ನಾನೂ ನನ್ನ ಸ್ವಂತ ಕನಸು...

ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾ ಸ್ವೀಟ್. ಪಪ್ಪನ ಮುದ್ದಿನ ಮಗಳು ನಾನು. ತನ್ನ ತಮ್ಮ ಅಮ್ಮನ ಸೀರೆ ಸೆರಗು ಹಿಡಿದು ಓಡಾಡುತ್ತಿದ್ದರೆ, ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್. ನನಗೆ ಎರಡು ವರ್ಷವಿರುವಾಗಲೇ ನಾನು ಅಪ್ಪನ ಎದೆಗೆ ಅಂಟಿಕೊಂಡು ನಿದ್ದೆಹೋಗುತ್ತಿದ್ದೆ. ಅಮ್ಮನ ಗೊಡವೆಯೇ ಇಲ್ಲ, ಅವಳಿಗೆ ಅಪ್ಪ ಮಾತ್ರ ಸಾಕಿತ್ತು ಎಂದು ಅಮ್ಮ ಈಗಲೂ ನನ್ನ ಬಾಲ್ಯವನ್ನು ನೆನಪಿಸುತ್ತಾರೆ. ಆ ಬಾಲ್ಯವೇ ಅಂತದ್ದು, ಎಲ್ಲದಕ್ಕೂ ನಂಗೆ ಪಪ್ಪ ಬೇಕು. ಸ್ನಾನ ಮಾಡಿಸುವುದು, ತಿಂಡಿ ತಿನಿಸುವುದು, ಶಾಲೆಗೆ ರೆಡಿ ಮಾಡಿಸುವಾಗ ಜಡೆ ಹಾಕಲು ಮಾತ್ರ ಅಮ್ಮ (ಅದು ಅಪ್ಪನಿಗೆ ಗೊತ್ತಿಲ್ಲದ ಕಾರಣ)ನನ್ನು ಕರೆಯುತ್ತಿದ್ದೆ. ನಾನು ಚಿಕ್ಕವಳಿರುವಾಗ ಅಮ್ಮ ಅಂದ್ರೆ ನಂಗೆ ತುಂಬಾ ಭಯ. ಅಣ್ಣನ ತುಂಟಾಟಿಕೆಗೆ ಬೈಯ್ಯುವ ಅಮ್ಮನನ್ನು ನೋಡಿದರೆ ನನಗೆ ನಡುಕ. ಅಪ್ಪ ನಮ್ಮನ್ಯಾರನ್ನು ಬೈಯ್ಯಲ್ಲ. ತುಂಬಾ ಪ್ರೀತಿಯಿಂದಲೇ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಅದು ಮಾಡಬಾರದು ಇದು ಮಾಡಬಾರದು ಎಂದು ಯಾವತ್ತಿಗೂ ಒತ್ತಡ ಹಾಕುತ್ತಿರಲಿಲ್ಲ ಮಾತ್ರವಲ್ಲದೆ ಮಾಡಬಾರದು ಎಂದು ಹೇಳಿದರೆ ಅದ್ಯಾಕೆ ಮಾಡಬಾರದು? ಎಂದು ನಮಗೆ ವಿವರಿಸಿ ಹೇಳುತ್ತಿದ್ದರು. ಆಟವಾಡುವಾಗಲೂ ಪಪ್ಪನೇ ನನ್ನ ಸಂಗಾತಿ. ನಾನು ನಾಲ್ಕನೇ ಕ್ಲಾಸು ಕಲಿಯುತ್ತಿರಬೇಕಾದರೆ ಸ್ಕಾಲರ್ ಶಿಪ್ ಪರೀಕ್ಷೆ ಇತ್ತು. ಅದಕ್ಕಿರುವ ಗೈಡ್ ಕನ್ನಡದಲ್ಲಿ ಸಿಗುತ್ತಿರಲಿಲ್ಲ, ಆವಾಗ ಅಪ್ಪ ಮಲಯಾಳಂ ಗೈಡ್ ತೆಗೆದುಕೊಂಡು ಬಂದು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನಂಗೆ ಹೇಳಿಕೊಟ್ಟಿದ್ದರು.
