Thursday, January 15, 2009

ನನ್ನ ಗ್ರಾಮ

ನಿತ್ಯ ಹಚ್ಚ ಹಸುರಾಗಿ
ಕಂಗೊಳಿಸುವುದೀ ನನ್ನೂರು
ತೆನೆ ತುಂಬಿ ನಿಂತ ಗದ್ದೆ,
ಬಾಳೆ ತೆಂಗು ಕಂಗಿನ ತೋಟ
ಇಕ್ಕೆಲಗಳಲಿ,
ಸುತ್ತಲೂ ಹಬ್ಬಿದ ಬೇಲಿ ಹೂಗಳು..
ಇದು ನನ್ನ ಗ್ರಾಮ...ಆಗಿತ್ತು!

ದುಡಿದ ರೈತನಿಗೆ ಬೆಳೆಯು ದಕ್ಕದಿರಲು
ಹಚ್ಚ ಹೊಲದಲ್ಲಿ ಕೆಂಬಾವುಟ
ಹಾರಿಸಿದ್ದರಂತೆ ನಮ್ಮ ಹಿರಿಯರು,
ಅಮ್ಮ ಹೇಳಿದ ನನ್ನೂರಿನ ವಿಪ್ಲವದ ನೆನಪು...
ಹೋರಾಟ ಮುಂದುವರಿಯಲು ಹೀಗೆ
ದಣಿಯು ದಣಿದಿದ್ದ, ಬಡವ ಗೆದ್ದಿದ್ದ

ನನ್ನೂರಿನ ಕೆಂಪು ವಿಪ್ಲವವು
ಸಮಾನತೆಗೆ ಉಸಿರು
ಭೂಮಿ ಹಸುರಾಗಲು ಕೊಂಚ
ರಕ್ತವೂ ಚಿಮ್ಮಿತ್ತು, ಅಪ್ಪ ಹೇಳಿದ್ದ
ಶಾಂತಿ ನೆಲೆಸಿದ ಈ ಸಮರದ ಜೊತೆಗೆ
ಹುತಾತ್ಮರ ಮಂಟಪವೂ ಎದ್ದು ನಿಂತಿತ್ತು.

ಇಂದು ಬರಡಾಗಿದೆ ನನ್ನ ಸುಂದರ ಗ್ರಾಮ,
ಅಲ್ಲಲ್ಲಿ ಎರಡಂತಸ್ತಿನ ಮಹಲು,ಗೋಪುರ
ಹಸಿರನುಳಿಸಲು ಹೋರಾಡಿದ ಜನರೆಲ್ಲಿ?
ಅವರೆಂದೋ ಮಣ್ಣು ಪಾಲಾಗಿ,
ಅವರ ಮಕ್ಕಳು ಲಾರಿಯಲಿ ತಂದ ಮಣ್ಣನು
ಬರಡು ಭೂಮಿಗೆ ಸುರಿದು, ಕೆಂಪು ಇಟ್ಟಿಗೆಯಲಿ
ಗೋಡೆ ಕಟ್ಟುತ್ತಿದ್ದಾರೆ...

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ! ನಿಮಗೂ ಏನೂ ಅರ್ಥವಾಗಿಲ್ಲವೇ? ಹೇಳ್ತೇನೆ ಕೇಳಿ..

ದೂರದ ಊರಿನಿಂದ ಸ್ವಂತ ಮನೆಗೆ ಹಿಂತಿರುಗುವಾಗ ಯಾರಾದರೂ ಬರಿ ಕೈಯಲ್ಲಿ ಹೋಗುತ್ತಾರೆಯೇ? ಇಲ್ಲವಲ್ಲಾ.. ಕನಿಷ್ಠ ಪಕ್ಷ ಮನೆಯವರಿಗೆ ಏನಾದರೂ ವಸ್ತುಗಳನ್ನು ಕೊಂಡುಕೊಳ್ಳುವುದು ವಾಡಿಕೆ. ನಾವು ಕೊಟ್ಟ ವಸ್ತು ಅದೆಷ್ಟೇ ಚಿಕ್ಕದಾಗಿರಲಿ..ಅದನ್ನು ನಮ್ಮ ಆಪ್ತರಿಗೆ ನೀಡುವಾಗ ಅವರ ಮುಖದಲ್ಲಿ ಕಾಣುವ ಸಂತಸ ಅದನ್ನು ನೋಡಿಯೇ ನಮ್ಮ ಮನ ತುಂಬಿ ಬರುತ್ತದೆ. ಅಲ್ಲವೇ?

