Posts

Showing posts from July, 2013

ಬದುಕಿನ ಕಹಿ ಸತ್ಯಗಳು

ಮನಸ್ಸಲ್ಲಿ ಎಂದೋ ಅದುಮಿಟ್ಟ ಭಾವನೆಗಳು ಸ್ವಯಂ ವಿಧಿಯ ಬರಹದಲ್ಲಿನ ಅಕ್ಷರಗಳಾಗಿ ಹುಣ್ಣಿಮೆಗೊಮ್ಮೆ ಚಿಮ್ಮುವ ಕಡಲಿನ ಅಲೆಗಳಿಗೆ ಸಿಕ್ಕಿ, ಮಾಸಿ ಹೋದಾಗ ಸ್ವರ್ಗಸ್ಥ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ ಕೂಳಿಗಾಗಿ ಕಾದಾಡುವ ಕಾಗೆಗಳ ಸ್ವಾರ್ಥತೆ ಅಣಕಿಸುತ್ತಿತ್ತು... ಮುಂದೆ ಬಯಲ ದಾರಿಯಲಿ ಸಾಗಿದರೆ ಕಿತ್ತೋಗಿರುವ ಚಪ್ಪಲಿ ದುಸ್ಥಿತಿಯಲ್ಲಿರುವ ಬದುಕನ್ನು ಪರಿಹಾಸ್ಯ ಮಾಡುತ್ತಾ ದಾರಿ ಮಧ್ಯೆಯಿರುವ ಗಾಂಧಿ ಪ್ರತಿಮೆಯನ್ನು ಆಲಂಗಿಸಿ ಬಿಕ್ಕಳಿಸಿದೆ ಜೀವನದ ಪುಸ್ತಕದ ಒಣಗಿದ ಹಾಳೆಗಳಲ್ಲಿ ಅಂಧಕಾರ ವ್ಯಾಪಿಸಿದಾಗ ಅಳುವುದನ್ನು ಮಾತ್ರ ಕಲಿಸಿದ ಜೀವ 'ಮರುಭೂಮಿಯ ಹೂ' ವನ್ನು ನೋಡಿ ಸಂತಾಪ ಸೂಚಿಸಿ ಇನ್ನರಳಲಿರುವ ಮೊಗ್ಗುಗಳಿಗೆ ಶುಭಾಶಯ ಕೋರಿ ಮುಂದೆ ಸಾಗಿದೆ ತಿರುಗುವ ಕಾಲ ಚಕ್ರವು ದೂರವನ್ನು ಕ್ರಮಿಸುತ್ತಾ ನೆನಪುಗಳನ್ನು ಗಾಳಿಯಲ್ಲಿ ತೇಲಿಸಿ ಹಾರಿ ಹೋಗುವುದು ಗೆದ್ದಲು ಹಿಡಿದ ನೆನಪುಗಳು ಫಂಗಸ್ ಹಿಡಿದ ಕನಸುಗಳು ಗೋರಿಯೊಳಗೆ ನಿದ್ರಿಸುತ್ತಿರೆ ಗಿಳಿಗಳು, ಹೂಗಳೂ ನವ ವಸಂತಕ್ಕಾಗಿ ಕಾದು ಕುಳಿತಿವೆ. (ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ)