Friday, March 25, 2011

ಅಪ್ಪನ ಮನದಲ್ಲೊಮ್ಮೆ ಇಣುಕಿ...

ಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ. ಅಪ್ಪನ ಜತೆ ಕುಳಿತು ಬಟ್ಟಲಿಗೆ ಕೈ ಹಾಕಿ ದೋಸೆ ತಿನ್ನುತ್ತಿದ್ದ ಮಗಳು ಡಯಟ್ ಅಂತಾ ಕ್ಯಾರೆಟ್ ಜೂಸ್ ಕುಡಿದು ಹೊಟ್ಟೆ ತುಂಬುತ್ತಾಳೆ.

ಮಗಳು ಬದಲಾಗಿದ್ದಾಳೆ. ಕಾಲಕ್ಕೆ ತಕ್ಕಂತೆ ಅವಳು ಜೀವನದಲ್ಲಿ ಬಣ್ಣ ತುಂಬಿಕೊಂಡಿದ್ದಾಳೆ. ದಿನಪತ್ರಿಕೆ ಕೈಯಲ್ಲಿ ಹಿಡಿದು ನಿತ್ಯ ಭವಿಷ್ಯ ಪುಟ ತಿರುವಿದರೂ, ಮಗಳ ಭವಿಷ್ಯದ ಬಗ್ಗೆ ಅಪ್ಪ ಚಿಂತೆಯಲ್ಲಿ ಮುಳುಗುತ್ತಾನೆ. ಅವನ ಕಣ್ಣುಗಳು ಮಸುಕಾದರೂ ಮನಸ್ಸಿನ ದೃಷ್ಟಿ ಶುಭ್ರವಾಗಿದೆ. ರಂಗು ಕಾಣದ ಕೂದಲುಗಳಲ್ಲಿ, ಸುಕ್ಕುಗಟ್ಟಿದ ಚರ್ಮದಲ್ಲಿ ಬದುಕಿನ ಕಪ್ಪು ಬಿಳುಪು ಚಿತ್ರಗಳ ಛಾಯೆಯಿದೆ. ಕಲರ್್ಫುಲ್ ಬದುಕಿನಲ್ಲಿ ಓಡಾಡುವ ಮಗಳ ಹಾದಿಯನ್ನೇ ನೋಡುತ್ತಾ ಅಪ್ಪನಿಗೆ ನಿದ್ದೆ ಬಂದಿದೆ. ಮಗಳು ನಿದ್ದೆಯಿರದ ರಾತ್ರಿಗಳಲ್ಲಿ ಬದುಕಿನ ಕನಸುಗಳಿಗೆ ಬಣ್ಣ ಮೆತ್ತುತ್ತಾಳೆ...

'ಅಪ್ಪ' ಮೊದಲಿನಂತಿಲ್ಲ. ಅವ ಡ್ಯಾಡಿಯಾಗಿದ್ದಾನೆ. ಮಗಳಿಗೆ ಉಪದೇಶ ಕೊಡುವ ಹಕ್ಕು ಅವನಿಗಿಲ್ಲ. ತನ್ನ ಬದುಕಿನ ಹಳೆಯ ಪುಟಗಳನ್ನು ತಿರುವಿ ನೋಡಿದರೆ ಎಲ್ಲವೂ ಎಷ್ಟು ಬೇಗ ಕಳೆದು ಹೋಯಿತಲ್ಲಾ ಎಂದು ಅನಿಸುತ್ತದೆ. ಡೆಲಿವರಿ ರೂಮ್್ನ ಮುಂದಿರುವ ಬೆಂಚಲ್ಲಿ ಕಾದು ಕುಳಿತ ಆ ಸಂಜೆ. ಆಸ್ಪತ್ರೆಯಲ್ಲಿನ ಫಿನಾಯಿಲ್ ವಾಸನೆಗೆ ಜಿಡ್ಡು ಕಟ್ಟಿದ ಮೂಗು...ರಾತ್ರಿ ಒಂದೂವರೆ ಗಂಟೆಯ ಹೊತ್ತಿಗೆ ನಿದ್ದೆ ತೂಕಡಿಸುತ್ತಿದ್ದಂತೆ ಮಗುವಿನ ಅಳು.. .ನಾನು ಅಪ್ಪನಾಗಿ ಬಿಟ್ಟೆ! ಆಸ್ಪತ್ರೆಯ ಕೆಟ್ಟ ವಾಸನೆಗೆ ಒಣಗಿದ ಮೂಗಿಗೆ ಬೇಬಿ ಪೌಡರ್್ನ ಘಮಘಮ. ಮುದ್ದಾದ ಹೆಣ್ಮಗು ನನ್ನಾಕೆಯ ಬಳಿ ಮಲಗಿದ್ದಳು. ಮುದ್ದು ಮುದ್ದಾಗಿದ್ದ ಅವಳ ಪುಟ್ಟ ಕೆನ್ನೆಗೆ ಚುಂಬಿಸುತ್ತಾ ಅಮ್ಮೀ ಅಂತಾ ಕರೆದಿದ್ದೆ. ಅವಳ ಬಾಲ್ಯದೊಂದಿಗೆ ನನ್ನ ಯೌವನ ಕರಗಿತು. ರಾತ್ರಿಯೆಲ್ಲಾ ಕಥೆ ಹೇಳುವಂತೆ ಕಾಡಿಸಿ ನನ್ನೆದೆಯಲ್ಲಿ ಬೆಚ್ಚನೆ ಮಲಗಿ ನಿದ್ದೆ ಮಾಡಿದ್ದು, ಮಡಿಲಲ್ಲಿ ಕುಳಿತು ಉಚ್ಚೆ ಹೊಯ್ದಾಗ ನನಗಾದ ಬೆಚ್ಚನೆಯ ಅನುಭವ...ಮಾತಿಗೆ ನಿಲುಕದ್ದು. ನಾನು ಏನು ಹೇಳಿದರೂ ಹೂಂ ಅನ್ನುವ ನನ್ನ ಹುಡುಗಿ ಬೆಳೆಯುತ್ತಾ ಬಂದಂತೆ ಆಕೆಯ ಆಸೆಗಳ ಪಟ್ಟಿಯೂ ಬೆಳೆಯುತ್ತಾ ಹೋಯಿತು. ಎಲ್ಲದಕ್ಕೂ ನಾನು ಹೂಂ ಅಂದೆ. ಅವಳು ಹಾರುವ ಚಿಟ್ಟೆಯಾದಳು. ಅವಳನ್ನು ಹಿಡಿಯ ಹೊರಟರೆ ನನಗೆ ದಕ್ಕಿದ್ದು ಅದರ ಪುಟ್ಟ ರೆಕ್ಕೆಯ ಬಣ್ಣ ಮಾತ್ರ...

