Friday, December 7, 2012

ಅವಳು ಮತ್ತೊಬ್ಬಳು!- ಕೃತಿ ಬಿಡುಗಡೆಗೆ ಆಮಂತ್ರಣ


ಪ್ರಿಯರೇ,

2 ವರ್ಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ.

ಕೃತಿ ಹೆಸರು ಅವಳು ಮತ್ತೊಬ್ಬಳು!.

ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಇದು ನಾಲ್ಕನೇ ವರ್ಷ. ಎರಡು ವರ್ಷಗಳ ಹಿಂದೆ ನನ್ನ ಚೊಚ್ಚಲ ಕವನ ಸಂಕಲನ "ನೆನಪಿನ ಮಳೆಯಲ್ಲಿ" ಬಿಡುಗಡೆಯಾಗಿತ್ತು. ಇದೀಗ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ.

ಡಿಸೆಂಬರ್ 9 ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಳು ಮತ್ತೊಬ್ಬಳು ಕೃತಿಯನ್ನು ನಟಿ ನೀತೂ ಲೋಕಾರ್ಪಣೆ ಮಾಡಲಿದ್ದಾರೆ.

ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು...ನಿಮ್ಮ ಹಾರೈಕೆ ನನ್ನೊಂದಿಗಿರಲಿ...

ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ...ನೀವು ಬರಲೇಬೇಕು...
ರಶ್ಮಿ ಕಾಸರಗೋಡು.

Monday, November 19, 2012

ಓ ಗಂಡಸರೇ...ನೀವೆಷ್ಟು ಒಳ್ಳೆಯವರು!

ನೀನು ಹುಡುಗ ನಮ್ಮ ಜತೆ ಬರಬಾರದು... ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು "ಒಂದಕ್ಕೆ" ಹೋಗುವಾಗ ಆತ "ನಾನೂ ಬರ್ತೇನೆ"ಎಂದು ರಾಗ ಎಳೆದಿದ್ದ...ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು...ಎಂದು ಒಕ್ಕೊರಲಿನಿಂದ ಹೇಳಿದ್ದೆವು.
ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು 'ಹುಡುಗರು'..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್...ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ 'ನೀನು ಹುಡುಗಿ' 'ಅವನು ಹುಡುಗ' ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು.

ಪ್ಲಸ್ ಟು ...ಹದಿಹರೆಯ...ಲವ್ ಆಗುವ ಸಾಧ್ಯತೆ ಜಾಸ್ತಿಯೇ..ಹುಡುಗರೂ ನಮಗಿಂತ ಕಮ್ಮಿಯೇನಿಲ್ಲ ಬಿಡಿ. ಒಂದು ಕಾಲದಲ್ಲಿ infatuationಗೆ ಒಳಗಾಗಿ ಸಾವಿರಾರು ಕನಸು ಕಂಡು ಅದು ಏನೆಂದು ಅರ್ಥವಾಗುವ ವೇಳೆ ಎಂಟ್ರನ್ಸ್ ಎಕ್ಸಾಮ್ ಎಂಬ ಭೂತ ಪ್ರತ್ಯಕ್ಷವಾಗಿತ್ತು. ಪ್ಲಸ್ ಟು ಮುಗಿದ ಮೇಲೆ ಡಾಕ್ಟರ್ ಅಥವಾ ಇಂಜಿನಿಯರ್ ಆಗ್ಬೇಕು ಎಂದು ಎರಡು ತಿಂಗಳ ಕ್ರಾಷ್ ಕೋರ್ಸ್್ನಲ್ಲಿ ತಲೆ ಜಜ್ಜಿಕೊಳ್ಳುವ ಹೊತ್ತಿಗೆ ಪುಸ್ತಕವೇ ಪ್ರೇಮಿಯ ರೂಪ ತಾಳಿತ್ತು. ಒಮ್ಮೊಮ್ಮೆ ಸುಮ್ ಸುಮ್ನೇ ನಕ್ಕಾಗ ಅಮ್ಮ ಯಾಕೆ ನಗ್ತೀಯಾ? ಎಂಬ ಪ್ರಶ್ನೆ ಕೇಳುವ ಮೂಲಕ ಭ್ರಮಾಲೋಕದಿಂದ ಹೊರತರುತ್ತಿದ್ದಳು. ಇನ್ನು ಅಣ್ಣನಂತೂ ಏನೋ ಸಂದೇಹವಿದ್ದಂತೆ ನನ್ನನ್ನೇ ನೋಡುತ್ತಿದ್ದರೆ ಮನಸ್ಸಲ್ಲಿ ಪುಕುಪುಕು...ಇವರ ಕಣ್ಣು ತಪ್ಪಿಸಿ ಏನಾದರೂ ಮಾಡಿದರೆ ಅಲ್ಲಿ ತಮ್ಮನೆಂಬ ತುಂಟ ಇದ್ದೇ ಇರುತ್ತಿದ್ದನಲ್ಲಾ...ಈ ಎಲ್ಲ ಕಿತಾಪತಿಗಳ ಮುಂದೆ ಅಪ್ಪ ಎಲ್ಲವೂ ಗೊತ್ತಿದ್ದರೂ, ಗೊತ್ತಿಲ್ಲದಂತೆ ನಟಿಸಿ... ' ಅವಳು ನನ್ನ ಮಗಳು' ಅವಳು ತಪ್ಪು ಮಾಡಲ್ಲ ಎಂಬ ಭರವಸೆಯಿಂದ ನಮ್ಮ ವಿಶ್ವಾಸ ಗೆದ್ದುಕೊಂಡಿದ್ದ.

ಹೋಗಲಿ ಬಿಡಿ, ಇನ್ನು ನಮ್ಮ ಕಾಲಮೇಲೆ ನಾವೇ ನಿಂತುಕೊಳ್ಳಲು ಇರುವುದು ನಾಲ್ಕೇ ವರ್ಷ. ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ನಾವು ಇನ್ನೂ ದೊಡ್ಡವರಾಗಿ ಬೆಳೆದಂತಹಾ ಅನುಭವ. ಅಲ್ಲಿನ ಸಹಪಾಠಿಗಳೂ ಅಷ್ಟೇ. ಎಲ್ಲರದ್ದೂ ಒಂದೇ ಗುರಿ, ಇಂಜಿನಿಯರ್ ಆಗುವುದು. ಯಾವುದೋ ಜಿಲ್ಲೆ, ರಾಜ್ಯ, ಊರಿನಿಂದ ಬಂದವರು ನಾವೆಲ್ಲಾ ಒಂದೇ ಕ್ಲಾಸಿನಲ್ಲಿ ಕುಳಿತು ಇಂಜಿನಿಯರ್್ಗಳಾಗುವ ಕನಸು ಹೆಣೆಯುತ್ತಿದ್ದೆವು. ಸೆಮಿಸ್ಟರ್ ಎಕ್ಸಾಮ್್ಗಳಿಗೆ ಹೈರಾಣಾಗುತ್ತಾ, ಲೈಬ್ರರಿಯಲ್ಲಿ ಹುಡುಕಿ ಪುಸ್ತಕಗಳ ಜೆರಾಕ್ಸ್ ಕಾಪಿ ತೆಗೆದು ಟೆಕ್ಸ್ಟ್ ಬುಕ್ ಮಾಡಿ, ಕೊನೇ ಗಳಿಗೆಯಲ್ಲಿ ಎಸೈನ್್ಮೆಂಟ್ ಸಬ್್ಮಿಟ್ ಮಾಡಿ ಕೊಳ್ಳುತ್ತಿರುವ ಭಾವೀ ಇಂಜಿನಿಯರ್್ಗಳು. ಮೊದಲ ವರ್ಷ ಜೂನಿಯರ್್ಗಳಲ್ವಾ ಎಂದು ತಗ್ಗಿ ಬಗ್ಗಿ ನಡೆದದ್ದು ಆಯ್ತು.. ಎರಡನೇ ವರ್ಷ ನಾವು ಸೀನಿಯರ್್ಗಳು. ಇನ್ನು ಕೇಳುವುದು ಬೇಕಾ? ಹುಡುಗರು ಹುಡುಗಿಯರು ಎಂಬ ಯಾವುದೇ ಬೇಧ ಇಲ್ಲಿ ಇಲ್ಲ. ಅಷ್ಟೇ ಯಾಕೆ ಯಾವುದು ಹುಡುಗ, ಯಾವುದು ಹುಡುಗಿ ಎಂದು ಕನ್್ಫ್ಯೂಸ್ ಮಾಡುವಂತ ಉಡುಗೆಗಳು ಬೇರೆ.

ಅಲ್ಲಿ ಸಿಕ್ಕ ಸಹಪಾಠಿಗಳು ಕೂಡಾ ಹಾಗೆಯೇ. ಹುಡುಗ ಹುಡುಗಿಯರು ಬೆಸ್ಟ್್ಫ್ರೆಂಡ್ಸ್. ಒಟ್ಟಿಗೆ ಊಟ ಮಾಡುವುದು, ಕಷ್ಟದಲ್ಲಿ ಜತೆಯಾಗುವುದು..ಸಾಂತ್ವನ ಹೇಳುವುದು ಹೀಗೆ.... ಅದೊಂದು ಒಳ್ಳೆಯ ಗೆಳೆತನ...ಲಿಂಗಬೇಧವಿಲ್ಲದೇ ಇರುವ ಆ ಗೆಳೆತನ ನಿಜವಾಗಿಯೂ ಅದ್ಭುತವಾಗಿತ್ತು..

ಆದರೆ ಅದೆಷ್ಟು ದಿನ? ಮುಂದೆ ಕಾಲೇಜು ಮುಗಿದು ನಾವು ನಮ್ಮ ಪಾಡಿಗೆ ದುಡಿಯತೊಡಗಿದೆವು...ಅವರು ಅವರ ಪಾಡಿಗೆ...ಮುಂದೊಂದು ದಿನ ಫೇಸ್್ಬುಕ್್ನಲ್ಲಿ ಫ್ರೆಂಡ್್ಲಿಸ್ಟ್್ನಲ್ಲಷ್ಟೇ ಜಾಗ ಪಡೆದುಕೊಂಡು ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಾ ಅವರ-ನಮ್ಮ ಜೀವನ ಎರಡು ಕವಲುಗಳಾಗಿ ಸಾಗುತ್ತಲೇ ಹೋಗುತ್ತದೆ.

ಹಳೇ ಗೆಳತಿಯರು ಎಂದು ಹುಡುಗಿಯರ ಜತೆ ತುಂಬಾ ಸ್ನೇಹವಿಟ್ಟುಕೊಂಡರೆ ಅವನನ್ನು ಕಟ್ಟಿಕೊಂಡವಳು ಗುರ್ ಅಂತಾಳೆ. ಇತ್ತ ನಮ್ಮ ಮನೆಯವರು ಅವನ್ಯಾರು? ನೀನು ನನ್ನ ಹೆಂಡತಿ ಎಂದು ಪದೇ ಪದೇ ಎಚ್ಚರಿಸುವಾಗ ಎಲ್ಲವೂ ಕಾಲಗರ್ಭದೊಂದಿಗೆ ಅಂತರ ಕಾಯ್ದುಕೊಳ್ಳುತ್ತಾ ಹೋಗುತ್ತದೆ. ಮಡಿಲಲ್ಲೊಂದು ಮಗು ಆಟವಾಡುತ್ತಿದ್ದರೆ ಅಲ್ಲಿಗೆ ಮನೆ, ಮಕ್ಕಳು, ಸಂಸಾರವೇ ಸರ್ವಸ್ವವಾಗುತ್ತದೆ. ಆಮೇಲೆ ಎಲ್ಲಾದರೂ ಸಮಾರಂಭದಲ್ಲಿ ಸಿಕ್ಕರೆ ಹೇಗಿದ್ದೀಯಾ? ಎಂಬ ಕುಶಲೋಪರಿ.

ನಾಳೆ ನಾನೂ ಮದುವೆಯಾಗಿ, ಅಮ್ಮನಾಗಿ, ಅಜ್ಜಿಯಾಗಿ..ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತೇನೆ. ಆವಾಗ ಜೀವನದ ಎಲ್ಲ ಮಜಲುಗಳಲ್ಲಿ 'ಅವನೊಬ್ಬ' ನನ್ನ ಜತೆ ಇರುತ್ತಾನೆ.

ಮಗಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ಅಪ್ಪ, ತಂಗಿಯ ಮೇಲೆ ಅಪಾರ ಪ್ರೀತಿಯಿದ್ದರೂ ತೋರಿಸಿಕೊಳ್ಳದೇ ವಿಲನ್ ತರಾ ಪೋಸ್ ಕೊಡುವ ಅಣ್ಣ, ತುಂಟಾಟಿಕೆಯಿಂದಲೇ ಮನಸ್ಸು ಗೆದ್ದು, ಕೆಲವೊಮ್ಮೆ ನಾನೂ ನಿನ್ನ ಅಣ್ಣ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುವ ಪುಟ್ಟ ತಮ್ಮ....ಇವರೆಲ್ಲರ ನಡುವೆ ಸುಂದರ ಕನಸುಗಳನ್ನು ಕಾಣುವಂತೆ ಆಸೆ ತರಿಸಿದ 'ಅವನು'. ನಾಳೆ ಹಿರಿಯರ ಸಮ್ಮತಿಯಲ್ಲಿ ನನ್ನನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವ ಭಾವೀ ವರ...ಹೀಗೆ ಜೀವನದ ರಂಗಭೂಮಿಯಲ್ಲಿ ಅದೆಷ್ಟೋ 'ಗಂಡಸರು' ಪೋಷಕಪಾತ್ರಗಳಾಗಿ ಬಂದು ನಮ್ಮೀ ಜೀವನಕ್ಕೆ ಹೊಸ ಅರ್ಥ ಕೊಡುತ್ತಾರೆ. ಅವರಿಂದಲೇ ನಾವು ಅಮ್ಮ, ಅಕ್ಕ, ಹೆಂಡತಿ, ಸೊಸೆ, ನಾದಿನಿ, ಅಜ್ಜಿ ಎಂಬ ಎಲ್ಲ ಪಾತ್ರಗಳನ್ನೂ ನಿಭಾಯಿಸುತ್ತೇವೆ. ನಮ್ಮ ಪಾತ್ರಗಳ ಅಬ್ಬರದಲ್ಲಿ ಅವರ ಸಹಕಾರ ನಮಗೆ ಕಾಣಿಸದೇ ಇರಬಹುದು. ಆದರೆ ಅವರಿಲ್ಲದ ಲೋಕ? ಊಹಿಸಲೂ ಅಸಾಧ್ಯ ಅಲ್ಲವೇ?

ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತಾ? ಇವತ್ತು ಗಂಡಸರ ದಿನ. ನಾವು ಹೆಣ್ಮಕ್ಕಳು...ನಮ್ಮ ಜೀವನದಲ್ಲಿ ಅಪ್ಪನಾಗಿ, ಸಹೋದರನಾಗಿ, ಗೆಳೆಯನಾಗಿ, ಪತಿಯಾಗಿ ಬಂದು ನಮ್ಮ ಜೀವನದ ಪ್ರತಿಯೊಂದು ತಿರುವಿಗೂ ಕಾರಣರಾದ ಆ ಗಂಡು ಜಾತಿಗೆ ದೊಡ್ಡದೊಂದು ಸಲಾಂ... ಅವರ ತ್ಯಾಗಕ್ಕೆ, ಒಲುಮೆಗೆ, ಧೈರ್ಯಕ್ಕೆ ಹಾಗು ನಮ್ಮನ್ನು ಸಹಿಸಿಕೊಂಡಿರುವ ಸಹನಾ ಗುಣಕ್ಕೆ....

ಎಲ್ಲದಕ್ಕೂ ಥ್ಯಾಂಕ್ಸ್... ಥ್ಯಾಂಕ್ಸ್...ಥ್ಯಾಂಕ್ಸ್...

Tuesday, October 9, 2012

ನಿವೇದನೆ

ಡುಗೆ ಮನೆಯತ್ತ ಮುಖ ಮಾಡಿದಾಗ
ಸಾಲಲ್ಲಿರಿಸಿದ ಡಬ್ಬಗಳ ಕುಹಕ ನಗೆ
ಕಾದ ಬಾಣಲೆಯಲ್ಲಿ ಸಾಸಿವೆಯ ಅಟ್ಟಹಾಸ
ನನ್ನ ಭಾವನೆಗಳ ಕೆಣಕಿದಂತೆ

ಇನ್ನೂ ಓದಿ ಮುಗಿದಿರದ ಪುಸ್ತಕದ
ಪುಟವ ವೇಗದಿ ತಿರುವಿದಾಗ
ಕೊಚ್ಚಿ ಹೋಗಿತ್ತು ನನ್ನ
ಸ್ವಪ್ನ ಸುಂದರ ನೌಕೆ

ಈ ನನ್ನ ಪ್ರಸವಕ್ಕೆ
ಅಮ್ಮನ ಕಣ್ಣುಗಳಲ್ಲಿರುವ ವ್ಯಾಕುಲತೆಯಿಲ್ಲ
ಪತಿಯ ಸಾಂತ್ವನವಿಲ್ಲ
ಬಂಧುಗಳ ಮುಂಗಡ ಶುಭಾಶಯದ
ಕರೆಗಳೂ ಬಂದಿಲ್ಲ

ಅನೈತಿಕ ಗರ್ಭದಂತೆ...
ಒಂದಷ್ಟು ಭಯ...ಕೈಗಳಲ್ಲಿ ನಡುಕ
ಯಾರಿಗೂ ಕಾಣದಂತೆ
ನನ್ನ ಪುಟ್ಟ ಕೋಣೆಯ ತೂಗು
ತೊಟ್ಟಿಲಲ್ಲಿ ಖಾಲಿ ಹಾಳೆಗಳ
ನಡುವೆ... ನಾನೆಷ್ಟು ಕಾಯಲಿ?

ಉಪ್ಪಿಟ್ಟಿಗೆ ಒಗ್ಗರಣೆ ಹಾಕಿ
ಒಂದಿಷ್ಟು ತಿಂದು, ಡಬ್ಬಕ್ಕೆ ತುಂಬಿಸಿ
ಗುಡಿಸಿ, ಸಾರಿಸಿ, ಪಾತ್ರೆ ತಿಕ್ಕಿ...
ಮಿಂದು.....ಬಿಸಿ ನೀರು ಕಾಯಿಸಿ
ಸಾಕಪ್ಪಾ....ಸಾಕು!

ಎಲ್ಲೋ ಕೇಳಿದೆ
ಯಾರೋ ನನ್ನ ಮಗುವನ್ನು
ದತ್ತು ತೆಗೆದುಕೊಂಡಿದ್ದಾರಂತ
ಅವರು ಮುದ್ದು ಮಾಡಿರಬಹುದೇ?

ನನ್ನ ಮಗು....ನನ್ನ ಭಾವನೆಗಳ ಚಿಗುರು
ತುಂಟಾಟಿಕೆ- ಕಣ್ಣೀರಿಡುವ
ಒಮ್ಮೆ ನಗುವ-ತೂಕಡಿಸುವ
ಕೋಪದಿಂದ ಬಿಕ್ಕಳಿಸುವ...ಕೂಸು

ಇಲ್ಲೆ ಎಲ್ಲೋ ಕೇಳಿಸಿದಂತಿದೆ
ಯಾರದ್ದೋ ದನಿಯಲ್ಲಿ
ನನ್ನ ಮಗುವಿನ ತೊದಲು ನುಡಿ
ಅಷ್ಟು ಸಾಕು...ನನಗೆ

ಬೇಡ... ನನ್ನ ಹಳಿಯಬೇಡಿ
ನನ್ನ ಹಂಗಿಸಬೇಡಿ...
ಕೋರಿಕೆ...ನಿಮ್ಮಲ್ಲಿ
ನನಗೊಂದಷ್ಟು ಸಮಯ ಕೊಡಿ
ನನ್ನ ಈ ಸಾಲುಗಳನ್ನು
ಹಡೆದು ನಿಟ್ಟುಸಿರು ಬಿಡಲೇ?

Thursday, September 27, 2012

ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ...

ಹೌದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ...ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು.
ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ...ಮೀನು...ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ...ಒಂದಷ್ಟು ರೊಮ್ಯಾಂಟಿಕ್ ದೃಶ್ಯಗಳು...ನಾವು ಮಾತನಾಡುವ ಮಲಯಾಳಂಗೂ ಮೀನುಗಾರರು ಮಾತನಾಡುವ ಮಲಯಾಳಂಗೂವ್ಯತ್ಯಾಸವಿರುವುದರಿಂದ ಚಿತ್ರದಲ್ಲಿನ ಎಲ್ಲ ಸಂಭಾಷಣೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಚಿತ್ರ ನೋಡುತ್ತಿರುವಾಗ ಅವಳು ಆಗಿನ ಕಾಲದ 'ಸೆಕ್ಸೀ ನಟಿ'ಎಂದು ಅಪ್ಪ ಹೇಳುತ್ತಿದ್ದರೆ, ಮಕ್ಕಳ ಮುಂದೆ ಹಾಗೆಲ್ಲಾ ಹೇಳ್ಬೇಡ್ರಿ ಎಂದು ಅಮ್ಮ ಗುರ್ ಅಂತಿದ್ರು :)

ಪ್ರೈಮರಿ ಕ್ಲಾಸಿನಲ್ಲಿರುವಾಗ ನೋಡಿದ ಚಿತ್ರ ಹೈಸ್ಕೂಲ್ ಮೆಟ್ಟಿಲು ಹತ್ತಿದಾಗಇನ್ನಷ್ಟು ಅರ್ಥವಾಗತೊಡಗಿತ್ತು. ಆವಾಗ ಆ ಕಾಲದಲ್ಲಿ ಎಷ್ಟೊಂದು ಅದ್ಭುತ ಸಿನಿಮಾವನ್ನು ನಿರ್ಮಿಸಿದ್ದಾರೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಹೈಸ್ಕೂಲ್ ಮೆಟ್ಟಿಲೇರಿದಾಗ ನಮ್ಮ ಶಾಲೆಯಲ್ಲಿ ಮೀನುಗಾರರ ಮಕ್ಕಳು ನನ್ನ ಸಹಪಾಠಿಗಳಾಗಿದ್ದರು. ಹೀಗೆ ಮೀನುಗಾರರ ಜೀವನ ಶೈಲಿ, ನಂಬಿಕೆಯ ಬಗ್ಗೆ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು.

ಹಾಗೆ ನೋಡಿದರೆ ಚೆಮ್ಮೀನ್್ನಲ್ಲಿ ಮೀನುಗಾರರ ಜೀವನ ಶೈಲಿಯ ಪೂರ್ಣ ಪಾಠ ಇದೆ. ಈ ಮೀನುಗಾರರು ಕಡಲನ್ನು ಅಮ್ಮ ಎಂದು ಪೂಜಿಸುತ್ತಾರೆ. ಇನ್ನು ಮಹಿಳೆಯರು ಗಂಡ ಮೀನುಗಾರಿಕೆಗೆ ಹೋಗಿ ಮನೆಗೆ ವಾಪಸ್ ಬರುವ ವರೆಗೂ ಒಲೆ ಉರಿಸುವುದಿಲ್ಲ. ಅದರಲ್ಲೂ ವಿವಾಹಿತ ಮಹಿಳೆ ಇನ್ನೊಬ್ಬ ವ್ಯಕ್ತಿಯ ಜತೆಗೆ ಅನೈತಿಕ ಸಂಬಂಧ ಬೆಳೆಸಿಕೊಂಡರೆ ಗಂಡ ಸಾಯುತ್ತಾನೆ ಎಂಬ ನಂಬಿಕೆ. ಈ ಎಲ್ಲ ನಂಬಿಕೆಗಳ ಚಿತ್ರಣ ಚೆಮ್ಮೀನ್್ನಲ್ಲಿ ಕಾಣಸಿಗುತ್ತದೆ. ಅದರಲ್ಲೂ ಅನ್ಯ ಧರ್ಮದ ವ್ಯಕ್ತಿಯೊಂದಿಗೆ ಮೀನುಗಾರರ ಮಹಿಳೆ ಸಂಬಂಧ ಬೆಳೆಸಿದಳೆಂದರೆ ಕಡಲಮ್ಮ ಇಡೀ ಜನಾಂಗದವರೊಂದಿಗೇ ಕೋಪಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಮೀನುಗಾರರದ್ದಾಗಿರುತ್ತದೆ.

ಚೆಮ್ಮೀನ್್ನಲ್ಲಿ ಕರುತ್ತಮ್ಮ ಮುಸ್ಲಿಂ ಯುವಕ ಪರೀಕುಟ್ಟಿ ಜತೆ ಪ್ರೇಮ ಬೆಳೆಸಿರುತ್ತಾಳೆ. ಅವರ ಪ್ರೇಮ ಕಥೆ ಹೇಗೆ ಸಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.ಕರುತ್ತಮ್ಮನಿಗೆ ಓರ್ವ ತಂಗಿ. ಅಪ್ಪ ಚೆಂಬಕುಞಿ ಮದ್ಯದ ದಾಸ, ಅಮ್ಮ ಚಕ್ಕಿ ಮೀನು ಮಾರಾಟ ಮಾಡಿಕೊಂಡು ತನ್ನ ಗಂಡನ ಕುಡಿತಕ್ಕೆ ಬೈಯ್ಯುತ್ತಿರುತ್ತಾಳೆ. ಪರೀಕುಟ್ಟಿ ಅಲ್ಲಿನ ಶ್ರೀಮಂತ ವ್ಯಾಪಾರಿಯಾಗಿದ್ದರೂ ಅವನಿಗೆ ಕರುತ್ತಮ್ಮ ಎಂದರೆ ಜೀವ. ಇವಳೂ ಹಾಗೆಯೇ...ಕೊಚ್ಚು ಮೊದಲಾಳಿ...(ಸಣ್ಣ ಧಣಿ) ಎಂದು ಗೌರವದಿಂದ ಕರೆಯುತ್ತಾ ಅವನನ್ನು ಪ್ರೀತಿಸುತ್ತಿರುತ್ತಾಳೆ. ಅವಳಿಗಾಗಿ ಪರೀಕುಟ್ಟಿ "ಮಾನಸ ಮೈನೇ ವರೂ" ಎಂದು ಕಡಲ ಕಿನಾರೆಯಲ್ಲಿ ಹಾಡುತ್ತಿರುವ ಹಾಡು ಅದ್ಭುತ. ಮನ್ನಾ ಡೇ ಹಾಡಿದ ಈ ರ್ಯೊಮಾಂಟಿಕ್ ಹಾಡು ಸಿನಿಮದುದ್ದಕ್ಕೂ ಕಾಡುತ್ತಿರುತ್ತದೆ.

