ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ...

ಹೌದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ...ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು.
ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ...ಮೀನು...ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ...ಒಂದಷ್ಟು ರೊಮ್ಯಾಂಟಿಕ್ ದೃಶ್ಯಗಳು...ನಾವು ಮಾತನಾಡುವ ಮಲಯಾಳಂಗೂ ಮೀನುಗಾರರು ಮಾತನಾಡುವ ಮಲಯಾಳಂಗೂವ್ಯತ್ಯಾಸವಿರುವುದರಿಂದ ಚಿತ್ರದಲ್ಲಿನ ಎಲ್ಲ ಸಂಭಾಷಣೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಚಿತ್ರ ನೋಡುತ್ತಿರುವಾಗ ಅವಳು ಆಗಿನ ಕಾಲದ 'ಸೆಕ್ಸೀ ನಟಿ'ಎಂದು ಅಪ್ಪ ಹೇಳುತ್ತಿದ್ದರೆ, ಮಕ್ಕಳ ಮುಂದೆ ಹಾಗೆಲ್ಲಾ ಹೇಳ್ಬೇಡ್ರಿ ಎಂದು ಅಮ್ಮ ಗುರ್ ಅಂತಿದ್ರು :)

ಪ್ರೈಮರಿ ಕ್ಲಾಸಿನಲ್ಲಿರುವಾಗ ನೋಡಿದ ಚಿತ್ರ ಹೈಸ್ಕೂಲ್ ಮೆಟ್ಟಿಲು ಹತ್ತಿದಾಗಇನ್ನಷ್ಟು ಅರ್ಥವಾಗತೊಡಗಿತ್ತು. ಆವಾಗ ಆ ಕಾಲದಲ್ಲಿ ಎಷ್ಟೊಂದು ಅದ್ಭುತ ಸಿನಿಮಾವನ್ನು ನಿರ್ಮಿಸಿದ್ದಾರೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಹೈಸ್ಕೂಲ್ ಮೆಟ್ಟಿಲೇರಿದಾಗ ನಮ್ಮ ಶಾಲೆಯಲ್ಲಿ ಮೀನುಗಾರರ ಮಕ್ಕಳು ನನ್ನ ಸಹಪಾಠಿಗಳಾಗಿದ್ದರು. ಹೀಗೆ ಮೀನುಗಾರರ ಜೀವನ ಶೈಲಿ, ನಂಬಿಕೆಯ ಬಗ್ಗೆ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು.

ಹಾಗೆ ನೋಡಿದರೆ ಚೆಮ್ಮೀನ್್ನಲ್ಲಿ ಮೀನುಗಾರರ ಜೀವನ ಶೈಲಿಯ ಪೂರ್ಣ ಪಾಠ ಇದೆ. ಈ ಮೀನುಗಾರರು ಕಡಲನ್ನು ಅಮ್ಮ ಎಂದು ಪೂಜಿಸುತ್ತಾರೆ. ಇನ್ನು ಮಹಿಳೆಯರು ಗಂಡ ಮೀನುಗಾರಿಕೆಗೆ ಹೋಗಿ ಮನೆಗೆ ವಾಪಸ್ ಬರುವ ವರೆಗೂ ಒಲೆ ಉರಿಸುವುದಿಲ್ಲ. ಅದರಲ್ಲೂ ವಿವಾಹಿತ ಮಹಿಳೆ ಇನ್ನೊಬ್ಬ ವ್ಯಕ್ತಿಯ ಜತೆಗೆ ಅನೈತಿಕ ಸಂಬಂಧ ಬೆಳೆಸಿಕೊಂಡರೆ ಗಂಡ ಸಾಯುತ್ತಾನೆ ಎಂಬ ನಂಬಿಕೆ. ಈ ಎಲ್ಲ ನಂಬಿಕೆಗಳ ಚಿತ್ರಣ ಚೆಮ್ಮೀನ್್ನಲ್ಲಿ ಕಾಣಸಿಗುತ್ತದೆ. ಅದರಲ್ಲೂ ಅನ್ಯ ಧರ್ಮದ ವ್ಯಕ್ತಿಯೊಂದಿಗೆ ಮೀನುಗಾರರ ಮಹಿಳೆ ಸಂಬಂಧ ಬೆಳೆಸಿದಳೆಂದರೆ ಕಡಲಮ್ಮ ಇಡೀ ಜನಾಂಗದವರೊಂದಿಗೇ ಕೋಪಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಮೀನುಗಾರರದ್ದಾಗಿರುತ್ತದೆ.