ಅವಳ ಬಣ್ಣದ ಲೋಕದಲ್ಲಿ ನಾನು ಬರೀ ಕುಂಚ ಅದ್ದಿ ತೆಗೆಯುವ ನೀರು. ವಿವಿಧ ಬಣ್ಣಗಳು ನನ್ನೊಡಲನ್ನು ಸೇರಿದ ನಾನು ರಂಗೀಲ. ಕಾಮನ ಬಿಲ್ಲು ಯಾಕೆ ಬಾಗುತ್ತೆ ಅಂತಾ ಪ್ರಶ್ನೆ ಕೇಳುತ್ತಿದ್ದವಳು ಕಾಮನ ಬಿಲ್ಲನ್ನು ಹಿಡಿಯ ಹೊರಟಿದ್ದಳು. ಅಪ್ಪಾ...ನಾನೂ ನಿನ್ನೊಂದಿಗೆ ಬರುತ್ತೇನೆ ಎಂದು ರಚ್ಚೆ ಹಿಡಿಯುತ್ತಿದ್ದ ಬಾಲೆ, ನಾನೇ ಹೋಗಿ ಬರ್ತೀನಿ ಅಂತಾಳೆ. ನನ್ನ ಕಿರುಬೆರಳು ಹಿಡಿಯುತ್ತಿದ್ದ ಅವಳ ಕೈಗಳ ಮದರಂಗಿ ಕೆಂಪಾಗಿದೆ. ಬೈತಲೆ ತೆಗೆದು ಬಾಚಿ ಎರಡು ಜಡೆ ಹಾಕಿ ಕಣ್ಣಿಗೆ ಕಾಡಿಗೆ ತೀಡುತ್ತಿದ್ದ ಅವಳ ಮುದ್ದು ಕಂಗಳಲ್ಲಿ ನೀರು ಜಿನುಗುತ್ತಿದ್ದೆ. ಡ್ಯಾಡಿ...ಎಂದು ನನ್ನ ಎದೆಗೊರಗಿ ಅಳುವಾಗ, ನನ್ನ ಅಳುವನ್ನು ನುಂಗಿದ್ದೇನೆ. ಅವಳು ಕೈಯನ್ನು ಗಟ್ಟಿಯಾಗಿ ಹಿಡಿದು ಕೊಂಡು ಅವ ಹೆಜ್ಜೆ ಹಾಕುವಾಗ ಅವಳ ಗೆಜ್ಜೆಯ ನಾದಕ್ಕೆ ನನ್ನೆದೆಯು ಕಂಪಿಸುತ್ತದೆ. ಸಪ್ತಪದಿ ತುಳಿದು ಆಕೆ ಹೊರಟು ನಿಂತಿದ್ದಾಳೆ. ಮುಂದಿನ ಆಷಾಡ ಬರುವ ವರೆಗೆ ನನ್ನ ಜೀವ ಬಿಗಿಹಿಡಿದಿದ್ದೇನೆ.

Wednesday, March 23, 2011

ಹಳೇ ನಿದ್ರೆ ಪುರಾಣ...

ತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ ಕೆಲಸ ಮಾಡುವಾಗ ಬ್ಲಾಗ್ ಬರೆಯೋಣ ಅಂತಾ ಅನಿಸುತ್ತೆ. ಟಾಯ್ಲೆಟ್್ನಲ್ಲೇ ಹೆಚ್ಚಿನ ವಿಷಯಗಳು ನೆನಪಿಗೆ ಬರುತ್ತೆ, ಆಮೇಲೆ ಬಂದು ಬರೆಯೋಣ ಎಂದು ಕೂತರೇ ಪದಗಳೇ ಸಿಗದು. ಕೆಲವೊಮ್ಮೆ ಬರೆಯಲು ವಿಷಯಗಳು ಸುಮಾರು ಇರುತ್ತದೆ, ಇವುಗಳಲ್ಲಿ ಯಾವುದನ್ನು ಬರೆಯಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುವುದೂ ಉಂಟು. ಅಂತೂ ಬ್ಲಾಗ್್ಗೆ ಏನು ಬರೆಯಲಿ? ಎಂಬ ಚಿಂತೆಯಿಂದ ಮುಕ್ತಳಾಗಲು ಅಪ್ಪನಿಗೆ ಫೋನಾಯಿಸಿ, ಏನಾದರೂ ವಿಷಯ ಹೇಳಿ ಅಂದೆ. ನಿನಗಿಷ್ಟವಿರುವ ವಿಷಯದ ಬಗ್ಗೆ ಬರಿ..ಅಂದ್ರು. ಆಮೇಲೆ ನನಗಿಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡತೊಡಗಿದೆ. ಅರೇ..ವಿಷಯ ಸಿಕ್ಕಿತು.. ನಿದ್ದೆ!