ಹೀಗೆ ಪರೀಕುಟ್ಟಿ ಮತ್ತು ಕರುತ್ತಮ್ಮಳ ಪ್ರೇಮ ಪ್ರಸಂಗ ಅಪ್ಪನಿಗೆ ತಿಳಿದು ದೊಡ್ಡ ರದ್ದಾಂತವೇ ಆಗಿಬಿಡುತ್ತದೆ. ಕೊನೆಗೆ ಅಪ್ಪನ ಒತ್ತಾಯಕ್ಕೆ ಮಣಿದು ಕರುತ್ತಮ್ಮ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅಪ್ಪ ನೋಡಿದ ಹುಡುಗ, ಪಳನಿಯನ್ನು ಮದುವೆಯಾಗಿ ಬಿಡುತ್ತಾಳೆ. ಮದುವೆಯಾಗಿ ಗಂಡನ ಊರಿನಲ್ಲಿ ಸುಖವಾಗಿರುವ ಕರುತ್ತಮ್ಮ, ತನ್ನ ಗಂಡನಿಗೆ ತಕ್ಕ ಹೆಂಡತಿಯಾಗಿ ಬಾಳಲು ಯತ್ನಿಸುತ್ತಾಳೆ. ಈ ದಾಂಪತ್ಯದಲ್ಲಿ ಆಕೆಗೆ ಒಂದು ಮಗುವೂ ಹುಟ್ಟುತ್ತದೆ. ಇತ್ತ ಆಕೆಯ ಅಮ್ಮ ತೀರಿ ಹೋದಾಗ ಅಪ್ಪ ಇನ್ನೊಂದು ಮದುವೆಯಾಗುತ್ತಾನೆ. ಕರುತ್ತಮ್ಮನ ತಂಗಿ ಲತಾ ತನ್ನ ಮಲತಾಯಿಯ ದೌರ್ಜನ್ಯ ತಡೆಯಲಾರದೆ ಮನೆ ಬಿಟ್ಟು, ತನ್ನ ಅಕ್ಕನ ಮನೆಗೆ ಬಂದಿರುತ್ತಾಳೆ. ಊರಲ್ಲಿ ಚೆಂಬಕುಞಿ ತನ್ನ ಎರಡನೇ ಪತ್ನಿಗಾಗಿ ಎಲ್ಲಹಣವನ್ನು ಖರ್ಚು ಮಾಡುತ್ತಾ ಜೀವನ ಸಾಗಿಸುತ್ತಾನೆ.

ಅಂದೊಮ್ಮೆ ಈತನಿಗೆ ಮೀನಿನ ಬಲೆ ಖರೀದಿಸಲು ಈ ಪರೀಕುಟ್ಟಿಯೇ ಸಹಾಯ ಮಾಡಿದ್ದರೂ, ಮೀನು ಮಾರಾಟ ಮಾಡಿ ಹೆಚ್ಚಿನ ಲಾಭ ಬಂದಾಗ ಪರೀಕುಟ್ಟಿಗೆ ಸಾಲ ಹಿಂತಿರುಗಿಸಲು ನಿರಾಕರಿಸುತ್ತಾನೆ. ಸಾಲ ಕೊಟ್ಟ ಹಣ ಮರಳಿ ಸಿಗದೇ ಇರುವಾಗ ಪರೀಕುಟ್ಟಿಯ ವ್ಯಾಪಾರವೂ ಕುಸಿಯುತ್ತದೆ. ಆದರೆ ಚೆಂಬಕುಞಿನ ಅತಿ ಆಸೆ ಆಡಂಬರ ಜೀವನದಿಂದಾಗಿ ನಷ್ಟದಲ್ಲಿಮುಳುಗಿದ ಈತ ಹುಚ್ಚನಾಗಿ ಬಿಡುತ್ತಾನೆ.

ದುರಂತ ಎಂಬತೆ ಕರುತ್ತಮ್ಮನ ಗಂಡನ ಮನೆಯಲ್ಲಿಯೂ ಆಕೆಯ ಹಳೆಯ ಪ್ರೇಮ ಕಥೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಕೊನೆಗೆ ಆಕೆಗೆ ಹುಟ್ಟಿದ ಮಗುವೂ ಆ ಮುಸ್ಲಿಂ ಯುವಕನದ್ದು ಎಂದು ಅಲ್ಲಿನ ಜನರು ಕುಹಕವಾಡುತ್ತಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿದ್ದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂಬ ಕಾರಣಕ್ಕಾಗಿ ಪಳನಿಯನ್ನೂ ಸಮುದಾಯದಲ್ಲಿ ದೂರವಿರಿಸಲಾಗುತ್ತದೆ. ಕರುತ್ತಮ್ಮನಿಗೆ ಅವಮಾನ...ಒಂದರ ಹಿಂದೆ ಒಂದು ಆಘಾತ...

ತನ್ನ ಜೀವನವನ್ನು ನೆನೆದು ಕಣ್ಣೀರಿಡುತ್ತಾ ಮಲಗಿರುವಾಗ ಪರೀಕುಟ್ಟಿಯ ಹಾಡು ಅದೇ...."ಮಾನಸ ಮೈನೇ ವರೂ" ಕೇಳಿ ಬರುತ್ತದೆ. ಕರುತ್ತಮ್ಮನಿಗೆ ತನ್ನ ಪ್ರಿಯಕರನನ್ನು ಸೇರಬೇಕೆಂಬ ಹಂಬಲ....ಬೇರೇನನ್ನೂ ಯೋಚಿಸದೆ ಆಕೆ ರಾತ್ರೋ ರಾತ್ರಿ ಎದ್ದು ಕಡಲ ಕಿನಾರೆಗೆ ಬರುತ್ತಾಳೆ...

ಅಲ್ಲಿದ್ದಾನೆ ತನ್ನ ಪ್ರಿಯಕರ...ತನಗಾಗಿ ಕಾದು ನಿಂತಿದ್ದಾನೆ...ಕರುತ್ತಮ್ಮ ಆತನನ್ನು ಸೇರುತ್ತಾಳೆ....

ವಿಧಿಯ ಬರಹವೋ...ನಂಬಿಕೆಯೋ...ಇತ್ತ ಆಕೆಯ ಗಂಡ ಪಳನಿ ದೊಡ್ಡ ಮೀನೊಂದನ್ನು ಹಿಡಿಯಲುಹೋಗಿ, ಸಮುದ್ರದ ಸುಳಿಗೆ ಸಿಕ್ಕಿ ನೀರು ಪಾಲಾಗುತ್ತಾನೆ.

ಕೊನೆಗೆ, ಕಡಲ ಕಿನಾರೆಯಲ್ಲಿ ಕುರುತ್ತಮ್ಮ ಮತ್ತು ಪರೀಕುಟ್ಟಿ ಕೈ ಕೈ ಹಿಡಿದು ಕೊಂಡೇ ಸತ್ತು ಬಿದ್ದಿರುವ ದೃಶ್ಯದ ಮೂಲಕ ಚಿತ್ರ ಮುಕ್ತಾಯಗೊಳ್ಳುತ್ತದೆ.

ಆದಾಗ್ಯೂ, ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಹೇಳಿದ ನಾರಾಯಣ ಗುರು, ಸೋಷ್ಯಲಿಸಂ ಎಂದು ಕಮ್ಯುನಿಸ್ಟರು ಹೋರಾಡಿ ರಕ್ತ ಸುರಿಸಿದ ಕೇರಳದ ಮಣ್ಣಿನಲ್ಲಿ ಹುಟ್ಟಿದ ಕರುತ್ತಮ್ಮನಿಗೆ ಯಾಕೆ ಹೀಗಾಯ್ತು? ಪರೀಕುಟ್ಟಿಯ ಪ್ರೇಮ ಕರುತ್ತಮ್ಮನನ್ನು ಕಾಡಿದಂತೆ.... ಈ ಪ್ರಶ್ನೆಯೂ ನನ್ನನ್ನು ಕಾಡಿದ್ದುಂಟು.

Monday, July 30, 2012

ಹೆಣ್ಮಕ್ಕಳಿಗೆ ಕಪಾಳಮೋಕ್ಷ ಮಾಡುವಾಗ ಇವರಿಗೆ 'ಭಾರತೀಯ ಸಂಸ್ಕೃತಿ' ನೆನಪಿಗೆ ಬರಲಿಲ್ಲವೇ?


ಧುನಿಕ ದುಶ್ಯಾಸನರು! ಹೌದು. ಇವರನ್ನು ದುಶ್ಯಾಸನರು ಎಂದು ಕರೆದರೂ ಸಾಲುವುದಿಲ್ಲ. ಯಾಕೆಂದರೆ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಲೇ ಸುಸ್ತಾಗುತ್ತಾನೆ. ಇವರು ಹಾಗಲ್ಲ ಹೆಣ್ಮಕ್ಕಳ ಕಪಾಳಕ್ಕೆ ಹೊಡೆದು ಅವರ ಮೈಮೇಲೆ ಕೈಯಾಡಿಸುತ್ತಾರೆ. ಅಲ್ಲಿದ್ದ ಹುಡುಗನೊಬ್ಬ 'ಇನಿ ಎನ್ನ ಬರ್ತ್ ಡೇಯೇ...ಹಾಕೊಡ್ಚಿ' (ಇವತ್ತು ನನ್ನ ಹುಟ್ಟುಹಬ್ಬ, ಹೊಡಿಯಬೇಡಿ) ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಅವನನ್ನು ಅರೆಬೆತ್ತಲೆಯಾಗಿಸಿ ಥಳಿಸುತ್ತಾರೆ. ಹೆಣ್ಮಕ್ಕಳನ್ನು ಹಿಡಿದು, ಗುದ್ದಿ, ದೂಡಿ ಮಂಚಕ್ಕೆ ನೂಕಲಾಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಕೆನ್ನೆಗೆ 'ಚಟಾರ್್' ಎಂದು ಬಿದ್ದ ಏಟಿನಿಂದ ಆಕೆ ಮಂಚದ ಮೇಲೆ ದೊಪ್ಪನೆ ಬೀಳುತ್ತಾಳೆ. ಅಲ್ಲಿದ್ದ ಯುವಕ ಯುವತಿಯರು ಮುಖ ಮುಚ್ಚಿಕೊಳ್ಳುತ್ತಿದ್ದಂತೆ ಬಲವಂತವಾಗಿ ಅವರ ಕೈ ಹಿಡಿದು ಎಳೆಯುತ್ತಾ, ಹುಡುಗಿ ದೇಹದ ಮುಟ್ಟಬಾರದ ಜಾಗದಲ್ಲೆಲ್ಲಾ ಹಿಡಿದು ಅವರನ್ನು ತಳ್ಳಲಾಗುತ್ತದೆ. ಇದು ಮಂಗಳೂರಿನ ಹೊರವಲಯ ಪಡೀಲ್್ನ ಬಡ್ಲಗುಡ್ಡೆಯಲ್ಲಿರುವ 'ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ' ಮೇಲೆ ಶನಿವಾರ ರಾತ್ರಿ ನಡೆದ 'ನೈತಿಕ ಪೊಲೀಸ್್' ಪುಂಡಾಟಿಕೆಯ ಝಲಕ್.

ಈ ಮೊದಲು ಅಂದ್ರೆ 2009 ಜನವರಿ 24ರಂದು ಮಂಗಳೂರಿನ ಪಬ್ ಒಂದರ ಮೇಲೆ ಇದೇ ರೀತಿ ದಾಳಿ ನಡೆಸಲಾಗಿತ್ತು. ಆದರೆ ಶನಿವಾರ ನಡೆದದ್ದು? ಇಲ್ಲಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ದಾಳಿ ನಡೆಸಲಾಗಿತ್ತಂತೆ. ದಾಳಿ ನಡೆಸಿದವರು ಹಿಂದೂ ಜಾಗರಣ ವೇದಿಕೆಯವರು ಎಂದು ಸುದ್ದಿ ಪ್ರಕಟವಾದರೂ ಭಾನುವಾರ 'ಹಿಂದೂ ಜಾಗರಣ ವೇದಿಕೆ' ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಲ್ಲೆ ನಡೆಸಿದವರು ನಮ್ಮ ಕಾರ್ಯಕರ್ತರಲ್ಲ, ಅಲ್ಲಿನ ಸ್ಥಳೀಯರು ಎಂದು ಹೇಳುತ್ತಿದ್ದಾರೆ. ಹೋಗಲಿ ಬಿಡಿ, ಹಲ್ಲೆ ನಡೆಸಿದವರು ಯಾರು ಎಂಬುದು ಇಲ್ಲಿ ಮುಖ್ಯವಲ್ಲ, ಹಲ್ಲೆ ನಡೆಸಿದ್ದೇಕೆ?, ಹಲ್ಲೆ ನಡೆಸುವ ಹಕ್ಕನ್ನು ಇವರಿಗೆ ಕೊಟ್ಟವರು ಯಾರು? ಎಂಬುದೇ ಇಲ್ಲಿನ ಪ್ರಶ್ನೆ. ಯಾಕೆಂದರೆ ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಇಲ್ವೇ ಇಲ್ಲ. ಏನೇ ಕೃತ್ಯಗಳಾಗಲಿ, ಅದನ್ನು ವಿಚಾರಣೆ ಮಾಡಲು, ಶಿಕ್ಷೆ ನೀಡಲು ಕಾನೂನು ಇದೆ, ಕಾನೂನು ಪಾಲಕರಿರುತ್ತಾರೆ. ಅದು ಬಿಟ್ಟು ಎಲ್ಲರೂ ಕಾನೂನನ್ನು ಕೈಗೆತ್ತಿಕೊಂಡರೆ ಈ ನೆಲದಲ್ಲಿ ಕಾನೂನು ಯಾಕೆ ಬೇಕು?

