Wednesday, December 3, 2014

ಸ್ಟೇಟಸ್ ? 35 ಸಿಂಗಲ್


ಹಲೋ ..ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ?

ಹೇಳಿ...

ನಿಮಗೆ ಬಾಯ್ ಫ್ರೆಂಡ್ ಇಲ್ವಾ?

ಯಾಕೆ?

ಸುಮ್ನೆ...ಕೇಳಿದ್ದು ಅಷ್ಚೇ...

ಹ್ಮ್...

ನಿಮ್ದು ಲವ್ ಫೈಲ್ಯೂರಾ?

ಯಾಕೆ?

ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ.. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ..

ಹಾಗೇನಿಲ್ಲ...

ಓಕೆ

ಇಂಥಾ ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ ಫೇಸ್ಬುಕ್ ಇನ್ ಬಾಕ್ಸಲ್ಲಿ ಒಕ್ಕರಿಸಿ ಬಿಡುತ್ತವೆ. ಫೇಸ್ ಬುಕ್ ನಲ್ಲಿರೋ ಕೆಲವರಿಗೆ ರಿಲೇಷನ್ ಶಿಪ್ ಸ್ಟೇಟಸ್ ನಲ್ಲಿ ಸಿಂಗಲ್ ಅನ್ನೋ ಪದದ ಮೇಲೆಯೇ ಕಣ್ಣು. ಕೆಲವರಂತೂ ನಿಮಗೆ ಅಫೇರ್ ಏನೂ ಇಲ್ವಾ? ಮದ್ವೆ ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಏನೆಂದು ಉತ್ತರಿಸಲಿ? ಬರೀ ಫೇಸ್ ಬುಕ್ನಲ್ಲಷ್ಟೇ ಪರಿಚಯವಿರುವ ವ್ಯಕ್ತಿ ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಕಿರಿ ಕಿರಿ ಅನಿಸಿದರೆ ಏನು ಮಾಡುವುದು? ಉತ್ತರ ಸಿಂಪಲ್ ..ಬ್ಲಾಕ್!

ಅಂದ ಹಾಗೆ ಹುಡುಗಿಯರ ರಿಲೇಷನ್ ಶಿಪ್ ಸ್ಟೇಟಸ್ ಗಳಲ್ಲಿ ಈ ಸಿಂಗಲ್' ಅನ್ನೋದು ಕುತೂಹಲದ ಮೂಟೆ. ಮದ್ವೆ ಆಗದೇ ಸಿಂಗಲ್ ಆಗಿರೋ ಹುಡುಗಿ ಒಂದೆಡೆಯಾದರೆ, ಸಂಬಂಧದಿಂದ ಹೊರ ಬಂದವಳು ಇನ್ನೊಂದೆಡೆ. ಇಲ್ಲಿ ಇಬ್ಬರೂ ಸಿಂಗಲ್ ಹುಡ್ಗೀರೇ. ಇಬ್ಬರ ಜೀವನಾನುಭವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.ಆದಾಗ್ಯೂ, ಒಬ್ಬ ಹುಡುಗನನ್ನು ನೋಡಿದಾಗ ಇವರಿಬ್ಬರ ಮನಸ್ಸಿನಲ್ಲಿ ಮೂಡುವ ಪ್ರೇಮದ ಭಾವನೆಗಳು ಒಂದೇ ರೀತಿಯದ್ದಾಗಿದ್ದರೂ, ಅದನ್ನು ಸ್ವೀಕರಿಸುವ ವ್ಯಕ್ತಿ ಇದ್ದಾನಲ್ಲಾ...ಅವನ ಭಾವನೆ ಇಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಅವನೊಳಗಿನ ಪೋಲಿ ಮನಸ್ಸು ಒಂದು ಫ್ರೆಶ್ ಇನ್ನೊಂದು....ಎಂಬ ಲೆಕ್ಕಾಚಾರದಲ್ಲೇ ಆಕೆಯೊಂದಿಗೆ ಬೆರೆಯಲು ಹವಣಿಸುತ್ತಾನೆ.

ಪ್ರೀತಿಯ ವಿಷಯ ಬಂದಾಗ ಮದ್ವೆಯಾಗಿರದ ಹುಡುಗಿಯ ಪ್ರೇಮ ಒಂದು ರೀತಿಯದ್ದಾಗಿದ್ದರೆ, ಮದ್ವೆಯಾಗಿ ಅದರಿಂದ ಹೊರಬಂದವಳ ಪ್ರೇಮ ಇನ್ನೊಂದು ರೀತಿಯದ್ದಾಗಿರುತ್ತದೆ ಎಂದಿದ್ದ ಗೆಳೆಯ. ಪ್ರೀತಿಯಲ್ಲಿಯೂ ಅಂಥಾ ವ್ಯತ್ಯಾಸವುಂಟಾ? ಎಂದು ಕೇಳಿದ್ದೆ. ಹೂಂ ಮದ್ವೆಗೆ ಮೊದಲು ಹುಟ್ಟುವ ಪ್ರೀತಿಯೂ, ಮದ್ವೆಯ ನಂತರ ಹುಟ್ಟುವ ಪ್ರೀತಿಯಲ್ಲಿಯೂ ವ್ಯತ್ಯಾಸವಿರುತ್ತದೆ. ಮೊದಲನೆಯ ಕೇಸ್ ನಲ್ಲಿ ಹುಡುಗಿಯ ಕೈಯಲ್ಲಿ ಬಣ್ಣ ತುಂಬದ ಚಿತ್ರ ಮಾತ್ರ ಇರುತ್ತದೆ. ಅದಕ್ಕೆ ಯಾವ ಬಣ್ಣ ತುಂಬಲಿ ಎಂದು ಆಕೆ ಯೋಚಿಸುತ್ತಾಳೆ. ತನಗಿಷ್ಟವಾದ ಬಣ್ಣವನ್ನು ತುಂಬಿ ಖುಷಿ ಪಡುತ್ತಾಳೆ . ಆದರೆ ಎರಡನೇ ಕೇಸ್ ನಲ್ಲಿ ಚಿತ್ರಕ್ಕೆ ಬಣ್ಣ ತುಂಬಿದ ನಂತರ ಆ ಚಿತ್ರಕ್ಕೆ ಈ ಬಣ್ಣ ಒಪ್ಪುತ್ತಿಲ್ಲ ಎಂಬ ಅಸಮಾಧಾನದಿಂದ ಆ ಬಣ್ಣವನ್ನು ಅಳಿಸಿ ಇನ್ನೊಂದು ಬಣ್ಣವನ್ನು ತುಂಬುವ ಪ್ರಯತ್ನ ಮಾಡುವ ಹುಡುಗಿ ಇರುತ್ತಾಳೆ. ಈವಾಗ ಆಕೆಗೆ ಗೊತ್ತಿದೆ ಯಾವ ಬಣ್ಣ ತುಂಬಬೇಕೆಂಬುದು! ಯಾವ ಬಣ್ಣವನ್ನು ಎಲ್ಲೆಲ್ಲಿಗೆ ಹಚ್ಚಿದರೆ ಸುಂದರ ಚಿತ್ರವಾಗಬಹುದೆಂದು ಆಕೆ ಮೊದಲನೇ ಅನುಭವದಿಂದ ಕಲಿತಿರುತ್ತಾಳೆ.

ಒಂದು ವೇಳೆ ಆಕೆ ಜಾಗರೂಕತೆಯಿಂದ ಬಣ್ಣ ತುಂಬಿದ್ದರೂ ಅದು ಸರಿ ಹೋಗದೇ ಇದ್ದರೆ?

ಏನಿಲ್ಲ, ಎಲ್ಲ ಬಣ್ಣಗಳು ಸೇರಿ ಮಾಡನ್೯ ಆಟ್೯ ನಂತಾಗಿ ಬಿಡುತ್ತದೆ... ಅವ ನಕ್ಕ.

ಏಳು ಬಣ್ಣಗಳು ಸೇರಿದರೆ ಬಿಳಿ ಬಣ್ಣವಾಗುತ್ತದೆ. ಅಲ್ಲಿಗೆ ಎಲ್ಲವೂ ಶಾಂತ...ನಿಶ್ಶಬ್ದ

ಪ್ರೀತಿಗೆ ಎಷ್ಟೊಂದು ಬಣ್ಣಗಳು!!!

ಸಂಬಂಧಗಳಿಗೆ ಎಷ್ಟೊಂದು ಮುಖಗಳು!!

ಹಾಂ..ಸಿಂಗಲ್ ಸ್ಟೇಟಸ್ ಬಗ್ಗೆ ಹೇಳ್ತಾ ಇದ್ದೆ ಅಲ್ವಾ? ಕೆಲವರು ಸಿಂಗಲ್ ಎಂಬ ಸ್ಟೇಟಸ್ ನೋಡಿದ ಕೂಡಲೇ (ಮದ್ವೆ ವಯಸ್ಸು ಆಗಿದ್ದರೆ) ನೀವಿನ್ನೂ ಯಾಕೆ ಮದ್ವೆ ಆಗಿಲ್ಲ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ನೀವು ಲವ್ ಕೂಡಾ ಮಾಡಿಲ್ವಾ? ಎಂದು ಹುಬ್ಬೇರಿಸುವವರೂ ಇರ್ತಾರೆ. ಒಂದು ಹೇಳಲಾ.. ಸಿಂಗಲ್ ಎಂದು ಸ್ಟೇಟಸ್ ಹಾಕಿದ್ದರೂ, ಐ ಆ್ಯಮ್ ಸಿಂಗಲ್ ಎಂದು ಹೇಳಿದ ಮಾತ್ರಕ್ಕೆ ನಾವು ಯಾರನ್ನೂ ಲವ್ ಮಾಡಿಲ್ಲ ಎಂಬಥ೯ವಲ್ಲ. ಸದ್ಯ ನಾವು ಯಾವುದೇ ರಿಲೇಷನ್ ಶಿಪ್ನಲ್ಲಿ ಇಲ್ಲ ಎಂದಷ್ಟೇ. ಹಾಗಂತ ರಿಲೇಷನ್ ಶಿಪ್ ನಲ್ಲಿ ಇದ್ದರೂ ಅದನ್ನು ಎಲ್ಲರಲ್ಲೂ ಹೇಳಿಕೊಳ್ಳಬೇಕಾದ ಅಗತ್ಯವೇನಿದೆ? ಸಿಂಗಲ್ ಅಂತ ಎಲ್ಲರ ಜತೆ ಬೆರೆಯಲೂ ನಮಗಿಷ್ಟವಿಲ್ಲ.

ಒಂದ್ಸಾರಿ ಫಾಮ್೯ ತುಂಬುವಾಗ ವಯಸ್ಸು 35 ಎಂದು ನಮೂದಿಸಿ ಸಿಂಗಲ್ ಎಂಬ ಕೋಷ್ಟಕಕ್ಕೆ ರೈಟ್ ಮಾಕ್೯ ಹಾಕಿದೆ. ಕೌಂಟರ್ನಲ್ಲಿ ಆ ಫಾಮ್೯ ಕೊಟ್ಟಾಗ ಅದನ್ನು ಸ್ವೀಕರಿಸಿದ ವ್ಯಕ್ತಿ ನನ್ನ ಮುಖವನ್ನೊಮ್ಮೆ ದಿಟ್ಟಿಸಿದ. ಡಾಕ್ಟರ್ ಬಳಿ ಹೋದಾಗಲೂ ಅಷ್ಟೇ..ಸಿಂಗಲ್ ಎಂದು ಹೇಳುವಾಗ ಎಲ್ಲರೂ ನನ್ನ ಮುಖ ನೋಡುತ್ತಾರೆ. ನನಗೆ ವಯಸ್ಸು ಇಷ್ಟಾಗಿದೆ, ಸಿಂಗಲ್ ಎಂದು ಹೇಳುವಾಗ ಅಚ್ಚರಿ ಪಡುವಂತದ್ದೇನಿದೆ? ಪುರುಷ 60 ವಷ೯ ದವನಾಗಿದ್ದರೂ ಆತ ಸಿಂಗಲ್ ಎಂದು ನಮೂದಿಸಿದರೆ ಆತ ಬ್ರಹ್ಮಚಾರಿ. ಸಂಸಾರದ ಜಂಜಾಟ ಯಾವುದೂ ಬೇಡ ಎಂದು ಆತ ಸಿಂಗಲ್ ಆಗಿದ್ದು ಲೈಫ್ ಎಂಜಾಯ್ ಮಾಡ್ತಾನೆ ಅಂತ ಹೇಳ್ತೀವಿ. ಅದೇ ಜಾಗದಲ್ಲಿ ಹೆಣ್ಣಿದ್ದರೆ? ಆಕೆಗೆ ಏನೋ ಸಮಸ್ಯೆ ಇದೆ ಅನ್ನೋ ರೀತಿಯಲ್ಲಿ ಮಾತುಗಳು ಹುಟ್ಟಿಕೊಳ್ಳುತ್ತವೆ.

ಗಂಡಾಗಲೀ ಹೆಣ್ಣಾಗಲೀ ಅವರವರ ಜೀವನ ಹೇಗೆ ಇರಬೇಕೋ ಅದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ ಸಮಾಜದಲ್ಲಿ ಹೆಣ್ಣೊಬ್ಬಳು ಒಂಟಿಯಾಗಿ ಬದುಕು ಸಾಗಿಸುತ್ತಾಳೆ ಎನ್ನುವಾಗ ಸಮಾಜ ಆಕೆಯನ್ನು ಹರಿದಾಡುವ ಬಳ್ಳಿಗೆ ಹೋಲಿಸುತ್ತದೆ. ಯಾವುದೇ ಕಾಂಡ ಅಥವಾ ಮರ ಸಿಕ್ಕಿದರೂ ಆ ಬಳ್ಳಿ ಅದರ ಆಶ್ರಯವನ್ನು ಪಡೆದುಕೊಳ್ಳುತ್ತದೆ ಎಂಬ ಕೊಂಕು ಮಾತುಗಳು ಅಲ್ಲಿ ಮಾದ೯ನಿಸುತ್ತವೆ.