ನಿದ್ದೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೇವೇಗೌಡ್ರನ್ನು ನೋಡಿ...ಇನ್ನು ವಿಧಾನಸಭೆ, ಲೋಕ ಸಭಾ ಕಲಾಪದ ನಡುವೆ ಗಡದ್ದಾಗಿ ನಿದ್ದೆ ಹೋಗುವ ಮಂದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ನಿದ್ದೆ ಅದೊಂದು ಸುಖ, ಭಾಗ್ಯ...ಅದು ಎಲ್ಲರಿಗೂ ಒಲಿಯುವುದಿಲ್ಲ. ನನಗಂತೂ ನಿದ್ದೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಕಣ್ರೀ..ನಾನು ಪಾಪುವಾಗಿದ್ದಾಗ ನಿದ್ದೆ ಮಾಡ್ತಾನೇ ಇರ್ತಿಲ್ವಂತೆ. ಹಾಗಂತ ರಾತ್ರಿ ವೇಳೆ ರಂಪಾಟ ಮಾಡಿ ಅಮ್ಮನ ನಿದ್ದೆಯನ್ನೂ ಕೆಡಿಸುತ್ತಿರಲಿಲ್ಲ. ಸುಮ್ಮನೆ ಕಣ್ಣು ಬಿಟ್ಟು ನೋಡ್ತಾ ಇರ್ತಿದ್ದೆ ಅಂತಾ ಅಮ್ಮ ಹೇಳ್ತಿದ್ರು. ಪಾಪುವಾಗಿರುವಾಗ ನಾನು ತುಂಬಾ ಪಾಪ, ಕೋಪನೇ ಬರ್ತಿರ್ಲಿಲ್ಲ ಅಮ್ಮ ಹೇಳ್ತಾರೆ.(ಈವಾಗ ನಾನು ಹಾಗಿಲ್ಲ :))

ಶಾಲೆಗೆ ಹೋಗುವ ಸಮಯಲ್ಲೂ ಹಾಗೆ, ಬೆಳಗ್ಗೆ ಬೇಗನೆ ಏಳ್ತಾ ಇದ್ದೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ನನಗಿತ್ತು. ಆದ್ರೆ ಕ್ಲಾಸಿನಲ್ಲಿ ಬೋರ್ ಹೊಡೆಯೋಕೆ ಶುರುವಾದರೆ ಸಾಕು ನಾನು ನಿದ್ರಾದೇವಿಯ ಧ್ಯಾನದಲ್ಲಿ ಮುಳುಗುತ್ತಿತ್ತೆ. ಸಾಮಾಜಿಕ ಅಧ್ಯಯನ ಪಾಠ ಮಾಡುತ್ತಿದ್ದರೆ ನನಗೆ ಜೋರು ನಿದ್ದೆ, ಆದ್ರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುತ್ತಿದ್ದೆ ಎಂಬ ಕಾರಣಕ್ಕೆ ನಿದ್ದೆ ಮಾಡಿದ್ರೂ ಟೀಚರ್ ಏನೂ ಹೇಳ್ತಿರಲಿಲ್ಲ. ಮನೆಯಲ್ಲಿಯೂ ಹಾಗೇನೇ..ಟಿವಿ ನೋಡ್ತಿದ್ರೆ ನಿದ್ದೆ ಹತ್ತಿರ ಸುಳಿಯಲ್ಲ, ಹೋಗಿ ಪಾಠ ಪುಸ್ತಕ ತೆರೆದರೆ ಸಾಕು ನಿದ್ದೆ ಹಾಜರ್. ನಾನು ಪರೀಕ್ಷೆ ಬಂದಾಗ ಮಾತ್ರ ಓದುವ ವಿದ್ಯಾರ್ಥಿಯಾಗಿದ್ದರಿಂದ ಅದಕ್ಕಿಂತ ಮುಂಚೆ ಎಷ್ಟೇ ಓದಿದರೂ ತಲೆಗೆ ಹತ್ತುತ್ತಿರಲಿಲ್ಲ. ಟೀವಿಯಲ್ಲಿರುವ ಎಲ್ಲಾ ಜಾಹೀರಾತುಗಳು ಬಾಯಿಪಾಠ ಬರುತ್ತಿತ್ತು. ಅದೇ ವೇಳೆ ಪದ್ಯವನ್ನು ಬಾಯಿಪಾಠ ಮಾಡಲು ಕಷ್ಟಪಡುತ್ತಿದ್ದೆ.

