ಕಿಂಡಿಗಳು ಮುಚ್ಚಿವೆ !

ನಾವು,

ಬಳಲಿ ಬೆಂಡಾದವರು ಬೆವರು ನೀರ

ಸುರಿಸಿ ಎದೆಗೂಡನುಬ್ಬಿಸಿ

ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ

ನಾವು ಕೂಲಿಯವರು || 1 ||


ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ

ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು

ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ

ನಾವು ಕೂಲಿಯವರು || 2 ||


ಬದುಕು-ಬವಣೆಯ ನಡುವೆ

ಹರಿದ-ಕರಿದ ಬೆಂದ ರೊಟ್ಟಿ

ಗಳ ಒಳಗೆ ರಕ್ತ ಮಡುಗಟ್ಟಿ

ಎದೆಗುಂದದೆ ಈಸಿ ಜೈಸುವ

ನಾವು ಕೂಲಿಯವರು || 3 ||


ಬಂದು, ಕೊಂದು, ತಿಂದ ಜನರೆಡೆಯಲಿ

ರಕ್ತದೋಕುಳಿಯ ಮಾಸದಾ ಹೆಜ್ಜೆಯದು

ನಾತ ಬೀರುವ ಕೊಳೆತ ಅಸ್ಥಿಮಜ್ಜೆ

ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ

ನಾವು ಕೂಲಿಯವರು || 4 ||


ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ

ಮುರುಕಲು ಗುಡಿಸಲ ಹಳೆ ಮಂಚದಲಿ

ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ

ಆದರೂ ಗಟ್ಟಿಯಿದೆ ನಮ್ಮ ರಟ್ಟೆ

ನಾವು ಕೂಲಿಯವರು || 5 ||


ಕನಸುಗಳ ಹೆಣೆಯುವೆವು ಆ

ಒಣದೇಹದ ಬತ್ತಿದಾ ಹೃದಯದಲಿ

ನಭವ ಚುಂಬಿಸಿ, ತಾರೆಗೀಳಲು ಸದಾ

ಬಯಸುವೆವು ಮೇಲೆ ಬರಲೆಂದೂ

ನಾವು ಕೂಲಿಯವರು || 6||


ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ

ಗಳ ದಮನ ತುಳಿತಗಳಡಿಯಿಂದ

ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು

ಚಂದಿರನ ಮಡಿಲಲ್ಲಿ ಜೋ ಹಾಡಲಿರುವ

ನಾವು ಕೂಲಿಯವರು || 7||


ನಾವು ಅಳುವುದಿಲ್ಲ ಅತ್ತಿಲ್ಲ

ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು?

ರಕ್ತ ಹಿಂಡಿದರೆ ರಕ್ತವೂ ಖಾಲಿ

ಜೀವನದ ಗೋಳೇ ನಮ್ಮ ಈದ್, ಹೋಳಿ !

ನಾವು ಕೂಲಿಯವರು || 8 ||


ಎಂದೆನಿತು ಬಾಯ್ತೆರೆದರೆ, ಪ್ರತಿದನಿ ಇಲ್ಲ

ಹಣತೆ ಬೆಳಕ ಹೊರ ಸೂಸುವುದೂ ಇಲ್ಲ

ಕಣ್ತೆರೆದ ಜನರಾವರಿಸಿದೆ ದರ್ಪದಾ ಪೊರೆ

ಭೋರ್ಗರೆವ ದುಃಖದಲ್ಲಡಗಿದೆ ನಮ್ಮ ಕರೆ

ಇದೇನು ಮಹಾ? ಕಿಂಡಿಗಳು ಮುಚ್ಚಿವೆಯಲ್ಲಾ!!!! || 9 ||

Comments

bhadra said…
ಮನದ ಇಂಗಿತ ಮಥಿಸಿ, ಸಂಗ್ರಾಹ್ಯ ನವನೀತವನ್ನು ಉಣ ಬಡಿಸುತ್ತಿರುವ ಗಡಿಯಾಚೆಯ ಕನ್ನಡತಿಗೆ, ಮತ್ತೊಂದು ಗಡಿಯಿಂದಾಚೆಯಿರುವ ಕನ್ನಡಿಗರಡಿಯಾಳಿನ ನಮನಗಳು

ಸುಂದರ ಪುಷ್ಪಗಳು ಸದಾ ಕಾಲ ಕಂಗೊಳಿಸುತ್ತಿರಲಿ, ಅಕ್ಕ ಪಕ್ಕದಲಿ ಮತ್ತೂ ಪುಷ್ಪಗಳು ಹುಟ್ಟಿಕೊಳ್ಳಲಿ

ಗುರುದೇವ ದಯಾ ಕರೊ ದೀನ ಜನೆ
ನಾವು ಅಳುವುದಿಲ್ಲ ಅತ್ತಿಲ್ಲ

ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು?

ರಕ್ತ ಹಿಂಡಿದರೆ ರಕ್ತವೂ ಖಾಲಿ

ಜೀವನದ ಗೋಳೇ ನಮ್ಮ ಈದ್, ಹೋಳಿ !

ನಾವು ಕೂಲಿಯವರು .........

These lines are distrbing me.. Wondreful poem keep it up

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