Monday, July 30, 2012

ಹೆಣ್ಮಕ್ಕಳಿಗೆ ಕಪಾಳಮೋಕ್ಷ ಮಾಡುವಾಗ ಇವರಿಗೆ 'ಭಾರತೀಯ ಸಂಸ್ಕೃತಿ' ನೆನಪಿಗೆ ಬರಲಿಲ್ಲವೇ?


ಧುನಿಕ ದುಶ್ಯಾಸನರು! ಹೌದು. ಇವರನ್ನು ದುಶ್ಯಾಸನರು ಎಂದು ಕರೆದರೂ ಸಾಲುವುದಿಲ್ಲ. ಯಾಕೆಂದರೆ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಲೇ ಸುಸ್ತಾಗುತ್ತಾನೆ. ಇವರು ಹಾಗಲ್ಲ ಹೆಣ್ಮಕ್ಕಳ ಕಪಾಳಕ್ಕೆ ಹೊಡೆದು ಅವರ ಮೈಮೇಲೆ ಕೈಯಾಡಿಸುತ್ತಾರೆ. ಅಲ್ಲಿದ್ದ ಹುಡುಗನೊಬ್ಬ 'ಇನಿ ಎನ್ನ ಬರ್ತ್ ಡೇಯೇ...ಹಾಕೊಡ್ಚಿ' (ಇವತ್ತು ನನ್ನ ಹುಟ್ಟುಹಬ್ಬ, ಹೊಡಿಯಬೇಡಿ) ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಅವನನ್ನು ಅರೆಬೆತ್ತಲೆಯಾಗಿಸಿ ಥಳಿಸುತ್ತಾರೆ. ಹೆಣ್ಮಕ್ಕಳನ್ನು ಹಿಡಿದು, ಗುದ್ದಿ, ದೂಡಿ ಮಂಚಕ್ಕೆ ನೂಕಲಾಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಕೆನ್ನೆಗೆ 'ಚಟಾರ್್' ಎಂದು ಬಿದ್ದ ಏಟಿನಿಂದ ಆಕೆ ಮಂಚದ ಮೇಲೆ ದೊಪ್ಪನೆ ಬೀಳುತ್ತಾಳೆ. ಅಲ್ಲಿದ್ದ ಯುವಕ ಯುವತಿಯರು ಮುಖ ಮುಚ್ಚಿಕೊಳ್ಳುತ್ತಿದ್ದಂತೆ ಬಲವಂತವಾಗಿ ಅವರ ಕೈ ಹಿಡಿದು ಎಳೆಯುತ್ತಾ, ಹುಡುಗಿ ದೇಹದ ಮುಟ್ಟಬಾರದ ಜಾಗದಲ್ಲೆಲ್ಲಾ ಹಿಡಿದು ಅವರನ್ನು ತಳ್ಳಲಾಗುತ್ತದೆ. ಇದು ಮಂಗಳೂರಿನ ಹೊರವಲಯ ಪಡೀಲ್್ನ ಬಡ್ಲಗುಡ್ಡೆಯಲ್ಲಿರುವ 'ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ' ಮೇಲೆ ಶನಿವಾರ ರಾತ್ರಿ ನಡೆದ 'ನೈತಿಕ ಪೊಲೀಸ್್' ಪುಂಡಾಟಿಕೆಯ ಝಲಕ್.

