Monday, October 24, 2011

ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು?

ಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ ಬೆಟ್ಟಿಂಗ್ ಶುರುಮಾಡಿದ್ದಾರೆ! ಅಂದ ಹಾಗೆ ಐಶ್ವರ್ಯಾ ರೈ ಅಂದ್ರೆ ನಮ್ ತರಾನೇ ಇರುವ ಓರ್ವ ಹೆಣ್ಣು ಮಗಳು. ಮಿಸ್್ವರ್ಲ್ಡ್ ಪಟ್ಟ ಧರಿಸಿ, ಬಾಲಿವುಡ್್ನಲ್ಲಿ ಮಿಂಚಿ, ಹಾಲಿವುಡ್್ಗೂ ಹಾರಿ, ಬಿಗ್ ಬಿ ಬಚ್ಚನ್್ನ ಪುತ್ರ ಅಭಿಷೇಕ್ ಬಚ್ಚನ್್ರನ್ನು ವರಿಸಿದ ಕರುನಾಡ ಕುವರಿ. ಆಕೆ ಸೀನಿದ್ದು, ಕೆಮ್ಮಿದ್ದು, ನಕ್ಕಿದ್ದು ಎಲ್ಲವೂ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್! ಯಾಕೆಂದರೆ ಆಕೆ ಸೆಲೆಬ್ರಿಟಿ. ಅದೇ ವೇಳೆ ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಹೆರಿಗೆಯ ವೇಳೆ ಸಾವನ್ನಪ್ಪುತ್ತಿದ್ದರೂ, ಅದೊಂದು ಚಿಕ್ಕ ಸುದ್ದಿಯಾಗಿ ಮಾರನೇ ದಿನಕ್ಕೆ ರದ್ದಿಯಾಗಿ ಬಿಡುತ್ತದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಟಿಆರ್್ಪಿ ಹೆಚ್ಚಿಸುವಲ್ಲಿ ನಿರತರಾಗಿರುವ ಸಮೂಹ ಮಾಧ್ಯಮಗಳು ಕೆಲವೊಮ್ಮೆ ಸತ್ಯಾವಸ್ಥೆಯನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ. ಇದೀಗ ಇಡೀ ಭರತ ಖಂಡವೇ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿದೆ. ನವಂಬರ್ 1ರಂದು ಆಕೆಯ ಬರ್ತ್್ಡೇ. ಅದನ್ನು ಹೇಗೆ ಆಚರಿಸುತ್ತಾರೆ? ಅದೇ ತಿಂಗಳಲ್ಲಿ ಹೆರಿಗೆ ಬೇರೆ. ಮಗುವಿಗೆ ಯಾವ ಹೆಸರಿಡುತ್ತಾರೆ? ಹೀಗೆ ಚರ್ಚೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಈ ದೊಡ್ಡ ಸುದ್ದಿಗಳ ನಡುವೆ 39ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬಾಕೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುದ್ದಿ ಹೈಲೈಟೇ ಆಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ, ಸೆಲೆಬ್ರಿಟಿ ಅಲ್ಲವೇ ಅಲ್ಲ.

ಅಂದು ನವಂಬರ್ 2, 2000 ಇಂಫಾಲ ಕಣಿವೆಯಲ್ಲಿರುವ ಮಾಲೋಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 10 ಮಂದಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡಿಕ್ಕಿ ಕೊಂದರು. 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯಡಿ ಭದ್ರತಾಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ಗುಂಡಿಕ್ಕಿ ಸಾಯಿಸಬಹುದು ಮತ್ತು ವಾರೆಂಟ್ ಇಲ್ಲದೆ ಬಂಧಿಸಬಹುದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡಿದ್ದೂ ಅದನ್ನೇ. ಈ ಘಟನೆ 'ಮಾಲೋಮ್ ಹತ್ಯಾಕಾಂಡ'ವೆಂದೇ ಕರೆಯಲ್ಪಡುತ್ತದೆ. ಮರುದಿನ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದ 28ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬ ಸಾಮಾಜಿಕ ಕಾರ್ಯಕರ್ತೆ ಇಂತಹ ಒಂದು ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಮಾಯಕರ ಜೀವ ಅಪಹರಿಸಿದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಪಡಿಸಬೇಕು ಎಂಬುದು ಶರ್ಮಿಳಾ ಒತ್ತಾಯವಾಗಿತ್ತು. ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆಕೆ ಕೈಗೊಂಡ ನಿರ್ಧಾರ ಅಮರಣ ಉಪವಾಸ ಸತ್ಯಾಗ್ರಹ.

