ಓ ಗಂಡಸರೇ...ನೀವೆಷ್ಟು ಒಳ್ಳೆಯವರು!
ನೀ ನು ಹುಡುಗ ನಮ್ಮ ಜತೆ ಬರಬಾರದು... ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು "ಒಂದಕ್ಕೆ" ಹೋಗುವಾಗ ಆತ "ನಾನೂ ಬರ್ತೇನೆ"ಎಂದು ರಾಗ ಎಳೆದಿದ್ದ...ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು...ಎಂದು ಒಕ್ಕೊರಲಿನಿಂದ ಹೇಳಿದ್ದೆವು. ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು 'ಹುಡುಗರು'..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್...ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ 'ನೀನು ಹುಡುಗಿ' 'ಅವನು ಹುಡುಗ' ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು. ಪ್ಲಸ್ ಟು ...ಹದಿಹರೆಯ...ಲವ್ ಆಗುವ ಸಾಧ್ಯತೆ ಜಾಸ್ತಿಯೇ..ಹುಡುಗರೂ ನಮಗಿಂತ ಕಮ್ಮಿಯೇನಿಲ್ಲ ಬಿಡಿ. ಒಂದು ಕಾಲದಲ್ಲಿ infatuationಗೆ ಒಳಗಾಗಿ ಸಾವಿರಾರು ಕನಸು ಕಂಡು ಅದು ಏನೆಂ...