Sunday, November 29, 2009

ಲಾಸ್ಟ್ ಬೆಂಚ್ ಲೀಲೆ...

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು.

ನಾನೇನು ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ಆದ್ರೆ ಪ್ಲಸ್ ಟು ವರೆಗೆ ಫಸ್ಟ್ ಬೆಂಚ್್ನಲ್ಲಿ ಕುಳಿತು ಪಾಠ ಕೇಳುವುದು ಬೋರು ಬೋರು ಎನಿಸಿತ್ತು. ಕಾಲೇಜಿಗೆ ಕಾಲಿಟ್ಟ ಮೇಲೆ ಏನೋ ಸಮಾಧಾನ. ಇನ್ಮುಂದೆ ಯಾರು ನೀನು ಈ ಬೆಂಚ್್ನಲ್ಲೇ ಕುಳಿತುಕೊಳ್ಳಬೇಕೆಂದು ಹೇಳಲ್ಲ. ನಮ್ಮದು ಇಂಜಿನಿಯರಿಂಗ್ ಕಾಲೇಜು, 40 ಮಂದಿಯಿರುವ ಒಂದು ಕ್ಲಾಸು ರೂಮಿನಲ್ಲಿ ಹಿಂದಿನ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಅದರ ಮಜವೇ ಬೇರೆ. ಆವಾಗಲೇ ಗೊತ್ತಾದದ್ದು ಲಾಸ್ಟ್ ಬೆಂಚ್ ಫ್ರೀಡಂ ಅಂದ್ರೆ ಏನೂಂತ. ಈ ವರೆಗೆ ಅಚ್ಚರಿಯ ಕೂಪವಾಗಿದ್ದ ಲಾಸ್ಟ್ ಬೆಂಚ್್ನಲ್ಲಿ ನಾನು ನನ್ನ ಗೆಳತಿಯರಾದ ಶಿಮ್, ಶಾಮ್ (ಶಿಮ್ನಾ ಮತ್ತು ಶಮೀಮಾ ಹೆಸರನ್ನು ಶಾರ್ಟ್ ಮಾಡಿ) ಜೊತೆಯಾಗಿ ಕುಳಿತು ಮಾಡಿದ ತರ್ಲೆಗಳಿಗೆ ಲೆಕ್ಕವೇ ಇರಲ್ಲ. ನಮ್ಮ ಕ್ಲಾಸಿನಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳಬಹುದಾಗಿತ್ತು ಮಾತ್ರವಲ್ಲದೆ ಒಂದೊಂದು ದಿನ, ಅಲ್ಲದಿದ್ದರೆ ಒಂದೊಂದು ಪಿರಿಯಡ್್ನಲ್ಲಿ ತಮ್ಮ ಜಾಗ ಬದಲಿಸಿ ಎಲ್ಲಿ ಬೇಕಾದರೂ ಕುಳಿತುಕೊಳ್ಳುವ ಸ್ವಾತಂತ್ರ್ಯವಿರುತ್ತಿತ್ತು. ಆದರೆ ನಾವು ಮೂವರು ಎಂದೂ ಆ ಲಾಸ್ಟ್ ಬೆಂಚ್ ಬಿಟ್ಟು ಬೇರೆ ಎಲ್ಲಿಗೂ ಹೋಗಲ್ಲ. ಲಾಸ್ಟ್ ಬೆಂಚ್ ಅಂದರೆ ಶಿಮ್, ಶಾಮ್, ರ್ಯಾಶ್ (ನನ್ನ ಹೆಸರು)ರ ಅಪ್ಪನ ಸೊತ್ತು ಅದಕ್ಕೆ ಅವರು ಅದನ್ನು ಬಿಟ್ಟು ಕದಲಲ್ಲ ಎಂದು ಇತರ ವಿದ್ಯಾರ್ಥಿಗಳು ನಮ್ಮನ್ನು ತಮಾಷೆ ಮಾಡುತ್ತಿದ್ದರು.

ಲಾಸ್ಟ್ ಬೆಂಚ್್ಗೆ ಒಂದು ಅಸಾಧಾರಣ ಶಕ್ತಿಯಿದೆ ಎಂದು ಅರಿವಾದದ್ದು ಅಲ್ಲಿ ಕುಳಿತಾಗಲೇ. ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಮುಖ ಗಂಟಿಕ್ಕಿ ಕುಳಿತುಕೊಳ್ಳಬೇಕಾಗಿಲ್ಲ. ಏನಾದರೂ ಸೈಡ್ ಬ್ಯುಸಿನೆಸ್ (ಏನೂಂತಾ ಮಾತ್ರ ಕೇಳ್ಬೇಡಿ) ಮಾಡಬೇಕಾದರೆ ಭಯ ಪಡಬೇಕಾಗಿಲ್ಲ. ಪಾಠ ಬೋರು ಎಂದೆನಿಸಿದರೆ ನೋಟ್ ಬುಕ್್ನ ಕೊನೆಯ ಪೇಜಲ್ಲಿ ಏನಾದರೂ ಗೀಚ ಬಹುದು. ನೋಟ್ ಬುಕ್ ಸಿಕ್ಕದಿದ್ದರೆ ಡೆಸ್ಕೇ ನಮ್ಮ ಡ್ರಾಯಿಂಗ್ ಬೋರ್ಡು. ನಿದ್ದೆ ಬಂದರೂ ಆರಾಮವಾಗಿ ನಿದ್ದೆ ಮಾಡಬಹುದು. ಆದರೂ ಕೆಲವು ಟೀಚರ್್ಗಳು ಲಾಸ್ಟ್ ಬೆಂಚಿನ ಮೇಲೆ ಕಣ್ಣು ನೆಟ್ಟಿರುತ್ತಾರೆ. ನಮ್ಮೊಬ್ಬರು ಇಕಾನಾಮಿಕ್ಸ್ ಟೀಚರ್ ಇದ್ರು, ಅವರಂತೂ ನಮ್ಮ ಲಾಸ್ಟ್ ಬೆಂಚ್್ನಲ್ಲಿರುವ (ನಾವು)ತ್ರಿಮೂರ್ತಿಗಳನ್ನೇ ನೋಡಿಕೊಂಡು ಪಾಠ ಮಾಡುತ್ತಿದ್ದರು. ಅವರ ಕಣ್ಣು ತಪ್ಪಿಸಿ ನಮ್ಮಲ್ಲಿ ಯಾರಾದರೂ ಒಬ್ಬರು ಏನಾದರೂ ತರ್ಲೆ ಮಾಡಿದ್ರೆ ಸಾಕು, 'ಲಾಸ್ಟ್ ಬೆಂಚ್ ಗರ್ಲ್ಸ್ ಸ್ಟಾಂಡಪ್್' ಅಂತಾ ಹೇಳ್ತಿದ್ರು. ಆವಾಗ ನಾವು ತ್ರಿಮೂರ್ತಿಗಳು ಎದ್ದು ನಿಲ್ಲುತ್ತಿದ್ದೆವು. ಮತ್ತೆ ನಾವು ಎದ್ದು ನಿಂತುಕೊಂಡಿರುವುದನ್ನು ನೋಡಿ ಅವರಿಗೂ ಕಿರಿಕಿರಿ ಆದಾಗ 'ಯು ಕ್ಯಾನ್ ಸಿಟ್್' ಅಂತಾ ಹೇಳುತ್ತಿದ್ದರು. ಇನ್ನು ಕೆಲವು ಟೀಚರ್್ಗಳು ಮೆಲ್ಲ ಮಾತಾಡುವವರು. ಅದಕ್ಕಾಗಿ ಕಿವಿಯರಳಿಸಿ ಪಾಠ ಕೇಳ್ಬೇಕು ಎಂಬ ಒಂದು ವಿಷ್ಯ ಬಿಟ್ರೆ ಬೇರೇನೂ ತೊಂದರೆಯಿರಲ್ಲ. ಮಾತ್ರವಲ್ಲದೆ ಟೀಚರ್ ಬೋರ್ಡಿನತ್ತ ತಿರುಗಿದರೆ ಕಿಸಕ್ಕನೆ ನಗುವ, ಕಿಟಿಕಿಯ ಮೂಲಕ ಹೊರಗೆ ಏನೆಲ್ಲಾ ನಡೆಯುತ್ತಿದೆ ಎಂಬೆಲ್ಲಾ ವಿಷಯಗಳನ್ನು ನೋಡುವ ಭಾಗ್ಯ ದಕ್ಕಿರುವುದೇ ನಮಗೆ. ಇನ್ನೂ ಕೆಲವು ಟೀಚರ್್ಗಳು ತರ್ಲೆ ಮಾಡಿದರೆ ಹುಡುಗರ ಜೊತೆ ಅವರ ಬೆಂಚ್್ನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅಲ್ಲಿ ಕುಳಿತರೇನು? ಇಲ್ಲಿ ಕುಳಿತರೇನು? ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡದು ಎಂಬಂತೆ ಅಲ್ಲಿ ಡೀಸೆಂಟಾಗಿ ಕುಳಿತಿರುವ ಹುಡುಗರನ್ನೂ ತರ್ಲೆ ಮಾಡಿ ಅವರಿಗೂ ತರ್ಲೆ ಎಂಬ ಬಿರುದು ಬರುವಂತೆ ಮಾಡುತ್ತಿದ್ದೆವು. ಆಮೇಲೆ ಇನ್ನು ಈ ತ್ರಿಮೂರ್ತಿಗಳಿಂದಾಗಿ ಇಡೀ ಕ್ಲಾಸೇ ತರ್ಲೆ ಆಗುವುದು ಬೇಡ ಎಂದು ತದನಂತರ ಯಾವ ಟೀಚರ್ ಕೂಡಾ ಈ ಪ್ರಯೋಗಕ್ಕೆ ಮುಂದಾಗಿಲ್ಲ.


ಕ್ಲಾಸಿನ ಹಿಂದಿನ ಬೆಂಚಿನಲ್ಲಿ ಕುಳಿತಿದ್ದರೂ ನಾವು ಕಲಿಕೆಯಲ್ಲಿ ದಡ್ಡರೆನಿಸಿಕೊಂಡಿಲ್ಲ. ಈ ಕಾಲೇಜು ಲೈಫ್ ಮತ್ತೆಂದೂ ಸಿಗಲ್ಲ ಅದನ್ನು ಆದಷ್ಟು ಎಂಜಾಯ್ ಮಾಡಬೇಕು ಜೊತೆಗೆ ಕಲಿಕೆಯೂ ಮುಖ್ಯ ಆದ ಕಾರಣ ಎರಡನ್ನೂ ಸರಿತೂಗಿಸಿಕೊಂಡು ಹೋಗಬೇಕು ಎಂಬುದು ನಮ್ಮ ಯೋಜನೆಯಾಗಿತ್ತು. ನಾನಂತೂ ನನಗೆ ಬೋರು ಎಂದೆನಿಸಿದ ವಿಷಯಗಳನ್ನು ಪಾಠ ಮಾಡುತ್ತಿದ್ದರೆ ಕವಿತೆ ಕವನ ಏನಾದರೂ ಗೀಚುತ್ತಲೇ ಇರುತ್ತಿದ್ದೆ. ಇಲ್ಲವಾದರೆ ಕಣ್ಣು ತೆರೆದೇ ಯಾವುದೋ ಸ್ವಪ್ನ ಲೋಕದಲ್ಲಿ ವಿಹರಿಸುತ್ತಿದ್ದೆ. ಹಾಗೆ ಬರೆದ ಕವನಗಳೆಷ್ಟೋ ನಂತರ ಉತ್ತಮ ಪಡಿಸಿ ಕಾಲೇಜು ಭಿತ್ತಿಪತ್ರಿಕೆಯಲ್ಲಿ ಸ್ಥಾನ ಕಂಡುಕೊಂಡಿತ್ತು. ಆನಿಮೇಷನ್ ಕ್ಲಾಸಿನಲ್ಲಿ ಕನಸು ಕಾಣುತ್ತಾ ಬರೆದ ಆ ಕಥೆ ವರ್ಷ ಕಳೆದು ಪ್ರಕಟವಾದಾಗ ಜನರ ಮೆಚ್ಚುಗೆಯನ್ನು ಗಳಿಸಿತ್ತು. ಅದಿರಲಿ ಬಿಡಿ, ಇನ್ನು ಕ್ಲಾಸಿಗೆ ಟೀಚರ್ ಬರದೇ ಇರುವ ಸಂದರ್ಭ ಬಂದರೆ ಹೆಚ್ಚಿನ ವಿದ್ಯಾರ್ಥಿಗಳು ಆ ಸಬ್ಜೆಕ್ಟ್್ನ ಬಗ್ಗೆ ಚರ್ಚೆ ನಡೆಸುವುದೋ, ಓದುವುದೋ ಮಾಡುತ್ತಿದ್ದರು. ಆದರೆ ನಾವುಗಳು ಅಂತಾಕ್ಷರಿ ಆಡುತ್ತಾ ಇಲ್ಲವಾದರೆ ಸಿನಿಮಾ ಕಥೆಯೊಂದನ್ನು ಹೆಣೆಯುತ್ತಿದ್ದೆವು. ಅದು ಅಂತಿಂಥಾ ಡಬ್ಬಾ ಸಿನಿಮಾ ಕಥೆಯಲ್ಲ, ನಮ್ಮ ಚಿತ್ರದಲ್ಲಿ ಶಾರುಖ್, ಹೃತಿಕ್, ಮಮ್ಮುಟ್ಟಿ, ಮೋಹನ್್ಲಾಲ್ ಮೊದಲಾದವರೇ ಹೀರೋಗಳು, ನಾವೇ ಹೀರೋಯಿನ್್ಗಳು. ನಾವೇ ಪ್ರೊಡ್ಯೂಸರ್್ಗಳು, ಡೈರೆಕ್ಟರ್್ಗಳು ಎಲ್ಲಾ. ಇಂತಹಾ ಕ್ರಿಯೇಟಿವಿಟಿ ಐಡಿಯಾಗಳು ಹೊಳೆಯಬೇಕಾದರೆ ಲಾಸ್ಟ್ ಬೆಂಚೇ ಸೂಕ್ತವಾದ ಸ್ಥಳ. ನಾವು ತರ್ಲೆಗಳೆಂದು ನಮ್ಮನ್ನು ಯಾರೂ ದೂರುತ್ತಿರಲಿಲ್ಲ. ನಾವು ಮೂವರೂ ಕ್ಲಾಸು ಬಂಕ್ ಮಾಡಿದ ದಿನ ಕ್ಲಾಸು ಭಣ ಭಣ ಅಂತಾ ಅನಿಸುತ್ತೆ, ಎಲ್ಲವೂ ಬೋರು ಬೋರು ಎಂದು ಕ್ಲಾಸಿನ ಬುದ್ಧಿಜೀವಿಗಳು ಹೇಳಿದ್ದು ನಮಗೆ ಸಿಕ್ಕಿದ ಕಾಂಪ್ಲಿಮೆಂಟು.

ಅಂದ ಹಾಗೆ ನಾವು ಲಾಸ್ಟ್್ಬೆಂಚ್ ಮೆಂಬರ್ಸ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಈವಾಗ ಎಂಜಾಯ್ ಮಾಡಿ ಇಂಟರ್್ನಲ್ ಪರೀಕ್ಷೆ ಬಂದಾಗ ತಿಳಿಯುತ್ತೆ ಈ ಎಂಜಾಯ್್ಮೆಂಟಿನ ರಿಸಲ್ಟ್ ಎಂದು ಕೆಲವು ಟೀಚರ್್ಗಳು ಬೈಯ್ಯುತ್ತಿದ್ದರು. ಪರೀಕ್ಷೆ ಬಂದಾಗ ನಾವು ಹೇಗೋ ಕಷ್ಟ ಪಟ್ಟು ಕಲಿತು ನಮ್ಮ ಸ್ಥಾನ (ಮಾನ)ಉಳಿಸುತ್ತಿದ್ದೆವು. ಇದು ಮಾತ್ರವಲ್ಲದೆ ರಾಶಿ ರಾಶಿ ಅಸೈನ್್ಮೆಂಟ್್ಗಳು ಬೇರೆ. ಟೀಚರ್್ಗಳು ಏನೇ ಕೆಲಸ ಹೇಳಿದರೂ ಸರಿಯಾದ ಸಮಯಕ್ಕೆ ಅದನ್ನು ಮಾಡಿ ಮುಗಿಸುತ್ತಿದ್ದರಿಂದ ಸದ್ಯ ನಮ್ಮ ತರ್ಲೆಗಳ ಬಗ್ಗೆ ಮನೆಗೆ ದೂರು ಹೋಗುತ್ತಿರಲಿಲ್ಲ.. ನಾವು ಬಚಾವ್!. ಮೊದ ಮೊದಲು ನಾವು ಕ್ಲಾಸಿನಲ್ಲಿ ತರ್ಲೆ ಮಾಡಿದಾಗ ಸಿಕ್ಕಿ ಬಿದ್ದರೆ ಟೀಚರ್ ಮೊದಲು ಕೇಳುವ ಪ್ರಶ್ನೆ "ನೀನು ಮೆರಿಟ್ ಸೀಟಾ ಅಥವಾ ಪೇಮೆಂಟ್ ಸೀಟಾ? "ಮೆರಿಟ್ ಸೀಟ್ ಅಂದಾಗ 'ಓಕೆ ಸರಿ ಚೆನ್ನಾಗಿ ಕಲಿ' ಎಂದು ಹೇಳುತ್ತಾರೆ, ಪೇಮೆಂಟ್ ಅಂದ ಕೂಡಲೇ ನಿನಗೇನು ತಲೆ ಕೆಟ್ಟಿದಾ? ನಿನ್ನ ಅಪ್ಪ ಅಮ್ಮ ಅಷ್ಟೊಂದು ಹಣ ಖರ್ಚು ಮಾಡುವುದು ಸುಮ್ಮನೇನಾ? ಅಂತಾ ಬಾಯ್ತುಂಬ ಉಪದೇಶ ನೀಡುತ್ತಾರೆ. ಅಂತಿಮ ವರ್ಷ ತಲುಪಿದಾಗ ನಾವು ಏನು ಮಾಡಿದರೂ ಟೀಚರ್್ಗಳು ಯಾರೂ ಬೇಡ ಎನ್ನುತ್ತಿರಲಿಲ್ಲ. ಆದರೆ ಪ್ರೊಜೆಕ್ಟು, ಸೆಮಿನಾರು ಹೇಗೆ ಬ್ಯುಸಿಯಾಗಿರುವಾಗ ಹೆಚ್ಚಿನ ತುಂಟತನಗಳಿಗೆ ಸಮಯವೂ ಸಾಕಾಗುತ್ತಿರಲಿಲ್ಲ. ಅಂತೂ ಒಟ್ಟಿನಲ್ಲಿ ಆ ನಾಲ್ಕು ವರ್ಷಗಳು ಹೇಗೆ ಮುಗಿದವು ಅಂತಾ ಗೊತ್ತೇ ಆಗಲಿಲ್ಲ. ಕೊನೆಗೆ ಫೇರ್್ವೆಲ್ ಪಾರ್ಟಿ ಮುಗಿದು ಹಿಂತಿರುಗುವಾಗ ನಮ್ಮ ವಿಭಾಗದ ಮುಖ್ಯಸ್ಥರು ನಮ್ಮನ್ನು ಕರೆದು ಮಾತನಾಡಿಸಿ ನಿಮ್ಮ ಕ್ಲಾಸಿನ ಬಗ್ಗೆ ಚಿಂತಿಸುವಾಗ ಮೊದಲು ನನ್ನ ಮನಸ್ಸಲ್ಲಿ ಸುಳಿಯುವ ಚಿತ್ರ ನಿಮ್ಮದೇ 'Last bench Crakers...You Naughty Girls 'ಎಂದು ಹೇಳಿದಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತಾ?

