ಅಪ್ಪನ ಡೈರಿಯಿಂದ ಕದ್ದ ಪುಟ...


ಈವಾಗ ಹೇಗೆ ಸಮಯ ಕಳೆಯುತ್ತಿದ್ದೀರಿ?

ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಎಷ್ಟೋ ಜನ ಇದೇ ಪ್ರಶ್ನೆಯನ್ನು ಅದೆಷ್ಟು ಬಾರಿ ಕೇಳಿದ್ದಾರೇನೋ ಗೊತ್ತಿಲ್ಲ. ಹಳ್ಳಿಯಲ್ಲಿರುವ ಕಾರಣ ಹಿತ್ತಿಲಲ್ಲಿ ಒಮ್ಮೆ ಸುತ್ತಾಡಿ, ದನ ಕರು, ಗಿಡ, ಮರ ಎಲ್ಲವನ್ನೂ ನೋಡ್ಕೋಳೋದು, ಇನ್ನೇನೋ ವಸ್ತು ತರೋಕೆ ಅಂತಾ ಅಂಗಡಿಗೆ ಹೋಗಿ ಬರೋದು, ಎರಡ್ಮೂರು ದಿನಪತ್ರಿಕೆ ಓದೋದು, ಆಮೇಲೆ ಟೀವಿ ನೋಡ್ತಾ ಕುಳಿತರೆ ದಿನ ಕಳೆದು ಹೋಗುವುದೇ ಗೊತ್ತಾಗಲ್ಲ. ಈವಾಗಂತೂ ವಿಶ್ವಕಪ್ ಫುಟ್ಬಾಲ್ ಇದೆ ಅಲ್ವಾ? ನಿದ್ದೆ ಬರುವಷ್ಟು ಹೊತ್ತು ಟೀವಿ ನೋಡ್ಬಹುದು. ಇಷ್ಟೊಂದು ವರ್ಷ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರೋದು ಅಂದ್ರೆ ಕಿರಿಕಿರಿ. ಅದಕ್ಕೆ ಮನೆಯ ಹೊರಗೆ ಸುತ್ತಾಡ್ತಾ ಇರ್ತೀನಿ. ಅಪ್ಪಾ ಟೈಮ್ ಸಿಕ್ಕಾಗಲೆಲ್ಲಾ ಏನಾದ್ರೂ ಬರೀರಿ ಅಂತಾ ಮಗಳು ಹೇಳ್ತಾನೇ ಇರ್ತಾಳೆ. ನಾನು ನಕ್ಕು ಸುಮ್ಮನಾಗ್ತೀನಿ .ನಿಜವಾಗ್ಲೂ, ನನಗೆ ಬರೆಯೋಕೆ ಬರಲ್ಲ. ಬರೆದದ್ದನ್ನು ಓದೋದು ಇಷ್ಟ. ಹೂಂ..ಇವತ್ತು ಏನಾದ್ರೂ ಬರೆಯೋಣ ಅಂತಾ ಪ್ರಯತ್ನ ಮಾಡಿದೆ. ಏನು ಬರೆಯಲಿ? ಅಂತಾ ಯೋಚಿಸ್ತಾ ಕುಳಿತುಕೊಂಡು ಒಂದು ಗಂಟೆ ಹಾಳು ಮಾಡಿಬಿಟ್ಟೆ!