ಚೆಮ್ಮೀನ್್ನಲ್ಲಿ ಕರುತ್ತಮ್ಮ ಮುಸ್ಲಿಂ ಯುವಕ ಪರೀಕುಟ್ಟಿ ಜತೆ ಪ್ರೇಮ ಬೆಳೆಸಿರುತ್ತಾಳೆ. ಅವರ ಪ್ರೇಮ ಕಥೆ ಹೇಗೆ ಸಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.ಕರುತ್ತಮ್ಮನಿಗೆ ಓರ್ವ ತಂಗಿ. ಅಪ್ಪ ಚೆಂಬಕುಞಿ ಮದ್ಯದ ದಾಸ, ಅಮ್ಮ ಚಕ್ಕಿ ಮೀನು ಮಾರಾಟ ಮಾಡಿಕೊಂಡು ತನ್ನ ಗಂಡನ ಕುಡಿತಕ್ಕೆ ಬೈಯ್ಯುತ್ತಿರುತ್ತಾಳೆ. ಪರೀಕುಟ್ಟಿ ಅಲ್ಲಿನ ಶ್ರೀಮಂತ ವ್ಯಾಪಾರಿಯಾಗಿದ್ದರೂ ಅವನಿಗೆ ಕರುತ್ತಮ್ಮ ಎಂದರೆ ಜೀವ. ಇವಳೂ ಹಾಗೆಯೇ...ಕೊಚ್ಚು ಮೊದಲಾಳಿ...(ಸಣ್ಣ ಧಣಿ) ಎಂದು ಗೌರವದಿಂದ ಕರೆಯುತ್ತಾ ಅವನನ್ನು ಪ್ರೀತಿಸುತ್ತಿರುತ್ತಾಳೆ. ಅವಳಿಗಾಗಿ ಪರೀಕುಟ್ಟಿ "ಮಾನಸ ಮೈನೇ ವರೂ" ಎಂದು ಕಡಲ ಕಿನಾರೆಯಲ್ಲಿ ಹಾಡುತ್ತಿರುವ ಹಾಡು ಅದ್ಭುತ. ಮನ್ನಾ ಡೇ ಹಾಡಿದ ಈ ರ್ಯೊಮಾಂಟಿಕ್ ಹಾಡು ಸಿನಿಮದುದ್ದಕ್ಕೂ ಕಾಡುತ್ತಿರುತ್ತದೆ.

