ಹಸಿವು


ಹಸಿವಿನ ಸುಖ, ಪ್ರಣಯದ ನೋವು

ಅಸ್ತಮಿಸಿದ ಹೊತ್ತು

ಕತ್ತಲೆಯಲಿ ಎಲ್ಲವನು ನುಂಗಿ ಬದುಕಿದ ನಾನು

ವಿಷಯ ದಾರಿದ್ರ್ಯದ ಮೂಟೆಯನ್ನು ಹೊತ್ತು

ಭಿಕ್ಷಾಟನೆಗೆ ಹೊರಟು ನಿಂತಿದ್ದೇನೆ



ನನಗೇನೂ ಕೊಡಲು ಬಯಸದವರು

ನನ್ನಿಂದ ಪಡೆಯಲಿಚ್ಛಿಸದವರು

ಬರೆದಿಟ್ಟ ಲೆಕ್ಕ ಪುಸ್ತಕದಲ್ಲಿ

ನನ್ನ ಹಸಿವಿನ ಲೆಕ್ಕ ಸೊನ್ನೆಯಾಗಿಯೇ ಉಳಿದಿತ್ತು



ಎಲ್ಲವನ್ನೂ ಕೂಡಿಸಿ, ಕಳೆದು

ಗುಣಿಸಿ, ಭಾಗಿಸಿದ ದೇಹಗಳು

ನನ್ನ ಹಾದು ಹೋದವು

ರಕ್ತವೇ ಇಲ್ಲದ ಮೂಳೆ ಮಾಂಸಗಳ ತಡಿಕೆ

ನೋಡಿ ನನಗೆ ಅಚ್ಚರಿ!

ಅವರ ಹೆಜ್ಜೆ ಬೆನ್ನತ್ತಿ ಮುಂದೆ ನಡೆದೆ



ನನಗೆ ಗೊತ್ತಿಲ್ಲದ, ನನ್ನನ್ನು ಅರಿಯದ ದಾರಿಯಲ್ಲಿ
ಅಪರಿಚಿತ ಮುಖಗಳೆಡೆ ನಾನು ಒಬ್ಬಂಟಿ

ನಾನಾರೆಂದು ಕೇಳಲು

ಯಾರೂ ಇಲ್ಲದ ಬೀದಿಯಲಿ

ಎಲ್ಲರೂ ನಾನಾರೆಂದು ಪಿಸುಗುಡುವ ಸದ್ದು



ಗಹಗಹಿಸಿ ನಕ್ಕು ನನ್ನ ಸೋಕಿದ

ಬರಡು ಭೂಮಿಯ ಉಷ್ಣ ಗಾಳಿ

ದೇಹವನು ಗೀರಿ ರಕ್ತ ಹರಿಸಿದಾಗ

ಆ ರಕ್ತಕ್ಕೆ ಗಂಧವಿರಲಿಲ್ಲ..

ಹೀಗೂ ಇರಬಹುದೆ?



ದೇಹ ದಣಿದಿತ್ತು,

ನಿದ್ರಿಸಲು ರಾತ್ರಿಯನ್ನರಸಿದೆ

ಬೆಳಕಿನ ಕಿರಣಗಳು ವಕ್ರೀಭವನಗೊಂಡ

ದಾರಿಗಳಲ್ಲಿ ಕಪ್ಪು ಬೆಳಕಿಗೆ ಜಾಗವಿರಲಿಲ್ಲ



ನೆರಳು ಬಯಸಿ, ಓಡುವ ಮರಗಳ ಹಿಂದೆ

ಓಡಿ ಹೋಗುತ್ತಿರುವ ನೆರಳುಗಳ ಹಿಂದೆ

ಓಡುತ್ತಾ, ಓಡಲಾರದೆ ಬಿದ್ದು ಬಿಟ್ಟೆ!



ಕುಸಿದು ಬಿದ್ದ ನನ್ನ ದೇಹ

ಆ ಭೂಮಿಗೂ ಬೇಡವಾಗಿತ್ತು

ಅಸ್ತಿತ್ವವಿಲ್ಲದ ನಾನು ಭಾರವಾದ ದೇಹ ಹೊತ್ತು

ಮತ್ತೆ ಹೊರಟು ನಿಂತಿದ್ದೇನೆ

ಗಮ್ಯದ ಅರಿವಿಲ್ಲದೆ..ದೂರ..ದೂರ

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