ದಿನ ದಿನದ ಪಾಠವನ್ನು ಓದಿಕೋ, ಟೈಂ ಟೇಬಲ್ ಮಾಡಿ ಓದು ಅಂತಾ ಅಕ್ಕ ಉಪದೇಶ ಕೊಡುತ್ತಿದ್ದರೂ ಟೈಂ ಟೇಬಲ್ ಮಾತ್ರ ಸಿದ್ಧವಾಗುತ್ತಿತ್ತೇ ಹೊರತು ಬೇರೇನೂ ಬೆಳವಣಿಗೆ ಕಾಣುತ್ತಿರಲಿಲ್ಲ. ಪರೀಕ್ಷೆಯ ಮುನ್ನಾ ದಿನ ಕಣ್ಣಿಗೆ ನೀರು ಹಾಕಿ, ಟಬ್್ನಲ್ಲಿ ನೀರಿಟ್ಟು ಅದರಲ್ಲಿ ಕಾಲು ಮುಳುಗಿಸಿ ನಿದ್ದೆ ಬಾರದಂತೆ ಕಸರತ್ತು ಮಾಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ತಮಾಷೆಯೆಂದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬ ಲೇಖನವನ್ನು ನಾನು ಆವಾಗ ನಮ್ಮೂರಿನ ಪತ್ರಿಕೆಗೆ ಬರೆಯುತ್ತಿದ್ದೆ. ಅಕ್ಕ, ಪರೀಕ್ಷೆಯ ಮುನ್ನಾ ದಿನ ಗಡದ್ದಾಗಿ ನಿದ್ದೆ ಹೋಗುತ್ತಿರುವುದನ್ನು ಕಂಡರೆ ನನಗೆ ಹೊಟ್ಟೆಉರಿಯುತ್ತಿತ್ತು. ಹೇಗೋ ಹೈಸ್ಕೂಲ್ ಮುಗಿಸಿ ಪ್ಲಸ್ ಟು ಕ್ಲಾಸಿನಲ್ಲಾದರೂ ನಿದ್ದೆ ಮಾಡಬಾರದೆಂದು ನಿರ್ಧರಿಸಿದೆ. ಆದರೆ, ಅಲ್ಲಿಯೂ ನಿದ್ರಾ ದೇವಿ ನನ್ನನ್ನು ಬಿಡಲಿಲ್ಲ. ಫಿಸಿಕ್ಸ್ ಪಿರಿಯಡ್್ನಲ್ಲಿ ನನಗೆ ಜೋರು ನಿದ್ದೆ ಬರುತ್ತಿತ್ತು. ಹಿಟ್ಲರ್ ಎಂದು ಕರೆಯಲ್ಪಡುವ ನಮ್ಮ ಫಿಸಿಕ್ಸ್ ಸರ್್ಗೆ ನಾನು ನಿದ್ದೆ ಮಾಡುವುದನ್ನು ನೋಡಿದ್ರೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಅವರು ಚಾಕ್ ಪೀಸ್ ಬಿಸಾಡುತ್ತಿದ್ದರು. ಅದು ಹೆಚ್ಚಾಗಿ ನನ್ನ ಹಿಂದಿನ ಬೆಂಚಲ್ಲಿ ಕುಳಿತಿರುವ ಹುಡುಗಿಯ ತಲೆಗೇ ಬೀಳುತ್ತಿತ್ತು. ನಾನು ಶತಾಯಗತಾಯ ಪ್ರಯತ್ನಿಸಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗ್ತಿರಲಿಲ್ಲ. ಅದಕ್ಕಾಗಿ ನನ್ನ ಪಕ್ಕ ಕುಳಿತುಕೊಳ್ಳುವ ಗೆಳತಿಯಲ್ಲಿ ಹೇಳಿದ್ದೆ, ನನಗೆ ನಿದ್ದೆ ಬಂದಾಗ ಜೋರಾಗಿ ಪಿಂಚ್ ಮಾಡು ಎಂದು. ಅವಳು ಪಿಂಚ್ ಮಾಡಿದಾಗ ಮಾತ್ರ ನಿದ್ದೆ ಮಾಯ, ಮತ್ತೆ ಅದು ಪ್ರತ್ಯಕ್ಷವಾಗಿ ನನ್ನನ್ನು ಕನಸಿನ ಲೋಕದಲ್ಲಿ ತೇಲಿಸುತ್ತಿತ್ತು. ಕಣ್ಮುಚ್ಚಿದರೆ ಸಾಕು ಕನಸು ಕಾಣುವ ವ್ಯಕ್ತಿ ನಾನಾಗಿದ್ದರಿಂದ ಪಾಠದ ವೇಳೆಯಲ್ಲೂ ನನ್ನ ಕನಸುಗಳಿಗೆ ತೊಂದರೆಯಾಗಿರಲಿಲ್ಲ. ಕ್ಲಾಸಿನಲ್ಲಿ ಗಡದ್ದಾಗಿ ನಿದ್ದೆ ಮಾಡಿರುವ ಕಾರಣ ಮನೆಯಲ್ಲಿ ನಿದ್ದೆ ಬರುತ್ತಿರಲಿಲ್ಲ.

