Sunday, June 19, 2011

ಅಪ್ಪನಿಗೊಂದು ಪತ್ರ

ಪ್ರೀತಿಯ ಪಪ್ಪಾ,

ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ...

ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು.

ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್ ಪಾಲಿಶ್ ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ್ಡೋಳು ಅವಳಿಗೆ ನೀನು ಏನೂ ಅನ್ಬಾದು೯' ಅಂತಿದ್ದಿರಿ. ಪುಟ್ಟ ತಮ್ಮ ಕಿತಾಪತಿ ಮಾಡಿದ್ರೆ 'ಅವನು ಚಿಕ್ಕವನಲ್ವಾ ಕ್ಷಮಿಸಿ ಬಿಡು' ಅಂತಾ ಹೇಳುತ್ತಿದ್ದಿರಿ. ನಿನಗೆ ಕೆಟ್ಟದ್ದು ಬಗೆದವರನ್ನೂ ಪ್ರೀತಿಸು, ದ್ವೇಷದಿಂದ ಏನನ್ನೂ ಗೆಲ್ಲೋಕೆ ಆಗಲ್ಲ ಎಂದು ನೀವು ಹೇಳುತ್ತಾ ನನ್ನ ಜೀವನದುದ್ದಕ್ಕೂ ಮಾಗ೯ದಶಿ೯ಯಾದಿರಿ.

ನಿಜ ಹೇಳಲಾ ಪಪ್ಪಾ..ಮನೆಯಿಂದ ಹೊರಬಂದನಂತರವೇ ಈ ಜಗತ್ತು ಹೇಗಿದೆ ಅಂತಾ ನನಗೆ ಗೊತ್ತಾದದ್ದು. ಇಲ್ಲಿ ಹೆಚ್ಚಿನವರೂ ಸ್ವಾಥಿ೯ಗಳು. ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಕೂರುವವರೇ ಜಾಸ್ತಿ. ಇಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲ. ಅನ್ಯಾಯವಾಗುತ್ತಿದ್ದರೂ ಅದರ ವಿರುದ್ಧ ಧ್ವನಿಯೆತ್ತಲೂ ಕೂಡಾ ಅಂಜುವ ಅಂಜುಬುರುಕರು ಇವರು. ಹಣದಾಸೆಗಾಗಿ ಏನು ಬೇಕಾದರು ಮಾಡ ಬಲ್ಲ ಧನದಾಹಿಗಳು. ಪರಸ್ಪರ ಹಗೆ ಸಾಧಿಸುತ್ತಾ, ಗುದ್ದಾಡುತ್ತಾ ನಾನೇ ಮೇಲು ಎಂದು ತೋರಿಸಿಕೊಳ್ಳಲು ಇಲ್ಲಿ ಪೈಪೋಟಿ ನಡೆಯುತ್ತಿದೆ. ಮನುಷ್ಯ ಬುದ್ದಿ ಜೀವಿ...ಏನು ಬೇಕಾದರೂ ಸಾಧಿಸಬಲ್ಲ ತಾಕತ್ತು ಅವನಲ್ಲಿದೆ. ಕೆಲಸವನ್ನು ಸುಲಭಗೊಳಿಸುವ ಸಲುವಾಗಿ ಯಂತ್ರಗಳನ್ನು ಕಂಡು ಹಿಡಿದ. ಹುಟ್ಟು ಸಾವುಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಸಂಶೋಧನೆ ನಡೆಸಿ ಸಫಲನಾದ. ಅತೀ ಚಿಕ್ಕ ಪರಮಾಣುಗಳನ್ನೇ ಛಿದ್ರಗೊಳಿಸಿ ಜಗತ್ತನ್ನೇ ಜಯಿಸುವ ಶಕ್ತಿಯನ್ನು ಗಳಿಸಿದ... ಆದರೆ ತನ್ನ ಅಹಂ ಅನ್ನು ಛಿದ್ರಗೊಳಿಸುವಲ್ಲಿ ವಿಫಲನಾದ!.

ಮಗಳು ಅಂದರೆ ಅವಳು ಅಮ್ಮನ ಇನ್ನೊಂದು ರೂಪ ಅಂತಿದ್ದಿರಿ ನೀವು. ಎಲ್ಲಾ ಅಪ್ಪಂದಿರೂ ನಿಮ್ಮಂತೆಯೇ ಮಗಳನ್ನು ತುಂಬಾ ಪ್ರೀತಿಸುತ್ತಿರುತ್ತಾರೆ ಅಂತಾ ನಾನು ಅಂದುಕೊಂಡಿದ್ದೆ. ಆದರೆ ಅದೆಲ್ಲಾ ನನ್ನ ತಪ್ಪು ಕಲ್ಪನೆಯಾಗಿತ್ತು ಎಂದು ಅರಿವಾದುದು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿದಾಗಲೇ. "ಅಪ್ಪನೇ ಮಗಳನ್ನು ಅತ್ಯಾಚಾರವೆಸಗಿದ" ಎಂಬ ಸುದ್ದಿ ಓದಿದಾಗೆಲ್ಲಾ ಮೈ ಉರಿಯುತ್ತದೆ. "ಥೂ...ಇಂತಾ ಕಾಮುಕರು 'ಅಪ್ಪ' ಎಂಬ ಸಂಬಂಧಕ್ಕೇ ದ್ರೋಹವೆಸಗಿದರಲ್ಲಾ ಎಂದು ಸಿಡಿಮಿಡಿಗೊಳ್ಳುತ್ತೇನೆ. ಆ ಮಗಳು ಎಷ್ಟು ನೊಂದಿರಬಹುದಲ್ವಾಪ್ಪಾ?