ಈ ಮೊದಲು ಅಂದ್ರೆ 2009 ಜನವರಿ 24ರಂದು ಮಂಗಳೂರಿನ ಪಬ್ ಒಂದರ ಮೇಲೆ ಇದೇ ರೀತಿ ದಾಳಿ ನಡೆಸಲಾಗಿತ್ತು. ಆದರೆ ಶನಿವಾರ ನಡೆದದ್ದು? ಇಲ್ಲಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ದಾಳಿ ನಡೆಸಲಾಗಿತ್ತಂತೆ. ದಾಳಿ ನಡೆಸಿದವರು ಹಿಂದೂ ಜಾಗರಣ ವೇದಿಕೆಯವರು ಎಂದು ಸುದ್ದಿ ಪ್ರಕಟವಾದರೂ ಭಾನುವಾರ 'ಹಿಂದೂ ಜಾಗರಣ ವೇದಿಕೆ' ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಲ್ಲೆ ನಡೆಸಿದವರು ನಮ್ಮ ಕಾರ್ಯಕರ್ತರಲ್ಲ, ಅಲ್ಲಿನ ಸ್ಥಳೀಯರು ಎಂದು ಹೇಳುತ್ತಿದ್ದಾರೆ. ಹೋಗಲಿ ಬಿಡಿ, ಹಲ್ಲೆ ನಡೆಸಿದವರು ಯಾರು ಎಂಬುದು ಇಲ್ಲಿ ಮುಖ್ಯವಲ್ಲ, ಹಲ್ಲೆ ನಡೆಸಿದ್ದೇಕೆ?, ಹಲ್ಲೆ ನಡೆಸುವ ಹಕ್ಕನ್ನು ಇವರಿಗೆ ಕೊಟ್ಟವರು ಯಾರು? ಎಂಬುದೇ ಇಲ್ಲಿನ ಪ್ರಶ್ನೆ. ಯಾಕೆಂದರೆ ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಇಲ್ವೇ ಇಲ್ಲ. ಏನೇ ಕೃತ್ಯಗಳಾಗಲಿ, ಅದನ್ನು ವಿಚಾರಣೆ ಮಾಡಲು, ಶಿಕ್ಷೆ ನೀಡಲು ಕಾನೂನು ಇದೆ, ಕಾನೂನು ಪಾಲಕರಿರುತ್ತಾರೆ. ಅದು ಬಿಟ್ಟು ಎಲ್ಲರೂ ಕಾನೂನನ್ನು ಕೈಗೆತ್ತಿಕೊಂಡರೆ ಈ ನೆಲದಲ್ಲಿ ಕಾನೂನು ಯಾಕೆ ಬೇಕು?