ಮನಸ್ಸಲ್ಲಿರೋದನ್ನೇಲ್ಲಾ ಖಾಲಿ ಹಾಳೆಯಲ್ಲಿ ಗೀಚಿದರೆ ಮನಸ್ಸು ನಿರಾಳವಾಗುತ್ತೆ ಅಂತಾ ನನ್ನವಳು ಆಗಾಗ್ಗೆ ಹೇಳ್ತಾನೇ ಇರ್ತಾಳೆ. ಅವಳ ಮನಸ್ಸನ್ನು ಕಾಡುವ ಯಾವುದೇ ವಿಷಯ ಇರಲಿ ಅದನ್ನು ಹಾಳೆಯಲ್ಲಿ ಗೀಚಿದರೆ ಮಾತ್ರ ಆಕೆಗೆ ಸಮಾಧಾನ. ಇವತ್ತು ನಾನೂ ಇದೇ ಪ್ರಯೋಗ ಮಾಡೋಕೆ ಹೊರಟಿದ್ದೇನೆ. ನನ್ನ ಮನಸ್ಸಲ್ಲಿರೋದನ್ನು ಬರೆಯಬೇಕು. ಎಲ್ಲಿಂದ ಶುರು ಮಾಡಲಿ? ನಾನು ಜಾಸ್ತಿ ಮಾತಾಡುವುದಿಲ್ಲ, ಸಿಟ್ಟು ಬಂದರೆ, ಬೇಜಾರಾದಾಗಲೆಲ್ಲಾ ನಾನು ಮೌನದ ಮೊರೆ ಹೋಗುತ್ತೇನೆ. ಅದೆಷ್ಟೋ ಸಾರಿ ನನ್ನವಳ ಜತೆ ಜಗಳವಾಡುವಾಗ ನಾನು ಮೌನವಾಗಿಯೇ ಇದ್ದು ಬಿಡುತ್ತೇನೆ. ಏನಾದ್ರೂ ಮಾತಾಡಿ, ನಾನು ಹೇಳೋದು ಕೇಳಿಸ್ತಾ ? ಎಂದು ಬೊಬ್ಬೆ ಹಾಕಿ ಅವಳು ಸುಮ್ಮನಾಗುತ್ತಾಳೆ. ಹೀಗೆ ನಮ್ಮ ದಾಂಪತ್ಯದಲ್ಲಿ ನನ್ನ ಮೌನ ಅದೆಷ್ಟೋ ಜಗಳಗಳನ್ನು, ಅದೆಷ್ಟೋ ನೋವುಗಳನ್ನು ನುಂಗಿ ಅನಾಹುತಗಳನ್ನು ತಪ್ಪಿಸಿದೆ. ಕೋಪ ಬಂದಾಗ ಅವಳು ಪ್ರವಾಹದಂತೆ ಧುಮ್ಮಿಕ್ಕಿ ಹರಿಯುತ್ತಾಳೆ. ಅವಳ ಕೋಪದ ಮುಂದೆ ನಾನು ಶಾಂತ ಸಾಗರವಾಗುತ್ತೇನೆ. ನಮ್ಮಿಬ್ಬರ ಜೀವನದ ಭರತ ಇಳಿತಗಳಲ್ಲಿ ಕೆಲವೊಮ್ಮೆ ನಮ್ಮ ಮಾತುಗಳು ಮೌನವಾಗುತ್ತವೆ, ಮೌನ ಮಾತಾಗುತ್ತದೆ. ಈ ಮೌನವೇ ನಮ್ಮಿಬ್ಬರನ್ನು ಒಂದಾಗಿ ಬಾಳುವಂತೆ ಮಾಡಿದ್ದು.

ಮಾತಿನೆಡೆಯಲ್ಲಿ ಕಾಡಿಸುವ ಮೌನಕ್ಕೆ ಎಷ್ಟೊಂದು ಅರ್ಥಗಳು!. ಸಿಟ್ಟು, ಅಸಹನೆ, ಅಸೂಯೆ, ದ್ವೇಷ ಎಲ್ಲವನ್ನೂ ಮೌನ ನುಂಗಿ ಬಿಡುತ್ತೆ ನಿಜ. ಆದರೆ ಪ್ರೀತಿ? ಅದು ಮೌನದಲ್ಲೇ ಹುಟ್ಟುತ್ತದೆ, ಕೆಲವೊಮ್ಮೆ ಮೌನದಲ್ಲೇ ಇಲ್ಲವಾಗುತ್ತದೆ. ಮಾತುಗಳಲ್ಲಿ ಹೇಳಲಾರದೇ ಇರುವ ವಿಷಯಗಳು ಮೌನದಲ್ಲಡಗಿರುತ್ತವೆ ಅಲ್ವಾ. ನನ್ನ ಹೆಂಡ್ತಿ ವಿಷ್ಯದಲ್ಲಿ ಮಾತ್ರ ಅಲ್ಲ, ಮಕ್ಕಳ ವಿಷ್ಯದಲ್ಲೂ ಅಷ್ಟೇ. ಅವರ ಮೌನಗಳು ಸಾವಿರ ಮಾತುಗಳನ್ನು ಹೇಳುತ್ತವೆ. ಪುಟ್ಟ ಮಗು ಅಳುತ್ತಾ ತನಗೇನು ಬೇಕು ಎಂಬುದನ್ನು ಹೇಳುತ್ತೆ, ಆದರೆ ಮಕ್ಕಳು ಟೀನೇಜ್ಗೆ ಕಾಲಿರಿಸಿದಾಗ ಎಲ್ಲವನ್ನೂ ನೇರಾನೇರವಾಗಿ ಹೇಳತೊಡಗುತ್ತಾರೆ. ಟೀನೇಜ್ ದಾಟಿದ ನಂತರ ಮಾತಿಗಿಂತ ಅವರ ಮೌನಗಳೇ ಬೇಕು ಬೇಡಗಳನ್ನು ಹೇಳುತ್ತಿರುತ್ತವೆ. ನಾನೀಗ ನನ್ನ ಮಕ್ಕಳ ಮೌನವನ್ನು ಆಲಿಸುತ್ತಿದ್ದೇನೆ.