ಇನ್ನು, ಮನೆ ಬಿಟ್ಟು ಪ್ರಿಯಕರನ ಜತೆ ಓಡಿ ಬಂದ ಅದೆಷ್ಟೋ ಹೆಣ್ಮಕ್ಕಳನ್ನು ನಾನಿಲ್ಲಿ ನೋಡಿದ್ದೇನೆ. ಅಂದೊಂದು ದಿನ ಒಬ್ಬಳು ಹುಡುಗಿ ತನ್ನ ಪ್ರೇಮಕ್ಕೆ 'ಅಪ್ಪ' ಅಡ್ಡಿಯಾಗುತ್ತಾನೆ ಎಂಬ ಭಯದಿಂದಲೇ ಮನೆ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಳು. ನೀವೇ ಹೇಳಿ ಪಪ್ಪಾ...ಮಗಳು ಚೆನ್ನಾಗಿರಬೇಕೆಂದು ತಾನೆ ಎಲ್ಲಾ ಅಪ್ಪಂದಿರ ಆಸೆ. ಅವರಿಗೆ ಹುಡುಗರ ಸ್ವಭಾವ ಚೆನ್ನಾಗಿ ಗೊತ್ತು. ಯಾವುದೋ ಗೊತ್ತು ಗುರಿಯಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿ ಮಗಳು ಜೀವನ ಹಾಳು ಮಾಡಿಕೊಳ್ಳುವುದು ಬೇಡ ಎಂದೇ ಅಪ್ಪ ಗದರಿಸುತ್ತಾರೆ. ಅಷ್ಟು ಮಾತ್ರಕ್ಕೆ ಅಪ್ಪನಿಗೆ 'ವಿಲನ್' ಪಟ್ಟ ಕಟ್ಟುವುದೇ? ಹಾಗಂತ ಎಲ್ಲಾ ಹುಡುಗರು ಕೆಟ್ಟವರೇನೂ ಅಲ್ಲ. ಒಂದು ವೇಳೆ ಪ್ರೀತಿಸಿದವ ಕೈಕೊಟ್ಟ ಅಂದ್ಕೊಳ್ಳಿ...ಮಗಳು ಮತ್ತೆ ತವರು ಮನೆಗೆ ಬರುತ್ತಾಳೆ. ಅವಳು ಆತನ ಪತ್ನಿಯಾಗಿರುವುದಿಲ್ಲ..ಆದರೆ ಆಕೆ ಸಾಯುವವರೆಗೂ ಮಗಳಾಗಿರುತ್ತಾಳೆ. ಅಪ್ಪನ ಕೈಯಲ್ಲಿ ಆಕೆಯ ಜೀವನ ಮತ್ತೆ ಅರಳುತ್ತದೆ. ನಾವು ಹುಡ್ಗೀರು ಇದನ್ನೆಲ್ಲಾ ಯಾಕೆ ಯೋಚಿಸುವುದಿಲ್ಲ?

ಜೀವನದ ಗತಿ ಯಾವ ರೀತಿ ಯಾವ ದಿಶೆಯಲ್ಲಿ ಸಾಗುತ್ತದೆ ಅಂತಾ ಯಾರಿಗೂ ಗೊತ್ತಿರಲ್ಲ. ಆದರೆ ನಮ್ಮ ಮನಸ್ಸು ನಮ್ಮ ಕೈಯಲ್ಲಿರಬೇಕು ಎಂದು ಹೇಳಿದ ನಿಮ್ಮ ಮಾತು ನಿಜ. ಜೀವನದಲ್ಲಿ ಕಷ್ಟ ಬಂದಾಗಲೇ ಜೀವನ ಏನು ಎಂಬುದು ಅಥ೯ವಾಗುವುದು. ಒಂಟಿತನ ನಮ್ಮನ್ನು ನಾವೇ ಅರಿಯುವಂತೆ ಮಾಡುತ್ತದೆ. ಹೀಗಿರುವಾಗ ಜೀವನವನ್ನು ಹೇಗೆ ನಿಭಾಯಿಸಿ ಮುನ್ನಡೆಸಬೇಕೆಂಬುದನ್ನು ನೀವು ಹೇಳಿಕೊಟ್ಟಿದ್ದೀರಿ. ಈ ಜಗತ್ತಿನ ಜಂಜಾಟಗಳನ್ನೆಲ್ಲಾ ನೋಡುವಾಗ ಬದುಕಲ್ಲಿ ನೊಂದವರಿಗಾಗಿ ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಕೊರಗು ಮಾತ್ರ ಮನಸ್ಸನ್ನು ಕಾಡುತ್ತಿರುತ್ತದೆ.

ಕೆಲವೊಮ್ಮೆ ಸೋತು ಕಣ್ಣೀರಿಡುವಾಗ ನಿಮ್ಮ ಮಾತು, ನಿಮ್ಮ ನಗು, ಧೈರ್ಯ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಸೋತ ಕೈಗಳು ಮತ್ತೆ ಲೇಖನಿ ಹಿಡಿದು ಭಾವನೆಗಳೇ ಅಕ್ಷರಗಳಾಗುತ್ತವೆ. ಆಫ್ಟರ್ ಆಲ್ ನಾನು ಪಪ್ಪನ ಮಗಳಲ್ವಾ...ಕಣ್ಣೀರು ಹಾಕುತ್ತಾ ಸುಮ್ನೇ ಕೂರಲ್ಲ ಅಂತಾ ಗೊತ್ತು ತಾನೇ...