Monday, October 12, 2009

ಹೆಸರಲ್ಲಿ ಏನು (ಎಲ್ಲಾ) ಇದೆ!

ಸುಮ್ಮನೆ ಕುಳಿತಿದ್ದರೆ ತಲೆಯಲ್ಲಿ ಹುಳು ಹೊಕ್ಕಂತೆ ಏನೆಲ್ಲಾ ಯೋಚನೆ ಬಂದುಬಿಡುತ್ತೆ. ಅದಕ್ಕೆ ಏನಾದರೊಂದು ಕೆಲಸ ಮಾಡುತ್ತಾ ಇರಬೇಕೆಂದು ನನ್ನಮ್ಮ ಹೇಳ್ತಾ ಇರುತ್ತಾರೆ. ಹುಂ ಅದರಂತೆಯೇ ನಾನು ಏನಾದರೂ (ಏನೆಲ್ಲಾ ಅಂತ ಮಾತ್ರ ಕೇಳ್ಬೇಡ್ಲಿ..ಪ್ಲೀಸ್) ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡು ಬ್ಯುಸಿಯಾಗಿರುತ್ತೇನೆ. ಅದಲ್ಲಾ ಪಕ್ಕಕ್ಕಿರಲಿ, ಸದ್ಯ ಏನಾದರೂ ಕೆಲಸ ಮಾಡಬೇಕಲ್ಲಾ ಎನ್ನುವಾಗಲೇ ನನ್ನ ಬಗ್ಗೆಯೇ ನಾನು ಶೋಧ ನಡೆಸಲು ತೊಡಗಿದ್ದೇನೆ. ಇದೇನು ಈ ತರ್ಲೆ ಹುಡುಗಿ ಆಧ್ಯಾತ್ಮದತ್ತ ತಿರುಗಿದಳೇನೋ ಎಂದು ಅಂದುಕೊಳ್ಬೇಡಿ. ನನ್ನ ಬಗ್ಗೆ ನಾನು ಶೋಧ ನಡೆಸುತ್ತಿರುವುದು ಗೂಗಲ್ ಎಂಬ ಸರ್ಚ್ ಇಂಜಿನ್್ನಲ್ಲಿ. ಯಾವಾಗ ಇಂಟರ್್ನೆಟ್ ನನಗೆ ಪರಿಚಿತವಾಯಿತೋ ಅಂದಿನಿಂದ ನನಗೂ ಗೂಗಲ್್ಗೂ ಬಿಟ್ಟಿರಲಾಗದ ನಂಟು. ಮೊದಲ ಬಾರಿ ಗೂಗಲ್ ಎಂಬ ಸರ್ಚ್ ಇಂಜಿನ್್ನ್ನು ಓಪನ್ ಮಾಡಿ ಅದರಲ್ಲಿ ಹುಡುಕಿದ್ದೇ ನನ್ನನ್ನು. ಅಂದ್ರೆ ನನ್ನ ಹೆಸರು. ರಶ್ಮಿ ಅಂತ ಟೈಪ್ ಮಾಡಿ ಎಷ್ಟು ಜನ ರಶ್ಮಿಯರು ಎಲ್ಲೆಲ್ಲಿ ಇದ್ದಾರೆ? ಯಾವ್ಯಾವ ಸರ್್ನೇಮ್್ಗಳಲ್ಲಿ ಇದ್ದಾರೆ ಎಂದೆಲ್ಲಾ ಕುತೂಹಲದಿಂದ ಗಮನಿಸಿದ್ದೆ. ಪ್ರತಿಯೊಬ್ಬರಿಗೂ ಅವರವರ ಹೆಸರಿನ ಬಗ್ಗೆ ಹೆಮ್ಮೆ ಇರುವಂತೆ ನನಗೂ ಇದೆ. ಎಲ್ಲಾ ಅಪ್ಪ ಅಮ್ಮಂದಿರಿಗೂ ಮಗು ಹುಟ್ಟಿದಾಗ ತಮ್ಮ ಮಕ್ಕಳಿಗೆ ವಿಶಿಷ್ಟ ಹೆಸರಿಡಬೇಕೆಂಬ ಹಂಬಲ ಇದ್ದೇ ಇರುತ್ತದಲ್ಲಾ ಅದೇ ಹಂಬಲ ನನ್ನ ಅಪ್ಪ ಅಮ್ಮನಿಗೂ ಇತ್ತು. ನನ್ನದು ಅಂತಾ ವಿಶಿಷ್ಟ ಹೆಸರೇನು ಅಲ್ಲ. ಆದ್ರೂ ನಾನು ಶಾಲೆಗೆ ಸೇರಿದಾಗ ಅಲ್ಲಿ ನನ್ನ ಹೆಸರಿನ ಬೇರೆ ಯಾರೂ ಆ ಶಾಲೆಯಲ್ಲಿರಲಿಲ್ಲ. ಹಾಗೇ ನನ್ನದು ವಿಶಿಷ್ಟ ಹೆಸರು, ಎರಡೇ ಅಕ್ಷರವಿರುವ ಅರ್ಥಗರ್ಭಿತವಾಗಿರುವ ಹೆಸರು ಎಂದು ಯಾರಾದರೂ ಹೊಗಳಿದರೆ ಸಾಕು..ಸಂತೋಷದಿಂದ ತೇಲಾಡುತ್ತಿದ್ದೆ.

ಮತ್ತೆ ನಾನು ಹೈಸ್ಕೂಲ್್ಗೆ ಸೇರಿದಾಗ (ಗರ್ಲ್ಸ್ ಹೈಸ್ಕೂಲ್) ಅಲ್ಲಿ ಹಲವಾರು ರಶ್ಮಿಯರಿದ್ದರು. ಅಷ್ಟೊಂದು ಹೆಸರುಗಳಿದ್ದರೂ ನನ್ನದು ಮಾತ್ರ ವಿಶಿಷ್ಟವಾದದ್ದು. ಅಂದ ಹಾಗೆ ನನ್ನ ಹೆಸರನ್ನು ಇಂಗ್ಲಿಷ್್ನಲ್ಲಿ ಬರೆಯುವಾಗ ಒಂದು ಸ್ಪೆಲಿಂಗ್ ವ್ಯತ್ಯಾಸದಿಂದಾಗಿ ನಾನು ಅಲ್ಲಿ ಭಿನ್ನ ಹೆಸರಿನವಳಾಗಿದ್ದೆ. ಕನ್ನಡ ಮತ್ತು ಮಲಯಾಳಂ ಮಾಧ್ಯಮವಿರುವ ಆ ಶಾಲೆಯಲ್ಲಿ ಕನ್ನಡ ಮಾಧ್ಯಮದವರ ಸಂಖ್ಯೆ ತೀರಾ ಕಡಿಮೆ. ಮಲಯಾಳಿಗಳಾದ ರಶ್ಮಿ ಎಂಬ ಹೆಸರಿನವರು ತಮ್ಮ ಹೆಸರನ್ನು ರೆಶ್ಮಿ ಎಂದು ಬರೆಯುವಾಗ ನನ್ನದು ರಶ್ಮಿ. ಆವಾಗ ನಾನು ಎಲ್ಲರ ಬಾಯಲ್ಲೂ ರೆಶ್ಮಿ ಎಂದೇ ಕರೆಯಲ್ಪಡುತ್ತಿದ್ದೆ. ಕೆಲವರಂತೂ ರಸ್ಮಿ, ರಷಿಮಿ ಎಂದು ತಮಗೆ ಇಷ್ಟಬಂದಂತೆ ಕರೆಯುವರು. ಕೆಲವೊಮ್ಮೆ ನಾನು ನನ್ನ ಹೆಸರು ರಶ್ಮಿ ಅಂತ ಹೇಳಿ ಅದರ ಸ್ಪೆಲಿಂಗ್ ಕೂಡಾ ಹೇಳ್ತಾ ಇದ್ದೆ. ಆ ಮೇಲೆ ಹೆಸರಲ್ಲೇನಿದೆ ಅಂತಾ ಸುಮ್ಮನಾಗಿಬಿಟ್ಟೆ. ಮತ್ತೆ ಸಮಸ್ಯೆ ಉದ್ಬವಿಸಿದ್ದು, ನನಗೆ ಸಿಗುವ ಬಹುಮಾನ ಪತ್ರಗಳಲ್ಲಿ. ಅಲ್ಲಿಯೂ ನಾನು ಮಲಯಾಳಿಗರಿಂದ ರೆಶ್ಮಿಯಾಗಿ ಬಿಡುತ್ತಿದ್ದೆ. ಇದನ್ನೆಲ್ಲಾ ಕಂಡಾಗ ನನ್ನ ಅಮ್ಮನಿಗಂತೂ ಭಾರೀ ಸಿಟ್ಟು ಬರುತ್ತಿತ್ತು. ರಶ್ಮಿ ಅಂತಾ ಒಳ್ಳೆಯ ಹೆಸರನ್ನು ರೆಶ್ಮಿ ಮಾಡಿಬಿಟ್ಟರಲ್ಲಾ ಅಂತಾ ಅಮ್ಮ ಚಿಂತೆ ಮಾಡುತ್ತಿದ್ದು ಇನ್ನು ಮುಂದೆ ಹೆಸರು ಹೇಳುವಾಗ "ಸರ್ ನನ್ನ ಹೆಸರು Reshmi ಅಲ್ಲ Rashmi ಅಂತಾ ಬರೆಯಬೇಕು ಎಂದು ಹೇಳ್ಬೇಕು ಎಂದು ಆದೇಶ ನೀಡುತ್ತಿದ್ದರು.


ಅಲ್ಲಿಗೇ ಮುಗಿಲಿಲ್ಲ ನನ್ನ ಹೆಸರಿನ ಸಮಸ್ಯೆ. ಮನೆಯಲ್ಲಿ ಅಪ್ಪ ಅಮ್ಮ ಮುದ್ದಿನಿಂದ ಕರೆಯುವ ಹೆಸರು ಹೇಗೋ ಇದೆ. ಶಾಲೆಯಲ್ಲಿ ಹೆಸರಿನ ಮೊದಲಕ್ಷರವಾದ ರ, ರೆ ಆಯಿತು. ಆಮೇಲೆ ಗೆಳತಿಯರ ಬಾಯಲ್ಲಿ ನಾನು ರಶು ಆದೇ. ಇರುವ ಎರಡೇ ಅಕ್ಷರದ ಹೆಸರಿಗೂ ಕತ್ತರಿ ಹಾಕಲಾಯಿತು. ಮಲಯಾಳಿಗಳು ಬಹುಸಂಖ್ಯಾತರಿರುವ ಪ್ರಸ್ತುತ ಶಾಲೆಯಲ್ಲಿ ನಾನು ಕನ್ನಡ ರಶ್ಮಿಯಾದೆ. ಮತ್ತೆ ಕೆಲವೊಮ್ಮೆ ನನ್ನ ಹೆಸರಿನ ಜೊತೆಗೆ ಕ್ಲಾಸು, ಡಿವಿಜನ್ ಸೇರಿಕೊಳ್ಳುತ್ತಿತ್ತು. ಪ್ಲಸ್ ಟು ಕೂಡಾ ಮಲಯಾಳಿ ಶಾಲೆಯಲ್ಲೇ. ಅಲ್ಲಿಯೂ ನನ್ನ ಹೆಸರು ಮಲಯಾಳದ ಉಚ್ಛಾರಕ್ಕೆ ಬಲಿಯಾಯಿತು. ಮತ್ತೆ ಇಂಜಿನಿಯರಿಂಗ್ ಕಾಲೇಜು ಮೆಟ್ಟಿಲು ಹತ್ತಿದಾಗ ನನ್ನ ಹೆಸರಿಗೆ ಐಟಿ ಸೇರಿಕೊಂಡಿತು (ನನ್ನ ಬ್ರಾಂಚ್ ಹೆಸರು). ಇನ್ನು ಫ್ರೆಂಡ್ಸ್್ಗಳ ಬಾಯಲ್ಲಿ ಸ್ಟೈಲಿಷ್ ಎಂಬಂತೆ ನನ್ನ ಹೆಸರು ರಶ್, ರ್ಯಾಶ್ ಅಂತಾ ಏನೆಲ್ಲಾ ಆಗಿ ಬಿಟ್ಟಿತು. ಜೊತೆಗೆ ಅರ್ಥವೂ ಬದಲಾಗಿ ಬಿಟ್ಟಿತು! ಇದು ಸಾಕಾಗದು ಎಂಬಂತೆ ಅಡ್ಡ ಹೆಸರುಗಳು ಬೇರೆ. (ಅದನ್ನೆಲ್ಲಾ ಇಲ್ಲಿ ಹೇಳಲಿಕ್ಕೆ ಹೋಗುವುದಿಲ್ಲ ಬಿಡಿ :)) ಆದ್ರೆ ಈವಾಗ ನನ್ನ ಗೆಳೆಯನೊಬ್ಬ ಕಳುಹಿಸಿದ ಎಸ್ಸೆಮ್ಮೆಸ್್ನ ಕೊನೆಗೆ ರಮ್ ಅಂತಾ ಬರೆಯಲಾಗಿತ್ತು. ಇದೇನು ರಮ್ ಅಂತಾ ಕೇಳಿದಾಗ ಬಂದ ಉತ್ತರ ನೋಡಿ ನನಗೇ ಶಾಕ್. ನನ್ನ ಹೆಸರನ್ನು ಶಾರ್ಟ್ ಮಾಡಿ ರಮ್ ಅಂತ ಬರೆಯಲಾಗಿತ್ತು. ಸೂರ್ಯನ ಕಿರಣ ಎಂಬ ಅರ್ಥ ಬರುತ್ತದೆ ಎಂದು ನನ್ನ ಅಮ್ಮ ನನಗಿಟ್ಟ ಹೆಸರು ಇದೀಗ ರಂ ಆಗಿ ಬಿಟ್ಟಿದೆ. ಇನ್ನು ನನ್ನ ಹೆಸರನ್ನು ಮತ್ತಷ್ಟು ಶಾರ್ಟ್ ಮಾಡಿ ಯಾರಾದರೂ ರ..ರಾ..ಅಂತಾ ಕರೆಯದಿದ್ದರೆ ಸಾಕಪ್ಪಾ...

Friday, September 18, 2009

ಪ್ರೀತಿ ಹನಿ

ಪ್ರೀತಿ ಹನಿಯೇ...ಇನ್ನೇನು
ಜಾರಿ ಬಿಡಬೇಕೆಂದಿರುವೆಯಾ
ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು

ನಿನ್ನ ಕಣ್ಣೀರಿನೊಳು ತುಳುಕಲಿ
ನನ್ನ ಪ್ರೀತಿಯ ನೆನಪು
ಹರಿದು ಸೋಕಲಿ ನಿನ್ನ ಭಾವನೆಯನು...

ದೂರವಾಗುವೆ ನೀನೀಗ ಇನ್ನೇನು
ನನ್ ಕಣ್ಣು ಮಿಟುಕುವ ವೇಳೆಯಲಿ
ಈ ವಿರಹವನು ನಾ ಹೇಗೆ ಸಹಿಸಲಿ?

ಆದರೂ ಉಕ್ಕಿ ಹರಿದ ನಿನ್ನ ಕಣ್ಣೀರಲಿ
ಕಾಣುತಿದೆ ನನ್ನ ಪ್ರೀತಿಯ ಪ್ರತಿಬಿಂಬ
ಈ ಕ್ಷಣದ ಸ್ಪರ್ಶವನು ಮರೆಯಲೆಂತು?

Wednesday, August 12, 2009

ರಜೆಗಾಗಿ ಪ್ರಾರ್ಥಿಸಿದ್ದ ದಿನಗಳಿವು...