ಹೀಗೆ ಅಪ್ಪನ ಸಹಾಯದಿಂದಲೇ ಮಲಯಾಳಂನಲ್ಲಿ ಹೆಚ್ಚಿನ ಹಿಡಿತ ಸಾಧಿಸಲು ಸಾಧ್ಯವಾಯಿತು. ಆಮೇಲೆ ನಾನು ಹೈಸ್ಕೂಲ್ ತಲುಪಿದಾಗ ನನ್ನ ತಮ್ಮನಿಗೆ ಮಲಯಾಳಂನಲ್ಲಿ ಸಿಗುವ ಗೈಡ್್ಗಳನ್ನೆಲ್ಲಾ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿಕೊಡುತ್ತಿದ್ದೆ. ಯಾಕೆಂದರೆ ಕಾಸರಗೋಡಿನವರಾದ ಕಾರಣ ಕನ್ನಡ ಬಿಟ್ಟು ಬಾಕಿ ಉಳಿದ ಪಠ್ಯ ವಿಷಯಗಳೆಲ್ಲಾ ಕನ್ನಡ ಮಾಧ್ಯಮದವರಿಗೂ, ಮಲಯಾಳ ಮಾಧ್ಯಮದವರಿಗೂ ಒಂದೇ ಆಗಿತ್ತು. ಆವಾಗ ಮಾತೃಭೂಮಿ ವಾರ್ತಾಪತ್ರಿಕೆಯು 'ವಿದ್ಯಾರಂಗ' ಎಂಬ ಮಲಯಾಳ ಮಾಸಿಕ (ಪಠ್ಯಕ್ಕೆ ಸಂಬಂಧಿಸಿದ್ದು) ಹೊರತರುತ್ತಿತ್ತು. ಅದರಲ್ಲಿರುವ ಬಹುತೇಕ ಪ್ರಶ್ನೆಗಳೇ ಪ್ರಶ್ನೆ ಪತ್ರಿಕೆಯಲ್ಲಿ ಅಚ್ಚಾಗುತ್ತಿತ್ತು. ಅಕ್ಕ ಹಾಸ್ಟೆಲ್್ನಲ್ಲಿದ್ದ ಕಾರಣ ನನಗೆ ಮನೆಯಲ್ಲಿ ಹೇಳಿ ಕೊಡುವವರು ಇರಲಿಲ್ಲ. ಅಪ್ಪ ಹತ್ತನೇ ತರಗತಿಯಷ್ಟೇ ಓದಿದ್ದರೂ 'ವಿದ್ಯಾರಂಗ'ವನ್ನು ಅನುವಾದಿಸಿ ನನಗೆ ಹೇಳಿಕೊಡುತ್ತಿದ್ದರು. ನಂಗೆ ಯಾವ ವಿಷಯ ಕಷ್ಟ ಆಗುತ್ತಿದೆಯೋ ಆ ಬಗ್ಗೆ ಪಪ್ಪನ ಸ್ನೇಹಿತರೊಂದಿಗೆ (ಹೆಚ್ಚಿನವರು ಅಧ್ಯಾಪಕರೇ) ಚರ್ಚಿಸಲು ಹೇಳುತ್ತಿದ್ದರು.

