ಮಗಳು ಫೋನ್ ಮಾಡಿದ್ಳು...ಇವತ್ತು ಅಪ್ಪಂದಿರ ದಿನ ಅಂತೆ
ಹಲೋ ಪಪ್ಪಾ....ಇವತ್ತು ಅಪ್ಪಂದಿರ ದಿನ...ಹ್ಯಾಪಿ ಫಾದರ್ರ್ಸ್ ಡೇ" ಹೌದೇನಮ್ಮಾ...ಥ್ಯಾಂಕ್ಯೂ...ಅಂತೂ ಅಪ್ಪನಿಗೂ ಒಂದು ದಿನ ಇದೆಯಲ್ಲಾ ಎಂದು ಹೇಳಿದೆ. ಹೇಗಿದ್ದೀರಾ ಪಪ್ಪಾ? ಎಂದು ಕೇಳಿ, ಪಪ್ಪಾ... ಅಮ್ಮನಿಗೆ ಫೋನ್ ಕೊಡು ಎಂದು ಅಂದ್ಳು... ಅಷ್ಟೊತ್ತಿಗೆ ನನ್ನಾಕೆ ನನ್ನ ಬಳಿ ಬಂದು ನಿಂತಿದ್ದಳು. ಫೋನ್ ಆಕೆಯ ಕೈಗಿತ್ತು ನಾನು ಟೀವಿ ಮುಂದೆ ಕೂತೆ. ಅಮ್ಮ ಮಗಳು ಸುಮಾರು ಅರ್ಧ ಗಂಟೆಯವರೆಗೆ ಹರಟುತ್ತಲೇ ಇದ್ದರು. ಹೌದು, ನನ್ನ ಪುಟ್ಟಿ ಚಿಕ್ಕವಳಿರುವಾಗ ಅವಳಿಗೆ ಎಲ್ಲವೂ ನಾನೇ ಆಗಿದ್ದೆ. ನನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಲ್ಲ. ಪಪ್ಪಾ..ಪಪ್ಪಾ ಎನ್ನುತ್ತಾ ನನ್ನ ಕಿರು ಬೆರಳು ಹಿಡಿದು ನಡೆದ ಮಗಳು ಈಗ ದೊಡ್ಡವಳಾಗಿದ್ದಾಳೆ. ಹೆಣ್ಮಕ್ಕಳು ಎಷ್ಟು ಬೇಗ ಬೆಳೆದು ಬಿಡ್ತಾರೆ ಅಲ್ವಾ? ನನ್ನ ಚಪ್ಪಲಿಯೊಳಗೆ ಅವಳ ಪುಟ್ಟ ಪಾದಗಳನ್ನು ತುರುಕಿ ಹೆಜ್ಜೆಯಿಡುತ್ತಾ, ನನ್ನ ಶರ್ಟ್ ಹಾಕಿ ದೊಗಳೆ ಶರ್ಟ್್ನೊಳಗೆ ನಿಂತು "ನೋಡು ಪಪ್ಪಾ ನಿಮ್ಮ ತರಾನೇ ಕಾಣ್ತಾ ಇಲ್ವಾ?" ಎಂದು ಕೇಳುತ್ತಿದ್ದ ಮಗಳು....ನಿದ್ದೆ ಮಾಡುವಾಗಲೂ ಅಷ್ಟೇ...ನನ್ನ ಪಕ್ಕದಲ್ಲೇ ಮಲಗಿ ಒಮ್ಮೊಮ್ಮೆ ನನ್ನ ಹೊಟ್ಟೆ ಮೇಲೆ ಮಲಗಿ ಉಚ್ಚೆ ಹೊಯ್ದು ಒದ್ದೆಯಾಗಿಸುತ್ತಿದ್ದ ನನ್ನ ಪುಟ್ಟಿಗೆ ಈಗ ಮದುವೆ ವಯಸ್ಸು. ಚಿಕ್ಕವಳಿದ್ದಾಗ ಅವಳು ಕೇಳಿದ್ದನ್ನೆಲ್ಲಾ ನಾನು ಕೊಡಿಸುತ್ತಿದ್ದೆ. ಹಾಗಂತ ಅವಳು ಪಪ್ಪಾ...ನನಗೆ ಅದು ಕೊಡಿಸು, ಇದು ಕೊಡಿಸು ಎಂದು ಹಠ ಹಿಡಿದವಳ...