ನವಂಬರ್ 2 ನೇ ತಾರೀಖು ಗುರುವಾರ. ಚಿಕ್ಕಂದಿನಿಂದಲೂ ಪ್ರತೀ ಗುರುವಾರ ಉಪವಾಸ ಕೈಗೊಳ್ಳುತ್ತಿದ್ದ ಶರ್ಮಿಳಾ ಮಾರನೇ ದಿನ ಶುಕ್ರವಾರ ರಾತ್ರಿ ಭೋಜನ ಮುಗಿಸಿ 2000 ನವಂಬರ್ 4ರಂದು ಉಪವಾಸ ಸತ್ಯಾಗ್ರಹ ಆರಂಭಿದ್ದರು. ಉಪವಾಸ ಆರಂಭಿಸಿದ ಮೂರು ದಿನಗಳಲ್ಲಿ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಪ್ರಕಾರ 'ಆತ್ಮಹತ್ಯೆಗೆ ಯತ್ನ' ಎಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಅಂದಿನಿಂದ ಇಂದಿನ ವರೆಗೆ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ. ಇಡೀ ಮಣಿಪುರ ಆಕೆಯ ಬೆಂಬಲಕ್ಕಿದೆ. ಹಲವಾರು ಪ್ರಶಸ್ತಿಗಳು ದಕ್ಕಿವೆ. ಏತನ್ಮಧ್ಯೆ, 11 ವರ್ಷಗಳ ಉಪವಾಸದಿಂದ ಶರ್ಮಿಳಾರ ದೇಹ ಸೊರಗಿದೆ, ಆದರೆ ನಿರ್ಧಾರ ಇನ್ನೂ ಅಚಲವಾಗಿದೆ.

ತನಗೆ ನ್ಯಾಯ ಸಿಗುವ ವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶರ್ಮಿಳಾ ತನ್ನ ಗಟ್ಟಿ ನಿಲುವು ತೆಗೆದು ಕೊಂಡಾಗ ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈಕೆಗೆ ಆಸ್ಪತ್ರೆಯೇ ಸೆರೆಮನೆ. ಪ್ರತೀ ಹದಿನೈದು ದಿನಕ್ಕೊಮ್ಮೆ ಶರ್ಮಿಳಾರನ್ನು ನ್ಯಾಯಾಂಗ ಬಂಧನವನ್ನು ವಿಸ್ತರಣೆಗೊಳಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಮೂಗಿಗೆ ನಳಿಕೆ ಸಿಕ್ಕಿಸಿಕೊಂಡು 'ನ್ಯಾಯ ಬೇಕೇ ಬೇಕು' ಎಂದು ಹಠ ಹಿಡಿದು ಕುಳಿತಿರುವ ಈ ಹೆಣ್ಮಗಳ ಧೈರ್ಯ ಮೆಚ್ಚಲೇಬೇಕು.

ಮಣಿಪುರದ 'ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಶರ್ಮಿಳಾ ದೀರ್ಘಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಪಂಚದ ಏಕೈಕ ವ್ಯಕ್ತಿ. ಸೆರೆಮನೆಯಲ್ಲಿ ಯೋಗಾಭ್ಯಾಸ, ಓದು ಹಾಗೂ ಕವಿತೆ ರಚನೆ ಮೂಲಕ ದಿನದೂಡುತ್ತಿರುವ ಶರ್ಮಿಳಾರಿಗೆ ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಲೂ ನಿರಾಕರಿಸಲಾಗಿದೆ. ತನ್ನ ಹೋರಾಟಕ್ಕೆ ಜಯ ಲಭಿಸಿದ ನಂತರವೇ ಪ್ರಿಯತಮ ಡೆಸ್ಮಂಡ್ ಕುಟ್ಹಿನೋ ಜತೆ ವಿವಾಹವಾಗುವ ನಿರ್ಧಾರ ಈಕೆಯದ್ದು. ಶರ್ಮಿಳಾ ತನ್ನ ಪ್ರಿಯತಮನನ್ನು ಭೇಟಿಯಾದದ್ದು ಕೇವಲ ಒಂದೇ ಒಂದು ಬಾರಿ. ಇವರ ನಡುವೆ ಇರುವುದು ಕೇವಲ ಪತ್ರ ವ್ಯವಹಾರವಷ್ಟೇ. ಅಭಿಮಾನಿಗಳು ಕಳುಹಿಸಿಕೊಡುವ ಪುಸ್ತಕವೇ ಬಂಧೀಖಾನೆಯಲ್ಲಿ ಈಕೆಯ ಸಂಗಾತಿ.

