ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ


ಪ್ರೀತಿ ಎಂದರೆ?

After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ.

ಅವನನ್ನೇ ದುರುಗುಟ್ಟಿ ನೋಡಿದೆ.

ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು.

ನಾನು ಸೀರಿಯಸ್ಸಾಗಿ ಕೇಳಿದ್ದು ...
ನಾನು ಸೀರಿಯಸ್ಸಾಗಿಯೇ ಹೇಳಿದ್ದು...

ನಿನ್ನ ಜತೆ ವಾದ ಮಾಡಲ್ಲ

ಪೆದ್ದಿ ನೀನು...

ಹೌದು...

ನಾನು ಪೆದ್ದಿ...ನನಗೇನೂ ಗೊತ್ತಿಲ್ಲ...ನಾನೀವಾಗ ಮಾಡುತ್ತಿರುವುದು ಸರಿಯೋ ತಪ್ಪೋ ಯಾವುದೂ ಗೊತ್ತಿಲ್ಲ

ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ?

ಛೇ...ಬೇಡ...

ಅವನ ಜತೆ ಮಾತನಾಡಿದಾಗ ನನಗ್ಯಾಕೆ ಅಷ್ಟು ಸಮಾಧಾನವಾಗುತ್ತದೆ? ಅವನ ಸೆನ್ಸ್ ಆಫ್ ಹ್ಯೂಮರ್, ಸಿಂಪ್ಲಿಸಿಟಿಗೆ ನಾನು ಫಿದಾ ಆಗಿಬಿಟ್ಟಿದ್ದೇನೆ. ಅವನ ಮಾತು, ಮೌನ, ನಗು ಎಲ್ಲವೂ ಇಷ್ಟವಾಗತೊಡಗಿದೆ. ನನ್ನಂತೆಯೇ ಅದೆಷ್ಟು ಹುಡ್ಗೀರು ಅವನ ಬಗ್ಗೆ ಕನಸು ಕಾಣುತ್ತಿದ್ದಾರೋ ಏನೋ. ಹುಡ್ಗೀರನ್ನೇ ಮೋಡಿ ಮಾಡೋಕೆ ಹುಟ್ಟಿದ್ದಾನೆ ಅನ್ನೋ ಹಾಗಿದೆ ಅವನ ಪರ್ಸನಾಲಿಟಿ...

ರಾತ್ರಿ 11.30ರ ನಂತರ ಹಾಸ್ಟೆಲ್ ರೂಂನಲ್ಲಿ ಕುಳಿತು ರೂಂಮೇಟ್ಸ್ ಜತೆ ಪಟ್ಟಾಂಗ ಹೊಡೆಯುವಾಗ ಅವನ ಬಗ್ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನೆಲ್ಲಾ ಇತ್ತೋ ಎಲ್ಲವನ್ನೂ ನಾನ್ಸ್ಟಾಪ್ ಆಗಿ ಹೇಳಿದ ನಂತರ ತಿಳೀತು ಇಷ್ಟೆಲ್ಲಾ ಹೇಳಬಾರದಿತ್ತು ಅಂತ...

ಯೇ ತೋ ಪಾಗಲ್ ಹೋಗಯಿ! ನನ್ನ ಮಾತಿಗೆ ಗೆಳತಿಯರ ಪ್ರತಿಕ್ರಿಯೆ.

ಅರೇ, ಕವನ, ಕಥೆ ಬರೀತಾನೆ ಅನ್ನೋ ಕಾರಣಕ್ಕೆ ಅವನನ್ನು ಲವ್ ಮಾಡೋದಾ? ಈ ಕಾಲದಲ್ಲಿ ಎಲ್ಲರೂ ಪ್ಯಾಕೇಜ್ ನೋಡ್ಕೊಂಡು ಲವ್ ಮಾಡೋಕೆ ನೋಡ್ತಾರೆ. ಹೀಗಿರುವಾಗ ಅವನ ಬರವಣಿಗೆ ಮೆಚ್ಚಿ ಕೊಂಡು ಲವ್ ಮಾಡೋಕೆ ಹೊರಟಿದ್ಯಾ? ಅನ್ನೋ ಉಪದೇಶಗಳ ಸುರಿಮಳೆ.

ಸರಿ, ನಿನಗವನು ಇಷ್ಟ ಆಗಿದ್ದಾನೆ ಅಂದ್ರೆ ನೇರಾನೇರ ಅವನಿಗೆ ಹೇಳಿ ಬಿಡು. ಅವನೇನಂತಾನೆ ನೋಡಿಯೇ ಬಿಡೋಣ..

ನಾ ಹೇಳಲ್ಲ! ಭಯ ಆಗ್ತಿದೆ.

ಪುಕ್ಕಲು ನೀನು...ವಾಟ್ಸಪ್ನಲ್ಲೊಂದು ಮೆಸೇಜ್ ಕಳಿಸಿದ್ರೆ ಮುಗೀತು.

ಬೇಡ..

