ಅಪ್ಪನಿಗೊಂದು ಪತ್ರ

ಪ್ರೀತಿಯ ಪಪ್ಪಾ,

ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ...

ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು.

ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್ ಪಾಲಿಶ್ ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ್ಡೋಳು ಅವಳಿಗೆ ನೀನು ಏನೂ ಅನ್ಬಾದು೯' ಅಂತಿದ್ದಿರಿ. ಪುಟ್ಟ ತಮ್ಮ ಕಿತಾಪತಿ ಮಾಡಿದ್ರೆ 'ಅವನು ಚಿಕ್ಕವನಲ್ವಾ ಕ್ಷಮಿಸಿ ಬಿಡು' ಅಂತಾ ಹೇಳುತ್ತಿದ್ದಿರಿ. ನಿನಗೆ ಕೆಟ್ಟದ್ದು ಬಗೆದವರನ್ನೂ ಪ್ರೀತಿಸು, ದ್ವೇಷದಿಂದ ಏನನ್ನೂ ಗೆಲ್ಲೋಕೆ ಆಗಲ್ಲ ಎಂದು ನೀವು ಹೇಳುತ್ತಾ ನನ್ನ ಜೀವನದುದ್ದಕ್ಕೂ ಮಾಗ೯ದಶಿ೯ಯಾದಿರಿ.

ನಿಜ ಹೇಳಲಾ ಪಪ್ಪಾ..ಮನೆಯಿಂದ ಹೊರಬಂದನಂತರವೇ ಈ ಜಗತ್ತು ಹೇಗಿದೆ ಅಂತಾ ನನಗೆ ಗೊತ್ತಾದದ್ದು. ಇಲ್ಲಿ ಹೆಚ್ಚಿನವರೂ ಸ್ವಾಥಿ೯ಗಳು. ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಕೂರುವವರೇ ಜಾಸ್ತಿ. ಇಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲ. ಅನ್ಯಾಯವಾಗುತ್ತಿದ್ದರೂ ಅದರ ವಿರುದ್ಧ ಧ್ವನಿಯೆತ್ತಲೂ ಕೂಡಾ ಅಂಜುವ ಅಂಜುಬುರುಕರು ಇವರು. ಹಣದಾಸೆಗಾಗಿ ಏನು ಬೇಕಾದರು ಮಾಡ ಬಲ್ಲ ಧನದಾಹಿಗಳು. ಪರಸ್ಪರ ಹಗೆ ಸಾಧಿಸುತ್ತಾ, ಗುದ್ದಾಡುತ್ತಾ ನಾನೇ ಮೇಲು ಎಂದು ತೋರಿಸಿಕೊಳ್ಳಲು ಇಲ್ಲಿ ಪೈಪೋಟಿ ನಡೆಯುತ್ತಿದೆ. ಮನುಷ್ಯ ಬುದ್ದಿ ಜೀವಿ...ಏನು ಬೇಕಾದರೂ ಸಾಧಿಸಬಲ್ಲ ತಾಕತ್ತು ಅವನಲ್ಲಿದೆ. ಕೆಲಸವನ್ನು ಸುಲಭಗೊಳಿಸುವ ಸಲುವಾಗಿ ಯಂತ್ರಗಳನ್ನು ಕಂಡು ಹಿಡಿದ. ಹುಟ್ಟು ಸಾವುಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಸಂಶೋಧನೆ ನಡೆಸಿ ಸಫಲನಾದ. ಅತೀ ಚಿಕ್ಕ ಪರಮಾಣುಗಳನ್ನೇ ಛಿದ್ರಗೊಳಿಸಿ ಜಗತ್ತನ್ನೇ ಜಯಿಸುವ ಶಕ್ತಿಯನ್ನು ಗಳಿಸಿದ... ಆದರೆ ತನ್ನ ಅಹಂ ಅನ್ನು ಛಿದ್ರಗೊಳಿಸುವಲ್ಲಿ ವಿಫಲನಾದ!.

