ಓ ಗಂಡಸರೇ...ನೀವೆಷ್ಟು ಒಳ್ಳೆಯವರು!

ನೀನು ಹುಡುಗ ನಮ್ಮ ಜತೆ ಬರಬಾರದು... ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು "ಒಂದಕ್ಕೆ" ಹೋಗುವಾಗ ಆತ "ನಾನೂ ಬರ್ತೇನೆ"ಎಂದು ರಾಗ ಎಳೆದಿದ್ದ...ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು...ಎಂದು ಒಕ್ಕೊರಲಿನಿಂದ ಹೇಳಿದ್ದೆವು.
ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು 'ಹುಡುಗರು'..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್...ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ 'ನೀನು ಹುಡುಗಿ' 'ಅವನು ಹುಡುಗ' ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು.

ಪ್ಲಸ್ ಟು ...ಹದಿಹರೆಯ...ಲವ್ ಆಗುವ ಸಾಧ್ಯತೆ ಜಾಸ್ತಿಯೇ..ಹುಡುಗರೂ ನಮಗಿಂತ ಕಮ್ಮಿಯೇನಿಲ್ಲ ಬಿಡಿ. ಒಂದು ಕಾಲದಲ್ಲಿ infatuationಗೆ ಒಳಗಾಗಿ ಸಾವಿರಾರು ಕನಸು ಕಂಡು ಅದು ಏನೆಂದು ಅರ್ಥವಾಗುವ ವೇಳೆ ಎಂಟ್ರನ್ಸ್ ಎಕ್ಸಾಮ್ ಎಂಬ ಭೂತ ಪ್ರತ್ಯಕ್ಷವಾಗಿತ್ತು. ಪ್ಲಸ್ ಟು ಮುಗಿದ ಮೇಲೆ ಡಾಕ್ಟರ್ ಅಥವಾ ಇಂಜಿನಿಯರ್ ಆಗ್ಬೇಕು ಎಂದು ಎರಡು ತಿಂಗಳ ಕ್ರಾಷ್ ಕೋರ್ಸ್್ನಲ್ಲಿ ತಲೆ ಜಜ್ಜಿಕೊಳ್ಳುವ ಹೊತ್ತಿಗೆ ಪುಸ್ತಕವೇ ಪ್ರೇಮಿಯ ರೂಪ ತಾಳಿತ್ತು. ಒಮ್ಮೊಮ್ಮೆ ಸುಮ್ ಸುಮ್ನೇ ನಕ್ಕಾಗ ಅಮ್ಮ ಯಾಕೆ ನಗ್ತೀಯಾ? ಎಂಬ ಪ್ರಶ್ನೆ ಕೇಳುವ ಮೂಲಕ ಭ್ರಮಾಲೋಕದಿಂದ ಹೊರತರುತ್ತಿದ್ದಳು. ಇನ್ನು ಅಣ್ಣನಂತೂ ಏನೋ ಸಂದೇಹವಿದ್ದಂತೆ ನನ್ನನ್ನೇ ನೋಡುತ್ತಿದ್ದರೆ ಮನಸ್ಸಲ್ಲಿ ಪುಕುಪುಕು...ಇವರ ಕಣ್ಣು ತಪ್ಪಿಸಿ ಏನಾದರೂ ಮಾಡಿದರೆ ಅಲ್ಲಿ ತಮ್ಮನೆಂಬ ತುಂಟ ಇದ್ದೇ ಇರುತ್ತಿದ್ದನಲ್ಲಾ...ಈ ಎಲ್ಲ ಕಿತಾಪತಿಗಳ ಮುಂದೆ ಅಪ್ಪ ಎಲ್ಲವೂ ಗೊತ್ತಿದ್ದರೂ, ಗೊತ್ತಿಲ್ಲದಂತೆ ನಟಿಸಿ... ' ಅವಳು ನನ್ನ ಮಗಳು' ಅವಳು ತಪ್ಪು ಮಾಡಲ್ಲ ಎಂಬ ಭರವಸೆಯಿಂದ ನಮ್ಮ ವಿಶ್ವಾಸ ಗೆದ್ದುಕೊಂಡಿದ್ದ.