ನಾವು ಚಿಕ್ಕವರಿರುವಾಗ (ನಮ್ಮ ಮನೆಯ ಸುತ್ತ ಮುತ್ತಲೂ ಹೆಚ್ಚಾಗಿ ಗಲ್ಫ್ ಉದ್ಯೋಗಿಗಳ ಮನೆಯಿದೆ) ಪಕ್ಕದ ಮನೆಯವರು ಮಗ ಅಥವಾ ಗಂಡ ಊರಿಗೆ ಬಂದಿದ್ದಾನೆ ಆತ ಬರುವಾಗ ಇದನ್ನೆಲ್ಲಾ ತಂದಿದ್ದಾನೆ ಎಂದು ದೊಡ್ಡ ಪಟ್ಟಿಯೊಂದನ್ನೇ ನಮ್ಮೆದುರಿಡುತ್ತಿದ್ದರು. ಅವರೇನೂ ಹೇಳದಿದ್ದರೂ, ನಿಮ್ಮವರು ಊರಿಗೆ ಬರುವಾಗ ಏನೆಲ್ಲಾ ತಂದಿದ್ದಾರೆ? ಎಂದು ಕೇಳುವುದು ಕೂಡಾ ಇಲ್ಲಿ ಸರ್ವ ಸಾಮಾನ್ಯವಾಗಿತ್ತು. ಇದು ಮಾತ್ರವಲ್ಲದೆ ಯಾರಾದರೂ ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದನ್ನು ಹೇಳಲು ಯಾರಿಗೆ ತಾನೆ ಹೆಮ್ಮೆ ಇರುವುದಿಲ್ಲ?

ಮೊದಮೊದಲು ಮಂಗಳೂರು, ಬೆಂಗಳೂರು, ಮದ್ರಾಸ್ ದೆಹಲಿ ಅಂತಾ ಗರ್ವದಲ್ಲಿ ಹೇಳುತ್ತಿದ್ದರೂ ಇದೀಗ ಎಲ್ಲರೂ ಖತಾರ್, ಕುವೈತ್, ಅಮೆರಿಕ ಎಂದು ಹೇಳುವುದಕ್ಕೆ ಹೆಮ್ಮೆ ಪಡುತ್ತಾರೆ. ಯಾಕೆಂದರೆ ನಮಗೆಲ್ಲರಿಗೂ ಸ್ವದೇಶಕ್ಕಿಂತ ವಿದೇಶ ಪ್ರೀತಿ ಹೆಚ್ಚು ಎಂದೇ ಹೇಳಬಹುದು. ನಮ್ಮೂರಿಗೆ ಸಂಬಂಧಿಸಿದಂತೆ ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳಿಗೇ ಡಿಮ್ಯಾಂಡು. ವರಾನ್ವೇಷಣಾ ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಹುಡುಗ ನಮ್ಮೂರಲ್ಲಿ ಅಥವಾ ಪಕ್ಕದ ಊರಲ್ಲೇ ಇರಬಹುದು. ಆದರೆ ಕಡಿಮೆ ವಿದ್ಯಾಭ್ಯಾಸ ಗಳಿಸಿದ್ದರೂ ಗಲ್ಫ್‌ನಲ್ಲಿ ದುಡಿಯುತ್ತಾನೆ ಎಂದು ಕೇಳಿದರೆ ಸಾಕು ಕನ್ಯಾಪಿತೃಗಳು ಬೇಗನೆ ಒಪ್ಪಿಕೊಳ್ಳುತ್ತಾರೆ. ಅದೇ ವೇಳೆ "ಮರಿಮೋನ್ ಅಂಞ ದೂರೆ..ಗಲ್ಫಿಲಾ" (ಅಳಿಯ ತುಂಬಾ ದೂರದ ಊರಾದ ಗಲ್ಫ್‌ನಲ್ಲಿದ್ದಾನೆ) ಎಂದು ಅತ್ತೆ ಮಾವಂದಿರು ಎದೆ ನೆಟ್ಟಗಾಗಿಸಿ ಹೇಳುತ್ತಾರೆ. ಯಾಕೆಂದರೆ ಸ್ವದೇಶದಲ್ಲಿನ ಸಂಪಾದನೆಗಿಂತ ವಿದೇಶದಲ್ಲಿನ ಸಂಪಾದನೆಗೇ ಹೆಚ್ಚು ಬೆಲೆಯಲ್ಲವೆ? ತನ್ನ ಮಗಳನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಡಲು ಯಾವ ಮಾತಾಪಿತರು ತಾನೇ ಆಗ್ರಹಿಸುವುದಿಲ್ಲ? ಕೆಲವೊಮ್ಮೆ ಆತ ಗಲ್ಪ್‌ನಲ್ಲಿ ದುಡಿದು ಬಂದು ಊರಲ್ಲೇ ನೆಲೆಸಿದ್ದರೂ ಈ ಮೊದಲು ಗಲ್ಫ್‌ನಲ್ಲಿದ್ದೆ ಎಂದು ಹೇಳುವುದೂ ಹೆಮ್ಮೆಯೇ..ಹೀಗೆ ಸಾಗುತ್ತದೆ ಗಲ್ಪ್ ಪುರಾಣ...

