಳಿಗೆ ಅನುರೂಪವಾಗಿದ್ದು, ಮಹಿಳೆಯ ಆರ್ಥಿಕ ಸ್ವಾವಲಂಬನೆಯು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ.


ಯುನಿಸೆಫ್ ಸಂಘಟನೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆಂಬುದನ್ನು ಉಲ್ಲೇಖಿಸಿದ್ದು ಪ್ರಸ್ತುತ ಕೆಳಗೆ ನೀಡಿದಂತಹ ಅಂಕಿ ಅಂಶವು ಇದಕ್ಕೆ ಪೂರಕವಾಗಿದೆ.


ರಾಷ್ಟ್ರಗಳು ಮತ್ತು ಅಲ್ಲಿನ ಸ್ತ್ರೀ- ಪುರುಷ ವಾರ್ಷಿಕ ವೇತನದ ಅಂಕಿ ಅಂಶ(ಅಮೆರಿಕನ್ ಡಾಲರ್‌ಗಳಲ್ಲಿ)


ಕೈಗಾರಿಕಾ ಪ್ರಾಧಾನ್ಯವಿರುವ ರಾಷ್ಟ್ರಗಳು - ಸ್ತ್ರೀ - 21%, ಪುರುಷ - 37%

ಲ್ಯಾಟಿನ್ ಅಮೆರಿಕ ಮತ್ತು ಕರೇಬಿಯನ್ - ಸ್ತ್ರೀ - 4.6%, ಪುರುಷ - 8%

ಐರೋಪ್ಯ ಮತ್ತು ಕಾಮನ್‌ವೆಲ್ತ್ ಸ್ವತಂತ್ರ ರಾಷ್ಟ್ರಗಳು - ಸ್ತ್ರೀ - 4%, ಪುರುಷ - 10%

ಪೂರ್ವ ಏಷ್ಯಾ ಮತ್ತು ಪೆಸಿಫಿಕ್ - ಸ್ತ್ರೀ - 4%, ಪುರುಷ - 6.5%

ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ - ಸ್ತ್ರೀ - 2%, ಪುರುಷ - 7%

ದಕ್ಷಿಣ ಏಷ್ಯಾ - ಸ್ತ್ರೀ - 1%, ಪುರುಷ - 2.5

ಆಫ್ರಿಕಾ - ಸ್ತ್ರೀ - 1%, ಪುರುಷ - 2%


ಇದು ಮಾತ್ರವಲ್ಲದೆ ಇತ್ತೀಚೆಗೆ ವೇತನ ಸಮಾನತೆಯ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ಒಕ್ಕೂಟಗಳು ಪ್ರಕಟಿಸಿದ ವರದಿಯಲ್ಲಿ ವಿಶ್ವದಲ್ಲಿ ಮಹಿಳಾ ಉದ್ಯೋಗಿಗಳು ಪುರುಷ ಉದ್ಯೋಗಿಗಳಿಗಿಂತ 16 ಪ್ರತಿಶತ ಕಡಿಮೆ ವೇತನವನ್ನು ಗಳಿಸುತ್ತಿದ್ದಾರೆ ಎಂಬ ಅಂಶವನ್ನು ಎತ್ತಿ ಹಿಡಿದಿದೆ. ಪ್ರಸ್ತುತ ವರದಿಯಲ್ಲಿ ಜಗತ್ತಿನ 63 ದೇಶಗಳಲ್ಲಿನ ವೇತನದ ಅಂತರವನ್ನು ಲೆಕ್ಕ ಹಾಕಲಾಗಿದ್ದು, ಇದರಲ್ಲಿ ಸ್ತ್ರೀಯರ ವೇತನ ಮತ್ತು ಪುರುಷರ ವೇತನದಲ್ಲಿ 15.6 ಪ್ರತಿಶತ ಅಂತರ ಕಂಡು ಬಂದಿದೆ. ಯುರೋಪ್ ,ಒಸೇನಿಯಾ, ಲ್ಯಾಟಿನ್ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಅತ್ಯಧಿಕ ವೇತನಗಳಲ್ಲಿ ಅತ್ಯಧಿಕ ಅಂತರವಿರುವುದು ಕಂಡು ಬಂದಿದೆ. ಆದರೆ ಬಹರೈನ್‌ನ ಮಧ್ಯ ಪೂರ್ವ ದೇಶಗಳಲ್ಲಿ ಮಾತ್ರ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಮಹಿಳೆಯರ ಸಂಖ್ಯೆ ಅತೀ ಕಡಿಮೆಯಾಗಿದ್ದು, ಆದುದರಿಂದಲೇ ಮಹಿಳೆಯರ ವೇತನವು ಪುರುಷರ ವೇತನಕ್ಕಿಂತ 40 ಪ್ರತಿಶತ ಅಧಿಕವಾಗಿದೆ. ಪ್ರಸ್ತುತ ವರದಿಯಲ್ಲಿ ಇಂತಹ ಅಂತರಗಳು ಹೆಚ್ಚಾಗಿ ಸ್ತ್ರೀ ಪ್ರಾಬಲ್ಯವಿರುವ ಕ್ಷೇತ್ರಗಳಾದ ವಿದ್ಯಾಭ್ಯಾಸ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ ಎಂದು ಉಲ್ಲೇಖಿಸಿದ್ದು , ಸಾರ್ವಜನಿಕ ಕಾರ್ಯನಿರ್ವಹಣೆ, ಸಾಮಾಜಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಹೆಚ್ಚಿನ ಅಂತರಗಳು ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ. ಜಗತ್ತಿನ ಎಲ್ಲೆಡೆಗಳಲ್ಲೂ ಮಹಿಳೆಯರ ವೇತನದ ಸರಿ ಸಮಾನತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆದು ಬರುತ್ತಿದ್ದರೂ ಇಂದಿನ ವರೆಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರು ಮುಂದೆ ಬರಬೇಕಾಗಿದೆ. ಪುರುಷ ಸ್ತ್ರೀ ವೇತನದ ನಡುವೆ ಇರುವ ಈ ಅಂತರಕ್ಕೆ ಪ್ರಧಾನ ಕಾರಣ ಏನೆಂಬುದರ ಬಗ್ಗೆ ಫ್ರೊಫೆಸರ್ ಲಿಂಡಾ ಸಿ.ಬಾಬ್‌ಕೋಕ್ ಅವರು ತಮ್ಮ ಪುಸ್ತಕವಾದ "ವುಮನ್ ಡೋಂಟ್ ಆಸ್ಕ್:ನೆಗೋಶಿಯೇಷನ್ ಏಂಡ್ ದ ಜೆಂಡರ್ ಡಿವೈಡ್ "ನಲ್ಲಿ "ಮಹಿಳೆಯರು ಹೆಚ್ಚಾಗಿ ತಮಗೆ ದೊರೆತ ಉದ್ಯೋಗದಲ್ಲಿ ತೃಪ್ತಿಕಾಣುವವರು ಅದರಂತೆಯೇ ಅವರು ತಮ್ಮ ವೇತನದ ಬಗ್ಗೆ ಸಂಧಾನ ಮಾತುಕತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ.ಇದರಿಂದಾಗಿಯೇ ಸಂಸ್ಥೆಗಳು ನೀಡಿದ ವೇತನದಲ್ಲಿಯೇ ತೃಪ್ತಿಕಂಡುಕೊಳ್ಳುತ್ತಾರೆ "ಎಂದು ಬರೆದಿದ್ದಾರೆ. ಇಲ್ಲಿ ಉಲ್ಲೇಖಿಸಿದಂತಹ ಲಿಂಡಾ ಅವರ ಮಾತು ಅಕ್ಷರಶ ಸತ್ಯ! ಅದಕ್ಕಾಗಿ ಮಹಿಳೆಯರು ತಮ್ಮ ಸಮಾನತೆಗೆ ಹೋರಾಟ ನಡೆಸುವಾಗ ಆರ್ಥಿಕ ಸಮಾನತೆಯ ಬಗ್ಗೆಯೂ ಮಾತೆತ್ತಬೇಕು. ಆಗ ಮಾತ್ರ ಸುದೃಢವಾದ ಆರ್ಥಿಕ ತಳಹದಿಯಲ್ಲಿ ಮಹಿಳೆಯು ಎದ್ದು ನಿಲ್ಲಲು ಸಾಧ್ಯ....

