Thursday, December 30, 2010

ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು.
ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು.
ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ.

ಅವುಗಳು...
1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ)
2. ಟ್ರಾಫಿಕ್ ಜಾಮ್್ನಲ್ಲಿ ಒದ್ದಾಡಿ ಸುಸ್ತಾದಾಗ ಫ್ಲ್ಲಾಟ್್ಫಾರಂನಲ್ಲಿ ಗಾಡಿ ಓಡಿಸಿಕೊಂಡು ಬಂದದ್ದು (ಇನ್ಯಾರೋ ಫ್ಲಾಟ್್ಫಾರಂ ಮೇಲೆ ಗಾಡಿ ಓಡಿಸಿದ್ರೆ ನಂಗೆ ಕೋಪ ಬರುತ್ತೆ)
3. ನಂದಿಬೆಟ್ಟದ 'ಡೇಂಜರ್್' ಎಂದು ಬರೆದಿರುವ ಪ್ರದೇಶದಲ್ಲಿ ಹೋಗಿ ಫೋಟೋ ತೆಗೆಸಿಕೊಂಡದ್ದು ( ಭಯ ಆದ್ರೂ ಚಾಲೆಂಜ್ ಹಾಕಿದ ಕಾರಣ ಮಾತ್ರ ಅಲ್ಲಿಗೆ ಹೋದದ್ದು)
4. ನಮ್ಮ ರೂಮಿಗೆ ಇಲಿ ಬಂದಾಗ ಪಕ್ಕದ ರೂಮ್್ಗೆ ಇಲಿಯನ್ನು ಓಡಿಸಿ ಗಡದ್ದಾಗಿ ನಿದ್ದೆ ಮಾಡಿದ್ದು.
5. ನೀರು ಕಂಡರೆ ಭಯ. ಅಂತದರಲ್ಲಿ ಪೆಡಲ್ ತುಳಿಯುತ್ತಾ ಬೋಟಿಂಗ್ ಮಾಡಿದ್ದು.
6.ಮೊದಲ ಬಾರಿ ನೂಡಲ್ಸ್ (ರುಚಿಕರವಾಗಿ) ತಯಾರಿಸಿದ್ದು.
7. ಫ್ರೆಂಡ್್ನಿಂದ ಮ್ಯೂಸಿಕಲ್ ಕಾರ್ (ಆಟಿಕೆ) ಗಿಫ್ಟ್ ಪಡೆದುಕೊಂಡದ್ದು.
8. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ನನ್ನ ಕನ್ನಡ ಜ್ಞಾನ ಹೆಚ್ಚಿಸಿಕೊಂಡದ್ದು.
9. ಹಲವಾರು ಮಹಿಳೆಯರ ಸಂದರ್ಶನ ನಡೆಸುವ ಮೂಲಕ ಅನುಭವ ಹೆಚ್ಚಿಸಿಕೊಂಡದ್ದು.
10. ಜಾರಿ ಬಿದ್ದು ಕಾಲು ಗಾಯ ಮಾಡಿಕೊಂಡಾಗ, ಕಷ್ಟ ಎನಿಸಿದರೂ ರೂಮ್್ಮೇಟ್ಸ್ ಜೊತೆಗೆ ಸೇರಿ ನಕ್ಕಿದ್ದು.
11.ಸಿಕ್ಕಾಪಟ್ಟೆ ಖರ್ಚು ಮಾಡಿ ಕೊನೆಗೆ ನನ್ನನ್ನು ನಾನೇ ಬೈದುಕೊಂಡದ್ದು.

ಮುಂದಿನ ವರ್ಷದ ರೆಸಲ್ಯೂಷನ್...
1. ಚಾಕ್ಲೇಟ್್ಗೆ ಗುಡ್ ಬೈ ಹೇಳ್ಬೇಕು.
2. ಜಾಸ್ತಿ ಪುಸ್ತಕ ಓದ್ಬೇಕು, ಇನ್ನೂ ಚೆನ್ನಾಗಿ ಬರೆಯಲು ಕಲಿಬೇಕು.
3.ಸಿಟ್ಟು ಕಡಿಮೆ ಮಾಡಿಕೊಳ್ಬೇಕು.
4.ಖರ್ಚು ಕಡಿಮೆ ಮಾಡ್ಬೇಕು.
5. ಮಕ್ಕಳಾಟಿಕೆ ನಿಲ್ಲಿಸಿ ಲೈಫ್್ನಲ್ಲಿ ಸೀರಿಯಸ್ಸ್ ಆಗ್ಬೇಕು. (ಆಗ್ತೇನೋ ಇಲ್ವೋ ಎಂಬುದು ಸಂಶಯ)

ಸದ್ಯಕ್ಕೆ ಇಷ್ಟೇನೆ....ಇದರಲ್ಲಿ ಯಾವುದೆಲ್ಲಾ ಕಾರ್ಯ ನೆರವೇರಿದೆ ಎಂಬುದನ್ನು ಮುಂದಿನ ವರ್ಷ ಡಿಸೆಂಬರ್್ನಲ್ಲಿ ಹೇಳುತ್ತೇನೆ.

Friday, November 19, 2010

ಇವತ್ತು 'ಗಂಡಸರ ದಿನ' ಗೊತ್ತಾ?

ದೃಶ್ಯ 1

ಟೇಬಲ್ ಮೇಲಿರುವ ಪತ್ರವೊಂದನ್ನು ಅಪ್ಪ ತೆಗೆದು ಓದುತ್ತಾನೆ. ಕಣ್ಣೀರು ಸುರಿಸುತ್ತಾ, ನಡುಗುವ ಕೈಗಳಿಂದ ಆ ಪತ್ರವನ್ನು ಹಿಡಿದು

ಅಮ್ಮೂ....ನೀನೇ ನನ್ನ ಬದುಕು ಕಣೇ...ಇವತ್ತು ನೀನು ಆ ವಿಶ್ವಾಸವನ್ನು ಕಳೆದುಕೊಂಡಿದ್ದೀಯಾ...

ದೃಶ್ಯ -2
ಮನೆ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ತೀರ್ಮಾನಿಸಿದ್ದ ಮಗಳು ಅಮ್ಮು...ಅಳುತ್ತಾ ಅರ್ಧ ದಾರಿಯಿಂದ ಮತ್ತೆ ಮನೆಗೆ ಬರುತ್ತಾಳೆ.

ದೃಶ್ಯ-3

ಮನೆಗೆ ಬಂದವಳೇ ಅಪ್ಪನನ್ನು ತಬ್ಬಿಕೊಂಡು ಅಳುತ್ತಾಳೆ....

ಹಿನ್ನೆಲೆಯಲ್ಲಿ 'ವಿಶ್ವಾಸವೇ ಮಿಗಿಲು ಅಲ್ಲವೇ?' ಎಂಬ ಸ್ಲೋಗನ್್ನೊಂದಿಗೆ 'ಕಲ್ಯಾಣ್ ಜ್ಯುವೆಲ್ಲರ್ಸ್್'ನ ಜಾಹೀರಾತು ಟಿವಿ ಸ್ಕ್ರೀನ್್ನಲ್ಲಿ ಮೂಡಿಬರುತ್ತದೆ. (ನಾನು ಈ ಜಾಹೀರಾತು ನೋಡಿದ್ದು ಮಲಯಾಳಂ ವಾಹಿನಿಯಲ್ಲಿ, ಅದರ ಕನ್ನಡ ತರ್ಜುಮೆ ಇದು)

ದೃಶ್ಯ-4

ಇದಾದ ನಂತರ ಕಾರಿನ ಪಕ್ಕ ತನ್ನ ಪ್ರೇಯಸಿಗಾಗಿ ಕಾಯುತ್ತಾ ನಿಂತಿರುವ ಹುಡುಗ...
ಈ ದೃಶ್ಯ ಮಿಂಚಿ ಮರೆಯಾಗುತ್ತದೆ.

ಅಪ್ಪನ ಬಳಿಗೆ ಹಿಂತಿರುಗಿ ಬಂದ ಮಗಳು ವಿಶ್ವಾಸ ಉಳಿಸಿಕೊಂಡಳಲ್ವಾ ಎಂದು ನಿಟ್ಟುಸಿರು ಬಿಟ್ಟು, ಜಾಹೀರಾತು ತಂತ್ರಕ್ಕೆ ಭೇಷ್ ಎನ್ನುವಾಗ ಕೊನೆಯ ದೃಶ್ಯದಲ್ಲಿ ಕಂಡು ಬರುವ ಆ ಹುಡುಗನನ್ನು ಯಾರೂ ಕ್ಯಾರೇ ಅನ್ನಲ್ಲ ಅಲ್ವಾ? ಆಕೆ ಆತನೊಂದಿಗೆ ಮಾಡಿದದ್ದು 'ವಿಶ್ವಾಸ ವಂಚನೆ' ಅಲ್ವಾ ಎಂಬುದು ಹುಡುಗರ ಪ್ರಶ್ನೆ!

ಇದೊಂದು ಉದಾಹರಣೆಯಷ್ಟೇ. ಜಾಹೀರಾತು ವಿಷಯ ಬಿಟ್ಹಾಕಿ....
ಇವತ್ತು ಗಂಡಸರ ದಿನ ಅಂತೆ. ಅಂದ್ರೆ ವರುಷದಲ್ಲಿ ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ ಬಂದಂತೆ ಗಂಡಸರಿಗೂ ಒಂದು ದಿನ ಇದೇರಿ. ಮಹಿಳಾ ದಿನಾಚರಣೆ ಅಂದ ಕೂಡಲೇ ಮಹಿಳಾ ಮಣಿಗಳಲ್ಲಾ ಹೋರಾಟದ ನೆನಪುಗಳನ್ನು ಸವಿಯುತ್ತಾ, ದೌರ್ಜನ್ಯಗಳ ವಿರುದ್ದ ಕೂಗುತ್ತಾ, ಚರ್ಚಾಗೋಷ್ಠಿಗಳನ್ನು ಮಾಡುತ್ತಿರುವುದು ಸಾಮಾನ್ಯ. ಹಾಗಾದ್ರೆ ಗಂಡಸರು ಯಾವ ರೀತಿ ತಮ್ಮ ದಿನವನ್ನು ಆಚರಿಸುತ್ತಾರೆ?