ಮಗಳು ಅಂದರೆ ಅವಳು ಅಮ್ಮನ ಇನ್ನೊಂದು ರೂಪ ಅಂತಿದ್ದಿರಿ ನೀವು. ಎಲ್ಲಾ ಅಪ್ಪಂದಿರೂ ನಿಮ್ಮಂತೆಯೇ ಮಗಳನ್ನು ತುಂಬಾ ಪ್ರೀತಿಸುತ್ತಿರುತ್ತಾರೆ ಅಂತಾ ನಾನು ಅಂದುಕೊಂಡಿದ್ದೆ. ಆದರೆ ಅದೆಲ್ಲಾ ನನ್ನ ತಪ್ಪು ಕಲ್ಪನೆಯಾಗಿತ್ತು ಎಂದು ಅರಿವಾದುದು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿದಾಗಲೇ. "ಅಪ್ಪನೇ ಮಗಳನ್ನು ಅತ್ಯಾಚಾರವೆಸಗಿದ" ಎಂಬ ಸುದ್ದಿ ಓದಿದಾಗೆಲ್ಲಾ ಮೈ ಉರಿಯುತ್ತದೆ. "ಥೂ...ಇಂತಾ ಕಾಮುಕರು 'ಅಪ್ಪ' ಎಂಬ ಸಂಬಂಧಕ್ಕೇ ದ್ರೋಹವೆಸಗಿದರಲ್ಲಾ ಎಂದು ಸಿಡಿಮಿಡಿಗೊಳ್ಳುತ್ತೇನೆ. ಆ ಮಗಳು ಎಷ್ಟು ನೊಂದಿರಬಹುದಲ್ವಾಪ್ಪಾ?

ಇನ್ನು, ಮನೆ ಬಿಟ್ಟು ಪ್ರಿಯಕರನ ಜತೆ ಓಡಿ ಬಂದ ಅದೆಷ್ಟೋ ಹೆಣ್ಮಕ್ಕಳನ್ನು ನಾನಿಲ್ಲಿ ನೋಡಿದ್ದೇನೆ. ಅಂದೊಂದು ದಿನ ಒಬ್ಬಳು ಹುಡುಗಿ ತನ್ನ ಪ್ರೇಮಕ್ಕೆ 'ಅಪ್ಪ' ಅಡ್ಡಿಯಾಗುತ್ತಾನೆ ಎಂಬ ಭಯದಿಂದಲೇ ಮನೆ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಳು. ನೀವೇ ಹೇಳಿ ಪಪ್ಪಾ...ಮಗಳು ಚೆನ್ನಾಗಿರಬೇಕೆಂದು ತಾನೆ ಎಲ್ಲಾ ಅಪ್ಪಂದಿರ ಆಸೆ. ಅವರಿಗೆ ಹುಡುಗರ ಸ್ವಭಾವ ಚೆನ್ನಾಗಿ ಗೊತ್ತು. ಯಾವುದೋ ಗೊತ್ತು ಗುರಿಯಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿ ಮಗಳು ಜೀವನ ಹಾಳು ಮಾಡಿಕೊಳ್ಳುವುದು ಬೇಡ ಎಂದೇ ಅಪ್ಪ ಗದರಿಸುತ್ತಾರೆ. ಅಷ್ಟು ಮಾತ್ರಕ್ಕೆ ಅಪ್ಪನಿಗೆ 'ವಿಲನ್' ಪಟ್ಟ ಕಟ್ಟುವುದೇ? ಹಾಗಂತ ಎಲ್ಲಾ ಹುಡುಗರು ಕೆಟ್ಟವರೇನೂ ಅಲ್ಲ. ಒಂದು ವೇಳೆ ಪ್ರೀತಿಸಿದವ ಕೈಕೊಟ್ಟ ಅಂದ್ಕೊಳ್ಳಿ...ಮಗಳು ಮತ್ತೆ ತವರು ಮನೆಗೆ ಬರುತ್ತಾಳೆ. ಅವಳು ಆತನ ಪತ್ನಿಯಾಗಿರುವುದಿಲ್ಲ..ಆದರೆ ಆಕೆ ಸಾಯುವವರೆಗೂ ಮಗಳಾಗಿರುತ್ತಾಳೆ. ಅಪ್ಪನ ಕೈಯಲ್ಲಿ ಆಕೆಯ ಜೀವನ ಮತ್ತೆ ಅರಳುತ್ತದೆ. ನಾವು ಹುಡ್ಗೀರು ಇದನ್ನೆಲ್ಲಾ ಯಾಕೆ ಯೋಚಿಸುವುದಿಲ್ಲ?