Wednesday, February 13, 2008

ಒಲವಿನ ಉಡುಗೊರೆ ಕೊಡಲೇನು..

ವ್ಯಾಲೆಂಟೇನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಅವಳಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ರಾತ್ರಿ ಮುಗ್ಗುಲ ಬದಲಿಸಿ ಕಾಲ ಕಳೆದರೂ ತನ್ನ ಪ್ರಿಯತಮನಿಗೆ ಯಾವ ರೀತಿಯ ವ್ಯಾಲೆಂಟೇನ್ಸ್ ಡೇ ಗಿಫ್ಟ್ ಕೊಡಲಿ ಎಂದು ಅವಳು ಪದೇ ಪದೇ ಚಿಂತಿಸುತ್ತಿದ್ದಳು . ಅವನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಸುಮ್ ಸುಮ್ನೆ ನಕ್ಕು ಅಪ್ಪಿಕೊಳ್ಳುತ್ತಿದ್ದ ತಲೆದಿಂಬು, ಒಂದು ಗಳಿಗೆ ಅವನಿಂದ ದೂರವಿರಲಾರದೆ ಚಡಪಡಿಸುವಾಗ ಕಣ್ಣೀರು ಸುರಿದು ಮುಸು ಮುಸು ಅತ್ತು ಮುಖ ಮರೆಸಿಕೊಂಡ ಆ ದಿಂಬು..ಅಬ್ಬಾ ಮನಸ್ಸಿನ ಎಷ್ಟು ಭಾವನೆಗಳನ್ನು ನಾವು ಆ ದಿಂಬಿನೊಂದಿಗೆ ಹಂಚಿಕೊಳ್ಳುವುದಿಲ್ಲ!!!.

ಗಿಫ್ಟ್ ..ಗಿಫ್ಟ್ ಅದು ಮಾತ್ರವೇ ಇದೀಗ ಅವಳ ಕನಸು ಮನಸ್ಸಿನಲ್ಲಿತ್ತು. ಯಾವ ತರದ ಉಡುಗೊರೆ ನೀಡಿ ತನ್ನ ಪ್ರೀತಿಯನ್ನು ಪ್ರಕಟಿಸಲಿ? ಸಾಗರದಷ್ಟು ಆಳವೂ ಆಗಸದಂತೆ ವಿಶಾಲವಾಗಿರುವ ನನ್ನ ಪ್ರೀತಿಯನ್ನಳೆಯಲು ಈ ಒಂದು ಉಡುಗೊರೆಗೆ ಸಾಧ್ಯವೇ? ಪ್ರೇಮ ಲೋಕದಲ್ಲಿ ಹಲವು ಕಾಲ ವಿಹರಿಸಿದವರಿಗೆ ಕಳೆದ ವ್ಯಾಲೆಂಟೇನ್ಸ್ ಗಿಫ್ಟ್ ಗಿಂತ ಮಿಗಿಲಾದದ್ದು ಈ ಬಾರಿ ನೀಡ ಬೇಕೆನಿಸಿದರೆ, ಮೊದ ಮೊದಲು ಹೊಸ ಚಿಗುರ ಪ್ರೇಮಕ್ಕೆ ಯಾವ ಉಡುಗೊರೆ ಆರಿಸ ಬೇಕೆಂಬ ಗೊಂದಲ. ಇನ್ನು ಕೆಲವರಿಗೆ ಗಿಫ್ಟ್ ಆರಿಸಿ ಆಯ್ತು ಅದನ್ನು ಕೊಡುವುದೇಗೆ? ಪಡೆಯುವುದು ಹೇಗೆ? ಒಂದು ವೇಳೆ ಗಿಫ್ಟ್ ಸಿಕ್ಕಿದರೆ ಅದನ್ನು ಮನೆಯವರ ಮುಂದೆ ಹೇಗೆ ಬಚ್ಚಿಡ ಬೇಕೆಂಬ ಸಮಸ್ಯೆ. ಅದನ್ನು ಚಿರಕಾಲ ಕಾಪಾಡಿ ಕೊಂಡು ಬಂದು "ಯಹ್ ಪ್ಯಾರ್ ಕಿ ನಿಶಾನಿ ಹೆ" ಎಂದು ಕಾಲಗಳ ನಂತರ ಕುರುಹಾಗಿ ತೋರಿಸುವ ಹಂಬಲ. ಅಂತೂ ಒಟ್ಟಿನಲ್ಲಿ ಪ್ರೇಮದ ಲೋಕದಲಿ ಉಡುಗೊರೆಗೊಂದು ವಿಶಿಷ್ಟ ಸ್ಥಾನವಿದೆಯಲ್ಲಾ?