ಆದರೆ ಒಂಟಿಯಾಗಿ ಬದುಕುವ ಹೆಣ್ಣು ಒಂಟಿಯಾಗಿದ್ದುಕೊಂಡೇ ಸ್ಟ್ರಾಂಗ್ ಆಗುತ್ತಾಳೆ. ತನ್ನ ಕೆಲಸಗಳನ್ನು ತಾನೇ ನಿಭಾಯಿಸುವಷ್ಟು ಸಾಮಥ್ಯ೯ವನ್ನು, ಖುಷಿಯನ್ನೂ ಆಕೆ ಗಳಿಸುತ್ತಾ ಹೋಗುತ್ತಾಳೆ. ಪ್ರತಿಯೊಂದು ಕ್ಷಣದಲ್ಲಿಯೂ ತಾನು ಹೇಗಿರಬೇಕು, ಹೇಗೆ ಖುಷಿಯನ್ನು ಕಂಡುಕೊಳ್ಳಬೇಕೆಂಬುದನ್ನು ಆಕೆಗೆ ಬದುಕು ಕಲಿಸಿರುತ್ತದೆ. ಈಗ ಹಾಗೇನಿಲ್ಲ, ಸಮಾಜ ಮುಂದುವರಿದಿದೆ ಎಂದು ನಾವೇ ಎಷ್ಟೇ ಹೇಳಿಕೊಂಡರೂ, ಯಾರ ಹಂಗಿಲ್ಲದೆ ಒಂಟಿಯಾಗಿ ಬದುಕ ಹೊರಟಿರುವ, ಬದುಕುತ್ತಿರುವ ಹೆಣ್ಣು ಮಕ್ಕಳಲ್ಲಿ ಕೇಳಿ ನೋಡಿ...ಅವರೆಷ್ಟು ನೋವು ನುಂಗಿದ್ದಾರೆ ಎಂದು! ಮುಖಸ್ತುತಿ ಮಾಡುತ್ತಾ ಆಕೆ ದಿಟ್ಟೆ ಎಂದು ಹೊಗಳಿದರೂ ಬೆನ್ನ ಹಿಂದೆ ಆಕೆಗೆ ಗಂಡು ದಿಕ್ಕಿಲ್ಲ ಎಂದು ಕಣ್ಣಗಲಿಸಿ ನೋಡುವವರೇ ಜಾಸ್ತಿ ಇರುತ್ತಾರೆ ಇಲ್ಲಿ . ರಿಲೇಷನ್ ಶಿಪ್ ನಲ್ಲಿದ್ದೇನೆ ಅಂತ ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಸಿಂಗಲ್ ಆಗಿರುವುದು ಕೂಡಾ ಹಾಗೆಯೇ..ಅದೊಂದು ಸ್ಟೇಟಸ್ ಮಾತ್ರವಲ್ಲ, ಅದು ಅವರವರ ಆಯ್ಕೆಯೂ ಹೌದು.

Wednesday, October 29, 2014

ಬಸ್ ಪಯಣದ ಸುಖ

ಮೊನ್ನೆ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಫೋನಲ್ಲಿ ಮಾತನಾಡುತ್ತಿರುವುದು ಬೇಡ ಬೇಡವೆಂದರೂ ನನ್ನ ಕಿವಿಗೆ ಬೀಳುತ್ತಿತ್ತು. ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳಲು ಸೀಟು ಸಿಕ್ಕರೆ ಪುಸ್ತಕ ಓದುವುದು ಅಭ್ಯಾಸ. ಅಂದು ಬಸ್ಸಿನಲ್ಲಿ ಜನ ತುಂಬಾ ಇದ್ದರೂ ಪುಣ್ಯಕ್ಕೆ ನನಗೆ ಸೀಟು ಸಿಕ್ಕಿತ್ತು. ಹಿಂದಿನ ಸೀಟಲ್ಲಿ ಕುಳಿತ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ವಟ ವಟ ಎಂದು ಫೋನಲ್ಲಿ ಮಾತು ಶುರು ಹಚ್ಚಿಕೊಂಡಿದ್ದಳು. ಇಂಗ್ಲೀಷ್‌ನಲ್ಲಿ ಆಕೆ ಜೋರಾಗಿ ಮಾತನಾಡುತ್ತಿದ್ದುದರಿಂದಲೇ ನನ್ನ ಕಿವಿ ನೆಟ್ಟಗಾಯಿತು. ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್. ಐ ಯೆಸ್ಟರ್‌ಡೇ ಟೋಲ್ಡ್ ನಾ..ಅಂಡರ್‌ಸ್ಟಾಂಡ್ ಪಾ..ಹೀಗೇ ಆಕೆಯ ಇಂಗ್ಲಿಷ್ ಸಂಭಾಷಣೆ ಮುಂದುವರಿಯಿತು. ಮಾತು ಮಾತುಗಳೆಡೆಯಲ್ಲಿ ಆಕೆ ನೋಪಾ, ಯೆಸ್ ಪಾ ಅಂತ ಹೇಳುತ್ತಾ ತನ್ನ ಏರುದನಿಯನ್ನು ಸ್ವಲ್ಪ ಸ್ವಲ್ಪವೇ ತಗ್ಗಿಸುತ್ತಿದ್ದಳು. ಒಮ್ಮೆ ಹಿಂತಿರುಗಿ ನೋಡಿದೆ, ಆಕೆ ಫೋನ್ ಸಂಭಾಷಣೆಯಲ್ಲಿ ಮಗ್ನಳಾಗಿದ್ದಾಳೆ. ಪುಸ್ತಕ ಹಿಡಿದುಕೊಂಡು ಕೂತಿದ್ದೆನಾದರೂ ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್ ಎಂಬ ವಾಕ್ಯ ನನ್ನ ಕಿವಿಗೆ ಬೇಡ ಬೇಡವೆಂದರೂ ಅಪ್ಪಳಿಸುತ್ತಿತ್ತು. ಆಕೆ ಹೇಳಿದ್ದು, ನೀನ್ಯಾಕೆ ಮಧ್ಯೆ ಮೂಗು ತೂರಿಸುತ್ತೀಯಾ ಎಂಬುದನ್ನೇ ಅಲ್ಲವೇ? ಕನ್ನಡ ಪ್ರತಿಪದವನ್ನೂ ಹಾಗೆಯೇ ಇಂಗ್ಲಿಷ್‌ಗೆ ಅನುವಾದ ಮಾಡಿ ಆಕೆ ಜೈ ಅಂದಿದ್ದಳು!.


ನಿಜ ಹೇಳಲಾ ...ನನಗೆ ಇಂಗ್ಲಿಷ್ ಭಾಷೆ ಅರ್ಥವಾಗುತ್ತದೆ ಬಿಟ್ರೆ ಮಾತನಾಡಲು ಬರುವುದು ಅಷ್ಟಕಷ್ಟೇ. ಇಂಗ್ಲಿಷ್ ಮಾತನಾಡಲು ಹೋದಾಗಲೆಲ್ಲಾ ಹಾಳಾದ ಗ್ರಾಮರ್ ನನ್ನ ನಾಲಗೆಗೆ ಅಡ್ಡ ಬಂದು ನಿಲ್ಲುತ್ತೆ. ವಾಸ್ ಬಳಸ್ಬೇಕೋ? ಈಸ್ ಬಳಸ್ಬೇಕೋ? ಡೋಂಟ್, ಕಾಂಟ್, ವೋಂಟ್, ವಿಲ್ ಎಲ್ಲವೂ ಸೇರಿ ನನ್ನನ್ನು ಕನ್‌ಫ್ಯೂಸ್ ಮಾಡಿಸಿ, ಇಂಗ್ಲಿಷ್‌ನ್ನು ನನ್ನ ಗಂಟಲಲ್ಲೇ ಸ್ಟಾಪ್ ಆಗುವಂತೆ ಮಾಡುತ್ತಿದ್ದವು. ಕೆಲಮೊಮ್ಮೆ ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ತಕ್ಷಣ ನಾನು ಉತ್ತರ ಕೊಟ್ಟು ಬಿಡುತ್ತಿದ್ದೆ. ಅಲ್ಲಿ ಯಾವ ತಪ್ಪುಗಳು ನುಸುಳುತ್ತಿರಲಿಲ್ಲ. ಮಾತನಾಡಿದ ನಂತರ ಅರೇ... ನಾನೇ ಇಂಗ್ಲಿಷ್ ಮಾತಾಡಿದೆನಾ? ಎಂದು ಅಚ್ಚರಿಯಾಗಿ ಬಿಡುತ್ತಿತ್ತು. ಅಂದ ಹಾಗೆ ಬಸ್ಸಲ್ಲಿರುವಾಗ ಯಾರಾದ್ರೂ ಫೋನ್ ಮಾಡಿ ಇಂಗ್ಲಿಷ್‌ನಲ್ಲಿ ಮಾತನಾಡಬೇಕಾದ ಪರಿಸ್ಥಿತಿ ಬಂದರೆ ಐ ವಿಲ್ ಕಾಲ್ ಯು ಲೇಟರ್ ಎಂಬುದೇ ನನ್ನ ಉತ್ತರ. ಇನ್ನು ಕೆಲವರು ಬಸ್ಸಲ್ಲಿ ಕುಳಿತು ನಾಲ್ಕು ಮಂದಿಗೆ ಕೇಳುವಂತೆ ಟುಸ್ಸು ಪುಸ್ಸು ಇಂಗ್ಲಿಷ್ ಮಾತನಾಡುತ್ತಿರುತ್ತಾರೆ. ಕೆಲವರು ಮಾತನಾಡಿದ ಮೇಲೆ ಎಷ್ಟು ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಕಣ್ಣಲ್ಲೇ ಲೆಕ್ಕ ಹಾಕುತ್ತಿರುತ್ತಾರೆ. ಇಂಥಾ ದೃಶ್ಯಗಳೆಲ್ಲ ನಿಮ್ಮ ಅನುಭವಕ್ಕೆ ಬರಬೇಕಾದರೆ ನೀವು ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಲೇ ಬೇಕು.

ನಾನು ಹೇಳೋಕೆ ಹೋಗ್ತಿರುವುದು ಕೂಡಾ ಬಸ್ಸಿನ ಬಗ್ಗೆಯೇ. ಯಾಕೆ ಗೊತ್ತಾ? ಈ ಬಸ್ಸು ಪ್ರಯಾಣದಲ್ಲಿ ಸಿಗುವ ಅನುಭವಗಳೇ ಬೇರೆ. ಎಷ್ಟೊಂದ್ ಇಲ್ಲಿ ಯಾರು ನನ್ನವರು? ಎಂಬ ತಳಮಳದಿಂದಲೇ ಬಸ್ಸಿಗೆ ಹತ್ತಿದರೆ, ಇಲ್ಲಿ ಎಲ್ಲ ನನ್ನವರು ಅನ್ನೋ ಭಾವನೆ ಮೂಡಿಸುವಂತೆ ಮಾಡುವುದೇ ಈ ಬಸ್ಸುಗಳು. ಇಲ್ಲಿ ಯಾರು ಮೇಲೂ ಅಲ್ಲ ಕೀಳು ಅಲ್ಲ. ಬಡವ ಶ್ರೀಮಂತನೆಂಬ ಅಂತರವಾಗಲೀ, ಜಾತಿ ಭೇದದ ಗೋಡೆಯಿಲ್ಲದೆ ಎಲ್ಲರನ್ನು ಒಂದೇ ರೀತಿ ಉಪಚರಿಸುವ ವಾಹನವೆಂದರೆ ಅದು ಬಸ್ಸು. ನನಗೆ ಬೇಗ ಹೋಗ್ಬೇಕು ಎಂಬ ಅವಸರವಿರುವವರೂ, ನನಗೆ ನಿಧಾನ ಹೋದರೆ ಸಾಕು ಎಂಬ ಎರಡೂ ಮನಸ್ಥಿತಿಯಿರುವವರು ಇಲ್ಲಿ ಒಂದೇ ರೀತಿ ವರ್ತಿಸುತ್ತಾರೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಹೇಳುವಂತೆ

ಇಲ್ಲಿ

ಯಾರೂ ಮುಖ್ಯರಲ್ಲ

ಯಾರೂ ಅಮುಖ್ಯರಲ್ಲ

ಯಾವುದೂ ಯಃಕಶ್ಚಿತವಲ್ಲ

ಇಲ್ಲಿ

ಯಾವುದಕ್ಕೂ ಮೊದಲಿಲ್ಲ

ಯಾವುದಕ್ಕೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ!

ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!

ಎಂಬಂತಿರುತ್ತದೆ ಬಸ್ಸಲ್ಲಿನ ಈ ಪ್ರಯಾಣಗಳು.

ನೀವು ಯಾವ ಊರಿನವರೇ ಆಗಿರಲಿ ಅವರವರಿಗೆ ಅವರವರ ಊರಿನ ಬಸ್ಸಿನೊಂದಿಗೆ ಒಂಥರಾ ಸೆಂಟಿಮೆಂಟು ಇದ್ದೇ ಇರುತ್ತದೆ. ದೂರದ ಊರಲ್ಲಿರುವಾಗ ನಮ್ಮೂರಿಗೆ ಹೋಗುವ ಬಸ್ಸುಗಳು ಕಾಣಸಿಕ್ಕರೆ ನಮ್ಮೂರಿನ ಬಸ್ಸು...ಆ ಕ್ಷಣಕ್ಕೆ ಊರಿನ ನೆನಪು ಬಿಡದೆ ಕಾಡುತ್ತದೆ. ಈಗಲೇ ಊರಿಗೆ ಹೋಗಿ ಬಿಡಲೇನೋ ಎಂದು ಅನಿಸಿಬಿಡುವುದೂ ಉಂಟು. ಅಷ್ಟೊಂದು ಸೆಳೆತವಿರುತ್ತೆ ಈ ಬಸ್ಸುಗಳಲ್ಲಿ. ಬಸ್ಸಿನ ಹೆಸರು, ನಮ್ಮೂರಿನ ಹೆಸರು ಬರೆದಿರುವ ಬೋರ್ಡ್‌ಗಳನ್ನೋದಿದ ನಂತರ ಅದು ಕಣ್ಣ ಮುಂದೆ ಹಾದು ಹೋದಾಗ ಹಿಂಬದಿಯಲ್ಲಿ 'ನಡುವೆ ಅಂತರವಿರಲಿ' ಎಂದು ಬರೆದ ವಾಕ್ಯಗಳನ್ನು ಕೂಡಾ ಮತ್ತೆ ಮತ್ತೆ ಓದಿ ಕಣ್ತುಂಬಿಕೊಳ್ಳುತ್ತೇವೆ. ಆ ಕ್ಷಣದಲ್ಲಿ ಬಸ್ಸು ನಮ್ಮ ಪಾಲಿಗೆ ನೆನಪಿನ ಬಂಡಿಯಾಗುತ್ತದೆ.