ಹೀಗೆ ನನ್ನ ಪ್ರತಿಯೊಂದು ಹೆಜ್ಜೆಯೊಂದಿಗೂ ಪಪ್ಪ ಸಾಥ್ ನೀಡಿದ್ದರು. ಗ್ರಾಮದಲ್ಲಿ ನಡೆದ ಯಾವುದೋ ಸಮಾರಂಭದಲ್ಲಿ ಪಪ್ಪ ಭಾಷಣ ಮಾಡಲು ನಿಂತು ತಡವರಿಸಿದಾಗ ನನ್ನ ಮುಂದೆ ಕೂತಿದ್ದ ಹುಡುಗರು ನಕ್ಕಿದ್ದು ನನಗೆ ತುಂಬಾ ಅವಮಾನವಾಗಿತ್ತು. ನಿನ್ನ ಪಪ್ಪನಿಗೆ ಭಾಷಣ ಮಾಡಲು ಗೊತ್ತಿಲ್ಲ ಅಂತಾ ಹೇಳಿದ್ದು ನನಗೆ ಬಾರೀ ನೋವನ್ನುಂಟು ಮಾಡಿತ್ತು. ಈ ವಿಷ್ಯ ಪಪ್ಪನಲ್ಲಿ ಹೇಳಿದಾಗ, ನೀನು ಚೆನ್ನಾಗಿ ಭಾಷಣ ಮಾಡು, ಅದೇ ನನಗೆ ಹೆಮ್ಮೆ ಎಂದಿದ್ದರು. ಹಾಗೇ ನಾನು ಭಾಷಣ ಮಾಡುವುದನ್ನು ಕಲಿತೆ, ಪಪ್ಪನ ಸ್ನೇಹಿತರೊಬ್ಬರು ಭಾಷಣ ಮಾಡುವುದು ಹೇಗೆ ಎಂದು ಹೇಳಿಕೊಟ್ಟರು. ಹಾಗೆ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯದಿನದಂದು ನಾನು ಮಾಡಿದ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ನಾನು ಡಿಗ್ರಿ ಮುಗಿಸುವವರೆಗೆ ಹೆಚ್ಚಿನ ಭಾಷಣ ಸ್ಪರ್ಧೆಗಳಲ್ಲಿ ನಾನೇ ಫಸ್ಟ್. ನಾನು ಭಾಗವಹಿಸುವ ಯಾವುದೇ ಚಟುವಟಿಕೆಯಿರಲಿ ಅಲ್ಲಿ ಪಪ್ಪ ಇರಲೇ ಬೇಕೆಂಬುದು ನನ್ನ ಹಠ ಹಿಡಿಯುತ್ತಿದ್ದೆ. ಪಪ್ಪನ ಸಾನಿಧ್ಯ ನನಗೆ ಪ್ರೋತ್ಸಾಹ ,ಧೈರ್ಯ ತಂದುಕೊಡುತ್ತಿತ್ತು.

ಹಳೆಯ ನೆನಪುಗಳನ್ನು ತಿರುವಿದಾಗ...
ಮೊದಲ ಬಾರಿಗೆ ಟೀ ಮಾಡಿದಾಗ ಟೀಗೆ ಸಕ್ಕರೆ ಜಾಸ್ತಿಯಾಗಿದೆ ನಿನಗೆ ಟೀ ಮಾಡೋಕೆ ಬರಲ್ಲ ಎಂದು ಮನೆಯ ಇತರ ಸದಸ್ಯರು ನಕ್ಕಾಗ, ನಂಗೆ ಸಿಹಿ ತುಂಬಾ ಇಷ್ಟ ಎಂದು ಪಪ್ಪ ಎರಡು ಕಪ್ ಟೀ ಕುಡಿದು ನನ್ನನ್ನು ಸಮಾಧಾನಿಸಿದ್ದರು. ಅನ್ನ ಜಾಸ್ತಿ ಬೆಂದಾಗಲಂತೂ ನಿನಗೆ ಅನ್ನ ಮಾಡಲು ಬರಲ್ಲ ಗಂಜಿ ಮಾತ್ರ ಗೊತ್ತು ಎಂದು ಹೇಳಿದ ಅಮ್ಮನ ಮಾತಿಗೆ ಪ್ರತಿಯಾಗಿ ಕುಚ್ಚಿಲಕ್ಕಿ ಗಟ್ಟಿಯಾಗಿದ್ದು ನುಂಗಲು ಆಗ್ತಾ ಇಲ್ಲ, ನನ್ನ ಮಗಳು ತುಂಬಾ ಬೇಯಿಸಿದ ಕಾರಣ ಇವತ್ತು ಜಗಿಯದೆ ನುಂಗಬಹುದು ಎಂದು ಪಪ್ಪ ಹೇಳಿದ್ದು ನೆನಪಿಸಿ ಕೊಂಡರೆ ಹಳೆ ನೆನಪುಗಳು ಹೀಗೆ ಮತ್ತೆ ಮತ್ತೆ ಕೆದಕುತ್ತವೆ. ಹೈಸ್ಕೂಲ್ ಓದುತ್ತಿರುವಾಗ ನನಗೆ ಬಹುಮಾನವಾಗಿ ಸಿಕ್ಕಿದ ಒಂದಿಷ್ಟು ಹಣದಿಂದ ಪಪ್ಪನಿಗೆ ಏನಾದರೂ ಗಿಫ್ಟ್ ಕೊಡಬೇಕೆಂಬ ಬಯಕೆಯಿಂದ ಬನಿಯನ್ ಖರೀದಿಸಿದ್ದೆ. ಪಪ್ಪನ ಸೈಜ್ ಗೊತ್ತಿಲ್ಲದ ಕಾರಣ ಅದು ದೊಗಳೆಯಾಗಿತ್ತು. ಅದನ್ನು ಅಪ್ಪ ಹಾಕಿಕೊಂಡಾಗ ಎಲ್ಲರ ಮುಖದಲ್ಲೂ ನಗು. ಆದ್ರೆ ಪಪ್ಪ ಮಾತ್ರ, ಸೆಖೆ ಜಾಸ್ತಿ ಇದೆ ಅಂತಾ ನನ್ನ ಮಗಳು ಸ್ವಲ್ಪ ಲೂಸ್ ಬನಿಯನ್ ತಂದಿದ್ದಾಳೆ ಎಂದು ಎಲ್ಲರ ಬಾಯ್ಮುಚ್ಚಿಸಿದ್ದರು. ಉದ್ದ ಲಂಗ ರವಿಕೆ, ಇಲ್ಲಿಕೆಟ್ಟ್ ಕಟ್ಟಿ ಕೂದಲು ಹರಡಿ ಬಿಟ್ಟು ಮಲ್ಲಿಗೆ ಮುಡಿದು, ಗಂಧದ ಬೊಟ್ಟು ಇಟ್ಟು ಪಕ್ಕಾ ಮಲಯಾಳಿ ಕುಟ್ಟಿ ತರಹ ನನ್ನನ್ನು ಕಾಣಲು ಪಪ್ಪ ಇಷ್ಟಪಡುತ್ತಾರೆ. ಈವಾಗಲೂ ಪಕ್ಕಾ ಸಾಂಪ್ರದಾಯಿಕ ಡ್ರೆಸ್ ಪಪ್ಪನಿಗೆ ಇಷ್ಟವಾದರೂ ಜೀನ್ಸ್ ,ಟೀಷರ್ಟ್ ಹಾಕಬೇಡ ಎಂದು ಹೇಳಲ್ಲ. ನನ್ನ ಪಪ್ಪ ಸಮಯದ ಜೊತೆಗೆ ಬೆಳೆದಿದ್ದಾರೆ, ನನ್ನನ್ನು ಬೆಳೆಸಿದ್ದಾರೆ.

ಪಪ್ಪ ನನ್ನ ಜೊತೆಗಿದ್ದರೆ ಏನೋ ಒಂದು ಧೈರ್ಯ. ರಸ್ತೆ ದಾಟುವಾಗ ಅಪ್ಪನ ಕಿರುಬೆರಳು ಬೇಕು, ಜ್ವರ ಬಂದು ನಡುಗುವಾಗ ಅಪ್ಪಿ ಹಿಡಿದು ಮಲಗುವುದು, ಓದುವುದಕ್ಕಾಗಿ ಬೆಳ್ಳಂಬೆಳಗ್ಗೆ ಎಬ್ಬಿಸುವುದು, ಓದುತ್ತಿದ್ದಂತೆ ನಿದ್ದೆ ಹೋದರೆ ಪುಸ್ತಕವನ್ನೆಲ್ಲಾ ತೆಗೆದಿಟ್ಟು, ಪುಟ್ಟ ಮಗುವನ್ನು ಎತ್ತಿಕೊಂಡು ಹೋಗುವಂತೆ ಎತ್ತಿ ಮಲಗಿಸುತ್ತಿದ್ದರು. ನನ್ನ ಕಿವಿ ಚುಚ್ಚಿದಾಗ ನನಗಿಂತ ಅಪ್ಪನೇ ಹೆಚ್ಚು ನೋವು ಅನುಭವಿಸಿದ್ದರು ಎಂದು ಅಮ್ಮ ತಮಾಷೆ ಮಾಡ್ತಾರೆ. ಈಗಲೂ ನನಗೆ ಒಂದಿಷ್ಟು ಬೇಜಾರಾದರೆ ,ನೋವಾದರೆ ನನ್ನ ಪಪ್ಪ ದೂರದಲ್ಲಿದ್ದರೂ ಅದನ್ನು ಫೀಲ್ ಮಾಡ್ತಾರೆ. ಹತ್ತನೇ ತರಗತಿಯ ನಂತರವೇ ಅಮ್ಮನ ಜೊತೆ ನಾನು ಹೆಚ್ಚು ಆಪ್ತಳಾದದ್ದು. ಆದಾಗ್ಯೂ ಅಮ್ಮನ ಆಸಕ್ತಿಗೆ ಮಣಿದು ಇಂಜಿನಿಯರಿಂಗ್ ಓದಿದರೂ ನಂತರ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪಪ್ಪ ನನಗೇ ಬಿಟ್ಟಿದ್ದರು. ಹಾಗೇ ಓದಿದ ವಿಷಯಕ್ಕೂ ನಾನು ಆಯ್ಕೆ ಮಾಡುವ ವೃತ್ತಿಗೂ ಸಂಬಂಧವೇ ಇಲ್ಲದ ಉದ್ಯೋಗವನ್ನು ನಾನು ಆಯ್ಕೆ ಮಾಡಿಕೊಂಡಾಗ ಅಮ್ಮ ಬೇಸರಿಸಿದ್ದರೂ ಪಪ್ಪ ಫುಲ್್ಖುಷ್ ಆಗಿದ್ದರು. ಯಾಕೆಂದರೆ ಒಲ್ಲದ ಮನಸ್ಸಿನಿಂದ ಇಂಜಿನಿಯರಿಂಗ್ ಸೇರಿದಾಗ, ಅಮ್ಮನಿಗೆ ಇದರಿಂದ ತುಂಬಾ ಸಂತೋಷವಾಗುತ್ತೆ, ಹೇಗಾದರೂ ನಾಲ್ಕು ವರ್ಷ ಮುಗಿಸು ಆಮೇಲೆ ನಿನ್ನ ವಿಷ್ ಎಂದು ಪಪ್ಪ ಹೇಳಿದ್ದರು. ಆ ನಾಲ್ಕು ವರ್ಷ ಮುಗಿಸಿದಾಗ ಪಪ್ಪ ತನ್ನ ಮಾತು ಉಳಿಸಿಕೊಂಡರು ಆದ್ದರಿಂದಲೇ ನನ್ನ ವೃತ್ತಿಯಲ್ಲಿ ನಾನು ಸಂತೃಪ್ತಳಾಗಿದ್ದೇನೆ, ನನ್ನ ಅಮ್ಮ, ಪಪ್ಪನೂ. ನಾಳೆ ಅಪ್ಪಂದಿರ ದಿನ. ಎಲ್ಲರಿಗೂ ಅವರವರ ಅಪ್ಪನ ಬಗ್ಗೆ ವಿಶೇಷವಾದ ಪ್ರೀತಿ ಕಾಳಜಿ ಇದ್ದೇ ಇರುತ್ತದೆ. ಪ್ರೀತಿಯನ್ನು ವ್ಯಕ್ತ ಪಡಿಸದೇ ಇರುವ ಅಪ್ಪಂದಿರೂ ಇರಬಹುದು ಆದರೆ ಅಪ್ಪನ ಪ್ರೀತಿ ಬೆಳಂದಿಂಗಳಂತೆ ಹಿತವಾಗಿರುತ್ತದೆ, ಬೀಸುವ ತಂಗಾಳಿಯಂತೆ ಸೊಗಸಾಗಿರುತ್ತದೆ. ಹ್ಯಾಪಿ ಫಾದರ್ಸ್ ಡೇ....

Comments

ನನಗು ಅಪ್ಪನೆಂದರೆ ಬಲು ಇಷ್ಟ ಆದರೆ ೨ ದಿನಗಳ ಹಿಂದೆ ಸಣ್ಣ ಕಾರಣಕ್ಕೆ ಅವರ ಜೋತೆ ಜಗಳ ಮಾಡಿಬಂದಿದ್ದ ನಾನು ಇಂದು ನಿಮ್ಮ ಲೇಖನ ಓದಿ ಕಣ್ಣು ತುಂಬಿ ಬಂದಿತು, ತಕ್ಷಣಕ್ಕೆ ಅವರಿಗೆ ಪೋನ ಮಾಡಿ ಕ್ಷಮೆ ಕೇಳಲು ನಿಧ೯ರಿಸಿರುವೆ

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