ಮತ್ತೆ ನಿದ್ದೆ ಕಾಟ ಕೊಟ್ಟದ್ದು ಕಾಲೇಜಿನಲ್ಲಿ. ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಪಾಠ ಮಾಡುತ್ತಿದ್ದರೆ ಸಾಕು, ನಾನು ಆರಾಮವಾಗಿ ನಿದ್ದೆ ಮಾಡುತ್ತಿದ್ದೆ. ಶಾಲಾ ದಿನಗಳಲ್ಲಿ ಪಾಠ ಮಾಡುವಾಗ ನಿದ್ದೆ ಮಾಡಿ ಸುಮಾರು 12 ವರ್ಷಗಳ ಅನುಭವವಿದ್ದ ನನಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಣ್ಣು ಮುಚ್ಚದೆಯೇ ನಿದ್ದೆ ಮಾಡುವುದು ಹೇಗೆ ಎಂಬ ವಿದ್ಯೆ ಕರಗತವಾಗಿತ್ತು. ಕ್ಲಾಸಿನಲ್ಲಿ ಟೀಚರ್ ಪಾಠ ಮಾಡುತ್ತಿದ್ದರೆ ನಾನಿಲ್ಲಿ ಕನಸು ಕಾಣುತ್ತಿದ್ದೆ. ಅದೂ ಅಂತಾ ಇಂತಾ ಕನಸು ಅಲ್ಲಾರೀ...ಮಹಾನ್ ವ್ಯಕ್ತಿಗಳನ್ನು ಇಂಟರ್್ವ್ಯೂ ಮಾಡುವುದು, ಮಿಸೈಲ್ ತಯಾರಿಕೆ, ಬಾಹ್ಯಾಕಾಶ ಯಾನ ಹೀಗೆ ದೊಡ್ಡ ದೊಡ್ಡ ಕನಸುಗಳೇ ನನಗೆ ಬೀಳುತ್ತಿತ್ತು. ಯಾವುದಾದರೂ ಕಥೆ, ಸಿನಿಮಾ, ಕ್ರಿಕೆಟ್ ನೋಡಿದರೆ ಅದರಲ್ಲಿರುವ ವ್ಯಕ್ತಿಗಳನ್ನು ಭೇಟಿ ಮಾಡಿ ಕನಸಿನಲ್ಲೇ ಮಾತಾಡಿ ಬರುತ್ತಿದ್ದೆ. ಕನಸಿನಿಂದ ಎಚ್ಚರವಾದಾಗ ಅದೇ ಹಳೇ ಬೋರ್ಡು, ಅದೇ ಟೀಚರ್...
ಪಾಠದೊಂದಿಗೆ ನೋಟ್ಸ್ ಕೊಟ್ಟರೆ ಬರೆಯುತ್ತಾ ಬರೆಯುತ್ತಾ ಅಕ್ಷರಗಳು ಎಲ್ಲೋ ಹೋಗಿ ಬಿಡುತ್ತಿದ್ದವು. ಕೆಲವೊಮ್ಮೆ ನೋಟ್ಸ್್ನ ಪೇಜ್ ದಾಟಿ ಡೆಸ್ಕ್ ಮೇಲೂ ಬರೆದದ್ದು ಇದೆ. ಮರುದಿನ ಆ ಪುಟ ನೋಡಿದರೆ ಇದನ್ನು ಬರೆದದ್ದು ನಾನೇನಾ? ಅಂತಾ ಗಾಬರಿಯಾಗುತ್ತಿತ್ತು. ಇಂಜಿನಿಯರಿಂಗ್ ಅಲ್ವಾ ಹೇಗಾದರೂ ಪಾಸ್ ಆಗ್ಬೇಕು ಅಂತಾ ಓದಲು ಕುಳಿತರೆ ಮತ್ತೆ ಅದೇ ನಿದ್ದೆ. ಅಪ್ಪ ನನ್ನನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಬೇಕು ಅಂತಾ ಹೇಳಿ ಮಲಗಿದರೆ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಅಪ್ಪ ರಾಗ ಎಳೆಯಬೇಕು. ಅಲರಾಂ ಇಟ್ಟು ಮಲಗಿ ಕೊಂಡರೂ ಅದೇ ಕಥೆ. ಅದು ಕಿರುಚ ತೊಡಗಿದೊಡನೆ ಅದರ ತಲೆಗೆ ಬಡಿದು ಮತ್ತೆ ಗಡದ್ದಾಗಿ ನಿದ್ದೆ ಹೋಗುತ್ತಿದ್ದೆ. ನಿಜ ಹೇಳಲಾ...ಅಲರಾಂ ಆಫ್ ಆದ್ಮೇಲೆ ಚೆನ್ನಾಗಿ ನಿದ್ದೆ ಬರುತ್ತಿತ್ತು. ಆಮೇಲೆ ಎದ್ದು ಪುಸ್ತಕ ಹಿಡಿದು ಕೂತರೆ ನಾಲ್ಕು ಪೇಜ್ ಓದುವಷ್ಟರೊಳಗೆ ನಿದ್ದೆ ಬಂದು ಬಿಡ್ತಿತ್ತು. ನಾನು ಒಂದು ಗಂಟೆಯ ಮೊದಲು ನೋಡಿದಾಗಲೂ ಇದೇ ಪೇಜ್ ಇತ್ತು ಅಂತಾ ಅಪ್ಪ ಹೇಳಿದಾಗಲೇ ಎಚ್ಚರವಾಗುತ್ತಿತ್ತು. ಟೇಬಲ್ ಮೇಲೆ ಬಿಡಿಸಿಟ್ಟ ಪುಸ್ತಕವೇ ತಲೆದಿಂಬು ಆದದ್ದೂ ಇದೆ. ಇಂಜಿನಿಯರಿಂಗ್ ಕಲಿಯುವಾಗ ಅನ್್ಲೀಶ್್ಡ್ ಜಾವಾ ಎಂಬ ಪಠ್ಯ ಪುಸ್ತಕ ನನ್ನ ಫೇವರಿಟ್. ಅದು ತುಂಬಾ ದಪ್ಪವಿದ್ದ ಕಾರಣ ಅದರ ಮೇಲೆ ತಲೆಯಿಟ್ಟರೆ ಬೇಗ ನಿದ್ದೆ ಬರುತ್ತಿತ್ತು. ನಿದ್ದೆಯನ್ನೋಡಿಸಲು ತಲೆಗೆ ಸ್ನಾನ ಮಾಡಿದ್ದಾಯ್ತು, ಕಾಫಿ ಕುಡಿದದ್ದೂ ಆಯ್ತು..ಏನೆಲ್ಲಾ ಕಸರತ್ತು ಮಾಡಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗಲು ಒಪ್ಪಲೇ ಇಲ್ಲ. ಕೆಲವೊಮ್ಮೆ ಎಕ್ಸಾಂ ಹಾಲ್್ನಲ್ಲಿಯೂ ನಿದ್ದೆ ಬರುತ್ತಿತ್ತು. ಅಂತೂ ಇಂತೂ ನೀನಿಲ್ಲದೆ ನಾನಿಲ್ಲ ಎಂದು ಹೇಳುವ ನಿದ್ದೆಯನ್ನು ಸ್ವಲ್ಪ ದೂರ ಮಾಡಿ ಇಂಜಿನಿಯರಿಂಗ್ ಮುಗಿಸಿದ್ದಾಯ್ತು.