ಮಗ ಮೌನವಾಗಿದ್ದರೆ, ಕುಡಿದಿದ್ದಾನೋ ಅನ್ನೋ ಡೌಟು. ಮಗಳು ಮೌನವಾಗಿದ್ದರೆ ಅವಳಿಗೆ ಏನೋ ಹೇಳೋಕೆ ಇದೆ ಅಂತಾನೇ ಅರ್ಥ. ಅವರು ಮೌನವಾಗಿ ಕುಳಿತಿರೋದನ್ನು ನೋಡಿದರೆ ಅವರಿಗಿಬ್ಬರಿಗೂ ಏನೋ ಹೇಳೋಕೆ ಇದೆ ಎಂಬುದಂತೂ ಸತ್ಯ. ಮಗನ ಮನಸ್ಸಲ್ಲಿ ಏನಿದೆ? ಅಂತಾ ಅವನ ಅಮ್ಮ ಚೆನ್ನಾಗಿ ಅರ್ಥ ಮಾಡಿಕೊಳ್ತಾಳೆ. ಆದ್ರೆ ಮಗಳ ಮನಸ್ಸಲ್ಲಿರೋದು ಅಪ್ಪನಿಗೆ ಬೇಗ ಅರ್ಥವಾಗುತ್ತದೆ. ಯಾವತ್ತೂ ಚಾಟರ್ ಬಾಕ್ಸ್ನಂತೆ ಮಾತನಾಡುತ್ತಿದ್ದ ಮಗಳು ಮೌನವಾಗಿದ್ದಾಳೆ ಅಂದ್ರೆ? ಅವಳ ಮನಸ್ಸಲ್ಲಿ ಏನೋ ಇದೆ, ಹೇಳಬೇಕೆಂಬ ಬಯಕೆ ಇದ್ದರೂ ಹೇಳಲಾರದ ಚಡಪಡಿಕೆ. ಅವತ್ತು ಅವಳು ಬಂದು ನನ್ನ ಎದೆಗೊರಗಿ ಕಣ್ಣೀರಿಟ್ಟ ಕ್ಷಣದಲ್ಲೇ ಅರ್ಥವಾಗಿತ್ತು.

"ನನಗೆ 'ಅವನು' ಇಷ್ಟ ಆಗ್ತಾನೆ. ಆದ್ರೆ ನೀವು ಹೇಳಿದ ಹುಡುಗನನ್ನೇ ಮದ್ವೆ ಆಗ್ತೀನಿ ಅಪ್ಪಾ. ನಾನು ಬೇರೆ ಹುಡುಗನನ್ನ ಇಷ್ಟ ಪಡುತ್ತಿದ್ದೀನಿ ಅಂತಾ ಬೇಜಾರಾಗ್ಬೇಡಿ. ನಾನು ಪ್ರೀತಿಸುತ್ತಿರುವ ಬಗ್ಗೆ ಅವನಿಗೆ ಗೊತ್ತಿಲ್ಲ, ನಾನು ಹೇಳುವುದೂ ಇಲ್ಲ. ನಾವಿಬ್ಬರೂ ಸಮಾನಾಂತರ ರೇಖೆಗಳು. ಅವು ಎಂದೂ ಒಂದಾಗಲ್ಲ ಎಂದು ಗೊತ್ತಿರುವುದರಿಂದಲೇ ನನ್ನ ಪ್ರೀತಿಯನ್ನು ಮನಸ್ಸಿನಲ್ಲೇ ಮುಚ್ಚಿಟ್ಟಿದ್ದೀನಿ. ಜೀವನದಲ್ಲಿ ನಾನೂ ಒಬ್ಬನನ್ನು ಪ್ರೀತಿಸಿದ್ದೆ ಎಂದು ಅಂದುಕೊಳ್ಳುವಾಗ ಪುಳಕ ಅನುಭವಿಸೋಕೆ ಈ ಮೌನ ಪ್ರೀತಿಯ ಅನುಭವಗಳಷ್ಟೇ ಸಾಕು. ಯಾರ ಮನಸ್ಸನ್ನು ನೋಯಿಸುವುದು ನನಗೆ ಇಷ್ಟವಿಲ್ಲ. ಅವನು ನನ್ನನ್ನು ಇಷ್ಟ ಪಡ್ತಾನೋ ಇಲ್ವೋ ಅನ್ನೋದು ನನಗೆ ಬೇಕಿಲ್ಲ. ಅವನೆಂದರೆ ನನಗಿಷ್ಟ. ಈ ನನ್ನ ಪ್ರೀತಿ ಮನಸ್ಸಲ್ಲೇ ಇದ್ದರೆ ಚೆಂದ ಅಲ್ವಾ..."