ಹೇಳೋಕೆ ಹೋದ್ರೆ ಗಂಡಸರೂ ಮಹಿಳೆಯರಿಂದ ಶೋಷಣೆಗೊಳಗಾಗುತ್ತಾರೆ. ಮನೆಯಲ್ಲಿ ಹೆಂಡತಿಯ ಕಿರಿಕಿರಿ, ಕೈಕೊಟ್ಟು ಹೋದ ಹುಡುಗಿ, ಗಾಸಿಪ್ ಹಬ್ಬಿಸಿದ ವಾಚಾಳಿ ಹೆಂಗಸರಿಂದ ಮನೆ ಮುರಿದವರು, ಮನ ಮುರಿದವರು ಎಷ್ಟಿಲ್ಲ ಹೇಳಿ? ಆದ್ರೆ ಗಂಡಸರು ಯಾರೂ ಇದನ್ನು ಬಾಯ್ಬಿಟ್ಟು ಹೇಳಲ್ಲ. ಹೇಳಿದ್ರೂ ಯಾರೂ ನಂಬಲ್ಲ ಅಂತಾ ಅವರಿಗೆ ಗೊತ್ತು.

ಇನ್ನೊಂದು ವಿಷ್ಯ, ಯಾವುದೇ ಮಹಿಳೆ ಪುರುಷನ ಬಗ್ಗೆ ಹೇಳುವುದಾದರೆ ಆಕೆ ಅವನ ಕೆಟ್ಟ ಗುಣಗಳನ್ನೇ ಮೊದಲು ಬೊಟ್ಟು ಮಾಡುತ್ತಾಳೆ. ಪುರುಷ ಎಷ್ಟು ಒಳ್ಳೆಯವನೇ ಇರಲಿ, ಏನಾದರೂ ಚಿಕ್ಕ ತಪ್ಪೆಸಗಿದರೂ ಸಾಕು, ಆಲ್ ಮೆನ್ ಆರ್ ಸೇಮ್ ಎಂದು ಆಕೆ ನಿರ್ಧಾರ ಮಾಡಿಬಿಡುತ್ತಾಳೆ. ಈ ನಿಲುವು ಬದಲಾಗಬೇಕು. ಎಲ್ಲರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಎಂದು ಗೊತ್ತಿದೆಯಲ್ವಾ ಮತ್ಯಾಕೆ ಈ ಹೋಲಿಕೆ? ಇವತ್ತು ಗಂಡಸರ ದಿನಾಚರಣೆ ಅಲ್ವಾ... ಈ ದಿನವಾದರೂ ಗಂಡು ಹೆಣ್ಣೆಂಬ ತಾರತಮ್ಯವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಜೀವನದಲ್ಲಿ ಅಪ್ಪನಾಗಿ, ಗಂಡನಾಗಿ, ಮಗನಾಗಿ, ಪತಿಯಾಗಿ ಆಫ್್ಕೋರ್ಸ್ ಬಾಯ್್ಫ್ರೆಂಡ್ ಆಗಿ ಪ್ರೀತಿಯನ್ನು ನೀಡುವ ಗಂಡಸರಿಗೊಂದು ಹ್ಯಾಟ್ಸ್ ಆಫ್ ಹೇಳೋಣವೇ?

Sunday, October 17, 2010

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ.
ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ. ಹೆಚ್ಚಿನ ಯೋಚನೆಗಳು ತಲೆಯಲ್ಲಿ ಹೊಳೆಯುವುದೇ ಬಸ್ಸಿನಲ್ಲಿ ಸೀಟು ಸಿಕ್ಕದೆ ಚಡಪಡಿಸುವಾಗ, ಯಾವುದೋ ಪರೀಕ್ಷೆಗೆ ತುರಾತುರಿಯಲ್ಲಿ ಸಿದ್ದತೆ ನಡೆಸುವಾಗ ಇಲ್ಲದಿದ್ದರೆ ಬಾತ್್ರೂಮಲ್ಲಿ. ಆ ಸಮಯದಲ್ಲಿ ಬರೆಯಲಂತೂ ಸಾಧ್ಯವಿಲ್ಲ, ನಂತರ ಬರೆಯೋಣ ಅಂದ್ರೆ ಇನ್ನೊಂದು ಯೋಚನೆ ತಲೆಯೊಳಗೆ ಹೊಕ್ಕಿ ಅಲ್ಲಿ ಸಜ್ಜಿಗೆ ಬಜಿಲ್ ಆಗಿರುತ್ತೆ.

ಪತ್ರಿಕಾ ಕಚೇರಿ ಅಂದ ಮೇಲೆ ದಿನಾ ನಾವು ಬರೆಯುತ್ತಲೇ ಇರುತ್ತೇವೆ. ಅದೂ ಡೆಡ್್ಲೈನ್ ಇಟ್ಟುಕೊಂಡು. ಪ್ರತಿಯೊಂದು ದಿನವೂ ಹೊಸ ಹೊಸ ಐಡಿಯಾಗಳನ್ನು ಹುಡುಕಿ ನಮ್ಮನ್ನು ನಾವೇ ಅಪ್್ಡೇಟ್ ಮಾಡಿಕೊಳ್ಳಬೇಕು. ಅದೇನೋ ಇಂತಹ ವಿಷಯದ ಬಗ್ಗೆ ಬರೆಯಿರಿ ಅಂತಾ ಹೇಳಿದ್ರೆ, ಆ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಇಷ್ಟಾದ ಮೇಲೆ ಅದನ್ನು ಬರೆಯುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆ, ಅದೇ ಸ್ಟಾರ್ಟಿಂಗ್ ಪ್ಲಾಬ್ಲಂ. ಏನಂತಾ ಶುರು ಮಾಡಲಿ? ಎಂದು ಹತ್ತಾರು ಬಾರಿ ತಲೆಕೆರೆದು, ಕೀಬೋರ್ಡ್ ಕುಟ್ಟಿ ಸದ್ದು ಮಾಡಿ ಹಾಗೇ ಹೀಗೆ ಹೇಗೋ ಮೊದಲ ಪ್ಯಾರಾ ಪೂರ್ತಿಯಾದರೆ ಒಂದಿಷ್ಟು ಸಮಾಧಾನ. ಮತ್ತೆ ಅದು ಇದು ಅಂತಾ ಬರೆಯುತ್ತಾ ಹೋದರೆ ಲೇಖನ ಪೂರ್ಣವಾಗುತ್ತದೆ. ಏನೋ ಹುರುಪಿನಿಂದ ಸುದೀರ್ಘವಾಗಿ ಬರೆಯುತ್ತಲೇ ಹೋದಾಗ ಮತ್ತೊಂದು ಅಡಚಣೆ. ಅದೇ ಬೈಟ್ಸ್. ಲೇಖನದಲ್ಲಿ ಇಂತಿಷ್ಟು ಪದಗಳಿರಬೇಕು ಎಂದು ಮೊದಲೇ ಹೇಳಿರುತ್ತಾರೆ. 3000 ಪದಗಳ ಲೇಖನ ಹೇಳಿದರೆ ನಾವು ಬರೆದಾಗ ಅದು 4000ದ ಗಡಿ ದಾಟಿರುತ್ತದೆ. ಆವಾಗ ಮತ್ತೆ ಲೇಖನಕ್ಕೆ ಕತ್ತರಿ ಹಾಕಬೇಕು. ಪದಗಳ ಜೋಡಣೆಯನ್ನು ಬದಲಿಸಬೇಕು. ಕತ್ತರಿ ಹಾಕುವ ಲೇಖನಗಳು ಒಂದೆಡೆಯಾದರೆ ಇನ್ನು ಕೆಲವು ಲೇಖನಗಳಿಗೆ ನೀರು ಸೇರಿಸಬೇಕಾಗಿ ಬರುತ್ತದೆ. ನಾವು ಆಯ್ದು ಕೊಂಡ ವಿಷಯದ ಬಗ್ಗೆ ಹೆಚ್ಚೇನು ಹೇಳಲಿರುವುದಿಲ್ಲ ಆದರೆ ಅದನ್ನು ದೊಡ್ಡದಾಗಿ ಹೇಳಬೇಕು. ಆವಾಗ ಸಾರಿಗೆ ನೀರು ಸೇರಿಸಿದಂತೆ ಲೇಖನಕ್ಕೆ ಅದು ಇದು ಅಂತಾ ಸೇರಿಸಿ ಅದನ್ನು ಚ್ಯೂಯಿಂಗ್ ಗಂ ನಂತೆ ಎಳೆಯಬೇಕು. ಲೇಖನವೊಂದನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವ ಕಾರ್ಯ ಇದೆಯಲ್ವಾ ಅದು ಲೇಖನ ಬರೆಯುವುದಕ್ಕಿಂತಲೂ ಕಠಿಣವಾದುದು!