ಸ್ಮೈಲ್ ಪ್ಲೀಸ್....
ನೀವು ನಕ್ಕಾಗ ತುಂಬಾ ಕ್ಯೂಟ್ ಕಾಣಿಸ್ತೀರಿ ಎಂಬುದು ನನಗೊಬ್ಬಳಿಗೇ ಗೊತ್ತು. ;)

ಪಪ್ಪಾ...ಮೊನ್ನೆ ಅಮ್ಮ ಏನೋ ಹೇಳ್ತಿದ್ರಲ್ವಾ ಹೊಸ ಪ್ರೊಪೋಸಲ್ ಬಗ್ಗೆ...ಆ ಹುಡುಗನಿಗೆ ನಿಮ್ಮಂತದ್ದೇ ಗುಣವಿದ್ದರೇ ಫಿಕ್ಸ್ ಮಾಡಿ ಬಿಡಿ...ನಿಮ್ಮ ಸೆಲೆಕ್ಷನ್ 100%ಚೆನ್ನಾಗಿಯೇ ಇರುತ್ತೆ ಎಂಬ ವಿಶ್ವಾಸ ನನಗಿದೆ.
ಬಾಕಿ ಉಳಿದ ವಿಷಯ ಎಲ್ಲಾ ಮನೆಗೆ ಬಂದ ನಂತರ ಹೇಳ್ತೇನೆ.

ಹ್ಯಾಪಿ ಫಾದರ್ಸ್ ಡೇ...
LOVE YOU ಪಪ್ಪಾ...

ಇತೀ ನಿಮ್ಮ
ಕಣ್ಮಣಿ.

Tuesday, June 14, 2011

ಹ್ಯಾಪಿ ಬರ್ತ್ ಡೇ ಟು ಮೀ...ವತ್ತು ನನ್ನ ಬ್ಲಾಗ್ ಅನುರಾಗದ ಹುಟ್ಟು ಹಬ್ಬ. ಕಳೆದ 4 ವಷ೯ಗಳಿಂದ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಈ ಬ್ಲಾಗ್ ನಲ್ಲಿ ಗೀಚಿದ್ದೇನೆ. ಉದ್ಯೋಗದ ನಿಮಿತ್ತ ಚೆನ್ನೈಗೆ ತೆರಳಿದಾಗ ಕನ್ನಡದಲ್ಲಿ ಹೇಗೆ ಟೈಪ್ ಮಾಡಬೇಕೆಂದೇ ಗೊತ್ತಿರಲಿಲ್ಲ. ಅಲ್ಲಿ ಕನ್ನಡ ಟೈಪ್ ಮಾಡಲು ಕಲಿತೆ. ಇಂಟರ್ನೆಟ್ ನಲ್ಲಿ ಇನ್ನೊಬ್ಬರ ಬ್ಲಾಗ್ ನೋಡುತ್ತಿದ್ದರೆ ನನಗೂ ಒಂದು ಬ್ಲಾಗ್ ಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆವಾಗ ಹುಟ್ಟಿಕೊಂಡದ್ದೇ ಅನುರಾಗ. ಆಮೇಲೆ ಸಮಯ ಸಿಕ್ಕಾಗೆಲ್ಲಾ ಬ್ಲಾಗ್ ನಲ್ಲಿ ಗೀಚಿದ್ದೇ ಗೀಚಿದ್ದು, ಕೆಲವೇ ಸಮಯಗಳಲ್ಲಿ ನಾನೂ ಬ್ಲಾಗ್ ಲೋಕದಲ್ಲಿ ಪರಿಚಿತಳಾಗಿಬಿಟ್ಟೆ.ಅನುರಾಗದೊಂದಿಗೆ ಇನ್ನು ಮೂರು ಬ್ಲಾಗ್ ಗಳನ್ನು ಆರಂಭಿಸಿದೆ. ಬ್ಲಾಗ್ ಲೋಕದಲ್ಲಿನ ಈ ಪಯಣದಲ್ಲಿ ಹಲವಾರು ಗೆಳೆಯರು ಹಿತೈಷಿಗಳು ಸಿಕ್ಕಿದರು.ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇನ್ನು ಕೆಲವರು ಕಾಲೆಳೆದರು. ಕೆಲವು ಕಾಲಗಳ ವರೆಗೆ ನನ್ನ ಬ್ಲಾಗ್ ನಿದ್ರಾವಸ್ಥೆಯಲ್ಲಿತ್ತು. ಈಗ ಮತ್ತೆ ಎಚ್ಚೆತ್ತುಕೊಂಡಿದೆ.

ನಿಮ್ಮೆಲ್ಲರ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಪಯಣ ಸಾಗುತ್ತಿದೆ...ಅನುರಾಗದೊಂದಿಗೆ...

ಎಲ್ಲರಿಗೂ ನನ್ನಿ,
ರಶ್ಮಿ ಕಾಸರಗೋಡು.

Wednesday, June 8, 2011

ಇಲ್ಲ..ನನಗೆ ನಿನ್ನಲ್ಲಿ ಮುನಿಸು

ನಾ ನಡೆವ ದಾರಿಯಲಿ
ನಿನ್ನ ಪಾದದ ಗುರುತು
ಇರದೇ ಇರಬಹುದು ನಿನ್ನ ನೆರಳು
ನಿನ್ನ ಕನಸಿನಲಿ ನಾ
ಇಲ್ಲದಿರಬಹುದು ಗೆಳೆಯಾ...


ನೀ ಸುರಿವ ಮಳೆಯಾದರೇನು?
ಇಂಗಲು ನನ್ನೊಡಲ ತಳವಿದೆ
ನೀ ಸುಡುವ ಬಿಸಿಲಾದರೇನು?
ನನ್ನ ಹೃದಯದ ಗುಡಿಸಲೊಳಗೆ
ತಣ್ಣನೆಯ ನೆರಳಿದೆ....

ನಿನ್ನ ಹೃದಯ ಬಾನಂತಿದ್ದರೇನು?
ಹಕ್ಕಿಯಾಗಿ ನಿನ್ನತ್ತ ಹಾರಿ ಬರುವೆ
ನೀನು ಭುವಿಯಂತೆ ಮಲಗಿದ್ದರೇನು?
ಹನಿ ಹನಿಯಾಗಿ ಬಿದ್ದು
ಪನ್ನೀರ ಚಿಮುಕಿಸುವೆ!