ನಾವು ಚಿಕ್ಕವರಿರುವಾಗ ಮನೆಗೆ ಕ್ಯಾಲೆಂಡರ್ ತಂದರೆ ಮೊದಲು ಅದರಲ್ಲಿ ಎಷ್ಟು ಕೆಂಪು ಬಣ್ಣದ ದಿನಗಳಿವೆ ಎಂದು ಎಣಿಸುತ್ತಿದ್ದೆವು. ಈ ವರ್ಷ ಎಷ್ಟು ರಜೆ ಇದೆ? ಎಂದು ಎಣಿಸಲು ನಾನು ಮತ್ತು ನನ್ನ ತಮ್ಮ ಜಗಳವಾಡುತ್ತಿದ್ದೆವು. ಕೆಲವೊಂದು ಹಬ್ಬ, ಸರಕಾರೀ ರಜೆಗಳು ಆದಿತ್ಯವಾರ ಬಂದರೆ ಅಯ್ಯೋ ..ಒಂದು ರಜೆ ನಷ್ಟವಾಯಿತಲ್ಲಾ ಎಂಬ ಬೇಜಾರು ಬೇರೆ. 7ನೇ ಕ್ಲಾಸಿನವರೆಗೆ ಈ ಚಾಳಿ ಇರುತ್ತಿತ್ತು. ಹೈಸ್ಕೂಲ್್ಗೆ ತಲುಪಿದಾಗ ರಜೆ ದಿನದಲ್ಲೂ ಸ್ಪೆಷಲ್ ಕ್ಲಾಸ್ ಇರುತ್ತಿತ್ತು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಖುಷಿ ತಂದರೆ ಇನ್ನೊಮ್ಮೆ ಬಾರೀ ತಲೆನೋವು ಆಗಿ ಬಿಡುತ್ತಿತ್ತು. ನಮ್ಮ ಮನೆಯಿಂದ ಹೈಸ್ಕೂಲ್್ಗೆ ಹೋಗಬೇಕಾದರೆ ಕಾಸರಗೋಡು ನಗರಕ್ಕೆ ಬಸ್ಸಲ್ಲಿ ಹೋಗಬೇಕು. ಆವಾಗ ಬಸ್ ಮುಷ್ಕರ ಬಂದರೆ ಬಾರೀ ಸಂತೋಷ. ಹಾಗೆ ಒಂದು ರಜೆ ನಮಗೆ ಸಿಗುತ್ತಿತ್ತು. ನಮ್ಮ ರಾಜ್ಯದಲ್ಲಂತೂ ಆಗಾಗ ಮುಷ್ಕರಗಳು ನಡೆಯುತ್ತಲೇ ಇರುವುದರಿಂದ ಒಂದಷ್ಟು 'ಮುಷ್ಕರ ರಜೆ'ಗಳೂ ನಮ್ಮ ಪಾಲಿಗೆ ಒದಗುತ್ತಿತ್ತು. ನಾನಂತೂ ಯಾವಾಗಲೂ ರಜೆಗಾಗಿಯೇ ಕಾಯುತ್ತಿದ್ದೆ. ಇದು ಮಾತ್ರವಲ್ಲದೆ ನಮ್ಮ ಮನೆಯಿಂದ ಕಾಸರಗೋಡಿಗೆ ಹೋಗಬೇಕಾದರೆ ಎರುದುಂಕಡವ್ ಎಂಬ ಹೊಳೆಯೊಂದನ್ನು ದಾಟಿ ಹೋಗಬೇಕು. ಆ ಹೊಳೆಗೆ ಸೇತುವೆಯೇನೋ ಇದೆ ನಿಜ ಆದರೆ ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಉಕ್ಕಿ ಹರಿಯುವುದರಿಂದಾಗಿ ಯಾವುದೇ ವಾಹನಗಳಿಗೆ ಅತ್ತ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಂದು ದಾರಿಯಿದ್ದರೂ ಅದರಲ್ಲಿ ಬಸ್್ಗಳಿಗೆ ಓಡಾಡಲು ಕಷ್ಟವಾಗಿರುತ್ತಿತ್ತು. ಕೇವಲ ಸಣ್ಣ ವಾಹನಗಳು ಮಾತ್ರ ಆ ದಾರಿಯನ್ನು ಬಳಸುತ್ತಿದ್ದವು. ಬಾರೀ ಮಳೆ ಬಂದರೆ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುವುದು ಪಕ್ಕಾ ಆಗಿತ್ತು. ಆವಾಗ ರಾತ್ರಿ ಬಾರೀ ಮಳೆ ಬಂದರೆ, ನಾಳೆ ಸೇತುವೆಯ ಮೇಲೆ ನೀರಿರುತ್ತದೆ ಎಂದು ಯಾರಾದರೂ ಅಂದರೆ ಸಾಕು ನಾಳೆ ರಜೆ ಎಂದು ತೀರ್ಮಾನಕ್ಕೆ ಬಂದು ಬಿಡುತ್ತಿದ್ದೆವು. ನಮ್ಮ ಹೈಸ್ಕೂಲ್್ಗೆ ನಮ್ಮ ಹಳ್ಳಿಯಿಂದ ಹೋಗುವ ಹುಡುಗಿಯರೂ ಕಡಿಮೆಯಾಗಿದ್ದು, ಸೇತುವೆ ಮೇಲೆ ನೀರು ಬಂದರೆ ಯಾರೂ ಶಾಲೆಗೆ ಹೋಗಬೇಡಿರಿ ಎಂಬ ಒಳ ಒಪ್ಪಂದವನ್ನು ನಾವು ಮಾಡಿ ಬಿಡುತ್ತಿದ್ದೆವು. ಇದು ಮಾತ್ರವಲ್ಲದೆ ಮಗಳು ಈ ಮಳೆಯಲ್ಲಿ ಹೇಗೆ ಮನೆಗೆ ಬರುತ್ತಾಳೋ ಎಂಬ ಗಾಬರಿಯೂ ಅಮ್ಮನಿಗೆ ಇರುವುದರಿಂದ ನನಗೆ ರಜೆ ಅಮ್ಮನಿಂದ ಮೊದಲೇ ಜ್ಯಾರಿಯಾಗುತ್ತಿತ್ತು. ಕೆಲವೊಮ್ಮೆ ಅಣ್ಣ ಇವತ್ತು ಶಾಲೆಗೆ ನಾನು ಬೈಕ್್ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳಿದರೆ ಒಲ್ಲದ ಮನಸ್ಸಿನಿಂದ ಬೈಕ್ ಹತ್ತುತ್ತಿದ್ದೆ.

ಅಬ್ಬಾ... ಈ ಗಣಿತ ಎಂದರೆ ನನಗೆ ಮೊದಲೇ ಕಬ್ಬಿಣದ ಕಡಲೆ ಕಾಯಿ. ಕೆಲವೊಂದು ದಿನ ಗಣಿತ ಕ್ಲಾಸು ಪರೀಕ್ಷೆ ಇದ್ದು, ನಾನೇನು ತಯಾರಿ ಮಾಡಿಕೊಂಡಿರದ ದಿನ ನಾಳೆ ಜೋರಾಗಿ ಮಳೆ ಬರಬೇಕು, ಸೇತುವೆ ಮೇಲೆ ನೀರು ತುಂಬಿ ಹರಿಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಹೀಗೆ ಬಾರೀ ಮಳೆ ಬಂದು ತೊಂದರೆ ಅನುಭವಿಸುವಾಗ ಕೆಲಸಕ್ಕೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಂಡ ಅಪ್ಪ ಇನ್ಯಾವಾಗ ಈ ಹೊಳೆಗೆ ಹೊಸತಾಗಿ ದೊಡ್ಡ ಸೇತುವೆಯೊಂದನ್ನು ನಿರ್ಮಿಸುತ್ತಾರೋ ಎಂದು ಹೇಳುವಾಗ, ಅಯ್ಯೋ....ಇನ್ಮೇಲೆ ಮಳೆ ರಜೆಗೂ ಕುತ್ತು ಬರುತ್ತದೆ ಎಂದು ಹಲುಬುತ್ತಿದ್ದೆ. ಆದ್ರೆ ನಂಗೇನೋ ಒಂದಿಷ್ಟು ಅದೃಷ್ಟವಿತ್ತು, ನಾನು ಪ್ಲಸ್ ಟು ಮುಗಿಸಿದ ನಂತರವೇ ಆ ಹೊಳೆಗೆ ದೊಡ್ಡದಾದ ಸೇತುವೆ ನಿರ್ಮಾಣವಾಯಿತು. ಇದಾದನಂತರ ನಮ್ಮೂರಿನ ಮಕ್ಕಳಿಗೆ ಸೇತುವೆಯ ಮೇಲೆ ನೀರು ಬಂದಿದೆ ಎಂದು ರಜೆಗೆ ನೆಪ ಹೇಳುವುದಕ್ಕೆ ಪೂರ್ಣ ವಿರಾಮ ಬಿತ್ತು.


ಮತ್ತೆ ಕಾಲೇಜು. ಅಲ್ಲಂತೂ ಶನಿವಾರ ಕೂಡಾ ಕ್ಲಾಸು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಆದಿತ್ಯವಾರವೂ ಇರುತ್ತಿತ್ತು. ಅದು ಇಂಜಿನಿಯರಿಂಗ್್ಗೆ ಸೇರಿದ ಮೊದಲ ವರ್ಷ. ಕ್ಲಾಸು ತಪ್ಪಿಸುವಂತಿಲ್ಲ. ಹಾಜರಾತಿ ಕಡಿಮೆಯಾದರೆ ಮಾರ್ಕ್ ಕೂಡಾ ಕಟ್. ಹಾಗೇ ಪದವಿಗೆ ಬಂದ ಮೇಲೆ ಸ್ಪಲ್ಪ ಸೀರಿಯಸ್ ಆಗ್ಬೇಕು. ಇನ್ನು ಅದು ಇದು ಅಂತಾ ರಜಾ ತೆಗೆದುಕೊಳ್ಳುವಂತಿಲ್ಲ ಎಂದು ಅಮ್ಮ ಉಸುರಿದ್ದರು. ಒಂದು ದಿನ ರಜೆ ತೆಗೆದುಕೊಂಡರೆ ಸಾಕು ಮರು ದಿನ ಪಾಠ ಅರ್ಥವಾಗುತ್ತಿರಲಿಲ್ಲ. ನೋಟ್ಸ್ ಅಷ್ಟೇ ಇರುತ್ತಿತ್ತು. ಚಿಕ್ಕಂದಿನಲ್ಲಿ ನೋಟ್ಸ್ ಕಂಪ್ಲೀಟ್ ಮಾಡ್ಬೇಕಾದರೆ ಅಮ್ಮ, ಅಕ್ಕ, ಅಪ್ಪ ಎಲ್ಲರೂ ನನ್ನ ಸಹಾಯಕ್ಕೆ ಬರುತ್ತಿದ್ದರು. ಕಾಲೇಜು ಮೆಟ್ಟಲು ಹತ್ತಿದಾಗ ಅಮ್ಮ ಅಪ್ಪನಿಗಂತೂ ನನ್ನ ಸಬ್ಜೆಕ್ಟ್ ಅರ್ಥವಾಗುವುದಿಲ್ಲ. ಅಕ್ಕನಿಗೆ ಪುರುಸೋತ್ತಿಲ್ಲ. ಹಾಗಾಗಿ ನಾನೇ ನೋಟ್ಸ್ ಬರೀಬೇಕು. ಮಾತ್ರವಲ್ಲದೆ ಎಲ್ಲಾ ಟೀಚರ್ಸ್್ಗೆ ಯಾಕೆ ರಜಾ ತೆಗೆದುಕೊಂಡೆ? ಎಂಬ ಕಾರಣ ಹೇಳ್ಬೇಕು. ಸುಮ್ಮನೆ ಹಲ್ಲು ನೋವು, ಹೊಟ್ಟೆ ನೋವು ಅಂದರೆ ನೀನು ಆರಾಮವಾಗಿಯೇ ಇದ್ದಿಯಲ್ಲಾ...ಮುಖದಲ್ಲಿ ಒಂದಿಷ್ಟು ಸುಸ್ತಾಗಿದ್ದೇ ತಿಳಿಯುತ್ತಿಲ್ಲ ಎಂಬ ವಿವರಣೆಗಳು ಬೇರೆ. ಇಷ್ಟೆಲ್ಲಾ ಕಷ್ಟ ನೋಡಿದರೆ ರಜಾ ತೆಗೆದುಕೊಳ್ಳವುದೇ ಬೇಡ..ಕ್ಲಾಸಲ್ಲಿ ನಿದ್ದೆ ಮಾಡಿದ್ರೂ ಪರ್ವಾಗಿಲ್ಲ.. ಕ್ಲಾಸ್ ಮಿಸ್ ಮಾಡಿಕೊಳ್ಳಬಾರದು ಎಂಬ ತೀರ್ಮಾನಕ್ಕೆ ಬಂದೆ. (ನಾನೇನು ಸುಮ್ಮನೆ ನಿದ್ದೆ ಮಾಡುತ್ತಿರಲಿಲ್ಲ. ಆ ನಿದ್ದೆಯಲ್ಲಿ ಹಲವಾರು ಕನಸು ಕಾಣುತ್ತಿದ್ದೆ) :)

ಆದ್ರೆ ನನಗೆ ಅಲ್ಲಿಯೂ ಅದೃಷ್ಟವಿತ್ತು. ಅಂದರೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಗಾಗ ಮುಷ್ಕರ ನಡೆಸುತ್ತಿದ್ದರು. ನಮ್ಮ ಕಾಲೇಜಿನಲ್ಲಿ ರಾಜಕೀಯ ಕಾರುಬಾರು ಬಾರೀ ಜೋರಾಗಿದ್ದರಿಂದ ಸಮರಗಳಿಗೇನೂ ಕಡಿಮೆಯಿರಲಿಲ್ಲ. ಮೊದಲ ವರ್ಷ ಆ್ಯಂಟಿ ರ್ಯಾಗಿಂಗ್, ನಂತರದ ವರ್ಷ ಫ್ಯಾಷನ್ ಶೋ ನಿಲ್ಲಿಸಿ, ಗುಂಪು ಘರ್ಷಣೆ, ಅಧ್ಯಾಪಕರ ಕೊರತೆ, ಕಾಲೇಜು ಶುಲ್ಕದ ಏರಿಕೆ, ಪರೀಕ್ಷಾ ಫಲಿತಾಂಶ ತಡವಾಗಿ ಬರುತ್ತಿದೆ, ಪ್ಲೇಸ್್ಮೆಂಟ್ ಸೆಲ್ ಸ್ಥಗಿತಗೊಂಡಿದೆ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಅಲ್ಲಿ ಮುಷ್ಕರಗಳು ನಡೆಯುತ್ತಿದ್ದವು. ಇನ್ನೊಮ್ಮೆ ಅಮೆರಿಕದ ಧೋರಣೆಯನ್ನು ಖಂಡಿಸಿ, ರಷ್ಯಾದಲ್ಲಿನ ರಾಜಕೀಯ ವಿಚಾರಗಳು, ಇರಾನ್, ಇರಾಕ್್ನ ಸಮಸ್ಯೆಗಳು ಇವೆಲ್ಲದಕ್ಕೂ ನಮ್ಮಲ್ಲಿ ಮುಷ್ಕರ ಇದ್ದೇ ಇರುತ್ತಿತ್ತು. ಹೀಗೇ ಅವರು ಮುಷ್ಕರ ನಡೆಸುತ್ತಿದ್ದರು, ನಮಗೆ ರಜೆ ಸಿಗುತ್ತಿತ್ತು. ಕೆಲವೊಂದು ವಿಷಯಗಳಿಗೆ, ಅಂದರೆ ಕಾಲೇಜಿಗೆ ಸಂಬಂಧಪಟ್ಟ ವಿಷಯವಾಗಿದ್ದರೆ ನಾವೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೆವು.


ಹೀಗಿದ್ದರೂ ಕಾಲೇಜಿಗೆ ಹೊರಡುವ ಮುನ್ನ 'ದೇಶಾಭಿಮಾನಿ' ಪೇಪರ್್ನತ್ತ ಒಂದು ಸಾರಿ ಕಣ್ಣಾಡಿಸುತ್ತಿದೆ. ಯಾಕೆಂದರೆ 'ಇಂದು ಶಾಲಾ ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಷ್ಕರ ಹೂಡುವರು' ಅಥವಾ 'ಕಣ್ಣೂರ್ ಯುನಿವರ್ಸಿಟಿಯ ಕಾಲೇಜುಗಳಲ್ಲಿ ಇಂದು ಸಮರ 'ಎಂಬ ಸುದ್ದಿಯನ್ನು ಮಾತ್ರ ಯುನಿವರ್ಸಿಟಿ ಸುದ್ದಿ ವಿಭಾಗದಲ್ಲಿರುತ್ತಿದ್ದು ಇದನ್ನು ಮಾತ್ರ ನಾನು ಹುಡುಕಿ ಓದುತ್ತಿದ್ದೆ. ಆವಾಗ ಮುಷ್ಕರ ಇದೆ ಅಂತಾ ಗೊತ್ತಾದರೆ ಮತ್ತೆ ಕಾಲೇಜಿಗೆ ಹೋಗಲು ರೆಡಿಯಾಗಬೇಕಾಗಿಲ್ಲ. ಕೆಲವೊಂದು ಬಾರಿ ಮುಷ್ಕರವಿದ್ದರೂ ಕಾಲೇಜಿಗೆ ಬಂದು ಹೋದರೆ ಒಂದು ಹಾಜರಿ ಸಿಗುತ್ತಿತ್ತು. ಆದ್ರೂ ಹಾಜರಿ ಸಿಗಬೇಕಲ್ಲಾ ಎಂದು ಅರೆ ಮನಸ್ಸಿನಿಂದ ಕಾಲೇಜಿಗೆ ಹೊರಡಬೇಕು. ಕಾಲೇಜಿನ ವಿದ್ಯಾರ್ಥಿಗಳು ಮುಷ್ಕರ ಹೂಡುತ್ತಾರೆ ಎಂಬ ಸುದ್ದಿ ಸಿಕ್ಕಿದರೆ ಸಾಕು, ನಾನು ಕ್ಲಾಸಿನಲ್ಲಿ ಕುಳಿತಿದ್ದರೂ 'ಆನ್ ಸ್ಟ್ರೈಕ್ ಆನ್ ಸ್ಟ್ರೈಕ್್' ಎಂಬ ಕೂಗು ಎಲ್ಲಿಂದ ಕೇಳಿ ಬರುತ್ತದೋ ಎಂದು ಕಿವಿಯಗಲಿಸಿರುತ್ತಿದ್ದೆ. ಅದೂ ನಮ್ಮ ಕ್ಲಾಸ್ (ಐಟಿ ವಿಭಾಗ) ಕ್ಯಾಂಪಸ್್ನ ಮೂಲೆಯಲ್ಲಿತ್ತು. ಈ ಕಾರಣಕ್ಕಾಗಿ ಮುಷ್ಕರ ನಿರತರು ನಮ್ಮ ಕ್ಲಾಸಿನತ್ತ ತಲುಪುವಾಗ ಒಂದೋ ಎರಡೋ ಪೀರಿಯಡ್್ಗಳು ಮುಗಿದಿರುತ್ತಿತ್ತು. ಆವಾಗ ನಾನು ಮೆಕಾನಿಕಲ್ ಬ್ರಾಂಚ್್ನಲ್ಲಿದ್ದರೆ ಎಷ್ಟು ಒಳ್ಳೆಯದಿರುತ್ತಿತ್ತು ಎಂದು ಅನಿಸುತ್ತಿತ್ತು. ಯಾಕೆಂದರೆ ರಾಯಲ್ ಮೆಕ್ ಕ್ಲಾಸಿಗೆ ಮೊದಲು ಸಮರ ನಿರತರು ತಲುಪುತ್ತಿದ್ದು, ನಮ್ಮ ಗ್ಲೋಬಲ್ ಐಟಿ ಕ್ಲಾಸಿಗೆ ತಲುಪುವಾಗ ಒಂದಿಷ್ಟು ಕ್ಲಾಸು ಮುಗಿದಿರುತ್ತಿತ್ತು . :)

ಅಂತೂ ಇಂತು ಕಾಲೇಜು ಮುಗಿಯಿತು. ಮತ್ತೆ ಹೊಟ್ಟೆ ಪಾಡಿಗೆ ಉದ್ಯೋಗ. ಒಂದಿಷ್ಟು ತಿಂಗಳು ಖಾಸಗಿ ಸಂಸ್ಥೆಯೊಂದಲ್ಲಿ ಪ್ರೋಗ್ರಾಂ ಕಲಿಸಲು ಸೇರಿಕೊಂಡಾಗ ಮಕ್ಕಳಿಂದ ಹೆಚ್ಚು ನಾನು ಕಲಿತುಕೊಳ್ಳಬೇಕಾಗಿ ಬಂದಾಗ, ಕೆಲವೊಮ್ಮೆ ಮಕ್ಕಳಿಂದ ಕಲಿತುಕೊಳ್ಳಬೇಕಾಗಿ ಬಂದಾಗ ಅಯ್ಯೋ ...ರಜೆ ರಜೆ ಅಂತ ತಿಪ್ಪರಲಾಗ ಹಾಕಿ ಕಲಿಯದೆ ಕುಳಿತು ಬಿಟ್ಟದ್ದು ತುಂಬಾ ನಷ್ಟವಾಗಿ ಬಿಟ್ಟಿತು ಅಂತಾ ಅನಿಸಿದ್ದೂ ಇದೆ. ಮತ್ತೆ ಇನ್ನೊಂದು ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇರಿದಾಗ ವಿದ್ಯಾರ್ಥಿಗಳು ಸ್ಟೈಕ್ ಮಾಡಿದರೆ ಬಾರೀ ಬೇಜಾರು ಯಾಕೆಂದರೆ ಕ್ಲಾಸಿಲ್ಲ ಎಂಬ ಕಾರಣಕ್ಕೆ ಸಂಬಳವೂ ಕಟ್. ವಿದ್ಯಾರ್ಥಿಯಾಗಿರುವಾಗ ಮುಷ್ಕರಕ್ಕಾಗಿ ಹಾತೊರೆಯುತ್ತಿದ್ದ ನಾನು ಅಧ್ಯಾಪಕಿಯಾದಾಗ 'ಸ್ಟ್ರೈಕ್ ಮಾಡಬೇಡಿ ಮಕ್ಕಳೇ' ಎಂದು ಉಪದೇಶ ಕೊಡುವ ಹಂತಕ್ಕೆ ತಲುಪಿದ್ದೆ .


ಆಮೇಲೆ ಚೆನ್ನೈಯಲ್ಲಿ ಒಂದು ವರ್ಷದ ದುಡಿತ. ಅಲ್ಲಿಯಂತೂ ನಮ್ಮೂರಿನಂತೆ ಮುಷ್ಕರ ಎಂದಾಕ್ಷಣ ಜನ ಜೀವನ ಸ್ತಂಭಿತವಾಗುವುದಿಲ್ಲ. 'ಭಾರತ್ ಬಂದ್್' ಆದ ದಿನ ಅಲ್ಲಿ ರಸ್ತೆಯಲ್ಲಿ ವಾಹನಗಳು ಓಡುವುದನ್ನು ಕಂಡಾಗ ನನಗಂತೂ ಅಚ್ಚರಿ. ಆವಾಗ ಅಲ್ಲಿರುವ ಗೆಳತಿಯೊಬ್ಬಳಲ್ಲಿ ಈ ಬಗ್ಗೆ ಕೇಳಿದಾಗ "ತಮಿಳುನಾಡು ಬಂದ್ ಆಗಬೇಕಾದರೆ ಕರುಣಾನಿಧಿ ಅಥವಾ ಜಯಲಲಿತಾ ಹೇಳಬೇಕು. ಬೇರೆ ಯಾರೇ ಹೇಳಿದರೂ ಇವರು ಕ್ಯಾರೇ ಅನ್ನಲ್ಲ" ಎಂದಿದ್ದಳು. ಅದು ನಿಜವೋ ಎಂದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಇನ್ನಷ್ಟು ರಿಸರ್ಚ್ ಮಾಡಲು ಇನ್ನೊಂದು ಬಂದ್ ಬರಲಿ ಎಂದು ಕಾಯುತ್ತಿರುವಾಗ ನಾನು ಚೆನ್ನೈಯಿಂದ ಬೆಂಗಳೂರಿಗೆ ಹಾರಿದೆ. ಮತ್ತೆ ಚೆನ್ನೈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಬೆಂಗಳೂರಿಗೆ ಬಂದ ನಂತರ ಮುಷ್ಕರವಿದೆ ಎಂದು ಕೇಳಿದ್ದೇ ಇತ್ತೀಚೆಗೆ. ಅದೇ ತಿರುವಳ್ಳುವರ್ ಪ್ರತಿಮೆ ವಿವಾದವಾದಾಗ. ಅದೋ ಬಂತು ಬೆಂಗಳೂರಿಗೂ ಬಂದ್..ಬಸ್ಸು ಓಡಾಡಲಿಕ್ಕಿಲ್ಲ ಎಂದು ಅಂದು ಕೊಂಡಿದ್ದೆ. ಆದರೆ ಬಂದ್ ಇಲ್ಲ ಬರೀ ಬಂದೋಬಸ್ತು ಮಾತ್ರ ಎಂದು ಕೊನೆಗೆ ತಿಳಿದು ಬಂತು. ಮುಷ್ಕರ ಎಂದು ಹೇಳಿದ್ದರೂ ಎಲ್ಲವೂ ಎಂದಿನಂತೆಯೇ ಇತ್ತು. ಆಗ ನಮ್ಮೂರಿನ ಮುಷ್ಕರ ನೆನಪಿಗೆ ಬಂತು. 'ಮುಷ್ಕರ' ಎಂದ ಕೂಡಲೇ ಏನು? ಯಾಕೆ? ಯಾರು ಮಾಡುತ್ತಾರೆ? ಎಂಬುದರ ಬಗ್ಗೆ ಕೇಳುವ ಮೊದಲೇ ಅಂಗಡಿಗಳನ್ನು ಮುಚ್ಚಿ, ವಾಹನಗಳನ್ನು ರಸ್ತೆಗಿಳಿಸದೆ ಹೆದರಿಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ, ಮತ್ತೊಮ್ಮೆ ಮುಷ್ಕರದಂದು ನಡೆಯುತ್ತಿರುವ ಗಲಾಟೆ, ಪ್ರತಿಭಟನೆ, ಬಂಧನ, ರಕ್ತದೋಕುಳಿ...ಹೀಗೆ ನಮ್ಮೂರಲ್ಲಿ ನಡೆಯುತ್ತಿರುವ 'ಮುಷ್ಕರ ಆಚರಣೆ'ಯ ಎಲ್ಲಾ ದೃಶ್ಯಗಳು ಮನಪಟಲದಲ್ಲೊಮ್ಮೆ ಹಾದು ಹೋದವು.

Saturday, July 25, 2009

ನಿನ್ನ ನೆನಪಿನ ಮಳೆಯಲಿ...

ಮಳೆ ಹನಿಯೊಂದು ನನ್ನ ಮೈ ತಾಕಿದಾಗ
ಇನಿಯಾ, ನಿನ್ನ ನೆನಪು ಬಾರದಿರುವುದೇ?
ಹೀಗೆ...
ಸುರಿವ ಮಳೆಯಲ್ಲಿ ನನ್ನ ಕೈ ಹಿಡಿದು
ನಡೆದಾಗ, ನಡುಕ ಮೈಯಲ್ಲಿ
ಆದರೂ ಬೆಚ್ಚನೆಯ ಸುಖವಿತ್ತು ನಿನ್ನ ಜತೆಯಲ್ಲಿ

ನೀ ಹಣೆಗೆ ಮುತ್ತಿಟ್ಟಂತೆ ಹರಿದ ಮೊದಲ
ಮಳೆ ಹನಿಯು ಸುಖಸ್ಪರ್ಷವ ನೀಡಿರಲು
ಮತ್ತೆ...
ನೀನು ನನ್ನೊಂದಿಗೆ ಕಳೆದ ಮಧುರ
ದಿನಗಳ ನೆನಪು ಮನದಲ್ಲಿ
ಮೂಡಿ ಸಂತಸದ ಹೊನಲನ್ನು ಹರಿಸಿತ್ತು.

ಸನಿಹ ನೀನಿಲ್ಲದ ಕ್ಷಣ ಕಣ್ಣೀರು
ಹರಿಸಿ, ನಿನ್ನ ಕಾಯುತಿರಲು
ಆಗೊಮ್ಮೆ...
ಕನಸಲ್ಲಿ ಬಳಿ ಬಂದು ಪಿಸು ಮಾತು
ನುಡಿದ ದಿನ, ಬಿಸಿಲೆಡೆಯ ಮಳೆಯಂತೆ
ಸಂತಸದ ಕಣ್ಣೀರಲಿ ನೀ ಜೊತೆಯಾಗಿದ್ದೆ.


ಜಡಿಮಳೆಯ ಜೊತೆಯಲ್ಲಿ ನಾನಿಂದು
ನಡೆವಾಗ, ನನ್ನ ಕಂಬನಿಗಳ ಕಾಣುವುದೆ
ನಿನಗೆ?
ಗೆಳೆಯ...ನೀನೀಗ ನನ್ನೊಡನೆ ಇಲ್ಲವಾದರೂ....
ಆ ಮಳೆಯಲ್ಲಿ ನೆನೆದ ಸುಖ, ಈ ಪ್ರೀತಿಯ
ನೆನಪು ಮರುಕಳಿಸದಿರುವುದೇ?

Thursday, May 28, 2009

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?

ಹೃದಯ: ಹಾಗೇ ಸುಮ್ಮನೆ ಇದ್ದೇನೆ.

ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?

ಹೃದಯ: ಏನಿಲ್ಲಾ ಬಿಡು...

ನಾನು: ಹೇಳೇ...

ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..

ನಾನು: ಹೌದು

ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..

ನಾನು: ಮತ್ತೆ (?)

ಹೃದಯ: ಪ್ರೇಮಿಗಳು!

ನಾನು: ಹೂಂ..

ಹೃದಯ: ನಿನ್ನಲ್ಲೊಂದು ಪ್ರಶ್ನೆ ಕೇಳಲಾ?

ನಾನು: ಕೇಳು..

ಹೃದಯ: ಈ ಪ್ರೇಮಿಗಳನ್ನು ನೋಡಿ ನಿನಗೆ ಏನೂ ಅನಿಸಲ್ವಾ...

ನಾನು: ಏನು ಅನಿಸಬೇಕು ಹೇಳು. ಅಬ್ಬಾ ಎಷ್ಟೊಂದು ಪ್ರೇಮಿಗಳಿದ್ದಾರೆ! ಒಂದೊಂದು ಜೋಡಿಯೂ ಭಿನ್ನ ವಿಭಿನ್ನ..

ಹೃದಯ: ಅಷ್ಟೇನಾ...

ನಾನು: ಅವರ ಸ್ಟೈಲು, ಸ್ಮೈಲು, ಲುಕ್, ವೇ ಆಫ್ ಎಕ್ಸಪ್ರೆಶನ್ ಎಲ್ಲಾ ಇಂಟರೆಸ್ಟಿಂಗ್

ಹೃದಯ: ಮತ್ತೆ..

ನಾನು: ಏನಿಲ್ಲಾ..

ಹೃದಯ: ಪ್ರೀತಿಯಲ್ಲಿ ಮುಳುಗಿರುವ ಅವರ ಕಣ್ಣಲ್ಲಿ ಸಂತೋಷ ನೋಡಿದ್ದೀಯಾ?

ನಾನು: ಹೌದು..ನೋಡು ಹುಡ್ಗನ ತೆಕ್ಕೆಯಲ್ಲಿರುವ ಆ ಹುಡ್ಗಿ ಎಷ್ಟೊಂದು ಖುಷಿಯಾಗಿದ್ದಾಳೆ..ಅತ್ತ ನೋಡು ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತ ಹುಡುಗ ಅವಳ ಸೌಂದರ್ಯವನ್ನು ವರ್ಣನೆ ಮಾಡುವಂತಿದೆ.

ಹೃದಯ: ಮತ್ತೆ...ಹುಡ್ಗರ ಬಗ್ಗೆ ಹೇಳಲ್ವಾ..

ನಾನು: ಹೂಂ..ಮರದ ಮರೆಯಲ್ಲಿ ಕುಳಿತ ಆ ಜೋಡಿಯನ್ನೇ ನೋಡು. ಅವ ಕದ್ದು ಮುಚ್ಚಿ ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅವಳು ನಾಚುತ್ತಾಳೆ..ಅವಳಿಂದ ಮುತ್ತು ಪಡೆಯಲು ಅವ ಹವಣಿಸುತ್ತಾನೆ...ಮತ್ತೆ ಅಲ್ಲಿ ಮುತ್ತಿನ ಮಳೆ :)

ಹೃದಯ: ಹಾಗೆ ಹೇಳಿದರೆ ಪ್ರೇಮಿಗಳೆಲ್ಲಾ ಖುಷಿಯಾಗಿದ್ದಾರೆ ಅಂತಾನಾ?

ನಾನು: ಇಲ್ಲ..ನೋಡು ಆ ಹುಲ್ಲುಗಾವಲಿನಲ್ಲಿ ಕುಳಿತ ಈ ಪ್ರೇಮಿಗಳ ಕಣ್ಣಲ್ಲಿ ನೀರು ಕಂಡೆಯಾ? ಅವಳು ಅಳ್ತಾ ಇದ್ದಾಳೆ. ಅವ ಅವಳನ್ನು ಸಮಾಧಾನಿಸುತ್ತಿದ್ದಾನೆ..ಅವನ ಕಣ್ಣಂಚಿನಲ್ಲೂ ಹನಿಯಿದೆ. ಅವ ಅವಳಂತೆ ಜೋರಾಗಿ ಅಳಲಾಗದೆ ದುಃಖವನ್ನು ನುಂಗಿ ಚಡಪಡಿಸುತ್ತಿದ್ದಾನೆ.

ಹೃದಯ: ತುಂಬಾ ಅಬ್ಸರ್ವ್ ಮಾಡ್ತಿದ್ದೀಯಾ..

ನಾನು: ಇನ್ನು ಮುಗಿದಿರಲ್ಲ..ಅಲ್ಲೊಂದು ಯುವ ಜೋಡಿಗಳು ಪರಸ್ಪರ ಜಗಳವಾಡುವಂತೆ ಕಾಣುತ್ತಿದೆ. ಅವ ಕಠೋರನಂತೆ ವರ್ತಿಸುತ್ತಿದ್ದಾನೆ.

ಹೃದಯ: ಅವ ಕೈ ಕೊಟ್ಟ ಅಂತಾ ಅನಿಸುತ್ತದೆ...ಇಲ್ಲದಿದ್ದರೆ ಹುಡ್ಗಿ ಯಾಕೆ ಅಷ್ಟೊಂದು ಕೂಗಾಡ್ಬೇಕು?

ನಾನು:ಬೇರೆ ಯಾವುದೋ ಹುಡುಗಿ ಬಗ್ಗೆ ಮಾತಾಡ್ತಾ ಇದ್ದಾಳೆ ಅವಳು. ಅವರ ಪ್ರೇಮಲೋಕಕ್ಕೆ ಯಾವುದೋ ಹುಡುಗಿ ಎಂಬ ವೈರೆಸ್ ದಾಳಿಯಾಗಿದೆ ಅಂತಾ ಕಾಣುತ್ತೆ.

ಹೃದಯ: ಹುಡುಗಿಯರಿಗೆ ಇಲ್ಲ ಸಲ್ಲದ ಸಂಶಯ ಬೇರೆ. ಪೊಸೆಸಿವ್್ನೆಸ್ ಜಾಸ್ತಿ.

ನಾನು: ಹಾಗೇನಿಲ್ಲಾ..ಇಲ್ಲಿ ಹುಡುಗ ಹುಡುಗಿ ಸಮಾನರು. ಇಬ್ಬರೂ ಪ್ರೇಮಿಗಳೇ ಆಗಿದ್ದರೂ ಅವರ ಲವ್, ವೇ ಆಫ್ ಎಕ್ಸ್್ಪ್ರೆಶನ್ ಡಿಫರೆಂಟಾಗಿರುತ್ತದೆ. ಹುಡುಗಿಯರ ಮನಸ್ಸು ಹೂವಿನಂತೆ ಬೇಗ ಬೇಜಾರು ಮಾಡಿಕೊಳ್ಳುತ್ತಾರೆ.

ಹೃದಯ: ಹೆಣ್ಣು ಅಂದ ಮಾತ್ರಕ್ಕೆ ಪಕ್ಷಪಾತ ಸರಿಯಲ್ಲ...

ನಾನು: ಆದ್ರೂ ಹೆಣ್ಮನಸ್ಸು ಗಂಡಿನಷ್ಟು ಗಟ್ಟಿಯಾಗಿರಲ್ಲ..

ಹೃದಯ: ವಾದ ಬೇಡ..ನಿನಗೇನೂ ಅನಿಸಲ್ವಾ..?

ನಾನು: ಅರ್ಥ ಆಗಿಲ್ಲಾ..

ಹೃದಯ: ಬಿಡಿಸಿ ಹೇಳ್ಬೇಕಾ?

ನಾನು: ಹೇಳು..

ಹೃದಯ: ಹದಿಹರೆಯದ ವಯಸ್ಸು ನಿನ್ನದು. ಪ್ರೀತಿ ಮಾಡ್ಬೇಕು ಅಂತಾ ಅನಿಸಲಿಲ್ಲವಾ?

ನಾನು: ಸುಮ್ಮನಿರು..

ಹೃದಯ: ಅಂದ್ರೆ ನಿನಗೂ ಲವ್ ಮಾಡ್ಬೇಕು ಅಂತಾ ಅನಿಸಿದೆ. (ತುಂಟ ನಗು)

ನಾನು: ಹೂಂ..ಆದ್ರೆ ಏನೋ ಹೆದರಿಕೆ ಆಗ್ತಾ ಇದೆ.

ಹೃದಯ: ಯಾಕೆ?

ನಾನು: ನೀನು ಸಿನಿಮಾದಲ್ಲಿ ನೋಡಿಲ್ವಾ..ಎಷ್ಟು ರಿಸ್ಕ್ ತೆಗೊಳ್ಬೇಕು...ಅಬ್ಬಾ ನನ್ನಿಂದಂತೂ ಆಗಲ್ಲ..ಅದಕ್ಕೆ ಸುಮ್ಮನಾದೆ.

ಹೃದಯ: ಅಂದ್ರೆ ನಿನ್ನ ಭಾವನೆಗಳನ್ನು ಒತ್ತಿ ಹಿಡಿದು ಅನ್ಯಾಯ ಮಾಡುತ್ತಿದ್ದೀಯಾ..

ನಾನು: ಇಲ್ಲ...ನಾವು ಇನ್ನೊಬ್ಬರನ್ನು ಪ್ರೀತಿಸುವ ಮೊದಲು ನಮ್ಮನ್ನು ನಾವೇ ಅರಿತುಕೊಂಡಿರಬೇಕು ಎಂಬುದು ನನ್ನ ನಿಲುವು. ನಾನು ನನ್ನನ್ನು (ನನ್ನ ಹೃದಯವನ್ನು) ಸಂಪೂರ್ಣವಾಗಿ ಅರಿಯತೊಡಗಿದರೆ ನಾನು ಪ್ರೀತಿಸುವವನನ್ನೂ ಅರ್ಥ ಮಾಡಿಕೊಳ್ಳಬಲ್ಲೆ.

ಹೃದಯ: ಹೂಂ...ಹಾಗಾದ್ರೆ ನೀನು ನಿನ್ನ ಬಗ್ಗೆ ಅರಿತಿದ್ದೀಯಾ..ಇನ್ನು ಪ್ರೀತಿಯಲ್ಲಿ ಬೀಳಬಾರದೇ?

ನಾನು:ಮೌನ....

ಹೃದಯ: ನನ್ನ ಪ್ರಶ್ನೆಗೆ ಉತ್ತರ?

ನಾನು: ಸದ್ಯ ,ನೀನು ನನ್ನ ಜೊತೆಗಿದ್ದಿಯಲ್ಲಾ...ನನ್ನ ಈ ಪ್ರೀತಿಯ ಹೃದಯವನ್ನು ಇನ್ನೋರ್ವನಿಗೆ ಕೊಡಲು ಮನಸ್ಸು ಬರ್ತಾ ಇಲ್ಲ...ಐ ಲವ್ ಯು..

ಹೃದಯ: ಐ ಟೂ..

Sunday, March 8, 2009

ನಳ್ಳಿಯಲ್ಲಿ ಇವತ್ತೂ ನೀರಿಲ್ಲ...

ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ. ಅಂತೂ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಮನೆಯಲ್ಲಿ ಪಾತ್ರೆಗಳ ಸದ್ದು ಕೇಳಿಸಿ ಎಚ್ಚೆತ್ತು ಕೊಂಡೆ. ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಮನೆಯಾಗಿದ್ದರಿಂದ ಅಣ್ಣಂದಿರು ಯಾರೋ ಬೆಳಗ್ಗಿನ ರೈಲಿಗೆ ಹೋಗುತ್ತಿರಬೇಕು ಅದಕ್ಕಾಗಿಯೇ ಇಷ್ಟೊಂದು ಗೌಜಿ ಅಂದುಕೊಂಡೆ. ಆದ್ರೆ ಅದಾಗಿರಲಿಲ್ಲ. ದೊಡ್ಡಮ್ಮನಂತೂ ನನ್ನ ಅಕ್ಕ ಅಣ್ಣಂದಿರನ್ನೆಲ್ಲಾ ಎಬ್ಬಿಸಿ ಬಿಂದಿಗೆ, ಪಾತ್ರೆ ಹಿಡಿದು ಕೊಂಡು ಅವಸರವಾಗಿ ಮನೆಯಿಂದ ಹೊರ ನಡೆದರು. ಆಗಲೇ ಗೊತ್ತಾದದ್ದು. ಮನೆಯ ಮುಂದಿರುವ ಸಾರ್ವಜನಿಕ ನಳ್ಳಿಯಲ್ಲಿ ನೀರು ಬಂದಿದೆ ಎಂದು. ಆ ಬೆಳಗ್ಗಿನ ಜಾವದಲ್ಲೇ ನಳ್ಳಿ ಮುಂದೆ ಪಾತ್ರೆಗಳ ಸಾಲು ಜೊತೆಗೆ ನಿದ್ದೆಗಣ್ಣಲ್ಲೇ ತಮ್ಮ ಸರದಿ ಯಾವಾಗ ಬರುವುದೋ ಎಂದು ಕಾದು ಕುಳಿತು ಕೊಂಡಿರುವ ಮಂದಿಯನ್ನು ಕಂಡರೆ ಅಯ್ಯೋ ಪಾಪ ಎನಿಸದಿರಲಾರದು.

ಅಂತೂ ಈ ದಿನ ನೀರು ಸಿಕ್ಕಿತು ಎಂಬ ಸಮಾಧಾನದಲ್ಲಿ ಎಲ್ಲರೂ ಪಾತ್ರೆಯಲ್ಲಿ ನೀರು ತುಂಬಿಕೊಂಡು ಮನೆಯತ್ತ ನಡೆದರು. ಇದೆಲ್ಲವೂ ನನಗೆ ಹೊಸತು ಎನಿಸಿದರೂ, ಇದು ಇಲ್ಲಿಯವರ ದಿನಚರಿ ಎಂದು ದೊಡ್ಡಮ್ಮ ಹೇಳಿದ್ದರು. ಈ ಬಗ್ಗೆ ಮಾತಾಡುತ್ತಿರುವಾಗ ಯಾವಾಗ ನೆರೆಹೊರೆಯವರ ಪಾತ್ರದ ಸದ್ದು ಕೇಳಿಸುತ್ತದೆ, ನೀರಿನ ಸದ್ದು ಕೇಳಿಸುತ್ತದೆ ಎಂಬ ಆಲೋಚನೆಯಲ್ಲೇ ದೊಡ್ಡಮ್ಮ ನಿದ್ದೆ ಹೋಗುತ್ತಾರೆ ಎಂದು ಅಣ್ಣ ಹೇಳಿ ನಕ್ಕಿದ್ದ. ಇದು ನಿಜವೂ ಹೌದು. ನೀರಿಲ್ಲದಿದ್ದರೆ ಏನು ಮಾಡಲು ಸಾಧ್ಯ? ಬೇಸಿಗೆ ಚುರುಕಾದರೆ ಇಲ್ಲಿ ವಾರಕ್ಕೊಂದು ಬಾರಿ ನೀರು ಬರುತ್ತದೆ. ಕೆಲವೊಮ್ಮೆ ಉಪ್ಪು ನೀರು. ಕುಡಿಯಲು ನೀರು ಬೇಕಾದರೆ ಯಾವುದಾದರೂ ಬಾವಿ, ಬೋರ್್ವೆಲ್ ಹುಡುಕಿ ನೀರು ತಂದಿಡಬೇಕು. ಎಲ್ಲದಕ್ಕೂ ಮಿತವಾದ ಬಳಕೆ. ಎರಡು ಬಾರಿ ಸ್ನಾನ ಮಾಡುವುದು ಒಂದೇ ಬಾರಿಯಾಗುತ್ತದೆ. ನೀರಿನ ಅಭಾವದಿಂದಾಗಿ ಮನೆ ಮುಂದೆ ಕಾಲುತೊಳೆಯಲು ಇರಿಸಿದ ನೀರಿನ ಪಾತ್ರ ಮಾಯವಾಗುತ್ತದೆ...ಏನೆಲ್ಲಾ ನಿರ್ಬಂಧಗಳು! ಕೆಲವೊಮ್ಮೆ ಕಾದು ಕುಳಿತು ಕೊಂಡರೂ ನಳ್ಳಿಯಲ್ಲಿ ಒಂದು ತೊಟ್ಟು ನೀರು ಬರುವುದಿಲ್ಲ. ಈ ದಿನ ನೀರಿಲ್ಲ ಅಂತಾ ಪೆಚ್ಚು ಮೋರೆ ಹಾಕಿಕೊಂಡು ಖಾಲಿ ಬಿಂದಿಗೆಯಲ್ಲೇ ವಾಪಾಸಾಗುವ ಮನೆ ಮಂದಿ, ನಾಳೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಇದ್ದ ನೀರಿನಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳುತ್ತಾರೆ.

ನಮ್ಮ ತರವಾಡು ಮನೆ (ಅಪ್ಪ ಹುಟ್ಟಿ ಬೆಳೆದ ಮನೆ) ಸಿಟಿಯಲ್ಲಿದ್ದು, ಅಲ್ಲಿಯೇ ಮನೆ ಕಟ್ಟಿ ವಾಸಿಸಬೇಕೆಂದು ಕರ್ನಾಟಕದ ಕಡು ಹಳ್ಳಿಯಲ್ಲಿ ಬೆಳೆದ ಅಮ್ಮನ ಆಗ್ರಹವಾಗಿತ್ತು. ಆದರೆ ನಗರ ಜೀವನದಿಂದ ಬೇಸತ್ತ ಅಪ್ಪ ಹಳ್ಳಿಯಲ್ಲೇ ವಾಸಿಸಲು ಆಶಿಸಿದ್ದರು. ಯಾವಾಗಲೂ ಅತ್ತಿಗೆಯವರಂತೆ ನಗರದಲ್ಲಿ ಇರುತ್ತಿದ್ದರೆ ಎಷ್ಟು ಚೆನ್ನ ಎಂದು ಅಮ್ಮ ರಾಗ ಎಳೆಯುತ್ತಿದ್ದರೂ, ನಗರವಾಸಿಗಳಿಗೇ ಗೊತ್ತು ಅವರ ಕಷ್ಟ ಎಂದು ನಾವು ಅಮ್ಮನಿಗೆ ಹೇಳುತ್ತಿದ್ದೆವು. ಅಲ್ಲಿಯ ಸದ್ದು ಗದ್ದಲಗಳಿಂದ ಮುಕ್ತವಾಗಿ ಸ್ವಚ್ಛಂದ ವಾತಾವರಣದ ಹಳ್ಳಿಯಲ್ಲಿ ಜೀವಿಸುವುದು ಭಾಗ್ಯವೆಂದೇ ನಾನು ತಿಳಿದುಕೊಂಡಿದ್ದೇನೆ.

ನಮ್ಮ ಹಳ್ಳಿಯಲ್ಲಂತೂ ಈವರೆಗೆ ನೀರಿನ ಬರ ಅನುಭವಕ್ಕೆ ಬಂದಿರಲಿಲ್ಲ. ಆದರೆ ಕೆಲವು ವರ್ಷಗಳಿಂದೀಚೆಗೆ ಅಲ್ಪ ಸ್ವಲ್ಪ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಮೊದಲು ಬಾವಿ ತೋಡಿಸಿಕೊಳ್ಳುತ್ತಿದ್ದ ಮಂದಿ ಬೋರ್್ವೆಲ್್ಗೆ ಮೊರೆ ಹೋಗಿರುವುದೇ ಅಂತರ್ಜಲ ಮಟ್ಟ ಕುಸಿಯಲು ಕಾರಣ. ಮನೆಯ ಬಾವಿಯಲ್ಲಿ ನೀರು ಅಲ್ಪ ಕುಸಿದರೆ ಸಾಕು ನೀರೆತ್ತುವ ಮೋಟರ್್ಗೆ ತಾತ್ಕಾಲಿಕ ವಿರಾಮ. ನೀರು ಸೇದುವುದೇ ಗತಿ. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ದನಗಳನ್ನು ಸ್ನಾನ ಮಾಡಿಸುವುದು ಎಲ್ಲಾ ಒಂದೊಂದು ದಿನ ಒಂದೊಂದು ತೆಂಗಿನ ಮರದ ಬುಡದಲ್ಲಿ..ಹೀಗೆ ಸಾಗುತ್ತದೆ ನಮ್ಮ ಮನೆಯ ನೀರು ಉಳಿಕೆ ಕಾರ್ಯಕ್ರಮ. ಮಳೆಗಾಲದಲ್ಲಿ ನೀರಿಂಗಿಸುವ ಪದ್ಧತಿಯೂ ನಮ್ಮನೆಯಲ್ಲಿರುವುದರಿಂದ ನೀರಿನ ಅಭಾವದಲ್ಲಿ ಕಂಗೆಡುವ ಸ್ಥಿತಿ ಇಲ್ಲಿಯವರೆಗೂ ನಮಗೆ ಬಂದಿಲ್ಲ.

ಆದಷ್ಟು ಮನೆಯ ಬಾವಿ ನೀರನ್ನು ಉಳಿಸಿಕೊಳ್ಳುವುದಕ್ಕಾಗಿ ಇತರ ಖರ್ಚಿಗೆ ಬೋರ್್ವೆಲ್ ನೀರೇ ಬೇಕು. ಇದೀಗ ಪಂಚಾಯತ್ ವತಿಯಿಂದ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಬೋರ್್ವೆಲ್ ಕೈ ಹಿಡಿದು ನೇತಾಡಬೇಕಾದ ಪರಿಸ್ಥಿತಿ ನಮ್ಮೂರಿನವರಿಗಿಲ್ಲ ಎಂಬುವುದೇ ಸಮಾಧಾನದ ವಿಷಯ.

ಹಳ್ಳಿಯಲ್ಲಿ ಹೇಗೋ ಅಡ್ಜೆಸ್ಟ್ ಮಾಡಬಹುದು ಆದ್ರೆ ಪಟ್ಟಣದಲ್ಲಿರುವವರ ಅವಸ್ಥೆಯನ್ನು ನೋಡಿದರೆ ಮರುಕವುಂಟಾಗುತ್ತದೆ. ನೀರಿಲ್ಲದೆ ಏನು ಮಾಡಲಿಕ್ಕಾಗುತ್ತದೆ? ಈ ಮೊದಲು ಚೆನ್ನೈ ಮಹಾನಗರದಲ್ಲಿ ವಾಸಿಸುವಾಗ ಹಾಸ್ಟೆಲ್್ನಲ್ಲಿ ನೀರಿಗಾಗಿ ಕಾದು ಕುಳಿತದ್ದು, ನೀರು ಪೋಲು ಮಾಡಿದಾಗ ಹಾಸ್ಟೆಲ್ ವಾರ್ಡನ್್ನಿಂದ ಬೈಸಿಕೊಂಡದ್ದು ಹೀಗೆ ನೀರಿನ ಬಳಕೆಯ ಬಗ್ಗೆ ಬಹಳಷ್ಟು ಕಾಳಜಿ ವಹಿಸಲು ಕಲಿತುಕೊಂಡಿದ್ದೇನೆ. ಬೆಂಗಳೂರಿನಲ್ಲಿಯೂ ಜಲಕ್ಷಾಮವಿದೆ ಅಲ್ವಾ..ಆದ್ರೆ ನಾನು ವಾಸಿಸುವ ಪಿ.ಜಿಯಲ್ಲಿನ ಕತೆಯೇ ಬೇರೆ ಮಾರಾಯ್ರೆ. ಅಲ್ಲಿನ ಹುಡುಗೀರು ನೀರು ಕರೆಂಟ್ ಪೋಲು ಮಾಡುವುದನ್ನು ಕಂಡರೆ ಹೊಟ್ಟೆ ಉರಿಯುತ್ತದೆ. ಹೀಗೆ ಪೋಲು ಮಾಡುವ ನೀರು ಕರೆಂಟ್್ನ ಬಗ್ಗೆ ಸ್ವಲ್ಪವಾದರೂ ಕಾಳಜಿ ನಮಗೆ ಇರುತ್ತಿದ್ದರೆ, ಬೆಂಗಳೂರಲ್ಲಿ ಜಲಕ್ಷಾಮ, ಪವರ್ ಕಟ್್ಗಳು ಕಂಡು ಬರುತ್ತಿಲ್ಲವೇನೋ ಎಂದು ಅನಿಸುತ್ತದೆ. ಇದನ್ನು ಕಂಡು ಸಹಿಸಲಾರದೆ ನಾನೊಮ್ಮೆ ಕೆಲವು ಹುಡುಗಿಯರಿಗೆ ಉಪದೇಶ ನೀಡಲು ಹೋಗಿದ್ದೆ (ಇದು ಅಧಿಕ ಪ್ರಸಂಗಿತನ ಅಂತಾ ಅವರಿಗೆ ಅನಿಸಿರಬೇಕು). ನನ್ನ ಮಾತು ಕೇಳಿದ ಅವರು ಹೇಳಿದ್ದೇನು ಗೊತ್ತೇ?

"ಇಟ್ಸ್ ನೋಟ್ ಯುವರ್ ಹೋಮ್. ಇಟ್ಸ್ ಪಿ.ಜಿ. ಏಂಡ್ ವಿ ಆರ್ ಪೇಯಿಂಗ್ ರೆಂಟ್ ಫೋರ್ ದೇಟ್."

ಹೌದು, ಅವರು ಹೇಳಿದ್ದೂ ಸರಿ, ಆದ್ರೆ ರೆಂಟ್ ಕೊಡುತ್ತೇವೆ ಅಂದ ಮಾತ್ರಕ್ಕೆ ಕರೆಂಟ್ ನೀರು ವೇಸ್ಟ್ ಮಾಡಬೇಕೆ? ಅಗತ್ಯವಿದ್ದಷ್ಟು ಬಳಸಿ, ನಾಳೆಗಾಗಿ ಉಳಿಸುವ ಬುದ್ಧಿಯನ್ನು ನನ್ನ ಗೆಳತಿಯರಿಗೆ ಹೇಳಿಕೊಡುವರಾರು? ಸದ್ಯ ನನ್ನಲ್ಲಿ ಉತ್ತರವಿಲ್ಲ.
Monday, February 23, 2009

ನಗೀನಾಳ ಡೈರಿಯಿಂದ...

ಅದು ಮರೀನಾ ಬೀಚ್ ನ ಸುಂದರ ಸಂಜೆ. ಜೋಡಿ ಹಕ್ಕಿಗಳು ಕಲರವಗುಟ್ಟುತ್ತಿರುವಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು, ಮೈಗೆ ಮೈ ಬೆಸೆದು ಆ ಮನೋಹರವಾದ ಸಂಜೆಯಲ್ಲಿ ತಮ್ಮ ಪ್ರಣಯಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮರಳದಂಡೆಯಲ್ಲಿ ನಡೆದು ಮೂಡಿದ ಹೆಜ್ಜೆಗುರುತನ್ನು ಅಳಿಸಿ ಹಾಕುತ್ತಿರುವ ತೆರೆಗಳನ್ನು ನೋಡುತ್ತಾ ಅವಳು ನನ್ನೊಂದಿಗೆ ಅವನೂ ಇರುತ್ತಿದ್ದರೆ ಎಂದು ಭಾವಿಸಿರಬಹುದೇನೋ. ಅವಳ ಕಣ್ಣಾಲಿಗಳು ತುಂಬಿದ್ದವು. ಭೋರ್ಗರೆವ ಕಡಲಿನಂತೆ ಅವಳ ದುಃಖ ಹೃದಯದಲ್ಲಿ ಉಮ್ಮಳಿಸಿ ಬರುತ್ತಿದ್ದರೂ, ಅದನ್ನೆಲ್ಲಾ ಬದಿಗೊತ್ತಿ ನಾನು ಬದುಕ ಬೇಕು...ಸೋಲೊಪ್ಪಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ನಿಟ್ಟುಸಿರು ಬಿಟ್ಟಳು.