ಆದಾಗ್ಯೂ, ಶನಿವಾರ ರಾತ್ರಿ ಆ ಹೆಣ್ಮಕ್ಕಳು ಗಂಡು ಮಕ್ಕಳ ಜತೆ ಸೇರಿ ಪಾರ್ಟಿ ನಡೆಸೋಕೆ ಬಂದದ್ದು ಅಲ್ಲ, ಅಲ್ಲಿ ಅನೈತಿಕ ಚಟುವಟಿಕೆ ನಡೆಸೋಕೆ ಬಂದದ್ದು ಎಂದು ಹಲ್ಲೆ ನಡೆಸಿದವರು ವಾದಿಸುತ್ತಾರೆ. ಆದರೆ ಈ ದಾಳಿಕೋರರು ಅಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದರೆ ಅದನ್ನು ಪೊಲೀಸರಿಗೆ ತಿಳಿಸಬೇಕೆತ್ತು. ಜವಾಬ್ದಾರಿಯುತ ನಾಗರೀಕರಂತೆ ವರ್ತಿಸಬೇಕಿತ್ತು. ಅದರ ಬದಲಾಗಿ ತಾವೇ ಹೋಗಿ ಪಾರ್ಟಿಗೆ ಬಂದಿದ್ದ ಯುವಕ ಯುವತಿಯರಿಗೆ ಹಿಗ್ಗಾಮುಗ್ಗ ಥಳಿಸಿ ನೈತಿಕತೆ ಮೆರೆವ ಪುರುಷರಂತೆ ಪೋಸ್ ಕೊಡುವ ಅಗತ್ಯವೇನಿತ್ತು? ಅಲ್ಲಿದ್ದ ಹೆಣ್ಣು ಮಕ್ಕಳ ಮೇಲೆ ಕೈ ಮಾಡುವ ಹಕ್ಕನ್ನು ಇವರಿಗೆ ಕೊಟ್ಟವರ್ಯಾರು? ಮನೆಯಲ್ಲೇ...ವಯಸ್ಸಿಗೆ ಬಂದ ಹೆಣ್ಮಕ್ಕಳಿಗೆ ಹೆತ್ತವರಾಗಲಿ, ಅಣ್ಣನಾಗಲೀ ಹೊಡೆದು ಬಡಿದು ಬುದ್ದಿ ಕಲಿಸುವುದಿಲ್ಲ. ಅಂತದರಲ್ಲಿ ಪಾರ್ಟಿ ಮಾಡೋಕೆ ಹುಡುಗರ ಜತೆಗೆ ಬಂದಿದ್ದಾರೆ ಎಂಬ ಕಾರಣಕ್ಕೆ ಆ ಹೆಣ್ಣು ಮಕ್ಕಳನ್ನು ಎಳೆದಾಡುವುದು ಸರಿಯೇ? ಅಲ್ಲೇನು ನಡೆದಿದೆ? ಎಂಬುದನ್ನು ವಿಚಾರಣೆ ಮಾಡುವನ್ನು ಅದು ಬಿಟ್ಟು ಥಳಿಸಿ, ಬುದ್ದಿ ಕಲಿಸೋಕೆ ಇವರ್ಯಾರು? ಹೋಂ ಸ್ಟೇನಲ್ಲಿ ನಡೆದ ದಾಳಿಯ ದೃಶ್ಯಗಳನ್ನು ಗಮನಿಸಿ. ಅದರಲ್ಲೊಬ್ಬ ಹೆಣ್ಣು ಮಗಳನ್ನು ಎಳೆದಾಡುತ್ತಾನೆ. ಹೆಣ್ಣು ಮಗಳ ದೇಹದಲ್ಲಿ ಆತನ ಕೈ ಹರಿದಾಡುತ್ತದೆ. ನಮ್ಮ ಮನೆಯ ಹೆಣ್ಮಗಳಾಗಿದ್ದು ಈ ರೀತಿ ಪಾರ್ಟಿ ಗೀರ್ಟಿ ಮಾಡಿ ಮಜಾ ಉಡಾಯಿಸಿದರೆ ಕಪಾಳಕ್ಕೆ ಹೊಡೆದು ಬುದ್ದಿಕಲಿಸುತ್ತಿದ್ದೆವು ಎಂದು ವೀರಾವೇಶದಿಂದ ಹೇಳುವವರಿದ್ದಾರೆ. ಆದರೆ ಇನ್ನೊಬ್ಬ ಹುಡುಗಿಯ ದೇಹವನ್ನು ಎಲ್ಲೆಂದರಲ್ಲಿ ಮುಟ್ಟಿ, ತೊಟ್ಟ ಬಟ್ಟೆಯನ್ನು ಹರಿದು ಹಾಕುವ ಮೃಗೀಯ ವರ್ತನೆಗೇ ಏನೆನ್ನಬೇಕು? ಇದೇನಾ ನಮ್ಮ ಸಂಸ್ಕೃತಿ? ಹುಡುಗ ಹುಡುಗಿ ಜತೆಯಲ್ಲಿ ಪಾರ್ಟಿಗೆ ಬಂದಿದ್ದಾರೆ ಎಂದಾಕ್ಷಣ ಅವರು ಅನೈತಿಕ ದಂಧೆಯಲ್ಲಿ ತೊಡಗಿದ್ದಾರೆ ಎಂದು ಕಲ್ಪಿಸಿಕೊಳ್ಳುವ ಈ ಮಂದಿಗೆ ಹೆಣ್ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆಸುವಾಗ ಭಾರತೀಯ ಸಂಸ್ಕೃತಿ ನೆನಪಿಗೆ ಬರಲಿಲ್ಲವೇ?