ಸಮಾಂತರ ರೇಖೆಗಳು ನಾವು
ಬಾಳ ಪಯಣಯದಲ್ಲಿ
ಬೆಳಗು ರಜನಿಯಂತಿದೆ ನಮ್ಮ ಮಿಲನ
ಜತೆಯಾಗಿದ್ದರೂ ಸೇರಲ್ಲ
ಸೇರಿದರೂ ಬೆರೆಯಲ್ಲ

ನಿನ್ನ ಪುಟ್ಟ ಹೃದಯದಲ್ಲಿ
ನಾನಾಗಲಾರೆ ನಿನ್ನ 'ಕೆಟ್ಟ' ನೆನಪು
ನಿನ್ನ ಹೃದಯವ ಕದ್ದೊಯ್ಯಲಾರೆ
ನನ್ನಾಣೆಗೂ,
ಇಲ್ಲ..ನನಗೆ ನಿನ್ನಲ್ಲಿ ಮುನಿಸು

Tuesday, June 7, 2011

ಏಕಾಂತತೆ ಮತ್ತು ನಾನು...

'ಎಂಥಾ ಮಳೆಯಪ್ಪಾ...ಈ ಟ್ರಾಫಿಕ್ ಜಾಮ್ ನಲ್ಲಿ ಮಳೆ ಬಂದರೆ ಕಿರಿಕಿರಿಯೇ.'."ನಾವು ಕೇಳಿದಷ್ಟು ದುಡ್ಡು ಕೊಟ್ಟರೆ ಬರುತ್ತೇವೆ" ಎಂದು ಹೇಳಿದ ರಿಕ್ಷಾವಾಲನಿಗೆ ಮನಸ್ಸಲ್ಲೇ ಹಿಡಿಶಾಪ ಹಾಕಿ ಅದೇ ರಿಕ್ಷಾ ಏರಿ ಮನೆಯತ್ತ ಹೊರಟ ಮಂದಿ. ಈ ನೂಕು ನುಗ್ಗಲಿನಲ್ಲಿಯೂ 'ನಾ ಫಸ್ಟು...ನಾ ಮುಂದೆ' ಎಂದು ಪುಟ್ಟ ಮಕ್ಕಳು ಉಚ್ಚೆ ಹೊಯ್ದು ಓಡಿಕೊಂಡು ಬರುವ ಹಾಗೆ ಬಿಎಂಟಿಸಿ ಬಸ್ ಗಳೆಡೆಯಲ್ಲೇ ನುಗ್ಗುವ ಬೈಕುಗಳು.

ಬದುಕು ಬವಣೆಗಳ ನಡುವೆಯೂ ಮಳೆ ಸುರಿದಿದೆ. ಕಾಮೋ೯ಡ ಕವಿದಿದ್ದ ಬಾನು ತಿಳಿಯಾಗುತ್ತಿದೆ. ಕತ್ತಲ ಬದುಕಿನಲ್ಲಿ ಮಿಂಚು ಹರಿದು ಬೆಳಕಿನ ಸ್ಪಶ೯ ನೀಡಿದಾಗ ಭಾರವಾದ ಎದೆ ನಡುಗಿದೆ.

ಈ ನೀರವತೆಯಲ್ಲಿನ ಏಕಾಂತತೆಯಲ್ಲಿ ನೆನಪುಗಳು ಮಾತ್ರ ಸದ್ದಿಲ್ಲದೆ ಬಂದು ಮನದ ಕದ ತಟ್ಟಿವೆ. ಪೀಜಿಯ ಕಿಟಿಕಿಯ ಮೂಲಕ ಇಣುಕಿದರೆ ಧೋ ಎಂದು ಸುರಿವ ಮಳೆ...ಒಣಗಲು ಹಾಕಿದ ಬಟ್ಟೆ ತಾರಸಿ ಮೇಲೆ ಹಾಗೆಯೇ ಇದೆ. ಮಳೆಯೊಂದಿಗೆ ತೀಡಿ ಬರುತ್ತಿರುವ ಗಾಳಿಯು ಆ ಬಟ್ಟೆಯನ್ನು ತನ್ನೊಡನೆ ಬಾ ಎಂದು ಕರೆಯುತ್ತಿದೆ. ಅದನ್ನು ನಾ ಬಿಡಲಾರೆ ಎಂದು ಬಟ್ಟೆಗೆ ಸಿಕ್ಕಿಸಿದ ಕ್ಲಿಪ್ ಗಾಳಿ ಜತೆ ಗುದ್ದಾಟಕ್ಕೆ ತೊಡಗಿದೆ.

ರೂಮ್ ಮೇಟ್ ಲ್ಯಾಪ್ ಟಾಪ್ ಹಿಡಿದು ಧ್ಯಾನದಲ್ಲಿ ಕುಳಿತಂತಿದ್ದಾಳೆ. ಇಂಟರ್ ನೆಟ್ ಗೆ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತಾ ಕಿಟಕಿಯ ಗಾಜು ಸರಿಸಿದ್ದಾಳೆ. ಆವಾಗಲೇ ತಣ್ಣನೆ ಗಾಳಿ ರೂಮಿನೊಳಗೆ ಪ್ರವೇಶಿಸಿದೆ. ಅಬ್ಬಾ ಸಿಗ್ನಲ್ ಸಿಕ್ತು ಎಂದು ಫೇಸ್ ಬುಕ್ ನಲ್ಲಿ ಆಕೆ 'ಲೈಕ್' ಮಾಡುತ್ತಾ ಕಾಮೆಂಟಿಸುತ್ತಿದ್ದಾಳೆ.