ಆದಾಗ್ಯೂ, ಶನಿವಾರ ರಾತ್ರಿ ಆ ಹೆಣ್ಮಕ್ಕಳು ಗಂಡು ಮಕ್ಕಳ ಜತೆ ಸೇರಿ ಪಾರ್ಟಿ ನಡೆಸೋಕೆ ಬಂದದ್ದು ಅಲ್ಲ, ಅಲ್ಲಿ ಅನೈತಿಕ ಚಟುವಟಿಕೆ ನಡೆಸೋಕೆ ಬಂದದ್ದು ಎಂದು ಹಲ್ಲೆ ನಡೆಸಿದವರು ವಾದಿಸುತ್ತಾರೆ. ಆದರೆ ಈ ದಾಳಿಕೋರರು ಅಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದರೆ ಅದನ್ನು ಪೊಲೀಸರಿಗೆ ತಿಳಿಸಬೇಕೆತ್ತು. ಜವಾಬ್ದಾರಿಯುತ ನಾಗರೀಕರಂತೆ ವರ್ತಿಸಬೇಕಿತ್ತು. ಅದರ ಬದಲಾಗಿ ತಾವೇ ಹೋಗಿ ಪಾರ್ಟಿಗೆ ಬಂದಿದ್ದ ಯುವಕ ಯುವತಿಯರಿಗೆ ಹಿಗ್ಗಾಮುಗ್ಗ ಥಳಿಸಿ ನೈತಿಕತೆ ಮೆರೆವ ಪುರುಷರಂತೆ ಪೋಸ್ ಕೊಡುವ ಅಗತ್ಯವೇನಿತ್ತು? ಅಲ್ಲಿದ್ದ ಹೆಣ್ಣು ಮಕ್ಕಳ ಮೇಲೆ ಕೈ ಮಾಡುವ ಹಕ್ಕನ್ನು ಇವರಿಗೆ ಕೊಟ್ಟವರ್ಯಾರು? ಮನೆಯಲ್ಲೇ...ವಯಸ್ಸಿಗೆ ಬಂದ ಹೆಣ್ಮಕ್ಕಳಿಗೆ ಹೆತ್ತವರಾಗಲಿ, ಅಣ್ಣನಾಗಲೀ ಹೊಡೆದು ಬಡಿದು ಬುದ್ದಿ ಕಲಿಸುವುದಿಲ್ಲ. ಅಂತದರಲ್ಲಿ ಪಾರ್ಟಿ ಮಾಡೋಕೆ ಹುಡುಗರ ಜತೆಗೆ ಬಂದಿದ್ದಾರೆ ಎಂಬ ಕಾರಣಕ್ಕೆ ಆ ಹೆಣ್ಣು ಮಕ್ಕಳನ್ನು ಎಳೆದಾಡುವುದು ಸರಿಯೇ? ಅಲ್ಲೇನು ನಡೆದಿದೆ? ಎಂಬುದನ್ನು ವಿಚಾರಣೆ ಮಾಡುವನ್ನು ಅದು ಬಿಟ್ಟು ಥಳಿಸಿ, ಬುದ್ದಿ ಕಲಿಸೋಕೆ ಇವರ್ಯಾರು? ಹೋಂ ಸ್ಟೇನಲ್ಲಿ ನಡೆದ ದಾಳಿಯ ದೃಶ್ಯಗಳನ್ನು ಗಮನಿಸಿ. ಅದರಲ್ಲೊಬ್ಬ ಹೆಣ್ಣು ಮಗಳನ್ನು ಎಳೆದಾಡುತ್ತಾನೆ. ಹೆಣ್ಣು ಮಗಳ ದೇಹದಲ್ಲಿ ಆತನ ಕೈ ಹರಿದಾಡುತ್ತದೆ. ನಮ್ಮ ಮನೆಯ ಹೆಣ್ಮಗಳಾಗಿದ್ದು ಈ ರೀತಿ ಪಾರ್ಟಿ ಗೀರ್ಟಿ ಮಾಡಿ ಮಜಾ ಉಡಾಯಿಸಿದರೆ ಕಪಾಳಕ್ಕೆ ಹೊಡೆದು ಬುದ್ದಿಕಲಿಸುತ್ತಿದ್ದೆವು ಎಂದು ವೀರಾವೇಶದಿಂದ ಹೇಳುವವರಿದ್ದಾರೆ. ಆದರೆ ಇನ್ನೊಬ್ಬ ಹುಡುಗಿಯ ದೇಹವನ್ನು ಎಲ್ಲೆಂದರಲ್ಲಿ ಮುಟ್ಟಿ, ತೊಟ್ಟ ಬಟ್ಟೆಯನ್ನು ಹರಿದು ಹಾಕುವ ಮೃಗೀಯ ವರ್ತನೆಗೇ ಏನೆನ್ನಬೇಕು? ಇದೇನಾ ನಮ್ಮ ಸಂಸ್ಕೃತಿ? ಹುಡುಗ ಹುಡುಗಿ ಜತೆಯಲ್ಲಿ ಪಾರ್ಟಿಗೆ ಬಂದಿದ್ದಾರೆ ಎಂದಾಕ್ಷಣ ಅವರು ಅನೈತಿಕ ದಂಧೆಯಲ್ಲಿ ತೊಡಗಿದ್ದಾರೆ ಎಂದು ಕಲ್ಪಿಸಿಕೊಳ್ಳುವ ಈ ಮಂದಿಗೆ ಹೆಣ್ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆಸುವಾಗ ಭಾರತೀಯ ಸಂಸ್ಕೃತಿ ನೆನಪಿಗೆ ಬರಲಿಲ್ಲವೇ?

ಹೆಣ್ಣು ಮಾತೆ, ಆಕೆ ಪೂಜ್ಯಳು...ಅಂತದರಲ್ಲಿ ಆಕೆ ಗಂಡು ಮಕ್ಕಳ ಜತೆ ಸೇರಿ ಮಜಾ ಉಡಾಯಿಸೋಕೆ ಬಂದಿದ್ದಾಳೆ. ಅದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಎಂಬುದನ್ನು ಈ ದಾಳಿಕೋರರು ಒಪ್ಪಿಕೊಳ್ಳುತ್ತಾರೆ. ಸರಿ, ಭಾರತದಲ್ಲಿ ಹೆಣ್ಣು ಪೂಜ್ಯಳು. ಆಕೆ ಅಮ್ಮ, ಸಹೋದರಿ, ಅತ್ತಿಗೆ, ಗೆಳತಿ ಎಲ್ಲವೂ ಹೌದು. ಆಕೆಗೆ ಜವಾಬ್ದಾರಿ ಇದೆ ನಿಜ. ಆದರೆ ಇದೇ ಜವಾಬ್ದಾರಿ ಪುರುಷನಿಗೂ ಇದೆ ಅಲ್ವಾ? ಇಲ್ಲೀಗ ಹೆಣ್ಮಕ್ಕಳು ಮತ್ತು ಗಂಡು ಮಕ್ಕಳು ಪಾರ್ಟಿ ಮಾಡುತ್ತಿದ್ದಾರೆ ಎಂದು ವಿಷಯ ತಿಳಿದು ದಾಳಿ ಮಾಡಲಾಯಿತು. ಅದೇ ವೇಳೆ ದೇಶದೆಲ್ಲೆಡೆ ಎಷ್ಟೋ ಹೆಣ್ಮಕ್ಕಳು ಅತ್ಯಾಚಾರಕ್ಕೊಳಗಾಗಿ ನರಕ ಯಾತನೆ ಅನುಭವಿಸುತ್ತಿರುವ ಬಗ್ಗೆ ಈ ಪುರುಷರು ಎಂದಾದರೂ ಯೋಚಿಸಿದ್ದಾರೆಯೇ? ಅಷ್ಟೇ ಯಾಕೆ ಮೊನ್ನೆ ಗುರುವಾರ ಶಹಾಪುರದಲ್ಲಿ ಪಾಲಕರ ಎದುರೇ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿದ ಘಟನೆ ನಡೆಯಿತು. ಗುವಾಹಟಿಯಲ್ಲಿ ಕೆಲವು ಪುಂಡರು ಹದಿಹರೆಯದ ಹೆಣ್ಣು ಮಗಳ ಬಟ್ಟೆ ಹರಿದು ಅಸಭ್ಯವಾಗಿ ವರ್ತಿಸಿದ ಘಟನೆ ನೋಡಿ ದೇಶಕ್ಕೆ ದೇಶವೇ ನಡುಗಿ ಹೋಯಿತು. ಎರಡ್ಮೂರು ದಿನಗಳ ಹಿಂದೆ ಮದ್ದೂರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯೊಬ್ಬಳನ್ನು ಪುಂಡರು ಚುಡಾಯಿಸಿ ರೈಲಿನಿಂದ ಹೊರದಬ್ಬಿದರು. ಇಂಥದ್ದೇ ಘಟನೆಗಳು ಒಂದರ ಹಿಂದೆ ಒಂದರಂತೆ ಬ್ರೇಕಿಂಗ್ ನ್ಯೂಸ್್ಗಳಾಗಿ ಸುದ್ದಿಮಾಡುತ್ತವೆ. ಇದಕ್ಕೆಲ್ಲಾ ಕಾರಣಕರ್ತರು ಯಾರು? ಹೆಣ್ಣನ್ನು ಪೂಜಿಸುವ ದೇಶದಲ್ಲಿ ಹೀಗ್ಯಾಕೆ ಆಗುತ್ತಿದೆ? ದೇಶದ ಸಂಸ್ಕೃತಿ, ಮಹಿಳೆ ಪೂಜ್ಯಳು ಎಂಬ ವಾಕ್ಯ ಇವರಿಗೆ ಹೆಣ್ಣು -ಗಂಡು ಜತೆಯಾಗಿ ಪಾರ್ಟಿ ಮಾಡಿದರೆ ಮಾತ್ರ ನೆನಪಾಗುತ್ತದೆಯೇ?.

ಹೆಣ್ಣು ಮಕ್ಕಳು ಸಭ್ಯತೆಯ ಪರಿಧಿ ದಾಟಿ ಹೋಗಬಾರದು ನಿಜ. ಆದರೆ ಸಭ್ಯತೆ, ಆಚಾರಗಳನ್ನು ಹಿಂಸೆಯ ಮೂಲಕ ತಿಳಿ ಹೇಳಬೇಕೆ? ಸಂಸ್ಕೃತಿಯ ರಕ್ಷಣೆ ಎಂಬುದು ಮಹಿಳೆಗೆ ಮಾತ್ರ ಸೀಮಿತ ಯಾಕೆ? ಸಂಸ್ಕೃತಿಯ ರಕ್ಷಣೆಯ ಬಗ್ಗೆ ಕೂಗಾಡುವ ಈ ಮಂದಿ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯರ ಬಗ್ಗೆ ಏನಂತಾರೆ? ಅನೈತಿಕವಾಗಿ ಜನ್ಮ ತಾಳಿದ ಅದೆಷ್ಟೋ ಕಂದಮ್ಮಗಳು 'ಅಪ್ಪ' 'ಅಮ್ಮ' ಯಾರೆಂದು ಅರಿಯದೆ ಅನಾಥಾಲಯಗಳಲ್ಲಿ ಕಳೆಯುತ್ತಿವೆ. ಇನ್ನು ಕೆಲವು ಕಸದ ತೊಟ್ಟಿಯಲ್ಲಿ ಕೊಳೆತು ನಾಯಿ, ನರಿಗಳಿಗೆ ಆಹಾರವಾಗಿ ಹೋಗಿವೆ. ಯಾರಿಂದಲೋ ಅತ್ಯಾಚಾರಕ್ಕೊಳಗಾದ ಹೆಣ್ಮಗಳು ಸಮಾಜವನ್ನು ಎದುರಿಸಲಾಗದೆ ಜೀವ ಕಳೆದುಕೊಂಡಿದ್ದಾಳೆ. ಎಷ್ಟೋ ಅಮಾಯಕ ಹೆಣ್ಮಕ್ಕಳು ಆ್ಯಸಿಡ್ ದಾಳಿಗೊಳಗಾಗಿ ಮುಖಮುಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲಾ ನಮ್ಮ ಸಂಸ್ಕೃತಿಯ ಭಾಗವೇ ಅಲ್ಲವೇ? ಇದರ ಬಗ್ಗೆ ಸಮಾಜದ, ಸಂಸ್ಕೃತಿಯ ರಕ್ಷಕರು ಎಂದು ಕರೆಸಿಕೊಳ್ಳುವ ಜನರಲ್ಲಿ ಉತ್ತರವಿದೆಯೇ?

ಏನೇ ಆಗಲಿ, ಯಾರಿಗೇ ಆಗಲಿ ಹೊಡೆದು ಬಡಿದು ಸಂಸ್ಕೃತಿ ಕಲಿಸಲು ಸಾಧ್ಯವೆ? ನಾವು ಸಂಸ್ಕೃತಿಯ ರಕ್ಷಕರು ಎಂದು ಪೋಸ್ ಕೊಟ್ಟು ಹೋಂ ಸ್ಟೇ ಮೇಲೆ ದಾಳಿ ಮಾಡಿದ ಆ ಪುರುಷರು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಮರೆತಂತಿದೆ. ಇದೀಗ ಹೋಂ ಸ್ಟೇನಲ್ಲಿ ಆ ಯುವಕ ಯುವತಿಯರು ಬರ್ತ್್ಡೇ ಪಾರ್ಟಿ ಮಾಡೋಕೆ ಬಂದಿದ್ದಾರೆಯೇ ವಿನಾ ರೇವ್ ಪಾರ್ಟಿ ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಗೂಂಡಾಗಿರಿ ಮಾಡಿದವರ ಬಂಧನವೂ ಆಗಿದೆ. ಆದರೆ ಶಂಕೆಯ ಮೇರೆಗೆ ಒದೆ ತಿಂದ ಆ ಯುವಕ ಯುವತಿಯರ ಸ್ಥಿತಿ ಹೇಗಾಗಿರಬೇಡ?

ಒಟ್ಟಾರೆ ಈ ಘಟನೆಯಲ್ಲಿ ಹಲ್ಲೆ ನಡೆಸಿವರು ಯಾರೇ ಆಗಿರಲಿ...ಅದು ವಿಕೃತ ಮನಸ್ಸನ್ನು ತೋರಿಸುತ್ತದೆಯೇ ವಿನಾ ಸಂಸ್ಕೃತಿಯ ಕಾಳಜಿಯನ್ನಲ್ಲ. ಯಾಕೆಂದರೆ ವಿಧಾನಸಭೆಯಲ್ಲಿ ಸಚಿವರು ಬ್ಲೂಫಿಲಂ ನೋಡಿ ಎಂಜಾಯ್ ಮಾಡಿದಾಗ ತೆಪ್ಪಗಿದ್ದ ಈ ಮಂದಿ ಸಂಸ್ಕೃತಿ ಉಳಿಸುವ ಹೆಸರಿನಲ್ಲಿ ಹೆಣ್ಮಕ್ಕಳ ಮೇಲೆ ಹಲ್ಲೆ ಮಾಡಿರುವುದು ಹತಾಶ ಮನಸ್ಥಿತಿಯ ಸೂಚಕವೇ ಹೊರತು ಬೇರೇನು ಅಲ್ಲ!.