ಹೆಣ್ಣು ಮಾತೆ, ಆಕೆ ಪೂಜ್ಯಳು...ಅಂತದರಲ್ಲಿ ಆಕೆ ಗಂಡು ಮಕ್ಕಳ ಜತೆ ಸೇರಿ ಮಜಾ ಉಡಾಯಿಸೋಕೆ ಬಂದಿದ್ದಾಳೆ. ಅದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಎಂಬುದನ್ನು ಈ ದಾಳಿಕೋರರು ಒಪ್ಪಿಕೊಳ್ಳುತ್ತಾರೆ. ಸರಿ, ಭಾರತದಲ್ಲಿ ಹೆಣ್ಣು ಪೂಜ್ಯಳು. ಆಕೆ ಅಮ್ಮ, ಸಹೋದರಿ, ಅತ್ತಿಗೆ, ಗೆಳತಿ ಎಲ್ಲವೂ ಹೌದು. ಆಕೆಗೆ ಜವಾಬ್ದಾರಿ ಇದೆ ನಿಜ. ಆದರೆ ಇದೇ ಜವಾಬ್ದಾರಿ ಪುರುಷನಿಗೂ ಇದೆ ಅಲ್ವಾ? ಇಲ್ಲೀಗ ಹೆಣ್ಮಕ್ಕಳು ಮತ್ತು ಗಂಡು ಮಕ್ಕಳು ಪಾರ್ಟಿ ಮಾಡುತ್ತಿದ್ದಾರೆ ಎಂದು ವಿಷಯ ತಿಳಿದು ದಾಳಿ ಮಾಡಲಾಯಿತು. ಅದೇ ವೇಳೆ ದೇಶದೆಲ್ಲೆಡೆ ಎಷ್ಟೋ ಹೆಣ್ಮಕ್ಕಳು ಅತ್ಯಾಚಾರಕ್ಕೊಳಗಾಗಿ ನರಕ ಯಾತನೆ ಅನುಭವಿಸುತ್ತಿರುವ ಬಗ್ಗೆ ಈ ಪುರುಷರು ಎಂದಾದರೂ ಯೋಚಿಸಿದ್ದಾರೆಯೇ? ಅಷ್ಟೇ ಯಾಕೆ ಮೊನ್ನೆ ಗುರುವಾರ ಶಹಾಪುರದಲ್ಲಿ ಪಾಲಕರ ಎದುರೇ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿದ ಘಟನೆ ನಡೆಯಿತು. ಗುವಾಹಟಿಯಲ್ಲಿ ಕೆಲವು ಪುಂಡರು ಹದಿಹರೆಯದ ಹೆಣ್ಣು ಮಗಳ ಬಟ್ಟೆ ಹರಿದು ಅಸಭ್ಯವಾಗಿ ವರ್ತಿಸಿದ ಘಟನೆ ನೋಡಿ ದೇಶಕ್ಕೆ ದೇಶವೇ ನಡುಗಿ ಹೋಯಿತು. ಎರಡ್ಮೂರು ದಿನಗಳ ಹಿಂದೆ ಮದ್ದೂರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯೊಬ್ಬಳನ್ನು ಪುಂಡರು ಚುಡಾಯಿಸಿ ರೈಲಿನಿಂದ ಹೊರದಬ್ಬಿದರು. ಇಂಥದ್ದೇ ಘಟನೆಗಳು ಒಂದರ ಹಿಂದೆ ಒಂದರಂತೆ ಬ್ರೇಕಿಂಗ್ ನ್ಯೂಸ್್ಗಳಾಗಿ ಸುದ್ದಿಮಾಡುತ್ತವೆ. ಇದಕ್ಕೆಲ್ಲಾ ಕಾರಣಕರ್ತರು ಯಾರು? ಹೆಣ್ಣನ್ನು ಪೂಜಿಸುವ ದೇಶದಲ್ಲಿ ಹೀಗ್ಯಾಕೆ ಆಗುತ್ತಿದೆ? ದೇಶದ ಸಂಸ್ಕೃತಿ, ಮಹಿಳೆ ಪೂಜ್ಯಳು ಎಂಬ ವಾಕ್ಯ ಇವರಿಗೆ ಹೆಣ್ಣು -ಗಂಡು ಜತೆಯಾಗಿ ಪಾರ್ಟಿ ಮಾಡಿದರೆ ಮಾತ್ರ ನೆನಪಾಗುತ್ತದೆಯೇ?.