ಎಲ್ಲವೂ ಬದಲಾಗಿದೆ. ನಾವು ಜನರು....ಎಲ್ಲರೂ...ಆದರೆ ಮಳೆ...ನಿನ್ನೆಯೂ ಹೀಗೆ ಸುರಿಯುತ್ತಿತ್ತು. ಇವತ್ತೂ ಹಾಗೆಯೇ ಸುರಿಯುತ್ತಿದೆ. ಮೊನ್ನೆ ಮೊನ್ನೆಯವರೆಗೆ ಅಂಗಳದ ಮೂಲೆಯಲ್ಲಿ ಗುಟರ್ ಗುಟರ್ ಎನ್ನುತ್ತಿದ್ದ ಆ ಗೋಂಕುರು ಕಪ್ಪೆಗಳು ಎಲ್ಲಿ ಹೋದವು? ಮಳೆ ಬಂದ ಕೂಡಲೇ ಕಾಣಿಸಿಕೊಳ್ಳುತ್ತಿದ್ದ ವೆಲ್ವೆಟ್ ಹುಳ ಈಗ ಕಾಣಿಸುವುದೇ ಇಲ್ಲ. ಪ್ರೈಮರಿ ಕ್ಲಾಸಿನಲ್ಲಿರುವಾಗ ಸ್ಲೇಟ್ ಒರೆಸುತ್ತಿದ್ದ ಆ ನೀರಕಡ್ಡಿ ಎಲ್ಲಿ ಹೋಯ್ತ?

ವತ೯ಮಾನದ ಅರಿವೇ ಇಲ್ಲ ಎಂಬಂತೆ ಮನಸ್ಸು ಬಾಲ್ಯದ ದಿನಗಳತ್ತ ಮತ್ತೆ ವಾಲುತ್ತಿದೆ. ಮಳೆಯೊಂದಿಗೆ ನೆನಪುಗಳು ಮರುಕಳಿಸುತ್ತವೆ. ನಾನು ಮತ್ತು ನನ್ನ ಏಕಾಂತತೆ ಸುರಿವ ಮಳೆಯಲ್ಲಿ ತೊಯ್ದು ಸುಮ್ಮನಾಗಿದ್ದೇವೆ.

"ಇನ್ಮುಂದೆ ನಿನ್ನ ಯಾವುದೇ ವಿಷಯಕ್ಕೆ ತಲೆ ಹಾಕಲ್ಲ" ಎಂದು ಅವ ಹೇಳಿ ಹೋಗಿದ್ದಾನೆ. ಅವನ ಎಸ್ಸೆಮ್ಮೆಸ್, ಕಾಲ್ ...ಯಾವುದೂ ಇಲ್ಲ. ನೆಟ್ವಕ್೯ ಸಿಗದೇ ಇದ್ದರೆ?

ಅವನಿಗೆ ನನ್ನಲ್ಲಿ ದ್ವೇಷವಿರಬಹುದಾ? ಇದ್ಯಾವುದೂ ನನಗೊತ್ತಿಲ್ಲ. ಆದರೆ ನಾನು ಪ್ರೀತಿಸಿದ್ದೇನೆ. ಅವನೊಂದಿಗೆ ಅವನ ಕನಸುಗಳನ್ನು, ಅವನ ಪೆದ್ದುತನವನ್ನು...ಅವನ ಸಿಟ್ಟನ್ನು...ಅವನ ಜೀವನವನ್ನು..

ಈ ಮಳೆ ನನ್ನನ್ನು ಒದ್ದೆಯಾಗಿಸಿದೆ. ಕಂಬನಿಯೂ ಮಳೆ ನೀರ ಸೇರಿ ಮೋಡವಾಗಿದೆ. ಆದರೆ ನನ್ನ ಒಡಲಾಳದಲ್ಲಿರುವ'ಪ್ರೀತಿ'ನಂಬಿಕೆಯ ಹೊದಿಕೆ ಹೊದ್ದು ಬೆಚ್ಚನೆ ಮಲಗಿದೆ.

Sunday, June 5, 2011

ನೈಂಟಿ ಜತೆಗಿನ ನಂಟು!!!

ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ 'ಬಾಟಲಿ' ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು...ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ....ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ 'ಮಹಾ' ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. "ಟಿವಿ ಬಂತಾ...ಇನ್ನು ಮಕ್ಕಳು ಓದಲ್ಲ ಬಿಡಿ" ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.