ಹೀಗೆ ಪರೀಕುಟ್ಟಿ ಮತ್ತು ಕರುತ್ತಮ್ಮಳ ಪ್ರೇಮ ಪ್ರಸಂಗ ಅಪ್ಪನಿಗೆ ತಿಳಿದು ದೊಡ್ಡ ರದ್ದಾಂತವೇ ಆಗಿಬಿಡುತ್ತದೆ. ಕೊನೆಗೆ ಅಪ್ಪನ ಒತ್ತಾಯಕ್ಕೆ ಮಣಿದು ಕರುತ್ತಮ್ಮ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅಪ್ಪ ನೋಡಿದ ಹುಡುಗ, ಪಳನಿಯನ್ನು ಮದುವೆಯಾಗಿ ಬಿಡುತ್ತಾಳೆ. ಮದುವೆಯಾಗಿ ಗಂಡನ ಊರಿನಲ್ಲಿ ಸುಖವಾಗಿರುವ ಕರುತ್ತಮ್ಮ, ತನ್ನ ಗಂಡನಿಗೆ ತಕ್ಕ ಹೆಂಡತಿಯಾಗಿ ಬಾಳಲು ಯತ್ನಿಸುತ್ತಾಳೆ. ಈ ದಾಂಪತ್ಯದಲ್ಲಿ ಆಕೆಗೆ ಒಂದು ಮಗುವೂ ಹುಟ್ಟುತ್ತದೆ. ಇತ್ತ ಆಕೆಯ ಅಮ್ಮ ತೀರಿ ಹೋದಾಗ ಅಪ್ಪ ಇನ್ನೊಂದು ಮದುವೆಯಾಗುತ್ತಾನೆ. ಕರುತ್ತಮ್ಮನ ತಂಗಿ ಲತಾ ತನ್ನ ಮಲತಾಯಿಯ ದೌರ್ಜನ್ಯ ತಡೆಯಲಾರದೆ ಮನೆ ಬಿಟ್ಟು, ತನ್ನ ಅಕ್ಕನ ಮನೆಗೆ ಬಂದಿರುತ್ತಾಳೆ. ಊರಲ್ಲಿ ಚೆಂಬಕುಞಿ ತನ್ನ ಎರಡನೇ ಪತ್ನಿಗಾಗಿ ಎಲ್ಲಹಣವನ್ನು ಖರ್ಚು ಮಾಡುತ್ತಾ ಜೀವನ ಸಾಗಿಸುತ್ತಾನೆ.

ಅಂದೊಮ್ಮೆ ಈತನಿಗೆ ಮೀನಿನ ಬಲೆ ಖರೀದಿಸಲು ಈ ಪರೀಕುಟ್ಟಿಯೇ ಸಹಾಯ ಮಾಡಿದ್ದರೂ, ಮೀನು ಮಾರಾಟ ಮಾಡಿ ಹೆಚ್ಚಿನ ಲಾಭ ಬಂದಾಗ ಪರೀಕುಟ್ಟಿಗೆ ಸಾಲ ಹಿಂತಿರುಗಿಸಲು ನಿರಾಕರಿಸುತ್ತಾನೆ. ಸಾಲ ಕೊಟ್ಟ ಹಣ ಮರಳಿ ಸಿಗದೇ ಇರುವಾಗ ಪರೀಕುಟ್ಟಿಯ ವ್ಯಾಪಾರವೂ ಕುಸಿಯುತ್ತದೆ. ಆದರೆ ಚೆಂಬಕುಞಿನ ಅತಿ ಆಸೆ ಆಡಂಬರ ಜೀವನದಿಂದಾಗಿ ನಷ್ಟದಲ್ಲಿಮುಳುಗಿದ ಈತ ಹುಚ್ಚನಾಗಿ ಬಿಡುತ್ತಾನೆ.

ದುರಂತ ಎಂಬತೆ ಕರುತ್ತಮ್ಮನ ಗಂಡನ ಮನೆಯಲ್ಲಿಯೂ ಆಕೆಯ ಹಳೆಯ ಪ್ರೇಮ ಕಥೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಕೊನೆಗೆ ಆಕೆಗೆ ಹುಟ್ಟಿದ ಮಗುವೂ ಆ ಮುಸ್ಲಿಂ ಯುವಕನದ್ದು ಎಂದು ಅಲ್ಲಿನ ಜನರು ಕುಹಕವಾಡುತ್ತಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿದ್ದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂಬ ಕಾರಣಕ್ಕಾಗಿ ಪಳನಿಯನ್ನೂ ಸಮುದಾಯದಲ್ಲಿ ದೂರವಿರಿಸಲಾಗುತ್ತದೆ. ಕರುತ್ತಮ್ಮನಿಗೆ ಅವಮಾನ...ಒಂದರ ಹಿಂದೆ ಒಂದು ಆಘಾತ...