ಲೇಖನ ಬರೆಯಲು ಕುಳಿತರೆ ಕೆಲವೊಮ್ಮೆ ಮಾಹಿತಿಗಳಿಗಾಗಿ ತುಂಬಾ ತಡಕಾಡಬೇಕಾಗುತ್ತದೆ. ಇದ್ದ ಸರ್ಚ್ ಇಂಜಿನ್್ಗಳಲ್ಲೆಲ್ಲಾ ವಿವಿಧ ಕೀವರ್ಡ್ಸ್ ಕೊಟ್ಟು ಹುಡುಕಿ ಮಾಹಿತಿ ಕಲೆ ಹಾಕಬೇಕು. ಇಂಗ್ಲಿಷಿನಲ್ಲಿ ಸಿಕ್ಕ ಮಾಹಿತಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಇಲ್ಲವೇ ಒಂದಿಷ್ಟು ಅನುಭವದಿಂದ ಸಿಕ್ಕ ಪಾಠಗಳನ್ನು ಗುಡ್ಡೆ ಹಾಕಿ ಹೇಗೋ ಲೇಖನ ಸಿದ್ಧವಾಗಿತ್ತದೆ. ಆಮೇಲೆ ಲೇಖನ ಪ್ರಕಟವಾದಾಗ ಒಂದಿಷ್ಟು ಜನರು ತುಂಬಾ ಚೆನ್ನಾಗಿ ಬರೆದಿದ್ದಿ ಅಂತಾ ಹೊಗಳ್ತಾರೆ. ಇಷ್ಟೆಲ್ಲಾ ಹೇಳಿದ್ರೂ ಮನಸ್ಸಲ್ಲಿ ಏನೋ ಅತೃಪ್ತ ಭಾವ. ನಾನು ಹೇಳಬೇಕೆಂದಿದ್ದನ್ನು ಅಲ್ಲಿ ಹೇಳಲಾಗಿಲ್ಲ...ನಾನು ಮುಕ್ತವಾಗಿಯೇ ಬರೆದಿದ್ದೆ ಪ್ರಕಟಣೆಗೆ ಹೋಗುವ ಮುನ್ನ ಅದಕ್ಕೆ ಕತ್ತರಿ ಪ್ರಯೋಗ ನಡೆದಿದೆ. ಭಾಷೆ ನನ್ನದು ಆದರೆ ವಿಷಯ ಎಲ್ಲಿಂದಲೋ ಭಟ್ಟಿಇಳಿಸಿದ್ದು, ಇನ್ನೊಂದಿಷ್ಟು ಕಾಲಾವಕಾಶ ಸಿಕ್ಕಿದ್ದರೆ ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ಅನಿಸುತ್ತದೆ. ಪ್ರಕಟಗೊಂಡ ನಂತರವಂತೂ ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದರೆ ಚೆನ್ನಾಗಿತ್ತು, ವಾಕ್ಯ ರಚನೆ ಏನೋ ಸರಿಹೋಗಿಲ್ಲ ನನಗೆ ನಾನೇ ಅಂದು ಕೊಳ್ಳುತ್ತೇನೆ. ಅದೇ ವೇಳೆ ನನ್ನದೇ ಅನುಭವವನ್ನು ಬರೆದು ಪ್ರಕಟಿಸಿದರೆ ಅದರಲ್ಲೇನೋ ತೃಪ್ತಭಾವ. ನನ್ನ ಅನುಭವ ನನ್ನದು...ಕಾಪಿರೈಟ್ ಸಮಸ್ಯೆಯಿಲ್ಲ...ಇದಕ್ಕಿಂತ ಮಿಗಿಲಾಗಿ ಆ ಲೇಖನದಲ್ಲಿ ಸ್ವಂತಿಕೆ ಇರುತ್ತದೆ. ಇಂತಹಾ ಸ್ವಂತಿಕೆಯಿರುವ ಲೇಖನಗಳು ಬರೆದಾಗ ಮನಸ್ಸು ಹಗುರವಾಗುತ್ತದೆ. 'ಇದು ನನ್ನದು' ಎಂದು ಎದೆಮುಟ್ಟಿ ಹೇಳುವಾಗ ಅನುಭವಿಸುವ ಆನಂದವಿದೆಯಲ್ವಾ ಅದನ್ನು ಅನುಭವಿಸಿದವನೇ ಬಲ್ಲ!.

Thursday, September 9, 2010

ದೊಡ್ಡವರಾಗುವುದೆಂದರೆ....?

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ. ಆವಾಗ ನನ್ನ ಇನ್ನೊಬ್ಬಳು ಕಸಿನ್, ನಾವೂ ದೊಡ್ಡವರಾದ್ರೆ ಇಷ್ಟೆಲ್ಲಾ ಗೌಜಿ ಮಾಡ್ತಾರಂತೆ, ತುಂಬಾ ಸ್ವೀಟ್ಸ್ ತಿನ್ಬಹುದಲ್ವಾ ಅಂದಿದ್ಳು. ಅದಕ್ಕೆ ಇನ್ನೊಬ್ಬಳು ನಿನ್ನ ಅಕ್ಕ ಮೊದಲು ದೊಡ್ಡವಳಗ್ತಾಳೆ ಮತ್ತೆ ನೀನು ಅಂದಾಗ ನನ್ನ ಅಕ್ಕ ಬೇಗ ದೊಡ್ಡವಳಾಗಲಿ ಆವಾಗ ನನಗೂ ತುಂಬಾ ಸ್ವೀಟ್ಸ್ ತಿನ್ನೋಕೆ ಸಿಗುತ್ತೆ ಅಂತಾ ಪುಟ್ಟ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದೆ.

ಅದಿರಲಿ ಬಿಡಿ, ಮನೆಯಲ್ಲಿ ನಾನು ಏನು ಹೇಳಿದ್ರೂ 'ನೀನು ಚಿಕ್ಕವಳು' ಎಂಬ ಮಾತು by Default ಆಗಿ ಎಲ್ಲರ ಬಾಯಿಂದ ಬರುತ್ತಿತ್ತು. ಅದು ಮಾಡಿಕೊಡಲಾ? ಇದು ಮಾಡಬಹುದಾ? ಅಂತಾ ಕೇಳಿದರೂ ಇದೇ ಉತ್ತರ. ಏಳನೇ ಕ್ಲಾಸಿಗೆ ತಲುಪಿದ್ರೂ 'ಚಿಕ್ಕವಳು' ಎಂಬ ಪಟ್ಟ ನಂಗೇನೇ. ಅಕ್ಕ ಹಾಸ್ಟೆಲ್್ನಲ್ಲಿದ್ದುದರಿಂದ ಮನೆಯಲ್ಲಿ ನಾನೊಬ್ಬಳೇ ಹೆಣ್ಮಗಳು. ಕೆಲವೊಮ್ಮೆ ಅಮ್ಮ 'ನೀನು ಚಿಕ್ಕ ಹುಡುಗಿಯೇನಲ್ಲ' ಅಂತಾ ಹೇಳಿದ್ರೆ ಅದೇ ಹೊತ್ತಿಗೆ ಪಪ್ಪ, ಅವಳು ಇನ್ನೂ ಚಿಕ್ಕವಳು ಯಾಕೆ ಬೈತಿದ್ದೀಯಾ ಅಂತಾ ಅಮ್ಮನಿಗೆ ಕೇಳ್ತಿದ್ರು. ಶಾಲೆ ಮುಗಿಸಿ ಹೈಸ್ಕೂಲ್ ಸೇರಬೇಕಾದಾಗ ಗೆಳತಿಯರೆಲ್ಲರೂ ಅವರವರ ಇಷ್ಟದ ಹೈಸ್ಕೂಲ್್ನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ನನ್ನ ಇಷ್ಟದ ಹೈಸ್ಕೂಲ್ ಹೇಳಿದಾಗ ನಿಂಗೇನು ಗೊತ್ತು ನೀನು ಚಿಕ್ಕವಳು... ನಾವು ಹೇಳಿದ ಹೈಸ್ಕೂಲ್್ಗೆ ಸೇರಬೇಕು. ಅಲ್ಲಿಯ ಬಗ್ಗೆ ಎಲ್ಲಾ ವಿಚಾರಿಸಿ ಆಗಿದೆ ಅಂತಾ ಪಪ್ಪ ಹೇಳಿದ್ದರು.

ಸರಿ, ಹೈಸ್ಕೂಲ್ ಹತ್ತಿದಾಗ ನಾನಿನ್ನು 'ದೊಡ್ಡವಳು' ಎಂಬ ಭಾವನೆ ಬರತೊಡಗಿತ್ತು. ಯಾಕೆಂದರೆ ಕ್ಲಾಸಿನಲ್ಲಿ ಟೀಚರ್ ಇನ್ನೇನು ನೀವು ಚಿಕ್ಕ ಮಕ್ಕಳಲ್ಲ, ಹೈಸ್ಕೂಲ್ ಹುಡುಗೀರು ಅಂತಾ ಹೇಳುವಾಗ ಮುಖದಲ್ಲಿ ಗಂಭೀರತೆ ಬರುತ್ತಿತ್ತು. ಇಂತಿರ್ಪ, ಮನೆಗೆ ಬಂದ್ರೆ ಪುಟ್ಟ ಹುಡುಗಿಯೇ ಆಗಬೇಕಾಗಿತ್ತು. ಅಷ್ಟೊತ್ತಿಗೆ ನನ್ನಕ್ಕಿಂತ ಎರಡು ವರ್ಷ ಚಿಕ್ಕವನಾಗಿದ್ದ ತಮ್ಮನೂ ಅಣ್ಣನಂತೆ ವರ್ತಿಸುತ್ತಿದ್ದ. ಅವನೂ ಕೂಡಾ ನೀನು ಇನ್ನೂ ಚಿಕ್ಕವಳು ಅಂತಾ ಅಪ್ಪ ಅಮ್ಮನ ಜೊತೆ ರಾಗ ಎಳೆಯುತ್ತಿದ್ದರೆ ಸಿಟ್ಟು ಬರುತ್ತಿತ್ತು. ಅಂತೂ ಇಂತೂ ಹೈಸ್ಕೂಲ್ ಅವಧಿಯಲ್ಲಿ 'ದೊಡ್ಡವಳಾದರೂ' ಯಾವುದೇ ಫಂಕ್ಷನ್ ಮಾಡಿಲ್ಲ. ಆ ಸಂಭ್ರಮಾಚರಣೆ ಬೇಕಿತ್ತು, ಸ್ವೀಟ್ಸ್ ತಿನ್ಬೇಕು ಎಂಬ ಆಶೆ ಆವಾಗ ಉಳಿದಿರಲೂ ಇಲ್ಲ. ನಾನಿನ್ನು ಚಿಕ್ಕವಳಲ್ಲ ಎಂದು ಮನಸ್ಸಲ್ಲೇ ಬೀಗುತ್ತಿದ್ದರೂ, ಯಾಕಪ್ಪ ದೊಡ್ಡವಳಾದೆ ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿತ್ತು. ಯಾಕೆಂದರೆ ಹುಡುಗಿ ದೊಡ್ಡವಳಾದಳು ಅಂದ ಮೇಲೆ ಎಷ್ಟೊಂದು ನಿರ್ಬಂಧಗಳು. ಅಲ್ಲಿಯ ವರೆಗೆ ಮಾವನ ಮಕ್ಕಳ (ಅಣ್ಣಂದಿರು) ಜೊತೆ ಸ್ವಚ್ಛಂದವಾಗಿ ಆಡುತ್ತಿದ್ದ ನನಗೆ ಇನ್ಮುಂದೆ ಅವರ ಜೊತೆ ಅಷ್ಟೊಂದು ಆಪ್ತವಾಗಿರಬೇಡ ಎಂಬ ಅಮ್ಮನ ಸಲಹೆ. ಇಂತಿಂತ ಡ್ರೆಸ್ ಹಾಕ್ಬೇಕು, ಅದನ್ನು ಹಾಗೆ ಹಾಕ್ಬೇಕು, ಹೀಗೆ ಹಾಕ್ಬಾರ್ದು ಎಂಬ ಸಲಹೆ ಒಂದೆಡೆಯಾದರೆ 'ಆ ದಿನಗಳಲ್ಲಿ' ದೂರವಿರಬೇಕು. ಅದು ಮುಟ್ಟುವಂತಿಲ್ಲ, ಅಪ್ಪನ ಜೊತೆಯೂ ಸಲುಗೆಯಿಂದ ಇರುವಂತಿಲ್ಲ. ಅಪ್ಪನಿಂದ ದೂರವಿರಬೇಕಾಗಿ ಬಂದಾಗ ಹಿಂಸೆ ಅನಿಸ್ತಾ ಇತ್ತು. ಆವಾಗ ಯಾಕೆ ಹೆಣ್ಣಾಗಿ ಹುಟ್ಟಿದೆನೋ, ಹುಡುಗ ಆಗಿದ್ರೆ ಈ ಸಮಸ್ಯೆ ಇರುತ್ತಿರಲಿಲ್ಲವಲ್ಲಾ ಅಂತಾ ಯೋಚಿಸ್ತಿದ್ದೆ. ಹೈಸ್ಕೂಲ್ ಮುಗಿದು ಪ್ಲಸ್ ಟು, ನಂತರ ಇಂಜಿನಿಯರಿಂಗ್ ಕಾಲೇಜು, ಕೋರ್ಸು ಎಲ್ಲವೂ ಮನೆಯವರದ್ದೇ ಚಾಯ್ಸ್. ಆವಾಗ ಅಕ್ಕ ಕೂಡಾ ನಿಂಗೇನು ಗೊತ್ತು? ಸ್ಕೋಪ್ ಇರುವ ಕೋರ್ಸಿಗೇ ಸೇರ್ಬೇಕು ಎಂದು, Information Technology ಆಯ್ಕೆ ಮಾಡಿಕೊಂಡದ್ದು ಆಯ್ತು.