ಇನ್ನು ಕೆಲಸ. ಯಾವಾಗ ನಾನು ಕೆಲಸಕ್ಕೆ ಸೇರಿದನೋ ನಿದ್ರಾದೇವಿ ನನ್ನಿಂದ ದೂರವಾಗತೊಡಗಿದಳು. ಚೆನ್ನೈಯಿಂದ ಊರಿಗೆ ಬರಬೇಕಾದರೆ ರಾತ್ರಿ ಹೊತ್ತಿನಲ್ಲಿ ಯಾತ್ರೆ. ಟ್ರೈನ್್ನಲ್ಲಿ ನಿದ್ದೆ ಮಾಡದೆಯೇ ಸುರಕ್ಷಿತವಾಗಿ ಮನೆಗೆ ತಲುಪಿತ್ತಿದ್ದೆ. ಟ್ರೈನ್್ನಲ್ಲಿ ನಿದ್ದೆ ಮಾಡ್ಬಾದ್ರು...ಎಂಬ ಅಮ್ಮನ ಆಜ್ಞೆ, ಆದ್ದರಿಂದ ಸ್ಲೀಪರ್್ನಲ್ಲಿ ಮಲಗಿದ್ರೂ ಕಣ್ಣು ತೆರೆದೇ ಮಗಲುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ರಾತ್ರಿ ಪಾಳಿ ಬೇರೆ. ಆದ್ರೂ ಬೆಳಗ್ಗಿನ ಹೊತ್ತು ನಿದ್ದೆ ಸ್ಕಿಪ್ ಮಾಡಿ ಡೆಡ್್ಲೈನ್್ಗೆ ಲೇಖನ ಸಬ್್ಮಿಟ್ ಮಾಡುವ ಗಡಿಬಿಡಿ. ಕೆಲವೊಮ್ಮೆ ಡೆಡ್್ಲೈನ್ ಮೀಟ್ ಮಾಡಲಿರುವ ಒತ್ತಡದಿಂದ ನಿದ್ದೆ ಹತ್ತಿರ ಸುಳಿಯುವುದೇ ಇಲ್ಲ. ಹೇಗಾದರೂ ನಿದ್ದೆ ಮಾಡಬೇಕಲ್ವಾ..ಅದಕ್ಕೆ ಯಾವುದಾದರೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತೇನೆ. ಅದೂ ಥ್ರಿಲ್ಲಿಂಗ್ ಆಗಿದ್ದರೆ, ನಿದ್ದೆಯೂ ದೂರ ದೂರ...

ಅಬ್ಬಾ..ಈವಾಗ ನಿದ್ದೆ ಬೇಕು, ನಿದ್ದೆ ಬರ್ತಿಲ್ಲಾ..ಈ ಮೊದಲು ನಿದ್ದೆಯೇ ದೂರ ಹೋಗು ಎಂದಾಗ ಅದು ನನ್ನಗಂಟಿಕೊಂಡಿತ್ತು. ಎಂಥಾ ವಿಪರ್ಯಾಸ ಅಲ್ವಾ. ಆ ಶಾಲಾ ದಿನಗಳಲ್ಲಿ ನಾನು ಮಾಡಿದ ನಿದ್ದೆಯ ಗಮ್ಮತ್ತನ್ನು ನೆನೆಸಿಕೊಂಡಾಗ ಏನೋ ಒಂಥರಾ ಸುಖ. "ತರಗತಿಯಲ್ಲಿ ನಿದ್ದೆ ಹೋಗುವವರು ನಿಜವಾಗಿಯೂ ಭಾಗ್ಯವಂತರು, ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ನನ್ನಂತವರನ್ನು ಉದ್ದೇಶಿಸಿಯೇ ಹೇಳಿದ್ದು ಅಂತಾ ಅನಿಸುತ್ತಿದೆ.ಆ ನಿದ್ದೆಯ ಗಮ್ಮತ್ತೇ ಅಂತದ್ದು.

Tuesday, March 8, 2011

ಆಕೆ 'ಸ್ವಬಂಧನ'ದಿಂದ ಮುಕ್ತವಾಗಲಿ...

ದಿನವಿಡೀ ಕೀಲಿಮಣೆ ಕುಟ್ಟುತ್ತಾ ಡೆಡ್್ಲೈನ್ ಎಂಬ ಭೂತಕ್ಕೆ ಭಯ ಪಡುತ್ತಾ ನನ್ನ ದಿನಚರಿ ಮುಗಿಯತ್ತೆ. ಇಂದು ಮಹಿಳಾ ದಿನಾಚರಣೆ ಅದಕ್ಕೆ ಏನಾದರೂ ಗೀಚೋಣ ಎಂದು ಕುಳಿತಾಗ ಹೊಳೆದ ಕೆಲವೊಂದು ವಿಚಾರಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಇದು.