ತನ್ನ ಜೀವನವನ್ನು ನೆನೆದು ಕಣ್ಣೀರಿಡುತ್ತಾ ಮಲಗಿರುವಾಗ ಪರೀಕುಟ್ಟಿಯ ಹಾಡು ಅದೇ...."ಮಾನಸ ಮೈನೇ ವರೂ" ಕೇಳಿ ಬರುತ್ತದೆ. ಕರುತ್ತಮ್ಮನಿಗೆ ತನ್ನ ಪ್ರಿಯಕರನನ್ನು ಸೇರಬೇಕೆಂಬ ಹಂಬಲ....ಬೇರೇನನ್ನೂ ಯೋಚಿಸದೆ ಆಕೆ ರಾತ್ರೋ ರಾತ್ರಿ ಎದ್ದು ಕಡಲ ಕಿನಾರೆಗೆ ಬರುತ್ತಾಳೆ...

ಅಲ್ಲಿದ್ದಾನೆ ತನ್ನ ಪ್ರಿಯಕರ...ತನಗಾಗಿ ಕಾದು ನಿಂತಿದ್ದಾನೆ...ಕರುತ್ತಮ್ಮ ಆತನನ್ನು ಸೇರುತ್ತಾಳೆ....

ವಿಧಿಯ ಬರಹವೋ...ನಂಬಿಕೆಯೋ...ಇತ್ತ ಆಕೆಯ ಗಂಡ ಪಳನಿ ದೊಡ್ಡ ಮೀನೊಂದನ್ನು ಹಿಡಿಯಲುಹೋಗಿ, ಸಮುದ್ರದ ಸುಳಿಗೆ ಸಿಕ್ಕಿ ನೀರು ಪಾಲಾಗುತ್ತಾನೆ.

ಕೊನೆಗೆ, ಕಡಲ ಕಿನಾರೆಯಲ್ಲಿ ಕುರುತ್ತಮ್ಮ ಮತ್ತು ಪರೀಕುಟ್ಟಿ ಕೈ ಕೈ ಹಿಡಿದು ಕೊಂಡೇ ಸತ್ತು ಬಿದ್ದಿರುವ ದೃಶ್ಯದ ಮೂಲಕ ಚಿತ್ರ ಮುಕ್ತಾಯಗೊಳ್ಳುತ್ತದೆ.

ಆದಾಗ್ಯೂ, ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಹೇಳಿದ ನಾರಾಯಣ ಗುರು, ಸೋಷ್ಯಲಿಸಂ ಎಂದು ಕಮ್ಯುನಿಸ್ಟರು ಹೋರಾಡಿ ರಕ್ತ ಸುರಿಸಿದ ಕೇರಳದ ಮಣ್ಣಿನಲ್ಲಿ ಹುಟ್ಟಿದ ಕರುತ್ತಮ್ಮನಿಗೆ ಯಾಕೆ ಹೀಗಾಯ್ತು? ಪರೀಕುಟ್ಟಿಯ ಪ್ರೇಮ ಕರುತ್ತಮ್ಮನನ್ನು ಕಾಡಿದಂತೆ.... ಈ ಪ್ರಶ್ನೆಯೂ ನನ್ನನ್ನು ಕಾಡಿದ್ದುಂಟು.

Comments

Nice article Rashmi..Even I had watched chemmin when I was @ highschool !
@ವನಿತಾ
ನಿಮ್ಮ ಪ್ರತಿಕ್ರಿಯೆಗೆ ನನ್ನಿ

Popular posts from this blog

ಕಾಡುವ ನೆನಪುಗಳಿಗೂ ಇದೆ ಘಮ

ಬಸ್ ಪಯಣದ ಸುಖ

ನಾನೆಂಬ ಸ್ತ್ರೀ