"ನನ್ನ ಈ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗಲ್ಲ ಅಂತ ಗೊತ್ತಿದೆ. ಅಮ್ಮ ಅಳುತ್ತಾ, ಬೈದು ಕಿರುಚಾಡಿದ್ರೂ ಅಪ್ಪ ಮೌನವಾಗಿರ್ತಾರೆ. ಎಷ್ಟು ದಿನ ಹಾಗೆ ಇರೋಕೆ ಸಾಧ್ಯ? ನಾನು ಪ್ರೀತಿಸುತ್ತಿರುವ ಹುಡುಗಿಯನ್ನು ನಾನು ಮದುವೆಯಾಗಲೇ ಬೇಕು. ಅಪ್ಪ ಅಮ್ಮನ ಮನವೊಲಿಸಿ ಅವಳನ್ನೇ ನನ್ನ ಬಾಳಸಂಗಾತಿಯನ್ನಾಗಿ ಮಾಡಬೇಕು. ಆದರೆ ಈ ವಿಷ್ಯವನ್ನು ಅಪ್ಪನಲ್ಲಿ ಹೇಳುವುದಾದರೂ ಹೇಗೆ? ಧೈರ್ಯ ಬರಲಿ ಅಂತಾ ಕುಡಿದದ್ದೂ ಆಯ್ತು, ಈಗ ಮಾತೇ ಹೊರಡುತ್ತಿಲ್ಲ."

ನನ್ನ ಮಗ-ಮಗಳು, ಇವರಿಬ್ಬರ ಮೌನಕ್ಕೆ ಕಾರಣ ಇದಾಗಿರಬಹುದಾ? ಇದೆಲ್ಲವೂ ಆಕೆಗೆ ಗೊತ್ತಿದ್ದರೂ ಹಾಗೆ ಸುಮ್ಮನಾಗಿದ್ದಾಳಾ ? ಅವಳೂ ಈ ಬಗ್ಗೆ ತನಗೆ ಹೇಳಲಾಗದೆ ಬರೆದಿಟ್ಟಿರಬಹುದಾ? ನನ್ನ ಮನಸ್ಸಿಗೆ ಅನಿಸಿದ್ದನ್ನು ನಾನೀಗ ಗೀಚಿದ್ದೇನೆ. ಅವಳು ಹೇಳಿದ್ದು ನಿಜ, ಮನಸ್ಸು ನಿರಾಳವಾಗಿದೆ. ನನ್ನೊಳಗಿನ ಹಾಗು ನನ್ನವರ ಮೌನಗಳ ಅರ್ಥ ಹುಡುಕುತ್ತಾ ಏನೇನೋ ಬರೆಯುತ್ತಾ ಹೋದೆ. ನನ್ನೊಳಗಿನ ಮೌನವೇ ಇಲ್ಲಿ ಮಾತಾಗಿದೆ. ಮುಂದೊಂದು ದಿನ ಈ ಹಾಳೆಯನ್ನು ತಿರುವಿ ಹಾಕುವಾಗ ಈ ಅಕ್ಷರಗಳು ನನ್ನೊಡನೆ ಮಾತಿಗಿಳಿಯುತ್ತವೆ. ಆವಾಗ ನಾನು ಮೌನವಾಗಿದ್ದು ಅವುಗಳ ಮಾತನ್ನು ಆಲಿಸುತ್ತೇನೆ. ಯಾರಿಗೆ ಗೊತ್ತು? ಆ ಕ್ಷಣದಲ್ಲಿ ಈ ಮೌನಕ್ಕೆ ಇನ್ನೊಂದು ಅರ್ಥ ಹೊಳೆದರೂ ಹೊಳೆಯಬಹುದು! ಅಲ್ವಾ?

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