ಹೋಗಲಿ ಬಿಡಿ, ಇನ್ನು ನಮ್ಮ ಕಾಲಮೇಲೆ ನಾವೇ ನಿಂತುಕೊಳ್ಳಲು ಇರುವುದು ನಾಲ್ಕೇ ವರ್ಷ. ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ನಾವು ಇನ್ನೂ ದೊಡ್ಡವರಾಗಿ ಬೆಳೆದಂತಹಾ ಅನುಭವ. ಅಲ್ಲಿನ ಸಹಪಾಠಿಗಳೂ ಅಷ್ಟೇ. ಎಲ್ಲರದ್ದೂ ಒಂದೇ ಗುರಿ, ಇಂಜಿನಿಯರ್ ಆಗುವುದು. ಯಾವುದೋ ಜಿಲ್ಲೆ, ರಾಜ್ಯ, ಊರಿನಿಂದ ಬಂದವರು ನಾವೆಲ್ಲಾ ಒಂದೇ ಕ್ಲಾಸಿನಲ್ಲಿ ಕುಳಿತು ಇಂಜಿನಿಯರ್್ಗಳಾಗುವ ಕನಸು ಹೆಣೆಯುತ್ತಿದ್ದೆವು. ಸೆಮಿಸ್ಟರ್ ಎಕ್ಸಾಮ್್ಗಳಿಗೆ ಹೈರಾಣಾಗುತ್ತಾ, ಲೈಬ್ರರಿಯಲ್ಲಿ ಹುಡುಕಿ ಪುಸ್ತಕಗಳ ಜೆರಾಕ್ಸ್ ಕಾಪಿ ತೆಗೆದು ಟೆಕ್ಸ್ಟ್ ಬುಕ್ ಮಾಡಿ, ಕೊನೇ ಗಳಿಗೆಯಲ್ಲಿ ಎಸೈನ್್ಮೆಂಟ್ ಸಬ್್ಮಿಟ್ ಮಾಡಿ ಕೊಳ್ಳುತ್ತಿರುವ ಭಾವೀ ಇಂಜಿನಿಯರ್್ಗಳು. ಮೊದಲ ವರ್ಷ ಜೂನಿಯರ್್ಗಳಲ್ವಾ ಎಂದು ತಗ್ಗಿ ಬಗ್ಗಿ ನಡೆದದ್ದು ಆಯ್ತು.. ಎರಡನೇ ವರ್ಷ ನಾವು ಸೀನಿಯರ್್ಗಳು. ಇನ್ನು ಕೇಳುವುದು ಬೇಕಾ? ಹುಡುಗರು ಹುಡುಗಿಯರು ಎಂಬ ಯಾವುದೇ ಬೇಧ ಇಲ್ಲಿ ಇಲ್ಲ. ಅಷ್ಟೇ ಯಾಕೆ ಯಾವುದು ಹುಡುಗ, ಯಾವುದು ಹುಡುಗಿ ಎಂದು ಕನ್್ಫ್ಯೂಸ್ ಮಾಡುವಂತ ಉಡುಗೆಗಳು ಬೇರೆ.

ಅಲ್ಲಿ ಸಿಕ್ಕ ಸಹಪಾಠಿಗಳು ಕೂಡಾ ಹಾಗೆಯೇ. ಹುಡುಗ ಹುಡುಗಿಯರು ಬೆಸ್ಟ್್ಫ್ರೆಂಡ್ಸ್. ಒಟ್ಟಿಗೆ ಊಟ ಮಾಡುವುದು, ಕಷ್ಟದಲ್ಲಿ ಜತೆಯಾಗುವುದು..ಸಾಂತ್ವನ ಹೇಳುವುದು ಹೀಗೆ.... ಅದೊಂದು ಒಳ್ಳೆಯ ಗೆಳೆತನ...ಲಿಂಗಬೇಧವಿಲ್ಲದೇ ಇರುವ ಆ ಗೆಳೆತನ ನಿಜವಾಗಿಯೂ ಅದ್ಭುತವಾಗಿತ್ತು..