Sunday, July 22, 2012

ಒಂದು ಪೈದ್ಯ

ಇವತ್ತು 22/ 7 ಅಂದ್ರೆ Pi Approximation Day. π (ಪೈ) ಬಗ್ಗೆ ಈ ತಿಂಗಳ ರೀಡರ್ಸ್ ಡೈಜೆಸ್ಟ್್ನಲ್ಲಿ ತುಂಬಾ ಮಾಹಿತಿಪೂರ್ಣ ಲೇಖನ ಬಂದಿತ್ತು. ಅದರಲ್ಲಿ Piems (pi and poem) ಬಗ್ಗೆ ಓದಿದಾಗ ಇಂಥದ್ದೇ ಕವನ (ಪೈದ್ಯ) ಕನ್ನಡದಲ್ಲಿ ಯಾಕೆ ರಚಿಸಬಾರದು ಎಂದು ಅನಿಸಿತು. Piems ನಲ್ಲಿ ಪೈ ಬೆಲೆಯ ಪ್ರತಿಯೊಂದು ಅಂಕಿಗೆ ಸಮವಾಗಿ ಕವನದ ಅಕ್ಷರಗಳ ಜೋಡಣೆ ಇರುತ್ತದೆ.
ಅಂದರೆ 3.14159265358... ಈ ಅಂಕಿಗಳಿಗೆ ಸಮವಾಗಿ ಅಕ್ಷರ ಜೋಡಿಸಿದಾಗ ಕವನ ಈ ರೀತಿ ಮೂಡಿಬಂತು.

ಗೆಳೆಯಾ ನಾ ಹೇಳಲೇನು

ನಾ ಬರೆದಿರುವ ಹೃದಯದಾಕವನವನು

ನನ್ನ ಹೃದಯವೀಣೆಯು ಮಿಡಿಯುತಿದೆ

ಇನಿಯಾ

ಕಾಯುತಿರುವೆ ಒಲುಮೆಯಭಿಕ್ಷೆಗಾಗಿ

Sunday, June 17, 2012

ಮಗಳು ಫೋನ್ ಮಾಡಿದ್ಳು...ಇವತ್ತು ಅಪ್ಪಂದಿರ ದಿನ ಅಂತೆ


ಹಲೋ ಪಪ್ಪಾ....ಇವತ್ತು ಅಪ್ಪಂದಿರ ದಿನ...ಹ್ಯಾಪಿ ಫಾದರ್ರ್ಸ್ ಡೇ"

ಹೌದೇನಮ್ಮಾ...ಥ್ಯಾಂಕ್ಯೂ...ಅಂತೂ ಅಪ್ಪನಿಗೂ ಒಂದು ದಿನ ಇದೆಯಲ್ಲಾ ಎಂದು ಹೇಳಿದೆ.

ಹೇಗಿದ್ದೀರಾ ಪಪ್ಪಾ? ಎಂದು ಕೇಳಿ, ಪಪ್ಪಾ... ಅಮ್ಮನಿಗೆ ಫೋನ್ ಕೊಡು ಎಂದು ಅಂದ್ಳು...

ಅಷ್ಟೊತ್ತಿಗೆ ನನ್ನಾಕೆ ನನ್ನ ಬಳಿ ಬಂದು ನಿಂತಿದ್ದಳು. ಫೋನ್ ಆಕೆಯ ಕೈಗಿತ್ತು ನಾನು ಟೀವಿ ಮುಂದೆ ಕೂತೆ. ಅಮ್ಮ ಮಗಳು ಸುಮಾರು ಅರ್ಧ ಗಂಟೆಯವರೆಗೆ ಹರಟುತ್ತಲೇ ಇದ್ದರು.

ಹೌದು, ನನ್ನ ಪುಟ್ಟಿ ಚಿಕ್ಕವಳಿರುವಾಗ ಅವಳಿಗೆ ಎಲ್ಲವೂ ನಾನೇ ಆಗಿದ್ದೆ. ನನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಲ್ಲ. ಪಪ್ಪಾ..ಪಪ್ಪಾ ಎನ್ನುತ್ತಾ ನನ್ನ ಕಿರು ಬೆರಳು ಹಿಡಿದು ನಡೆದ ಮಗಳು ಈಗ ದೊಡ್ಡವಳಾಗಿದ್ದಾಳೆ. ಹೆಣ್ಮಕ್ಕಳು ಎಷ್ಟು ಬೇಗ ಬೆಳೆದು ಬಿಡ್ತಾರೆ ಅಲ್ವಾ? ನನ್ನ ಚಪ್ಪಲಿಯೊಳಗೆ ಅವಳ ಪುಟ್ಟ ಪಾದಗಳನ್ನು ತುರುಕಿ ಹೆಜ್ಜೆಯಿಡುತ್ತಾ, ನನ್ನ ಶರ್ಟ್ ಹಾಕಿ ದೊಗಳೆ ಶರ್ಟ್್ನೊಳಗೆ ನಿಂತು "ನೋಡು ಪಪ್ಪಾ ನಿಮ್ಮ ತರಾನೇ ಕಾಣ್ತಾ ಇಲ್ವಾ?" ಎಂದು ಕೇಳುತ್ತಿದ್ದ ಮಗಳು....ನಿದ್ದೆ ಮಾಡುವಾಗಲೂ ಅಷ್ಟೇ...ನನ್ನ ಪಕ್ಕದಲ್ಲೇ ಮಲಗಿ ಒಮ್ಮೊಮ್ಮೆ ನನ್ನ ಹೊಟ್ಟೆ ಮೇಲೆ ಮಲಗಿ ಉಚ್ಚೆ ಹೊಯ್ದು ಒದ್ದೆಯಾಗಿಸುತ್ತಿದ್ದ ನನ್ನ ಪುಟ್ಟಿಗೆ ಈಗ ಮದುವೆ ವಯಸ್ಸು.

ಚಿಕ್ಕವಳಿದ್ದಾಗ ಅವಳು ಕೇಳಿದ್ದನ್ನೆಲ್ಲಾ ನಾನು ಕೊಡಿಸುತ್ತಿದ್ದೆ. ಹಾಗಂತ ಅವಳು ಪಪ್ಪಾ...ನನಗೆ ಅದು ಕೊಡಿಸು, ಇದು ಕೊಡಿಸು ಎಂದು ಹಠ ಹಿಡಿದವಳೇ ಅಲ್ಲ. ಪಪ್ಪ ತಂದ ಅಂಗಿ ನನಗೆ ತುಂಬಾ ಇಷ್ಟ ಎನ್ನುತ್ತಾ ನಾನು ಏನೇ ತಂದುಕೊಟ್ಟರೂ ಖುಷಿ ಖುಷಿಯಾಗಿ ಸ್ವೀಕರಿಸುವ ಹೆಣ್ಣು ಮಗು ಅದು. ನನಗೆ ಈಗಲೂ ನೆನಪಿದೆ, ಸುಮಾರು 20 ವರ್ಷಗಳ ಹಿಂದೆ...ಅವಳಿಗಾಗ 6 ವರ್ಷ. ಪೇಟೆಗೆ ಹೋದಾಗ ಪಪ್ಪಾ ನನಗೆ ಆ ಟ್ರೈನ್ ಕೊಡಿಸ್ತೀಯಾ ಎಂದು ಕೇಳಿದ್ದಳು. ನನ್ನ ಕೈಯಲ್ಲಿ ಅಷ್ಟು ಹಣ ಇರಲಿಲ್ಲ. ಪಪ್ಪನ ಕೈಯಲ್ಲಿ ಅಷ್ಟೊಂದು ಹಣ ಇಲ್ಲ ಪುಟ್ಟಾ ಎಂದು ಸಂಕೋಚದಿಂದಲೇ ಹೇಳಿದೆ. ಅವಳು ಆಯ್ತು ಅಂದ್ಳು. ಅದರ ನಂತರ ಆಕೆ ಯಾವತ್ತೂ ನನಗೆ ಆಟಿಕೆ ತಂದು ಕೊಡು ಎಂದು ಕೇಳಲೇ ಇಲ್ಲ. ನಿನಗೆ ಬೊಂಬೆ ಬೇಕಾ? ಎಂದು ಕೇಳಿದಾಗ, ಈಗಾಗಲೇ ನನ್ನಲ್ಲಿ ಒಂದು ಬೊಂಬೆ ಉಂಟು...ಅದು ಸಾಕು ಪಪ್ಪಾ ಎಂದು ಉತ್ತರಿಸುತ್ತಿದ್ದಳು. ಅದೇ ಬೊಂಬೆಗೆ ಸ್ನಾನ ಮಾಡಿಸಿ, ಕಾಡಿಗೆ ಹಚ್ಚಿ ಶೃಂಗಾರಗೊಳಿಸುತ್ತಾ ಖುಷಿ ಖುಷಿಯಾಗಿ ಆಟವಾಡುತ್ತಿದ್ದ ಮಗಳ ಬಾಲ್ಯ ಈಗಲೂ ಕಣ್ಣ ಮುಂದಿದೆ.

ಅವಳು ದೊಡ್ಡವಳಾಗುತ್ತಿದ್ದಂತೆ ನಾನವಳ ಬೆಸ್ಟ್ ಫ್ರೆಂಡ್ ಆದೆ. ಏನೇ ವಿಷಯ ಇರಲಿ, ಆಕೆ ಮೊದಲು ಹೇಳುತ್ತಿದ್ದುದು ನನ್ನಲ್ಲೇ. ನಾನು ಸಂಜೆ ಮನೆಗೆ ಬರುವ ಹೊತ್ತಿಗೆ ಮನೆಯ ಮುಂದಿನ ಗೇಟಿನ ಪಕ್ಕ ನಿಂತು ನನ್ನ ದಾರಿ ನೋಡುತ್ತಿದ್ದಳು. ನಾನು ಬಸ್್ನಿಂದ ಇಳಿಯುವುದೇ ತಡ, ಓಡಿಕೊಂಡು ಬಂದು ನನ್ನ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದಳು. ಮನೆಗೆ ಬಂದ ಕೂಡಲೇ ಪಪ್ಪಾ, ಶಾಲೆಯಲ್ಲಿ ಹಾಗಾಯ್ತು, ಹೀಗಾಯ್ತು ಅಂತಾ ಅವಳು ಹೇಳದ ವಿಷಯಗಳೇ ಇರುತ್ತಿರಲಿಲ್ಲ. ಅವಳು ಎಲ್ಲೇ ಹೋಗಲಿ, ನಾನು ಅವಳ ಜತೆಗಿರಬೇಕು. ಕ್ಯಾಂಪ್್ಗೆ ಹೋದರೂ ಅಷ್ಟೇ...ಸಂಜೆ ಹೊತ್ತು ಆಕೆಯನ್ನು ಭೇಟಿ ಮಾಡಿ ಬರುತ್ತಿದ್ದೆ. ನಾನು ಹೊರಡುವ ಹೊತ್ತಿಗೆ ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಆಕೆಯ ಕಣ್ಣೀರು ನೋಡಿದರೆ ನನಗೂ ಕಣ್ಣಲ್ಲಿ ನೀರು ಬರುತ್ತಿತ್ತು..ಅದಕ್ಕೇ ನಾನು ತಿರುಗಿ ನೋಡುತ್ತಿರಲಿಲ್ಲ.

ಆಕೆ ಬೆಳಗ್ಗೆ ಏಳುವಾಗಲೂ ಅಷ್ಟೇ..ಅಪ್ಪನ 'ಕಣಿ' ನೋಡಿದರೆ ದಿನ ಚೆನ್ನಾಗಿರುತ್ತೆ ಎಂದು ಹೇಳುತ್ತಿದ್ದಳು. ಇನ್ನು, ನಾನು ಬೆಳಗ್ಗೆ ಕೆಲಸಕ್ಕೆ ಹೊರಡುವ ಮುನ್ನ ಆಕೆಯ ಕೆನ್ನೆಗೆ ಮುತ್ತು ಕೊಡಲೇ ಬೇಕಿತ್ತು. ಶಾಲೆಗೆ ಹೋಗುವಾಗಲೂ ಅಮ್ಮನಿಗೆ ಒಂದು ಮುತ್ತು, ನನ್ನ ಪಪ್ಪನಿಗೆ ಎರಡು ಮುತ್ತು ಎನ್ನುತ್ತಾ ನನಗೇ ಜಾಸ್ತಿ ಮುತ್ತು ಕೊಡುತ್ತಿದ್ದವಳು. ಇನ್ನು ಬಹುಮಾನ ಸಿಕ್ಕಿದರಂತೂ ಎಕ್ಸ್್ಟ್ರಾ ಮುತ್ತು ಕೊಡಲೇ ಬೇಕಿತ್ತು. ನೈಲ್ ಪಾಲಿಷ್ ತಂದರೆ ನನ್ನ ಬೆರಳಿಗೆ ಮೊದಲು ಹಚ್ಚಿ ನೋಡುತ್ತಿದ್ದಳು, ಮೆಹಂದಿ ಡಿಸೈನ್ ಕಲಿಯಲು ನನ್ನ ಕೈಯೇ ಬೇಕು. ಅಡುಗೆ ಮಾಡಿದರಂತೂ ಮೊದಲು ನಾನೇ ತಿನ್ನಬೇಕು. ಆಕೆಯ ಎಲ್ಲ ಪ್ರಯೋಗಗಳಿಗೆ ನಾನೇ ಬೇಕಾಗಿತ್ತು. ಹೀಗೆ ಆಟ ಪಾಠಗಳ ಜತೆಗೆ ಶಾಲೆ, ಹೈಸ್ಕೂಲ್, ಕಾಲೇಜು ಎಲ್ಲವೂ ಮುಗಿದೇ ಹೋಯಿತು. ನೀನಿನ್ನು ದೊಡ್ಡವಳಾಗಿದ್ದೀಯ...ಚಿಕ್ಕ ಮಕ್ಕಳಂತೆ ಆಡ್ಬೇಡಾ ಎಂದು ಅಮ್ಮ ಪದೇ ಪದೇ ಗದರಿಸುವಾಗ, ನನ್ನ ಪಪ್ಪನಿಗೆ ನಾನು ಈಗಲೂ ಪಾಪು...ಅಲ್ವಾ ಪಪ್ಪಾ ಎಂದು ನನ್ನನ್ನು ಕೇಳುತ್ತಿದ್ದಳು. ನಾನು ಹೂಂ ಅನ್ನುತ್ತಿದ್ದೆ.