--------
ಈ ಮೊದಲು ಬಣ್ಣದ ಚಿಟ್ಟೆಯಂತೆ ಹಾರಿ ಕುಣಿದಾಡಿದವಳಲ್ಲ ಅವಳು. ಅವನ ಪರಿಚಯವಾದ ನಂತರ ತನ್ನ ಜೀವನವೇ ಬದಲಾಯಿತು ಎಂದು ಆಕೆ ಪದೇ ಪದೇ ಹೇಳುತ್ತಿದ್ದಳು. ಇದು ನಿಜವೂ ಹೌದು. ಕಾಲೇಜು ದಿನಗಳಲ್ಲಿ ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮುಗ್ದ ಮನಸ್ಸಿನ ಬಾಲೆಯಂತೆ ತನ್ನದೇ ಪ್ರಪಂಚವನ್ನು ಸೃಷ್ಠಿಸಿಕೊಂಡು ಬೆಳ್ಳಿ ಮೋಡದಂತೆ ತೇಲಾಡುತ್ತಿದ್ದ ಆ ಹುಡುಗಿ ತನ್ನ ಪ್ರೀತಿಗಾಗಿ, ಅವನಿಗಾಗಿ ಎಲ್ಲವನ್ನೂ ತೊರೆದಳು. ಅಂದಹಾಗೆ ಅವರಿಬ್ಬರೂ ಪ್ರೀತಿ ಪ್ರಣಯ ಅಂತಾ ಪಾರ್ಕು, ಹೋಟೆಲ್ ಸುತ್ತಿಲ್ಲ. ಮನಸ್ಸಿನಲ್ಲೇ ತಮ್ಮ ಪ್ರೀತಿಯನ್ನು ಬಚ್ಚಿಟ್ಟು, ಕಣ್ಣಲ್ಲೇ ಮಾತನಾಡಿ ಪ್ರಣಯ ಲೋಕದ ಸುಖ ಪಡೆದವರು. ಅವನಿಗೂ ಇವಳೆಂದರೆ ಬಹಳ ಅಚ್ಚುಮೆಚ್ಚು. ಕಂಡರೆ ಅವಳೇನೂ ಅಷ್ಟು ಸುಂದರಿಯಲ್ಲ. ಅದರೂ ಮುಖದಲ್ಲಿ ಒಂದು ರೀತಿಯ ಕಳೆ. ಸಾದಾ ಹಳ್ಳಿ ಹುಡುಗಿಯ ಮುಗ್ದತೆ, ಪ್ರೀತಿಸಲು ಮಾತ್ರ ತಿಳಿದಿರುವ ಮುಗ್ದ ಮನಸ್ಸಿನ ಆ ಕೃಷ್ಣ ಸುಂದರಿಯನ್ನು ಇಷ್ಟೊಂದು ಹ್ಯಾಂಡ್‌ಸಮ್ ಆಗಿರುವ ಹುಡುಗ ಮೆಚ್ಚಿದ್ದಾದರೂ ಹೇಗೆ? ಎಂದು ಹಲವರು ಹುಬ್ಬೇರಿಸಿದ್ದೂ ಉಂಟು. ಇವನೀಗೇನೂ ಸ್ಟೈಲ್ ಹೈ ಫೈ ಹುಡುಗಿ ಸಿಕ್ಕಿಲ್ಲವೇ? ಎಂದು ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ. ಏತನ್ಮಧ್ಯೆ, ಅವರ ನಡುವೆ ಭೂಮಿ ಆಕಾಶದಷ್ಟು ಅಂತರವಿದೆಯಲ್ವಾ ಎಂದು ಕಾಲೇಜಿನ ಇತರ ಹುಡುಗಿಯರು ಗುಸು ಗುಸು ಹೇಳದೆ ಇರುತ್ತಿರಲಿಲ್ಲ. ಹೋಗಲಿ ಬಿಡಿ ಪ್ರೇಮಕ್ಕೆ ಕಣ್ಣಿಲ್ಲ, ಅದು ಕುರುಡು ಅನ್ನುವುದಕ್ಕೆ ತಕ್ಕುದಾದ ಪರ್ಯಾಯ ಇದು ಅಂತಲೇ ಹೇಳಬಹುದು.

ವರ್ಷಗಳು ಕಳೆದವು. ಇದೀಗ ಅವಳು ಮತ್ತು ಅವನು ಕಾಲೇಜು ವಿದ್ಯಾರ್ಥಿಗಳಲ್ಲ. ತಮ್ಮ ಕಾಲಲ್ಲಿ ತಾವು ನಿಂತುಕೊಳ್ಳುವಷ್ಟರ ಮಟ್ಟಿಗೆ ಉದ್ಯೋಗ ದಕ್ಕಿದೆ. ಇದರೆಡೆಯಲ್ಲಿ ಹಿತ ಮಿತವಾದ ಪ್ರೇಮ. ತನ್ನ ಪ್ರೇಮವನ್ನು ತೋರ್ಪಡಿಸಲು ತನಗೆ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಚಡಪಡಿಕೆ ಅವನದ್ದಾದರೆ ತನ್ನ ಪ್ರೀತಿ ಅವನಿಗೆ ಸಾಕಾಗುತ್ತಿಲ್ಲವೇ ಎಂಬುದು ಅವಳ ಮನದ ತಳಮಳ.

ಅವನ ಒಂದೊಂದು ಬಡಿತ, ಉಸಿರಿನ ಏರಿಳಿತಗಳು ಅವಳಿಗೆ ಗೊತ್ತು. ತನ್ನ ಪ್ರೀತಿಯಲ್ಲಿ ಅಪಾರ ವಿಶ್ವಾಸವಿದ್ದರೂ, ಕೆಲವೊಮ್ಮೆ ಅವ ನನ್ನಿಂದ ದೂರವಾದರೆ ಎಂಬ ಆತಂಕ ಅವಳನ್ನು ನಿದ್ದೆಗೆಡಿಸಿತ್ತು. ಈ ಪ್ರೀತಿ ಪ್ರಣಯ ಎಲ್ಲವೂ ಕಾಲ ಬದಲಾದಂತೆ ಬದಲಾಗುತ್ತದೆ. ಹೊಸ ಜೀವನಶೈಲಿಗೆ ಮಾರು ಹೋಗುತ್ತಿದ್ದ ತನ್ನ ಇನಿಯನಿಗೆ ಈ ಹಳ್ಳಿ ಹುಡುಗಿಯ ಪ್ರೀತಿ ಕೂಡಾ ಕೆಲವೊಮ್ಮೆ ಬೋರ್ ಎಂದು ಅನಿಸಿ ಬಿಟ್ಟರೆ... ಇಲ್ಲ ಎಲ್ಲವೂ ತನ್ನ ಭ್ರಮೆ ಅವಳ ಹೃದಯ ಬಡಿತ ಮತ್ತಷ್ಟು ವೇಗವಾಗಿತ್ತು. ಕೂಡಲೇ ಅವನಿಗೆ ಕರೆ ಮಾಡಿದಳು.
"ಏನೋ...ಏನಾದರೂ ಕನಸು ಕಂಡಿದ್ದೀಯೇನೋ? ಯಾಕೆ ಹೀಗೆ ಗಾಬರಿಯಾಗಿದ್ದೀಯಾ?" ಎಂದು ಅವ ಕೇಳಿದ.
"ಏನೂ ಇಲ್ಲ ಯಾಕೋ ನಾನು ಒಬ್ಬಂಟಿಗಳು ಎಂದು ಅನಿಸುತ್ತಿದೆ. ನಿನಗೆ ನನ್ನನ್ನು ಇಷ್ಟ ಅಲ್ವಾ? ನನ್ನನ್ನು ಬಿಟ್ಟು ಹೋಗಲಿಕ್ಕಿಲ್ಲವಲ್ಲಾ... ನೀನಿಲ್ಲದ ಬದುಕು ನನಗೆ ಬೇಡ...ಐ ಲವ್ ಯೂ..ನನ್ನನ್ನು ಬಿಟ್ಟು ಹೋಗ್ಬೇಡಾ...ಪ್ಲೀಸ್..."

"ಯಾಕೆ ಈ ತರಹ ಯೋಚನೆ ಮಾಡ್ತಾ ಇದ್ದೀಯಾ..ಸುಮ್ಮನೆ ಯೋಚನೆ ಮಾಡಿಕೊಂಡು ತಲೆನೋವು ಬರಿಸಿಕೊಳ್ಬೇಡ. ನಾನು ನಿನ್ನವನೇ..ನೀನು ನನ್ನ ಸುಂದರಿ ಹುಡುಗಿ ಅಲ್ವಾ...ಯೋಚನೆ ಮಾಡದೆ ಸುಮ್ಮನೆ ಮಲಗಿಕೋ. ನೋಡು ನಾನಿಂದು ನಿನ್ನ ಕನಸಲ್ಲಿ ಬರುವೆ.."ಎಂದು ಒಂದು ಸಿಹಿ ಮುತ್ತ ನೀಡಿ ಅವ ಫೋನ್ ಕಟ್ ಮಾಡಿದ.

ಸುಂದರಿ...ಇಷ್ಟರವರೆಗೆ ನನ್ನನ್ನು ಯಾರೂ ಈ ರೀತಿ ಹೊಗಳಿರಲಿಲ್ಲ. ಶಾಲೆಯ ದಿನಗಳಲ್ಲಿ ಈ ಕಪ್ಪು ಬಣ್ಣದಿಂದಾಗಿ ಅದೆಷ್ಟೋ ಬಾರಿಗೆ ಅವಮಾನಕ್ಕೊಳಗಾದವಳು ನಾನು. ಡ್ಯಾನ್ಸ್ ಗ್ರೂಪ್‌ನಲ್ಲಿ ಮೈ ಕಪ್ಪು ಎಂಬ ಕಾರಣಕ್ಕಾಗಿಯೇ ಕೊನೆಯ ಸಾಲಿನಲ್ಲಿ ನಿಂತು ಹೆಜ್ಜೆ ಹಾಕಿದ್ದು, ಮೇಕಪ್ ಮಾಡಿದರೂ ಚಂದ ಕಾಣಿಸದ ಮುಖ...ಮುಖಕ್ಕೆ ಬಣ್ಣ ಹಚ್ಚಿದರೂ ಕರ್ರಗಿನ ಸಣಕಲು ಕೈ ಕಾಲು..ನನ್ನ ದೇಹವೇ ನನಗೆ ಅಸಹ್ಯ ಹುಟ್ಟಿಸಿತ್ತು. ತನ್ನ ಸಹೋದರ ಸಹೋದರಿಯರೆಲ್ಲಾ ಬೆಳ್ಳಗಿರುವಾಗ, ಯಾವ ಜನ್ಮದ ಪಾಪವಿದು ಎಂಬಂತೆ ನಾನು ಮಾತ್ರ ನನ್ನ ಕಪ್ಪಗಿನ ಮೈಯನ್ನು ನೋಡಿ ಅತ್ತು ಬಿಡುತ್ತಿದೆ. ಈ ನಡುವೆ ನನಗೆ ಸಾಂತ್ವನ ನೀಡುತ್ತಿದ್ದವರು ನನ್ನ ಅಪ್ಪ. ಕಪ್ಪು ಕಸ್ತೂರಿ ಕಣಮ್ಮೀ...ಆ ನಮ್ಮ ದೇವರು ನೋಡು..ಕೃಷ್ಣ ಕಪ್ಪು ಅಲ್ಲವೇ? ಮೈ ಬಣ್ಣದಲ್ಲೇನಿದೆ..ಮನಸ್ಸು ತಿಳಿಯಾಗಿದ್ದರಷ್ಟೇ ಸಾಕು... ಎಂದು ನನ್ನನ್ನು ಎದೆಗೆ ತಬ್ಬಿಕೊಳ್ಳುತ್ತಿದ್ದರು. ಅಪ್ಪ ಏನೋ ನನ್ನ ಸಮಾಧಾನಕ್ಕಾಗಿ ಹೇಳುತ್ತಾರೆ.

ಆದ್ರೆ ನಾನು ಬಾಲ್ಯದಲ್ಲಿ ಅನುಭವಿಸುತ್ತಿರುವ ಅವಮಾನದ ನೋವು ಈಗಲೂ ಹಸಿಯಾಗಿಯೇ ಇದೆ. ಅಲ್ಲಿಯೂ ನಾನು ಸೋಲೊಪ್ಪಿಕೊಡಲಿಲ್ಲ. ಸ್ಟೇಜ್ ಕಾರ್ಯಕ್ರಮದಲ್ಲಿ ನನಗೆ ಹಿಂದಿನ ಸಾಲಿನಲ್ಲೇ ಸ್ಥಾನಕೊಡುವ ಈ ಅಧ್ಯಾಪಕರ ಬಗ್ಗೆ ನನಗೆ ದ್ವೇಷವಿತ್ತು. ಹೇಗಾದರೂ ಮಾಡಿ ಮುಂದೆ ಬರಬೇಕು ಎಂಬುದೇ ನನ್ನ ಛಲವಾಗಿತ್ತು. ಆಗ ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಅಂತೂ ಮೊದಲ ಬಾರಿಗೆ ಕವಿತೆ ಬರೆದೆ. ಅದಕ್ಕೆ ಪ್ರಥಮ ಸ್ಥಾನ ಬಂತು. ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಸ್ಟೇಜ್ ಬಿಟ್ಟು ಆಫ್ ಸ್ಟೇಜ್ ಐಟಂನಲ್ಲಿ ನನ್ನನ್ನು ತೊಡಗಿಸಿಕೊಂಡೆ. ಸ್ಟೇಜಿನಲ್ಲಿ ಅಂದದ ರೂಪವನ್ನು ಪ್ರದರ್ಶಿಸುವ ಸೌಂದರ್ಯವಂತೂ ನನ್ನಲ್ಲಿರಲಿಲ್ಲ ಆದ್ರೆ ನನ್ನ ದುಃಖ ಮನಸ್ಸಿನ ನೋವು ಕತೆಗಳಾಗಿ ಕವಿತೆಗಳಾಗಿ, ನನ್ನ ಕೋಪದ ದನಿ ಭಾಷಣದಲ್ಲಿನ ವಿಷಯಗಳಿಗೆ ಗಟ್ಟಿ ದನಿಯಾಗಿ ಹೊರ ಹೊಮ್ಮಿತು. ನಾನು ಸ್ಟೇಜಿನ ಮರೆಯಲ್ಲಿ ಅಕ್ಷರಗಳ ರೂಪದಲ್ಲಿ ಮಿಂಚಿದೆ, ನನ್ನ ಅನುಭವವೇ ನನಗೆ ಗುರುವಾಗಿತ್ತು.

ಕಾಲೇಜು ಮೆಟ್ಟಿಲೇರಿದಾಗಲೂ ಅಷ್ಟೇ, ನನ್ನ ಕವನ, ಕತೆ, ಓದು ಸ್ವಪ್ನ ಇವಿಷ್ಟೇ ನನ್ನ ಗೆಳೆಯರು. ಆದರೆ ಅವ ನನ್ನ ಗೆಳೆಯನಾಗಿ ಸಿಕ್ಕಿದ್ದು ನನ್ನ ಪುಣ್ಯ ಎಂದೇ ಹೇಳಬೇಕು. ಓರ್ವ ಉತ್ತಮ ಗೆಳೆಯನಾಗಿ ನಾನು ಕಣ್ಣೀರಿಡುವಾಗ ಸಂತೈಸಿ ಮುಂದೆ ಬರಲು ಪ್ರೋತ್ಲಾಹ ನೀಡಿದ ಆ ಗೆಳೆಯ ಪ್ರೇಮಿಯಾಗಿ ನನ್ನ ಮನಸ್ಸಲ್ಲಿ ನೆಲೆವೂರಿದ್ದು ಯಾವಾಗ ಅಂತಾ ತಿಳಿದಿಲ್ಲ. ನನ್ನ ಅಪ್ಪನಂತಹ ಸ್ವಭಾವ, ಪ್ರೋತ್ಸಾಹಿಸುವ ಅವನ ಪರಿ ಎಲ್ಲವನ್ನು ಮೆಚ್ಚಿಕೊಂಡಾಗ ನಾನವನ ಪ್ರೇಯಸಿ, ಅವ ನನ್ನ ಪ್ರಿಯಕರನಾಗಿದ್ದ. ಅಂದೊಮ್ಮೆ ನನ್ನ ಬಾಲ್ಯದ ಕಹಿಗಳನ್ನು ಅವನಲ್ಲಿ ಹೇಳಿ ಅತ್ತು ಬಿಟ್ಟು, ನೀನು ಬೆಳ್ಳಗಿದ್ದೀಯಾ ನಿನಗೂ ಕಪ್ಪು ಬಿಳುಪು ಮೈ ಬಣ್ಣದಲ್ಲಿ ತಾರತಮ್ಯ ನೋಡುವ ಮೆಂಟಾಲಿಟಿ ಇರಬಹುದು ಎಂದು ರೇಗಾಡಿದ್ದೆ. ಅವ ಹೇಳಿದ್ದು ಇಷ್ಟೇ..ನೀನು ಸುಂದರಿ...ನಿನ್ನ ಮನಸ್ಸನ್ನು ನೋಡಿ ನಾ ಮೆಚ್ಚಿಕೊಂಡಿದ್ದೇನೆ..ಐ ಲವ್ ಯೂ..ಬಣ್ಣದಲ್ಲೇನಿದೇ? ಎಂದು ನನ್ನ ಕಣ್ಣಿಗೆ ಕಣ್ಣಿಟ್ಟು ಪ್ರಶ್ನೆ ಹಾಕಿದ್ದ.

ನನಗೆ ಅಷ್ಟೇ ಸಾಕಾಗಿತ್ತು. ಬಾಲ್ಯದ ನೋವುಗಳಿಗೆ ಮುಲಾಮು ಹಚ್ಚಿದಂತಿತ್ತು ಅವನ ಆ ಮಾತು. ಆಮೇಲೆ ಸೌಂದರ್ಯ, ಬಣ್ಣ ಯಾವತ್ತೂ ನಮ್ಮ ಪ್ರೀತಿಯೆಡೆಯಲ್ಲಿ ಬಂದಿರಲಿಲ್ಲ. ಅಮರ ಪ್ರೇಮಿಗಳ ಕಥೆಯೋ, ದೇವದಾಸನ ವ್ಯಥೆಯೋ ಯಾವುದೂ ನಮ್ಮ ಪ್ರಣಯದಲ್ಲಿನ ವಿಷಯವಾಗಿರಲಿಲ್ಲ.

ಆದರೆ ಇದೀಗ ಜೀವನದಲ್ಲಿನ ಮಹತ್ತರವಾದ ವಿಷಯಕ್ಕೆ ತೀರ್ಪ ಕಲ್ಪಿಸಬೇಕಾಗಿದೆ. ಮನೆಯಲ್ಲಿ ಈ ವಿಷಯ ಗೊತ್ತಾದರೆ? ಮದುವೆ ಪ್ರಾಯ ಹತ್ತಿರವಾಗುತ್ತಿದೆ ಇನ್ನು ವಿವಾಹಲೋಚನೆ ಮಾಡದೆ ಇರುತ್ತಾರೆಯೇ ನಮ್ಮ ಹಿರಿಯರು? ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತೇನೆ ಎಂದು ತಿಳಿದರೆ ಮನೆಯಲ್ಲಿ ಪ್ರಳಯವೇ ಸಂಭವಿಸುತ್ತದೆ. ಪ್ರೀತಿಯ ಜಾಲದಲ್ಲಿ ಸಿಕ್ಕಿ ಬಿದ್ದಾಗಿದೆ ಮನೆಯಲ್ಲಿ ಹೇಳುವಂತ ಧೈರ್ಯ ನಮಗಿಲ್ಲ ಎಂಬ ಚಡಪಡಿಕೆ ನಮ್ಮಿಬ್ಬರಲ್ಲಿತ್ತು. ನಮ್ಮಿಬ್ಬರ ಕುಟುಂಬವೇ ಹಾಗೇ..ಜೀವಕ್ಕೆ ಜೀವ ಕೊಟ್ಟು ಅವರು ನಮ್ಮನ್ನು ಮುದ್ದಿಸುತ್ತಾರೆ. ಅವನಿಗೆಗೆ ಅಮ್ಮ ಎಂದರೆ ಪಂಚಪ್ರಾಣ. ಇತ್ತ ನನ್ನ ಅಪ್ಪ..ಈಗಲೂ ನನ್ನನ್ನು ಎಳೆಗೂಸು ಎಂದೇ ಪರಿಗಣಿಸುತ್ತಾರೆ. ನನ್ನ ಅಪ್ಪ ಅಮ್ಮನ ಮುದ್ದಿನ ಮಗಳು ನಾನೇ. ಈ ರೀತಿ ಮಾಡಿದರೆ ಅದನ್ನ ಸಹಿಸುವಷ್ಟು ಶಕ್ತಿ ಅವರಿಗಿಲ್ಲ ಎಂದು ನನಗೆ ಗೊತ್ತು. ನಮ್ಮಿಬ್ಬರ ಕುಟುಂಬಗಳು ನಮ್ಮ ಮೇಲಿರುವ ವಿಶ್ವಾಸ ಪ್ರೀತಿಗೆ ಮಣ್ಣೆರಚಿ ನಮ್ಮ ಪ್ರಣಯವನ್ನು ಮೆರೆಯಬೇಕೆ? ಬೇಡ..ನಮ್ಮಿಬ್ಬರ ಕುಟುಂಬದ ಕಣ್ಣೀರಿನ ಶಾಪ ನಮಗೆ ಬೇಡ. ಈ ಪ್ರಣಯಕ್ಕೆ ಇಂದೇ ತೆರೆಯೆಳೆಯಬೇಕು. ಎಷ್ಟೋ ಬಾರಿ ಆಲೋಚಿಸಿದಿದ್ದೆ. ಅದರೆ ಸಾಧ್ಯವಾಗಿಲ್ಲ. ಇನ್ನು ಮುಂದೆ ಇದು ಸಾಧ್ಯವಾಗಲೇ ಬೇಕು ಎಂದು ನಾನು ನಿರ್ಧರಿಸಿದ್ದೇನೆ.