ಭಾನುವಾರ ಬಂತೆಂದರೆ ಊಟ ತಿಂಡಿ ಎಲ್ಲವೂ ಟಿವಿ ಮುಂದೆಯೇ. ರಂಗೋಲಿ ಆರಂಭವಾಗುವ ಮುನ್ನವೇ ಅಂಗಳ ಗುಡಿಸಿ, ಪಾತ್ರ ತೊಳೆದು, ಸ್ನಾನ ಮಾಡಿ ಕುಳಿತುಕೊಳ್ಳುತ್ತಿದ್ದೆ. 'ಚಾರ್ಲಿ ಚಾಪ್ಲಿನ್' ಮುಗಿದ ನಂತರ ಬ್ರೇಕ್್ನ ಸಮಯದಲ್ಲಿ ಬೆಳಗ್ಗಿನ ತಿಂಡಿಯಾಗುತ್ತಿತ್ತು. ಇನ್ನು ಜಂಗಲ್ ಬುಕ್ ನ ಮೋಗ್ಲಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಟಾಮ್ ಆ್ಯಂಡ್ ಜೆರ್ರಿ, ಪೋಟಲಿ ಬಾಬಾ, ಆಲೀಸ್ ಇನ್ ವಂಡರ್ ಲ್ಯಾಂಡ್, ಡಕ್ ಟೇಲ್ಸ್ , ಸಿಂದಾಬಾದ್ ದ ಸೈಲರ್ ಮೊದಲಾದ ಮಕ್ಕಳ ಧಾರವಾಹಿಗಳು, 9 ಗಂಟೆಯ ವೇಳೆಗೆ 'ಚಂದ್ರಕಾಂತ ಕಿ ಕಹಾನಿ ಯೇ ಮಾನಾ ಹೆ ಪುರಾನಿ...' ಎಂಬ ಟೈಟಲ್ ಸಾಂಗ್್ನೊಂದಿಗೆ ಆರಂಭವಾಗುವ ಚಂದ್ರಕಾಂತ ಸೀರಿಯಲ್ ನಲ್ಲಿ ಯಕ್ಕ್...ಎಂದು ಹೇಳುವ ವಿಲನ್ ಕ್ರೂರ್ ಸಿಂಗ್, ಶಿವ್್ದತ್ ಕೋ ಕೋಯಿ ಶಕ್ ನಹೀ ಎನ್ನುವ ಪಂಕಜ್ ಧೀರ್ ನ ಅಭಿನಯ ಇನ್ನೂ ಮನಸ್ಸಿನಿಂದ ಮಾಸಿಲ್ಲ. ಅದೇ ವೇಳೆ ಚಾಣಕ್ಯ, ಶ್ರೀಕೃಷ್ಣ ಮೊದಲಾದ ಪುರಾಣ ಕಥೆಗಳ ಜತೆಗೆ ಚುಟ್ಟಿ ಚುಟ್ಟಿ, ತರಂಗ್, ಸ್ಕೂಲ್ ಡೇಸ್ ಕೂಡಾ ಪ್ರಿಯವಾದುದೇ. ನನ್ನ ನೆನಪಿನ ಪ್ರಕಾರ 11 ಗಂಟೆಗೆ 'ದ ನ್ಯಾಷನಲ್ ಪ್ರೋಗ್ರಾಂ ಆಫ್ ಡ್ಯಾನ್ಸ್ 'ಎಂಬ ಕಾರ್ಯಕ್ರಮವೂ ಪ್ರಸಾರವಾಗುತ್ತಿತ್ತು. ಹನ್ನೆರಡು ಗಂಟೆಯ ಹೊತ್ತಿಗೆ 'ಶಕ್ತಿಮಾನ್ ' ಪ್ರತ್ಯಕ್ಷವಾಗುತ್ತಿದ್ದ. ಮಧ್ಯಾಹ್ನ ಮೂಕರಿಗಾಗಿರುವ ವಾರ್ತೆ, ಸಂಸ್ಕೃತ ವಾರ್ತೆ, ಹಿಂದಿ, ಇಂಗ್ಲಿಷ್ ಎಲ್ಲ ವಾರ್ತೆಯನ್ನೂ ನಾನು ನೋಡುತ್ತಿದ್ದೆ.

ಕೃಷಿ ದರ್ಶನ್, ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ, ಟಿವಿ ಕಾರ್ಯಕ್ರಮಕ್ಕೆ ಬಂದ ಪತ್ರಗಳನ್ನು ಓದುವುದು, ಪ್ರಾಯೋಜಿತ ಕಾರ್ಯಕ್ರಮ ಏನೇ ಬರಲಿ ಟಿವಿ ಮುಂದೆಯಿಂದ ಕದಲುತ್ತಿರಲಿಲ್ಲ ನಾನು.

ಇನ್ನು ಸೀರಿಯಲ್್ಗಳ ಸರದಿ. ವಿಕ್ರಮ್ ಬೇತಾಳ್ ಕಥೆಗಳನ್ನು ಚಂದಮಾಮದಲ್ಲಿ ಓದಿದ್ದರೂ, ಟಿವಿ ಮೂಲಕ ಬೇತಾಳ ಹೇಗಿರುತ್ತಾನೆ? ಎಂಬುದು ಗೊತ್ತಾಯ್ತು. ಅಪರಾಹ್ನ ಸೀರಿಯಲ್ ಗಳದ್ದೇ ಕಾರುಬಾರು. ಹಮ್್ಲೋಗ್ ಎಂಬ ಸೋಪ್ ಅದೆಷ್ಟು ಕಂತು ಓಡಿತ್ತೋ ನೆನಪಿಲ್ಲ. ಆದರೆ ಅಪರಾಜಿತ, ಔರತ್, ಸಮುಂದರ್, ಯುಗ್, ಜುನೂನ್, ಶಾಂತಿ, ಸ್ವಾಭಿಮಾನ್ ಮೊದಲಾದ ಸೀರಿಯಲ್ ಗಳು ಒಂದರ ನಂತರ ಒಂದರಂತೆ ಪ್ರಸಾರವಾಗುತ್ತಿತ್ತು. ಸಂಜೆಯ ವೇಳೆಗೆ ಬುಧವಾರ ಚಿತ್ರಹಾರ್, ಶುಕ್ರವಾರ ಚಿತ್ರಗೀತ್ ಯಾವುದೂ ಮಿಸ್ ಮಾಡಲ್ಲ.