ಇನ್ನು, ದೂರದ ಊರಿನ ಉಡುಗೊರೆಯ ಬಗ್ಗೆ ಹೇಳಲೇ ಬೇಕಲ್ವಾ? ಇದು ನನ್ನ ಮಗ, ಅಪ್ಪ, ಅಣ್ಣ, ಪ್ರಿಯಕರ ಕೊಡಿಸಿದ್ದು ಎಂದು ಹೇಳಲೂ ಹೆಮ್ಮೆ ಅನಿಸುವುದಿಲ್ವಾ? ನಿಜ ಹೇಳಲಾ.. ನನಗಂತೂ ಹೆಮ್ಮೆಯಿದೆ. ನಾನು ಪ್ರೈಮರಿ ಸ್ಕೂಲಿಗೆ ಹೋಗುತ್ತಿದ್ದ ವೇಳೆ ನನ್ನಣ್ಣ ಬೆಂಗ್ಳೂರಿನ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ. ಆವಾಗ ಅಣ್ಣ ನನಗೊಂದು ಜೀನ್ಸ್ ಶರ್ಟ್ ಕೊಡಿಸಿದ್ದ. ಅದೇನೋ ಸೈಜ್ ತುಂಬಾನೇ ದೊಡ್ಡದಾಗಿತ್ತು. ಅದನ್ನು ಹಾಕಿಕೊಂಡು ಶಾಲೆಗೆ ಹೋಗಬೇಡ ಎಂದು ಅಮ್ಮ ಹೇಳಿದ್ದರೂ, ಅದನ್ನು ಲೆಕ್ಕಿಸದೆಯೇ ನಾನದನ್ನು ಹಾಕಿಕೊಂಡು ಶಾಲೆಗೆ ಹೋಗಿದ್ದೆ. ದೊಡ್ಡ ಗಾತ್ರದ ಆ ಶರ್ಟ್ ಕಂಡು ಶಾಲೆಯಲ್ಲಿ ಇದೇನು ಅಣ್ಣನ ಶರ್ಟ್ ಹಾಕಿಕೊಂಡು ಬಂದಿದ್ದೀಯಾ? ಎಂದು ಎಲ್ಲರೂ ನಕ್ಕಿದ್ದರು. ಆದರೂ "ಇದು ನನ್ನ ಅಣ್ಣ ಬೆಂಗ್ಳೂರಿನಿಂದ ತಂದ ಶರ್ಟು, 'ಬೆಂಗ್ಳೂರಿನಿಂದ' ಅಂತ "ಇನ್ನೊಮ್ಮೆ ಒತ್ತಿ ಹೇಳಿದ್ದೆ. ಅಂದು ಬೆಂಗ್ಳೂರಿನಿಂದ ಅಣ್ಣ ತಂದಂತಹ ದೈತ್ಯ ಶರ್ಟ್ ಧರಿಸಿ ನಾನೂ ಕೂಡಾ ಜಂಭದಿಂದ ಉಬ್ಬಿ ಹೋಗಿದ್ದೆ. ಆದರೆ ಈಗ ನಾನು ಬೆಂಗ್ಳೂರಲ್ಲೇ ಇದ್ದುಕೊಂಡು ಬಾಲ್ಯದ ನನ್ನ "ಬೆಂಗ್ಳೂರು ಮಹಿಮೆ"ಯನ್ನು ನೆನೆಪಿಸಿಕೊಳ್ಳುವಾಗ ನಗು ಬರುತ್ತಿದೆ.