ಇತ್ತ ಹುಡುಗನೂ ಅದೇ ರೀತಿ ಚಡ ಪಡಿಸುತ್ತಾನೆ, ತನ್ನ ಪ್ರಿಯತಮೆಯ ಪ್ರೀತಿ ನಗೆಯನ್ನು ಕಾಣಲು ಯಾವ ತರದ ಉಡುಗೊರೆ ಕೊಡಬೇಕೆಂದು ಯೋಚಿಸುತ್ತಾನೆ. ಅಂತೂ ಗಿಫ್ಟ್ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವವರೂ ಹೆಣ್ಣು ಮಕ್ಕಳೇ !

ಸಂಪಾದನೆಗೆ ಕಾಲಿಡದವರು ಇಲ್ಲ ಸಲ್ಲದ ನೆಪ ಹೇಳಿ ಅಥವಾ ಕಂಜೂಸ್ ಬುದ್ದಿ ತೋರಿಸಿಯಾದರೂ ಹಣ ಕೂಡಿಸುತ್ತಾರೆ. ಆ ಹಣದಿಂದ ತಮ್ಮ ಪ್ರಿಯತಮನಿಗೆ ಉಡುಗೊರೆ ನೀಡುವುದರಲ್ಲಿಯೇ ಖುಷಿಯನ್ನು ಅನುಭವಿಸುತ್ತಾರೆ. ಆದರೆ ಬಹುತೇಕ ಹುಡುಗರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಕೈಲಾಗುವ ಉಡುಗೊರೆಯನ್ನು ಮಾತ್ರ ನೀಡುತ್ತಾರೆ, ಇಲ್ಲದಿದ್ದರೆ ಒಂದು ಚೆಂಗುಲಾಬಿಯನ್ನು ತಮ್ಮ ಪ್ರಿಯತಮೆಗಿತ್ತು " ಐ ಲವ್ ಯೂ" ಎಂದು ಹೇಳಿದರೆ ಹುಡುಗಿ ನಾಚಿ ನೀರಾಗಿ ಮೌನ ಸಮ್ಮತವೆಂಬಂತೆ ಸಂಭ್ರಮಿಸುತ್ತಾಳೆ. ಕೆಲವೊಮ್ಮೆ "ಐ ಲವ್ ಯು ಟೂ" ಎಂದು ದನಿಗೂಡಿಸ ಬಹುದು.

ಅಂತೂ ಕೆಂಪು ಗುಲಾಬಿಯೇ ಎಲ್ಲ ಉಡುಗೊರೆಗಿಂತಲೂ ಮಿಗಿಲು. ಪ್ರೀತಿಯ ದ್ಯೋತಕವಾದ ಚೆಂಗುಲಾಬಿಗೆ ಮನ ಸೋಲದವರು ಯಾರಿದ್ದಾರೆ? ಟೆಡ್ಡಿ ಬೇರ್, ವಜ್ರದ ಉಂಗುರ, ಲವ್ ಯೂ ಎಂದು ಬರೆದ ಪಫೀ ರೆಡ್ ಹಾರ್ಟ್ ಇದ್ಯಾವುದೇ ಇರಲಿ ಎಲ್ಲದಕ್ಕಿಂತಲೂ ಚೆಂಗುಲಾಬಿಗೆ ಅಗ್ರ ಸ್ಥಾನ ಇಂತಿರುವಾಗ ಗುಲಾಬಿಯನ್ನು ಪ್ರೀತಿಯ ಕಾಣಿಕೆಯಾಗಿ ನೀಡುವುದಲ್ಲವೇ ಒಳ್ಳೆಯದು?

ಇದೀಗ ವ್ಯಾಲೆಂಟೆನ್ಸ್ ಡೇ ಬಂದೇ ಬಿಟ್ಟಿದೆ. ಹೊಸ ಉಡುಗೊರೆ ನೀಡಲು ಮತ್ತು ಪಡೆಯಲು ಮನಸ್ಸು ಸಜ್ಜಾಗಿದೆ. ಕಳೆದ ವ್ಯಾಲೆಂಟೇನ್ಸ್ ಡೇಗೆ ಪ್ರೀತಿಯ ಕಾಣಿಕೆಯಾಗಿ ಪಡೆದುಕೊಂಡ ಆ "ಕೆಂಪು ಗುಲಾಬಿ" ದಪ್ಪ ಪುಸ್ತಕದ ಒಳಗಡೆ ಬೆಚ್ಚನೆ ಮಲಗಿದೆ. ಪುಸ್ತಕದ ಪುಟ ತಿರುವಿದಾಗ, ಪುಟದ ಇಕ್ಕೆಲಗಳಲ್ಲೂ ಹೂವಿನ ಕೆಂಪಾದ ಅಚ್ಚು ಮೂಡಿ ಬಂದಿತ್ತು. ಅದನ್ನು ನೋಡುತ್ತಾ ಹಳೆಯ ನೆನಪುಗಳು ಮನಸ್ಸಿನ ಪುಟದ ಪ್ರಣಯ ವೇದಿಕೆಯ ಮೇಲೆ ನಲಿದಾಡ ತೊಡಗಿದಾಗ ಹೊಸ ನಿರೀಕ್ಷೆಗಳಿಗೆ ಚಪ್ಪಾಳೆ ತಟ್ಟುವಂತೆ ಹೃದಯ ಮಿಡಿಯುತಿತ್ತು. ಈ ಪ್ರೀತಿಗೂ ಗುಲಾಬಿಗೂ ಇರುವ ನಂಟು ಇದೇನಾ?

Wednesday, January 30, 2008

ಸಲ್ಲಾಪ

ಮುನಿದಾಗ ಸತಿ

ಕೇಳಿದ ಪತಿ

ನಿನಗಾಗಿ ತರಲಾ

ಗಗನದಾ ತಾರೆ

ಕಣ್ಣು ಕೆಂಪಾಗಿಸಿ

ಎಂದಳಾಕೆ

ತರಲಾರದವನು ಸೀರೆ

ಕೊಂಡು ಬರುವನೇ ತಾರೆ?

