ವರ್ತಮಾನ

ಎದೆಯ ತಲ್ಪದಲವಿತ

ಕಲ್ಪನೆಗಳ ನಗ್ನಶಿಲೆಯನು ಕೆತ್ತಿ

ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ

ಬಣ್ಣ ಜಾಲದಲಿ ಸಿಕ್ಕಿ, ರೂಪ

ತಳೆದ ಕನಸುಗಳ ಕರಡು ರೇಖಾಚಿತ್ರ


ಹೊಸ ದಿನದ ಹೊಂಗಿರಣ

ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ

ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ

ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ

ಕ್ಷಣಿಕ ಜೀವನ ಸುಖದ ಪುಟ್ಟ ಹಾತೆಗಳು


ಮಂಜುಮುಸುಕಿದ ಓಣಿಯಲಿ ನಡೆದು

ನಗ್ನ ಪಾದದ ಗುರುತು ಮೂಡಿರೆ

ಇಕ್ಕೆಲದಿ ಇಬ್ಬನಿಯು ಕಿಕ್ಕಿರಿದು ನಗುವಾಗ

ದಳ ಪಕಳೆ ಬಿಚ್ಚಿ, ಸುಮಗಳನು ಮುತ್ತಿಕ್ಕಿ

ಬಿರಿದೆದೆಯನ್ನು ಕೆಣಕಿಸುವ ಭ್ರಮರ ಕೂಟ


ಪೊರೆ ಕಳಚಿ ಧುಮ್ಮಿಕ್ಕುವ ಹೊಂಗನಸ

ಸುಪ್ತಭಾವನೆಗಳಂತೆ, ಬೆಳ್ಮುಗಿಲ ಬಾನಿನಲಿ

ರೆಕ್ಕೆ ಬಿಚ್ಚಿ ಹಾರುವ ಗುಬ್ಬಚ್ಚಿ,

ಬೆಡಗು ಬೆಳಕಿನ ಜೀವ ಬೆನ್ನ ಹತ್ತಿಕ್ಕಿ

ಮೂಡುವುದು ನವವರುಷದ ಕಲ್ಪನೆಯ ವರ್ಣಚಿತ್ರ !!

Comments

ಕರಡು ವರ್ತಮಾನದಲ್ಲಿ ಭೂತದ ಆಲಾಪನೆಯ ಜೊತೆ ಬೇಸರವೋ ಅಸ್ಪಷ್ಟ ಅಪೂರ್ಣತೆಯೋ ಸೇರಿ ಭವಿಷ್ಯದ ಹೊಂಗನಸಿನ ವರ್ಣಚಿತ್ರ...
ಅಪ್ರಸ್ತುತಕೆ ಅನ್ನುವ ಬದಲು ಅಪ್ರಸ್ತುತವ ಧಿಕ್ಕರಿಸಿ ಎಂದಾದರೆ ಚೆನ್ನಾಗಿರುತ್ತಾ? ಗೊತ್ತಿಲ್ಲ.

ಇನ್ನಷ್ಟು ಬರೆಯಿರಿ.
ಹೂವಾಗಿ ಬಿರಿದ ಆಕಾಶ, ಕನಸಿ ಕಿರಣಗಳಿಗೆ ಮುತ್ತುವ ಸುಖದ ಹಾತೆಗಳು, ನಗುವ ಇಬ್ಬನಿ.... ಅಬ್ಬಾ ನಿಮ್ಮ ಹೊಸ ವರುಷದ ಕಲ್ಪನೆಯ ಕಣ್ಣಲ್ಲಿ ಇಷ್ಟೆಲ್ಲಾ ಕಂಡಿತಾ?!! ಅಥವಾ ಯಾರಿಂದಲಾದರೂ ಕಣ್ಣುಗಳನ್ನು ಎರವಲು ಪಡೆದಿದ್ದೀರಾ!!?? ;)
ನಿಜ, ಎಲ್ಲರ ಮನದಲ್ಲೂ ಸಾವಿರ ಕಣ್ಣುಗಳು, ನೋಡುವ ಮೂಡ್ ಹಾಗು ತಾಕತ್ತು ಇದ್ದರೆ ಏನೆಲ್ಲಾ ಕಂಡಿತು!!
ಅನವರತ ಬರೆಯುತ್ತಿರಿ!!
ನನ್ನ ಕವಿತೆಗೆ ದೊರಕಿದ ಉತ್ತಮವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಇನ್ನು ಮುಂದೆಯೂ ನಿಮ್ಮ ಪ್ರೋತ್ಸಾಹವನ್ನು ಬಯಸುತ್ತಿರುತ್ತೇನೆ.

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