ಅಂದ ಹಾಗೇ ನಾವು ಕೂಡಾ ರಜೆಯಲ್ಲಿ ಊರಿಗೆ ಮರಳುವಾಗ ಏನೇನು ತೆಗೆದುಕೊಂಡು ಹೋಗಲಿ? ಯಾರ್ಯಾರಿಗೆ ಏನೇನು ಕೊಡಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕೆಲವೊಮ್ಮೆ ತಲೆ ತಿನ್ನುವ ಸನ್ನಿವೇಶಗಳೂ ಒದಗಿಬರುವುದಿದೆ. ಯಾಕೆಂದರೆ ನಾವು ನೀಡಿದಂತಹ ಅಥವಾ ನೀಡುವಂತಹ ಆ ಉಡುಗೊರೆಗಳು ನಮ್ಮ ಸಂಬಂಧದ ಪ್ರೀತಿಯ ಪ್ರತೀಕಗಳು. ಅದನ್ನು ನೀಡುವಾಗ ಅಥವಾ ಪಡೆಯುವಾಗ ಅನುಭವಿಸುವ ಸಂತೋಷವಿದೆಯಲ್ಲಾ ಅದನ್ನು ವರ್ಣಿಸಲಸಾಧ್ಯ. ಅವರವರ ಪ್ರೀತಿಗೆ, ಸಂಬಂಧಕ್ಕೆ, ಭಾವನೆಗಳಿಗೆ ತಕ್ಕಂತೆ ಆ ಉಡುಗೊರೆಗಳು ಪ್ರತಿಯೊಬ್ಬನ ಮನದಲ್ಲಿಯೂ ಸ್ಥಾನವನ್ನು ಗಳಿಸುತ್ತವೆ ಎಂದರೆ ತಪ್ಪಾಗಲಾರದು.

ಅಂತೂ ಒಟ್ಟಿನಲ್ಲಿ ದೂರದ ಊರಿನಿಂದ ನಮ್ಮ ಆಪ್ತರು ಊರಿಗೆ ಬರುತ್ತಿದ್ದಾರೆ ಎಂದ ಕೂಡಲೇ ದಿನಗಳನ್ನು ಎಣಿಸಲು ಆರಂಭಿಸುತ್ತೇವೆ. ಅವರ ಹಾದಿಯನ್ನೇ ನಿರೀಕ್ಷಿಸುತ್ತಿರುವ ನಮಗೆ ಮನೆಯ ಬಾಗಿಲ ಮುಂದೆ ಹೆಜ್ಜೆ ಸದ್ದು ಕೇಳಿಸಿದಂತೆ, ಅವರ ಪ್ರೀತಿಯ ಕರೆಗೆ ಓಗೊಡುವಂತೆ ಮನಸ್ಸು ಹಪಹಪಿಸುತ್ತದೆ. ಆ ಕಾತರದ ಘಳಿಗೆಯಲ್ಲಿ ದಿನಗಳನ್ನು ಹೇಗೆ ಕಳೆಯಬೇಕೆಂಬುದೇ ತಿಳಿಯುತ್ತಿಲ್ಲ. ತನ್ನ ಆಪ್ತರನ್ನು ಕಾಣುವ ಇಂತಹ ತೀವ್ರವಾದ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎಂಬುದು ನಿಜ.