ವ್ಯಥೆ

ನನ್ನ ಪ್ರೇಯಸಿಗಾಗಿ

ತೆರೆದಿಟ್ಟ

ಹೃದಯದ ಬಾಗಿಲು

ಚಿಲಕ ಹಾಕಿ

ಬೀಗ ಜಡಿದಳು

ನನ್ನ ಮಾವನ ಮಗಳು!!

Tuesday, January 29, 2008

ಕಿಂಡಿಗಳು ಮುಚ್ಚಿವೆ !

ನಾವು,

ಬಳಲಿ ಬೆಂಡಾದವರು ಬೆವರು ನೀರ

ಸುರಿಸಿ ಎದೆಗೂಡನುಬ್ಬಿಸಿ

ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ

ನಾವು ಕೂಲಿಯವರು || 1 ||


ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ

ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು

ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ

ನಾವು ಕೂಲಿಯವರು || 2 ||


ಬದುಕು-ಬವಣೆಯ ನಡುವೆ

ಹರಿದ-ಕರಿದ ಬೆಂದ ರೊಟ್ಟಿ

ಗಳ ಒಳಗೆ ರಕ್ತ ಮಡುಗಟ್ಟಿ

ಎದೆಗುಂದದೆ ಈಸಿ ಜೈಸುವ

ನಾವು ಕೂಲಿಯವರು || 3 ||


ಬಂದು, ಕೊಂದು, ತಿಂದ ಜನರೆಡೆಯಲಿ

ರಕ್ತದೋಕುಳಿಯ ಮಾಸದಾ ಹೆಜ್ಜೆಯದು

ನಾತ ಬೀರುವ ಕೊಳೆತ ಅಸ್ಥಿಮಜ್ಜೆ

ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ

ನಾವು ಕೂಲಿಯವರು || 4 ||


ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ

ಮುರುಕಲು ಗುಡಿಸಲ ಹಳೆ ಮಂಚದಲಿ

ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ

ಆದರೂ ಗಟ್ಟಿಯಿದೆ ನಮ್ಮ ರಟ್ಟೆ

ನಾವು ಕೂಲಿಯವರು || 5 ||


ಕನಸುಗಳ ಹೆಣೆಯುವೆವು ಆ

ಒಣದೇಹದ ಬತ್ತಿದಾ ಹೃದಯದಲಿ

ನಭವ ಚುಂಬಿಸಿ, ತಾರೆಗೀಳಲು ಸದಾ

ಬಯಸುವೆವು ಮೇಲೆ ಬರಲೆಂದೂ

ನಾವು ಕೂಲಿಯವರು || 6||


ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ

ಗಳ ದಮನ ತುಳಿತಗಳಡಿಯಿಂದ

ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು

ಚಂದಿರನ ಮಡಿಲಲ್ಲಿ ಜೋ ಹಾಡಲಿರುವ

ನಾವು ಕೂಲಿಯವರು || 7||


ನಾವು ಅಳುವುದಿಲ್ಲ ಅತ್ತಿಲ್ಲ

ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು?

ರಕ್ತ ಹಿಂಡಿದರೆ ರಕ್ತವೂ ಖಾಲಿ

ಜೀವನದ ಗೋಳೇ ನಮ್ಮ ಈದ್, ಹೋಳಿ !

ನಾವು ಕೂಲಿಯವರು || 8 ||


ಎಂದೆನಿತು ಬಾಯ್ತೆರೆದರೆ, ಪ್ರತಿದನಿ ಇಲ್ಲ

ಹಣತೆ ಬೆಳಕ ಹೊರ ಸೂಸುವುದೂ ಇಲ್ಲ

ಕಣ್ತೆರೆದ ಜನರಾವರಿಸಿದೆ ದರ್ಪದಾ ಪೊರೆ

ಭೋರ್ಗರೆವ ದುಃಖದಲ್ಲಡಗಿದೆ ನಮ್ಮ ಕರೆ

ಇದೇನು ಮಹಾ? ಕಿಂಡಿಗಳು ಮುಚ್ಚಿವೆಯಲ್ಲಾ!!!! || 9 ||

Monday, January 28, 2008

ನಿರೀಕ್ಷೆ....

ಕಾದು ಕುಳಿತಿರುವೆ ಕವಿತೆಗಾಗಿ

ಮುಂಜಾನೆಯ ಇಬ್ಬನಿಯಲಿ

ಮೈನೆನೆವ ಹಸಿರು ಹುಲ್ಲುಗಳ ನೋಡಿ...

ಕವಿತೆ ಬರೆಯ ಬೇಕೆಂದೆನಿಸಿತು

ಆದರೆ ಅವು, ನನಗೆ ಕಂಬನಿಗಳಂತೆ ಕಂಡವು

ಮನಸ್ಸಿನಲ್ಲಿ ದುಗುಡ, ಕೈ ನಡುಗಿತು

ಬರೆಯಲಾಗದು ನನ್ನಿಂದ ಕವಿತೆ....


ಎಳ ಬಿಸಿಲ ಹೊಂಗಿರಣದಿ

ನಗುವ ಸೂರ್ಯಕಾಂತಿಯ ನೋಡಿ

ಬರೆಯ ಬೇಕೆನಿಸಿತು ಕವಿತೆ...

ಮತ್ತೊಮ್ಮೆ, ಅದೇ ಯೋಚನೆ

ಮುಸ್ಸಂಜೆಗೆ ಮುದುಡಿ ಹೋಗುವ

ಈ ಸುಮದ ಬದುಕು, ಅದೇ ನಡುಕ

ಎಂದೆನಿತು ಕವಿತೆ ಬರೆಯಲೇನು?


ಉರಿಯುವ ಮಧ್ಯಾಹ್ನದ ಬೇಗೆಯಂತೆ

ಮನದಾಳದ ಯಾತನೆ...

ಮುಸ್ಸಂಜೆಯಲಿ ಬಿರಿಯುವ

ಬಯ್ಯ ಮಲ್ಲಿಗೆ, ಗೂಡು ಸೇರುವ ಹಕ್ಕಿ

ಚುಕ್ಕಿಯಂತೆ ನಭದಲ್ಲಿ ತೋರುತಿರಲು

ಕವಿತೆಗಾಗಿ ಹುಡುಕಿದರೆ ಪದ ಪುಂಚಗಳು

ಸಿಗಲೇ ಇಲ್ಲ....ಏನ ಬರೆಯಲಿ ನಾ?


