ನಾನೆಂಬ ಸ್ತ್ರೀ
ನನ್ನೊಳಗಿನ ಅಗ್ನಿಕುಂಡದಲ್ಲುರಿದು
ಆಹುತಿಯಾಗಲಾರೆ
ಜ್ವಲಂತ ವಿಚಾರಗಳನ್ನೆಲ್ಲಾ
ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ
ಜೋಡಿಸಿಟ್ಟಿದ್ದೀನಿ
ಬಿಕ್ಕಳಿಸುತ್ತಾ ವಿಕಸಿತವಾಗುವ
ಮಣ್ಣಲ್ಲಿ
ನಿದಿರೆಗೆ ಜಾರುವಾಗಲೂ
ಬೆಳಕೆಂಬ ಅಮ್ಮ
ನಂದಾದೀಪವಾಗಿ ಉರಿಯುತಿರಲು
ಹುತ್ತರಿ ತೆನೆ ಗದ್ದೆಗಳ
ಪುಣ್ಯ ಭೂಮಿಯಲಿ
ಬೆಳೆಯುವ ಕ್ರಾಂತಿ ಬೀಜವನು
ಅವಳು ಬಿತ್ತುತ್ತಿದ್ದಾಳೆ
ನೀನಿನ್ನು ಮೈಕೊಡವಿ
ಎದ್ದು ಬಾ
ಅಂಧಕಾರದ ಆತ್ಮವೊಂದು ಕರೆಯುತ್ತಿದೆ
ಬಂಧನದ ಸರಪಳಿ
ನೋವಿನ ವೇಷಗಳನ್ನು ಕಿತ್ತೆಸೆದು
ಅವಳು ಮುಗುಳ್ನಕ್ಕಳು
ದೀರ್ಘ ಶಾಂತ ನಿಗೂಢ
ಜೋಕಾಲಿಯಲಿ ನಿದ್ರಿಸಿದ್ದ
ಬೆಳಗು ಕಿರಣಗಳು ಎಚ್ಚೆತ್ತು
ಮೌನಿ ಮುಕ್ತಿ ಕುಟೀರದ
ನೆತ್ತಿಯಲ್ಲುರಿದು ಕರಗಿ
ಅಗ್ನಿ ಜ್ವಾಲೆಯಾಗಿ
ಧಗಧಗಿಸಿದವು...
(ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ)
(ಚಿತ್ರ ಕೃಪೆ: ಕೆಪಿಎನ್)
Saturday, December 12, 2015
Thursday, May 14, 2015
ಮರಳಲ್ಲಿ ಬರೆದ ಸಾಲುಗಳು
ನೀನು ಅಂತರಾತ್ಮದ ಕರೆಗೆ
ಓಗೊಟ್ಟು ಹೊರ ನಡೆದಾಗ
ಕಡಲತಡಿಯಲ್ಲಿ ಏಕಾಂತದ ನಿಟ್ಟುಸಿರು
ಪ್ರೀತಿಯ ಆಲಿಂಗನವ ಬಯಸಿದ
ಎಳೆ ಮೈಗೆ ಉಪ್ಪು ನೀರಿನ ಸಿಂಚನ
ತನ್ನೊಳಗಿರುವ ಚಿಪ್ಪಿನೆಡೆಯಲಿ
ಅಡಗಿ ಕುಳಿತಿರುವ ಮುತ್ತು
ಹೊರಬರಲು ಕಾಯುವ ವೇಳೆ
ಏಕಾಂತದಲೊಂದು ಬಯಕೆ
ನಿನ್ನೊಡಲಿಗೆ ಬರಲೆ?
ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ
ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು
ಅಮ್ಮನಂತಿರುವ ಕಡಲು
ಬೇಡವೆನ್ನುವುದಿಲ್ಲ ನನ್ನನ್ನೂ
ಈ ಬಂಧನವ ಕಳಚಿ
ಸಾಧಿಸುವುದೇನು ಬಂತು?
ಒಂದೊಂದು ಹೆಜ್ಜೆಯಲೂ
ಕಂಬನಿಯ ಕತೆಗಳ ಅಳಿದುಳಿದ ಸಾಲು
ಹರಿದು ಹಾಕಿದ ಪುಟಗಳಲಿ
ನೆನಪುಗಳ ಕುರುಹು
ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು
ಪ್ರೀತಿಯನು ಚಿಮ್ಮಿಸಿ
ಮುಳುಗಿ ಹೋಗುತಿದೆ
ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ
ಅಲೆಗಳಲಿ ಒಂದಾಗುತ್ತಾ ಮಾಯವಾದಾಗ
ಏಕಾಂತದ ಕೋಟೆಯಲಿ
ನಾನು ಸ್ವತಂತ್ರಳಾಗುತ್ತಿದ್ದೆ
ಓಗೊಟ್ಟು ಹೊರ ನಡೆದಾಗ
ಕಡಲತಡಿಯಲ್ಲಿ ಏಕಾಂತದ ನಿಟ್ಟುಸಿರು
ಪ್ರೀತಿಯ ಆಲಿಂಗನವ ಬಯಸಿದ
ಎಳೆ ಮೈಗೆ ಉಪ್ಪು ನೀರಿನ ಸಿಂಚನ
ತನ್ನೊಳಗಿರುವ ಚಿಪ್ಪಿನೆಡೆಯಲಿ
ಅಡಗಿ ಕುಳಿತಿರುವ ಮುತ್ತು
ಹೊರಬರಲು ಕಾಯುವ ವೇಳೆ
ಏಕಾಂತದಲೊಂದು ಬಯಕೆ
ನಿನ್ನೊಡಲಿಗೆ ಬರಲೆ?
ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ
ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು
ಅಮ್ಮನಂತಿರುವ ಕಡಲು
ಬೇಡವೆನ್ನುವುದಿಲ್ಲ ನನ್ನನ್ನೂ
ಈ ಬಂಧನವ ಕಳಚಿ
ಸಾಧಿಸುವುದೇನು ಬಂತು?
ಒಂದೊಂದು ಹೆಜ್ಜೆಯಲೂ
ಕಂಬನಿಯ ಕತೆಗಳ ಅಳಿದುಳಿದ ಸಾಲು
ಹರಿದು ಹಾಕಿದ ಪುಟಗಳಲಿ
ನೆನಪುಗಳ ಕುರುಹು
ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು
ಪ್ರೀತಿಯನು ಚಿಮ್ಮಿಸಿ
ಮುಳುಗಿ ಹೋಗುತಿದೆ
ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ
ಅಲೆಗಳಲಿ ಒಂದಾಗುತ್ತಾ ಮಾಯವಾದಾಗ
ಏಕಾಂತದ ಕೋಟೆಯಲಿ
ನಾನು ಸ್ವತಂತ್ರಳಾಗುತ್ತಿದ್ದೆ
Wednesday, March 11, 2015
ಹಸಿವು
ಹಸಿವಿನ ಸುಖ, ಪ್ರಣಯದ ನೋವು
ಅಸ್ತಮಿಸಿದ ಹೊತ್ತು
ಕತ್ತಲೆಯಲಿ ಎಲ್ಲವನು ನುಂಗಿ ಬದುಕಿದ ನಾನು
ವಿಷಯ ದಾರಿದ್ರ್ಯದ ಮೂಟೆಯನ್ನು ಹೊತ್ತು
ಭಿಕ್ಷಾಟನೆಗೆ ಹೊರಟು ನಿಂತಿದ್ದೇನೆ
ನನಗೇನೂ ಕೊಡಲು ಬಯಸದವರು
ನನ್ನಿಂದ ಪಡೆಯಲಿಚ್ಛಿಸದವರು
ಬರೆದಿಟ್ಟ ಲೆಕ್ಕ ಪುಸ್ತಕದಲ್ಲಿ
ನನ್ನ ಹಸಿವಿನ ಲೆಕ್ಕ ಸೊನ್ನೆಯಾಗಿಯೇ ಉಳಿದಿತ್ತು
ಎಲ್ಲವನ್ನೂ ಕೂಡಿಸಿ, ಕಳೆದು
ಗುಣಿಸಿ, ಭಾಗಿಸಿದ ದೇಹಗಳು
ನನ್ನ ಹಾದು ಹೋದವು
ರಕ್ತವೇ ಇಲ್ಲದ ಮೂಳೆ ಮಾಂಸಗಳ ತಡಿಕೆ
ನೋಡಿ ನನಗೆ ಅಚ್ಚರಿ!
ಅವರ ಹೆಜ್ಜೆ ಬೆನ್ನತ್ತಿ ಮುಂದೆ ನಡೆದೆ
ನನಗೆ ಗೊತ್ತಿಲ್ಲದ, ನನ್ನನ್ನು ಅರಿಯದ ದಾರಿಯಲ್ಲಿ
ಅಪರಿಚಿತ ಮುಖಗಳೆಡೆ ನಾನು ಒಬ್ಬಂಟಿ
ನಾನಾರೆಂದು ಕೇಳಲು
ಯಾರೂ ಇಲ್ಲದ ಬೀದಿಯಲಿ
ಎಲ್ಲರೂ ನಾನಾರೆಂದು ಪಿಸುಗುಡುವ ಸದ್ದು
ಗಹಗಹಿಸಿ ನಕ್ಕು ನನ್ನ ಸೋಕಿದ
ಬರಡು ಭೂಮಿಯ ಉಷ್ಣ ಗಾಳಿ
ದೇಹವನು ಗೀರಿ ರಕ್ತ ಹರಿಸಿದಾಗ
ಆ ರಕ್ತಕ್ಕೆ ಗಂಧವಿರಲಿಲ್ಲ..
ಹೀಗೂ ಇರಬಹುದೆ?
ದೇಹ ದಣಿದಿತ್ತು,
ನಿದ್ರಿಸಲು ರಾತ್ರಿಯನ್ನರಸಿದೆ
ಬೆಳಕಿನ ಕಿರಣಗಳು ವಕ್ರೀಭವನಗೊಂಡ
ದಾರಿಗಳಲ್ಲಿ ಕಪ್ಪು ಬೆಳಕಿಗೆ ಜಾಗವಿರಲಿಲ್ಲ
ನೆರಳು ಬಯಸಿ, ಓಡುವ ಮರಗಳ ಹಿಂದೆ
ಓಡಿ ಹೋಗುತ್ತಿರುವ ನೆರಳುಗಳ ಹಿಂದೆ
ಓಡುತ್ತಾ, ಓಡಲಾರದೆ ಬಿದ್ದು ಬಿಟ್ಟೆ!
ಕುಸಿದು ಬಿದ್ದ ನನ್ನ ದೇಹ
ಆ ಭೂಮಿಗೂ ಬೇಡವಾಗಿತ್ತು
ಅಸ್ತಿತ್ವವಿಲ್ಲದ ನಾನು ಭಾರವಾದ ದೇಹ ಹೊತ್ತು
ಮತ್ತೆ ಹೊರಟು ನಿಂತಿದ್ದೇನೆ
ಗಮ್ಯದ ಅರಿವಿಲ್ಲದೆ..ದೂರ..ದೂರ
Subscribe to:
Posts (Atom)