ದೂರದ ಊರಿನಿಂದ ಮರಳುತ್ತಿರುವ ಮಗನ ದಾರಿಯನ್ನೇ ನಿರೀಕ್ಷಿಸುತ್ತಿರುವ ಅಮ್ಮನ ಕಣ್ಣಲ್ಲಿ ಮಗನ ಬಾಲ್ಯದ ದಿನಗಳು ಮತ್ತೊಮ್ಮೆ ಜೀವ ಪಡೆಯುತ್ತದೆ. ತನ್ನ ಪತಿಯ ಬರುವಿಕೆಗಾಗಿ ಕಾದು ಕುಳಿತ ಪತ್ನಿ, ತನ್ನ ಪತಿಯ ಸಾನ್ನಿಧ್ಯದಲ್ಲಿ ಅನುಭವಿಸಿದ ಸುಖ, ಅವನ ವಿರಹದಲ್ಲಿ ಮಿಡಿದ ಹೃದಯ ಎಲ್ಲವನ್ನೂ ನೆನೆದು, ಪತಿಯನ್ನು ಸ್ವಾಗತಿಸಲು ಸಜ್ಜಾಗುತ್ತಾಳೆ. ಅದೇ ವೇಳೆ ತನ್ನಿಂದ ದೂರವಾಗಿದ್ದ ಪ್ರಿಯಕರನನ್ನು ಕಣ್ತುಂಬ ಕಾಣಬೇಕೆಂಬ ಹಂಬಲ, ಇಷ್ಟು ದಿನ ದೂರವಾಗಿದ್ದಾಗ ಹೇಳದ ಕೇಳಿಸದ ಪ್ರೀತಿಯ ಮಾತುಗಳನ್ನಾಡಲು ಬಯಸುವ ಆ ಕ್ಷಣ...ಹೀಗೆ ಮಮತೆ, ವಿಶ್ವಾಸ, ಪ್ರೀತಿ ಇವೆಲ್ಲವೂ ನಿರೀಕ್ಷೆಗಳ ರೂಪ ತಳೆದು ದೂರದೂರಿನಿಂದ ಬರುವ ನಮ್ಮವರ ಸ್ವಾಗತಕ್ಕೆ ನಿಂತಿರುತ್ತದೆ. ಇದಕ್ಕೆ ಪ್ರತಿಯಾಗಿ ಅವರೊಂದು ಕಾಣಿಕೆಯನ್ನು ನಮ್ಮ ಕೈಗೆ ನೀಡಿದರೆ....

ಸದ್ಯ, ಈ ಅಪೂರ್ವ ಭಾವಾತ್ಮಕ ಕ್ಷಣಗಳನ್ನು ಬಣ್ಣಿಸಲು ಪದಗಳು ಸಾಕಾಗಲಿಕ್ಕಿಲ್ಲ ಅಂತ ಅನಿಸುತ್ತೆ.

ಯಾತ್ರೆ

ಜೀವನದ ಅರ್ಥವನ್ನರಸಿ
ಕವಲು ದಾರಿಯ ನಾಲ್ಕು ದಿನಗಳ
ಯಾತ್ರೆ ಮುಗಿದಾಗ ಸುಖದ
ಸೊನ್ನೆಯ ಜೊತೆಗೆ ಏಕಾಂಗಿ ನಾನು...

ಕಳೆದ ಬಾಲ್ಯದ ನೆನಪುಗಳು
ಮನದ ಕದ ತಟ್ಟುತಿರಲು
ಮರಳಿ ಬಾರದ ನಿನ್ನೆಗಳಿಗೆ
ವರ್ತಮಾನದೊಳು ಮರುಗಲೆಂತು?

ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ
ಮಧು ಹೀರಿ ಹಾರುವ ದುಂಬಿಯಂತೆ
ಮನದೊಳಗೆ ಹೊಕ್ಕು, ಮುತ್ತನಿಟ್ಟವರು
ಮುದುಡಿದಾಗ ತಿಪ್ಪೆಗೆಸೆದರು ಕಸದಂತೆ

ಕಳೆದ ನೋವಿಗೆ ತೇಪೆಯನು ಹಚ್ಚಿ,
ಸಪ್ತಪದಿ ತುಳಿದಾಗ, ಸಂಸಾರ ಸಾಗರದ
ಅಲೆಗಳಿಗೆ ಮರಳ ದಂಡೆಯಾಗಿ
ಕಣ್ಣೀರ ಒತ್ತಿ, ನಕ್ಕು ಬಿಟ್ಟಿದ್ದೆ ಮೌನವಾಗಿ

ಇಂತು ನನ್ನ ಜೀವನದಿ ಅತಿಥಿಯಾಗಿ ಬಂದವರು,
ಕೆಲ ಕಾಲ ನಕ್ಕು, ಮತ್ತೆ ಮಸಿಯೆರಚಿ
ಬಂದಣಿಗೆಯಂತೆ ನನ್ನ ರಸ ಹೀರಿ ಚಿಗುರುವಾಗ
ಒಣ ವೃಕ್ಷದಂತೆ ನಾ ಧರೆಗುರುಳುತಲಿರುವೆ.

ಸ್ಮಶಾನದತ್ತ...

ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.

ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು.

ಎಷ್ಟಾದರೂ ಅಪ್ಪನಲ್ಲವೇ? ಕಿರಿ ಮಗನಂತೂ ಅತೀವ ಸ್ನೇಹದಿಂದಲೇ ಅಪ್ಪನನ್ನು ನೋಡಿಕೊಳ್ಳುತ್ತಿದ್ದ. ಒಮ್ಮೆ ಅಜ್ಜನಿಗೆ ತನ್ನ ಅವಧಿ ಮುಗಿಯುತ್ತಾ ಬಂತು ಎಂದು ಅನಿಸಿದಾಗ ತನ್ನ ನಾಲ್ಕು ಮಕ್ಕಳನ್ನೂ ಕೂಡಾ ಹತ್ತಿರ ಕರೆದ. ಹಳೆಯ ಮಂಚದ ಮೇಲೆ ಮಲಗಿದ ಮುದಿ ಜೀವದ ಸುತ್ತಲೂ ಮಕ್ಕಳು, ಮೊಮ್ಮಕ್ಕಳು ಹಾಜರಾದರು. ಅಜ್ಜ ಮಾತನಾಡತೊಡಗಿದ. ಮಕ್ಕಳೇ, ನಾನು ಇನ್ನಷ್ಟು ದಿನ ಬದುಕುವೆನೆಂದು ಯಾಕೋ ಅನಿಸುತ್ತಿಲ್ಲ. ನಿಮ್ಮನ್ನೆಲ್ಲಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡು, ನಿಮ್ಮ ಬೇಕು ಬೇಡಗಳಿಗೆ ಅಡ್ಡಿಯಾಗದೆ ಸಲಹಿದ್ದೇನೆ. ಅದರಲ್ಲಿ ನನಗೆ ತೃಪ್ತಿಯೂ ಇದೆ. ಇದೀಗ ನನ್ನ ಉಸಿರು ಇಂದೋ ನಾಳೆಯೋ ನಿಂತು ಹೋಗಬಹುದು. ಅದಕ್ಕಿಂತ ಮೊದಲೇ ನನ್ನ ಸೊತ್ತನ್ನು ಪಾಲು ಮಾಡಬೇಕೆಂದು ಬಯಸಿದ್ದೇನೆ. ಆ ಪೆಟ್ಟಿಗೆಯಲ್ಲಿ ಡಾಕ್ಯುಮೆಂಟ್ ಇದೆ. ನಿಮ್ಮ ನಿಮ್ಮ ಹೆಸರಿರುವ ದಾಖಲೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ ಕೂಡಲೇ ನಾಲ್ವರು ಮಕ್ಕಳು ತಮ್ಮ ತಮ್ಮ ದಾಖಲೆಗಳನ್ನು ಕೈಗೆ ತೆಗೆದುಕೊಂಡರು.