ಮಹಿಳಾ ದಿನಾಚರಣೆ ಎಂದ ಕೂಡಲೇ ಮಹಿಳೆಯ ಬಗ್ಗೆ ಬರೆಯಬೇಕಲ್ವಾ. ಇರಲಿ, ಮಹಿಳೆಯ ಬಗ್ಗೆ ಓದುವಾಗ ನಾನು ಗಮನಿಸಿದ್ದು ಅದರಲ್ಲಿ ಹೆಚ್ಚಾಗಿ ಸ್ತ್ರೀ ಶೋಷಣೆಯ ಬಗ್ಗೆಯೇ ಪುಟಗಟ್ಟಲೆ ವಿವರಣೆ ನೀಡಲಾಗುತ್ತದೆ. ಯಾವುದೇ ಮಹಿಳಾ ವಿಚಾರಗೋಷ್ಠಿಗೆ ಹೋಗಿ, ಅಲ್ಲಿ ಕೇಳುವುದೇ ಅಂದಿನ ಕಾಲದಿಂದ ಇಂದಿನ ಕಾಲದ ವರೆಗೆ ಪುರುಷರು ದಬ್ಬಾಳಿಕೆ ನಡೆಸುತ್ತಾ ಇದ್ದಾರೆ. ಪುರುಷರು ಹಾಗೆ ಮಾಡಿದ್ರು, ಹೀಗೆ ಮಾಡಿದ್ರು... ಸ್ತ್ರೀ ಶೋಷಣೆ!...
ಸ್ತ್ರೀ ಎಂಬ ಪದ ಹೆಡ್್ಲೈನ್ ಆಗಿದ್ದರೆ ಅಲ್ಲಿ ಶೋಷಣೆ ಕಿಕ್ಕರ್. ಹಾಗಂತ ಇಂದಿನ ಕಾಲದಲ್ಲಿ ಸ್ತ್ರೀ ಶೋಷಣೆ ನಡೆಯುತ್ತಿಲ್ಲ ಎಂದು ನಾನು ಹೇಳಲ್ಲ. ಶೋಷಣೆ, ದಬ್ಬಾಳಿಕೆಗಳಿಗೆ ಎಂದೂ ಬ್ರೇಕ್ ಬಿದ್ದಿಲ್ಲ. ಆದರೆ ಬೇಜಾರಿನ ವಿಷ್ಯ ಏನಪ್ಪಾ ಅಂದ್ರೆ ಇಂತಹಾ ಕಥೆಗಳನ್ನು ಹೇಳುತ್ತಾ ಕೆಲವರು ತಮ್ಮನ್ನು ತಾವೇ ಸ್ತ್ರೀವಾದಿ ಎಂದು ಬಿಂಬಿಸಿಕೊಳ್ಳುತ್ತಾರೆ. ನಿಜ ಹೇಳಬೇಕಾದ್ರೆ ಓರ್ವ 'ಸ್ತ್ರೀವಾದಿ' ಎಂದರೆ ಪುರುಷರನ್ನು ದೂರುವ ಮೂಲಕ, ಆತನನ್ನು ಜರೆಯುವ ಮೂಲಕ ಸ್ತ್ರೀಯನ್ನೇ ಹೊಗಳುವ ಮೂಲಕ ಪಟ್ಟಗಿಟ್ಟಿಸಿಕೊಳ್ಳುವುದಲ್ಲ. ದಬ್ಬಾಳಿಕೆ ಮಹಿಳೆಯಿಂದಲೂ ಆಗಲ್ವಾ? ವರದಕ್ಷಿಣೆ ವಿಷಯದಲ್ಲಿ ಸೊಸೆ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸಾಯುತ್ತಾಳೆ. ಅದು ಆಕೆಯ ದುರ್ವಿಧಿ. ಇಂತಹ ಸುದ್ದಿಯನ್ನೋದುವಾಗ ನನ್ನ ಮನಸ್ಸಲ್ಲಿ ಕಾಡಿದ ಪ್ರಶ್ನೆ .ಯಾವತ್ತೂ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸೊಸೆ ಮಾತ್ರ ಯಾಕೆ ಸಾಯ್ತಾಳೆ? ಅತ್ತೆ ಅಡುಗೆ ಮನೆಗೆ ಹೋದಾಗ ಸಿಡಿಯದ ಸ್ಟೌ, ಸೊಸೆ ಬಂದಾಕ್ಷಣ ಯಾಕೆ ಸಿಡಿಯುತ್ತೆ?

ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮನಸ್ಸನ್ನು ಕಾಡುವುದು ಸಾಮಾನ್ಯ. ಆದಾಗ್ಯೂ, ಸಮಾಜದಲ್ಲಿ ಸ್ತ್ರೀ ಪುರಷರು ಸಮಾನರು. ಇಬ್ಬರಿಗೂ ಬದುಕುವ ಸಮಾನ ಹಕ್ಕಿದೆ, ಮಾಡಬೇಕಾದ ಕರ್ತವ್ಯಗಳ ಪಟ್ಟಿ ಒಂದೇ ರೀತಿ ಇದೆ. ಹೀಗಿರುವಾಗ ಸ್ತ್ರೀ ಪುರುಷರ ನಡುವೆ ಕಂದಕ ಯಾಕೆ? ಕೇವಲ ಹೆಣ್ಣೊಬ್ಬಳು ಸ್ತ್ರೀವಾದಿಯಾಗಬೇಕಿಂದಿಲ್ಲ. ಪುರುಷರು ಸ್ತ್ರೀ ವಾದಿಗಳಾಗಬಹುದು. ಮಹಿಳೆಯನ್ನು ಗೌರವಿಸುವ, ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿ, ಸಮಾನ ಅವಕಾಶಗಳನ್ನು ಕಲ್ಪಿಸುವವರೇ ನಿಜವಾದ ಸ್ತ್ರೀವಾದಿಗಳು. ಬಾಕಿ ಉಳಿದವರೆಲ್ಲ ಸ್ತ್ರೀ ವ್ಯಾಧಿಗಳು ಅಷ್ಟೇ...