ಬಿರಿದ ಬಾನಂಗಳದಿ ನಸುನಗುವ

ಚಂದಿರ, ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ

ತಾರೆಗಳತ್ತ ದೃಷ್ಟಿ ಹಾಯಿಸಿರೆ...

ಆಗೊಮ್ಮೆ ಈಗೊಮ್ಮೆ ಬೀಳುವ ಉಲ್ಕೆಗಳಂತೆ

ಜೀವನದಿ ಕಷ್ಟ ಸುಖಗಳ ದ್ವಂದ್ವ..

ಒಂದೆರಡು ಸಾಲು ಬರೆಯಲು ತಡಕಾಡಿದರೆ

ಮುನಿಸೇತಕೆ ನಿಮಗೆ? ಕವಿತೆಗಳೇ ನೀವು ಬರುವಿರೆಂದು?

ಅಪ್ರಕಟಿತ

ಆಕೆ,

ಹದಿನೇಳರ ಬೊಗಸೆ ಕಂಗಳ ಚೆಲುವೆ

ಮೈಮನದಿ ಪುಟಿದೆದ್ದ ಯೌವನ

ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ

ಕೇಳಿದನಿನಿತು ಅವಳ ಪ್ರೇಮಭಿಕ್ಷೆ


ನಾಚಿ ಕೆಂಪಾದ ಕೆನ್ನೆ, ಹೃದಯದಲಿ

ತುಡಿತ ಮಿಡಿತದೊಳು ಅವನೆಂದ

"ಎಲೆ ಚೆಲುವಿ, ನೀನೇ ನನ್ನ ಮನದನ್ನೆ

ನೀನು ಒಂದು ನಾನು ಬರೀ ಸೊನ್ನೆ!"


ಪ್ರೇಮಪಾಶದೊಳು ಜಾರಿ ಬಿದ್ದಳಾಕೆ

ಬಂಧಿಯಾದಳು ಅವನ ಬಿಸಿ ಅಪ್ಪುಗೆಯಲಿ

ತುಟಿಯಂಚಿನ ಸಿಹಿ ಚುಂಬನದಿ

ಮೈ ಮರೆತಳು ಪ್ರೇಮ- ಪ್ರೇಮಿಗಾಗಿ


ಪ್ರೇಮಸಾಗರದೆಡೆಯಲ್ಲಿ ಕಾಮ

ಸುಳಿಗೆ ಸಿಕ್ಕ ಹೆಣ್ಣು- ಬದುಕು

ವ್ಯರ್ಥವಾಯಿತು ಮೋಹ ನಾಟಕ

-ದಲ್ಲಿ ವೇಷ ಕಳಚಿದಾಗ ಆಕೆ ಬಸುರಿ


ಹೊಸ ಜೀವ ಗರ್ಭದೊಳು ಚಿಗುರೊಡೆ

ದಿರಲು ಒಲ್ಲೆನೆಂದನು ನಲ್ಲ

ಬಸುರಿಯನು ವರಿಸುವುದೇ?

ಛೀ... ಇದು ನನ್ನದಲ್ಲ!


ಕೆಟ್ಟು ಹೋಯಿತು ಮಾನ-ಮೌನ

ತಳೆಯಿತು ಮನ, ತುಂಬಿ ದುಃಖ ದುಮ್ಮಾನ

ಬಂಧಿಯಾದಳಾಕೆ ಮನೆ, ಮನಗಳಂತಿರಲು

ನವಮಾಸ ತುಂಬದೆ ಕಾಣಿಸಿದ ಹೆರಿಗೆ ಬೇನೆ


ನೋವು ಸಹಿಸಿದಳಾ ಮಾತೆ ಕಂದನ

ಮುಖಕಂಡು ನೋವ ಮರೆಯುವೆನೆಂದು

ಆದರೆ ಕಂಡಿಲ್ಲ ಆಕೆ ಮಗುವಿನ ಹೊಸರೂಪ

ಆಗಲೇ ನಡೆದಿತ್ತು ಆಕೆಯ ಗರ್ಭಪಾತ!!!


ಇತ್ತ ಕನಸುಗಳ ಗಾಳಿ ಗೋಪುರದಿ

ದುಃಖ ಮಡುಗಟ್ಟಿದ ಹೃದಯ, ಕೃಶ ದೇಹ

ತುಡಿವುದು ನಿಶ್ಕಲ್ಮಷ ಸ್ನೇಹ -ಕರುಣೆಗಾಗಿ

ಅವಳ ಆಸೆ ಆಕಾಂಶೆಗಳು ರಚಿತವಾದರೂ

ಅಸ್ಪಷ್ಟ ಅಪ್ರಕಟಿತ !!

Thursday, January 17, 2008

ವರ್ತಮಾನ

ಎದೆಯ ತಲ್ಪದಲವಿತ

ಕಲ್ಪನೆಗಳ ನಗ್ನಶಿಲೆಯನು ಕೆತ್ತಿ

ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ

ಬಣ್ಣ ಜಾಲದಲಿ ಸಿಕ್ಕಿ, ರೂಪ

ತಳೆದ ಕನಸುಗಳ ಕರಡು ರೇಖಾಚಿತ್ರ


ಹೊಸ ದಿನದ ಹೊಂಗಿರಣ

ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ

ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ

ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ

ಕ್ಷಣಿಕ ಜೀವನ ಸುಖದ ಪುಟ್ಟ ಹಾತೆಗಳು


ಮಂಜುಮುಸುಕಿದ ಓಣಿಯಲಿ ನಡೆದು

ನಗ್ನ ಪಾದದ ಗುರುತು ಮೂಡಿರೆ

ಇಕ್ಕೆಲದಿ ಇಬ್ಬನಿಯು ಕಿಕ್ಕಿರಿದು ನಗುವಾಗ

ದಳ ಪಕಳೆ ಬಿಚ್ಚಿ, ಸುಮಗಳನು ಮುತ್ತಿಕ್ಕಿ

ಬಿರಿದೆದೆಯನ್ನು ಕೆಣಕಿಸುವ ಭ್ರಮರ ಕೂಟ


ಪೊರೆ ಕಳಚಿ ಧುಮ್ಮಿಕ್ಕುವ ಹೊಂಗನಸ

ಸುಪ್ತಭಾವನೆಗಳಂತೆ, ಬೆಳ್ಮುಗಿಲ ಬಾನಿನಲಿ

ರೆಕ್ಕೆ ಬಿಚ್ಚಿ ಹಾರುವ ಗುಬ್ಬಚ್ಚಿ,

ಬೆಡಗು ಬೆಳಕಿನ ಜೀವ ಬೆನ್ನ ಹತ್ತಿಕ್ಕಿ

ಮೂಡುವುದು ನವವರುಷದ ಕಲ್ಪನೆಯ ವರ್ಣಚಿತ್ರ !!