ರಾತ್ರಿ ವೇಳೆ ಸರಳಾ ಮಹೇಶ್ವರಿ, ಶಮ್ಮೀ ನಾರಂಗ್ ಓದುವ ಹಿಂದೀ ವಾರ್ತೆ, ರಿನ್ನಿ ಕಣ್ಣನ್್ನ ಇಂಗ್ಲೀಷ್ ವಾರ್ತೆ ಅದೂ ಇಷ್ಟಾನೇ. ಇದಾದ ನಂತರ ರಾತ್ರಿ ವೇಳೆ ಸೀರಿಯಲ್್ಗಳ ಸುರಿಮಳೆ.. ಉಡಾನ್, ಅಲೀಫ್ ಲೈಲಾ, ಹಮ್್ರಾಹಿ, ಕಕ್ಕಾಜಿ ಕಹಿಯೆ, ಸಂಸಾರ್, ಅಮರಾವತಿ ಕಿ ಕಹಾನಿಯಾ, ಆನಂದಿ ಗೋಪಾಲ್, ಫುಲ್್ವಂತೀ, ರಿಪೋರ್ಟರ್,ಕಶೀಶ್, ಕೋಶಿಶ್, ಉಪಾಸನಾ, ವಿಲಾಯ್ತಿ ಬಾಬು, ಮುಂಗೇರಿ ಕೆ ಭಾಯಿ ನೌರಂಗಿ, ಪರಖ್,ಓಂ ನಮಃ ಶಿವಾಯ್, ಜೈ ಹನುಮಾನ್, ದ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್, ಕಯರ್, ಓಶಿಯಾನಾ ಮೊದಲಾದ ಸೀರಿಯಲ್್ಗಳು. ಅದರಲ್ಲಿಯೂ ಬ್ಯೋಮ್ ಕೇಶ್ ಭಕ್ಷಿ, ಸುರಾಗ್, ತೆಹೆತಿಕಾತ್ ಮೊದಲಾದ ಪತ್ತೆದಾರಿ ಧಾರವಾಹಿಗಳು ಇನ್ನೂ ಥ್ರಿಲ್ಲಿಂಗ್ ಆಗಿರುತ್ತಿತ್ತು. ಇದೆಲ್ಲದರ ಜತೆಗೆ ಭಾರತ್ ಏಕ್ ಕೋಜ್, ತಾನಾ ಬಾನಾ, ಸುರಭಿ, ದ ವರ್ಲ್ಡ್ ದಿಸ್ ವೀಕ್ ಮೊದಲಾದವುಗಳು ಜ್ಞಾನ ವರ್ಧನೆಯ ಕ್ಯಾಪ್ಸೂಲ್ ಗಳಂತಿದ್ದವು.
ವರ್ಲ್ಡ್ ಆಫ್ ಸ್ಪೋಟ್ಸ್ ಮೂಲಕ ಕ್ರೀಡೆ, ಆವಾಗಿನ ಕ್ರಿಕೆಟ್ ಟೆಸ್ಟ್ ಮ್ಯಾಚ್ ಗಳು...ಬಾಕ್ಸಿಂಗ್ ಗುದ್ದಾಟ ನೋಡುತ್ತಿದ್ದರೆ ಮೈ ನಡುಗುತ್ತಿತ್ತು!!

ಮೇರಿ ಆವಾಜ್ ಸುನೋ ಎಂಬ ರಿಯಾಲಿಟಿ ಶೋ, ಏಕ್ ಸೆ ಬಡ್ಕರ್ ಏಕ್ ಎಂಬ ಕಾಮಿಡಿ ಸೀರಿಯಲ್ ನಡುವೆ ಬರುವ ಟಾಪ್ 10 ಹಿಂದಿ ಚಿತ್ರಗೀತೆಗಳು, ಸುನೆಹರೇ ಪಲ್, ಪಾರ್ವತಿ ಖಾನ್ ನಡೆಸಿಕೊಡುತ್ತಿದ್ದ ಹಾಟ್ ಸ್ಪಾಟ್ ಮೊದಲಾದವುಗಳು ಬಾಲಿವುಡ್ ನ ಬಗ್ಗೆ ಹೆಚ್ಚು ಒಲವನ್ನುಂಟು ಮಾಡುವಂತಿತ್ತು.

ಮೂವಿಗಳ ಬಗ್ಗೆ ಹೇಳುವುದೇ ಬೇಡ. ಅಮಿತಾಬ್ ಬಚ್ಚನ್, ಜಿತೇಂದ್ರ, ಮಿಥುನ್ ಚಕ್ರವರ್ತಿ, ರಿಷಿ ಕಪೂರ್, ಅನಿಲ್ ಕಪೂರ್, ಸಲ್ಮಾನ್, ಜಯಾ ಬಚ್ಚನ್, ಮೀನಾಕ್ಷಿ ಶೇಷಾದ್ರಿ, ಶ್ರೀದೇವಿ, ಮಾಧುರಿ ಹೀಗೆ ಭಾಷೆ ಅರ್ಥವಾಗದಿದ್ದರೂ ಅವರ ನಟನೆಗೆ ಮನಸ್ಸು ಮಾರು ಹೋಗಿತ್ತು. ಹಿಂದಿ ಚಿತ್ರಗಳನ್ನು ನೋಡುವಾಗ ನನ್ನ ಅಪ್ಪ ಆ ಚಿತ್ರವನ್ನು ಎಲ್ಲಿ ನೋಡಿದ್ದರು? ನೋಡಬೇಕಾದರೆ ಏನೆಲ್ಲಾ ಸಾಹಸ ಮಾಡುತ್ತಿದ್ದರು ಎಂದೆಲ್ಲಾ ವಿವರಿಸುತ್ತಿದ್ದರು. ಭಾನುವಾರ ಮಧ್ಯಾಹ್ನ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಸಾರವಾಗುತ್ತಿದ್ದು, ಕನ್ನಡ, ಮಲಯಾಳಂ ಚಿತ್ರಗಳು ಬಂದರಂತೂ ಹಬ್ಬವೇ. ಕನ್ನಡ ಮೂವಿಯಲ್ಲಿನ ನಟರ ಬಗ್ಗೆ ಅಮ್ಮ ಹೇಳುತ್ತಿದ್ದರೆ, ಮಲಯಾಳಂ ನಟರ ಬಗ್ಗೆ ಅಪ್ಪ ವಿವರಿಸುತ್ತಿದ್ದರು. ;) ಯಾವತ್ತೋ ಒಂದ್ಸಾರಿ ತುಳು ಚಿತ್ರ 'ಬಂಗಾರ್ ಪಟ್ಲೇರ್ ' ನೋಡಿದ ನೆನಪು.