ಇಂಜಿನಿಯರಿಂಗ್ ಸೇರಿದ ಮೊದಮೊದಲಿಗೆ ಕಷ್ಟವಾದರೂ ಆಮೇಲೆ ಇಷ್ಟವಾಗತೊಡಗಿತು. ಕಾಲೇಜಿನಲ್ಲಿ ಮೊದಲ ದಿನ ನಮ್ಮ ಟೀಚರೊಬ್ಬರು ಐಟಿ ಕೋರ್ಸಿಗೆ ಇಷ್ಟಪಟ್ಟು ಸೇರಿದವರ್ಯಾರು ಕೈ ಎತ್ತಿ ಎಂದಾಗ ಬೆರಳೆಣಿಕೆಯ ಮಂದಿಯಷ್ಟೇ 'ಹೂಂ' ಅಂದಿದ್ದರು. ಬಾಕಿ ಉಳಿದವರೆಲ್ಲಾ ಅಮ್ಮ, ಅಪ್ಪ ಹೇಳಿದ್ರು, ಬೇರೆ ಬ್ರಾಂಚ್್ನಲ್ಲಿ ಸೀಟು ಸಿಕ್ಕಿಲ್ಲ, ಹೈಯರ್ ಆಪ್್ಶನ್ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆಮೇಲೆ 'ನೀವು ಇಂಜಿನಿಯರಿಂಗ್ ಮುಗಿಸಿ ಏನಾಗ್ಬೇಕು ಅಂತಿದ್ದೀರಾ?' ಎಂದು ಕೇಳಿದಾಗ ಹೆಚ್ಚಿನವರ ಉತ್ತರ ಬೆಂಗಳೂರು ಹೋಗಿ ಸಾಫ್ಟ್್ವೇರ್ ಕಂಪೆನಿಯಲ್ಲಿ ಕೆಲಸ ಮಾಡ್ಬೇಕು. ಕೆಲವು ಹುಡುಗರು ಗಲ್ಫ್ ಅಂತಲೂ, ಹುಡುಗಿಯರು ಕೋರ್ಸ್ ಮುಗಿದ ನಂತರ ನೋಡ್ಬೇಕು ಅಂತಾ ಉತ್ತರಿಸಿದ್ದರು. ನನ್ನದು ಲಾಸ್ಟ್್ಬೆಂಚ್ ಆದ ಕಾರಣ, ಕೊನೆಗೆ ನಮ್ಮಲ್ಲಿ ನೀವು? ಅಂತಾ ಕೇಳಿದಾಗ ನನ್ನ ಗೆಳತಿಯರಿಬ್ಬರು ಈವಾಗ ಯಾವುದೇ ನಿರ್ಧಾರ ತೆಗೊಂಡಿಲ್ಲ ಅಂತಾ ಜೊತೆಯಾಗಿ ಹೇಳುವುದೇ? ಮತ್ತೆ ನನ್ನ ನಂಬರ್, 'YOU?' ಅಂತಾ ಪ್ರಶ್ನಾರ್ಥಕವಾಗಿ ಟೀಚರ್ ಕೇಳಿದಾಗ ನಂಗೆ ಏನು ಹೇಳಬೇಕೆಂದು ತೋಚದೆ ಒಂದು ನಿಮಿಷ ಮೌನವಾಗಿಯೇ ಇದ್ದೆ. ಕ್ಲಾಸು ನಿಶ್ಶಬ್ದವಾಗಿತ್ತು. Yes, Tell me ಅಂದಾಗ i want to become a writer ಅಂದು ಬಿಟ್ಟೆ. ಕ್ಲಾಸಿಗೆ ಕ್ಲಾಸೇ ನನ್ನತ್ತ ನೋಡುತ್ತಿದ್ದೆ. ಆ ಮೌನವನ್ನು ಸೀಳಿಕೊಂಡು ಮೇಡಂ " ಮತ್ಯಾಕೆ ನೀನಿಲ್ಲಿಗೆ ಬಂದೆ. ಯಾವುದಾದರೂ ಆರ್ಟ್ಸ್ ಕಾಲೇಜಿಗೆ ಸೇರಬಹುದಿತ್ತಲ್ವಾ, ಅದೂ ಅಲ್ಲದೆ ನೀನು ಕನ್ನಡ ಮೀಡಿಯಂನಲ್ಲಿ ಓದಿದ ಹುಡುಗಿ, ಸರಕಾರಿ ಕಾಲೇಜಿಗೆ ಸೇರಿದ್ದರೆ ರ್ಯಾಂಕ್ ಬರುತ್ತಿದ್ದಿ" ಎಂದರು. ನಂಗೂ ಆ ಆಸೆಯಿತ್ತು ಆದರೆ ಎಲ್ಲವೂ ನಾನು ಅಂದುಕೊಂಡಾಗೆ ಆಗಲ್ವಲ್ಲಾ?

ಹೇಗೋ ಕಾಲೇಜು ಮುಗಿಯಿತು. ನಂತರ ಕೆಲಸ ಹುಡುಕ್ಬೇಕು. ಒಂದೆರಡು ತಿಂಗಳು NIIT instituteನಲ್ಲಿಯೂ, ಸರಕಾರಿ ಐಟಿಐನಲ್ಲಿ ನನ್ನಕ್ಕಿಂತ ದೊಡ್ಡವರಿಗೆ ಪಾಠ ಹೇಳಿಕೊಟ್ಟು ನಾನೂ 'ಮೇಡಂ' ಅಂತಾ ಕರೆಸಿಕೊಂಡೆ. ಬಿಡುವು ಸಿಕ್ಕಾಗೆಲ್ಲಾ ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಜರ್ನಲಿಸಂನತ್ತ ಮನಸ್ಸು ವಾಲತೊಡಗಿತ್ತು. ಅದೇ ವೇಳೆ ಚೆನ್ನೈ ವೆಬ್್ದುನಿಯಾದಲ್ಲಿ ಆನ್್ಲೈನ್ ಜರ್ನಲಿಸ್ಟ್್ಗೆ ಸಲ್ಲಿಸಿದ ಅರ್ಜಿಗೆ ಉತ್ತರ ಬಂದಿತ್ತು. ಇದೇ ಛಾನ್ಸು, ಜರ್ನಲಿಸ್ಟ್ ಆಗಲು ಎಂದು ಮನೆಯವರನ್ನೆಲ್ಲಾ ಒಲಿಸಿ, ಅಪ್ಪನನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ, ಇದು ಕೈ ಬಿಟ್ಟು ಹೋದ್ರೆ ನಾನು ಯಾವುದೋ ಇನ್ಸಿಟ್ಯೂಟ್್ನಲ್ಲಿ ಪ್ರೋಗ್ರಾಮಿಂಗ್ ಲಾಂಗ್ವೇಜ್ ಹೇಳಿಕೊಡ್ಬೇಕು, ಇಲ್ಲದಿದ್ರೆ ಗೆಸ್ಟ್ ಲೆಕ್ಚರ್ ಆಗ್ಬೇಕು ಅಂತಾ ಚೆನ್ನೈಗೆ ಹೋದೆ. ಅಲ್ಲಿ ನನಗೆ ಉತ್ತಮ ಅವಕಾಶ ಸಿಕ್ಕಿತು. ಲೋಕಲೈಸೇಷನ್ ಟೀಮ್್ನಲ್ಲಿ ಕೆಲಸ ಮಾಡುವುದರ ಜೊತೆಗೆ ನನ್ನ ಬರವಣಿಗೆ ಕಾಗದದಿಂದ ಇಂಟರ್ನೆಟ್್ಗೆ ಬರತೊಡಗಿತು. ಕೆಲಸದ ಜೊತೆ ಬ್ಲಾಗ್್ಲೋಕ ಪರಿಚಯವಾಗುವ ಮೂಲಕ ಹಲವಾರು ಬ್ಲಾಗ್ ಗೆಳೆಯರನ್ನೂ ಸಂಪಾದಿಸಿಕೊಂಡೆ.