ಅಮ್ಮ ಹೇಳ್ತಾರೆ, ನಮ್ಮೂರಲ್ಲಿ ಕೆಎಂಎಸ್ ಎಂಬ ಹೆಸರಿನ ಬಸ್ಸೊಂದಿತ್ತಂತೆ. ಹಳ್ಳಿಯಿಂದ ನಗರಕ್ಕೆ ಸಂಪರ್ಕ ಸಾಧಿಸುವ ಏಕೈಕ ಬಸ್ಸೆಂದರೆ ಅದು ಕೆಎಂಎಸ್. ಬೆಳಗ್ಗೆ 7.00 ಗಂಟೆಗೆ ಸರಿಯಾಗಿ ಅದು ನಮ್ಮ ಹಳ್ಳಿಗೆ ತಲುಪುತ್ತಿತ್ತು. ಆವಾಗ ನಮ್ಮ ಹಳ್ಳಿಯ ಜನರಿಗೆಲ್ಲಾ 7 ಗಂಟೆ ಅಂದರೆ ಕೆಎಂಎಸ್ ಬರುವ ಹೊತ್ತು. ಗಂಟೆ ಎಷ್ಟಾಯಿತು? ಎಂದು ಕೇಳಿದರೆ ಕೆಎಂಎಸ್ ಇನ್ನೂ ಬಂದಿಲ್ಲ ಅಂದ್ರೆ ಗಂಟೆ ಏಳು ಆಗಿಲ್ಲವೆಂದೇ ಲೆಕ್ಕ. ಆ ಬಸ್ಸು ಯಾವತ್ತೂ ಲೇಟಾಗಿ ಬರುತ್ತಿರಲಿಲ್ಲ. ಮೂವತ್ತೈದು ವರುಷಗಳ ಹಿಂದೆ ಪಟ್ಟಣಕ್ಕೆ ಹೋಗುವ ಹಳ್ಳಿಯ ಜನರೆಲ್ಲರೂ ಒಂದಾಗಿ ಸೇರುವಂತೆ ಮಾಡಿದ್ದೇ ಆ ಬಸ್ಸು. ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ಗಾರೆ, ಗದ್ದೆ ಕೆಲ್ಸಕ್ಕೆ ಹೋಗುವ ಎಲ್ಲರೂ ಪರಸ್ಪರ ಬೆರೆಯುವಂತೆ ಮಾಡಿದ ಕೀರ್ತಿಯೂ ಆ ಬಸ್ಸಿನದ್ದೇ.

ಅಲ್ಲಿವರೆಗೆ ಮನೆ ಪಕ್ಕದಲ್ಲೇ ಇದ್ದ ಶಾಲೆಯಲ್ಲಿ ಓದುತ್ತಿದ್ದ ನನಗೆ ಹೈಸ್ಕೂಲ್‌ಗೆ ಸೇರಿದಾಗ ಬಸ್ಸಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಮಣ ಭಾರದ ಬ್ಯಾಗನ್ನು ಹೊತ್ತು ಬಸ್ಸಿನಲ್ಲಿ ಬ್ಯಾಲೆನ್ಸ್ ಮಾಡುವುದು, ಶಾಲಾ ಮಕ್ಕಳನ್ನು ನಿರ್ಲಕ್ಷಿಸುವ ಸಲುವಾಗಿ ಬಸ್ಸ್ಟಾಪಿನಿಂದ ದೂರ ನಿಲ್ಲಿಸಿದರೆ ಅದರ ಹಿಂದೆಯೇ ಓಡುತ್ತಾ ಹೋಗಿ ಹತ್ತುವುದು ಎಲ್ಲವನ್ನೂ ಮಾಡಲೇಬೇಕಾಗಿತ್ತು.

ಅಪ್ಪಿ ತಪ್ಪಿ ಸೀಟು ಸಿಕ್ಕಿತು ಅಂತ ಕುಳಿತುಕೊಂಡರೆ ವಿದ್ಯಾರ್ಥಿಗಳು ಯಾರೂ ಸೀಟಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಕಂಡೆಕ್ಟರ್ ಗದರಿಸುತ್ತಿದ್ದ. ನಮ್ಮ ಬೆನ್ನಲ್ಲಿರುವ ಬ್ಯಾಗ್‌ನ್ನು ಸಂಭಾಳಿಸಿಕೊಂಡು ಕಂಬಿ ಹಿಡಿದು ನೇತಾಡುತ್ತಾ, ಕಂಡೆಕ್ಟರ್ ಬೈಗುಳಕ್ಕೆ ಗುರಿಯಾಗುತ್ತಾ ಶಾಲೆಗೆ ಹೋಗಿ ಬರುವುದು ಸಾಹಸವೇ ಆಗಿ ಬಿಡುತ್ತಿತ್ತು. ಅದರಲ್ಲಿಯೂ ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋದರೆ, ಕಂಡೆಕ್ಟರ್ ಏನಾದರೂ ಕಿರಿಕ್ ಮಾಡಿದರೆ ಇಲ್ಲವೇ ಸರ್ಕಾರದ ವಿರುದ್ಧ ಏನೇ ಕೋಪವಿದ್ದರೂ ನಮ್ಮೂರಲ್ಲಿ ಎಲ್ಲರ ಕೋಪಕ್ಕೆ ಗುರಿಯಾಗುವುದು ಮಾತ್ರ ಬಸ್ಸುಗಳೇ ಆಗಿದ್ದವು. ಬಸ್ಸಿಗೆ ಕಲ್ಲು ಹೊಡೆದು ಗಾಜು ಒಡೆಯುವುದು ಪ್ರತಿಭಟನೆಯ ಸಂಕೇತವಾಗುತ್ತಿತ್ತು. ಹಾಗೆಯೇ ಹತ್ತು ಮುಖಗಳ ಹುಚ್ಚು ಮನಸ್ಸುಗಳು ಹೇಗೆ ಇರುತ್ತವೆ ಎಂಬ ಅನುಭವವೂ ಇಲ್ಲಿ ಸಿಗುತ್ತಿತ್ತು.

ಬಸ್ಸು ಕೇವಲ ವಾಹನವಲ್ಲ ಅದೊಂದು ಸ್ನೇಹಸೇತುವೆ. ಬೆಳಗ್ಗಿನ ಹೊತ್ತು ಏದುಸಿರು ಬಿಡುತ್ತಾ ಓಡೋಡಿ ಬರುವ ಬೀಡಿ ಕಾರ್ಖಾನೆಯ ಹೆಂಗೆಳೆಯರು, ಟೈಲರಿಂಗ್ ಕಲಿಯಲು ಹೋಗುವ ಹುಡ್ಗೀರು, ಕಾಲೇಜು ಕನ್ಯೆಯರು, ಟಿಪ್ ಟಾಪ್ ಆಗಿ ಕೈಯಲ್ಲಿ ಎರಡು ಪುಸ್ತಕ ಹಿಡಿದು ನಿನ್ನೆ ನಡೆದ ಕ್ರಿಕೆಟ್ ಮ್ಯಾಚ್ ಬಗ್ಗೆ ಚರ್ಚಿಸುವ ಜವ್ವನಿಗರು, ಸರ್ಕಾರಿ ಉದ್ಯೋಗಸ್ಥರು, ಕೂಲಿ ಕೆಲಸದ ಗಂಡಸರು ಎಲ್ಲರೂ ಒಂದೇ ಸೂರಿನಡಿ ಮಾತಿಗಿಳಿಯುವುದು, ಸ್ನೇಹಿತರಾಗುವುದು ಕೂಡಾ ಈ ಬಸ್ಸಿನಲ್ಲೇ. ಬಸ್ಸು ಪ್ರಯಾಣದ ವೇಳೆ ಎಲ್ಲರನ್ನೂ ಸುಮ್ನೆ ಗಮನಿಸುತ್ತಾ ಹೋಗಿ, ಅವರ ಮುಖದಲ್ಲಿನ ಮೌನಗಳೆಲ್ಲವೂ ಮಾತಾಗುತ್ತಾ ಹೋಗುತ್ತವೆ. ಹಾಗೆ ಹೇಳುವಾಗ ನಮ್ಮೂರಲ್ಲಿನ ಬೀಡಿ ಕಟ್ಟುವ ಹೆಂಗಸರ ಬಗ್ಗೆ ಇಲ್ಲಿ ಹೇಳಲೇ ಬೇಕು. ಆಗ ತಾನೇ ಸ್ನಾನ ಮುಗಿಸಿ ಗಡಿಬಡಿಯಲ್ಲಿಯೂ ಒಪ್ಪವಾಗಿ ಸೀರೆಯುಟ್ಟು ಓಡುತ್ತಾ ಬರುವ ಇವರ ನೀಳ ಕೂದಲಿನಿಂದ ನೀರ ಹನಿ ಜಿನುಗುತ್ತಾ ಇರುತ್ತದೆ. ಆ ಹೆಂಗಸರು ಬಸ್ ಸ್ಟಾಪ್‌ಗೆ ಬಂದು ಸೇರಲು ಇದ್ದ ಅಡ್ಡ ದಾರಿಗಳು, ತಡಮೆ ಬೇಲಿಗಳನ್ನೆಲ್ಲಾ ದಾಟಿ ಬಿರಬಿರನೆ ಬರುತ್ತಿದ್ದರೆ ಕಂಕುಳ ಬೆವರು ಕುಪ್ಪಸದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಒದ್ದೆ ಕಲೆ ಮೂಡಿಸುತ್ತಿರುತ್ತದೆ. ಬಸ್ಸಲ್ಲಿ ನಿಂತರೆ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ ಅವರ ಊಟದ ಬುತ್ತಿ ಪಕ್ಕದಲ್ಲಿ ನಿಂತಿರುವವರಿಗೆ ತಾಕುತ್ತಾ ಆಗಾಗ್ಗೆ ಬಿಸಿ ಮುಟ್ಟಿಸುತ್ತಿರುತ್ತದೆ. ಇತ್ತ ಕಾಲೇಜು ಕನ್ಯೆಯರ ಕಿಲ ಕಿಲ ಸದ್ದು. ಹುಡ್ಗೀರನ್ನು ಇಂಪ್ರೆಸ್ ಮಾಡೋಕೆ ಟ್ರೈ ಮಾಡುತ್ತಿರುವ ಹುಡುಗರು ಒಂದೆಡೆಯಾದರೆ ಹುಡುಗಿರ ಮಧ್ಯೆ ನುಸುಳುತ್ತಾ ಟಿಕೆಟ್ ಟಿಕೆಟ್ ಎಂದು ಬೊಬ್ಬೆ ಹಾಕುತ್ತಾ ಮೈ ಸವರುವ ಕಿಲಾಡಿ ಕಂಡೆಕ್ಟರ್. ತನ್ನ ಸೀಟಿನ ಹಿಂದೆ ನಿಂತ ಹುಡುಗಿಯರನ್ನು ಕನ್ನಡಿ ಮೂಲಕವೇ ನೋಡಿ ಕಣ್ತುಂಬಿಕೊಳ್ಳುವ ಡ್ರೈವರ್. ರೈಟ್ ಪೋಯೀ... ಎಂದು ಕೂಗುವ ಕ್ಲೀನರ್...ಆಗ ತಾನೇ ಕಾಲೇಜಿಗೆ ಕಾಲಿಟ್ಟ ಟೀನೇಜ್ ಹುಡ್ಗೀರಿಗೆ ಕ್ರಷ್ ಆಗುವುದು ಕೂಡಾ ಈ ಕಂಡೆಕ್ಟರ್, ಡ್ರೈವರ್‌ಗಳ ಮೇಲೆಯೇ ಎಂಬುದನ್ನು ನೀವು ಒಪ್ಪಲೇ ಬೇಕು. ಸಂಜೆ ಹೊತ್ತಿನ ಪಯಣವಾಗಿದ್ದರೆ ಸುಸ್ತಾಗಿ ಬಾಡಿದ ಮುಖಗಳು, ಮನೆ ಸೇರುವ ತವಕದಲ್ಲಿರುವ ಜೀವಗಳು, ಕತ್ತಲೆಯ ಅಂಜಿಕೆಯಿಂದಲೇ ಸಪ್ಪಗಾದವರು ಹೀಗೆ ಎಲ್ಲರ ಬೆವರಿನ ವಾಸನೆ ಗಾಳಿಯಲ್ಲಿ ಬೆರೆತು ಬೇರೆಯದ್ದೇ ಆದ ಅನುಭವವನ್ನು ನೀಡುತ್ತಿರುತ್ತದೆ.