ಬಾಲ್ಯದಿಂದಲೂ ನನ್ನನ್ನೇ ಬಹಳ ಹಚ್ಚಿಕೊಂಡಿದ್ದ ನನ್ನ ಪಾಪು ಈಗ ನನ್ನ ಪಕ್ಕದಲ್ಲಿಲ್ಲ. ಹೊಟ್ಟೆಪಾಡಿಗಾಗಿ ದೂರದ ಊರು ಸೇರಿದ್ದಾಳೆ. ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಹೋಗ್ತಿದ್ದಾಳೆ. ಜೀವನ ಏನೆಂಬುದು ಆಕೆಗೆ ಅರ್ಥವಾಗಿದೆ. ಚಿಕ್ಕ ಹುಡುಗಿಯಂತೆ ಆಡುತ್ತಿದ್ದ ನನ್ನ ಪುಟ್ಟಿಗೆ ಪಕ್ವತೆ ಬಂದಿದೆ. ಅವಳು ಮನೆಗೆ ಬಂದರೆ ಸಾಕು...ಸಿಕ್ಕಾಪಟ್ಟೆ ಹರಟುತ್ತೇವೆ. ನಾನು ಪಪ್ಪಾನ ಮಗಳು...ಎಂದು ನನಗಂಟಿಕೊಂಡೇ ಇರ್ತಾಳೆ. ಉದ್ಯಾನ ನಗರಿಯ ಸಿಟಿ ಲೈಫ್ ಬಗ್ಗೆ, ಸುದ್ದಿ ಮಾಧ್ಯಮಗಳ ಬಗ್ಗೆಯೇ ಸಾಕಷ್ಟು ಮಾತಾಡ್ತೇವೆ. ರಜಾ ದಿನಗಳಲ್ಲಿ ಅವಳ ಜತೆ ಶಾಪಿಂಗ್ ಮಾಡುವುದೇ ಒಂಥರಾ ಗಮ್ಮತ್ತು. ಪಪ್ಪಾ ನಿನಗೇನು ಬೇಕು? ಎಂದು ಕೇಳುತ್ತಾ ನನಗೆ ಬೇಕಾದನ್ನೆಲ್ಲಾ ಕೊಡಿಸ್ತಾಳೆ. ಜಾಸ್ತಿ ಹಣ ಖರ್ಚು ಮಾಡ್ಬೇಡ ಪುಟ್ಟಾ ಎಂದು ಹೇಳಿದರೆ, ನಾನು ಸಿಕ್ಕಾಪಟ್ಟೆ ಖರ್ಚು ಮಾಡಲ್ಲ ಎಂಬುದು ನಿಮಗೆ ಗೊತ್ತಲ್ವಾ? ಉತ್ತರಿಸುತ್ತಾಳೆ. ರಸ್ತೆ ದಾಟುವಾಗ ನನ್ನ ಕೈ ಹಿಡಿದುಕೊಂಡು ಜಾಗ್ರತೆಯಿಂದ ದಾಟಿಸುತ್ತಾಳೆ. ಮೀನು ಮಾರುಕಟ್ಟೆಗೆ ಹೋದ್ರೆ...ಪಪ್ಪಾ ಜಾಸ್ತಿ ಮುಳ್ಳು ಇರುವ ಮೀನು ಬೇಡಪ್ಪಾ ಎಂದು ಹೇಳ್ತಾಳೆ. ಶಾಪಿಂಗ್ ಮುಗಿಸಿ ಅದೇ ಕೆನರಾ ಐಸ್್ಕ್ರೀಂ ಪಾರ್ಲರ್್ನಲ್ಲಿ ಕುಳಿತು ಐಸ್್ಕ್ರೀಂ ತಿನ್ನುತ್ತಾ ಎಂಜಾಯ್ ಮಾಡ್ತೀವಿ. ವ್ಯತ್ಯಾಸ ಇಷ್ಟೇ..ಅವಳು ಚಿಕ್ಕವಳಿರುವಾಗ ನಿನಗೇನು ಬೇಕು? ಎಂದು ನಾನು ಕೇಳ್ತಾ ಇದ್ದೆ..ಇವತ್ತು ಅವಳು ಕೇಳ್ತಾಳೆ. ಜೀವನ ಚಕ್ರ ತಿರುಗುತ್ತಿದೆ...ನೆನೆಪಿನ ದೋಣಿ ಹೀಗೆ ಸಾಗುತ್ತಲೇ ಇರುತ್ತದೆ. ನನ್ನ ಪುಟ್ಟಿ ದಿನಾ ಫೋನ್ ಮಾಡ್ತಾಳೆ..ಫೋನಿಡುವ ಹೊತ್ತಿಗೆ ಐ ಲವ್್ಯೂ ಪಪ್ಪಾ ಅಂತಾ ಹೇಳಿ ಮುತ್ತಿಡುತ್ತಾಳೆ. ಅವಳು ಖುಷಿಯಾಗಿದ್ದಾಳೆ...ನನಗಷ್ಟು ಸಾಕು!

Friday, March 9, 2012

ಪ್ರಜಾವಾಣಿಗೆ 'ಅನುರಾಗ'ದ ನನ್ನಿ...

ಮಾರ್ಚ್ 9, 2012ರ ಪ್ರಜಾವಾಣಿ ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ 'ಅನುರಾಗ'ದ ಬಗ್ಗೆ ಬರೆಯಲಾಗಿದೆ. ಇವತ್ತಿನ ದಿನ ಡಬಲ್ ಖುಷಿ ನನಗೆ. ಯಾಕೆ ಗೊತ್ತಾ? ಮಾರ್ಚ್ 9 ನನ್ನ ಅಪ್ಪ ಅಮ್ಮನ 35ನೇ wedding anniversary...ಸುದ್ದಿ ತಿಳಿದು ಅಪ್ಪ ಅಮ್ಮ ಫುಲ್ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ಖುಷಿ ಕಂಡು ನನಗೂ ಸಂತೋಷವಾಗಿದೆ. ನಮ್ಮೆಲ್ಲರ ಸಂತಸಕ್ಕೆ ಕಾರಣವಾದ ಪ್ರಜಾವಾಣಿಗೆ 'ಅನುರಾಗ'ದ ಧನ್ಯವಾದಗಳು.

ನನ್ನಿ,
ರಶ್ಮಿ. ಕಾಸರಗೋಡು.

Thursday, March 8, 2012

'ಅವಳ್ಯಾಕೆ' ನಮ್ಮ ರೋಲ್ ಮಾಡೆಲ್ ಆಗ್ಬಾರ್ದು?


ಜಗತ್ತಿನಲ್ಲಿ ಎಷ್ಟು ರೀತಿಯ ಮಹಿಳೆಯರಿದ್ದಾರೆ? ಎಂಬ ಪ್ರಶ್ನೆಯನ್ನು ನಿಮ್ಮಲ್ಲಿ ನೀವೇ ಕೇಳಿ ನೋಡಿ. ಮೊದಲಿಗೆ ಸುಂದರಿಯಾದ ಮಹಿಳೆಯ ಚಿತ್ರಣ ನಿಮ್ಮ ಮುಂದೆ ಬರುತ್ತದೆ ನಂತರ ನೊಂದ ಮಹಿಳೆ, ಯಶಸ್ವೀ ಮಹಿಳೆ, ದೌರ್ಜನ್ಯಕ್ಕೊಳಗಾದ ಮಹಿಳೆ, ಖಿನ್ನಳಾದ ಮಹಿಳೆ, ಸುಖಿ ಮಹಿಳೆ, ಅಹಂಕಾರಿ ಮಹಿಳೆ, ಮಾನ ಮಾರಿದ ಮಹಿಳೆ, ಮಕ್ಕಳನ್ನೇ ಕೊಂದ ಪಾಪಿ ಮಹಿಳೆ, ಕೈಕೊಟ್ಟ ಮಹಿಳೆ, ಕೈ ಹಿಡಿದ ಮಹಿಳೆ...ಹೀಗೆ ಮಹಿಳೆಯ ಹಲವಾರು 'ರೂಪ'ಗಳು ನಿಮ್ಮ ಕಣ್ಣ ಮುಂದೆ ಸುಳಿಯುತ್ತವೆ.
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಸಂದರ್ಭದಲ್ಲಿ ಚರ್ಚಾ ವಿಷಯಗಳಿಗೊಳಗಾಗುವ ಮಹಿಳೆಯರೆಂದರೆ ಒಂದು ಯಶಸ್ವೀ ಮಹಿಳೆ ಇನ್ನೊಂದು ದೌರ್ಜನ್ಯಕ್ಕೊಳಗಾದ ಮಹಿಳೆ. ಇಂತಹಾ ದಿನಾಚರಣೆಗಳಲ್ಲಿ ಯಶಸ್ವೀ ಮಹಿಳೆಯ ಸಾಧನೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯ 'ರೋದನೆ' ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ನಾವು ಓರ್ವ ಸಾಧಕಿಯ ಸಾಧನೆಗಳನ್ನು ಮೆಚ್ಚಿ ಕರತಾಡನ ಮಾಡಿದರೆ ಇನ್ನೊಂದೆಡೆ ದೌರ್ಜನ್ಯಕ್ಕೊಳಗಾದ ಮಹಿಳೆಯ ಪರ ದನಿಗೂಡಿಸುತ್ತೇವೆ. ಒಬ್ಬಳು ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದರೆ ಇನ್ನೊಬ್ಬಳು ದೌರ್ಜನ್ಯದ ನೋವು ಅನುಭವಿಸುತ್ತಿರುತ್ತಾಳೆ. ಹಾಗೆ ನೋಡಿದರೆ ಯಶಸ್ವೀ ಮಹಿಳೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಎರಡು ಗುಂಪುಗಳಿಗೆ ಸೇರಿಸಿ ಪ್ರತ್ಯೇಕಿಸಬಹುದು. ಆದರೆ ಕೆಲವೊಂದು ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಹಾಗೂ ಸಾಧನೆ ಹೊರ ಜಗತ್ತಿಗೆ ಯಾಕೆ ಸ್ವಂತ ಮನೆಯವರಿಗೇ ತಿಳಿಯುವುದಿಲ್ಲ.

ಅವರ್ಯಾರು? ಎಂಬ ಕುತೂಹಲ ನಿಮ್ಮಲ್ಲಿರಬಹುದು. ಅವರು ಮತ್ಯಾರು ಅಲ್ಲ...ನಮ್ಮ 'ಅಮ್ಮ'. ಈಕೆ ಮನೆಯಲ್ಲಿದ್ದು ಅಡುಗೆ ಮಾಡಿಕೊಂಡು, ಗಂಡನ ಗಡಿಬಿಡಿಗೆ ಸಿಡಿಮಿಡಿಗೊಳ್ಳುವ, ಮಕ್ಕಳ ಚಾಕರಿ ಜತೆ ಧಾರವಾಹಿಗಳನ್ನು ನೋಡಿ ಕಣ್ಣೀರು ಸುರಿಸುವ 'ಗೃಹಿಣಿ'. ಈಕೆ ಯಶಸ್ವೀ ಮಹಿಳೆ ಎಂದು ಹೆಚ್ಚಿನವರಿಗೆ ಅನಿಸುವುದೇ ಇಲ್ಲ ಯಾಕೆಂದರೆ ಈಕೆ ಯಾವತ್ತೂ ನನ್ನ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನ್ನಾಡಿ ಪ್ರಶಸ್ತಿ ಪುರಸ್ಕಾರ ನೀಡಬೇಕು ಎಂದು ಆಶಿಸಿದವಳೇ ಅಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೆ ಮನೆಗೆಲಸ ಮಾಡುತ್ತಾ, ತನ್ನ ಕಷ್ಟಗಳನ್ನೆಲ್ಲಾ ಅದುಮಿಟ್ಟು ಗಂಡನ, ಮಕ್ಕಳ ಖುಷಿಗಾಗಿ ಹಾತೊರೆಯುವ ಈ ಹೆಣ್ಮಗಳು ಯಾವತ್ತೂ ತನ್ನ ಸ್ವಂತ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ. ಮನೆಯವರು ಖುಷಿಯಾಗಿದ್ದರೆ ಸಾಕು..ಅವರ ಖುಷಿಯೇ ನನ್ನ ಖುಷಿ ಎಂಬ ಧ್ಯೇಯವನ್ನು ಬದುಕಿನುದ್ದಕ್ಕೂ ಅನುಸರಿಸುವ ಈಕೆ ನಿಜವಾಗಿಯೂ 'ಯಶಸ್ವೀ ಮಹಿಳೆ' ಎಂಬುದನ್ನು ನಾವು ಮರೆತು ಬಿಟ್ಟಿರುತ್ತೇವೆ.