ಈ ಪ್ರೀತಿ ಹಾಗೇ ಮನಸ್ಸಲ್ಲೇ ಇರಲಿ. ನನ್ನ ನಿವೇದನೆ ಅವನು ಸ್ವೀಕರಿಸದೇ ಇದ್ದರೆ ಬೇಜಾರಾಗುತ್ತೆ. ತಿರಸ್ಕಾರದ ನೋವು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ಅವನಿಗರಿವಿಲ್ಲದಂತೆ ಪ್ರೀತಿಸುವುದರಲ್ಲೂ ಒಂಥರಾ ಖುಷಿಯಿದೆ. ಅಲ್ಲಿ ಮಾತುಗಳೂ ಇಲ್ಲ, ಪ್ರಾಮಿಸ್ಗಳೂ ಇರಲ್ಲ. ನನಗನಿಸಿದಂತೆ ಪ್ರೀತಿಯ ಲೋಕದಲ್ಲಿ ವಿಹರಿಸಬಹುದು. ಯಾರೂ ಏನೂ ಹೇಳುವಂತಿಲ್ಲ. ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಬೇಕೆಂದರೆ ಏನಾದರೂ ಗೀಚಿದರೆ ಮುಗಿಯಿತು. ಅಕ್ಷರಗಳಲ್ಲೇ ಅವನ ಪ್ರೀತಿಯನ್ನು ಪೋಣಿಸುವಾಗ ಸಿಗುವ ಖುಷಿ ಇದೆಯಲ್ಲಾ ಅದು ಹೇಳಿದರೆ ಅರ್ಥವಾಗಲ್ಲ.

ವರ್ಷಗಳು ಕಳೆದ ಮೇಲೆ ಇದನ್ನೆಲ್ಲಾ ಓದುವಾಗ ನಗು ಬರಬಹುದು. ನಾಳೆ ನನ್ನ ಗಂಡ, ಮಗು ಸಂಸಾರ ಎಂದು ಕಳೆದುಹೋಗಿರುತ್ತೇನೆ. ಆದರೆ ಈ ವಯಸ್ಸಿನಲ್ಲಿ ಮನಸ್ಸಲ್ಲೇ ಮೂಡಿದ ಮೌನ ಪ್ರೀತಿಯ ಅನುಭವಗಳು ಇದೆಯಲ್ಲಾ..ಅದು ಈ ಕ್ಷಣಕ್ಕೆ ಸಿಕ್ಕ ಸಂಜೀವಿನಿಯಂತೆ. ನಾಳೆ ಏನಾಗುತ್ತೋ ಎಂಬುದನ್ನು ಯಾರು ಬಲ್ಲರು? ಈ ಕ್ಷಣವನ್ನು ಮಧುರವಾಗಿಯೇ ಕಳೆಯಬೇಕು. ಆದಾಗ್ಯೂ, ಬದುಕಿನ ತಳಹದಿಯೇ ಪ್ರೀತಿಯಲ್ಲವೇ? ಈ ಪ್ರೀತಿಯ ನೆಪದಲ್ಲಿ ಬದುಕು ಸುಂದರವಾಗಿ ಇರಬೇಕು. ಪ್ರಾರ್ಥನೆ, ಕನಸು, ಸಾಧನೆ ಎಲ್ಲವೂ ನಮ್ಮ ನಂಬಿಕೆಯಿಂದಲೇ ಸಾಧ್ಯವಾಗಿರುವಾಗ ಅವನ ಪ್ರೀತಿಯೂ ನಂಬಿಕೆಯೇ ಆಗಿರಲಿ.

ಅವನ ಮನಸ್ಸಿನಲ್ಲಿ ಯಾರಿದ್ದಾರೆ ? ಅನ್ನೋ ಕುತೂಹಲವೂ ನನಗಿಲ್ಲ. ಇದು ನಾನು ಪ್ರೀತಿ ಮಾಡುವ ಪರಿ. ನನ್ನದು ಮಾತ್ರವಾಗಿರಲಿ...ಮನಸ್ಸನ್ನು ಖುಷಿಯಾಗಿರಿಸಲು ಇಷ್ಟು ಸಾಕು!

ಇಷ್ಟು ಬರೆದು ಡೈರಿ ಮುಚ್ಚಿದೆ..

Comments

Pradeep Rao said…
ಅಹಾ! ಎಳೆ ಮನಸಿಇನಲ್ಲಿ ಆಗಷ್ಟೆ ಚಿಗುರಿದ ಅವ್ಯಕ್ತ ಪ್ರೀತಿಯನ್ನು ತುಂಬಾ ಚನ್ನಾಗಿ ಬಿಂಬಿಸಿದ್ದೀರಿ. ನಿಜವಾಗಿ ಯಾರದೋ ಡೈರಿ ಓದುತ್ತಿದ್ದೇನೆ ಎಂದು ಭಾಸವಾಯಿತು. ನಿಜ ಈಗಿನ ಕಾಲದಲ್ಲಿ ಫೇಸ್ಬುಕ್ಕಲ್ಲೋ, ವಾಟ್ಸಾಪ್ ನಲ್ಲೋ ಒಂದೇ ಒಂದು ಮೆಸೇಜ್ ಹಾಕಿಬಿಟ್ಟರೆ ಮುಗಿಯಿತು ಪ್ರೇಮ ನಿವೇದನೆ ಆಗಿಬಿಡುತ್ತದೆ ಹಿಂದಿನಂತೆ ಮುಖಾಮುಖಿಯಾಗೆ ಮಾತನಾಡಲು ಕಾಯುವಂತಿಲ್ಲ. ಆದರೂ ಹಿಂಜರಿಕೆ ಇದ್ದೇ ಇರುತ್ತದೆ.

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