ಆದರೆ ಅದೆಷ್ಟು ದಿನ? ಮುಂದೆ ಕಾಲೇಜು ಮುಗಿದು ನಾವು ನಮ್ಮ ಪಾಡಿಗೆ ದುಡಿಯತೊಡಗಿದೆವು...ಅವರು ಅವರ ಪಾಡಿಗೆ...ಮುಂದೊಂದು ದಿನ ಫೇಸ್್ಬುಕ್್ನಲ್ಲಿ ಫ್ರೆಂಡ್್ಲಿಸ್ಟ್್ನಲ್ಲಷ್ಟೇ ಜಾಗ ಪಡೆದುಕೊಂಡು ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಾ ಅವರ-ನಮ್ಮ ಜೀವನ ಎರಡು ಕವಲುಗಳಾಗಿ ಸಾಗುತ್ತಲೇ ಹೋಗುತ್ತದೆ.

ಹಳೇ ಗೆಳತಿಯರು ಎಂದು ಹುಡುಗಿಯರ ಜತೆ ತುಂಬಾ ಸ್ನೇಹವಿಟ್ಟುಕೊಂಡರೆ ಅವನನ್ನು ಕಟ್ಟಿಕೊಂಡವಳು ಗುರ್ ಅಂತಾಳೆ. ಇತ್ತ ನಮ್ಮ ಮನೆಯವರು ಅವನ್ಯಾರು? ನೀನು ನನ್ನ ಹೆಂಡತಿ ಎಂದು ಪದೇ ಪದೇ ಎಚ್ಚರಿಸುವಾಗ ಎಲ್ಲವೂ ಕಾಲಗರ್ಭದೊಂದಿಗೆ ಅಂತರ ಕಾಯ್ದುಕೊಳ್ಳುತ್ತಾ ಹೋಗುತ್ತದೆ. ಮಡಿಲಲ್ಲೊಂದು ಮಗು ಆಟವಾಡುತ್ತಿದ್ದರೆ ಅಲ್ಲಿಗೆ ಮನೆ, ಮಕ್ಕಳು, ಸಂಸಾರವೇ ಸರ್ವಸ್ವವಾಗುತ್ತದೆ. ಆಮೇಲೆ ಎಲ್ಲಾದರೂ ಸಮಾರಂಭದಲ್ಲಿ ಸಿಕ್ಕರೆ ಹೇಗಿದ್ದೀಯಾ? ಎಂಬ ಕುಶಲೋಪರಿ.

ನಾಳೆ ನಾನೂ ಮದುವೆಯಾಗಿ, ಅಮ್ಮನಾಗಿ, ಅಜ್ಜಿಯಾಗಿ..ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತೇನೆ. ಆವಾಗ ಜೀವನದ ಎಲ್ಲ ಮಜಲುಗಳಲ್ಲಿ 'ಅವನೊಬ್ಬ' ನನ್ನ ಜತೆ ಇರುತ್ತಾನೆ.

ಮಗಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ಅಪ್ಪ, ತಂಗಿಯ ಮೇಲೆ ಅಪಾರ ಪ್ರೀತಿಯಿದ್ದರೂ ತೋರಿಸಿಕೊಳ್ಳದೇ ವಿಲನ್ ತರಾ ಪೋಸ್ ಕೊಡುವ ಅಣ್ಣ, ತುಂಟಾಟಿಕೆಯಿಂದಲೇ ಮನಸ್ಸು ಗೆದ್ದು, ಕೆಲವೊಮ್ಮೆ ನಾನೂ ನಿನ್ನ ಅಣ್ಣ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುವ ಪುಟ್ಟ ತಮ್ಮ....ಇವರೆಲ್ಲರ ನಡುವೆ ಸುಂದರ ಕನಸುಗಳನ್ನು ಕಾಣುವಂತೆ ಆಸೆ ತರಿಸಿದ 'ಅವನು'. ನಾಳೆ ಹಿರಿಯರ ಸಮ್ಮತಿಯಲ್ಲಿ ನನ್ನನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವ ಭಾವೀ ವರ...ಹೀಗೆ ಜೀವನದ ರಂಗಭೂಮಿಯಲ್ಲಿ ಅದೆಷ್ಟೋ 'ಗಂಡಸರು' ಪೋಷಕಪಾತ್ರಗಳಾಗಿ ಬಂದು ನಮ್ಮೀ ಜೀವನಕ್ಕೆ ಹೊಸ ಅರ್ಥ ಕೊಡುತ್ತಾರೆ. ಅವರಿಂದಲೇ ನಾವು ಅಮ್ಮ, ಅಕ್ಕ, ಹೆಂಡತಿ, ಸೊಸೆ, ನಾದಿನಿ, ಅಜ್ಜಿ ಎಂಬ ಎಲ್ಲ ಪಾತ್ರಗಳನ್ನೂ ನಿಭಾಯಿಸುತ್ತೇವೆ. ನಮ್ಮ ಪಾತ್ರಗಳ ಅಬ್ಬರದಲ್ಲಿ ಅವರ ಸಹಕಾರ ನಮಗೆ ಕಾಣಿಸದೇ ಇರಬಹುದು. ಆದರೆ ಅವರಿಲ್ಲದ ಲೋಕ? ಊಹಿಸಲೂ ಅಸಾಧ್ಯ ಅಲ್ಲವೇ?

ಇಷ್ಟೆಲ್ಲಾ ಯಾಕೆ ಹೇಳಿದೆ ಗೊತ್ತಾ? ಇವತ್ತು ಗಂಡಸರ ದಿನ. ನಾವು ಹೆಣ್ಮಕ್ಕಳು...ನಮ್ಮ ಜೀವನದಲ್ಲಿ ಅಪ್ಪನಾಗಿ, ಸಹೋದರನಾಗಿ, ಗೆಳೆಯನಾಗಿ, ಪತಿಯಾಗಿ ಬಂದು ನಮ್ಮ ಜೀವನದ ಪ್ರತಿಯೊಂದು ತಿರುವಿಗೂ ಕಾರಣರಾದ ಆ ಗಂಡು ಜಾತಿಗೆ ದೊಡ್ಡದೊಂದು ಸಲಾಂ... ಅವರ ತ್ಯಾಗಕ್ಕೆ, ಒಲುಮೆಗೆ, ಧೈರ್ಯಕ್ಕೆ ಹಾಗು ನಮ್ಮನ್ನು ಸಹಿಸಿಕೊಂಡಿರುವ ಸಹನಾ ಗುಣಕ್ಕೆ....

ಎಲ್ಲದಕ್ಕೂ ಥ್ಯಾಂಕ್ಸ್... ಥ್ಯಾಂಕ್ಸ್...ಥ್ಯಾಂಕ್ಸ್...

Comments

Srinidhi Rao said…
ತುಂಬಾ ಸರಳವಾಗಿ ಆದ್ರೆ ಮನ ಮುಟ್ಟೋ ತರ ಬರ್ದಿದ್ದೀರಿ!!!
@Srinidhi Rao

ನಿಮ್ಮ ಪ್ರತಿಕ್ರಿಯೆಗೆ ನನ್ನೀ
ಬಲು ಸುಂದರವಾಗಿದೆ...ಗಂಡುಸರ ಅಥವಾ ಹೆಣ್ಣು ಮಕ್ಕಳ ದಿನ ಯಾವುದಕ್ಕಾದರೂ ಒಪ್ಪ ಬಹುದಾದ ಲೇಖನ. ಗಂಡು ಮಕ್ಕಳ ಬಾಳಿನಲ್ಲಿ ಹೆಣ್ಣು ಮಕ್ಕಳು ಪೋಷಕ ಪಾತ್ರ ವಹಿಸಿದರೆ.ಹೆಣ್ಣು ಮಕ್ಕಳ ಬಾಳಲ್ಲಿ ಗಂಡು ಮಕ್ಕಳು ಪೋಷಕ ಪಾತ್ರಧಾರಿಗಳು..ನಿಮ್ಮ ಲೇಖನವನ್ನು ಬರೆದಿರುವ ಧಾಟಿ ಬಲು ಇಷ್ಟವಾಯಿತು. ಹಗಲಿಗೆ ಸೂರ್ಯ ಗಂಡಂತೆ ಇದ್ದಾರೆ...ರಜನಿಗೆ ಶಶಿ ಅರಸಿ ಅಭಿನಂದನೆಗಳು..
ನಿಮ್ಮ ಲೇಖನ ತುಂಬಾ ಇಷ್ಟವಾಯಿತು :)

Popular posts from this blog

ಕಾಡುವ ನೆನಪುಗಳಿಗೂ ಇದೆ ಘಮ

ಬಸ್ ಪಯಣದ ಸುಖ

ನಾನೆಂಬ ಸ್ತ್ರೀ