ಹೆಣ್ಣು ಮಕ್ಕಳು ಸಭ್ಯತೆಯ ಪರಿಧಿ ದಾಟಿ ಹೋಗಬಾರದು ನಿಜ. ಆದರೆ ಸಭ್ಯತೆ, ಆಚಾರಗಳನ್ನು ಹಿಂಸೆಯ ಮೂಲಕ ತಿಳಿ ಹೇಳಬೇಕೆ? ಸಂಸ್ಕೃತಿಯ ರಕ್ಷಣೆ ಎಂಬುದು ಮಹಿಳೆಗೆ ಮಾತ್ರ ಸೀಮಿತ ಯಾಕೆ? ಸಂಸ್ಕೃತಿಯ ರಕ್ಷಣೆಯ ಬಗ್ಗೆ ಕೂಗಾಡುವ ಈ ಮಂದಿ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯರ ಬಗ್ಗೆ ಏನಂತಾರೆ? ಅನೈತಿಕವಾಗಿ ಜನ್ಮ ತಾಳಿದ ಅದೆಷ್ಟೋ ಕಂದಮ್ಮಗಳು 'ಅಪ್ಪ' 'ಅಮ್ಮ' ಯಾರೆಂದು ಅರಿಯದೆ ಅನಾಥಾಲಯಗಳಲ್ಲಿ ಕಳೆಯುತ್ತಿವೆ. ಇನ್ನು ಕೆಲವು ಕಸದ ತೊಟ್ಟಿಯಲ್ಲಿ ಕೊಳೆತು ನಾಯಿ, ನರಿಗಳಿಗೆ ಆಹಾರವಾಗಿ ಹೋಗಿವೆ. ಯಾರಿಂದಲೋ ಅತ್ಯಾಚಾರಕ್ಕೊಳಗಾದ ಹೆಣ್ಮಗಳು ಸಮಾಜವನ್ನು ಎದುರಿಸಲಾಗದೆ ಜೀವ ಕಳೆದುಕೊಂಡಿದ್ದಾಳೆ. ಎಷ್ಟೋ ಅಮಾಯಕ ಹೆಣ್ಮಕ್ಕಳು ಆ್ಯಸಿಡ್ ದಾಳಿಗೊಳಗಾಗಿ ಮುಖಮುಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲಾ ನಮ್ಮ ಸಂಸ್ಕೃತಿಯ ಭಾಗವೇ ಅಲ್ಲವೇ? ಇದರ ಬಗ್ಗೆ ಸಮಾಜದ, ಸಂಸ್ಕೃತಿಯ ರಕ್ಷಕರು ಎಂದು ಕರೆಸಿಕೊಳ್ಳುವ ಜನರಲ್ಲಿ ಉತ್ತರವಿದೆಯೇ?

ಏನೇ ಆಗಲಿ, ಯಾರಿಗೇ ಆಗಲಿ ಹೊಡೆದು ಬಡಿದು ಸಂಸ್ಕೃತಿ ಕಲಿಸಲು ಸಾಧ್ಯವೆ? ನಾವು ಸಂಸ್ಕೃತಿಯ ರಕ್ಷಕರು ಎಂದು ಪೋಸ್ ಕೊಟ್ಟು ಹೋಂ ಸ್ಟೇ ಮೇಲೆ ದಾಳಿ ಮಾಡಿದ ಆ ಪುರುಷರು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಮರೆತಂತಿದೆ. ಇದೀಗ ಹೋಂ ಸ್ಟೇನಲ್ಲಿ ಆ ಯುವಕ ಯುವತಿಯರು ಬರ್ತ್್ಡೇ ಪಾರ್ಟಿ ಮಾಡೋಕೆ ಬಂದಿದ್ದಾರೆಯೇ ವಿನಾ ರೇವ್ ಪಾರ್ಟಿ ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಗೂಂಡಾಗಿರಿ ಮಾಡಿದವರ ಬಂಧನವೂ ಆಗಿದೆ. ಆದರೆ ಶಂಕೆಯ ಮೇರೆಗೆ ಒದೆ ತಿಂದ ಆ ಯುವಕ ಯುವತಿಯರ ಸ್ಥಿತಿ ಹೇಗಾಗಿರಬೇಡ?