ನೆನಪಾಗಿದೆ... ಆ ದಿನಗಳು ಆ ಕ್ಷಣಗಳು

ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ಎಷ್ಟು ಸುಂದರವಾದ ಸಾಲುಗಳು..ನಮ್ಮ ಕಾಲೇಜ್ ಡೇ ಸೆಲೆಬ್ರೇಶನ್ ಹಾಗೇ ಅಲ್ವಾ. ಐದು ರುಪಾಯಿ ಕೊಟ್ಟು ಡೆಡಿಕೇಶನ್ ಕೌಂಟರ್‌ಗೆ ಹೋಗಿ ಕಂಪ್ಯೂಟರ್‌ನಲ್ಲಿ ನಮ್ಮವರಿಗೊಂದು ಹಾಡು ಡೆಡಿಕೇಟ್ ಮಾಡುವುದೇ ಒಂದು ಥ್ರಿಲ್. ಅನು, ಅಂದು ಮೊದಲ ಬಾರಿಗೆ ಮೈಕ್‌ನಲ್ಲಿ "ದ ನೆಕ್ಟ್ಸ್ ಸೋಂಗ್ ಈಸ್ ಡೆಡಿಕೇಟೆಡ್ ಫ್ರಮ್ ಅನು, ಟು..." ಎಂದು ನನ್ನ ಹೆಸರು ಕರೆದು ಹೇಳಿದಾಗ ನಾನು ಒಮ್ಮೆ ಲೆ ಶಾಕ್ ಆಗಿ ಬಿಟ್ಟೆ ಮಾರಾಯ್ರೆ. ಆ ಹಾಡು ಕೇಳಿದಾಗ ಎಂದೂ ನನಗೆ ನೀನು ನೆನಪಾಗುತ್ತೀಯೆ. ಅಂದು ನನಗೆ ಎಷ್ಟು ಖುಷಿಯಾಗಿತ್ತು ಗೊತ್ತಾ? ಅದಕ್ಕಾಗಿಯೇ ನಾನು ಅದನ್ನು ಕಾಲರ್ ಟ್ಯೂನ್ ಆಗಿ ಸೆಲೆಕ್ಟ್ ಮಾಡಿದ್ದು. ಖಂಡಿತವಾಗಿಯೂ ನಾವು ಕಾಲೇಜ್‌ನಲ್ಲಿ ಕಳೆದ ಅದೆಷ್ಟು ಸುಮಧುರ ಗಳಿಗೆಗಳು ಇಂದಿಗೂ ಹಸುರಾಗಿಯೇ ಇವೆ. ನೀನು ನನ್ನ ಗೆಳೆಯನಾಗಿ ದೊರೆತದ್ದೇ ನನ್ನ ಭಾಗ್ಯ. ನಮ್ಮಿಬ್ಬರ ಗೆಳೆತನ ನಂತರ ಅದು ಪ್ರೇಮವಾಗಿ ಬದಲಾದದ್ದು...ಎಲ್ಲಾ ಕಾಲದ ಲೀಲೆಯಲ್ಲದೆ ಮತ್ತೇನು? ಅನು, ನೀನು ನನ್ನನ್ನು ಪ್ರೊಪೋಸ್ ಮಾಡುವುದಕ್ಕಿಂತ ಮೊದಲೇ ನಾನು ನಿನ್ನನ್ನು ಎಷ್ಟು ಮೆಚ್ಚಿಕೊಂಡಿದ್ದೆ ಎಂದು ನಿನಗೆ ಗೊತ್ತಾ ? ನಾನು ಮಂಕಾಗಿ ಕುಳಿತಿರುವಾಗಲ್ಲೇ ನಿನ್ನ ಹಾಸ್ಯ ಭರಿತ ಚೂಟಿ ಮಾತುಗಳಿಂದ ನನ್ನನ್ನು ನಗಿಸುತ್ತಿದ್ದವನು ನೀನಲ್ಲವೇ? ನಾನು ಪರೀಕ್ಷೆ ಅಂತ ಟೆನ್ಶನ್ ಮಾಡ್ತಿರುವಾಗ ನೀನು ಅದೆಷ್ಟು ಬಾರಿ ನನಗೆ ನೋಟ್ ರೆಫರ್ ಮಾಡಲು ಸಹಾಯ ಮಾಡಿದ್ದೆ. ಕಾಲೇಜಿನ ಬ್ರಿಲ್ಲಿಯಂಟ್ ಸ್ಟೂಡೆಂಟ್ ಎಂದೆನಿಸಿದ್ದ ನಿನ್ನನ್ನು ಕಾಣಬೇಕಾದರೆ ಲೈಬ್ರರಿಗೇ ಬರಬೇಕಾಗಿತ್ತು. ನಿನ್ನ ಗೆಳೆತನವಾದಂದಿನಿಂದ ನಾನು ಲೈಬ್ರರಿಯನನ್ನು ಮೆಚ್ಚಿಕೊಂಡೆ. ನಿನ್ನ ಗೆಳೆತನದಿಂದಲೇ ನನಗೆ ಉತ್ತಮ ಅಂಕಗಳು ಬರತೊಡಗಿದ್ದವು ಅದೇ ರೀತಿ ನಿನ್ನತ್ತ ನನ್ನ ಸ್ನೇಹವು ಚಿಗುರೊಡೆಯುತ್ತಾ ಬಂದಿತ್ತು. ಅದೇ ಕ್ಷಣ ನಿನ್ನಲ್ಲಿ ನನ್ನ ಮನಸ್ಸನ್ನು ಬಿಚ್ಚಿಡಬೇಕೆಂದಿದ್ದೆ, ಆದರೆ ನೀನದನ್ನ ನಿರಾಕರಿಸಿದರೆ ಅಂತ ನನಗೇನೋ ಭಯ ಆಗ್ತಾ ಇತ್ತು. ಆದುದರಿಂದಲೇ ಪ್ರೇಮಿಯಲ್ಲದಿದ್ದರೂ ನೀನು ನನ್ನ ಉತ್ತಮ ಗೆಳೆಯಾಗಿದ್ದರೆ ಸಾಕು ಎಂದು ನಾನೇ ನಿರ್ಧರಿಸಿಕೊಂಡಿದ್ದೆ. ಅದೊಂದು ದಿನ ನೀನು ನಿನ್ನ ಮನಸ್ಸನ್ನು ನನ್ನ ಮುಂದೆ ತೆರೆದಿಟ್ಟಾಗ ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದಂತಾಯಿತು. ಆದರೆ ಕಾಲೇಜಿನಲ್ಲಿ ಇದು ಯಾರಿಗೂ ಗೊತ್ತಾಗ ಬಾರದೆಂದು ನಾವೆಂದೂ ಗೆಳೆಯರಂತೆಯೇ ನಡೆದುಕೊಂಡಿದ್ದೆವು. ಗೆಳೆಯರೆಲ್ಲರೂ ಸೇರಿ ಚೂಟಿ ಮಾಡುವಾಗ "ವಿ ಆರ್ ಜಸ್ಟ್ ಫ್ರೆಂಡ್ಸ್, ಅಲ್ಲದಿದ್ದರೂ ಈ (ಮಂದ ಬುದ್ದಿ) ಹುಡುಗಿಯನ್ನು ನಾನು ಪ್ರೀತಿಸುವುದೇ?" ಎಂದು ನಿನ್ನ ಗೆಳೆಯರಲ್ಲಿ ನೀನು ಹೇಳಿಲ್ಲವೇ? ಆದರೆ ಅದೇ ಮಂದ ಬುದ್ದಿಯಾದ ನನ್ನನ್ನು ನೀನು ಪ್ರೀತಿಸುತ್ತಾ ತಮಾಷೆಯಾಡುತ್ತಿದ್ದೆ. ಕಾಲೇಜಿನ ಲೈಬ್ರರಿಯಲ್ಲಿ ಕುಳಿತು ಕಂಬೈನ್‌ಡ್ ಸ್ಟಡಿ ಎಂಬ ನೆಪವೊಡ್ಡಿ ನಾವೆಷ್ಟು ಕಾಲ ಕಳೆದಿದ್ದೀವಿ! ಕಾಲೇಜಿನ ಸ್ಟೈಲ್ ಬಾಯ್,ಚಾಕ್ಲೆಟಿ ಬಾಯ್ ಎಂದು ಹೆಸರು ಪಡೆದಿದ್ದ ನೀನು ನನ್ನ ಮನಸ್ಸನ್ನು ಗೆ(ಕ)ದ್ದಿದ್ದೆ ಎಂದು ಯಾರೂ ತಿಳಿದಿರಲಿಕ್ಕಿಲ್ಲ. ಕಾಲೇಜಿನ ಜೋಡಿ ಹಕ್ಕಿಗಳು ಕೈ ಕೈ ಹಿಡಿದು ಸುತ್ತಾಡುವಾಗ ನೀನೂ ನನ್ನ ಕೈ ಹಿಡಿದು ಸುತ್ತಾಡ ಬೇಕೆಂದು ನಾನೂ ಮನಸ್ಸಿನಲ್ಲಿ ಅಂದು ಕೊಂಡಿದ್ದೆ. ಆದರೆ ನೀನು, ನಮ್ಮ ಪ್ರೀತಿ ಮನಸ್ಸಲ್ಲೇ ಇದ್ದು ಇತರರಿಗೆ ಪ್ರದರ್ಶಿಸದೇ ಇರುವುದು ಒಳಿತೆಂದು ಹೇಳಿದವನು. ನಿಜಕ್ಕೂ ಅದು ಒಳ್ಳೆಯದೇ ಎಂದು ಅನಿಸಿತ್ತು ಯಾಕೆಂದರೆ ನನ್ನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು ' ಲವ್ ' ಮಾಡುವವರಿಗೆ ಉಪದೇಶ ಕೊಟ್ಟು ಕಂಗಾಲಾಗಿಸುವ ಮತ್ತು ಇಂಟರ್ನೆಲ್ ಮಾರ್ಕ್ ಕಡಿಮೆ ಮಾಡುವ ಜಾಯಮಾನದವರಾಗಿದ್ದರಿಂದ ಸದ್ಯಕ್ಕೆ ನಾನಂತೂ ಬಚಾವ್. ಆದರೂ ಅದೇಕೋ ನಿನ್ನ ಕೈ ಹಿಡಿದು ಸುತ್ತಾಡ ಬೇಕು, ನಿನ್ನ ಅಂದದ ಕಂದುಗಣ್ಣಿಗೆ ಕಣ್ಣಿಟ್ಟು ಸುಮ್ಮನೆ ಕುಳಿತುಕೊಂಡು ನಿನ್ನ ಕಣ್ಣಲ್ಲಿ ನನ್ನ ಪ್ರತಿಬಿಂಬವನ್ನ ನೋಡ ಬೇಕು ಎಂದು ಅದೆಷ್ಟೋ ಬಾರಿ ನಾನು ಆಸೆ ಪಟ್ಟಿದ್ದೆ. ಅಂತೂ ಇಂಟರ್ನೆಲ್, ಯುನಿವರ್ಸಿಟಿ ಪರೀಕ್ಷೆ,ಲ್ಯಾಬ್ ,ಲೈಬ್ರರಿ,ಸೆಮಿನಾರ್ ಎಂದು ಸದಾ ಬ್ಯುಸಿಯಾಗಿರುವ ನಿನ್ನಲ್ಲಿ, ನನ್ನ ಪ್ರೀತಿಯನ್ನು ಪ್ರಕಟಿಸಲು ನನಗೆ ಅವಕಾಶವೇ ಸಿಗುತ್ತಿರಲಿಲ್ಲ. ನನ್ನ ಅನು, ಈ ಕದ್ದು ಮುಚ್ಚಿ ಪ್ರೀತಿಸುವುದರಲ್ಲಿ ಒಂದು ಪ್ರತ್ಯೇಕ ರೀತಿಯ ಆನಂದ ವಿದೆಯಲ್ಲಾ... ಅದರ ಅನುಭವ ಪ್ರೇಮಿಗಳಿಗೇ ಗೊತ್ತು. ಅದ್ಯಾಕೊ ಸ್ವಪ್ನಲೋಕದಲ್ಲಿ ವಿಹರಿಸುತ್ತಿದ್ದ ನನಗೆ ನೀನು ಗೆಳೆಯನಾಗಿ ಸಿಕ್ಕಿದ್ದು ಪುಣ್ಯ ಕಾಣೋ..