ಎಲ್ಲರ ಮುಖ ಅರಳಿತು. ತಮಗೆ ಸಾಕಷ್ಟು ಸೊತ್ತನ್ನು ಸಮಪಾಲಾಗಿ ನೀಡಿದ್ದಾನೆ. ಯಾರಿಗೂ ತಕರಾರು ಇಲ್ಲ, ಎಲ್ಲರೂ ಫುಲ್ ಖುಷ್. ಇದೆಲ್ಲಾ ಮುಗಿದ ಮೇಲೆ ತನ್ನ ಮಕ್ಕಳೆಲ್ಲರೂ ಒಂದು ದಿನ ತನ್ನೊಂದಿಗೆ ಇರಬೇಕು. ಮೊಮ್ಮಕ್ಕಳ ಆಟವನ್ನು ನೋಡಿ ಆನಂದಿಸಬೇಕು. ಮುದಿ ಅಜ್ಜ ತನ್ನ ಆಶೆಯನ್ನು ತಿಳಿಸಿದ. ಎಲ್ಲರೂ ತಲೆಯಲ್ಲಾಡಿಸಿದರು. ಅಂದು ಮಧ್ಯಾಹ್ನಕ್ಕೆ ಭಾರೀ ಭೋಜನ. ಎಲ್ಲರಿಗೂ ಸಂತೋಷ. ಅಜ್ಜನಿಗೆ ತನ್ನ ಮಕ್ಕಳ ಮೊಮ್ಮಕ್ಕಳ ನಗು ಕಂಡಾಗ ಎನೋ ಸಮಾಧಾನ, ಸಂತಸ.

ಸಂಜೆಯಾಯಿತು. ಅಜ್ಜನಿಗೆ ಮೈ ಕೈಯೆಲ್ಲಾ ನೋವಾಗ ತೊಡಗಿತು. ಮಕ್ಕಳನ್ನು ಕರೆದ. ಅಜ್ಜ ಮಲಗಿದ್ದ ಕೋಣೆಗೆ ಹೋಗಿ ಎಲ್ಲರೂ ಹೊರ ಬಂದರು. ನಾಲ್ಕು ಮಕ್ಕಳೂ ಹತ್ತಿರದ ಕೋಣೆಯಲ್ಲಿ ಚಿಕ್ಕದೊಂದು ಮೀಟಿಂಗ್ ನಡೆಸಿದರು.