ಈ ಸಮುದ್ರ ತೀರದ ಮನೋಹರ ಸಂಜೆಯಲ್ಲಿ ನಾನೊಬ್ಬಳೆ. ಅವ ನನ್ನೊಂದಿಗೆ ಇಲ್ಲ..ಅವನಿಲ್ಲದ ಜೀವನ ಯಾಕೆ?

ಅವಳ ಡೈರಿಯ ಕೊನೆಯ ಪುಟದಲ್ಲಿ ನನ್ನ ಮರಣಕ್ಕೆ ಯಾರು ಹೊಣೆಯಲ್ಲ ಎಂದು ಬರೆಯಲಾಗಿತ್ತು.

ಆ ಸಂಜೆ ತನ್ನ ದುಃಖವನ್ನೆಲ್ಲಾ ಮರೀನಾಳ ಮರಳಲ್ಲಿ ಹೂತು ಹಾಕಿ ಮರಳುತ್ತೇನೆ..

ಕೊನೆಯ ಬಾರಿಗೆ ನಾನು ಅವನಲ್ಲಿ ಹೇಳಿದ್ದು.."ಮುಂದಿನ ಜನ್ಮದಲ್ಲಿ ನೀನು ನನ್ನವನಾಗಿರು. ನಾನು ನಿನ್ನವಳು ಮಾತ್ರ.."
ಅವ ಹೇಳಿದ್ದು.... "ಈ ಕುಟುಂಬ, ಸಂಸಾರದ ಪ್ರೀತಿಗಾಗಿ ನಾವು ನಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದೇವೆ. ಮುಂದಿನ ಜನ್ಮದಲ್ಲಿ ನಾವಿಬ್ಬರೂ ಅನಾಥರಾಗಿ ಹುಟ್ಟೋಣ...."

----------------
ನಾನು ಇನ್ನು ಹೊರಡಬೇಕು. ಎಲ್ಲರೂ ಜೊತೆ ಜೊತೆಯಾಗಿ ಹೊರಡುವಾಗ ನಾನೊಬ್ಬಳೇ ಆ ಮರಳ ತಡಿಯಲ್ಲಿ ನಿಂತು ವಿಸ್ತಾರವಾಗಿ ಹರಡಿರುವ ಆ ಕಡಲನೊಮ್ಮೆ ದಿಟ್ಟಿಸಿದೆ. ಸೂರ್ಯ ಕೆಂಪಾಗಿ ಅದಾಗಲೇ ಜಾರಿದ್ದ. ಇದು ನನ್ನ ಜೀವನದ ಕೊನೆಯ ದಿನ..ಗುಡ್ ಬೈ ಮರೀನಾ..ಮತ್ತೊಮ್ಮೆ ತಿರುಗಿ ನೋಡಿದೆ. ದೂರದಲ್ಲಿ ಕಾಣುವ ಆ ನೀಲಿ ಅಂಚಿನಲ್ಲಿ ಏನೋ ಸೆಳೆತವಿದೆ. ಅಲ್ಲೇ ನಿಂತು ಮತ್ತೊಮ್ಮೆ ನೋಡಿದೆ. ಜೀವನದಲ್ಲಿ ಕಷ್ಟಗಳು ಕ್ಷಣಿಕ, ಅದಕ್ಕಂಜಿ ಜೀವನವೇ ಬೇಡ ಅಂದು ಕೊಂಡರೆ?. ಕಣ್ಣಿಗೆ ಕಾಣುವ ಸಾಗರದ ಆ ನೀಲಿಯಂಚನ್ನು ನೋಡಿ ಅದೇ ಕೊನೆ ಅಂದು ಕೊಂಡಿದ್ದೀಯೇನು? ಅಲ್ಲಿ ನಿಂತು ಒಮ್ಮೆ ನೋಡು ಈ ನೀಲಿಯಂಚಿನಾಚೆಗೂ ವಿಶಾಲವಾಗಿ ಹರಡಿಕೊಂಡಿರುವ ನೀರಿದೆ, ಹಾಗೆ ಮುಂದೆ ಮುಂದೆ ಹೋದಂತೆ ಮುಗಿಯಷ್ಟು ನೀರು, ಆಳ, ಎಲ್ಲವೂ ಇದೆ. ಕಷ್ಟಗಳು ನಮಗೆ ಬದುಕಲು ಕಲಿಸುತ್ತವೆ, ಈಸ ಬೇಕು ಜಯಿಸಬೇಕು..ಅದುವೇ ಜೀವನ..ಅವನಿಲ್ಲ ಎಂಬ ಕೊರಗಿನಲ್ಲಿ ಜೀವನವೇ ಬೇಡವೆಂದರೆ ನಿನ್ನ ಪ್ರೀತಿಗೂ ನೀನು ಕೊನೆ ಹಾಡಿದಂತೆ ಅಲ್ಲವೇ? ಪ್ರೀತಿಯನ್ನು ಕೊಲ್ಲಬೇಡವೋ...ಅದು ನಿನ್ನ ಹೃದಯದಲ್ಲಿ ಭದ್ರವಾಗಿರಲಿ ಎಂದೆಂದಿಗೂ..

ಈ ಮಾತು ಯಾರೂ ಹೇಳಿದರು? ಯಾರೂ ಇಲ್ಲ.. ಮರೀನಾ ಹೇಳಿದ್ದಾಗಿರಬಹುದೇ? ಇಲ್ಲ...ಅದು ಸಾಧ್ಯವಿಲ್ಲ. ಇದು ಯಾರೂ ಹೇಳಿದ್ದಲ್ಲ.

ನನ್ನ ಮನಸ್ಸು ನನ್ನಲ್ಲಿಯೇ ಹೇಳಿಕೊಂಡದ್ದು. ಸಾಯಬೇಕೆಂದಿರುವ ನನ್ನ ಮನಸ್ಸು ಥಟ್ಟನೆ ಇಂತಹ ನಿರ್ಧಾರ ಕೈಗೊಂಡಿತೇ? ಏನೇ ಆಗಲಿ..ಆತ್ಮಹತ್ಯೆ ಮಾಡಿ ಹೇಡಿ ಅನಿಸುವುದಕ್ಕಿಂತ ಧ್ಯೆರ್ಯದಿಂದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದ್ದೇನೆ. ಈವರೆಗೆ ನನ್ನ ಕ(ವ್ಯ)ಥೆಗಳನ್ನು ಈ ಡೈರಿಯಲ್ಲಿ ಬರೆದಿದ್ದೇನೆ. ಮನಸ್ಸು ನಿರಾಳವಾಗಿದೆ. ಹೊಸತೊಂದು ಜೀವನ...ಹೊಸ ಭಾವನೆಗಳನ್ನು ಸ್ವೀಕರಿಸಲು ನಾನು ಮನಸ್ಸು ಮಾಡಿದ್ದೇನೆ. ಹಳೆಯದೆಲ್ಲವನ್ನು ಮರೆತು ಹೊಸತಿಗೆ ಪ್ರವೇಶಿಸುತ್ತಿದ್ದೇನೆ.

ಮರೀನಾ..ಈ ಡೈರಿ ನಿನ್ನ ತೆಕ್ಕೆಯಲ್ಲಿರಲಿ..ಎಂದು ನಗೀನಾ ತನ್ನ ಡೈರಿಯನ್ನು ಮರೀನಾಳ ಅಬ್ಬರದ ತೆರೆಯ ಮುಂದೆ ಬೀಸಿ ಎಸೆದಳು. ತೆರೆಮಾಲೆಗಳ ಬಡಿತಕ್ಕೆ ಸಿಕ್ಕಿ, ದಡಕ್ಕೆ ಅಪ್ಪಳಿಸುತ್ತಾ ಆ ಡೈರಿ ತೇಲಾಟವಾಡುವಾಗ, ನಗೀನಾ ಹೊಸ ಜನ್ಮ ಪಡೆದವಳಂತೆ ಉಲ್ಲಸಿತಳಾಗುತ್ತಿದ್ದಳು.

Thursday, January 15, 2009

ನನ್ನ ಗ್ರಾಮ

ನಿತ್ಯ ಹಚ್ಚ ಹಸುರಾಗಿ
ಕಂಗೊಳಿಸುವುದೀ ನನ್ನೂರು
ತೆನೆ ತುಂಬಿ ನಿಂತ ಗದ್ದೆ,
ಬಾಳೆ ತೆಂಗು ಕಂಗಿನ ತೋಟ
ಇಕ್ಕೆಲಗಳಲಿ,
ಸುತ್ತಲೂ ಹಬ್ಬಿದ ಬೇಲಿ ಹೂಗಳು..
ಇದು ನನ್ನ ಗ್ರಾಮ...ಆಗಿತ್ತು!

ದುಡಿದ ರೈತನಿಗೆ ಬೆಳೆಯು ದಕ್ಕದಿರಲು
ಹಚ್ಚ ಹೊಲದಲ್ಲಿ ಕೆಂಬಾವುಟ
ಹಾರಿಸಿದ್ದರಂತೆ ನಮ್ಮ ಹಿರಿಯರು,
ಅಮ್ಮ ಹೇಳಿದ ನನ್ನೂರಿನ ವಿಪ್ಲವದ ನೆನಪು...
ಹೋರಾಟ ಮುಂದುವರಿಯಲು ಹೀಗೆ
ದಣಿಯು ದಣಿದಿದ್ದ, ಬಡವ ಗೆದ್ದಿದ್ದ

ನನ್ನೂರಿನ ಕೆಂಪು ವಿಪ್ಲವವು
ಸಮಾನತೆಗೆ ಉಸಿರು
ಭೂಮಿ ಹಸುರಾಗಲು ಕೊಂಚ
ರಕ್ತವೂ ಚಿಮ್ಮಿತ್ತು, ಅಪ್ಪ ಹೇಳಿದ್ದ
ಶಾಂತಿ ನೆಲೆಸಿದ ಈ ಸಮರದ ಜೊತೆಗೆ
ಹುತಾತ್ಮರ ಮಂಟಪವೂ ಎದ್ದು ನಿಂತಿತ್ತು.

ಇಂದು ಬರಡಾಗಿದೆ ನನ್ನ ಸುಂದರ ಗ್ರಾಮ,
ಅಲ್ಲಲ್ಲಿ ಎರಡಂತಸ್ತಿನ ಮಹಲು,ಗೋಪುರ
ಹಸಿರನುಳಿಸಲು ಹೋರಾಡಿದ ಜನರೆಲ್ಲಿ?
ಅವರೆಂದೋ ಮಣ್ಣು ಪಾಲಾಗಿ,
ಅವರ ಮಕ್ಕಳು ಲಾರಿಯಲಿ ತಂದ ಮಣ್ಣನು
ಬರಡು ಭೂಮಿಗೆ ಸುರಿದು, ಕೆಂಪು ಇಟ್ಟಿಗೆಯಲಿ
ಗೋಡೆ ಕಟ್ಟುತ್ತಿದ್ದಾರೆ...

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ..

ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ?

ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದನ್ನು ಹೇಳಲು ಯಾರಿಗೆ ತಾನೆ ಹೆಮ್ಮೆ ಇರುವುದಿಲ್ಲ?

ಮೊದಮೊದಲು ಮಂಗಳೂರು, ಬೆಂಗಳೂರು, ಮದ್ರಾಸ್ ದೆಹಲಿ ಅಂತಾ ಗರ್ವದಲ್ಲಿ ಹೇಳುತ್ತಿದ್ದರೂ ಇದೀಗ ಎಲ್ಲರೂ ಖತಾರ್, ಕುವೈತ್, ಅಮೆರಿಕ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತಾರೆ. ಯಾಕೆಂದರೆ ನಮಗೆಲ್ಲರಿಗೂ ಸ್ವದೇಶಕ್ಕಿಂತ ವಿದೇಶ ಪ್ರೀತಿ ಹೆಚ್ಚು ಎಂದೇ ಹೇಳಬಹುದು. ನಮ್ಮೂರಿಗೆ ಸಂಬಂಧಿಸಿದಂತೆ ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳಿಗೇ ಡಿಮ್ಯಾಂಡು. ವರಾನ್ವೇಷಣಾ ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಹುಡುಗ ನಮ್ಮೂರಲ್ಲಿ ಅಥವಾ ಪಕ್ಕದ ಊರಲ್ಲೇ ಇರಬಹುದು. ಆದರೆ ಕಡಿಮೆ ವಿದ್ಯಾಭ್ಯಾಸ ಗಳಿಸಿದ್ದರೂ ಗಲ್ಫ್‌ನಲ್ಲಿ ದುಡಿಯುತ್ತಾನೆ ಎಂದು ಕೇಳಿದರೆ ಸಾಕು ಕನ್ಯಾಪಿತೃಗಳು ಬೇಗನೆ ಒಪ್ಪಿಕೊಳ್ಳುತ್ತಾರೆ. ಅದೇ ವೇಳೆ "ಮರಿಮೋನ್ ಅಂಞ ದೂರೆ..ಗಲ್ಫಿಲಾ" (ಅಳಿಯ ತುಂಬಾ ದೂರದ ಊರಾದ ಗಲ್ಫ್‌ನಲ್ಲಿದ್ದಾನೆ) ಎಂದು ಅತ್ತೆ ಮಾವಂದಿರು ಎದೆ ನೆಟ್ಟಗಾಗಿಸಿ ಹೇಳುತ್ತಾರೆ. ಯಾಕೆಂದರೆ ಸ್ವದೇಶದಲ್ಲಿನ ಸಂಪಾದನೆಗಿಂತ ವಿದೇಶದಲ್ಲಿನ ಸಂಪಾದನೆಗೇ ಹೆಚ್ಚು ಬೆಲೆಯಲ್ಲವೆ? ತನ್ನ ಮಗಳನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಡಲು ಯಾವ ಮಾತಾಪಿತರು ತಾನೇ ಆಗ್ರಹಿಸುವುದಿಲ್ಲ? ಕೆಲವೊಮ್ಮೆ ಆತ ಗಲ್ಪ್‌ನಲ್ಲಿ ದುಡಿದು ಬಂದು ಊರಲ್ಲೇ ನೆಲೆಸಿದ್ದರೂ ಈ ಮೊದಲು ಗಲ್ಫ್‌ನಲ್ಲಿದ್ದೆ ಎಂದು ಹೇಳುವುದೂ ಹೆಮ್ಮೆಯೇ..ಹೀಗೆ ಸಾಗುತ್ತದೆ ಗಲ್ಪ್ ಪುರಾಣ...

ಇನ್ನು, ದೂರದ ಊರಿನ ಉಡುಗೊರೆಯ ಬಗ್ಗೆ ಹೇಳಲೇ ಬೇಕಲ್ವಾ? ಇದು ನನ್ನ ಮಗ, ಅಪ್ಪ, ಅಣ್ಣ, ಪ್ರಿಯಕರ ಕೊಡಿಸಿದ್ದು ಎಂದು ಹೇಳಲೂ ಹೆಮ್ಮೆ ಅನಿಸುವುದಿಲ್ವಾ? ನಿಜ ಹೇಳಲಾ.. ನನಗಂತೂ ಹೆಮ್ಮೆಯಿದೆ. ನಾನು ಪ್ರೈಮರಿ ಸ್ಕೂಲಿಗೆ ಹೋಗುತ್ತಿದ್ದ ವೇಳೆ ನನ್ನಣ್ಣ ಬೆಂಗ್ಳೂರಿನ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ. ಆವಾಗ ಅಣ್ಣ ನನಗೊಂದು ಜೀನ್ಸ್ ಶರ್ಟ್ ಕೊಡಿಸಿದ್ದ. ಅದೇನೋ ಸೈಜ್ ತುಂಬಾನೇ ದೊಡ್ಡದಾಗಿತ್ತು. ಅದನ್ನು ಹಾಕಿಕೊಂಡು ಶಾಲೆಗೆ ಹೋಗಬೇಡ ಎಂದು ಅಮ್ಮ ಹೇಳಿದ್ದರೂ, ಅದನ್ನು ಲೆಕ್ಕಿಸದೆಯೇ ನಾನದನ್ನು ಹಾಕಿಕೊಂಡು ಶಾಲೆಗೆ ಹೋಗಿದ್ದೆ. ದೊಡ್ಡ ಗಾತ್ರದ ಆ ಶರ್ಟ್ ಕಂಡು ಶಾಲೆಯಲ್ಲಿ ಇದೇನು ಅಣ್ಣನ ಶರ್ಟ್ ಹಾಕಿಕೊಂಡು ಬಂದಿದ್ದೀಯಾ? ಎಂದು ಎಲ್ಲರೂ ನಕ್ಕಿದ್ದರು. ಆದರೂ "ಇದು ನನ್ನ ಅಣ್ಣ ಬೆಂಗ್ಳೂರಿನಿಂದ ತಂದ ಶರ್ಟು, 'ಬೆಂಗ್ಳೂರಿನಿಂದ' ಅಂತ "ಇನ್ನೊಮ್ಮೆ ಒತ್ತಿ ಹೇಳಿದ್ದೆ. ಅಂದು ಬೆಂಗ್ಳೂರಿನಿಂದ ಅಣ್ಣ ತಂದಂತಹ ದೈತ್ಯ ಶರ್ಟ್ ಧರಿಸಿ ನಾನೂ ಕೂಡಾ ಜಂಭದಿಂದ ಉಬ್ಬಿ ಹೋಗಿದ್ದೆ. ಆದರೆ ಈಗ ನಾನು ಬೆಂಗ್ಳೂರಲ್ಲೇ ಇದ್ದುಕೊಂಡು ಬಾಲ್ಯದ ನನ್ನ "ಬೆಂಗ್ಳೂರು ಮಹಿಮೆ"ಯನ್ನು ನೆನೆಪಿಸಿಕೊಳ್ಳುವಾಗ ನಗು ಬರುತ್ತಿದೆ.