ಇಷ್ಟೆಲ್ಲಾ ಹೇಳಿದ ಮೇಲೆ ಕಮರ್ಷಿಯಲ್ ಬ್ರೇಕ್ ಇಲ್ಲದಿದ್ದರೆ ಹೇಗೆ? ಐ ಲವ್ ಯೂ ರಸ್ನಾ...ಐ ಆ್ಯಮ್ ಎ ಕಾಂಪ್ಲಾನ್ ಬಾಯ್, ಲಿಜ್ಜತ್ ಪಾಪ್ಪಡ್, ಘಡೀ ಡಿಟರ್ಜಂಟ್, ಎಂಡಿಚ್...ಎಂಡಿಚ್ ಎನ್ನುವ ಎಂಡಿಚ್ ಮಸಾಲೆ...ಸಿರ್ಫ್ ಏಕ್ ಸಾರಿಡಾನ್...ಸರ್ದದ್ ಸೆ ಆರಾಮ್ (ಸಾರಿಡಾನ್), ಉಹ್..ಆ..ಔಚ್ (ಐಯೋಡೆಕ್ಸ್), ಓಯೇ..ಓಯೇ ಕುಜಲೀ ಕರ್್ನೇ ವಾಲೇ (ಬೀಟೆಕ್ಸ್), ಗುಂಡು ಹಾರಿಸಿ 'ಗೋಲಿಯೋಂಕಾ ಬಿ ಅಸರ್ ನಹೀ' ಎನ್ನುವಾಗ ಸಾಧು 'ಇಸ್್ಕಾ ಇಲಾಜ್ ಕಾಯಮ್ ಚೂರ್ಣ್ 'ಅಂತಾನೆ..
"ಯೇ ಜಮೀ..ಯೇ ಆಸ್ ಮಾನ್...ಹಮಾರಾ ಕಲ್, ಹಮಾರಾ ಆಜ್...ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್.." (ಹಮಾರಾ ಬಜಾಜ್), ಯೇ ರಿಶ್ತೇ ಯೇ ನಾಥೆ...ಕಿತ್ ನೇ ಅಪ್ ನೇ ಅಪ್ ನೇ (ಎಸ್ ಕುಮಾರ್ಸ್), ಜಲೇಬಿ.... ಎಂದು ಕಣ್ಣರಳಿಸುವ ಬಾಲಕ (ಧಾರಾ ಎಣ್ಣೆ), ಸಂತೂರ್ ಸಂತೂರ್..., ಜಬ್ ಘರ್ ಕಿ ರೋನಕ್ ಬಡಾನಿ ಹೋ...(ಮ್ಯಾರೋಲಾಕ್ ಪೈಂಟ್ಸ್), ಡೂಂಡ್ ತೇ ರೆಹಜಾವೋಗೆ (ಸರ್ಫ್), ಸಬ್ ಕಿ ಪಸಂದ್ 'ನಿರ್ಮಾ', ಚುಪ್ಕೆ ಚುಪ್ಕೆ ಬೈಟಿ ಹೋ ಜೂರ್ ಕೋಯಿ ಬಾತ್ ಹೈ (ಕೇರ್ ಫ್ರೀ ), ಯೇ ಹೇ ಹಮಾರಾ ಸುರಕ್ಷಾ ಚಕ್ಕರ್ (ಕೋಲ್ಗೇಟ್), ಡಾಬರ್ ಲಾಲ್ ದಂತ್ ಮಂಜನ್, ವಿಕೋ ಟರ್ಮರಿಕ್ ಹೀಗೆ ನೆನಪಿನಲ್ಲಿ ಉಳಿಯುವ ಅದೆಷ್ಟು ಜಾಹೀರಾತುಗಳು!!

ಬ್ರೇಕ್ ನ ನಂತರ ಕಾರ್ಯಕ್ರಮ ಮುಂದುವರಿಯುತ್ತದೆ...

'ಬಜೇ ಸರ್ ಗಂ ಹರ್ ತರಫ್ ಸೇ ಗೂಂಜ್ ಬನ್ ಕರ್ ದೇಶ್ ರಾಗ್' ...ಮೇಣದ ದೀಪಗಳನ್ನು ಉರಿಸುವ ಮಕ್ಕಳು...'ಸುನ್ ಸುನ್ ಸುನ್ ಮೇರೆ ಮುನ್ನೆ ಸುನ್' ಎಂಬ ಹಾಡಿನಲ್ಲಿ ಬರುವ ಎಲ್ಲಾ ಪ್ರಮುಖ ನಟರು (ನಮ್ಮ ಮಮ್ಮುಟ್ಟಿಯೂ ಇರ್ತಿದ್ರು)...'ಭಾರತ್ ಭಾರತ್ ಹಮ್ ಇಸ್ ಕಿ ಸಂತಾನ್ '..., 'ಹಮ್ ಹೋಂಗೆ ಕಾಮ್ ಯಾಬ್', 'ವಿಜಯಿ ವಿಶ್ವ ತಿರಂಗಾ ಪ್ಯಾರಾ' ಮೊದಲಾದ ಭಾವೈಕ್ಯತೆಯ ಗೀತೆಗಳು.. 'ಮಿಲೇ ಸುರ್ ಮೇರಾ ತುಮ್ಹಾರಾ ....' ಈ ಹಾಡಿನ ಮೋಡಿಗೊಳಗಾಗದ ಜನರಿದ್ದಾರೆಯೇ?

ಡಿಡಿ ನ್ಯಾಷನಲ್ ನಲ್ಲಿ ಯಾವಾಗ ಡಿಡಿ ಮಲಯಾಳಂ ಕೂಡಾ ಲಭಿಸಿತೋ ಟಿವಿ ನೋಡುತ್ತಾ ಮಲಯಾಳಂ ಓದೋಕೆ ಕಲಿಯುವುದರ ಜತೆ ಶುದ್ಧ ಮಲಯಾಳಂನಲ್ಲಿ ಮಾತನಾಡಲು ಕೂಡಾ ಕಲಿತು ಬಿಟ್ಟೆ.
ಅಬ್ಬಾ ದೂರದರ್ಶನದ ಬಗ್ಗೆ ಹೇಳೋಕೆ ಹೋದರೆ ಅದೂ ಮೆಗಾ ಸೀರಿಯಲ್ ಆಗ್ಬಹುದು. ಸದ್ಯ ಇಷ್ಟು ಸಾಕು.