ಚೆನ್ನೈಯಲ್ಲಿ ಒಬ್ಬಳೇ ಇರಬೇಕಾದಾಗ ನನ್ನಷ್ಟಕ್ಕೇ ನಾನು ಪ್ರಬುದ್ಧಳಾಗುತ್ತಿದ್ದೆ. ಮನೆಯಲ್ಲಿ ಎಲ್ಲ ಕಾರ್ಯವೂ ಅಪ್ಪ ಅಮ್ಮನ ಸಹಾಯದಿಂದ ಮಾಡುತ್ತಿದ್ದ ದಿನಗಳು ಮುಗಿದವು. ನನ್ನ ಕೆಲಸ ನಾನೇ ಮಾಡ್ಬೇಕು, ಬಿದ್ದರೂ, ಎದ್ದರೂ ನೋವು ನಗು ಎಲ್ಲವೂ ನನಗೆ ಮಾತ್ರ. ಜೀವನಕ್ಕೆ ಹೊಸ ತಿರುವು ಲಭಿಸಿದ್ದು ಅಲ್ಲಿ. ಅಲ್ಲಿಯವರೆಗೆ ಮಕ್ಕಳಾಟವಾಡುತ್ತಿದ್ದ ನಾನು ಜೀವನದ ಬಗ್ಗೆ ಕೆಲಸದ ಬಗ್ಗೆ ಗಂಭೀರವಾಗಿ ಚಿಂತಿಸತೊಡಗಿದೆ. ಪತ್ರಿಕೆಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ ತೀವ್ರವಾಗುತ್ತಿದ್ದಂತೆ 'ಕನ್ನಡ ಪ್ರಭ'ದಲ್ಲಿ ಕೆಲಸ ಸಿಕ್ಕಿ ಬೆಂಗಳೂರಿಗೆ ಬಂದೆ. ಚಿಕ್ಕಂದಿನಲ್ಲಿ ಉದಯವಾಣಿ ಓದಿ, ಹೈಸ್ಕೂಲ್್ನಲ್ಲಿ ಪ್ರಜಾವಣಿಯತ್ತ ಆಕರ್ಷಿತಳಾಗಿ, ಕಾಲೇಜು ದಿನಗಳಲ್ಲಿ ವಿಜಯಕರ್ನಾಟಕದ 'ಸುದ್ದಿಮನೆ ಕತೆ' 'ನೂರೆಂಟು ಮಾತು', 'ಬೆತ್ತಲೆ ಜಗತ್ತು' ಅಂಕಣದ ಫ್ಯಾನ್ ಆಗಿ 'ಕನ್ನಡಪ್ರಭ' ಪತ್ರಕರ್ತೆಯಾದೆ. ಈವಾಗ ಬೆಂಗಳೂರು ಬಂದು ಎರಡು ವರ್ಷಗಳಾಯಿತು. ಈ ಎರಡು ವರ್ಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ. ಹುಚ್ಚು ಪ್ರೀತಿಯಲ್ಲಿ ಬಿದ್ದು ಇನ್ನು ಜೀವನವೇ ಬೇಡ ಎಂದು ಅತ್ತು, ಆಮೇಲೆ ಸಾವರಿಸಿ 'ನೀನಿಲ್ಲದಿದ್ದರೂ ನಾನು ಬದುಕ್ತೇನೆ ನೋಡು' ಎಂದು ಧೈರ್ಯದಿಂದ ನಿಂತ ಆ ಹುಡುಗಿ ನಾನೇನಾ? ಅಂತಾ ನನಗೆ ಅಚ್ಚರಿಯಾಗುತ್ತಿದ್ದೆ. ಅಲ್ಲಿಯವರೆಗೆ ವಿಶ್ವಾಸರ್ಹರಾಗಿದ್ದ್ದ ಫ್ರೆಂಡ್ಸ್ ಏನೋ ನೆಪ ಹೇಳಿ ದೂರ ಸರಿದಾಗ, ಅಲ್ಲಿಯವರೆಗೆ ಪರಿಚಯವೇ ಇಲ್ಲದ ಬ್ಲಾಗಿಗರು, ಸಹೋದ್ಯೋಗಿಗಳು ಸಾಂತ್ವನದ ಮಾತುಗಳನ್ನಾಡಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟ ಆ ಅಳುಮುಂಜಿ ಹುಡುಗಿ ನಾನೇನಾ? ಸರಿದು ಹೋದ ದಿನಗಳು ನನಗೆ ಜೀವನವೇನೆಂಬುದನ್ನು ಕಲಿಸಿದೆ. ಈವಾಗ ನನ್ನ ಅಪ್ಪ ಅಮ್ಮ ನೀನು ಚಿಕ್ಕವಳು ಅಂದ್ರೂ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಜವಾಬ್ದಾರಿ ಬಂದಿದೆ ಎನ್ನುವಾಗ ಸಂತೋಷ ಆಗ್ತಿದೆ. ಕೆಲವೊಮ್ಮೆ ಮಕ್ಕಳಂತೆಯೇ ಚಿಕ್ಕವಳಾಗಿದ್ದರೆ ಒಳ್ಳೆಯದೂ ಅಂತಾ ಅನಿಸಿದರೂ ಇದು ಜೀವನ....ALL IS WELL ಅಂತಾ ನಮ್ಮ ಎದೆಯನ್ನು ನಾವೇ ತಟ್ಟಿಕೊಂಡು ಮುಂದೆ ಸಾಗಬೇಕಾಗಿದೆ. ಜೀವನದ ಏಳು ಬೀಳುಗಳಿಂದ ಕಲಿಯುತ್ತಾ ನಾವು ದೊಡ್ಡವರಾಗ್ತೇವೆ ಎಂದು ಪಪ್ಪ ಹೇಳಿದ್ದು ಈಗ ನಿಜ ಅಂತಾ ಅನಿಸ ತೊಡಗಿದೆ.

Friday, July 9, 2010

ದೇವರು ಕಾಣೆಯಾಗಿದ್ದಾನೆ...

ಬ್ರೇಕಿಂಗ್ ನ್ಯೂಸ್...
ದೇವರು ಕಾಣೆಯಾಗಿದ್ದಾನೆ.
ಹೌದಾ?
ಹೂಂ...
ನಮ್ಮದ್ದಾ ಅವರದ್ದಾ?
ಅವರದ್ದಾದರೆ ಬಿಡಿ, ನಮ್ಮದ್ದಾದರೆ ಕಷ್ಟ!!
ಟೀವಿ ಪರದೆ ಮುಂದೆ ಕಣ್ಣಿಟ್ಟು
ಮೊಬೈಲ್್ನಲ್ಲಿ ಫ್ಲಾಶ್ ನ್ಯೂಸ್್ಗಾಗಿ
ತಡಕಾಡುತ್ತಾರೆ...
ಸಿಕ್ಕಿದ್ರಾ?


ಮೈಕ್, ಕ್ಯಾಮೆರ ರೆಡಿ...
'ದೇವರು ಕಾಣೆಯಾಗಿದ್ದಾರೆ...'
ಯಾವಾಗ?
ಬನ್ನಿ ನಮ್ಮ ಪ್ರತಿನಿಧಿಯಲ್ಲಿ ಕೇಳೋಣ..
ದೇವರು ಈವರೆಗೆ ಪತ್ತೆಯಾಗಿಲ್ಲ!!
ಅವರಿಗಾಗಿ ಶೋಧ ನಡೆಯುತ್ತಿದ್ದೆ...
ಅವರು ಸಿಗುವ ಸಾಧ್ಯತೆ ಇದೆಯೇ?
ಬನ್ನಿ ನೋಡೋಣ...
ಒಂದು ಪುಟ್ಟ ವಿರಾಮದ ನಂತರ...
ದೇವರು ಕೊನೆ ಬಾರಿ ಕಂಡದ್ದು ಯಾರಿಗೆ?...


ದೇವರು ಈಗ ಎಲ್ಲಿದ್ದಾರೆ?
ನಮ್ಮ ಆಪ್ತರಾಗಿದ್ದರು ಅವರು...ಜನ ಹೇಳುತ್ತಾರೆ
ಪುಟಗಟ್ಟಲೆ ಬರೆಯಿರಿ, ಅವರ ಆಪ್ತರ ಯಾರು?
ಸಂದರ್ಶನ ನಡೆಸಿ, ಹಳೇ ಫೋಟೋ
ಹುಡುಕಿ ಫೋಟೋ ಗ್ಯಾಲರಿ ಮಾಡಿ...ಕ್ಲಿಕ್


ಕಣ್ಣೀರು ಸುರಿಸಿದರು,
ದೇವರು ಮುನಿಸಿಕೊಂಡಿದ್ದಾನೆ ಎಂದು
ಬಗೆ ಬಗೆಯಾಗಿ ಅವನಲ್ಲಿ ಕ್ಷಮೆ ಕೇಳಿದರು
ಅಡ್ಡ ಬಿದ್ದರು, ಸುತ್ತು ಬಂದರು...
ಈ ಎಲ್ಲಾ ಕರಾಮತ್ತು ನೋಡಿ
"ನಿನ್ನಲ್ಲಿಯೇ ನಾನಿರುವಾಗ ನನ್ನನ್ನು
ಹುಡುಕುತ್ತಿಯಲಾ.್ಲ..." ಎಂದು
ದೇವರು ನಗುತ್ತಾ ಸುಮ್ಮನಾದ.

Saturday, June 19, 2010

ನಾನೂ ನನ್ನ ಸ್ವಂತ ಕನಸು...

ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾ ಸ್ವೀಟ್. ಪಪ್ಪನ ಮುದ್ದಿನ ಮಗಳು ನಾನು. ತನ್ನ ತಮ್ಮ ಅಮ್ಮನ ಸೀರೆ ಸೆರಗು ಹಿಡಿದು ಓಡಾಡುತ್ತಿದ್ದರೆ, ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್. ನನಗೆ ಎರಡು ವರ್ಷವಿರುವಾಗಲೇ ನಾನು ಅಪ್ಪನ ಎದೆಗೆ ಅಂಟಿಕೊಂಡು ನಿದ್ದೆಹೋಗುತ್ತಿದ್ದೆ. ಅಮ್ಮನ ಗೊಡವೆಯೇ ಇಲ್ಲ, ಅವಳಿಗೆ ಅಪ್ಪ ಮಾತ್ರ ಸಾಕಿತ್ತು ಎಂದು ಅಮ್ಮ ಈಗಲೂ ನನ್ನ ಬಾಲ್ಯವನ್ನು ನೆನಪಿಸುತ್ತಾರೆ. ಆ ಬಾಲ್ಯವೇ ಅಂತದ್ದು, ಎಲ್ಲದಕ್ಕೂ ನಂಗೆ ಪಪ್ಪ ಬೇಕು. ಸ್ನಾನ ಮಾಡಿಸುವುದು, ತಿಂಡಿ ತಿನಿಸುವುದು, ಶಾಲೆಗೆ ರೆಡಿ ಮಾಡಿಸುವಾಗ ಜಡೆ ಹಾಕಲು ಮಾತ್ರ ಅಮ್ಮ (ಅದು ಅಪ್ಪನಿಗೆ ಗೊತ್ತಿಲ್ಲದ ಕಾರಣ)ನನ್ನು ಕರೆಯುತ್ತಿದ್ದೆ. ನಾನು ಚಿಕ್ಕವಳಿರುವಾಗ ಅಮ್ಮ ಅಂದ್ರೆ ನಂಗೆ ತುಂಬಾ ಭಯ. ಅಣ್ಣನ ತುಂಟಾಟಿಕೆಗೆ ಬೈಯ್ಯುವ ಅಮ್ಮನನ್ನು ನೋಡಿದರೆ ನನಗೆ ನಡುಕ. ಅಪ್ಪ ನಮ್ಮನ್ಯಾರನ್ನು ಬೈಯ್ಯಲ್ಲ. ತುಂಬಾ ಪ್ರೀತಿಯಿಂದಲೇ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಅದು ಮಾಡಬಾರದು ಇದು ಮಾಡಬಾರದು ಎಂದು ಯಾವತ್ತಿಗೂ ಒತ್ತಡ ಹಾಕುತ್ತಿರಲಿಲ್ಲ ಮಾತ್ರವಲ್ಲದೆ ಮಾಡಬಾರದು ಎಂದು ಹೇಳಿದರೆ ಅದ್ಯಾಕೆ ಮಾಡಬಾರದು? ಎಂದು ನಮಗೆ ವಿವರಿಸಿ ಹೇಳುತ್ತಿದ್ದರು. ಆಟವಾಡುವಾಗಲೂ ಪಪ್ಪನೇ ನನ್ನ ಸಂಗಾತಿ. ನಾನು ನಾಲ್ಕನೇ ಕ್ಲಾಸು ಕಲಿಯುತ್ತಿರಬೇಕಾದರೆ ಸ್ಕಾಲರ್ ಶಿಪ್ ಪರೀಕ್ಷೆ ಇತ್ತು. ಅದಕ್ಕಿರುವ ಗೈಡ್ ಕನ್ನಡದಲ್ಲಿ ಸಿಗುತ್ತಿರಲಿಲ್ಲ, ಆವಾಗ ಅಪ್ಪ ಮಲಯಾಳಂ ಗೈಡ್ ತೆಗೆದುಕೊಂಡು ಬಂದು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನಂಗೆ ಹೇಳಿಕೊಟ್ಟಿದ್ದರು.
ಹೀಗೆ ಅಪ್ಪನ ಸಹಾಯದಿಂದಲೇ ಮಲಯಾಳಂನಲ್ಲಿ ಹೆಚ್ಚಿನ ಹಿಡಿತ ಸಾಧಿಸಲು ಸಾಧ್ಯವಾಯಿತು. ಆಮೇಲೆ ನಾನು ಹೈಸ್ಕೂಲ್ ತಲುಪಿದಾಗ ನನ್ನ ತಮ್ಮನಿಗೆ ಮಲಯಾಳಂನಲ್ಲಿ ಸಿಗುವ ಗೈಡ್್ಗಳನ್ನೆಲ್ಲಾ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿಕೊಡುತ್ತಿದ್ದೆ. ಯಾಕೆಂದರೆ ಕಾಸರಗೋಡಿನವರಾದ ಕಾರಣ ಕನ್ನಡ ಬಿಟ್ಟು ಬಾಕಿ ಉಳಿದ ಪಠ್ಯ ವಿಷಯಗಳೆಲ್ಲಾ ಕನ್ನಡ ಮಾಧ್ಯಮದವರಿಗೂ, ಮಲಯಾಳ ಮಾಧ್ಯಮದವರಿಗೂ ಒಂದೇ ಆಗಿತ್ತು. ಆವಾಗ ಮಾತೃಭೂಮಿ ವಾರ್ತಾಪತ್ರಿಕೆಯು 'ವಿದ್ಯಾರಂಗ' ಎಂಬ ಮಲಯಾಳ ಮಾಸಿಕ (ಪಠ್ಯಕ್ಕೆ ಸಂಬಂಧಿಸಿದ್ದು) ಹೊರತರುತ್ತಿತ್ತು. ಅದರಲ್ಲಿರುವ ಬಹುತೇಕ ಪ್ರಶ್ನೆಗಳೇ ಪ್ರಶ್ನೆ ಪತ್ರಿಕೆಯಲ್ಲಿ ಅಚ್ಚಾಗುತ್ತಿತ್ತು. ಅಕ್ಕ ಹಾಸ್ಟೆಲ್್ನಲ್ಲಿದ್ದ ಕಾರಣ ನನಗೆ ಮನೆಯಲ್ಲಿ ಹೇಳಿ ಕೊಡುವವರು ಇರಲಿಲ್ಲ. ಅಪ್ಪ ಹತ್ತನೇ ತರಗತಿಯಷ್ಟೇ ಓದಿದ್ದರೂ 'ವಿದ್ಯಾರಂಗ'ವನ್ನು ಅನುವಾದಿಸಿ ನನಗೆ ಹೇಳಿಕೊಡುತ್ತಿದ್ದರು. ನಂಗೆ ಯಾವ ವಿಷಯ ಕಷ್ಟ ಆಗುತ್ತಿದೆಯೋ ಆ ಬಗ್ಗೆ ಪಪ್ಪನ ಸ್ನೇಹಿತರೊಂದಿಗೆ (ಹೆಚ್ಚಿನವರು ಅಧ್ಯಾಪಕರೇ) ಚರ್ಚಿಸಲು ಹೇಳುತ್ತಿದ್ದರು.

ಹೀಗೆ ನನ್ನ ಪ್ರತಿಯೊಂದು ಹೆಜ್ಜೆಯೊಂದಿಗೂ ಪಪ್ಪ ಸಾಥ್ ನೀಡಿದ್ದರು. ಗ್ರಾಮದಲ್ಲಿ ನಡೆದ ಯಾವುದೋ ಸಮಾರಂಭದಲ್ಲಿ ಪಪ್ಪ ಭಾಷಣ ಮಾಡಲು ನಿಂತು ತಡವರಿಸಿದಾಗ ನನ್ನ ಮುಂದೆ ಕೂತಿದ್ದ ಹುಡುಗರು ನಕ್ಕಿದ್ದು ನನಗೆ ತುಂಬಾ ಅವಮಾನವಾಗಿತ್ತು. ನಿನ್ನ ಪಪ್ಪನಿಗೆ ಭಾಷಣ ಮಾಡಲು ಗೊತ್ತಿಲ್ಲ ಅಂತಾ ಹೇಳಿದ್ದು ನನಗೆ ಬಾರೀ ನೋವನ್ನುಂಟು ಮಾಡಿತ್ತು. ಈ ವಿಷ್ಯ ಪಪ್ಪನಲ್ಲಿ ಹೇಳಿದಾಗ, ನೀನು ಚೆನ್ನಾಗಿ ಭಾಷಣ ಮಾಡು, ಅದೇ ನನಗೆ ಹೆಮ್ಮೆ ಎಂದಿದ್ದರು. ಹಾಗೇ ನಾನು ಭಾಷಣ ಮಾಡುವುದನ್ನು ಕಲಿತೆ, ಪಪ್ಪನ ಸ್ನೇಹಿತರೊಬ್ಬರು ಭಾಷಣ ಮಾಡುವುದು ಹೇಗೆ ಎಂದು ಹೇಳಿಕೊಟ್ಟರು. ಹಾಗೆ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯದಿನದಂದು ನಾನು ಮಾಡಿದ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ನಾನು ಡಿಗ್ರಿ ಮುಗಿಸುವವರೆಗೆ ಹೆಚ್ಚಿನ ಭಾಷಣ ಸ್ಪರ್ಧೆಗಳಲ್ಲಿ ನಾನೇ ಫಸ್ಟ್. ನಾನು ಭಾಗವಹಿಸುವ ಯಾವುದೇ ಚಟುವಟಿಕೆಯಿರಲಿ ಅಲ್ಲಿ ಪಪ್ಪ ಇರಲೇ ಬೇಕೆಂಬುದು ನನ್ನ ಹಠ ಹಿಡಿಯುತ್ತಿದ್ದೆ. ಪಪ್ಪನ ಸಾನಿಧ್ಯ ನನಗೆ ಪ್ರೋತ್ಸಾಹ ,ಧೈರ್ಯ ತಂದುಕೊಡುತ್ತಿತ್ತು.