ಅಂತೂ ಬಸ್ಸಲ್ಲಿ ಸೀಟು ಸಿಕ್ಕಿತು ಅಂತಾ ಅಂದ್ಕೊಳ್ಳಿ, ಅಲ್ಲಿ ಕುಳಿತು ಪಟ್ಟಾಂಗ ಹೊಡೆಯುವಾಗ ಚರ್ಚಿತವಾಗುವ ವಿಷಯಗಳು ಕೂಡಾ ಇಂಟರೆಸ್ಟಿಂಗ್ ಆಗಿರುತ್ತವೆ. ಊರಿಗೆ ಯಾರಾದರೂ ಹೊಸಬರು ಬಂದರೆ, ಅವರ್ಯಾರು? ಎಂದು ಕುತೂಹಲದಿಂದ ನೋಡುವ ಪ್ರಯಾಣಿಕರು ಆಮೇಲೆ ಅವರ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಬಿಡುತ್ತಾರೆ. ಉಡುಗೆ ತೊಡುಗೆಗಳಿಂದ ಹಿಡಿದು ದೇವಸ್ಥಾನದ ಬ್ರಹ್ಮಕಲಶ, ಪಕ್ಕದ್ಮನೆ ಹುಡುಗಿ ಓಡಿ ಹೋಗಿದ್ದು, ರಾಜಕಾರಣ, ಮುಂದಿನ ಮುಷ್ಕರ, ಧರಣಿ ಎಲ್ಲ ವಿಷಯಗಳು ಇಲ್ಲಿ ಚರ್ಚೆಗೀಡಾಗುತ್ತವೆ. ಪ್ರಯಾಣದ ನಡುವೆ ಆಪ್ತರಾಗುವವರು ಕೆಲವರಾದರೆ ಪ್ರಯಾಣ ಮಧ್ಯೆಯೇ ಪ್ರೀತಿಯಂಕುರಿಸಿ ಮದುವೆಯಾದವರೇನೂ ಕಮ್ಮಿಯೇನಿಲ್ಲ. ಸೀಟಲ್ಲಿ ಕುಳಿತ ಕೂಡಲೇ ನಿದ್ದೆಗೆ ಜಾರುವ ನಿದ್ರಾಧಿಪತಿಗಳು ಒಂದೆಡೆಯಾದರೆ ಸೀಟಿಗಾಗಿ ಜಗಳವಾಡುವ ಮಂದಿಯೂ ಇಲ್ಲಿರುತ್ತಾರೆ. ಪೇಪರ್, ಕರ್ಚೀಫ್ ಅಥವಾ ಇನ್ಯಾವುದೋ ವಸ್ತುಗಳನ್ನಿಟ್ಟು ಕಾಯ್ದಿರಿಸಿದ ಸೀಟಿನಲ್ಲಿ ಯಾರದ್ರೂ ಕುಳಿತುಕೊಂಡರೆ ಅಷ್ಟೇ... ಅಲ್ಲೊಂದು ಜಗಳ ಗ್ಯಾರಂಟಿ!. ಇನ್ಯಾರೋ ದೂಡಿದ್ರೂ, ಹೈ ಹೀಲ್ಡ್ ಚಪ್ಪಲಿ ಹಾಕಿ ತುಳಿದು ಬಿಟ್ರು ಅನ್ನೋ ವಿಷಯದಿಂದ ಹಿಡಿದು ಮಹಿಳೆಯರ ಹಿಂದೆ ನಿಂತ ಗಂಡಸರ ಕಿತಾಪತಿ, ಚೇಷ್ಟೆ ಮಾಡಿದಾಗ ಅನುಭವಿಸುವ ನೋವು, ಸಂಕಟ, ಆಕ್ರೋಶ, ಕಣ್ಣೀರು , ಬೈಗುಳ ಎಲ್ಲವೂ ಬಸ್ಸೆಂಬ ಈ ವಾಹನದೊಳಗೆ ಮಾಮೂಲಿ.

ಹಳ್ಳಿಯ ಬಸ್ಸು ಪ್ರಯಾಣದ ಅನುಭವ ಒಂದು ರೀತಿಯದ್ದಾಗಿದ್ದರೆ ಬೆಂಗಳೂರಿನ ಬಸ್ಸು ಪ್ರಯಾಣದ ಅನುಭವ ಇನ್ನೊಂದು ರೀತಿಯದ್ದಾಗಿರುತ್ತದೆ. ಮಹಾನಗರಗಳಲ್ಲಿ ಬಸ್ಸುಗಳ ಸಂಖ್ಯೆಯೂ ಜಾಸ್ತಿಯಿರುವುದರಿಂದ ಸಹ ಪ್ರಯಾಣಿಕರ ನಡುವೆ ಸಂಬಂಧಗಳು ಬೆಳೆಯುವುದು ಕಷ್ಟ. ವಿಧ ವಿಧದ ಉಡುಗೆ ತೊಟ್ಟು ಹತ್ತು ಹಲವು ಭಾಷೆಗಳಲ್ಲಿ ಮಾತನಾಡುವ ವಲಸಿಗರು ಒಂದೆಡೆಯಾದರೆ, ಸ್ಟೈಲಿಷ್ ಡ್ರೆಸ್ ತೊಟ್ಟು ಕಂಗ್ಲೀಷ್ನಲ್ಲಿ ಮಾತನಾಡುವ ಬೆಂಗಳೂರಿಗರು ಎಲ್ಲರೂ ಬಿಎಂಟಿಸಿ ಬಸ್ಸಿನ ಪ್ರಯಾಣಿಕರಾಗುತ್ತಾರೆ. ಅವರವರ ಲೆವೆಲ್‌ಗೆ ತಕ್ಕಂತೆ ಇಲ್ಲಿ ಯಾವ ಬಸ್ಸಿನಲ್ಲಿ ಬೇಕಾದರೂ ಪ್ರಯಾಣಿಸಬಹುದಾದರೂ ಬಿಎಂಟಿಸಿ ಬಸ್ಸುಗಳು ನೀಡುವ ಅನುಭವ ಬೇರ್ಯಾವ ಬಸ್ಸಿನಲ್ಲಿಯೂ ಸಿಗುವುದಿಲ್ಲ. ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖಗಳನ್ನು ಹುಡುಕಾಡುತ್ತಾ ಎಫ್ ಎಂನಲ್ಲಿ ಹಾಡುಕೇಳುತ್ತಾ ತಮ್ಮದೇ ಲೋಕದಲ್ಲಿ ವಿಹರಿಸುವ ಮಂದಿಯೇ ಇಲ್ಲಿ ನಿಮ್ಮ ಸಹಪ್ರಯಾಣಿಕರು.

ಒಂದ್ಸಾರಿ ನಾನು ಜಯನಗರಕ್ಕೆ ಹೋಗುತ್ತಿರುವಾಗ ಲೇಡೀಸ್ ಸೀಟಿನಲ್ಲಿ ಕಾಲೇಜಿನ ಯುವ ಜೋಡಿಯೊಂದು ಕುಳಿತಿತ್ತು. ಆ ಜೋಡಿ ತಮ್ಮದೇ ಲೋಕದಲ್ಲಿ ಮಗ್ನರಾಗಿದ್ದಾಗ ಲೇಡೀಸ್ ಸೀಟು ಎದ್ದೇಳಿ ಎಂಬ ಆಂಟಿಯೊಬ್ಬರ ದನಿ ಅವರನ್ನು ವಾಸ್ತವಕ್ಕೆ ಮರಳುವಂತೆ ಮಾಡಿತು. ಆಂಟಿಯ ಮಾತು ಕೇಳಿ ಹುಡುಗ ಸೀಟು ಬಿಟ್ಟುಕೊಡಲು ನೋಡಿದರೂ, ಹುಡುಗಿ ಅವನ ಕೈ ಹಿಡಿದು ಜಗ್ಗುತ್ತಾ ಕೂತ್ಕೊಳೋ ಏನಾಗಲ್ಲ ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ಆಂಟಿಗೆ ಸಿಟ್ಟು ಬಂದು ಇದು ಲೇಡೀಸ್ ಸೀಟು ನೀನು ಎದ್ದೇಳು ಎಂದು ಕಿರುಚಾಡಿದ್ರು. ಇಷ್ಟಕ್ಕೆ ನಿಲ್ಲಿಸದ ಆಕೆ ಈ ಹುಡುಗ್ರಿಗೆಲ್ಲಾ ಬಸ್ಸಲ್ಲಿ ಜತೆ ಜತೆಯಾಗಿಯೇ ಕುಳಿತುಕೊಳ್ಳಬೇಕು. ಜತೆಯಾಗಿಯೇ ಕುಳಿತುಕೊಳ್ಳಬೇಕಾದ್ರೆ ಪಾರ್ಕ್ ಬೆಂಚಲ್ಲಿ ಹೋಗಿ ಕುಳಿತುಕೊಳ್ಳಲಿ ಎಂದು ಬೈಯೋಕೆ ಶುರು ಮಾಡಿಬಿಟ್ರು. ಪಾರ್ಕ್ ಬೆಂಚಲ್ಲಿ ಕುಳಿತುಕೊಂಡರೆ ಬಸ್ಸಿನಲ್ಲಿ ಸಿಗುವ ಮೂವಿಂಗ್, ಜಂಪಿಂಗ್ ಎಫೆಕ್ಟ್ ಸಿಗಲ್ವೇ?ಎಂದು ಮನಸ್ಸಿನಲ್ಲೇ ಹೇಳಿಕೊಂಡು ನಕ್ಕೆ. ಆಗಲೇ ಆ ಯುವ ಜೋಡಿ ಸೀಟು ಬಿಟ್ಟು ಹಿಂದೆ ಹೋಗಿ ನಿಂತು ಬಿಟ್ಟಿದ್ದರು. ಇಂಥಾ ಮನರಂಜನೆಗಳ ನಡುವೆ ಹುಡುಗಿಯೊಬ್ಬಳ ವ್ಯಾಕ್ಸಿಂಗ್ ಮಾಡಿಸಿದ ನೀಳ ತೋಳುಗಳು, ನೇಲ್ ಪಾಲಿಶ್ ಹಚ್ಚಿದ ಆಕೆಯ ಕೈಬೆರಳುಗಳು, ಪರ್‌ಫ್ಯೂಮಿನ ಘಮ,ವಿಧ ವಿಧದ ರಿಂಗ್ ಟೋನ್‌ಗಳ ಸದ್ದುಗಳು, ವಿವಿಧ ಭಾಷೆಯಲ್ಲಿನ ಸಂಭಾಷಣೆಗಳು ಎಲ್ಲವನ್ನೂ ಒಂದೇ ಕಡೆಯಲ್ಲಿ ನೋಡಿ, ಕೇಳಿ ಅನುಭವಿಸಬೇಕಾದರೆ ಬಿಎಂಟಿಸಿ ಬಸ್ಸಲ್ಲಿ ಓಡಾಡಲೇ ಬೇಕು. ಜನರಿಂದ ತುಂಬಿ ತುಳುಕುವ ಬಸ್ಸು ಪಯಣದ ಮಧ್ಯೆ ಆಗ್ಗಾಗ್ಗೆ ನಮ್ಮ ಫೋನ್, ವ್ಯಾಲೆಟ್ ಗಳು ಚೋರಿಯಾಗಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳುತ್ತಾ, ಇಳಿಯುವ ನಿಲ್ದಾಣ ಬಂತಾ? ಎಂದು ಇಣುಕುತ್ತಾ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಹೋಗುವುದೇ ಮಾಯಾನಗರಿಯ ಬಸ್ ಪಯಣದ ಗಮ್ಮತ್ತು. ಹಿಂದೆ ಹೋಗ್ರಿ ಎನ್ನುತ್ತಾ ಗಂಡಸರನ್ನು ಹಿಂದೆ ನೂಕುವ ಕಂಡೆಕ್ಟರ್ ಅಂಕಲ್, ಕಂಬ ಬಟ್ಟು ಹಿಂದೆ ಹೋಗಮ್ಮಾ..ಪಾಸ್ ತೋರ್ಸಿ... ಮುಂದೆ ಚೆಕಿಂಗ್ ಇದೆ ಟಿಕೆಟ್ ತೆಗೆದುಕೊಳ್ಳಿ ಎನ್ನುವ ಕಂಡೆಕ್ಟರ್‌ನ ಮಾತಿನ ನಡುವೆ ಎಕ್ಸ್‌ಕ್ಯೂಸ್‌ಮೀ, ಸೈಡ್ ಪ್ಲೀಸ್ ಅನ್ನೋ ಪುಟ್ ಪುಟ್ ಇಂಗ್ಲೀಷ್ ವಾಕ್ಯಗಳು ಜನರ ಮಧ್ಯೆ ಕೇಳಿಬರುವುದು ಈ ಬೆಂದಕಾಳೂರಿನಲ್ಲೇ.