ಜೀವನದ ಗತಿ ಯಾವ ರೀತಿ ಯಾವ ದಿಶೆಯಲ್ಲಿ ಸಾಗುತ್ತದೆ ಅಂತಾ ಯಾರಿಗೂ ಗೊತ್ತಿರಲ್ಲ. ಆದರೆ ನಮ್ಮ ಮನಸ್ಸು ನಮ್ಮ ಕೈಯಲ್ಲಿರಬೇಕು ಎಂದು ಹೇಳಿದ ನಿಮ್ಮ ಮಾತು ನಿಜ. ಜೀವನದಲ್ಲಿ ಕಷ್ಟ ಬಂದಾಗಲೇ ಜೀವನ ಏನು ಎಂಬುದು ಅಥ೯ವಾಗುವುದು. ಒಂಟಿತನ ನಮ್ಮನ್ನು ನಾವೇ ಅರಿಯುವಂತೆ ಮಾಡುತ್ತದೆ. ಹೀಗಿರುವಾಗ ಜೀವನವನ್ನು ಹೇಗೆ ನಿಭಾಯಿಸಿ ಮುನ್ನಡೆಸಬೇಕೆಂಬುದನ್ನು ನೀವು ಹೇಳಿಕೊಟ್ಟಿದ್ದೀರಿ. ಈ ಜಗತ್ತಿನ ಜಂಜಾಟಗಳನ್ನೆಲ್ಲಾ ನೋಡುವಾಗ ಬದುಕಲ್ಲಿ ನೊಂದವರಿಗಾಗಿ ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಕೊರಗು ಮಾತ್ರ ಮನಸ್ಸನ್ನು ಕಾಡುತ್ತಿರುತ್ತದೆ.

ಕೆಲವೊಮ್ಮೆ ಸೋತು ಕಣ್ಣೀರಿಡುವಾಗ ನಿಮ್ಮ ಮಾತು, ನಿಮ್ಮ ನಗು, ಧೈರ್ಯ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಸೋತ ಕೈಗಳು ಮತ್ತೆ ಲೇಖನಿ ಹಿಡಿದು ಭಾವನೆಗಳೇ ಅಕ್ಷರಗಳಾಗುತ್ತವೆ. ಆಫ್ಟರ್ ಆಲ್ ನಾನು ಪಪ್ಪನ ಮಗಳಲ್ವಾ...ಕಣ್ಣೀರು ಹಾಕುತ್ತಾ ಸುಮ್ನೇ ಕೂರಲ್ಲ ಅಂತಾ ಗೊತ್ತು ತಾನೇ...

ಸ್ಮೈಲ್ ಪ್ಲೀಸ್....
ನೀವು ನಕ್ಕಾಗ ತುಂಬಾ ಕ್ಯೂಟ್ ಕಾಣಿಸ್ತೀರಿ ಎಂಬುದು ನನಗೊಬ್ಬಳಿಗೇ ಗೊತ್ತು. ;)

ಪಪ್ಪಾ...ಮೊನ್ನೆ ಅಮ್ಮ ಏನೋ ಹೇಳ್ತಿದ್ರಲ್ವಾ ಹೊಸ ಪ್ರೊಪೋಸಲ್ ಬಗ್ಗೆ...ಆ ಹುಡುಗನಿಗೆ ನಿಮ್ಮಂತದ್ದೇ ಗುಣವಿದ್ದರೇ ಫಿಕ್ಸ್ ಮಾಡಿ ಬಿಡಿ...ನಿಮ್ಮ ಸೆಲೆಕ್ಷನ್ 100%ಚೆನ್ನಾಗಿಯೇ ಇರುತ್ತೆ ಎಂಬ ವಿಶ್ವಾಸ ನನಗಿದೆ.
ಬಾಕಿ ಉಳಿದ ವಿಷಯ ಎಲ್ಲಾ ಮನೆಗೆ ಬಂದ ನಂತರ ಹೇಳ್ತೇನೆ.

ಹ್ಯಾಪಿ ಫಾದರ್ಸ್ ಡೇ...
LOVE YOU ಪಪ್ಪಾ...

ಇತೀ ನಿಮ್ಮ
ಕಣ್ಮಣಿ.

Comments

manju said…
ರಶ್ಮಿಯವರೆ, ಅಪ್ಪನ ದಿನಕ್ಕೆ ಅತ್ಯುತ್ತಮ ಬರಹದ ಉಡುಗೊರೆ.
@manju
ಧನ್ಯವಾದಗಳು
Nice! Proposal fix aagali. :-)
Rakesh S Joshi said…
ಚೆನ್ನಾಗಿದೆ ರಶ್ಮಿಯವರೇ. ಇಷ್ಟ ಆಯಿತು.
@ Rakesh S Joshi , @ಸುಶ್ರುತ ದೊಡ್ಡೇರಿ

ಧನ್ಯವಾದಗಳು
V.R.BHAT said…
nice! best of luck !

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