ಹಳೆಯ ನೆನಪುಗಳನ್ನು ತಿರುವಿದಾಗ...
ಮೊದಲ ಬಾರಿಗೆ ಟೀ ಮಾಡಿದಾಗ ಟೀಗೆ ಸಕ್ಕರೆ ಜಾಸ್ತಿಯಾಗಿದೆ ನಿನಗೆ ಟೀ ಮಾಡೋಕೆ ಬರಲ್ಲ ಎಂದು ಮನೆಯ ಇತರ ಸದಸ್ಯರು ನಕ್ಕಾಗ, ನಂಗೆ ಸಿಹಿ ತುಂಬಾ ಇಷ್ಟ ಎಂದು ಪಪ್ಪ ಎರಡು ಕಪ್ ಟೀ ಕುಡಿದು ನನ್ನನ್ನು ಸಮಾಧಾನಿಸಿದ್ದರು. ಅನ್ನ ಜಾಸ್ತಿ ಬೆಂದಾಗಲಂತೂ ನಿನಗೆ ಅನ್ನ ಮಾಡಲು ಬರಲ್ಲ ಗಂಜಿ ಮಾತ್ರ ಗೊತ್ತು ಎಂದು ಹೇಳಿದ ಅಮ್ಮನ ಮಾತಿಗೆ ಪ್ರತಿಯಾಗಿ ಕುಚ್ಚಿಲಕ್ಕಿ ಗಟ್ಟಿಯಾಗಿದ್ದು ನುಂಗಲು ಆಗ್ತಾ ಇಲ್ಲ, ನನ್ನ ಮಗಳು ತುಂಬಾ ಬೇಯಿಸಿದ ಕಾರಣ ಇವತ್ತು ಜಗಿಯದೆ ನುಂಗಬಹುದು ಎಂದು ಪಪ್ಪ ಹೇಳಿದ್ದು ನೆನಪಿಸಿ ಕೊಂಡರೆ ಹಳೆ ನೆನಪುಗಳು ಹೀಗೆ ಮತ್ತೆ ಮತ್ತೆ ಕೆದಕುತ್ತವೆ. ಹೈಸ್ಕೂಲ್ ಓದುತ್ತಿರುವಾಗ ನನಗೆ ಬಹುಮಾನವಾಗಿ ಸಿಕ್ಕಿದ ಒಂದಿಷ್ಟು ಹಣದಿಂದ ಪಪ್ಪನಿಗೆ ಏನಾದರೂ ಗಿಫ್ಟ್ ಕೊಡಬೇಕೆಂಬ ಬಯಕೆಯಿಂದ ಬನಿಯನ್ ಖರೀದಿಸಿದ್ದೆ. ಪಪ್ಪನ ಸೈಜ್ ಗೊತ್ತಿಲ್ಲದ ಕಾರಣ ಅದು ದೊಗಳೆಯಾಗಿತ್ತು. ಅದನ್ನು ಅಪ್ಪ ಹಾಕಿಕೊಂಡಾಗ ಎಲ್ಲರ ಮುಖದಲ್ಲೂ ನಗು. ಆದ್ರೆ ಪಪ್ಪ ಮಾತ್ರ, ಸೆಖೆ ಜಾಸ್ತಿ ಇದೆ ಅಂತಾ ನನ್ನ ಮಗಳು ಸ್ವಲ್ಪ ಲೂಸ್ ಬನಿಯನ್ ತಂದಿದ್ದಾಳೆ ಎಂದು ಎಲ್ಲರ ಬಾಯ್ಮುಚ್ಚಿಸಿದ್ದರು. ಉದ್ದ ಲಂಗ ರವಿಕೆ, ಇಲ್ಲಿಕೆಟ್ಟ್ ಕಟ್ಟಿ ಕೂದಲು ಹರಡಿ ಬಿಟ್ಟು ಮಲ್ಲಿಗೆ ಮುಡಿದು, ಗಂಧದ ಬೊಟ್ಟು ಇಟ್ಟು ಪಕ್ಕಾ ಮಲಯಾಳಿ ಕುಟ್ಟಿ ತರಹ ನನ್ನನ್ನು ಕಾಣಲು ಪಪ್ಪ ಇಷ್ಟಪಡುತ್ತಾರೆ. ಈವಾಗಲೂ ಪಕ್ಕಾ ಸಾಂಪ್ರದಾಯಿಕ ಡ್ರೆಸ್ ಪಪ್ಪನಿಗೆ ಇಷ್ಟವಾದರೂ ಜೀನ್ಸ್ ,ಟೀಷರ್ಟ್ ಹಾಕಬೇಡ ಎಂದು ಹೇಳಲ್ಲ. ನನ್ನ ಪಪ್ಪ ಸಮಯದ ಜೊತೆಗೆ ಬೆಳೆದಿದ್ದಾರೆ, ನನ್ನನ್ನು ಬೆಳೆಸಿದ್ದಾರೆ.

ಪಪ್ಪ ನನ್ನ ಜೊತೆಗಿದ್ದರೆ ಏನೋ ಒಂದು ಧೈರ್ಯ. ರಸ್ತೆ ದಾಟುವಾಗ ಅಪ್ಪನ ಕಿರುಬೆರಳು ಬೇಕು, ಜ್ವರ ಬಂದು ನಡುಗುವಾಗ ಅಪ್ಪಿ ಹಿಡಿದು ಮಲಗುವುದು, ಓದುವುದಕ್ಕಾಗಿ ಬೆಳ್ಳಂಬೆಳಗ್ಗೆ ಎಬ್ಬಿಸುವುದು, ಓದುತ್ತಿದ್ದಂತೆ ನಿದ್ದೆ ಹೋದರೆ ಪುಸ್ತಕವನ್ನೆಲ್ಲಾ ತೆಗೆದಿಟ್ಟು, ಪುಟ್ಟ ಮಗುವನ್ನು ಎತ್ತಿಕೊಂಡು ಹೋಗುವಂತೆ ಎತ್ತಿ ಮಲಗಿಸುತ್ತಿದ್ದರು. ನನ್ನ ಕಿವಿ ಚುಚ್ಚಿದಾಗ ನನಗಿಂತ ಅಪ್ಪನೇ ಹೆಚ್ಚು ನೋವು ಅನುಭವಿಸಿದ್ದರು ಎಂದು ಅಮ್ಮ ತಮಾಷೆ ಮಾಡ್ತಾರೆ. ಈಗಲೂ ನನಗೆ ಒಂದಿಷ್ಟು ಬೇಜಾರಾದರೆ ,ನೋವಾದರೆ ನನ್ನ ಪಪ್ಪ ದೂರದಲ್ಲಿದ್ದರೂ ಅದನ್ನು ಫೀಲ್ ಮಾಡ್ತಾರೆ. ಹತ್ತನೇ ತರಗತಿಯ ನಂತರವೇ ಅಮ್ಮನ ಜೊತೆ ನಾನು ಹೆಚ್ಚು ಆಪ್ತಳಾದದ್ದು. ಆದಾಗ್ಯೂ ಅಮ್ಮನ ಆಸಕ್ತಿಗೆ ಮಣಿದು ಇಂಜಿನಿಯರಿಂಗ್ ಓದಿದರೂ ನಂತರ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪಪ್ಪ ನನಗೇ ಬಿಟ್ಟಿದ್ದರು. ಹಾಗೇ ಓದಿದ ವಿಷಯಕ್ಕೂ ನಾನು ಆಯ್ಕೆ ಮಾಡುವ ವೃತ್ತಿಗೂ ಸಂಬಂಧವೇ ಇಲ್ಲದ ಉದ್ಯೋಗವನ್ನು ನಾನು ಆಯ್ಕೆ ಮಾಡಿಕೊಂಡಾಗ ಅಮ್ಮ ಬೇಸರಿಸಿದ್ದರೂ ಪಪ್ಪ ಫುಲ್್ಖುಷ್ ಆಗಿದ್ದರು. ಯಾಕೆಂದರೆ ಒಲ್ಲದ ಮನಸ್ಸಿನಿಂದ ಇಂಜಿನಿಯರಿಂಗ್ ಸೇರಿದಾಗ, ಅಮ್ಮನಿಗೆ ಇದರಿಂದ ತುಂಬಾ ಸಂತೋಷವಾಗುತ್ತೆ, ಹೇಗಾದರೂ ನಾಲ್ಕು ವರ್ಷ ಮುಗಿಸು ಆಮೇಲೆ ನಿನ್ನ ವಿಷ್ ಎಂದು ಪಪ್ಪ ಹೇಳಿದ್ದರು. ಆ ನಾಲ್ಕು ವರ್ಷ ಮುಗಿಸಿದಾಗ ಪಪ್ಪ ತನ್ನ ಮಾತು ಉಳಿಸಿಕೊಂಡರು ಆದ್ದರಿಂದಲೇ ನನ್ನ ವೃತ್ತಿಯಲ್ಲಿ ನಾನು ಸಂತೃಪ್ತಳಾಗಿದ್ದೇನೆ, ನನ್ನ ಅಮ್ಮ, ಪಪ್ಪನೂ. ನಾಳೆ ಅಪ್ಪಂದಿರ ದಿನ. ಎಲ್ಲರಿಗೂ ಅವರವರ ಅಪ್ಪನ ಬಗ್ಗೆ ವಿಶೇಷವಾದ ಪ್ರೀತಿ ಕಾಳಜಿ ಇದ್ದೇ ಇರುತ್ತದೆ. ಪ್ರೀತಿಯನ್ನು ವ್ಯಕ್ತ ಪಡಿಸದೇ ಇರುವ ಅಪ್ಪಂದಿರೂ ಇರಬಹುದು ಆದರೆ ಅಪ್ಪನ ಪ್ರೀತಿ ಬೆಳಂದಿಂಗಳಂತೆ ಹಿತವಾಗಿರುತ್ತದೆ, ಬೀಸುವ ತಂಗಾಳಿಯಂತೆ ಸೊಗಸಾಗಿರುತ್ತದೆ. ಹ್ಯಾಪಿ ಫಾದರ್ಸ್ ಡೇ....