ಒಟ್ಟಾರೆ ಈ ಘಟನೆಯಲ್ಲಿ ಹಲ್ಲೆ ನಡೆಸಿವರು ಯಾರೇ ಆಗಿರಲಿ...ಅದು ವಿಕೃತ ಮನಸ್ಸನ್ನು ತೋರಿಸುತ್ತದೆಯೇ ವಿನಾ ಸಂಸ್ಕೃತಿಯ ಕಾಳಜಿಯನ್ನಲ್ಲ. ಯಾಕೆಂದರೆ ವಿಧಾನಸಭೆಯಲ್ಲಿ ಸಚಿವರು ಬ್ಲೂಫಿಲಂ ನೋಡಿ ಎಂಜಾಯ್ ಮಾಡಿದಾಗ ತೆಪ್ಪಗಿದ್ದ ಈ ಮಂದಿ ಸಂಸ್ಕೃತಿ ಉಳಿಸುವ ಹೆಸರಿನಲ್ಲಿ ಹೆಣ್ಮಕ್ಕಳ ಮೇಲೆ ಹಲ್ಲೆ ಮಾಡಿರುವುದು ಹತಾಶ ಮನಸ್ಥಿತಿಯ ಸೂಚಕವೇ ಹೊರತು ಬೇರೇನು ಅಲ್ಲ!.

Sunday, July 22, 2012

ಒಂದು ಪೈದ್ಯ

ಇವತ್ತು 22/ 7 ಅಂದ್ರೆ Pi Approximation Day. π (ಪೈ) ಬಗ್ಗೆ ಈ ತಿಂಗಳ ರೀಡರ್ಸ್ ಡೈಜೆಸ್ಟ್್ನಲ್ಲಿ ತುಂಬಾ ಮಾಹಿತಿಪೂರ್ಣ ಲೇಖನ ಬಂದಿತ್ತು. ಅದರಲ್ಲಿ Piems (pi and poem) ಬಗ್ಗೆ ಓದಿದಾಗ ಇಂಥದ್ದೇ ಕವನ (ಪೈದ್ಯ) ಕನ್ನಡದಲ್ಲಿ ಯಾಕೆ ರಚಿಸಬಾರದು ಎಂದು ಅನಿಸಿತು. Piems ನಲ್ಲಿ ಪೈ ಬೆಲೆಯ ಪ್ರತಿಯೊಂದು ಅಂಕಿಗೆ ಸಮವಾಗಿ ಕವನದ ಅಕ್ಷರಗಳ ಜೋಡಣೆ ಇರುತ್ತದೆ.
ಅಂದರೆ 3.14159265358... ಈ ಅಂಕಿಗಳಿಗೆ ಸಮವಾಗಿ ಅಕ್ಷರ ಜೋಡಿಸಿದಾಗ ಕವನ ಈ ರೀತಿ ಮೂಡಿಬಂತು.

ಗೆಳೆಯಾ ನಾ ಹೇಳಲೇನು

ನಾ ಬರೆದಿರುವ ಹೃದಯದಾಕವನವನು

ನನ್ನ ಹೃದಯವೀಣೆಯು ಮಿಡಿಯುತಿದೆ

ಇನಿಯಾ

ಕಾಯುತಿರುವೆ ಒಲುಮೆಯಭಿಕ್ಷೆಗಾಗಿ