"ಮರಣಕ್ಕೆ ನಾನು ಅಂಜಲಾರೆ. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಾನು. ನನ್ನ ಹೋರಾಟಕ್ಕೆ ಉಪವಾಸ ಸತ್ಯಾಗ್ರಹವಲ್ಲದೆ ಬೇರೆ ಮಾರ್ಗವೇ ಇಲ್ಲ. ನನಗೂ ಇತರರಂತೆ ಬದುಕುವ ಹಂಬಲವಿದೆ" ಎಂದು ಹೇಳುವ ಶರ್ಮಿಳಾರ ಅಂತರಂಗದ ಮಾತಿನಲ್ಲಿ ನೋವಿದೆ. ದೇವರು ನನ್ನ ಹೋರಾಟಕ್ಕೆ ಶಕ್ತಿ ನೀಡುತ್ತಾನೆ. ಒಂದಲ್ಲ ಒಂದು ದಿನ ನನ್ನ ಜೀವನದಲ್ಲೂ ಸಂತೋಷದ ದಿನಗಳು ಬರಬಹುದು ಎಂಬ ಆಶಾವಾದ, ಗಾಂಧೀಜಿಯವರ ತತ್ವದಲ್ಲಿರುವ ಬಲವಾದ ನಂಬಿಕೆ ಈಕೆಯನ್ನು ಧೃತಿಗೆಡದಂತೆ ಕಾಪಾಡಿಕೊಂಡು ಬಂದಿದೆ.

ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು 11 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಈ ಹೆಣ್ಣುಮಗಳ ಯೌವನ, ಹೋರಾಟದಲ್ಲೇ ಸವೆದು ಹೋಗುತ್ತಿದೆ. ಆಕೆಗೂ ಒಂದು ಸುಂದರವಾದ ಬದುಕು ಇದೆ. ಎಲ್ಲಾ ಹೆಣ್ಮಕ್ಕಳಂತೆ ಮದುವೆಯಾಗಿ, ಸಂಸಾರ ನಡೆಸಿ ಬಾಳಬೇಕು ಎಂಬ ಕನಸಿದೆ. ಆದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಜಯಗಳಿಸಲೇ ಬೇಕು ಎಂದು ಮರಣಕ್ಕೂ ಅಂಜದೆ, ತನ್ನ ಆಸೆಗಳನ್ನೆಲ್ಲಾ ಬದಿಗೊತ್ತಿ ಹೋರಾಡುತ್ತಿರುವ ಇರೋಂ ಚಾನು ಶರ್ಮಿಳಾರ ದನಿ ಯಾರಿಗೂ ಕೇಳಿಸುತ್ತಿಲ್ಲವೇ? ಅಧಿಕಾರ ಮದದಿಂದ ಕಣ್ಣು ಮಂಜಾಗಿರುವ ನಮ್ಮ ರಾಜಕೀಯ ನಾಯಕರಿಗೆ ಈಕೆಯ ಹೋರಾಟ ಕಾಣಿಸುತ್ತಿಲ್ಲವೇ?

ಮುಂಬರುವ ನವಂಬರ್ 4ನೇ ತಾರೀಖಿಗೆ ಶರ್ಮಿಳಾರ ಅಮರಣ ಉಪವಾಸ ಸತ್ಯಾಗ್ರಹಕ್ಕೆ 11 ವರ್ಷ ಪೂರ್ತಿಯಾಗುತ್ತದೆ. ಕಳೆದ 11 ವರ್ಷಗಳಿಂದ ಶರ್ಮಿಳಾ ಅನುಭವಿಸಿದ ನೋವು ಯಾರಿಗಾದರೂ ಅರ್ಥವಾಗುವುದೇ? ಶರ್ಮಿಳಾರ ಉಪವಾಸ ಸುಖಾಂತ್ಯ ಕಾಣುವುದೇ? ಅಲ್ಲಿಯವರೆಗೆ ಕಾದು ನೋಡಬೇಕಾಗಿದೆ.