ಅಂದ ಹಾಗೇ ನಾವು ಕೂಡಾ ರಜೆಯಲ್ಲಿ ಊರಿಗೆ ಮರಳುವಾಗ ಏನೇನು ತೆಗೆದುಕೊಂಡು ಹೋಗಲಿ? ಯಾರ್ಯಾರಿಗೆ ಏನೇನು ಕೊಡಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕೆಲವೊಮ್ಮೆ ತಲೆ ತಿನ್ನುವ ಸನ್ನಿವೇಶಗಳೂ ಒದಗಿಬರುವುದಿದೆ. ಯಾಕೆಂದರೆ ನಾವು ನೀಡಿದಂತಹ ಅಥವಾ ನೀಡುವಂತಹ ಆ ಉಡುಗೊರೆಗಳು ನಮ್ಮ ಸಂಬಂಧದ ಪ್ರೀತಿಯ ಪ್ರತೀಕಗಳು. ಅದನ್ನು ನೀಡುವಾಗ ಅಥವಾ ಪಡೆಯುವಾಗ ಅನುಭವಿಸುವ ಸಂತೋಷವಿದೆಯಲ್ಲಾ ಅದನ್ನು ವರ್ಣಿಸಲಸಾಧ್ಯ. ಅವರವರ ಪ್ರೀತಿಗೆ, ಸಂಬಂಧಕ್ಕೆ, ಭಾವನೆಗಳಿಗೆ ತಕ್ಕಂತೆ ಆ ಉಡುಗೊರೆಗಳು ಪ್ರತಿಯೊಬ್ಬನ ಮನದಲ್ಲಿಯೂ ಸ್ಥಾನವನ್ನು ಗಳಿಸುತ್ತವೆ ಎಂದರೆ ತಪ್ಪಾಗಲಾರದು.

ಅಂತೂ ಒಟ್ಟಿನಲ್ಲಿ ದೂರದ ಊರಿನಿಂದ ನಮ್ಮ ಆಪ್ತರು ಊರಿಗೆ ಬರುತ್ತಿದ್ದಾರೆ ಎಂದ ಕೂಡಲೇ ದಿನಗಳನ್ನು ಎಣಿಸಲು ಆರಂಭಿಸುತ್ತೇವೆ. ಅವರ ಹಾದಿಯನ್ನೇ ನಿರೀಕ್ಷಿಸುತ್ತಿರುವ ನಮಗೆ ಮನೆಯ ಬಾಗಿಲ ಮುಂದೆ ಹೆಜ್ಜೆ ಸದ್ದು ಕೇಳಿಸಿದಂತೆ, ಅವರ ಪ್ರೀತಿಯ ಕರೆಗೆ ಓಗೊಡುವಂತೆ ಮನಸ್ಸು ಹಪಹಪಿಸುತ್ತದೆ. ಆ ಕಾತರದ ಘಳಿಗೆಯಲ್ಲಿ ದಿನಗಳನ್ನು ಹೇಗೆ ಕಳೆಯಬೇಕೆಂಬುದೇ ತಿಳಿಯುತ್ತಿಲ್ಲ. ತನ್ನ ಆಪ್ತರನ್ನು ಕಾಣುವ ಇಂತಹ ತೀವ್ರವಾದ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎಂಬುದು ನಿಜ.

ದೂರದ ಊರಿನಿಂದ ಮರಳುತ್ತಿರುವ ಮಗನ ದಾರಿಯನ್ನೇ ನಿರೀಕ್ಷಿಸುತ್ತಿರುವ ಅಮ್ಮನ ಕಣ್ಣಲ್ಲಿ ಮಗನ ಬಾಲ್ಯದ ದಿನಗಳು ಮತ್ತೊಮ್ಮೆ ಜೀವ ಪಡೆಯುತ್ತದೆ. ತನ್ನ ಪತಿಯ ಬರುವಿಕೆಗಾಗಿ ಕಾದು ಕುಳಿತ ಪತ್ನಿ, ತನ್ನ ಪತಿಯ ಸಾನ್ನಿಧ್ಯದಲ್ಲಿ ಅನುಭವಿಸಿದ ಸುಖ, ಅವನ ವಿರಹದಲ್ಲಿ ಮಿಡಿದ ಹೃದಯ ಎಲ್ಲವನ್ನೂ ನೆನೆದು, ಪತಿಯನ್ನು ಸ್ವಾಗತಿಸಲು ಸಜ್ಜಾಗುತ್ತಾಳೆ. ಅದೇ ವೇಳೆ ತನ್ನಿಂದ ದೂರವಾಗಿದ್ದ ಪ್ರಿಯಕರನನ್ನು ಕಣ್ತುಂಬ ಕಾಣಬೇಕೆಂಬ ಹಂಬಲ, ಇಷ್ಟು ದಿನ ದೂರವಾಗಿದ್ದಾಗ ಹೇಳದ ಕೇಳಿಸದ ಪ್ರೀತಿಯ ಮಾತುಗಳನ್ನಾಡಲು ಬಯಸುವ ಆ ಕ್ಷಣ...ಹೀಗೆ ಮಮತೆ, ವಿಶ್ವಾಸ, ಪ್ರೀತಿ ಇವೆಲ್ಲವೂ ನಿರೀಕ್ಷೆಗಳ ರೂಪ ತಳೆದು ದೂರದೂರಿನಿಂದ ಬರುವ ನಮ್ಮವರ ಸ್ವಾಗತಕ್ಕೆ ನಿಂತಿರುತ್ತದೆ. ಇದಕ್ಕೆ ಪ್ರತಿಯಾಗಿ ಅವರೊಂದು ಕಾಣಿಕೆಯನ್ನು ನಮ್ಮ ಕೈಗೆ ನೀಡಿದರೆ....

ಸದ್ಯ, ಈ ಅಪೂರ್ವ ಭಾವಾತ್ಮಕ ಕ್ಷಣಗಳನ್ನು ಬಣ್ಣಿಸಲು ಪದಗಳು ಸಾಕಾಗಲಿಕ್ಕಿಲ್ಲ ಅಂತ ಅನಿಸುತ್ತೆ.

ಯಾತ್ರೆ

ಜೀವನದ ಅರ್ಥವನ್ನರಸಿ
ಕವಲು ದಾರಿಯ ನಾಲ್ಕು ದಿನಗಳ
ಯಾತ್ರೆ ಮುಗಿದಾಗ ಸುಖದ
ಸೊನ್ನೆಯ ಜೊತೆಗೆ ಏಕಾಂಗಿ ನಾನು...

ಕಳೆದ ಬಾಲ್ಯದ ನೆನಪುಗಳು
ಮನದ ಕದ ತಟ್ಟುತಿರಲು
ಮರಳಿ ಬಾರದ ನಿನ್ನೆಗಳಿಗೆ
ವರ್ತಮಾನದೊಳು ಮರುಗಲೆಂತು?

ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ
ಮಧು ಹೀರಿ ಹಾರುವ ದುಂಬಿಯಂತೆ
ಮನದೊಳಗೆ ಹೊಕ್ಕು, ಮುತ್ತನಿಟ್ಟವರು
ಮುದುಡಿದಾಗ ತಿಪ್ಪೆಗೆಸೆದರು ಕಸದಂತೆ

ಕಳೆದ ನೋವಿಗೆ ತೇಪೆಯನು ಹಚ್ಚಿ,
ಸಪ್ತಪದಿ ತುಳಿದಾಗ, ಸಂಸಾರ ಸಾಗರದ
ಅಲೆಗಳಿಗೆ ಮರಳ ದಂಡೆಯಾಗಿ
ಕಣ್ಣೀರ ಒತ್ತಿ, ನಕ್ಕು ಬಿಟ್ಟಿದ್ದೆ ಮೌನವಾಗಿ

ಇಂತು ನನ್ನ ಜೀವನದಿ ಅತಿಥಿಯಾಗಿ ಬಂದವರು,
ಕೆಲ ಕಾಲ ನಕ್ಕು, ಮತ್ತೆ ಮಸಿಯೆರಚಿ
ಬಂದಣಿಗೆಯಂತೆ ನನ್ನ ರಸ ಹೀರಿ ಚಿಗುರುವಾಗ
ಒಣ ವೃಕ್ಷದಂತೆ ನಾ ಧರೆಗುರುಳುತಲಿರುವೆ.

ಸ್ಮಶಾನದತ್ತ...

ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.

ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು.

ಎಷ್ಟಾದರೂ ಅಪ್ಪನಲ್ಲವೇ? ಕಿರಿ ಮಗನಂತೂ ಅತೀವ ಸ್ನೇಹದಿಂದಲೇ ಅಪ್ಪನನ್ನು ನೋಡಿಕೊಳ್ಳುತ್ತಿದ್ದ. ಒಮ್ಮೆ ಅಜ್ಜನಿಗೆ ತನ್ನ ಅವಧಿ ಮುಗಿಯುತ್ತಾ ಬಂತು ಎಂದು ಅನಿಸಿದಾಗ ತನ್ನ ನಾಲ್ಕು ಮಕ್ಕಳನ್ನೂ ಕೂಡಾ ಹತ್ತಿರ ಕರೆದ. ಹಳೆಯ ಮಂಚದ ಮೇಲೆ ಮಲಗಿದ ಮುದಿ ಜೀವದ ಸುತ್ತಲೂ ಮಕ್ಕಳು, ಮೊಮ್ಮಕ್ಕಳು ಹಾಜರಾದರು. ಅಜ್ಜ ಮಾತನಾಡತೊಡಗಿದ. ಮಕ್ಕಳೇ, ನಾನು ಇನ್ನಷ್ಟು ದಿನ ಬದುಕುವೆನೆಂದು ಯಾಕೋ ಅನಿಸುತ್ತಿಲ್ಲ. ನಿಮ್ಮನ್ನೆಲ್ಲಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡು, ನಿಮ್ಮ ಬೇಕು ಬೇಡಗಳಿಗೆ ಅಡ್ಡಿಯಾಗದೆ ಸಲಹಿದ್ದೇನೆ. ಅದರಲ್ಲಿ ನನಗೆ ತೃಪ್ತಿಯೂ ಇದೆ. ಇದೀಗ ನನ್ನ ಉಸಿರು ಇಂದೋ ನಾಳೆಯೋ ನಿಂತು ಹೋಗಬಹುದು. ಅದಕ್ಕಿಂತ ಮೊದಲೇ ನನ್ನ ಸೊತ್ತನ್ನು ಪಾಲು ಮಾಡಬೇಕೆಂದು ಬಯಸಿದ್ದೇನೆ. ಆ ಪೆಟ್ಟಿಗೆಯಲ್ಲಿ ಡಾಕ್ಯುಮೆಂಟ್ ಇದೆ. ನಿಮ್ಮ ನಿಮ್ಮ ಹೆಸರಿರುವ ದಾಖಲೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ ಕೂಡಲೇ ನಾಲ್ವರು ಮಕ್ಕಳು ತಮ್ಮ ತಮ್ಮ ದಾಖಲೆಗಳನ್ನು ಕೈಗೆ ತೆಗೆದುಕೊಂಡರು.

ಎಲ್ಲರ ಮುಖ ಅರಳಿತು. ತಮಗೆ ಸಾಕಷ್ಟು ಸೊತ್ತನ್ನು ಸಮಪಾಲಾಗಿ ನೀಡಿದ್ದಾನೆ. ಯಾರಿಗೂ ತಕರಾರು ಇಲ್ಲ, ಎಲ್ಲರೂ ಫುಲ್ ಖುಷ್. ಇದೆಲ್ಲಾ ಮುಗಿದ ಮೇಲೆ ತನ್ನ ಮಕ್ಕಳೆಲ್ಲರೂ ಒಂದು ದಿನ ತನ್ನೊಂದಿಗೆ ಇರಬೇಕು. ಮೊಮ್ಮಕ್ಕಳ ಆಟವನ್ನು ನೋಡಿ ಆನಂದಿಸಬೇಕು. ಮುದಿ ಅಜ್ಜ ತನ್ನ ಆಶೆಯನ್ನು ತಿಳಿಸಿದ. ಎಲ್ಲರೂ ತಲೆಯಲ್ಲಾಡಿಸಿದರು. ಅಂದು ಮಧ್ಯಾಹ್ನಕ್ಕೆ ಭಾರೀ ಭೋಜನ. ಎಲ್ಲರಿಗೂ ಸಂತೋಷ. ಅಜ್ಜನಿಗೆ ತನ್ನ ಮಕ್ಕಳ ಮೊಮ್ಮಕ್ಕಳ ನಗು ಕಂಡಾಗ ಎನೋ ಸಮಾಧಾನ, ಸಂತಸ.

ಸಂಜೆಯಾಯಿತು. ಅಜ್ಜನಿಗೆ ಮೈ ಕೈಯೆಲ್ಲಾ ನೋವಾಗ ತೊಡಗಿತು. ಮಕ್ಕಳನ್ನು ಕರೆದ. ಅಜ್ಜ ಮಲಗಿದ್ದ ಕೋಣೆಗೆ ಹೋಗಿ ಎಲ್ಲರೂ ಹೊರ ಬಂದರು. ನಾಲ್ಕು ಮಕ್ಕಳೂ ಹತ್ತಿರದ ಕೋಣೆಯಲ್ಲಿ ಚಿಕ್ಕದೊಂದು ಮೀಟಿಂಗ್ ನಡೆಸಿದರು.

ಹಿರಿಯವ ಹೇಳಿದ ಅಪ್ಪನ ಅವಧಿ ಮುಗಿಯುತ್ತಾ ಬಂದಿದೆ. ಈಗಲೇ ಉಸಿರೆಳೆದು ಬಿಟ್ಟರೆ ಸ್ಮಶಾನಕ್ಕೆ ಒಯ್ಯುವವರು ಯಾರು? ಎರಡನೆಯವನೆಂದ ಇದೆಲ್ಲಾ ಜವಾಬ್ದಾರಿ ಚಿಕ್ಕವನಿಗೆ. ಅವನಿಗೆ ಅಪ್ಪಾ ಅಂದ್ರೆ ತುಂಬಾ ಇಷ್ಟ ಅಲ್ವಾ..ಅಪ್ಪನಿಗೂ ಹಾಗೆಯೇ..ಅವನೇ ಎಲ್ಲಾ ಮಾಡಿದ್ರೆ ಒಳ್ಳೆದು ಅಂತ ಹೇಳಿದ. ನೀವೆಲ್ಲಾ ನಿಮ್ಮ ನಿಮ್ಮ ಮನೆಯಲ್ಲಿ ಸುಖವಾಗಿ ಇದ್ದೀರಾ. ನಾನಿಲ್ಲಿ ಈ ಮುದಿಯನೊಂದಿಗೆ ಹೇಗೆ ಕಾಲ ಕಳೆಯುತ್ತಾ ಇದ್ದೆ ಅಂತಾ ನಿಮಗೆ ಗೊತ್ತಾ? ಈವರೆಗೆ ನಾನು ಅಪ್ಪನ ಚಾಕರಿ ಮಾಡಿದ್ದೇನೆ. ಸ್ಮಶಾನಕ್ಕೆ ಸಾಗಿಸುವ ಕಾರ್ಯವನ್ನಾದರೂ ನಿಮಗೆ ಮಾಡಬಾರದಾ?ಎಂದು ಸಿಟ್ಟಿನಿಂದಲೇ ಕೇಳಿದ ಕಿರಿಯವ. ಈ ಮೂವರು ಅಣ್ಣದಿಂದ ನಡುವೆ ಪ್ರೀತಿ ಸುಮ್ಮನೇ ನಿಂತು ಬಿಟ್ಟಳು. ಸದ್ಯ ನಾನು ಮಗಳಾಗಿದ್ದು ಬಚಾವ್!ಇಲ್ಲದಿದ್ದರೆ ಗಂಡು ಮಕ್ಕಳಂತೆ ನಾನು ಕೂಡಾ ಈ ಹೆಣದ ಹೊಣೆಯನ್ನು ಹೊರಬೇಕಾದ ಸ್ಥಿತಿ ಬರುತ್ತಿತ್ತು ಎಂದು ಮನಸ್ಸಲ್ಲೇ ಅಂದು ಕೊಂಡಳು.

ಇವರು ಇಲ್ಲಿ ಮಾತನಾಡುತ್ತಿದ್ದಂತಯೇ ಅಜ್ಜನ ಕೋಣೆಯಿಂದ ಏನೋ ಸದ್ದಾಯಿತು. "ಬುಡ್ಡ ಮರ್ ಗಯಾ" ಅನ್ನೋ ನಿಟ್ಟಿನಲ್ಲಿ ಎಲ್ಲರೂ ಅತ್ತ ಧಾವಿಸಿದರು. ಎಲ್ಲರೂ ನೋಡುತ್ತಿದ್ದರಂತೆ ಅಜ್ಜ ತನ್ನ ವಾಕಿಂಗ್ ಸ್ಟಿಕ್ ಹಿಡಿದು ಕೊಂಡು ಹೊರಟು ನಿಂತಿದ್ದಾರೆ. ಅಪ್ಪಾ ನೀವೆಲ್ಲಿಗೇ? ಮಗಳು ಪ್ರೀತಿ ಗಾಬರಿಯಾಗಿ ಕೇಳಿದಳು.. ನಿಮಗೆ ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ. ಅದಕ್ಕೇ....ನಾನೇ ಸ್ಮಶಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಮುದಿ ಜೀವ ಭಾರವಾದ ಹೆಜ್ಜೆಗಳನ್ನು ಹಾಕಿತು.

(ಗೆಳೆಯರೇ, ಈ ಕಥೆ ಮೂಲ ಮಲಯಾಳಂನಲ್ಲಿದೆ. ಇದನ್ನು ಯಾರು ಬರೆದದ್ದು ಅಂತಾ ಗೊತ್ತಿಲ್ಲ. ಪ್ರಸ್ತುತ ಕಥೆ ಓದಿದಾಗ ಭಾಷಾನುವಾದ ಮಾಡಬೇಕೆಂದೆನಿಸಿತು. ಭಾಷಾನುವಾದವೆಂಬ ಸಾಹಸದ ಮೊದಲ ಹೆಜ್ಜೆಯನ್ನು ಈ ಕಥೆ ಮೂಲಕ ಮುಂದಿರಿಸಿದ್ದೇನೆ. ನಿಮಗೆ ಇದು ಚೆನ್ನಾಗಿದೆ ಎಂದು ಅನಿಸಿದರೆ ಅಥವಾ ತಪ್ಪುಗಳನೇದರೂ ಕಂಡು ಬಂದರೆ ದಯವಿಟ್ಟು ನನಗೆ ತಿಳಿಸಿ.)