ಇದೆಲ್ಲಾ ದಿನ ನಿತ್ಯದ ಪ್ರಯಾಣ ಅನುಭವಗಳಾದರೆ ದೂರದೂರಿಗೆ ಹೋಗುವ ಬಸ್ಸು ಪ್ರಯಾಣದಲ್ಲಿ ಸಿಗುವ ಅನುಭವಗಳನ್ನಾಧರಿಸಿಯೇ ಒಂದು ಸಿನಿಮಾ ತಯಾರಿಸಬಹುದು ಎಂದು ಅನಿಸುತ್ತಿದೆ. ಪರವೂರಿಗೆ ಹೋಗುವ ಖುಷಿ, ಇನ್ಯಾವುದೋ ದುಃಖದಿಂದ ಬಳಲಿದ ಮುಖಗಳೇ ಇಲ್ಲಿ ಕತೆ ಹೇಳುತ್ತಿರುತ್ತವೆ. ತನ್ನ ಊರಿಗೆ ಮರಳುತ್ತಿರುವ ವ್ಯಕ್ತಿಯ ಮುಖದಲ್ಲಿ ಕಾಣುವ ಸಂತಸ, ಊರು ಬಿಡುವ ಹೊತ್ತಲ್ಲಿನ ಸಂಕಟ, ಇನ್ಯಾವುದೋ ಖುಷಿಯ ಸಮಾರಂಭಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಮಂದಿ, ಇನ್ಯಾರದೋ ವ್ಯಕ್ತಿಯ ಅಂತಿಮ ದರ್ಶನಕ್ಕಾಗಿ ತೆರಳುವ ಜನರು ಎಲ್ಲರೂ ಇಲ್ಲಿ ಮುಖಾ ಮುಖಿಯಾಗುತ್ತಾರೆ. ಎಲ್ಲರಿಗೂ ಹೇಳಲು ಅವರದ್ದೇ ಆದ ಕಥೆಗಳಿರುತ್ತವೆ, ದುಗುಡ, ದುಮ್ಮಾನ ಮತ್ತು ಖುಷಿಗಳಿರುತ್ತವೆ. ಆದರೆ ದೂರದ ಊರಿಗೆ ಹೋಗುತ್ತಿದ್ದೇವೆ. ಜತೆಯಲ್ಲಿರುವ ಪ್ರಯಾಣಿಕರು ಹೇಗೆ ಏನೋ ಅಂಥ ಗೊತ್ತಿಲ್ಲ. ಅಪರಿಚಿತರಲ್ಲಿ ಮಾತನಾಡಿ ಪೇಚಿಗೆ ಸಿಲುಕುವುದು ಬೇಡ ಎಂದು ಎಲ್ಲರೂ ಅವರವರ ಪಾಡಿಗೆ ಇದ್ದು ಬಿಡುತ್ತಾರೆ . ಕ್ರಮಿಸಬೇಕಾದ ಹಾದಿ ದಿನಗಟ್ಟಲೆ ಇದ್ದರೂ ಸಹ ಪ್ರಯಾಣಿಕರೊಂದಿಗೆ ಮಾತನಾಡಲು ಹಿಂಜರಿಕೆ. ಒಬ್ಬರೇ ಪ್ರಯಾಣ ಮಾಡುತ್ತಿದ್ದರಂತೂ ಇನ್ನಿಲ್ಲದ ಚಡಪಡಿಕೆ. ಪಕ್ಕದಲ್ಲಿ ಕುಳಿತವರು ಏನಾದರೂ ತಿನ್ನೋಕೆ , ಕುಡಿಯೋಕೆ ಕೊಟ್ಟರೆ ಸಂಶಯದಿಂದಲೇ ಅದನ್ನು ನೋಡಿ 'ನೋ ಥ್ಯಾಂಕ್ಸ್, ಇಲ್ಲ ನನಗೇನೂ ಬೇಡ 'ಎಂದು ಹೇಳಿ ಸುಮ್ಮನಾಗುತ್ತೇವೆ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೆ ಗೊತ್ತು? ಎಂಬ ಭಾವನೆಯಿಂದಲೇ ಅಷ್ಟೊಂದು ಪ್ರಯಾಣಿಕರಿರುವ ಬಸ್ಸಿನಲ್ಲಿ ನಾವು ಏಕಾಂತ ಬಯಸುತ್ತೇವೆ. ಕೆಲವೊಂದ್ಸಾರಿ ನಾವೇ ಸಹಪ್ರಯಾಣಿಕರ ಜತೆ ಮಾತಿಗಿಳಿದು ಏಕಾಂತದ ಚಿಪ್ಪಿನಿಂದ ಹೊರಬರಲು ಹವಣಿಸುತ್ತೇವೆ. ಹೀಗೆ ಪ್ರತಿಯೊಂದು ಸ್ಟಾಪಿನಲ್ಲಿಯೂ ಸಿಗುವ ಹೊಸ ಮುಖಗಳು, ಇಳಿದು ಹೋಗುವ ಪರಿಚಿತ ಮುಖಗಳು ಅವರ ಜತೆ ಒಡನಾಡಿದ ಅನುಭವಗಳ ಮೂಟೆ ಹೊತ್ತು ನಮ್ಮ ಪ್ರಯಾಣ ಮುಂದುವರಿಯುತ್ತಿರುತ್ತದೆ. ಇಲ್ಲಿ ಪ್ರತಿಯೊಂದು ಪಯಣವೂ ನಮಗೆ ಹೊಸತೊಂದು ಅನುಭವವನ್ನು ನೀಡುತ್ತಾ ಹೋಗುತ್ತದೆ. ಅದು ಖುಷಿಯ ಕ್ಷಣಗಳಾಗಿರಬಹುದು, ನೋವಿನ ಸಂಗತಿಗಳಾಗಿರಬಹುದು, ಮುಜುಗರಕ್ಕೊಳಗಾದ, ಅವಮಾನಕ್ಕೊಳಗಾದ ಘಟನೆಗಳೇ ಆಗಿರಬಹುದು, ಎಲ್ಲ ನಿನ್ನೆಗಳಲ್ಲಿ ಒಂದೊಂದು ರೀತಿಯ ಅನುಭವವನ್ನು ಇಂಥಾ ಪ್ರಯಾಣಗಳು ನಮಗೆ ನೀಡಿರುತ್ತವೆ. ಊರು- ಪರವೂರು ಯಾವುದೇ ಇರಲಿ ಅಲ್ಲಿನ ಬಸ್ಸು ಪ್ರಯಾಣಗಳು ನಮ್ಮ ಅನುಭವದ ಪುಟಗಳಲ್ಲಿ ಪ್ರತ್ಯೇಕ ಸ್ಥಾನವನ್ನು ಗಳಿಸಿಕೊಂಡಿರುತ್ತವೆ. ಒಂದಷ್ಟು ಸಿಹಿ, ಮತ್ತೊಂದಿಷ್ಟು ಕಹಿ ಎನ್ನುವ ಜೀವನದ ಎಲ್ಲ ಕ್ಷಣಗಳನ್ನು ಪ್ರಯಾಣದೊಂದಿಗೆ ಅನುಭವಿಸಬೇಕಾದರೆ ಬಸ್ಸಲ್ಲಿ ಪ್ರಯಾಣಿಸಲೇ ಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಈ ರೀತಿಯ ಪ್ರಯಾಣಗಳು ನೆನಪಿನ ಸುರುಳಿ ಬಿಚ್ಚುವಂತೆ ಮಾಡುತ್ತದೆ. ನೆನಪಿನ ಪುಸ್ತಕದ ಹಾಳೆಯಲ್ಲಿ ಬಸ್ಸು ಓಡಾಟ ಆರಂಭಿಸಿಯಾಗಿದೆ. ಪ್ರತೀ ನಿಲ್ದಾಣವೂ ಕಥೆ ಹೇಳುತ್ತಿದೆ, ಅನುಭವಗಳು ಹಾರ್ನ್ ಹೊಡೆಯುತ್ತಾ ಬದುಕಿನ ದಾರಿಯನ್ನು ಕ್ರಮಿಸುತ್ತಾ ಮುನ್ನುಗ್ಗುತ್ತಿದೆ.


ಅಕ್ಕ ಸಮ್ಮೇಳನ 2014-'ಹರಟೆಕಟ್ಟೆ' ಲಲಿತ ಪ್ರಬಂಧ ಸಂಕಲನದಲ್ಲಿ ಪ್ರಕಟಿತ ಬರಹ

Friday, September 5, 2014

ಮಹಾಬಲಿಗೊಂದು ಪತ್ರ

ಪ್ರೀತಿಯ ಮಾವೇಲಿ ಅಲಿಯಾಸ್ ಮಹಾಬಲಿ,


ಓಣಂ ಹಬ್ಬದ ಪ್ರಯುಕ್ತ ದೇವರ ಸ್ವಂತ ಊರಿಗೆ ಭೇಟಿ ನೀಡುವ ನಿನಗೆ ಸ್ವಾಗತ. ನಮ್ಮೂರಿಗೆ ಭೇಟಿ ನೀಡುವ ಮುನ್ನ ನಿನಗೆ ಹಲವಾರು ವಿಷಯಗಳ ಬಗ್ಗೆ ಹೇಳಬೇಕಾಗಿದೆ. ಅದಕ್ಕೆ ಈ ಪತ್ರ. ಕಾಸರಗೋಡಿಗೆ ದೀಪಾವಳಿ ಹಬ್ಬದ ವೇಳೆ ಬಲೀಂದ್ರನಾಗಿಯೂ, ಓಣಂ ಹಬ್ಬದಂದು ಮಹಾಬಲಿಯಾಗಿ ಬರುವ ನಿನಗೆ ಗಡಿನಾಡ ಕನ್ನಡಿಗರಂತೆ ಮಲಯಾಳಂ, ಕನ್ನಡ, ತುಳು ಹೀಗೆ ಐದಾರು ಭಾಷೆ ಗೊತ್ತಿರುತ್ತದೆ ಅಲ್ವಾ. ಆದ್ದರಿಂದ ಕನ್ನಡದಲ್ಲಿ ಬರೆದ ಈ ಪತ್ರ ಓದಲು ನಿನಗೆ ಸಮಸ್ಯೆ ಆಗಲ್ಲ ಅಂದುಕೊಂಡಿದ್ದೀನಿ.

ಊರಲ್ಲಿ ಸಿಕ್ಕಾಪಟ್ಟೆ ಮಳೆ ಬೇರೆ. ಮಳೆಯೊಂದಿಗೆ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ರಸ್ತೆಯಲ್ಲಿರುವ ಗುಂಡಿಯಲ್ಲೆಲ್ಲಾ ನೀರು ತುಂಬಿ ಪುಟ್ಟ ಕೊಳದಂತಾಗಿದೆ. ಅಲ್ಲೇ ಬೇಕಾದರೆ ಮೀನು ಕೖಷಿ ಕೂಡಾ ಮಾಡಬಹುದು. ಬಸ್ಸಲ್ಲಿ ಪ್ರಯಾಣ ಮಾಡುವಾಗ ಒಂಟೆ ಸವಾರಿ ಅನುಭವ ನಿನಗಾಗಬಹುದು. ಒಂದಷ್ಟು ದಿನ ನೀನು ನಮ್ಮೂರಲ್ಲಿ ಓಡಾಡಿದರೆ ಸಾಕು, ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಕ್ಕಿ, ನಿನ್ನ ಡೊಳ್ಳು ಹೊಟ್ಟೆ ಕರಗಬಹುದು. ಬರುವ ಮುನ್ನ ಯಾವ ಜಿಲ್ಲೆಯಲ್ಲೂ ಬಂದ್ ಆಚರಣೆ ಮಾಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೋ. ಕೋಮುಗಲಭೆ, ರಾಜಕೀಯ ಕೊಲೆಗಳು ಇಲ್ಲಿ ಮಾಮೂಲಿ ಆಗಿ ಬಿಟ್ಟಿವೆ. ಕೆಂಪು, ಹಸಿರು, ಕೇಸರಿ ಧ್ವಜಗಳ ಕೆಳಗೆ ಯಾರ್ಯಾರದೋ ನೆತ್ತರು ಹರಿಯುತ್ತಿದೆ. ಜನರು ರಕ್ತದಾಹಿಗಳಂತೆ ಹೊಡೆದಾಡುತ್ತಿದ್ದಾರೆ. ಯಾವ ಮೂಲೆಯಿಂದ ಗುಂಡು ಹಾರುತ್ತದೋ, ಬಾಂಬ್ ಸಿಡಿಯುತ್ತದೋ ಎಂದು ಬಲ್ಲವರಾರು? ಆದ್ದರಿಂದ ನೀನು ಹುಷಾರು!

ಹಾಂ...ನೀನು ಬರುವಾಗ ಜಾಸ್ತಿ ಆಭರಣ ಹಾಕೊಂಡು ಬರ್ಬೇಡಪ್ಪಾ..ಬೈಕ್ ನಲ್ಲಿ ಸರ ಕಳ್ಳತನ ಮಾಡುವ ಹೈಟೆಕ್ ಕಳ್ಳರು ಜಾಸ್ತಿಯಾಗಿದ್ದಾರೆ. ಯಾವುದಕ್ಕೂ ನಿನ್ನ ಕೈಯಲ್ಲಿ ಒಂದು ಸ್ಮಾಟ್೯ ಫೋನ್ ಇಟ್ಟುಕೋ. ಯಾಕೆ ಗೊತ್ತಾ? ನಿನಗೇನಾದರೂ ಸಮಸ್ಯೆ ಆದರೆ ಜನರಲ್ಲಿ ಅದನ್ನು ಹೇಳುವ ಬದಲು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡು. ಆಮೇಲೆ ಎಷ್ಟು ಲೈಕ್, ಕಾಮೆಂಟ್ ಬರುತ್ತೆ ಅಂತ ನೋಡ್ತಾ ಇರು...

ನನ್ನ ಸ್ವಂತ ಊರು ಅಲ್ವಾ ಇಲ್ಲಿನ ಮಕ್ಕಳಲ್ಲಿ ಮಾತನಾಡಿಸೋಣ ಅಂತ ಹೋಗುವಾಗ ಹುಷಾರಪ್ಪಾ..ಸ್ವಲ್ಪ ಇಂಗ್ಲೀಷ್ ಕಲಿತುಕೊಂಡು ಹೋಗು, ಇಲ್ಲಾಂದ್ರೆ ನಿನಗೆ ಅವರಲ್ಲಿ ಮಾತನಾಡಲು ಕಷ್ಟ ಆಗುತ್ತೆ. ಮಲಯಾಳಂಗಿಂತ ಇಂಗ್ಲಿಷ್ ಮೀಡಿಯಂನಲ್ಲೇ ಕಲಿಯುವ ಮಕ್ಕಳು ಇಲ್ಲಿ ಜಾಸ್ತಿ. ಅಷ್ಟೇ ಯಾಕೆ ಇಲ್ಲಿನ ಯುವಜನರು ಕೂಡಾ ಮಂಗ್ಲೀಷ್ ನಲ್ಲೇ ಮಾತನಾಡುವುದರಿಂದ ನಿನಗೆ ಅದನ್ನು ಅಥ೯ ಮಾಡಿಕೊಳ್ಳಲು ಕಷ್ಟವಾಗಬಹುದು. ನಮ್ಮೂರಿನ ಅಧ೯ಕ್ಕಧ೯ ಜನ ಬೆಂಗಳೂರು, ಚೆನ್ನೈ, ದುಬೈನಲ್ಲಿ ನೆಲೆಸಿರುವುದರಿಂದ ಮಲಯಾಳಿಗಳ ಸಂಖ್ಯೆಯೂ ಇಲ್ಲಿ ಕಡಿಮೆಯೇ. ಕೆಲಸಕ್ಕೆ ಬಂದ ಆಂಧ್ರದವರೂ, ಬಂಗಾಳಿಗಳು, ತಮಿಳರು ನಿನಗೆ ಅಲ್ಲಲ್ಲಿ ಸಿಗಬಹುದು. ಸ್ವಲ್ಪ ಸ್ವಲ್ಪ ಹಿಂದಿ,ತಮಿಳಲ್ಲಿ ಮಾತನಾಡಿ ಅವರನ್ನೆಲ್ಲಾ ಹ್ಯಾಂಡಲ್ ಮಾಡಬೇಕಾಗುತ್ತದೆ.