ಅದಿರಲಿ, ರೋಲ್ ಮಾಡೆಲ್್ನ ವಿಷಯ ಬಂದಾಗಲಂತೂ ನಮಗೆ ಥಟ್ಟನೆ ನೆನಪು ಬರುವುದೇ ಯಾವುದೋ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು. ಅದು ಸಿನಿಮಾ, ಕ್ರೀಡೆ ಅಥವಾ ರಾಜಕೀಯವೇ ಆಗಿರಬಹುದು ಅಲ್ಲಿ ಮಿಂಚಿದ ವ್ಯಕ್ತಿಗಳೇ ನಮ್ಮ ರೋಲ್್ಮಾಡೆಲ್. ಅವರ ಜೀವನದಲ್ಲಿ ಹಾಗಾಗಿತ್ತು, ಹೀಗಾಗಿತ್ತು, ಅವರು ಸಾಧನೆ ಮಾಡಿದ್ದಾರೆ, ಕಷ್ಟವನ್ನು ಜಯಿಸಿದ್ದಾರೆ ಆದ್ದರಿಂದ ಅವರೇ ನನಗೆ ಆದರ್ಶಪ್ರಾಯರು ಎಂದು ನಾವು ನಮ್ಮ ಆಯ್ಕೆಯ ಬಗ್ಗೆ ಸಮರ್ಥನೆ ನೀಡುತ್ತೇವೆ. ಅದೇ ಸಮಯದಲ್ಲಿ ಹಿತ್ತಿಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ನಮ್ಮ ಮನೆಯಲ್ಲೇ ಇರುವ ನಮ್ಮ 'ಅಮ್ಮ' ಮಹಾನ್ ಸಾಧಕಿ ಎಂಬುದನ್ನು ನಾವು ಮರೆತು ಬಿಡುತ್ತೇವೆ.

ಆಕೆ ನಮ್ಮ ಕುಟುಂಬದ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗ ಮಾಡಿದ್ದಾಳೆ. ಮನೆಯ ಗೃಹಿಣಿ ಖುಷಿಯಾಗಿದ್ದರೆ ಕುಟುಂಬದ ಸದಸ್ಯರೆಲ್ಲರೂ ಖುಷಿಯಾಗಿರುತ್ತಾರೆ ಎಂಬುದು ಅವಳಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಆಕೆ ತನ್ನ ನೋವುಗಳನ್ನೆಲ್ಲಾ ನುಂಗಿ ನಕ್ಕಿದ್ದಾಳೆ, ನಮ್ಮನ್ನು ನಗಿಸಿದ್ದಾಳೆ. ನಮ್ಮ ದುಃಖದಲ್ಲಿ ಕಣ್ಣೀರೊರೆಸಿ, ನೋವನ್ನು ಗೆಲ್ಲುವ ಛಲವನ್ನು ತುಂಬಿದ್ದಾಳೆ. ನಮ್ಮ 'ಅಮ್ಮ'ನನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆಯೋ ಗೊತ್ತಿಲ್ಲ. ಆದರೆ ನಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ಏಕೈಕ ವ್ಯಕ್ತಿ ಅವಳೇ. ಆದ್ದರಿಂದ ಅವಳ್ಯಾಕೆ ನಮ್ಮ ರೋಲ್ ಮಾಡೆಲ್ ಆಗ್ಬಾರ್ದು? ಆಯ್ಕೆ ನಿಮಗೆ ಬಿಟ್ಟದ್ದು.

Tuesday, February 14, 2012

ಪ್ರೀತಿ, ಸಿನಿಮಾ ಮತ್ತು ಫೇಸ್ ಬುಕ್

ಶೀರ್ಷಿಕೆ ನೋಡಿದ ಕೂಡಲೇ ವಿಷಯ ಏನೂಂತಾ ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಪಾಶ್ಚಾತ್ಯರಿಂದ ಬಳುವಳಿಯಾಗಿ ಸಿಕ್ಕ ಈ ಆಚರಣೆ ಭಾರತದಲ್ಲಿ ಇಂದು ಗಣರಾಜ್ಯೋತ್ಸವ, ಶಿವರಾತ್ರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಪ್ರೇಮಿಗಳ ದಿನ ಎಂದ ಕೂಡಲೇ ಪ್ರೀತಿಸಲು ಪ್ರತ್ಯೇಕ ದಿನ ಬೇಕಾ? ಅದೊಂದಿನ ಪ್ರೀತಿ ಮಾಡಿದರೆ ಸಾಕಾ? ಕೆಂಪು ಗುಲಾಬಿ ಕೊಟ್ಟು ಐ ಲವ್ ಯೂ ಅಂತಾ ಹೇಳಿ ಇಲ್ಲವೇ ದುಬಾರಿ ಗಿಫ್ಟ್, ಕಾರ್ಡ್ ಕೊಟ್ಟು ಪಾರ್ಕ್ ಸಿನಿಮಾ ಸುತ್ತಾಡಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಪಾಶ್ಚಾತ್ಯರ ಪ್ರೇಮದ ಹುಚ್ಚು ಭಾರತೀಯರಾದ ನಮಗ್ಯಾಕೆ ಬೇಕು? ಎಂಬ ಪ್ರಶ್ನೆ ಪ್ರತೀ ವ್ಯಾಲೆಂಟೈನ್ಸ್ ಡೇ ದಿನದಂದು ಕೇಳಿ ಬರುತ್ತದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಚರ್ಚೆಗಳನ್ನು ನಡೆಸಿದರೆ, ಕೆಲವೊಂದು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಎಂಬ ಘೋಷಣೆಗಳನ್ನು ಕೂಗುತ್ತವೆ. ಆದರೂ ಭಾರತದಲ್ಲಿ ವ್ಯಾಲೆಂಟೈನ್ಸ್ ಆಚರಣೆ ಮುಂದುವರಿಯುತ್ತಲೇ ಇದೆ. ಯಾಕೆಂದರೆ ಇಂತಹ ಚರ್ಚೆ, ಪ್ರತಿಭಟನೆಗಳಿಂದಲೇ ವ್ಯಾಲೆಂಟೈನ್ಸ್ ಡೇ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು.


ಪ್ರತೀವರ್ಷ ಫೆ.14 ಬಂತೆಂದರೆ ಸಾಕು...ಪಾರ್ಕ್, ಸಿನಿಮಾ ಹಾಲ್ ಎಲ್ಲೆಡೆಯೂ ಪ್ರೇಮಿಗಳ ಕಲರವ. ಪ್ರೀತಿಯ ಮೆಸೇಜ್್ಗಳಿಂದ ತುಂಬಿ ತುಳುಕುವ ಐನ್್ಬಾಕ್ಸ್, ಈ ಮೇಲ್, ಗಿಫ್ಟ್... ಬೆಳಗ್ಗಿನಿಂದ ರಾತ್ರಿ ವರೆಗಿನ ಸಮಯ ಪ್ರೇಮಮಯ!
ಯಾರು ಎಷ್ಟೇ ಕೂಗಾಡಲಿ...ವ್ಯಾಲೆಂಟೈನ್ಸ್ ಡೇ ಆಚರಣೆ ಎಂದ ಕೂಡಲೇ ಮಾಧ್ಯಮಗಳೇನು ಸುಮ್ಮನೆ ಕೂರುವುದಿಲ್ಲ, ವ್ಯಾಲೆಂಟೈನ್ಸ್ ಡೇ ನಮಗೆ ಬೇಕೋ ಬೇಡವೆ? ಎಂದು ಸುದ್ದಿವಾಹಿನಿಗಳು ಚರ್ಚೆಗೆ ಆಹ್ವಾನಿಸಿದರೆ, ಪತ್ರಿಕೆಗಳು ಲವ್್ಲೆಟರ್್ಗಳ ಗುಚ್ಛವನ್ನೇ ಹೊತ್ತು ತರುತ್ತವೆ. ಇನ್ನು ಅದೇ ದಿನ ಹೊಸ ಚಿತ್ರಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರರಂಗವೂ 'ಪ್ರೀತಿ'ಯನ್ನು ಮೆರೆಯುತ್ತದೆ.

ಪ್ರೀತಿ ಎಂದಾಕ್ಷಣ 'ಸಿನಿಮಾ'ದ ಬಗ್ಗೆ ಹೇಳದಿದ್ದರೆ ಅದು ಅಪೂರ್ಣವೇ. 'ಪ್ರೀತಿ' ಎಂಬ ಮಧುರವಾದ ಭಾವನೆಯನ್ನೇ ಬಂಡವಾಳವಾಗಿರಿಸಿಕೊಂಡು ದುಡ್ಡು ಮಾಡಿದ್ದು ಎಂದರೆ ಸಿನಿಮಾ ಮಾತ್ರ. ಪ್ರೀತಿ ಹೇಗಿರುತ್ತದೆ, ಅದನ್ನು ಗಳಿಸುವುದು ಹೇಗೆ? ಮುರಿಯುವುದು ಹೇಗೆ? ಪ್ರೀತಿಯ ನಾನಾ ರೂಪಗಳನ್ನು ಅನಾವರಣ ಮಾಡಿದ್ದೇ ಸಿನಿಮಾ. ಸಿನಿಮಾ ಮತ್ತು ಪ್ರೀತಿ ಒಂದೇ ನಾಣ್ಯದ ಮುಖಗಳಂತಿದ್ದು, ಇದರ ಪ್ರಭಾವ ಎಷ್ಟೆಂದರೆ ಲವ್್ಸ್ಟೋರಿ ಇದ್ದರೇನೆ ಅದು ಸಿನಿಮಾ ಎನ್ನುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.

ಫ್ಲ್ಯಾಶ್್ಬ್ಯಾಕ್ ನೋಡಿದರೆ ಹಳೇ ಕಾಲದ ಸಿನಿಮಾಗಳಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದ ನಾಯಕಿ, ಕಷ್ಟಪಟ್ಟು ದುಡಿಯುತ್ತಿದ್ದ ನಾಯಕನನ್ನು ಲವ್ ಮಾಡ್ತಿದ್ದಳು. ಕಣ್ ಕಣ್ ಸನ್ನೆಗಳಿಂದಲೇ ಮಾತನಾಡುತ್ತಾ ಪ್ರೀತಿ ಮಾಡುತ್ತಿದ್ದರು. ಆದರೆ ಈಗ ತುಂಡು ಬಟ್ಟೆಯ ನಾಯಕಿಗೆ ಪ್ರೀತಿಸುವುದೊಂದೇ ಕಾಯಕ ಅವಳೊಂದಿಗೆ 24 ಗಂಟೆ ಸುತ್ತಾಡಲು ಒಬ್ಬ ಕೆಲಸವೇ ಇಲ್ಲದ ನಾಯಕ.
ಇನ್ನು ಹೇಳುವುದಾದರೆ ಸಿನಿಮಾದ ಒಂದೇ ಹಾಡಿನಲ್ಲೇ ನಾಯಕಿ ಪ್ರೀತಿಯಲ್ಲಿ 'ಬೀಳು'ತ್ತಾಳೆ. ಹೀಗೆ ಬಿದ್ದವಳು ಮುಂದಿನ ದೃಶ್ಯದಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಡ್ರೆಸ್ ತಡಕಾಡಿಕೊಂಡು ನಾಯಕನ ಬೆಡ್್ನಿಂದ 'ಎದ್ದೇಳು'ತ್ತಾಳೆ. ನಾಯಕ ಲವ್ ಮಾಡಿದ್ದಾನೆ ಅಂದ್ರೆ ಆತ ನಾಯಕಿಗೆ ಲಿಪ್್ಲಾಕ್ ಮಾಡಲೇಬೇಕು. ಆಕೆ ಪಾರದರ್ಶಕ ಡ್ರೆಸ್ ಹಾಕಿ ಮಳೆಯಲ್ಲಿ ನೆನೆಯಲೇ ಬೇಕು..ಅವರಿಬ್ಬರದ್ದು ಅಗಾಧ ಪ್ರೀತಿ ಎಂದು ತೋರಿಸಲು ನಾಯಕ ನಾಯಕಿ ರಾತ್ರಿ 'ಕುಚ್್ಕುಚ್್' ಮಾಡಲೇ ಬೇಕು. ನಾಲ್ಕು ಸಾಂಗ್, ಒಂದು ಲಾಂಗ್, ಕೋಲ್ಡಾಗಿರುವ ವೆದರು, ಹಾಟ್ ಆಗಿರುವ ಫಿಗರು ಸಿನಿಮಾದಲ್ಲಿ ಇದ್ರೇನೆ ನೋಡೋಕೆ ಮಜಾ ಎಂದು ಈಗಿನ ಸಿನಿಮಾವನ್ನು ಬೆಂಗ್ಳೂರು ಭಾಷೆಯಲ್ಲಿ ವಿವರಿಸಿದರೆ ತಪ್ಪೇನಾಗಲ್ಲ ಬಿಡಿ.

ಪ್ರೀತಿಯ ಬಗ್ಗೆಯಿರುವ ಇಷ್ಟೊಂದು ಸಿನಿಮಾಗಳನ್ನು ನೋಡಿದರೂ ನಿಜವಾದ ಪ್ರೀತಿ ಏನೆಂಬುದು ಇಂದಿನ ಯುವ ಜನರಿಗೆ ಅರ್ಥವಾಗದ ಮಾತು. ಯಾಕೆಂದರೆ ನಿಜವಾದ ಪ್ರೀತಿ ಯಾವುದು ಎಂಬುದರ ಬಗ್ಗೆ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿದ್ದೇ ಸಿನಿಮಾಗಳು. ಪ್ರೀತಿಯ ಭಾವನೆ ಹೇಗಿರುತ್ತದೆ, ಅದರಲ್ಲಿ ಎದುರಿಸಬೇಕಾದ ಸವಾಲುಗಳು, ಕಷ್ಟ ನಷ್ಟ ಎಲ್ಲವನ್ನೂ ಹೇಳಿಕೊಟ್ಟದ್ದು ಕೂಡಾ ಸಿನಿಮಾ..ಇದು ಪ್ಲಸ್ ಪಾಯಿಂಟ್.