Friday, May 28, 2010

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

ಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮನಸ್ಸಿಗೆ ಒಪ್ಪುವಂತ ಹುಡುಗಿ ಈವರೆಗೆ ಯಾವುದೂ ಸಿಕ್ಕಿಲ್ಲಂತೆ. ಹೆಣ್ಣು ನೋಡೋಕೆ ಹೋಗೋದರಲ್ಲೇ ಇವನು ಆನಂದ ಕಂಡುಕೊಂಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ತಾಳಿ ಕಟ್ಟಲು ಯೋಗ್ಯವಾದ ಹುಡುಗಿ ಬೇಕೂಂತಾ ಇವ ಅಲೆಯದ ಊರಿಲ್ಲ. ಕುಡಿಯದ ಬಾವಿ, ಬೋರ್್ವೆಲ್, ಬಾಟಲಿ ನೀರಿಲ್ಲ. ಈವರೆಗೆ ಹುಡುಗಿ ನೋಡೋಕೆ ಹೋಗಿ ಅಲ್ಲಿನ ಕಾಫಿ, ತಿಂಡಿ, ಊಟ ಮಾಡಿಕೊಂಡು ದೇಹದ ಭಾರ ಜಾಸ್ತಿ ಮಾಡಿದ್ದಲ್ಲದೆ ಬೇರ್ಯಾವ ಬದಲಾವಣೆಯೂ ಇವನಲ್ಲಿ ಕಂಡುಬಂದಿಲ್ಲ.

ಹುಡುಗಿ ನೋಡಿದ ಮೇಲೆ, ಹೇಗೆ ...ನಿಂಗೆ ಇಷ್ಟ ಆಯ್ತಾ? ಅಂತಾ ಬ್ರೋಕರ್ ಕೇಳಿದ್ರೆ, "ಹುಡುಗಿ ರಾಗಿಣಿಯಷ್ಟು ಎತ್ತರ ಇಲ್ಲ, ರಕ್ಷಿತಾನಂತೆ ಡುಮ್ಮಿ, ರಮ್ಯಾನಂತೆ ಮೂಗಿನಲ್ಲಿ ಕೋಪ, ಬಿಪಾಶಾನಂತೆ ಕಪ್ಪು, ಪೂಜಾ ಗಾಂಧಿ ತರಾ ಸ್ಮೈಲಾದ್ರೂ ಬೇಡ್ವ?. ಕನಿಷ್ಠ ಐಶ್ವರ್ಯಾಳಂತ ಕಣ್ಣು, ಪ್ರಿಯಾಮಣಿಯಂತಾ ಫಿಗರು, ಮೀರಾ ಜಾಸ್ಮಿನ್ ತರಾ ಸ್ವಲ್ಪ ನಾಚಿಕೆಯಾದ್ರೂ ತೋರಿಸ್ಬೇಡ್ವೆ? ಇದ್ಯಾವುದೇ ಗುಣಗಳಿಲ್ಲದ ಹೆಣ್ಣನ್ನು ನಾನು ವರಿಸುವುದೇ? "ಎಂದು ಮರುಪ್ರಶ್ನಿಸುತ್ತಿದ್ದ. "ಏನು ಮಾರಾಯಾ... ನೀನು ಹೇಳುವ ಸೈಜಿನ, ತೂಕದ ಹುಡುಗಿಯನ್ನು ಕಂಡುಹಿಡಿಬೇಕಾದ್ರೆ ನಂಗೆ ಈ ಜನ್ಮ ಸಾಕಾಗದು" ಎಂದು ಬ್ರೋಕರ್ ಕೂಡಾ ಆನಂದನಿಂದ ದೂರ ಓಡಿ ಹೋಗಿದ್ದ.

ಸುಮಾರು 30 ಹುಡುಗಿಯನ್ನು ನೋಡಿದ ನಂತರ ಅಂತೂ ಕೊನೆಗೆ ಹೆ.ನೋ(ಹೆಣ್ಣು ನೋಡೋ) ಆನಂದನಿಗೆ ಒಬ್ಬಳು ಹುಡುಗಿ ಇಷ್ಟವಾದ್ಲು. ಬ್ರೋಕರ್ ಫುಲ್್ಖುಷ್.

ಅಂತೂ ಇಂತು ನಮ್ಮ ಆನಂದನಿಗೆ ಹುಡುಗಿ ಸಿಕ್ಕಿದ್ದಾಳೆ ಎಂದು ಮನೆಯವರೂ ಸಂತಸಪಟ್ಟರು. ಇನ್ನೇನು ನಿಶ್ಚಿತಾರ್ಥ ನಡೆಸಲು ತೀರ್ಮಾನಿಸಿದಾಗ, ಆ ಹುಡುಗಿಯಿಂದ ಆನಂದನಿಗೊಂದು ಲೆಟರ್.


"ಡಿಯರ್ ಆನಂದ್, ನೀವು ನನ್ನನ್ಯಾಕೆ ಆಯ್ಕೆ ಮಾಡಿದ್ದೀರಿ ಅಂತಾ ನಂಗೊತ್ತಿಲ್ಲ. ಆದ್ರೆ ನಿಮಗೆ ಸುದೀಪ್್ನಷ್ಟು ಹೈಟ್, ಹೃತಿಕ್್ನಂತಾ ಸ್ಮೈಲ್, ಶಾರುಖ್್ನಂತಾ ಹೈರ್ ಸ್ಟೈಲಾದ್ರೂ ಬೇಡವೇ? ಇದೆಲ್ಲಾ ಹೋಗಲಿ ಬಿಡಿ, ಜಾನ್ ಅಬ್ರಹಾಂ ಬಾಡಿ, ಸೂರ್ಯನ ಕಣ್ಣು, ಮಹೇಶ್ ಬಾಬುನ ತರಹಾ ಉದ್ದ ಮೂಗು...ಅದೂ ಇಲ್ಲ. ಇದೆಲ್ಲಾ ಓದಿದ ಮೇಲೆ ನಿಮಗೆ ನನ್ನ ಮೇಲೆ ಸಿಟ್ಟು ಬಂದಿದ್ರೆ ಆ ಸಿಟ್ಟಿಗೆ ಮಮ್ಮುಟ್ಟಿಯ ಕೋಪದಷ್ಟು ಪವರ್ ಇರಕ್ಕಿಲ್ಲ, ಅಥವಾ ಪೆಚ್ಚಾಗಿದ್ರೆ ಅದೂ ಕೂಡಾ ಮೋಹನ್್ಲಾಲ್್ನ 'ಪೆಚ್ಚಾಗುವ' ಆ್ಯಕ್ಟಿಂಗ್್ನ ಒಂದಶದಷ್ಟೂ ಇರುತ್ತಾ? ಇದ್ಯಾವುದೇ ಯೋಗ್ಯತೆಗಳಿಲ್ಲದ ನಿಮ್ಮನ್ನು ಪತಿಯಾಗಿ ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ಗುಡ್ ಬೈ".

Tuesday, May 4, 2010

ಬಚ್ಚಲು ಕೋಣೆಯೊಳಗೊಮ್ಮೆ ಇಣುಕಿ...

ಬಚ್ಚಲು ಕೋಣೆಯೊಳಗೊಮ್ಮೆಇಣುಕಿ
ನೋಡಿ...
ಪುಟ್ಟ ಬಾಲೆಯು ಕದ್ದು ತಿಂದು
ಗೊತ್ತಾಗಬಾರದೆಂಬಂತೆ
ಬಾಯಿ ಮುಕ್ಕಳಿಸುತ್ತಿರಬಹುದು..

ಹದಿಹರೆಯದ ನಿಮ್ಮ ಮಗಳು ಕದ್ದು
ಮುಚ್ಚಿ ಪ್ರೇಮಪತ್ರವನ್ನೋದುತಿರಬಹುದು
ಬಹುಷಃ ಮೊಬೈಲ್ ಹಿಡಿದು
'ಅವನಲ್ಲಿ' ಪಿಸುಗುಟ್ಟುತ್ತಿರಬಹುದು

ದುಃಖವನ್ನು ಅದುಮಿಟ್ಟ ಮಡದಿ
ಯಾರೂ ಅರಿಯದಂತೆ
ಕಣ್ಣೀರು ಹಾಕುತ್ತಿರಬಹುದು...
ಬಹಿರ್ದೆಸೆಗೆ ಹೋದ ನಿಮ್ಮಮ್ಮ
ಕಾಲು ಜಾರಿ ಬಿದ್ದು
ಗೋಳಾಡುತ್ತಿರಲೂ ಬಹುದು...

ಎಂದಾದರೊಂದು ದಿನ ನೀವೂ
ಅತ್ತಿರಬಹುದು, ಬಿದ್ದಿರಬಹುದು
ಕೋಪ ತಣಿಸಿಕೊಂಡಿರಬಹುದು
ಇದೇ ಬಚ್ಚಲು ಕೋಣೆಯಲ್ಲಿ
ಹೀಗೆ ಬಚ್ಚಲು ಮನೆ 'ರಹಸ್ಯ'
ಮುಗಿಯುವುದೇ ಇಲ್ಲ...

Friday, January 8, 2010

ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....

ಅಂತೂ ಮಳೆ ಬಂದಿದೆ,
ನಿರೀಕ್ಷೆಯೂ ಮುಗಿದಿದೆ...
ಕಾವ್ಯ ಕೃಷಿಯ ಮೊದಲ ಬೆಳೆ

ನೆನಪಿನ ಮಳೆಯಲ್ಲಿ
ಕವನ ಸಂಕಲನದ ರೂಪದಲ್ಲಿ ಸಿದ್ಧವಾಗಿದೆ.

ಜನವರಿ 10, 2010 ಭಾನುವಾರ ಬೆಳಗ್ಗೆ 10.30ಕ್ಕೆ ಕಾಸರಗೋಡಿನ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್್ನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಹೂರ್ತ ಇಟ್ಟಾಗಿದೆ.

ನೀವು ಬರುವುದೊಂದು ಬಾಕಿ
ಮತ್ತೆಲ್ಲಾ ಕಾಲ ಮತ್ತು ನಿರೀಕ್ಷೆ....

ನಿಮ್ಮದೇ ನೆನವರಿಕೆಯಲ್ಲಿ,
ರಶ್ಮಿ.