ನಿನ್ನ ಡ್ರೆಸ್ ಬಗ್ಗೆ ಹೇಳಲೇ ಬೇಕು. ಸಾಂಪ್ರದಾಯಿಕ ವೇಷ ತೊಟ್ಟು ಬಂದ ನಿನ್ನನ್ನು ನೋಡಿ ಜನ, ರಿಯಾಲಿಟಿ ಶೋ ಅಥವಾ ಇನ್ಯಾವುದೋ ಕಾರ್ಯಕ್ರಮದ ನಟ ಎಂದೇ ಗುರುತಿಸ್ತಾರೆ ವಿನಾ ಮಾವೇಲಿ ಅಂತ ಗುರುತಿಸಲ್ಲ ನೋಡು. ಒಂದು ವೇಳೆ ಅವರು ನಿನ್ನನ್ನು ಗುರುತಿಸಿದರೂ, ಅವರು ನಿನ್ನ ಜತೆ ಮಾತನಾಡುವುದನ್ನು ಬಿಟ್ಟು ನಿನ್ನ ಜತೆ ಸೆಲ್ಫೀ ತೆಗೆದು ಫೋಟೋ ಅಪ್ಲೋಡ್ ಮಾಡ್ತಾರೆ ಅಷ್ಟೇ. ಇನ್ನು ನೀನು ಮನೆಗಳಿಗೆ ಭೇಟಿ ಕೊಡುವುದಾದರೆ ಮನೆ ಮಂದಿಯೆಲ್ಲಾ ಟೀವಿ ಮುಂದೆಯೇ ಓಣಂ ಆಚರಿಸುವುದನ್ನು ನೋಡಬಹುದು. ಈ ಓಣಂಗೆ ಅದೆಷ್ಟು ಹೊಸ ಸಿನಿಮಾ, ಕಾರ್ಯಕ್ರಮಗಳನ್ನು ನಮ್ಮ ಚಾನೆಲ್ ಗಳು ಉಣಬಡಿಸುತ್ತವೆ ಗೊತ್ತಾ? ಅಂಗಳದಲ್ಲಿ ಹಾಕಿದ ರಂಗೋಲಿಯಲ್ಲಿ ಪ್ಲಾಸ್ಟಿಕ್ ಹೂ ಕಂಡರೆ ಅಚ್ಚರಿ ಬೇಡ, ಕಾಂಕ್ರೀಟ್ ನಾಡಲ್ಲಿ ಹೂವಿಗೂ ಬರ ಬಂದು ಬಿಟ್ಟಿದೆ. ಉಯ್ಯಾಲೆ ಎಲ್ಲಿದೆ ಅಂತ ಹುಡುಕ್ತಾ ಇದ್ದೀಯಾ? ಮರಗಳೇ ಇಲ್ಲದಿದ್ದರೆ ಉಯ್ಯಾಲೆ ಎಲ್ಲಿ ಕಟ್ತಾರೆ ಹೇಳು? ಹಾಗೆ ಈಗಿನವರಿಗೆ ಉಯ್ಯಾಲೆ ತೂಗುವುದೆಂದರೆ ಔಟ್ ಆಫ್ ಫ್ಯಾಷನ್ ಬಿಡು.

ಮನೆಯಲ್ಲಿ ಭಜ೯ರಿ ಓಣಂ ಸದ್ಯ (ಔತಣ) ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡೂ ಹೋಗ್ಬೇಡ. ಈ ಟೈಮಲ್ಲಿ ಎಲ್ಲ ಹೋಟೆಲ್ ನಲ್ಲಿ ಗಡದ್ದಾಗಿ ಓಣಂ ಸದ್ಯ ಸ್ಪೆಷಲ್ ಊಟ ಇದ್ದೇ ಇರುತ್ತದೆ. ಅಲ್ಲೇ ಹೋಗಿ ಊಟ ಮಾಡಿದ್ರೆ ಆಯ್ತು. ಗಲ್ಲಿ ಗಲ್ಲಿಗಳಲ್ಲಿ ರಾಜಕೀಯ ಪಕ್ಷಗಳ, ಸಿನಿಮಾ ಜಾಹೀರಾತು ಜತೆಗೆ ಬೆಳ್ಳಗಾಗುವಂತೆ ಮಾಡುವ ಸೋಪು, ಉದ್ದ ಕೂದಲು ಬೆಳೆಯಲು ಎಣ್ಣೆ, ಹೇರ್ ಫಿಕ್ಸಿಂಗ್ ಇಂಥಾ ಜಾಹೀರಾತುಗಳ ದೊಡ್ಡ ದೊಡ್ಡ Hoardings ಗಳನ್ನೂ ನೀನು ಕಾಣಬಹುದು. ಹೌದು, ನಾವು ಬದಲಾಗುತ್ತಿದ್ದೇವೆ. ಸೋಪು, ಕ್ರೀಮ್, ಎಣ್ಣೆ ತಿಕ್ಕಿ ತಿಕ್ಕಿ ನಮ್ಮ ಎಣ್ಣೆಕಪ್ಪು ಚಮ೯ವನ್ನು ಬೆಳ್ಳಗಾಗಿಸುವುದರಲ್ಲಿ ನಾವು ಬ್ಯುಸಿಯಾಗಿದ್ದೇವೆ. ಏತನ್ಮಧ್ಯೆ, ಓಣಂ ಹಾಡುಗಳನ್ನು ಕೇಳ್ಬೇಕು ಅಂತ ಹಠ ಮಾಡ್ಬಾದು೯. ಎಲ್ಲ ಹಾಡುಗಳು ರಿಮಿಕ್ಸ್ ಆಗಿರುವುದರಿಂದ ಓಣಂ ಪಾಟ್ಟು ಕೂಡಾ ರಿಮಿಕ್ಸ್ ಆಗಿ ಕೇಳುವುದು ನಮಗಿಷ್ಟ. ಮನೆಯ ಹೆಂಗಸರೆಲ್ಲಾ ಸೇರಿ ತಿರುವಾದಿರಕ್ಕಳಿ ಆಡ್ತಾರೆ, ಮಕ್ಕಳು ತೆಂಗಿನ ಗರಿಯಿಂದ ಮಾಡಿದ ಚೆಂಡಾಟ ಆಡ್ತಾರೆ ಅದನ್ನು ನೋಡ್ಬೇಕು ಎಂಬ ಆಸೆಯಿದ್ದರೆ I am SORRY...ಅದಕ್ಕೆಲ್ಲಾ ಟೈಮ್ ಎಲ್ಲಿದೆ ಹೇಳು? ಇನ್ನು ಹಗ್ಗ ಜಗ್ಗಾಟ? ಮಡಕೆ ಒಡೆತ ? ಆಟಗಳು ಊಹೂಂ....ಆಡಳಿತಾರೂಢ ಪಕ್ಷ ಮತ್ತು ವಿಪಕ್ಷದ ನಡುವೆ ದಿನಾ ನಡೆಯುತ್ತಿರುವುದು ಅದೇ ಅಲ್ವಾ?

ಇಲ್ಲಿ ಕೇಳು, ಇದೀಗ ಕೇರಳದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂದು ಸಕಾ೯ರ ತೀಮಾ೯ನಿಸಿದೆ. ಆದ್ದರಿಂದ ಬಾರ್ ಗಳ ಮುಂದೆ ನಮ್ಮ ಗಂಡಸರನ್ನು ಹುಡುಕಬೇಡ, ಅವರೆಲ್ಲಾ ಕಳ್ಳಭಟ್ಟಿ ತಯಾರಿಸುವ ಅಡ್ಡಾದಲ್ಲಿ ಕದ್ದು ಮುಚ್ಚಿ ಕುಡಿದು ಇಸ್ಪೇಟ್ ಆಡಿ ಜಗಳ ಮಾಡ್ತಿರಬಹುದು. ಮಕ್ಕಳು, ಯುವಕರು ಫೋನ್ ನಲ್ಲಿ ಬ್ಯುಸಿಯಾಗಿದ್ದಾರೆ. ನನ್ನದೇ ಊರು ಅಂತಾ ಸುಮ್ನೇ ಅಲ್ಲಿ ಇಲ್ಲಿ ಅಡ್ಡಾಡಬೇಡ, ಬೇಹುಗಾರನಿರಬಹುದು ಎಂದು ನಿನ್ನನ್ನು ಬಂಧಿಸಬಹುದು. ಹುಷಾರು!

ಇನ್ನೊಂದು ಮುಖ್ಯ ವಿಷಯ. ಅಂಗಡಿಯಲ್ಲಿ ಏನಾದರೂ ವಸ್ತು ಖರೀದಿ ಮಾಡಿದ ನಂತರ ಸಿಗುವ ಬಾಕಿ ದುಡ್ಡನ್ನು ಸರಿಯಾಗಿ ಪರಿಶೀಲಿಸಿಕೋ. ಎಟಿಎಂ ಬಳಸುವಾಗಲೂ ಅಷ್ಟೇ... ಇಲ್ಲೆಲ್ಲಾ ಕಳ್ಳನೋಟುಗಳು ಜಾಸ್ತಿ ಹರಿದಾಡುತ್ತಿದೆ. ಈಗ ಓಣಂ ಕೈನೀಟ್ಟಂ ಸಿಕ್ಕಿದ ನೋಟುಗಳನ್ನು ಕೂಡಾ ಒರಿಜಿನಲ್ಲು ಹೌದೋ ಅಲ್ವೋ ಅಂತ ನೋಡ್ಬೇಕಾಗುತ್ತೆ. ರಾತ್ರಿ ವೇಳೆ ಜಾಗ್ರತೆ! ಗದ್ದೆ ನಡುವೆ ನಿಂತಿರುವ ಬೆಚ೯ಪ್ಪನನ್ನೂ ಬಿಡದೆ ರೇಪ್ ಮಾಡುವ ಕಾಮಾಂಧರು ಇದ್ದಾರೆ ಇಲ್ಲಿ. ಹೇಗಾಗಿದೆ ಅಂದ್ರೆ ದೇವರ ಸ್ವಂತ ಊರಿನಲ್ಲೀಗ ದೆವ್ವಗಳದ್ದೇ ಕಾರುಬಾರು! ಬೆಲೆ ಏರಿಕೆಯಿಂದ ಕೈ ಸುಟ್ಟುಕೊಂಡಿರುವ ಕಾಮಿ೯ಕರಿಗೆ ಇಲ್ಲಿ ಸರಿಯಾಗಿ ಕೆಲಸ ಇಲ್ಲ. ಅಷ್ಟೇ ಯಾಕೆ ಮುಕ್ಕಾಲು ಭಾಗ ಸಮುದ್ರದಿಂದ ಕೂಡಿರುವ ನಮ್ಮೂರಲ್ಲಿ ಮರಳು ದಂಧೆಯಿಂದಾಗಿ ಸಮುದ್ರದಡದಲ್ಲಿ ಮರುಳು ಕೂಡಾ ಖಾಲಿಯಾಗಿದೆ. ಇದನ್ನೆಲ್ಲಾ ಕೇಳಿದ ನಂತರ ನೀನು ಬರದೇ ಇರ್ಬೇಡಪ್ಪಾ...ಜನರ ನಂಬಿಕೆ ಹುಸಿ ಮಾಡ್ಬೇಡ

ನಾನಂತೂ ಅಂಗಳದಲ್ಲಿ ರಂಗೋಲಿ ಹಾಕಿ, ಪಾಯಸ ಮಾಡಿಟ್ಟು ನಿನ್ನ ಕಾಯ್ತಾ ಇರ್ತೀನಿ... ನೀ ಬರಲೇ ಬೇಕು....



ಇಂತಿ ನಿನ್ನ,
ಪೊನ್ನು ಮೋಳ್

ಚಿತ್ರ ಕೖಪೆ: http://www.maveli.co.uk/

Saturday, August 2, 2014

ಅಳಿದುಳಿದ ಕನವರಿಕೆ


ಲೇಖನಿಯ ತುದಿಯ

ಜ್ವಾಲೆ ನಂದಿ ಹೋದ ಮೇಲೆ

ಮನಸ್ಸಿನ ಭಾವನೆಗಳು

ಪದಗಳಿಗೆ ನಿಲುಕುವುದಿಲ್ಲ



ಮೌನಿ ನಾನು- ನೀನೂ



ಈ ಬಿಗು ಮೌನದಲ್ಲಿ ಸಿಕ್ಕಿ

ನಿಟ್ಟುಸಿರು ಬಿಟ್ಟಾಗ ದಕ್ಕಿದ್ದು

ನಿನ್ನದಲ್ಲವೆಂಬ ಅವ್ಯಕ್ತಭಾವ



ಓ ಮೌನವೇ...ಮಾತಾಗಬೇಡ

ಕ್ಷಣ ಮಾತ್ರಕ್ಕಾದರೂ

ಇನಿಯನಾಗಿಬಿಡು



ರಕುತದ ಕಲೆಯಲ್ಲಿ ಚಿತ್ತಾರ

ಬಿಡಿಸಿ ಸುಮ್ಮನಾದಾಗ

ದೂರ ದಿಗಂತದಲ್ಲಿನ ಚುಕ್ಕಿ

ಕಣ್ಣು ಮಿಟುಕಿಸಿ ಹೋದಂತೆ

ಹೇಳದೇ ಹೋದ ಮಾತುಗಳನು

ಅಪ್ಪಿ ಮುದ್ದಾಡಿ ಚುಂಬಿಸುವಾಗ

ನಾನು ನಿನ್ನವಳಾಗಿ ಬಿಡಬೇಕು



ಕಣ್ಣೀರು ಮೂಡಿಸಿದ ಕಾಮನಬಿಲ್ಲಿನಲಿ

ಬಣ್ಣಗಳ ಎಣಿಸುವಾಗ

ನೀನು ಮಾತಾಗಬೇಕು

ನಿನ್ನ ಮಾತಿನಲ್ಲಡಗಿದ ಮೌನ

ನಾನಾಗಬೇಕು

Sunday, June 15, 2014

ಅಪ್ಪನ ಡೈರಿಯಿಂದ ಕದ್ದ ಪುಟ...


ಈವಾಗ ಹೇಗೆ ಸಮಯ ಕಳೆಯುತ್ತಿದ್ದೀರಿ?

ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಎಷ್ಟೋ ಜನ ಇದೇ ಪ್ರಶ್ನೆಯನ್ನು ಅದೆಷ್ಟು ಬಾರಿ ಕೇಳಿದ್ದಾರೇನೋ ಗೊತ್ತಿಲ್ಲ. ಹಳ್ಳಿಯಲ್ಲಿರುವ ಕಾರಣ ಹಿತ್ತಿಲಲ್ಲಿ ಒಮ್ಮೆ ಸುತ್ತಾಡಿ, ದನ ಕರು, ಗಿಡ, ಮರ ಎಲ್ಲವನ್ನೂ ನೋಡ್ಕೋಳೋದು, ಇನ್ನೇನೋ ವಸ್ತು ತರೋಕೆ ಅಂತಾ ಅಂಗಡಿಗೆ ಹೋಗಿ ಬರೋದು, ಎರಡ್ಮೂರು ದಿನಪತ್ರಿಕೆ ಓದೋದು, ಆಮೇಲೆ ಟೀವಿ ನೋಡ್ತಾ ಕುಳಿತರೆ ದಿನ ಕಳೆದು ಹೋಗುವುದೇ ಗೊತ್ತಾಗಲ್ಲ. ಈವಾಗಂತೂ ವಿಶ್ವಕಪ್ ಫುಟ್ಬಾಲ್ ಇದೆ ಅಲ್ವಾ? ನಿದ್ದೆ ಬರುವಷ್ಟು ಹೊತ್ತು ಟೀವಿ ನೋಡ್ಬಹುದು. ಇಷ್ಟೊಂದು ವರ್ಷ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರೋದು ಅಂದ್ರೆ ಕಿರಿಕಿರಿ. ಅದಕ್ಕೆ ಮನೆಯ ಹೊರಗೆ ಸುತ್ತಾಡ್ತಾ ಇರ್ತೀನಿ. ಅಪ್ಪಾ ಟೈಮ್ ಸಿಕ್ಕಾಗಲೆಲ್ಲಾ ಏನಾದ್ರೂ ಬರೀರಿ ಅಂತಾ ಮಗಳು ಹೇಳ್ತಾನೇ ಇರ್ತಾಳೆ. ನಾನು ನಕ್ಕು ಸುಮ್ಮನಾಗ್ತೀನಿ .ನಿಜವಾಗ್ಲೂ, ನನಗೆ ಬರೆಯೋಕೆ ಬರಲ್ಲ. ಬರೆದದ್ದನ್ನು ಓದೋದು ಇಷ್ಟ. ಹೂಂ..ಇವತ್ತು ಏನಾದ್ರೂ ಬರೆಯೋಣ ಅಂತಾ ಪ್ರಯತ್ನ ಮಾಡಿದೆ. ಏನು ಬರೆಯಲಿ? ಅಂತಾ ಯೋಚಿಸ್ತಾ ಕುಳಿತುಕೊಂಡು ಒಂದು ಗಂಟೆ ಹಾಳು ಮಾಡಿಬಿಟ್ಟೆ!

ಮನಸ್ಸಲ್ಲಿರೋದನ್ನೇಲ್ಲಾ ಖಾಲಿ ಹಾಳೆಯಲ್ಲಿ ಗೀಚಿದರೆ ಮನಸ್ಸು ನಿರಾಳವಾಗುತ್ತೆ ಅಂತಾ ನನ್ನವಳು ಆಗಾಗ್ಗೆ ಹೇಳ್ತಾನೇ ಇರ್ತಾಳೆ. ಅವಳ ಮನಸ್ಸನ್ನು ಕಾಡುವ ಯಾವುದೇ ವಿಷಯ ಇರಲಿ ಅದನ್ನು ಹಾಳೆಯಲ್ಲಿ ಗೀಚಿದರೆ ಮಾತ್ರ ಆಕೆಗೆ ಸಮಾಧಾನ. ಇವತ್ತು ನಾನೂ ಇದೇ ಪ್ರಯೋಗ ಮಾಡೋಕೆ ಹೊರಟಿದ್ದೇನೆ. ನನ್ನ ಮನಸ್ಸಲ್ಲಿರೋದನ್ನು ಬರೆಯಬೇಕು. ಎಲ್ಲಿಂದ ಶುರು ಮಾಡಲಿ? ನಾನು ಜಾಸ್ತಿ ಮಾತಾಡುವುದಿಲ್ಲ, ಸಿಟ್ಟು ಬಂದರೆ, ಬೇಜಾರಾದಾಗಲೆಲ್ಲಾ ನಾನು ಮೌನದ ಮೊರೆ ಹೋಗುತ್ತೇನೆ. ಅದೆಷ್ಟೋ ಸಾರಿ ನನ್ನವಳ ಜತೆ ಜಗಳವಾಡುವಾಗ ನಾನು ಮೌನವಾಗಿಯೇ ಇದ್ದು ಬಿಡುತ್ತೇನೆ. ಏನಾದ್ರೂ ಮಾತಾಡಿ, ನಾನು ಹೇಳೋದು ಕೇಳಿಸ್ತಾ ? ಎಂದು ಬೊಬ್ಬೆ ಹಾಕಿ ಅವಳು ಸುಮ್ಮನಾಗುತ್ತಾಳೆ. ಹೀಗೆ ನಮ್ಮ ದಾಂಪತ್ಯದಲ್ಲಿ ನನ್ನ ಮೌನ ಅದೆಷ್ಟೋ ಜಗಳಗಳನ್ನು, ಅದೆಷ್ಟೋ ನೋವುಗಳನ್ನು ನುಂಗಿ ಅನಾಹುತಗಳನ್ನು ತಪ್ಪಿಸಿದೆ. ಕೋಪ ಬಂದಾಗ ಅವಳು ಪ್ರವಾಹದಂತೆ ಧುಮ್ಮಿಕ್ಕಿ ಹರಿಯುತ್ತಾಳೆ. ಅವಳ ಕೋಪದ ಮುಂದೆ ನಾನು ಶಾಂತ ಸಾಗರವಾಗುತ್ತೇನೆ. ನಮ್ಮಿಬ್ಬರ ಜೀವನದ ಭರತ ಇಳಿತಗಳಲ್ಲಿ ಕೆಲವೊಮ್ಮೆ ನಮ್ಮ ಮಾತುಗಳು ಮೌನವಾಗುತ್ತವೆ, ಮೌನ ಮಾತಾಗುತ್ತದೆ. ಈ ಮೌನವೇ ನಮ್ಮಿಬ್ಬರನ್ನು ಒಂದಾಗಿ ಬಾಳುವಂತೆ ಮಾಡಿದ್ದು.

ಮಾತಿನೆಡೆಯಲ್ಲಿ ಕಾಡಿಸುವ ಮೌನಕ್ಕೆ ಎಷ್ಟೊಂದು ಅರ್ಥಗಳು!. ಸಿಟ್ಟು, ಅಸಹನೆ, ಅಸೂಯೆ, ದ್ವೇಷ ಎಲ್ಲವನ್ನೂ ಮೌನ ನುಂಗಿ ಬಿಡುತ್ತೆ ನಿಜ. ಆದರೆ ಪ್ರೀತಿ? ಅದು ಮೌನದಲ್ಲೇ ಹುಟ್ಟುತ್ತದೆ, ಕೆಲವೊಮ್ಮೆ ಮೌನದಲ್ಲೇ ಇಲ್ಲವಾಗುತ್ತದೆ. ಮಾತುಗಳಲ್ಲಿ ಹೇಳಲಾರದೇ ಇರುವ ವಿಷಯಗಳು ಮೌನದಲ್ಲಡಗಿರುತ್ತವೆ ಅಲ್ವಾ. ನನ್ನ ಹೆಂಡ್ತಿ ವಿಷ್ಯದಲ್ಲಿ ಮಾತ್ರ ಅಲ್ಲ, ಮಕ್ಕಳ ವಿಷ್ಯದಲ್ಲೂ ಅಷ್ಟೇ. ಅವರ ಮೌನಗಳು ಸಾವಿರ ಮಾತುಗಳನ್ನು ಹೇಳುತ್ತವೆ. ಪುಟ್ಟ ಮಗು ಅಳುತ್ತಾ ತನಗೇನು ಬೇಕು ಎಂಬುದನ್ನು ಹೇಳುತ್ತೆ, ಆದರೆ ಮಕ್ಕಳು ಟೀನೇಜ್ಗೆ ಕಾಲಿರಿಸಿದಾಗ ಎಲ್ಲವನ್ನೂ ನೇರಾನೇರವಾಗಿ ಹೇಳತೊಡಗುತ್ತಾರೆ. ಟೀನೇಜ್ ದಾಟಿದ ನಂತರ ಮಾತಿಗಿಂತ ಅವರ ಮೌನಗಳೇ ಬೇಕು ಬೇಡಗಳನ್ನು ಹೇಳುತ್ತಿರುತ್ತವೆ. ನಾನೀಗ ನನ್ನ ಮಕ್ಕಳ ಮೌನವನ್ನು ಆಲಿಸುತ್ತಿದ್ದೇನೆ.

ಮಗ ಮೌನವಾಗಿದ್ದರೆ, ಕುಡಿದಿದ್ದಾನೋ ಅನ್ನೋ ಡೌಟು. ಮಗಳು ಮೌನವಾಗಿದ್ದರೆ ಅವಳಿಗೆ ಏನೋ ಹೇಳೋಕೆ ಇದೆ ಅಂತಾನೇ ಅರ್ಥ. ಅವರು ಮೌನವಾಗಿ ಕುಳಿತಿರೋದನ್ನು ನೋಡಿದರೆ ಅವರಿಗಿಬ್ಬರಿಗೂ ಏನೋ ಹೇಳೋಕೆ ಇದೆ ಎಂಬುದಂತೂ ಸತ್ಯ. ಮಗನ ಮನಸ್ಸಲ್ಲಿ ಏನಿದೆ? ಅಂತಾ ಅವನ ಅಮ್ಮ ಚೆನ್ನಾಗಿ ಅರ್ಥ ಮಾಡಿಕೊಳ್ತಾಳೆ. ಆದ್ರೆ ಮಗಳ ಮನಸ್ಸಲ್ಲಿರೋದು ಅಪ್ಪನಿಗೆ ಬೇಗ ಅರ್ಥವಾಗುತ್ತದೆ. ಯಾವತ್ತೂ ಚಾಟರ್ ಬಾಕ್ಸ್ನಂತೆ ಮಾತನಾಡುತ್ತಿದ್ದ ಮಗಳು ಮೌನವಾಗಿದ್ದಾಳೆ ಅಂದ್ರೆ? ಅವಳ ಮನಸ್ಸಲ್ಲಿ ಏನೋ ಇದೆ, ಹೇಳಬೇಕೆಂಬ ಬಯಕೆ ಇದ್ದರೂ ಹೇಳಲಾರದ ಚಡಪಡಿಕೆ. ಅವತ್ತು ಅವಳು ಬಂದು ನನ್ನ ಎದೆಗೊರಗಿ ಕಣ್ಣೀರಿಟ್ಟ ಕ್ಷಣದಲ್ಲೇ ಅರ್ಥವಾಗಿತ್ತು.

"ನನಗೆ 'ಅವನು' ಇಷ್ಟ ಆಗ್ತಾನೆ. ಆದ್ರೆ ನೀವು ಹೇಳಿದ ಹುಡುಗನನ್ನೇ ಮದ್ವೆ ಆಗ್ತೀನಿ ಅಪ್ಪಾ. ನಾನು ಬೇರೆ ಹುಡುಗನನ್ನ ಇಷ್ಟ ಪಡುತ್ತಿದ್ದೀನಿ ಅಂತಾ ಬೇಜಾರಾಗ್ಬೇಡಿ. ನಾನು ಪ್ರೀತಿಸುತ್ತಿರುವ ಬಗ್ಗೆ ಅವನಿಗೆ ಗೊತ್ತಿಲ್ಲ, ನಾನು ಹೇಳುವುದೂ ಇಲ್ಲ. ನಾವಿಬ್ಬರೂ ಸಮಾನಾಂತರ ರೇಖೆಗಳು. ಅವು ಎಂದೂ ಒಂದಾಗಲ್ಲ ಎಂದು ಗೊತ್ತಿರುವುದರಿಂದಲೇ ನನ್ನ ಪ್ರೀತಿಯನ್ನು ಮನಸ್ಸಿನಲ್ಲೇ ಮುಚ್ಚಿಟ್ಟಿದ್ದೀನಿ. ಜೀವನದಲ್ಲಿ ನಾನೂ ಒಬ್ಬನನ್ನು ಪ್ರೀತಿಸಿದ್ದೆ ಎಂದು ಅಂದುಕೊಳ್ಳುವಾಗ ಪುಳಕ ಅನುಭವಿಸೋಕೆ ಈ ಮೌನ ಪ್ರೀತಿಯ ಅನುಭವಗಳಷ್ಟೇ ಸಾಕು. ಯಾರ ಮನಸ್ಸನ್ನು ನೋಯಿಸುವುದು ನನಗೆ ಇಷ್ಟವಿಲ್ಲ. ಅವನು ನನ್ನನ್ನು ಇಷ್ಟ ಪಡ್ತಾನೋ ಇಲ್ವೋ ಅನ್ನೋದು ನನಗೆ ಬೇಕಿಲ್ಲ. ಅವನೆಂದರೆ ನನಗಿಷ್ಟ. ಈ ನನ್ನ ಪ್ರೀತಿ ಮನಸ್ಸಲ್ಲೇ ಇದ್ದರೆ ಚೆಂದ ಅಲ್ವಾ..."