ಹಿರಿಯವ ಹೇಳಿದ ಅಪ್ಪನ ಅವಧಿ ಮುಗಿಯುತ್ತಾ ಬಂದಿದೆ. ಈಗಲೇ ಉಸಿರೆಳೆದು ಬಿಟ್ಟರೆ ಸ್ಮಶಾನಕ್ಕೆ ಒಯ್ಯುವವರು ಯಾರು? ಎರಡನೆಯವನೆಂದ ಇದೆಲ್ಲಾ ಜವಾಬ್ದಾರಿ ಚಿಕ್ಕವನಿಗೆ. ಅವನಿಗೆ ಅಪ್ಪಾ ಅಂದ್ರೆ ತುಂಬಾ ಇಷ್ಟ ಅಲ್ವಾ..ಅಪ್ಪನಿಗೂ ಹಾಗೆಯೇ..ಅವನೇ ಎಲ್ಲಾ ಮಾಡಿದ್ರೆ ಒಳ್ಳೆದು ಅಂತ ಹೇಳಿದ. ನೀವೆಲ್ಲಾ ನಿಮ್ಮ ನಿಮ್ಮ ಮನೆಯಲ್ಲಿ ಸುಖವಾಗಿ ಇದ್ದೀರಾ. ನಾನಿಲ್ಲಿ ಈ ಮುದಿಯನೊಂದಿಗೆ ಹೇಗೆ ಕಾಲ ಕಳೆಯುತ್ತಾ ಇದ್ದೆ ಅಂತಾ ನಿಮಗೆ ಗೊತ್ತಾ? ಈವರೆಗೆ ನಾನು ಅಪ್ಪನ ಚಾಕರಿ ಮಾಡಿದ್ದೇನೆ. ಸ್ಮಶಾನಕ್ಕೆ ಸಾಗಿಸುವ ಕಾರ್ಯವನ್ನಾದರೂ ನಿಮಗೆ ಮಾಡಬಾರದಾ?ಎಂದು ಸಿಟ್ಟಿನಿಂದಲೇ ಕೇಳಿದ ಕಿರಿಯವ. ಈ ಮೂವರು ಅಣ್ಣದಿಂದ ನಡುವೆ ಪ್ರೀತಿ ಸುಮ್ಮನೇ ನಿಂತು ಬಿಟ್ಟಳು. ಸದ್ಯ ನಾನು ಮಗಳಾಗಿದ್ದು ಬಚಾವ್!ಇಲ್ಲದಿದ್ದರೆ ಗಂಡು ಮಕ್ಕಳಂತೆ ನಾನು ಕೂಡಾ ಈ ಹೆಣದ ಹೊಣೆಯನ್ನು ಹೊರಬೇಕಾದ ಸ್ಥಿತಿ ಬರುತ್ತಿತ್ತು ಎಂದು ಮನಸ್ಸಲ್ಲೇ ಅಂದು ಕೊಂಡಳು.

ಇವರು ಇಲ್ಲಿ ಮಾತನಾಡುತ್ತಿದ್ದಂತಯೇ ಅಜ್ಜನ ಕೋಣೆಯಿಂದ ಏನೋ ಸದ್ದಾಯಿತು. "ಬುಡ್ಡ ಮರ್ ಗಯಾ" ಅನ್ನೋ ನಿಟ್ಟಿನಲ್ಲಿ ಎಲ್ಲರೂ ಅತ್ತ ಧಾವಿಸಿದರು. ಎಲ್ಲರೂ ನೋಡುತ್ತಿದ್ದರಂತೆ ಅಜ್ಜ ತನ್ನ ವಾಕಿಂಗ್ ಸ್ಟಿಕ್ ಹಿಡಿದು ಕೊಂಡು ಹೊರಟು ನಿಂತಿದ್ದಾರೆ. ಅಪ್ಪಾ ನೀವೆಲ್ಲಿಗೇ? ಮಗಳು ಪ್ರೀತಿ ಗಾಬರಿಯಾಗಿ ಕೇಳಿದಳು.. ನಿಮಗೆ ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ. ಅದಕ್ಕೇ....ನಾನೇ ಸ್ಮಶಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಮುದಿ ಜೀವ ಭಾರವಾದ ಹೆಜ್ಜೆಗಳನ್ನು ಹಾಕಿತು.

(ಗೆಳೆಯರೇ, ಈ ಕಥೆ ಮೂಲ ಮಲಯಾಳಂನಲ್ಲಿದೆ. ಇದನ್ನು ಯಾರು ಬರೆದದ್ದು ಅಂತಾ ಗೊತ್ತಿಲ್ಲ. ಪ್ರಸ್ತುತ ಕಥೆ ಓದಿದಾಗ ಭಾಷಾನುವಾದ ಮಾಡಬೇಕೆಂದೆನಿಸಿತು. ಭಾಷಾನುವಾದವೆಂಬ ಸಾಹಸದ ಮೊದಲ ಹೆಜ್ಜೆಯನ್ನು ಈ ಕಥೆ ಮೂಲಕ ಮುಂದಿರಿಸಿದ್ದೇನೆ. ನಿಮಗೆ ಇದು ಚೆನ್ನಾಗಿದೆ ಎಂದು ಅನಿಸಿದರೆ ಅಥವಾ ತಪ್ಪುಗಳನೇದರೂ ಕಂಡು ಬಂದರೆ ದಯವಿಟ್ಟು ನನಗೆ ತಿಳಿಸಿ.)