ಎಲ್ಲಾ ಶೋಷಣೆ ದಬ್ಬಾಳಿಕೆಯಿಂದ ಮುಕ್ತವಾಗಲು ಮಹಿಳೆಯರು ಮೊದಲು ಮುಖ್ಯವಾಹಿನಿಗೆ ಬರಬೇಕು. ವಿದ್ಯಾರ್ಜನೆಯಿಂದಲೇ ಇದು ಸಾಧ್ಯವಾಗಿದ್ದರೂ, ಕೆಲವೊಂದು ಮಹಿಳೆಯರು ತನ್ನನ್ನು ತಾನೇ ಬಂಧಿಯಾಗಿರಿಸುವ ಮೂಲಕ ಮೂಲೆ ಗುಂಪಾಗುತ್ತಾರೆ. ಇದು ಕೇವಲ ಸಾಧನೆ ಮಾಡಬೇಕೆಂದಿರುವ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದು. 'ಸ್ವಬಂಧನ 'ಕ್ಕೊಳಗಾದ ಮಹಿಳೆಯರು ಅದೆಲ್ಲಾ ನನ್ನ ಕೈಯಿಂದ ಆಗಲ್ಲ ಎಂದು ತಮ್ಮ ಮುಂದೆಯೇ ಲಕ್ಷ್ಮಣರೇಖೆ ಎಳೆದು ಕೊಂಡು ಕೂರುತ್ತಾರೆ. ಅವರು ಏನಂತಾರಪ್ಪಾ, ಇವರು ಏನಂತಾರಪ್ಪಾ ಎಂದು ಆಕೆಯ ಮನಸ್ಸಲ್ಲಿ ಭಯ. ಇಂತಹಾ ಭಯಗಳು ಸಾಮಾನ್ಯ ಇದ್ದೇ ಇರುತ್ತದೆ. ಯಾಕೆಂದರೆ ಇದು ಭಾರತ. ಇಲ್ಲಿ ಸಂಸ್ಕೃತಿಗೆ ಬೆಲೆ ಇದೆ. ಇದರರ್ಥ ಹೆಣ್ಣು ಮನಸೋಇಚ್ಛೆ ವರ್ತಿಸಬೇಕೆಂದಲ್ಲ. ಉದಾಹರಣೆಗೆ ಮಹಾನಗರದಲ್ಲಿ ಟೀಶರ್ಟ್ ಜೀನ್ಸ್ ಹಾಕಿ ಓಡಾಡುವ ಹುಡುಗಿ, ತನ್ನ ಊರಲ್ಲಿ ಸಲ್ವಾರ್ ಹಾಕಿ ಲಜ್ಜೆಯಿಂದ ನಡೆಯುತ್ತಾಳೆ. ಇದು ಭಯವಲ್ಲ, ಆಕೆ ಈ ಮೂಲಕ ಸಮಾಜವನ್ನು ಆಕೆ ಗೌರವಿಸುತ್ತಾಳೆ. ಸಮಾಜದಲ್ಲಿ ಒಳಿತು ಕೆಡುಕು ಇದ್ದೇ ಇರುತ್ತೆ. ಹೀಗಿರುವಾಗ ಸಾಧನೆ ಮಾಡಬೇಕೆಂದು ಹೊರಟ ಮಹಿಳೆ ಯಾವುದನ್ನೂ ಲೆಕ್ಕಿಸಬಾರದು. ನನ್ನ ವೃತ್ತಿ ಜೀವನದಲ್ಲಿ ಈವರೆಗೆ ನಾನು ಸುಮಾರು 30 ರಷ್ಟು ಸಾಧಕಿಯರನ್ನು ನಾನು ಭೇಟಿ ಮಾಡಿದ್ದೇನೆ. ಸಾಧನೆಗೆ ಅಡ್ಡಿ ಆತಂಕಗಳು ಇದ್ದೇ ಇರುತ್ತೆ, ಆದರೆ ಅದನ್ನು ನಿಭಾಯಿಸಿ ಮುಂದೆ ಬರುವುದೇ ಜೀವನ ಅಲ್ವಾ ಎಂದು ಹೇಳುವ ಅವರ ಮಾತು ಎಷ್ಟೊಂದು ಸ್ಪೂರ್ತಿದಾಯಕ ಅಲ್ವಾ? ಏನೇ ಮಾಡಿದರೂ ಸಮಾಜದಲ್ಲಿ ಕಾಲೆಳೆಯುವ ಜನ ಇದ್ದೇ ಇರುತ್ತಾರೆ. ಹಾಗಂತ ಅಂಜಿಕೆಯಿಂದಲೇ ಜೀವನ ಸಾಗಿಸಲು ಸಾಧ್ಯನಾ? ನಾವು ಸತ್ಯ, ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದರೆ ಅಂಜಿಕೆ ಏತಕ್ಕೆ? ಆದ್ದರಿಂದ, ಹಳೆಯದನ್ನೆಲ್ಲಾ ಮರೆತು, ಹೊಸ ದಾರಿಯಲ್ಲಿ ಚಲಿಸುವ ಪ್ರಯತ್ನ ಆಕೆಯಿಂದ ಆಗಬೇಕು, ಜತೆಗೆ ನಮ್ಮೆಲ್ಲರ ಪ್ರೋತ್ಸಾಹ ಆಕೆಗೆ ಸಿಗಬೇಕು. ಏನಂತೀರಾ?