"ನನ್ನ ಈ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗಲ್ಲ ಅಂತ ಗೊತ್ತಿದೆ. ಅಮ್ಮ ಅಳುತ್ತಾ, ಬೈದು ಕಿರುಚಾಡಿದ್ರೂ ಅಪ್ಪ ಮೌನವಾಗಿರ್ತಾರೆ. ಎಷ್ಟು ದಿನ ಹಾಗೆ ಇರೋಕೆ ಸಾಧ್ಯ? ನಾನು ಪ್ರೀತಿಸುತ್ತಿರುವ ಹುಡುಗಿಯನ್ನು ನಾನು ಮದುವೆಯಾಗಲೇ ಬೇಕು. ಅಪ್ಪ ಅಮ್ಮನ ಮನವೊಲಿಸಿ ಅವಳನ್ನೇ ನನ್ನ ಬಾಳಸಂಗಾತಿಯನ್ನಾಗಿ ಮಾಡಬೇಕು. ಆದರೆ ಈ ವಿಷ್ಯವನ್ನು ಅಪ್ಪನಲ್ಲಿ ಹೇಳುವುದಾದರೂ ಹೇಗೆ? ಧೈರ್ಯ ಬರಲಿ ಅಂತಾ ಕುಡಿದದ್ದೂ ಆಯ್ತು, ಈಗ ಮಾತೇ ಹೊರಡುತ್ತಿಲ್ಲ."

ನನ್ನ ಮಗ-ಮಗಳು, ಇವರಿಬ್ಬರ ಮೌನಕ್ಕೆ ಕಾರಣ ಇದಾಗಿರಬಹುದಾ? ಇದೆಲ್ಲವೂ ಆಕೆಗೆ ಗೊತ್ತಿದ್ದರೂ ಹಾಗೆ ಸುಮ್ಮನಾಗಿದ್ದಾಳಾ ? ಅವಳೂ ಈ ಬಗ್ಗೆ ತನಗೆ ಹೇಳಲಾಗದೆ ಬರೆದಿಟ್ಟಿರಬಹುದಾ? ನನ್ನ ಮನಸ್ಸಿಗೆ ಅನಿಸಿದ್ದನ್ನು ನಾನೀಗ ಗೀಚಿದ್ದೇನೆ. ಅವಳು ಹೇಳಿದ್ದು ನಿಜ, ಮನಸ್ಸು ನಿರಾಳವಾಗಿದೆ. ನನ್ನೊಳಗಿನ ಹಾಗು ನನ್ನವರ ಮೌನಗಳ ಅರ್ಥ ಹುಡುಕುತ್ತಾ ಏನೇನೋ ಬರೆಯುತ್ತಾ ಹೋದೆ. ನನ್ನೊಳಗಿನ ಮೌನವೇ ಇಲ್ಲಿ ಮಾತಾಗಿದೆ. ಮುಂದೊಂದು ದಿನ ಈ ಹಾಳೆಯನ್ನು ತಿರುವಿ ಹಾಕುವಾಗ ಈ ಅಕ್ಷರಗಳು ನನ್ನೊಡನೆ ಮಾತಿಗಿಳಿಯುತ್ತವೆ. ಆವಾಗ ನಾನು ಮೌನವಾಗಿದ್ದು ಅವುಗಳ ಮಾತನ್ನು ಆಲಿಸುತ್ತೇನೆ. ಯಾರಿಗೆ ಗೊತ್ತು? ಆ ಕ್ಷಣದಲ್ಲಿ ಈ ಮೌನಕ್ಕೆ ಇನ್ನೊಂದು ಅರ್ಥ ಹೊಳೆದರೂ ಹೊಳೆಯಬಹುದು! ಅಲ್ವಾ?

Sunday, June 8, 2014

ಈ ಕ್ಷಣದ ಮೌನ


ನೀ ನನ್ನೊಂದಿಗೆ

ಮಾತು ಬಿಟ್ಟ ಕ್ಷಣ

ಮೌನದಲಿ ಮಾತು ಮೊಳಕೆಯೊಡೆದಿತ್ತು



ನಾವಿಬ್ಬರೂ ಹೆಚ್ಚು ಮಾತನಾಡಿದ್ದೂ

ಈ ಮೌನದಲ್ಲೇ...



ಆರೋಹಣ ಅವರೋಹಣದ

ನಿಟ್ಟುಸಿರ ಸಂಜೆಗಳಲಿ

ಬಯ್ಯ ಮಲ್ಲಿಗೆ ಬಿರಿಯುವಾಗ

ನೀನದನ್ನು ವಸಂತವೆಂದು ಕರೆದೆ



ನನ್ನ ಪ್ರೀತಿಯ ಸೆಳೆತವನ್ನು

ನದಿಗೆ

ಹೋಲಿಸುವಾಗ

ನೀನು ಪ್ರಶಾಂತ ಸಾಗರವಾಗಿದ್ದೆ...



ದಿಗಂತದಲಿ ಹಾರಾಡುವ

ಹಕ್ಕಿಗೂ

ನೀರಲ್ಲಿ ತೇಲುವ ಮೀನಿಗೂ

ಇದೆ

ಬಂಧನದ ಭಯ!



ಪ್ರೀತಿಯ ಬಾಹುಗಳಲ್ಲಿ

ಕಣ್ಮುಚ್ಚಿ

ಬಂಧಿಯಾಗುವ ಹೊತ್ತು

ಸೇರಿಕೊಳ್ಳುವ ತವಕದ

ಹಿಂದೆ

ಕಳೆದುಕೊಳ್ಳುವ ಭೀತಿ

ಮುಖವಾಡ ಧರಿಸಿ

ನಕ್ಕಾಗ



ಮಾತು-ಮೌನದ

ನಡುವೆ ಪ್ರೀತಿ

ಬಿಕ್ಕಳಿಸಿದ್ದು

ಕೊನೆಗೂ ಕೇಳಲೇ ಇಲ್ಲ

Friday, February 14, 2014

ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ


ಪ್ರೀತಿ ಎಂದರೆ?

After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ.

ಅವನನ್ನೇ ದುರುಗುಟ್ಟಿ ನೋಡಿದೆ.

ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು.

ನಾನು ಸೀರಿಯಸ್ಸಾಗಿ ಕೇಳಿದ್ದು ...
ನಾನು ಸೀರಿಯಸ್ಸಾಗಿಯೇ ಹೇಳಿದ್ದು...

ನಿನ್ನ ಜತೆ ವಾದ ಮಾಡಲ್ಲ

ಪೆದ್ದಿ ನೀನು...

ಹೌದು...

ನಾನು ಪೆದ್ದಿ...ನನಗೇನೂ ಗೊತ್ತಿಲ್ಲ...ನಾನೀವಾಗ ಮಾಡುತ್ತಿರುವುದು ಸರಿಯೋ ತಪ್ಪೋ ಯಾವುದೂ ಗೊತ್ತಿಲ್ಲ

ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ?

ಛೇ...ಬೇಡ...

ಅವನ ಜತೆ ಮಾತನಾಡಿದಾಗ ನನಗ್ಯಾಕೆ ಅಷ್ಟು ಸಮಾಧಾನವಾಗುತ್ತದೆ? ಅವನ ಸೆನ್ಸ್ ಆಫ್ ಹ್ಯೂಮರ್, ಸಿಂಪ್ಲಿಸಿಟಿಗೆ ನಾನು ಫಿದಾ ಆಗಿಬಿಟ್ಟಿದ್ದೇನೆ. ಅವನ ಮಾತು, ಮೌನ, ನಗು ಎಲ್ಲವೂ ಇಷ್ಟವಾಗತೊಡಗಿದೆ. ನನ್ನಂತೆಯೇ ಅದೆಷ್ಟು ಹುಡ್ಗೀರು ಅವನ ಬಗ್ಗೆ ಕನಸು ಕಾಣುತ್ತಿದ್ದಾರೋ ಏನೋ. ಹುಡ್ಗೀರನ್ನೇ ಮೋಡಿ ಮಾಡೋಕೆ ಹುಟ್ಟಿದ್ದಾನೆ ಅನ್ನೋ ಹಾಗಿದೆ ಅವನ ಪರ್ಸನಾಲಿಟಿ...

ರಾತ್ರಿ 11.30ರ ನಂತರ ಹಾಸ್ಟೆಲ್ ರೂಂನಲ್ಲಿ ಕುಳಿತು ರೂಂಮೇಟ್ಸ್ ಜತೆ ಪಟ್ಟಾಂಗ ಹೊಡೆಯುವಾಗ ಅವನ ಬಗ್ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನೆಲ್ಲಾ ಇತ್ತೋ ಎಲ್ಲವನ್ನೂ ನಾನ್ಸ್ಟಾಪ್ ಆಗಿ ಹೇಳಿದ ನಂತರ ತಿಳೀತು ಇಷ್ಟೆಲ್ಲಾ ಹೇಳಬಾರದಿತ್ತು ಅಂತ...

ಯೇ ತೋ ಪಾಗಲ್ ಹೋಗಯಿ! ನನ್ನ ಮಾತಿಗೆ ಗೆಳತಿಯರ ಪ್ರತಿಕ್ರಿಯೆ.

ಅರೇ, ಕವನ, ಕಥೆ ಬರೀತಾನೆ ಅನ್ನೋ ಕಾರಣಕ್ಕೆ ಅವನನ್ನು ಲವ್ ಮಾಡೋದಾ? ಈ ಕಾಲದಲ್ಲಿ ಎಲ್ಲರೂ ಪ್ಯಾಕೇಜ್ ನೋಡ್ಕೊಂಡು ಲವ್ ಮಾಡೋಕೆ ನೋಡ್ತಾರೆ. ಹೀಗಿರುವಾಗ ಅವನ ಬರವಣಿಗೆ ಮೆಚ್ಚಿ ಕೊಂಡು ಲವ್ ಮಾಡೋಕೆ ಹೊರಟಿದ್ಯಾ? ಅನ್ನೋ ಉಪದೇಶಗಳ ಸುರಿಮಳೆ.

ಸರಿ, ನಿನಗವನು ಇಷ್ಟ ಆಗಿದ್ದಾನೆ ಅಂದ್ರೆ ನೇರಾನೇರ ಅವನಿಗೆ ಹೇಳಿ ಬಿಡು. ಅವನೇನಂತಾನೆ ನೋಡಿಯೇ ಬಿಡೋಣ..

ನಾ ಹೇಳಲ್ಲ! ಭಯ ಆಗ್ತಿದೆ.

ಪುಕ್ಕಲು ನೀನು...ವಾಟ್ಸಪ್ನಲ್ಲೊಂದು ಮೆಸೇಜ್ ಕಳಿಸಿದ್ರೆ ಮುಗೀತು.

ಬೇಡ..

ಈ ಪ್ರೀತಿ ಹಾಗೇ ಮನಸ್ಸಲ್ಲೇ ಇರಲಿ. ನನ್ನ ನಿವೇದನೆ ಅವನು ಸ್ವೀಕರಿಸದೇ ಇದ್ದರೆ ಬೇಜಾರಾಗುತ್ತೆ. ತಿರಸ್ಕಾರದ ನೋವು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ಅವನಿಗರಿವಿಲ್ಲದಂತೆ ಪ್ರೀತಿಸುವುದರಲ್ಲೂ ಒಂಥರಾ ಖುಷಿಯಿದೆ. ಅಲ್ಲಿ ಮಾತುಗಳೂ ಇಲ್ಲ, ಪ್ರಾಮಿಸ್ಗಳೂ ಇರಲ್ಲ. ನನಗನಿಸಿದಂತೆ ಪ್ರೀತಿಯ ಲೋಕದಲ್ಲಿ ವಿಹರಿಸಬಹುದು. ಯಾರೂ ಏನೂ ಹೇಳುವಂತಿಲ್ಲ. ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಬೇಕೆಂದರೆ ಏನಾದರೂ ಗೀಚಿದರೆ ಮುಗಿಯಿತು. ಅಕ್ಷರಗಳಲ್ಲೇ ಅವನ ಪ್ರೀತಿಯನ್ನು ಪೋಣಿಸುವಾಗ ಸಿಗುವ ಖುಷಿ ಇದೆಯಲ್ಲಾ ಅದು ಹೇಳಿದರೆ ಅರ್ಥವಾಗಲ್ಲ.

ವರ್ಷಗಳು ಕಳೆದ ಮೇಲೆ ಇದನ್ನೆಲ್ಲಾ ಓದುವಾಗ ನಗು ಬರಬಹುದು. ನಾಳೆ ನನ್ನ ಗಂಡ, ಮಗು ಸಂಸಾರ ಎಂದು ಕಳೆದುಹೋಗಿರುತ್ತೇನೆ. ಆದರೆ ಈ ವಯಸ್ಸಿನಲ್ಲಿ ಮನಸ್ಸಲ್ಲೇ ಮೂಡಿದ ಮೌನ ಪ್ರೀತಿಯ ಅನುಭವಗಳು ಇದೆಯಲ್ಲಾ..ಅದು ಈ ಕ್ಷಣಕ್ಕೆ ಸಿಕ್ಕ ಸಂಜೀವಿನಿಯಂತೆ. ನಾಳೆ ಏನಾಗುತ್ತೋ ಎಂಬುದನ್ನು ಯಾರು ಬಲ್ಲರು? ಈ ಕ್ಷಣವನ್ನು ಮಧುರವಾಗಿಯೇ ಕಳೆಯಬೇಕು. ಆದಾಗ್ಯೂ, ಬದುಕಿನ ತಳಹದಿಯೇ ಪ್ರೀತಿಯಲ್ಲವೇ? ಈ ಪ್ರೀತಿಯ ನೆಪದಲ್ಲಿ ಬದುಕು ಸುಂದರವಾಗಿ ಇರಬೇಕು. ಪ್ರಾರ್ಥನೆ, ಕನಸು, ಸಾಧನೆ ಎಲ್ಲವೂ ನಮ್ಮ ನಂಬಿಕೆಯಿಂದಲೇ ಸಾಧ್ಯವಾಗಿರುವಾಗ ಅವನ ಪ್ರೀತಿಯೂ ನಂಬಿಕೆಯೇ ಆಗಿರಲಿ.

ಅವನ ಮನಸ್ಸಿನಲ್ಲಿ ಯಾರಿದ್ದಾರೆ ? ಅನ್ನೋ ಕುತೂಹಲವೂ ನನಗಿಲ್ಲ. ಇದು ನಾನು ಪ್ರೀತಿ ಮಾಡುವ ಪರಿ. ನನ್ನದು ಮಾತ್ರವಾಗಿರಲಿ...ಮನಸ್ಸನ್ನು ಖುಷಿಯಾಗಿರಿಸಲು ಇಷ್ಟು ಸಾಕು!

ಇಷ್ಟು ಬರೆದು ಡೈರಿ ಮುಚ್ಚಿದೆ..