ಅದೇ ವೇಳೆ ಪ್ರೀತಿಸುವ ಹುಡುಗಿ ಸುಂದರಿಯಾಗಿರಲೇ ಬೇಕು, ಆಕೆಯನ್ನು ಒಲಿಸಿಕೊಳ್ಳಲು ದೊಡ್ಡ ಉಡುಗೊರೆ ಕೊಡಬೇಕು...ಆಕೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ನೀಟಾಗಿ ಡ್ರೆಸ್ ಮಾಡಿ ಬೈಕ್್ನಲ್ಲಿ ಸುತ್ತಾಡಬೇಕು, ಹುಡುಗನನ್ನು ಪಟಾಯಿಸುವುದು ಹೇಗೆ? ಅವನಿಗೆ ಕೈ ಕೊಡುವುದು ಹೇಗೆ ಎಂಬೆಲ್ಲಾ ವಿಷಯಗಳನ್ನು ಕೂಡಾ ಸಿನಿಮಾ ಜನರಿಗೆ ಹೇಳಿಕೊಟ್ಟಿದೆ. ಇದು ನೆಗೆಟಿವ್ ಪಾಯಿಂಟ್. ಒಟ್ಟಿನಲ್ಲಿ ಸಿನಿಮಾ ಮೂಲಕ ಇದನ್ನೆಲ್ಲಾ ನೋಡಿದ ಜನರು ಹೆಚ್ಚಾಗಿ ಸ್ವೀಕರಿಸಿದ್ದು ನೆಗೆಟಿವ್ ಪಾಯಿಂಟ್್ನ್ನೇ. ಇದರಿಂದಾಗಿಯೇ ಜನರು ಲವ್ ಯಾವುದು ಲಸ್ಟ್ ಯಾವುದು ಎಂಬುದರ ವ್ಯತ್ಯಾಸವನ್ನು ಅರಿಯುವಲ್ಲಿ ಎಡವಿದ್ದಾರೆ. ಪರಿಣಾಮ ಇಂತಹ ಪ್ರಣಯ ಸಂಬಂಧಗಳು ದೀರ್ಘ ಕಾಲ ಬಾಳ್ವಿಕೆ ಬರುವುದೇ ಇಲ್ಲ.


ಸಿನಿಮಾಗಳ ವಿಷ್ಯದಿಂದ ಸ್ವಲ್ಪ ಸರಿದು ಸೋಷ್ಯಲ್ ನೆಟ್್ವರ್ಕಿಂಗ್ ಸೈಟ್್ಗಳತ್ತ ಕಣ್ಣು ಹಾಯಿಸೋಣ. ಹಳೇ ಕಾಲದಲ್ಲಾದರೆ ಅಪರೂಪಕ್ಕೆ ಸಿಕ್ಕ ಗೆಳೆಯರಲ್ಲಿ ಏನು ಪತ್ತೆನೇ ಇಲ್ಲ? ಒಂದು ಲೆಟರ್ ಹಾಕ್ಬಾರ್ದಿತ್ತಾ? ಫೋನ್ ಮಾಡ್ಬಾರ್ದಿತ್ತಾ? ಎಂದೆಲ್ಲಾ ಕೇಳುತ್ತಿದ್ದರು. ಈಗ ಫೇಸ್್ಬುಕ್್ನಲ್ಲೋ, ಆರ್ಕುಟ್್ನಲ್ಲೋ ಹುಡುಕಿದರಾಯ್ತು. ನಮಗೆ ಪರಿಚಯ ಇರುವ ಇಲ್ಲದ ಎಲ್ಲ ಮನುಷ್ಯರನ್ನು ಗೆಳೆಯರಾಗುವಂತೆ ಮಾಡುವ ಈ ಸೋಷ್ಯಲ್್ಸೈಟ್್ಗಳು ಇಂದು ಪ್ರತಿಯೊಬ್ಬನ ಜೀವನದಲ್ಲಿ ಅವಿಭಾಜ್ಯ ಅಂಗ ಎಂಬಂತೆ ಹಾಸುಹೊಕ್ಕಾಗಿವೆ. ಬೆಳಗ್ಗೆದ್ದು
ಫೇಸ್ ತೊಳೆಯದಿದ್ದರೂ ಫೇಸ್್ಬುಕ್ ಓಪನ್ ಮಾಡಿ ಯಾರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ನೋಡುವ ತವಕ. ಲಾಗಿನ್ ಆದ ಕೂಡಲೇ ನಿಮ್ಮ ಮನಸ್ಸಲ್ಲಿ ಏನಿದೆ? ಎಂದು ಕೇಳುವ ಈ ಸೋಷ್ಯಲ್್ಸೈಟ್್ಗಳಿಂದಲೇ ಅದೆಷ್ಟೋ ಜನರ ಮಾನಸಿಕ ಸ್ಥಿತಿ ಹಾಳಾಗಿದೆ ಎಂಬುದು ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿತ್ತು. ಯಾಕೆಂದರೆ ಫೇಸ್್ಬುಕ್್ನಲ್ಲಿ ತಾವು ಹೇಗೆ ಎಂಜಾಯ್್ಮಮಾಡಿದೆವು? ಎಷ್ಟೊಂದು ಉಲ್ಲಾಸಕರವಾಗಿ ಜೀವನ ಸಾಗಿಸುತ್ತಿದ್ದೇವೆ? ಮೊದಲಾದ ಪೋಸ್ಟ್್ಗಳನ್ನು, ಫೋಟೋಗಳನ್ನು ನೋಡಿದರೆ ಕೆಲವರಲ್ಲಿ ಕೀಳರಿಮೆ ಆವರಿಸಿಬಿಡುತ್ತದೆ ಎಂಬುದನ್ನು ಈ ಸಮೀಕ್ಷೆ ಬಹಿರಂಗ ಪಡಿಸಿದೆ. ಆದಾಗ್ಯೂ, ಫೇಸ್್ಬುಕ್್ನಲ್ಲಿ ಸಿಕ್ಕಾಪಟ್ಟೆ ಗೆಳೆಯರಿದ್ದಾರೆ ಎಂದು ಬೀಗುವ ಅದೆಷ್ಟೋ ಮಂದಿಗಳಿದ್ದಾರೆ. ಆದರೆ ಒಮ್ಮೆ ಯೋಚಿಸಿ, ನೀವು ಸಂಕಷ್ಟಕ್ಕೀಡಾದಾಗ ನಿಮ್ಮ ಅಳಲನ್ನು ಫೇಸ್್ಬುಕ್್ನಲ್ಲಿ ತೋಡಿಕೊಂಡರೆ ಲೈಕ್ ಮಾಡುವ, ಕಾಮೆಂಟ್ ಮಾಡುವ ಗೆಳೆಯರಿಗಿಂತ ನಿಮ್ಮ ಫೇಸ್ ನೋಡಿದ ಕೂಡಲೇ 'ಚಿಂತೆ ಬಿಡು...ನಾನಿದ್ದೀನಿ ನಿನ್ನ ಜತೆ' ಎಂದು ಹೇಳುವ ಗೆಳೆಯನನ್ನು ನೀವು ಹೊಂದಿದ್ದರೆ ನೀವೇ ಪುಣ್ಯವಂತರು.

ಹಾಗೆಯೇ ಪ್ರೀತಿಯ ವಿಷ್ಯದಲ್ಲೂ ಸೋಷ್ಯಲ್ ನೆಟ್್ವರ್ಕಿಂಗ್ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ಚಾಟ್, ಇಮೇಲ್, ಮೆಸೇಜ್ ಮೂಲಕ ಹುಟ್ಟುವ ಇ-ಪ್ರೀತಿಗೆ ಸೋಷ್ಯಲ್ ನೆಟ್್ವರ್ಕಿಂಗ್ ತಾಣವೂ ವೇದಿಕೆ ಕಲ್ಪಿಸಿದೆ. ಪ್ರೀತಿ ಮೂಡಿದ್ದರೆ, ಮುರಿದು ಬಿದ್ದಿದ್ದರೆ ಎಲ್ಲಾ ವಿಷಯವನ್ನು ಈ ತಾಣಗಳಲ್ಲಿ ಬಹಿರಂಗ ಪಡಿಸಬಹುದು. ಇಂತಹ ಬಹಿರಂಗ ಹೇಳಿಕೆಗಳು ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತವೆ ಎಂಬುದಕ್ಕೆ ಮಾಲಿನಿ ಮುರ್ಮು ಪ್ರಕರಣವೇ ಸಾಕ್ಷಿ. ತನ್ನ ಬಾಯ್್ಫ್ರೆಂಡ್ ಕೈಕೊಟ್ಟ ಕಾರಣ ಖಿನ್ನಳಾಗಿದ್ದ ಮಾಲಿನಿಗೆ ಆಕೆಯ ಬಾಯ್್ಫ್ರೆಂಡ್ ಫೇಸ್್ಬುಕ್್ನಲ್ಲಿ ಲವ್್ಬ್ರೇಕಪ್ ಬಗ್ಗೆ ಬರೆದದ್ದೇ ಆತ್ಮಹತ್ಯೆಗೆ ಪ್ರೇರಣೆಯಾಯಿತು. ಆತ ಮಾಡಿದ ಅಚಾತುರ್ಯ ಮುಗ್ದ ಬಾಲಕಿಯ ಜೀವನವನ್ನೇ ಕಬಳಿಸಿತು. ಆಕೆಯ ಸಾವಿನ ಸುದ್ದಿ ಬಿತ್ತರವಾಗುತ್ತಿದ್ದಂತೆ ಮಾಲಿನಿಯ ಬಾಯ್್ಫ್ರೆಂಡ್ ಫೇಸ್್ಬುಕ್ ಅಕೌಂಟ್ ಡಿಲೀಟ್ ಮಾಡಿಬಿಟ್ಟ. ಆದರೆ 22 ವರ್ಷದವರೆಗೆ ಆಕೆಯನ್ನು ಸಾಕಿ ಬೆಳೆಸಿದ ಪೋಷಕರಿಗೆ ಸಿಕ್ಕಿದ್ದಾದರೂ ಏನು? ಆತನೇನೋ ಅಕೌಂಟ್ ಡಿಲೀಟ್ ಮಾಡಿ ಹೊಸ ಅಕೌಂಟ್ ಓಪನ್ ಮಾಡಬಹುದು ಆದರೆ ಹೋದ ಜೀವ ವಾಪಾಸ್ ತರೋಕೆ ಆಗುತ್ತಾ?

ಇಂತಹ ಒಂದಲ್ಲ ಒಂದು ಅನಾಹುತಗಳು ಪ್ರೀತಿಯ ವಿಷಯದಲ್ಲಿ ಆಗೇ ಆಗುತ್ತದೆ. ಈ ಅನಾಹುತಗಳಲ್ಲಿ ಭ್ರೂಣ ಹತ್ಯೆಯ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದು ದುರದೃಷ್ಟಕರ. ಇದೆಲ್ಲದಕ್ಕೂ ಪ್ರೀತಿಯೇ ಕಾರಣ ಎಂದು ದೂರುವವರೇ ಹೆಚ್ಚು. ಹಳೇ ಕಾಲದಲ್ಲಿ ಪ್ರೀತಿ ಚೆನ್ನಾಗಿತ್ತು. ಈಗ ಚೆನ್ನಾಗಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಒಂದು ಮಾತು... ಪ್ರೀತಿ ಎಂಬುದು ನೀರಿನಂತೆ ಅದು ಯಾವ ಪಾತ್ರೆಯೊಳಗೆ ಸೇರಿಕೊಳ್ಳುತ್ತದೋ ಅದು ಅದೇ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಪ್ರೀತಿ ಯಾವತ್ತೂ ಹಾಳಾಗಿಲ್ಲ..ಮುಂದೆ ಹಾಳಾಗುವುದೂ ಇಲ್ಲ. ಆದರೆ ಪ್ರೀತಿಸುವ ರೀತಿ ಮಾತ್ರ ಬದಲಾಗಿದೆ. ಬದಲಾವಣೆಯೇ ಜಗದ ನಿಯಮ ಎಂಬ ಹಾಗೆ ಪ್ರೀತಿಯ ರೀತಿಯಲ್ಲಿ ಬದಲಾವಣೆಯಾಗುತ್ತಾ ಬಂದಿದೆ ಹೊರತು 'ಪ್ರೀತಿ' ಎಂಬ ಆ ಮಧುರ ಭಾವನೆ ಇದೆಯಲ್ವಾ ಅದು ಇಂದಿಗೂ ಕಣ್ಣ ಹನಿಯಂತೆ ನಿಷ್ಕಲ್ಮಷವಾಗಿಯೇ ಇದೆ.

Sunday, January 29, 2012

ಅತ್ತು ಬಿಡು ನೀನೊಮ್ಮೆ...

ತ್ತು ಬಿಡು ನೀನೊಮ್ಮೆ
ಕಣ್ಣೀರು ಹರಿದು ಬಿಡಲಿ
ಮುಗ್ದ ಕೆನ್ನೆಯನು ಸೋಕಿ
ಮೌನಿ ನಾನು ನಿನ್ನೊಲುಮೆಗೆ...

ಅತ್ತು ಬಿಡು ನೀನೊಮ್ಮೆ
ಚೂರಾದ ಹೃದಯವು
ಮತ್ತೊಮ್ಮೆ ಮಿಡಿಯಲಿ
ಮೌನಿ ನಾನು ನಿನ್ನ ಎದೆಬಡಿತಕೆ..

ಅತ್ತು ಬಿಡು ನೀನೊಮ್ಮೆ
ನಿನ್ನ ಕರಗಳ ಬೆಚ್ಚನೆಯ
ಸ್ಪರ್ಶದಲಿ ಬೆರೆವಾಗ
ಮೌನಿ ನಾನು ಬಿಸಿ ಅಪ್ಪುಗೆಯಲಿ


ಅತ್ತು ಬಿಡು ನೀನೊಮ್ಮೆ
ಮತ್ತದೇ ಪಿಸುಮಾತು
ಕಿವಿಯಲ್ಲಿ ಗುನುಗಲಿ
ಮೌನಿ ನಾನು ನಿನ್ನ ದನಿಗೆ...


ಅತ್ತು ಬಿಡು ನೀನೊಮ್ಮೆ
ಸದ್ದು ಮಾಡದೆ ನನ್ನ ಕಣ್ಗಳಲಿ
ಓ ನನ್ನ ಇನಿಯಾ...
ಮೌನಿ ನಾನು...ಅತ್ತು ಬಿಡಲೇ?