ಮಹಾಬಲಿಗೊಂದು ಪತ್ರ
ಪ್ರೀತಿಯ ಮಾವೇಲಿ ಅಲಿಯಾಸ್ ಮಹಾಬಲಿ, ಓಣಂ ಹಬ್ಬದ ಪ್ರಯುಕ್ತ ದೇವರ ಸ್ವಂತ ಊರಿಗೆ ಭೇಟಿ ನೀಡುವ ನಿನಗೆ ಸ್ವಾಗತ. ನಮ್ಮೂರಿಗೆ ಭೇಟಿ ನೀಡುವ ಮುನ್ನ ನಿನಗೆ ಹಲವಾರು ವಿಷಯಗಳ ಬಗ್ಗೆ ಹೇಳಬೇಕಾಗಿದೆ. ಅದಕ್ಕೆ ಈ ಪತ್ರ. ಕಾಸರಗೋಡಿಗೆ ದೀಪಾವಳಿ ಹಬ್ಬದ ವೇಳೆ ಬಲೀಂದ್ರನಾಗಿಯೂ, ಓಣಂ ಹಬ್ಬದಂದು ಮಹಾಬಲಿಯಾಗಿ ಬರುವ ನಿನಗೆ ಗಡಿನಾಡ ಕನ್ನಡಿಗರಂತೆ ಮಲಯಾಳಂ, ಕನ್ನಡ, ತುಳು ಹೀಗೆ ಐದಾರು ಭಾಷೆ ಗೊತ್ತಿರುತ್ತದೆ ಅಲ್ವಾ. ಆದ್ದರಿಂದ ಕನ್ನಡದಲ್ಲಿ ಬರೆದ ಈ ಪತ್ರ ಓದಲು ನಿನಗೆ ಸಮಸ್ಯೆ ಆಗಲ್ಲ ಅಂದುಕೊಂಡಿದ್ದೀನಿ. ಊರಲ್ಲಿ ಸಿಕ್ಕಾಪಟ್ಟೆ ಮಳೆ ಬೇರೆ. ಮಳೆಯೊಂದಿಗೆ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ರಸ್ತೆಯಲ್ಲಿರುವ ಗುಂಡಿಯಲ್ಲೆಲ್ಲಾ ನೀರು ತುಂಬಿ ಪುಟ್ಟ ಕೊಳದಂತಾಗಿದೆ. ಅಲ್ಲೇ ಬೇಕಾದರೆ ಮೀನು ಕೖಷಿ ಕೂಡಾ ಮಾಡಬಹುದು. ಬಸ್ಸಲ್ಲಿ ಪ್ರಯಾಣ ಮಾಡುವಾಗ ಒಂಟೆ ಸವಾರಿ ಅನುಭವ ನಿನಗಾಗಬಹುದು. ಒಂದಷ್ಟು ದಿನ ನೀನು ನಮ್ಮೂರಲ್ಲಿ ಓಡಾಡಿದರೆ ಸಾಕು, ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಕ್ಕಿ, ನಿನ್ನ ಡೊಳ್ಳು ಹೊಟ್ಟೆ ಕರಗಬಹುದು. ಬರುವ ಮುನ್ನ ಯಾವ ಜಿಲ್ಲೆಯಲ್ಲೂ ಬಂದ್ ಆಚರಣೆ ಮಾಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೋ. ಕೋಮುಗಲಭೆ, ರಾಜಕೀಯ ಕೊಲೆಗಳು ಇಲ್ಲಿ ಮಾಮೂಲಿ ಆಗಿ ಬಿಟ್ಟಿವೆ. ಕೆಂಪು, ಹಸಿರು, ಕೇಸರಿ ಧ್ವಜಗಳ ಕೆಳಗೆ ಯಾರ್ಯಾರದೋ ನೆತ್ತರು ಹರಿಯುತ್ತಿದೆ. ಜನರು ರಕ್ತದಾಹಿಗಳಂತೆ ಹೊಡೆದಾಡುತ್ತಿದ್ದಾರೆ. ಯಾವ ಮೂಲೆಯಿಂದ ಗುಂಡು ಹಾರುತ್ತದೋ, ಬ...