ನಿನ್ನ ಆ ಮುಗ್ಧ ನಗು ಯಾವಾಗೂ ಗಾಳಿಯಲ್ಲಿ ಜಿಗಿಯುವ ನಸುಕಂದು ಕೂದಲು,ಮಿಂಚುಗಣ್ಣು ,ಬಾಲಿವುಡ್ ಹೀರೋ ತರಹ ಕ್ಲೀನ್ ಶೇವ್ ,ಯಾವಾಗಲೂ ಟಿಪ್ ಟಾಪ್ ಆಗಿ ಕಾಲೇಜಿಗೆ ಕೂಲ್ ಆಗಿ ಬರುವ ನನ್ನ ಚಾಕಲೇಟ್ ಹೀರೋ.. ನಿನ್ನ ಹಿಂದೆ ಬಿದ್ದ ಹುಡುಗಿಯರೆಷ್ಟು? ಆದರೆ ನೀನು ನನ್ನನ್ನು ನಿನ್ನ ಪ್ರೇಯಸಿಯಾಗಿ ಮಾಡಿದೆ. ನನ್ನ ನಿದ್ದೆಯನ್ನು ಕದ್ದು ಪ್ರೇಮದ ಸಿಹಿಯುಣಿಸಿದೆ. ನನ್ನ ಸುಖ ದುಃಖಗಳನ್ನು ಹಂಚಿ ಕೊಳ್ಳುತ್ತಾ ನನ್ನ ನಗುವಿಗೆ ಕಾರಣನಾದವನು ನೀನು..ನಾನೊಮ್ಮೆ ನಿನ್ನಿಲ್ಲಿ ನನ್ನ ಮನದಿಂಗಿತವನ್ನು ಹೇಳಿದಾಗ ನಾವು ಕ್ಲಾಸ್‌ಗೆ ಚಕ್ಕರ್ ಹೊಡೆದು ' ಕ್ಯಾಂಪಸ್‌ಕಾರ್ನರ್‌'ನಲ್ಲಿ ಕುಳಿತು ಮಿಲ್ಕ್ ಶೇಕ್ ಕುಡಿದದ್ದು ನೆನಪಿದೆಯಾ? ನೀನು ಶೇಕ್ ಹೀರಿದ ಆ ಸ್ಟ್ರಾ ಈಗಲೂ ನನ್ನ ಕೈಯಲ್ಲಿದೆ. ಅನು, ನೀನು ನನ್ನೊಡನೆ ಕಳೆದ ಪ್ರತಿಯೊಂದು ಕ್ಷಣವೂ ಅತೀ ಮಹತ್ವದ್ದು. ನೀನು ನನಗೆ ಬರೆದು ಕೊಟ್ಟ ನೋಟ್, ಚಾಕ್ಲೆಟ್ ವ್ರ್ಯಾಪರ್, ನಾವು ಜೊತೆಯಾಗಿ ಯಾತ್ರೆ ಮಾಡಿದ ರೈಲ್ವೇ ಟಿಕೆಟ್ ಎಲ್ಲವನ್ನೂ ನಾನು ಜೋಪಾನ ವಾಗಿರಿಸಿದ್ದೇನೆ. ಇದೆಲ್ಲಾ ಸಂಗ್ರಹಿಸಿಡುವುದು ಹುಚ್ಚು ಅಂತಾ ಅನಿಸಿರಬಹುದು, ಆದರೆ ಅದರಲ್ಲಿ ನಿನ್ನ ಕೈಗಳ ಸ್ಪರ್ಶವಿದೆ, ನಾನು ನಿನ್ನೊಡನೆ ಕಳೆದ ಮಧುರ ದಿನಗಳ ನೆನಪಿದೆ. ಕಾಲೇಜು ಬಿಟ್ಟು ವರ್ಷ ಎರಡಾಗುತ್ತಾ ಬಂತು ಇಂದು ನಾವು ವಿದ್ಯಾರ್ಥಿಗಳಲ್ಲ. ಟೀಚರ್ ,ಅಟೆಂಡೆನ್ಸ್‌, ಪಾಕೆಟ್ ಮನಿ ಇಲ್ಲದೆ ಇತರರಿಗೆ ಹೆದರಿ ಕೂರಬೇಕಾಗಿಲ್ಲ. ಆದರೆ ಬದುಕ ಬಂಡಿ ಸಾಗಿಸಲು ನಾನೆಲ್ಲೊ ನೀನೆಲ್ಲೊ ದುಡಿಯುತ್ತಿದ್ದೇವೆ. ನೀನು ನನ್ನಿಂದ ದೂರವಾಗಿದ್ದರೂ ನಿನ್ನ ನೆನಪುಗಳು, ನಿನ್ನ ಕಾಲ್‌ಗಾಗಿ ಸದಾ ಕಾದಿರುವ ನನ್ನ ಮೊಬೈಲ್, ನನಗೆ ನೀನಿತ್ತ ಉಡುಗೊರೆಗಳು,ನೆನಪುಗಳು ಅಷ್ಟೇ ಸಾಕು... ಓ ನನ್ನ ಪ್ರೀತಿಯೇ ಈ ಚುಮುಚುಮು ಚಳಿಗೆ ನೀನು ನನ್ನ ಹೃದಯದ ಗೂಡಲ್ಲಿ ಬೆಚ್ಚನೆ ಅವಿತುಕೊಂಡಿರುವಿಯಾದರೂ ನಿನ್ನ ಕೈಗಳ ಹಿತವಾದ ಸ್ಪರ್ಶವನ್ನು, ಪ್ರೀತಿಯನ್ನು ನಾನೆಂದೂ ಮಿಸ್ ಮಾಡುತ್ತಿದ್ದೇನೆ.